Click here to Download MyLang App

ಓದುಗರ ಅನಿಸಿಕೆಗಳು

Based on 147 reviews
88%
(130)
7%
(11)
3%
(4)
1%
(1)
1%
(1)
ಉತ್ತಮ ಕೃತಿ

#ಇಪ್ಪತ್ತೊಂದರ #ಕನಸು
#ನಾನುಓದಿದಪುಸ್ತಕ #ಕನ್ನಡಪುಸ್ತಕ

'ಮಾಯಾಲೋಕ' ತೇಜಸ್ವಿಯವರ ನಾಲ್ಕನೇ ಹಾಗೂ ಕೊನೆಯ ಕಾದಂಬರಿ. ಪೂಚಂತೇಯವರ ಹಿಂದಿನ ಎಲ್ಲಾ ಮುಖ್ಯ ಕೃತಿಗಳ ಅನೇಕ ಲಕ್ಷಣಗಳು ಈ ಕೃತಿ ಒಳಗೊಂಡಿದೆ. ತೇಜಸ್ವಿಯವರ ಹಿಂದಿನ ಅನೇಕ ಬರಹಗಳ ನೆನಪನ್ನು ತರುವ ಕೃತಿ ಮಾಯಾಲೋಕ. ಗೊಂದಲಗೇರಿ ಎಂಬ ಸಣ್ಣ ಊರಿನಲ್ಲಿ ಮತ್ತು ಸುತ್ತಲ ಹಳ್ಳಿಗಳಲ್ಲಿ ನಡೆಯುವ ದೈನಂದಿನ ವಿದ್ಯಮಾನಗಳನ್ನು ಈ ಕಾದಂಬರಿ ಅದರೆಲ್ಲ ಸೂಕ್ಷ್ಮಾತಿ ಸೂಕ್ಷ್ಮ ವಿವರಗಳಲ್ಲಿ ನಿರೂಪಿಸುತ್ತಾ ಹೋಗುತ್ತದೆ. ಈ ನಿರೂಪಣೆಯಲ್ಲಿ ಅಲ್ಲಿಯ ರೈತರ, ಕೂಲಿಗಳ, ಸಣ್ಣ ವ್ಯಾಪಾರಿಗಳ, ಸರ್ಕಾರಿ ನೌಕರರ, ಮಹಿಳೆಯರ ವಿವಿಧ ನೋವು-ನಲಿವುಗಳ ವಿವರಗಳಿರುವಂತೆ ಪ್ರಕೃತಿಯ ವಿವಿಧ ಚಿತ್ರಗಳು ಅನನ್ಯವೆಂಬಂತೆ ಚಿತ್ರಿತವಾಗಿದೆ. ಪ್ರಕಾಶ ವಾಣಿ ಎಂಬ ಸಣ್ಣ ಪತ್ರಿಕೆಯೊಂದಿದೆ. ಈ ಪತ್ರಿಕೆಯ ಅವಾಂತರಗಳನ್ನು ವರ್ಣಿಸುವ ಪರಿಕ್ರಮದಲ್ಲಿ ಲೇಖಕರು ಒಂದು ಉದ್ಯಮವಾಗಿ, ವಾಹಕವಾಗಿ ಮತ್ತು ಸಾಹಸವಾಗಿ ಪತ್ರಿಕೋದ್ಯಮದ ಮೂಲನೆಲೆಗಳನ್ನು ನಮ್ಮ ಅರಿವಿಗೆ ತರುತ್ತಾರೆ. ಈ ಕಾದಂಬರಿಯಲ್ಲಿ ಪ್ರಸ್ತಾಪಿತವಾಗುವ ಹಲವು ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಗಳು ಬೇರೆಬೇರೆ ಪರಾಮರ್ಶೆಗಳಲ್ಲಿ ಪಡೆದುಕೊಳ್ಳುವ ವೈವಿಧ್ಯಮಯ ಸ್ವರೂಪಗಳನ್ನು ಗಮನಿಸಿದರೆ ತೇಜಸ್ವಿ ಬರವಣಿಗೆಯ ಒಂದು ಮುಖ್ಯ ಲಕ್ಷಣ ನಮ್ಮ ಅರಿವಿಗೆ ಬರುತ್ತದೆ.

📚📚📚 ಓದುಗ.

ಇಂದಿನ ಕಾಲದಲ್ಲಿ ಒಂದು ಉತ್ತಮ ಪ್ರಯತ್ನ

ಕನ್ನಡದಲ್ಲಿ ಮಂತ್ರ ತಂತ್ರಗಳ ಬಗ್ಗೆ ತುಂಬಾ ಹಲವು ಪುಸ್ತಕಗಳಿವೆ. ಇದು ಒಂದು ಉತ್ತಮ ಪ್ರಯತ್ನವೇ. ಆದರೆ ಇನ್ನೂ ಒಂದು ಚೂರು ತಂತ್ರ-ಪ್ರತಿತಂತ್ರಗಳ ಯುದ್ಧ ಸನ್ನಿವೇಶಗಳು ಜಾಸ್ತಿ ಇದ್ದರೆ ರೋಚಕತೆ ಜಾಸ್ತಿ ಇರುತ್ತಿತ್ತು. ಲೇಖಕರನ್ನು ಹುರಿದುಂಬಿಸಲು ಒಂದೇ ಸಾಲು ಹೇಳುವೆ. ನಿಮ್ಮ ಮೊದಲ ಪ್ರಯತ್ನದಲ್ಲೇ ಸಾಕಷ್ಟು ಕುತೂಹಲಕಾರಿಯಾಗಿ ಬರೆದಿದ್ದೀರಿ. ದಯವಿಟ್ಟು ನಿಲ್ಲಿಸಬೇಡಿ. ನಿಮ್ಮ ಮುಂದಿನ ಕೃತಿಗಾಗಿ ಕಾಯುವೆ.

ಲೇಖಕರದದು ಅಧ್ಬುತ ಕಥೆಗಾರಿಕೆ.

ಇದು ನಾನು ಓದಿದ ವಸುಧೇಂದ್ರ ಅವರ ಮೊದಲನೇ ಕಾದಂಬರಿ. ಲೇಖಕರಲ್ಲಿ ಓದುಗರನ್ನು ಕಥೆಯಲ್ಲಿ ಹಿಡಿದಿಡುವ ಕಲೆ ಕರಗತವಾಗಿದೆ ಎಂದು ನನ್ನ ಅನಿಸಿಕೆ. ಇತಿಹಾಸದಲ್ಲಿ ಆಸಕ್ತಿ ಇಲ್ಲದವರೂ ಕೂಡ ಈ ಪುಸ್ತಕ ಒಮ್ಮೆ ಓದಲು ಶುರು ಮಾಡಿದರೆ, ಒಂದೇ ಓದಿನಲ್ಲಿ ಪೂರ್ತಿ ಮಾಡುವುದರಲ್ಲಿ ಶಂಶಯವಿಲ್ಲ. ಕೊನೆಯಲ್ಲಿ ಇನ್ನೂ ಓದಬೇಕೆಂದು ಅನ್ನಿಸುವಂತೆ ಮಾಡುವುದು ಈ ಕಾದಂಬರಿಯ ಹೆಚ್ಚುಗಾರಿಕೆ. ಲೇಖಕರಿಂದ ಇನ್ನೂ ಹೆಚ್ಚು ಇಂಥ ಕಥೆಗಳನ್ನು ಎದುರು ನೋಡುತ್ತಿದ್ದೇನೆ.

ಒಳ್ಳೆಯ ಪರಿಣಾಮವನ್ನು ಬೀರುವಂತಹ ಪುಸ್ತಕ

ಸಾಮಾನ್ಯವಾಗಿ ಯಾವುದಾದರು ಕಾದಂಬರಿಯನ್ನು ಓದಲು ಬಹಳ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತೇನೆ. ಆದರೆ ಈ ಪುಸ್ತಕವನ್ನು ಓದಲು ಸುಮಾರು ಸಮಯ ಹಿಡಿಸಿತು.

ಕುವೆಂಪುರವರು ಜಾತಿ ಧರ್ಮವನ್ನು ಮೆಟ್ಟಿ ನಿಂತು ಮೊದಲು ಮಾನವನಾಗು
ಎಂದು ಕರೆ ಕೊಡುತ್ತಾರೆ.

ಅಂದಿನ ದಿನಗಳಲ್ಲಿಯೇ ಕನ್ನಡಿಗರ ಮೇಲೆ ಹೇರಲಾಗುತ್ತಿದ್ದ ಇಂಗ್ಲಿಷ್, ಹಿಂದಿ ಭಾಷೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ಅವರು ಪ್ರಸ್ತಾಪಿಸಿರುವ ಎಷ್ಟೊಂದು ವಿಷಯಗಳು ಇಂದಿಗೂ ಹೊಂದುತ್ತದೆ. ನಿಧಾನವಾಗಿ ಕುಳಿತುಕೊಂಡು ಓದಿ ಹಲವಾರು ವಿಷಯಗಳನ್ನು ಅಳವಡಿಸಿಕೊಳ್ಳಬಹುದಾದಂತಹ ಪರಿಣಾಮವನ್ನು ಬೀರುವಂತಹ ಪುಸ್ತಕ.

ನನ್ನ ವಿಡಿಯೋ ರಿವ್ಯೂ https://youtu.be/Zuxw7Efd-N0

ಭಕ್ತನಿಗೂ ಭಗವಂತನಿಗೂ ಭೇದವಿಲ್ಲ

ನನ್ನ ಗೋಪಾಲ ನಾಟಕದಲ್ಲಿಯೂ ಗೋಪಾಲ ಬಡಹುಡುಗ, ಮುಗ್ಧ. ಒಂದು ರೀತಿಯಲ್ಲಿ ಏಕಲವ್ಯನಂತೆಯೆ! ಆದರೆ ಚಿಕ್ಕಹುಡುಗ. ಆದರೆ ಗುರು ಶಿಷ್ಯವತ್ಸಲ. ಆ ಹುಡುಗನನ್ನು ಮನಸಾ ಸ್ವೀಕರಿಸಿ ವಿದ್ಯೆ ಕಲಿಸುವ ಆತ ಗುರುಪರಂಪರೆಯಲ್ಲಿ ಆದರ್ಶವಾಗಿದ್ದಾನೆ. ಬಡ ಗೋಪಾಲನಿಗೆ ಬನದ ಗೋಪಾಲನ ದರ್ಶನವಾಗುತ್ತದೆ. ಬನದ ಗೋಪಾಲನ ದರ್ಶನದ ಗುರುಗಳ ಬಯಕೆ ಈಡೇರದಿದ್ದರೂ ಗುರು ಸಂಕುಚಿತನಾಗುವುದಿಲ್ಲ. ’ಭಕ್ತನಿಗೂ ಭಗವಂತನಿಗೂ ಭೇದವಿಲ್ಲ. ನನ್ನ ಪಾಲಿಗೆ ನೀನೇ ಅವನು’ ಎಂದು ಸಂಭ್ರಮಿಸುತ್ತಾನೆ.

ಕಾನೀನ
ಸ.ಬ.
’ಕುಲವು ಜನನದೊಳಿಲ್ಲ; ಗುಣದೊಳಿಹುದು’

ಕಾನೀನ: ಪರಶುರಾಮ-ಕರ್ಣ
ಕುವೆಂಪು ಅವರಿಗೆ ವಿಶ್ವಾಮಿತ್ರ ಮತ್ತು ಪರಶುರಾಮರ ಕಡೆಗೆ ವಿಶೇಷವಾದ ಸೆಳೆತವಿದ್ದಂತೆ ಕಾಣುತ್ತದೆ. ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ತಮ್ಮ ರಸತತ್ವನಿರೂಪಣೆಯನ್ನು ವಿಶ್ವಾಮಿತ್ರನ ಬಾಯಲ್ಲಿ ಮಾಡಿಸುತ್ತಾರೆ. ಧನ್ವಂತರಿ ಚಿಕಿತ್ಸೆ ಕಥೆಯಲ್ಲಿ ವಿಶ್ವಾಮಿತ್ರ ಪರಶುರಾಮ ಇಬ್ಬರೂ ರೈತನ ಎದೆಯ ಮೇಲಿನ ಬಾರವನ್ನಿಳಿಸಲು ಸಂಕಲ್ಪಬದ್ಧರಾಗುವುದನ್ನು ಕಾಣಬಹುದು. ಕಾನೀನ ನಾಟಕದಲ್ಲಿನ ಪರಶುರಾಮ ಪಾತ್ರ ಮೂಲಕ್ಕಿಂತ ತೀರಾ ಭಿನ್ನವಾಗಿ ನಿರೂಪಿತವಾಗಿದೆ. ಕರ್ಣನ ಪಾತ್ರವೂ ಅಷ್ಟೆ. ಮೂಲದಲ್ಲಿ, ಕರ್ಣ ಪರಶುರಾಮನಲ್ಲಿಗೆ ಬರುವಾಗಲೇ, ಸುಳ್ಳು ಹೇಳಲು ನಿರ್ಧರಿಸಿಕೊಂಡು ಬಂದು, ಬ್ರಾಹ್ಮಣ ಎಂದು ಸುಳ್ಳು ಹೇಳಿ ವಿದ್ಯೆ ಕಲಿಯುತ್ತಾನೆ. ಬ್ರಾಹ್ಮಣನಲ್ಲವೆಂದು ತಿಳಿದಾಗ ಪರಶುರಾಮ ಶಾಪವನ್ನೂ ಕೊಡುತ್ತಾನೆ. ಆದರೆ, ಇಲ್ಲಿ ಕರ್ಣ ಸುಳ್ಳು ಹೇಳುವ ಪ್ರಸಂಗವೇ ಬರುವುದಿಲ್ಲ. ಕರ್ಣ ತನ್ನ ಊರಿನಲ್ಲಿದ್ದಾಗಲೇ ಆಕಸ್ಮಿಕವಾಗಿ ಅಲ್ಲಿ ಬಂದ ಪರಶುರಾಮನ ಭೇಟಿಯಾಗಿದೆ. ತಾನು ಗುರುವನ್ನು ಹುಡುಕಿಕೊಂಡು ಬಂದಾಗ, ಮೊದಲು ಭೇಟಿಯಾಗುವುದು ಪರಶುರಾಮನ ಶಿಷ್ಯರನ್ನು. ಅದರಲ್ಲಿ ಒಬ್ಬ ಬ್ರಹ್ಮಚಾರಿ ಕರ್ಣನ ಕುಲವನ್ನು ತಿಳಿದು ’ಕುಲವು ಜನನದೊಳಿಲ್ಲ; ಗುಣದೊಳಿಹುದು’ ಎಂಬ ಗುರುಗಳ ಮಾತನ್ನು ಉದಾಹರಿಸುತ್ತಾನೆ. ಕರ್ಣನಿಗೆ ಪರಶುರಾಮ ಗುರುವಾಗಿ ವಿದ್ಯೆ ಕಲಿಸುತ್ತಾನೆ. ಕರ್ಣ ಸುಳ್ಳು ಹೇಳವುದು ಇಲ್ಲದ್ದರಿಂದ ಪರಶುರಾಮ ಶಾಪ ಕೊಡುವ ಪ್ರಸಂಗವೂ ಬರುವುದಿಲ್ಲ. ಗುರುದಕ್ಷಿಣೆಯನ್ನು ಏನು ಕೊಡಲಿ ಎಂದ ಕರ್ಣನಿಗೆ ಪರಶುರಾಮ ’ಸತ್ಯವನ್ನು ಬಿಡಬೇಡ, ಆಶ್ರಯದಾತನಿಗೆ ದ್ರೋಹ ಮಾಡಬೇಡ, ದೀನರನ್ನು ತುಳಿಯಬೇಡ, ದೂರ್ತರಿಗೆ ಮಣಿಯಬೇಡ, ಯುದ್ಧಭುಮಿಯಲ್ಲಿ ಧರ್ಮಯುದ್ಧವನ್ನೇ ಮಾಡಬೇಕು, ಶತ್ರುಗಳೀಗೆ ಬೆನ್ನು ತೋರಿಸಬೇಡ, ಸಿಂಹದಂತೆ ಬಾಳು...’ ಮುಂತಾಗಿ ಹೇಳಿ ಅದೇ ನನಗೆ ನೀನು ಕೊಡುವ ಗುರುದಕ್ಷಿಣೆ ಎನ್ನುವಲ್ಲಿಯೂ ಪರಶುರಾಮನ ಪಾತ್ರ ನವೀನವಾಗಿ ಮೂಡಿಬಂದಿದೆ.
ಜಲಗಾರ, ಶೂದ್ರತಪಸ್ವಿ, ಬೆರಳ್ ಗೆ ಕೊರಳ್ ನಾಟಕಗಳಲ್ಲಿ ವರ್ಣಾಶ್ರಮ ಪದ್ಧತಿಗೆ ವ್ಯಕ್ತವಾಗಿರುವ ವಿರೋಧದ ಮೊನಚು ಇಲ್ಲಿಲ್ಲ. ಬಹುಶಃ ಈ ನಾಟಕ ಎರಡು ಕಾಲಘಟ್ಟದಲ್ಲಿ ರಚಿತವಾಗಿರುವುದು, ಮತ್ತು ಆ ವಿರೋಧ ವ್ಯಕ್ತವಾಗುತ್ತಿರುವುದು ಮೇಲ್ವರ್ಗದವನಾದ ಪರಶುರಾಮನಿಂದ ಎಂಬುದು ಕಾರಣವಿರಬಹುದು. ಆ ಕಾಲಘಟ್ಟಗಳ ನಡುವೆ ಸುಮಾರು ನಲವತ್ತೈದು ವರ್ಷಗಳ ಅಂತರವಿರುವುದು ಕಾರಣವೆನ್ನಿಸುತ್ತದೆ.

ಗುರುತತ್ತ್ವ ಮತ್ತು ಗುರು ಶಿಷ್ಯ ಸಂಘರ್ಷ, ಸಂವಾದ

ಕುವೆಂಪು ಅವರ ನಾಟಕಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಕಾಣುವ ಮತ್ತೆರಡು ಧಾರೆಗಳೆಮದರೆ ಗುರು-ಶಿಷ್ಯ ಮತ್ತು ತಾಯಿ-ಮಗ ಸಂಬಂಧ ಹಾಗೂ ಸಂಘರ್ಷಗಳು. ಮೊದಲಿಗೆ ಗುರು-ಶಿಷ್ಯ ಸಂಬಂಧದ ಸಂವಾದ ಮತ್ತು ಸಂಘರ್ಷಗಳನ್ನು ನೋಡಬಹುದು. ಈ ಗುರುತತ್ತ್ವ ಮತ್ತು ಕುವೆಂಪು ಅವರ ಬದುಕಿಗೂ ಅವಿನಾಭಾವ ಸಂಬಂಧವಿದೆ. ಬೆರಳ್ ಗೆ ಕೊರಳ್ ನಾಟಕದ ಕೊನೆಯಲ್ಲಿ ನೀಡಿರುವ ಟಿಪ್ಪಣಿಕೆಯಲ್ಲಿ ಗುರುತ್ತ್ವವನ್ನು ಪ್ರತಿಪಾದಿಸಿದ್ದಾರೆ. ಅದರಲ್ಲಿನ ಮೊದಲ ವಾಕ್ಯವೇ ’ಗುರುಶಿಷ್ಯರಿಬ್ಬರೂ ಪರಸ್ಪರ ಪೂರಕವಾದವರು’ ಎಂಬುದು. ಇಲ್ಲಿ ಕಲಿಕೆ ಎಂಬುದು ಏಕಮುಖವಾದುದಲ್ಲ. ಪರಂಪರಾನುಗತ ನಂಬಿಕೆಯಂತೆ ಗುರುವಿನಿಂದ ಶಿಷ್ಯನೊಬ್ಬನೇ ಕಲಿಯುವುದಲ್ಲ; ಶಿಷ್ಯನಿಂದಲೂ ಗುರು ಕಲಿಯುತ್ತಾನೆ. ಗುರು ನರರೂಪದಲ್ಲಿ ಮಾತ್ರವಲ್ಲ, ಬೆಟ್ಟ, ಜಲಪಾತ, ಮರ, ನಕ್ಷತ್ರ, ಮೋಡ, ಸೂರ್ಯೋದಯ ಸೂರ್ಯಾಸ್ತ ಹೀಗೆ ಯಾವ ರೂಪದಲ್ಲಾದರೂ ಗುರು ದೊರೆಯಬಹುದು. ಈ ಹಿನ್ನೆಲೆಯಲ್ಲಿಯೇ ನಾನು ಮೊದಲಿಗೆ ಕುವೆಂಪು ಅವರದು ಎಲ್ಲರನ್ನು ಮಾತ್ರವಲ್ಲ ಎಲ್ಲವನ್ನೂ ಒಳಗೊಳ್ಳುವ ಬಹುತ್ವ ಎಂದು ಹೇಳಿದ್ದು.
ಬೆರಳ್ ಗೆ ಕೊರಳ್: ದ್ರೋಣ-ಏಕಲವ್ಯ
ಈ ನಾಟಕದಲ್ಲಿ ಬರುವ ದ್ರೋಣ, ಮೂಲದ ದ್ರೋಣನಲ್ಲ. ವಿದ್ಯಾರ್ಜನೆಗಾಗಿ ಬಂದ ಏಕಲವ್ಯನನ್ನು ಜಾತಿ, ಧರ್ಮದ ಕಾರಣದಿಂದ ದ್ರೋಣ ನಿರಾಶೆಗೊಳಿಸುವುದಿಲ್ಲ. ಹಸ್ತಿನಾವತಿಯ ಋಣದ ಕಾರಣದಿಂದ ರಾಜಕುಮಾರರ ಜೊತೆಯಲ್ಲಿ ಆತನನ್ನು ಸೇರಿಸಲಾಗದಿದ್ದರೂ ಸ್ವತಃ ತನ್ನ ಮನೆಯಲ್ಲಿಯೇ ಇರಿಸಿಕೊಂಡು ತನ್ನ ಮಗ ಅಶ್ವತ್ಥಾಮನ ಜೊತೆಯಲ್ಲಿಯೇ ಬಿಲ್ವಿದ್ಯೆಯನ್ನು ಏಕಲವ್ಯನಿಗೆ ಕಲಿಸುವ ಉದಾತ್ತ ಪಾತ್ರ. ಇದೇ ರೀತಿಯ ಇನ್ನೂ ಎರಡು ಪಾತ್ರಗಳಿವೆ. ಒಂದು ಕಾನೀನ ನಾಟಕದ ಪರಶುರಾಮ ಮತ್ತು ನನ್ನಗೋಪಾಲ ನಾಟಕದ ಗುರು.
ಇಲ್ಲಿನ ಏಕಲವ್ಯ ಗುರುವಿಗೆ ಪರಿಪೂರ್ಣ ವಿಧೇಯತೆ ತೋರುವ, ಮುಂದೆ ಗುರುವಿನ ಮಾತಿನ ಮರ್ಮವನ್ನು ಅರ್ಥಮಾಡಿಕೊಂಡೇ, ತನ್ನ ಹೆಬ್ಬೆರಳನ್ನು ಹಿಂದು ಮುಂದೆ ನೋಡದೆ ಕತ್ತರಿಸಿಕೊಡುವ ವಿಧೇಯ ವಿದ್ಯಾರ್ಥಿ. ಆದರೆ, ತನ್ನತನವನ್ನು, ತಾನು ಅರಿವಿನ ವಿದ್ಯೆಯ ಮಹದುದ್ದಿಷ್ಯವನ್ನು ಎಂದಿಗೂ ಬಿಟ್ಟುಕೊಡದ, ಒಂದು ರೀತಿಯಲ್ಲಿ ಗುರುವಿಗೇ ಎಚ್ಚರ ಮೂಡಿಸುವ ಇಚ್ಛಾಶಕ್ತಿಯ ಪ್ರತೀಕ. ಇಲ್ಲಿ ಏಕಲವ್ಯನ ಶಬ್ದವೇಧಿಯನ್ನು ಪರೀಕ್ಷಿಸುವ ಸನ್ನಿವೇಶದಲ್ಲಿ, ಮುಗಿಲಾಚೆ ಮರೆಯಾದ ಹಕ್ಕಿಯನ್ನು ಎಚ್ಚಿ ಕೆಡವು ಎಂಬ ಆದೇಶ ದ್ರೋಣನಿಂದಾಗುತ್ತದೆ. ಅದಕ್ಕೂ ಮೊದಲೆ, ಆ ಹಕ್ಕಿಯ ದನಿ ಕೇಳಿಸುತ್ತಿದೆಯಲ್ಲ ಎಂಬ ಮಾತಿಗೆ, ಏಕಲವ್ಯ ತಾನು ಬಾಲ್ಯದಿಂದ ಯಾವ ಯಾವ ಸಂದಭ್ದಲ್ಲಿ ಆ ಹಕ್ಕಿಯ ಉಲಿಯನ್ನು ಕೇಳಿದ್ದೇನೆ, ಕೇಳಿ ಸಂತಸಪಟ್ಟಿದ್ದೇನೆ. ಈಗಲೂ ಹೊಸದೆಂಬಂತೆ ಕೇಳುತ್ತಿದ್ದೇನೆ ಎಂದು ಭಾವಪರವಶನಾಗಿ ಮಾತನಾಡುತ್ತಿರುತ್ತಾನೆ. ’ಎಚ್ಚು ಕೆಡವದನ್’ ಎಂದು ತನ್ನ ಗುರು ಹೇಳಿದಾಗ ಏಕಲವ್ಯ ಬೆಚ್ಚಿ ಹಿಂಜರಿದು ’ಅದಾಗದು, ಆರ್ಯ!’ ಎಂದು ನಿರಾಕರಿಸಿಬಿಡುತ್ತಾನೆ. ಆಗ,
ದ್ರೋಣ: ಕಾಣದಿರ್ದೊಡಂ ಏನ್? ಕೇಳ್ವುದುದರಾ ಕೊರಳ್.
ಶಬ್ದವೇಧಿಯನರಿವೆಯಲ್ತೆ? ನೋಳ್ಪಮ್.
ಏಕಲವ್ಯ: ಇದೇನಿದಾರ್‍ಯ? ಅರಿಯದನೊಲ್ ಆಡುತಿರ್ಪಯ್!
ದ್ರೋಣ: (ಮರೆನಗೆ ನಗುತ್ತಾ)
ನೋಳ್ಪಮ್ ನಿನ್ನ ವಿದ್ಯಾಸಾಮರ್ಥ್ಯಮಂ; ಇಸು, ಏಕಲವ್ಯ
ಏಕಲವ್ಯ: ಅಪರಾಧಮಿಲ್ಲದಾ ಸಾಧುವಂ ಕೊಲಲ್ಕಲ್ತು,
ಆಚಾರ್ಯ, ಆ ವಿದ್ಯೆಯಂ ನೀನಿತ್ತುದೆನಗೆ.
ಮುನಿಗುಂ ಮಂತ್ರಾಧಿದೇವತೆ; ಮೇಣ್,
ದಿವ್ಯ ವಿದ್ಯಾ ಬಲದಿ ಪಾಪಕಾರ್ಯವನೆಸಗೆ
ಧರ್ಮಂ ಋತಚ್ಯುತನೆನಗೆ ತಾನುಗ್ರಮಕ್ಕುಂ; ಮೇಣ್
ವಿದ್ಯಾಶಕ್ತಿ ತಾನೊಡನೆ ತಿರೋಹಿತಮಕ್ಕುಂ; ಮೇಣ್
ಆತ್ಮಹಾನಿಯಿಂ ಸರ್ವನಾಶಮಕ್ಕುಂ.-
ತಾಮದನೆಲ್ಲಮಂ ಬಲ್ಲಿರಾದೊಡಂ,
ನನಗಿದು ಪರೀಕ್ಷೆಯಲ್ತೆ, ಈವೊಳ್ತು!
ದ್ರೋಣ ಮುಂದುವರೆದು ’ಪುಣ್ಯವಂತನ್ ನೀನ್ ಏಕಲವ್ಯ’ ಎಂದು ಆಲಂಗಿಸಿಕೊಳ್ಳುತ್ತಾನೆ. ಏಕಲವ್ಯನ ಜಾಗದಲ್ಲಿ ಒಬ್ಬ ಅರಸುಕುಮಾರಿನಿದ್ದರೆ ಆಥವಾ ಅರ್ಜುನನಿದ್ದರೆ, ದ್ರೋಣನ ಆದೇಶದ ಮರುಕ್ಷಣವೇ, ಆ ಹಕ್ಕಿ ಹೆಣವಾಗಿ ಬಿದ್ದಿರುತ್ತಿತ್ತು! ಟಿಪ್ಪಣಿಕೆಯಲ್ಲಿ ಗುರುತತ್ತ್ವವನ್ನು ನಿರೂಪಿಸುತ್ತಾ ಮೊದಲ ಸಾಲಿನಲ್ಲಿಯೇ ನುಡಿದ ’ಗುರುಶಿಷ್ಯರಿಬ್ಬರೂ ಪರಸ್ಪರ ಪೂರಕವಾದವರು’ ಎಂಬ ಮಾತು ಇಲ್ಲಿ ಸಾಕಾರಗೊಂಡಿರುವುದನ್ನು ಕಾಣಬಹುದು.
ಈ ನಾಟಕ ಗುರುಗಳಾದ ಶ್ರೀಯವರಿಗೆ ಅರ್ಪಣೆಯಾಗಿದೆ. ಇಲ್ಲಿ ಕವಿಯನ್ನು ’ನನ್ನೊಡನೆ ಬಾ; ಕನ್ನಡದ ನಾಡನೆಳ್ಚರಿಸುವಾ....’ ಎಂಬ ಕರೆಗೆ, ನಿಮ್ಮ ಧರ್ಮಂ ನಿಮಗೆ; ನನ್ನ ಧರ್ಮಂ ನನಗೆ. ಪಲವು ಬಟ್ಟೆಗಳಲ್ತೆ ಭಗವದಿಚ್ಛೆಯ ಮನೆಗೆ?’ ಎಂದು ನೀಡಿರುವ ಉತ್ತರವನ್ನು ಗಮನಿಸಬೇಕು. ಇದು ಗುರು ಕರೆಯ ನಿರ್ಲಕ್ಷ್ಯವಲ್ಲ. ತನ್ನ ಉದ್ದೇಶದ ನಿರೂಪಣೆಯಷ್ಟೆ. ದ್ರೋಣ ಏಕಲವ್ಯರಂತೆಯೇ ಶ್ರೀ ಮತ್ತು ಕುವೆಂಪು ಅವರ ಗುರುಶಿಷ್ಯ ಸಂಬಂಧ ಲೌಕಿಕದ ಗೊಡವೆಗೆ ಬೀಳುವಂತದ್ದಲ್ಲ! ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ, ಪತ್ರಿಕಾ ಸಂಪಾದಕನೊಬ್ಬನಿಗೆ ಪತ್ರ ಬರೆಯುವ ವಿಚಾರದಲ್ಲಿ ಶ್ರೀಯವರ ಅಭಿಪ್ರಾಯವನ್ನು ಕುವೆಂಪು ತಿರಸ್ಕರಿಸಿದ್ದ ಸನ್ನಿವೇಶ ನೆನಪಿನ ದೋಣಿಯಲ್ಲಿ ದಾಖಲಾಗಿದೆ. ಆದರೆ, ಈ ಘಟನೆಗಳು ಅವರನ್ನೆಂದೂ ಶ್ರೀಯವರಿಗೆ ಅವಿಧೇಯನನ್ನಾಗಿ ಮಾಡಲಿಲ್ಲ. ಗುರುವಿಗೆ ಶಿಷ್ಯನೂ ಶಿಷ್ಯನಿಗೆ ಗುರುವು ಪೂರಕವಾಗಿಯೇ ಬದುಕ್ಕಿದ್ದು ಒಂದು ಆದರ್ಶವೆಂದು ಭಾವಿಸಬಹುದು.

’ಎಂದೊ ಮನು ಬರೆದಿಟ್ಟುದು ಇಂದೆಮಗೆ ಕಟ್ಟೇನು?’

ಬಹುತ್ವವೆಂಬುದು ಚಲನಶೀಲ ಮನಸ್ಥಿತಿ: ಅದು ಜಡವಾಗಿರಲು ಸಾಧ್ಯವೇ ಇಲ್ಲ. ಈ ಜಗತ್ತಿನಲ್ಲಿ ನಿತ್ಯ ಲಕ್ಷಾಂತರ ಮಂದಿ ಹುಟ್ಟುತ್ತಾರೆ; ಸಾಯುತ್ತಾರೆ. ವಿಶಾಲವಾದ ಅರ್ಥದಲ್ಲಿ ಅಷ್ಟೊಂದು ಅಭಿಪ್ರಾಯಗಳು ಹುಟ್ಟುತ್ತವೆ; ಸಾಯುತ್ತವೆ ಎಂದುಕೊಳ್ಳಬಹುದು. ರಕ್ತಾಕ್ಷಿ ನಾಟಕದಲ್ಲಿ ಕೋಟೆಯ ಕಾವಲುಗಾರ ಕೆಂಚಣ್ಣನ ಪಾತ್ರ ಮತ್ತು ನಾಯಕ ಬಸವಯ್ಯನ ಸ್ನೇಹಿತನಾದ ಹೊನ್ನಯ್ಯನ ಪಾತ್ರದ ನಡುವೆ ನಡೆವ ಒಂದು ಸಂಭಾಷಣೆಯನ್ನು ಗಮನಿಸಬಹುದು. ಸಂದರ್ಭ, ಹಿಂದಿನ ರಾತ್ರಿ, ಗತಿಸಿದ ಮಹಾರಾಜ ಬಸಪ್ಪನಾಯಕನ ಪ್ರೇತಾತ್ಮವನ್ನು ಕೆಂಚಣ್ಣ ಕಂಡು, ಅದನ್ನು ಹೊನ್ನಯ್ಯನಿಗೆ ತಿಳಿಸಿರುತ್ತಾನೆ. ಅದನ್ನು ಖಚಿತಪಡಿಸಿಕೊಳ್ಳಲು ಹೊನ್ನಯ್ಯನೂ ರಾತ್ರಿ ಕಾವಲಿಗೆ ಬಂದಿರುತ್ತಾನೆ. ಆಗ ಅವರಿಬ್ಬರ ನಡುವೆ ನಡೆವ ಸಂಭಾಷಣೆ:
ಹೊನ್ನಯ್ಯ: ಮುನಿದುಕೊಳ್ಳಬೇಡ, ಕೆಂಚಣ್ಣ. ಒಂದೊಂದು ಸಾರಿ ನಮ್ಮ ಭಯ, ನಮ್ಮ ಭ್ರಾಂತಿ ಇವುಗಳಿಂದ ಹೀಗೆಲ್ಲ ಅದ್ಭುತರೂಪಗಳು ಕಾಣುವುದುಂಟು....
ಕೆಂಚಣ್ಣ: ಅಯ್ಯೋ, ಅದು ಕಾಣಿಸಿಕೊಳ್ಳುವುದಕ್ಕೆ ಮೊದಲು ನನಗೆ ನೀವು ಹೇಳಿದ್ದು ಯಾವುದೂ ಇರಲಿಲ್ಲ ಎಂದು ಆಣೆ ಇಟ್ಟು ಬೇಕಾದರೂ ಹೇಳುತ್ತೇನೆ.
ಹೊನ್ನಯ್ಯ: ನಿನಗೆ ಮಾತ್ರವೇ ಅಲ್ಲ. ಎಂಥೆಂಥವರಿಗೂ ಕಾಣುವುದುಂಟು. ವೇದಾಂತ ಓದಿದರೆ ನಿನಗೂ ತಿಳಿಯುವುದು ಇದೆಲ್ಲ.
ಕೆಂಚಣ್ಣ: ಏನೋ ಸ್ವಾಮಿ, ನಿಮ್ಮ ವೇದಾಂತದ ಕಣ್ಣಿಗೆ ನುಣುಚಿಕೊಂಡು ಇನ್ನೆಷ್ಟು ವೇದಾಂತಗಳಿವೆಯೋ ನಾನೇನು ಬಲ್ಲೆ!........
ಇಲ್ಲಿ, ’ನಾನೇನು ಬಲ್ಲೆ!’ ಎಂಬ ಕೆಂಚಣ್ಣನ ಮಾತನ್ನು ’ನಾವೇನು ಬಲ್ಲೆವು’ ಎಂದು ಎಲ್ಲರೂ ಕೇಳಿಕೊಳ್ಳಬೇಕಿದೆ. ಈ ಸೃಷ್ಟಿಯನ್ನು, ಪ್ರಕೃತಿಯನ್ನು ಮನುಕುಲ ಅರ್ಥಮಾಡಿಕೊಳ್ಳುವ ಪ್ರಕ್ರಿಯೆ ನಿತ್ಯ ನಿರಂತರ. ಅದಕ್ಕೆ ಮನುಕುಲದಷ್ಟೇ ಇತಿಹಾಸವಿದೆ. ಆದರೆ ಅರ್ಥಮಾಡಿಕೊಂಡಿರುವುದು ಎಷ್ಟು ಎಂದರೆ, ಶೇಕಡಾ ಒಂದು ಎಂದು ಹೇಳುವುದು ಕಷ್ಟ. ಅಂತಹುದರಲ್ಲಿ, ಒಂದು ಕಾಲಘಟದಲ್ಲಿ ರೂಪಿತಗೊಂಡ ಒಂದು ಅಭಿಪ್ರಾಯ, ಒಂದು ಮತ ಮಾತ್ರ ಸರಿ; ಇನ್ನೊಂದು ತಪ್ಪು ಎಂದು ವಾದಿಸುವುದಿದೆಯಲ್ಲ ಅದರಂತಹ ಮೂರ್ಖತನ ಇನ್ನೊಂದಿಲ್ಲ. ಈ ನಿಟ್ಟಿನಲ್ಲಿಯೇ ಕುವೆಂಪು ಪ್ರಶ್ನೆ ’ಎಂದೊ ಮನು ಬರೆದಿಟ್ಟುದು ಇಂದೆಮಗೆ ಕಟ್ಟೇನು?’

ಜಲಗಾರ
ಸ.ಬ.
ʻಜಲಗಾರ ’ನಮ್ಮ ನಾಟಕ’, ’ಕುವೆಂಪು ನಮ್ಮವರುʼ

ಶೀರ್ಷಿಕೆ, ವಸ್ತು, ರೂಪ ಮತ್ತು ಪ್ರಸ್ತುತಿಯಲ್ಲೂ ಬಹುತ್ವವನ್ನೇ ಆವಾಹಿಸಿಕೊಂಡು ರಚಿತವಾಗಿರುವ ನಾಟಕ, ಜಲಗಾರವೊಂದೇ ಸಾಕು ಕುವೆಂಪು ಅವರ ಸಾಹಿತ್ಯಕ ಅಭಿವ್ಯಕ್ತಿಯ ಗುರಿಯನ್ನರಿಯಲು ಅನ್ನುವಂತಿದೆ. ಅದುವರೆಗೆ ಬಹುಶಃ ಭಾರತದ ಯಾವ ಭಾಷೆಯಲ್ಲೂ ಜಲಗಾರನೊಬ್ಬನಿಗೆ ಶಿವಸಾಕ್ಷಾತ್ಕಾರವಾಗುವಂತಹ ನಾಟಕ ಹಾಗೂ ಒಂದು ನಾಟಕದ ನಾಯಕ ಪಾತ್ರವಾಗಿ ಜಲಗಾರನೊಬ್ಬನ ಚಿತ್ರಣವಾಗಿರಲಿಲ್ಲವೆನ್ನಿಸುತ್ತದೆ. ಸ್ವಪ್ರಯತ್ನ ಸಿದ್ದಿಯಿಂದ ಜಗತ್ತಿನಲ್ಲಿ ಯಾರು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲಿ ಜಲಗಾರನಿಗೆ ಶಿವ ಒಲಿಯುತ್ತಾನೆ!
ಜಲಗಾರ ನಾಟಕದಲ್ಲಿ, ಜಲಗಾರ-ರೈತನ ನಡುವೆ ನಡೆಯುವ ಸಂವಾದದಲ್ಲಿ ಜಲಗಾರ ’ಕರ್ಮವೇ ಆರಾಧನೆ, ಸೇವೆಯೇ ಪೂಜೆ’ ಎಂಬ ಮಾತಗಳನ್ನಾಡುತ್ತಾನೆ. ಇದು ಕೇವಲ ನಾಟಕದ ಪಾತ್ರದಾರಿಯೊಬ್ಬನ ಮಾತುಗಳಲ್ಲ. ಇಲ್ಲಿ ನಮ್ಮ ಸಾಹಿತ್ಯಕ ಪರಂಪರೆಯೇ ಮಾತಾಗಿ ಬಂದಿದೆ ಅನ್ನಿಸುವುದಿಲ್ಲವೆ? ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯಲ್ಲಿ ಬಹುತ್ವದ ಬಹುದೊಡ್ಡ ಪ್ರಯೋಗ ವಚನಯುಗ ಎನ್ನಬಹುದು. ಇವನಾರವ ಇವನಾರವ ಎನ್ನದಿರಿ, ಇವ ನಮ್ಮವ ಇವ ನಮ್ಮವ ಎನ್ನಿ ಎನುವ ಮಾತುಗಳು ಮತ್ತು ಕಾಯಕವೇ ಕೈಲಾಸ ಎಂಬ ಸೂಳ್ನುಡಿಗಳು ಪ್ರಕಾಶಕ್ಕೆ ಬಂದಿದ್ದು ವಚನಯುಗದಲ್ಲಿ. ಇನ್ನು ಸೇವೆ ಎಂಬುದು ಗಾಂಧಿಯುಗದ ಕೊಡುಗೆ. ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ ಎಂದು ದಾಸರು ಕೇಳಿದ ಸೇವೆ ಇದಲ್ಲ. ಒಬ್ಬ ಮಾನವನು ತನ್ನ ಸಹಜೀವಿಗೆ, ಸಮುದಾಯಕ್ಕೆ ಅಗತ್ಯಬಿದ್ದಾಗ ಮಾಡುವ ಮಾನವೀಯ ಸೇವೆ! ಸಹಬಾಳ್ವೆಗೆ ಅತ್ಯಗತ್ಯವಾದ ಸೇವೆ.
ಪರಂಪರೆ ಮತ್ತು ಯುಗಧರ್ಮ ಅರ್ಥಪೂರ್ಣವಾಗಿ ಮೇಳೈಸಿಕೊಂಡ ಜಲಗಾರ ನಾಟಕಕ್ಕೆ ಪ್ರಕಟಣಪೂರ್ವದಲ್ಲಿಯೇ ವಿರೋಧ ವ್ಯಕ್ತವಾಗಿತ್ತು ಎಂದರೆ ಆಶ್ಚರ್ಯವಾಗುತ್ತದೆ. ’ಜಾತಿದ್ವೇಷದ ವಿಷದ ಹಲ್ಲನ್ನು ಬಿತ್ತುವವರು ವಿಷದ ಫಲವನ್ನೆ ಅನುಭವಿಸಬೇಕಾಗುತ್ತದೆ’ ಎಂಬ ವಿಮರ್ಶೆಯೇ ಬಂದಿತ್ತಂತೆ. ೧೯೨೮ ಅಥವಾ ೧೯೨೯ರ ಶಿವರಾತ್ರಿಯಂದು ಜಲಗಾರ ನಾಟಕದ ಓದು ಕವಿಯಿಂದಲೇ ಏರ್ಪಾಡಾಗಿತ್ತು. ಸಾಕಷ್ಟು ಜನರೂ ಸೆರಿದ್ದರು. ನಾಟಕದ ಓದು ಅಭಿನಯಪೂರ್ವಕವಾಗಿ ನಡೆದು ಶಿವ ಪ್ರತ್ಯಕ್ಷನಾಗಿದ್ದೂ ಆಯಿತು. ಇದ್ದಕ್ಕಿದ್ದಂತೆ ಗಲಭೆ ಪ್ರಾರಂಭವಾಗಿ, ಕೆಲವರು ಶಿವದ್ರೋಹಿ, ಶಿವದ್ರೋಹಿ, ಶಿವನಿಂದೆಯಾದಲ್ಲಿ ನಿಲ್ಲಬಾರದು’ ಎಂದು ಕೂಗಿ ಹೊರಟುಹೋದರಂತೆ! ನೆನಪಿನ ದೋಣಿಯಲ್ಲಿ ಈ ಘಟನೆಯನ್ನು ಮೊದಲ ಬಾರಿಗೆ ಓದಿದಾಗ ನನಗೆ ಆಶ್ಚರ್ಯವಾಗಲಿಲ್ಲ. ಏಕೆಂದರೆ ಆ ಕಾಲದ ಶ್ರದ್ಧಾವಂತರಿಗೆ, ಜಾಗರಣೆಗಾಗಿ ಶಿವಕಥೆ ಕೇಳಲು ಬಂದವರಿಗೆ ಹಾಗೆ ಅನ್ನಿಸುವುದು ಸಹಜವಾಗಿಯೆ ಇದೆ. ಆದರೆ, ನನಗೆ ಆಶ್ಚರ್ಯವಾಗುವುದು ನಂತರದ ಕೆಲವಿಮರ್ಶಕರ ಕಣ್ಣಿಗೆ ಅತಿಯಾದ ಆದರ್ಶದ ಭಾರದಿಂದಾಗಿ ವಿಚಾರ ನಲುಗಿಹೋಗಿರುವ ನಾಟಕವಾಗಿ ಕಾಣುತ್ತಿರುವುದು! ಅದನ್ನು ಐತಿಹಾಸಿಕ ವಿರೋಧವೆಂದು ಇದನ್ನು ವರ್ತಮಾನದ ವಿರೋಧವೆಂದು ನಕ್ಕು ಮುಂದೆ ನಡೆಯಬೇಕಾಗಿದೆ ಎಂದು ಮಾತ್ರ ಹೇಳಬಹುದು.
ನಾನು ಹೀಗೆ ಹೇಳುವುದಕ್ಕೂ ಕಾರಣವಿದೆ. ಜಲಗಾರ ನಾಟಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಉಂಟುಮಾಡಿದ ’ಕ್ರಾಂತಿ’, ಮೂಡಿಸಿದ ಎಚ್ಚರ ಇವಕ್ಕೆಲ್ಲ ಅಳತೆಗೋಲು ಯಾವುದು? ಕುವೆಂಪು ನಿಧನರಾದಾಗ ಅಂತಿಮ ದರ್ಶನಕ್ಕೆ ಬಂದಿದ್ದ ಜನಗಳ ಗುಂಪಿನಲ್ಲಿ, ಜಾಡಮಾಲಿಗಳ ಗುಂಪೊಂದು ಸಾಲಿನಲ್ಲಿ ನಿಂತಿತ್ತು. ಅದನ್ನು ಗಮನಿಸಿದ ಪ್ರೊ. ರಾಮದಾಸ್ ಮತ್ತಿತರರು ಕುತೂಹಲದಿಂದ ವಿಚಾರಿಸಿದಾಗ, ಅವರಿಗೆ ಗೊತ್ತಿದ್ದು ಕುವೆಂಪು ಮತ್ತು ಜಲಗಾರ ನಾಟಕ ಅಂತ ಗೊತ್ತಾಯಿತು. ಈ ಬಹುಜನರಿಗೆ ಜಲಗಾರ ’ನಮ್ಮ ನಾಟಕ’, ’ಕುವೆಂಪು ನಮ್ಮವರು. ಅವರು ನಿಧನರಾದಾಗ ಅವರಿಗೆ ಅಂತಿಮ ನಮನ ಸಲ್ಲಿಸಬೇಕು’ ಎಂಬ ಅರಿವುದು ಮೂಡಿಸಿದ್ದು ಕಡಿಮೆ ಸಾಧನೆಯಲ್ಲ. ಮಹಾಜನರಿಗೆ ಸಲ್ಲದ್ದು ಬಹುಜನರಿಗೆ ಸಂದಿತು ಎನ್ನಬಹುದು! ಒಮ್ಮೆ ಏಕತ್ವಕ್ಕೆ ಒಲಿದ ಸಂಪ್ರದಾಯವಾದಿಗಳಿಗೆ ನೀವು ಅಮೃತವನ್ನೇ ನೀಡಿದರು ವಿಷದಂತೆ ಕಾಣುತ್ತದೆಯೋ ಏನೋ!? ಆದರೆ, ಹೊಸ ತಲೆಮಾರುಗಳಿಗೆ, ಹೊಸ ಓದುಗರಿಗೆ ಜಲಗಾರದಂತಹ ನಾಟಕಗಳು ಖಂಡಿತಾ ಹೊಸ ಅರಿವನ್ನು ಮೂಡಿಸಲಬಲ್ಲವು. ಈ ನಿಟ್ಟಿನಲ್ಲಿಯೂ ನಾಟಕ ಹೊಸತಲೆಮಾರನ್ನು ತಲುಪಬೇಕಾಗಿದೆ.

ಮಲೆನಾಡಿನ ಚಿತ್ರಣ, ಬಾಲ್ಯಾನುಭವಗಳು ಮತ್ತು ಹಾಸ್ಯ ಮಿಶ್ರಿತ ಪುಸ್ತಕ

ಕುವೆಂಪುರವರ ಬಾಲ್ಯದ ಅನುಭವಗಳನ್ನು ಇಲ್ಲಿ ಓದಬಹುದು. ಅವರು ಪ್ರಕೃತಿಯ ಸೊಬಗನ್ನು ಸವಿಯಲು ಆಗಾಗ್ಗೆ ಹೋಗುತ್ತಿದ್ದ ಜಾಗಗಳು, ಕಾಡಿನಲ್ಲಿ ಆಡುತ್ತಿದ್ದ ಬೇಟೆ, ಜೀವನ ಶೈಲಿ ಇತ್ಯಾದಿ.

ಓದುತ್ತ ಹೋದಂತೆಲ್ಲ ಕಥೆಗಳಲ್ಲಿ ಹಾಸ್ಯವು ಹೆಚ್ಚಾಗುತ್ತದೆ. ಕೊನೆಯ ಕಥೆಯಾದ 'ರಾಮರಾವಣರ ಯುದ್ಧ'ವು ಹೊಟ್ಟೆ ಹುಣ್ಣು ಬರುವಷ್ಟು ನಗಿಸುತ್ತದೆ.

ಕಥೆ ಮತ್ತು ಸಂಗೀತ ರೂಪಕ ಅತ್ಯುತ್ತಮವಾಗಿ ಮೂಡಿಬಂದಿದೆ.

ಅನಕ್ರ ಅವರ ಕಥೆ ತುಂಬಾ ಸುಂದರವಾಗಿದೆ. ಸಂಗೀತದ ಬಗ್ಗೆನೇ ಕಥೆ ಇರೋದರಿಂದ, ರೂಪಕದ ರೀತಿಯಲ್ಲಿ ಕಥೆ ಅಭಿನಯಿಸಿದ್ದು ತಂಬಾ ಚೆನ್ನಾಗಿ ಮೂಡಿ ಬಂದಿದೆ.

ಜ್ಞಾನವನ್ನು ಹೆಚ್ಚಿಸುವ ಪುಸ್ತಕ

ಉತ್ತಮ ಪುಸ್ತಕ. ಪರಿಸರ ಮತ್ತು ಪ್ರಾಣಿಗಳ ಬಗ್ಗೆ ಬಹಳಷ್ಟು ನಮಗೆ ತಿಳಿದಿರದ ಮಾಹಿತಿಗಳನ್ನು ಒಳಗೊಂಡ ಪುಸ್ತಕ. ತುಂಬಾ ಇಷ್ಟವಾಯಿತು.

ಮುರಿದು ಕಟ್ಟುವ ಪ್ರಜ್ಞೆಯ ಸರ್ವಶೃಏಷ್ಠ ಅಭಿವ್ಯಕ್ತಿ ಶೂದ್ರತಪಸ್ವಿ

ಕುವೆಂಪು ಅವರದು ಮುರಿದು ಕಟ್ಟುವ ಪ್ರಜ್ಞೆ ಎನ್ನುವ ಮಾತನ್ನು ಕೇಳಿದ್ದೇವೆ. ಒಂದು ಸಂದರ್ಶನದಲ್ಲಿ ಅವರು ಅದನ್ನು ಒಂದು ಉದಾಹರಣೆಯ ಮುಖಾಂತರ ಸ್ಪಷ್ಟಪಡಿಸಿದ್ದಾರೆ. ತಮಿಳುನಾಡಿನಲ್ಲಿ ಪೆರಿಯಾರರ ಚಳುವಳಿಯ ಸಂದರ್ಭದಲ್ಲಿ ರಾಮನಾಮಕ್ಕೆ, ಚಿತ್ರಗಳಿಗೆ ಎದುರಾದ ವಿರೋಧಧ ಸನ್ನಿವೇಶ. ಮನೆಯಲ್ಲಿರುವ ಹಳೆಯ ಒಡವೆಗಳನ್ನು ಹಳತಾದವುಗಳೆಂದು ಬಿಸಾಕುವುದಿಲ್ಲ. ಅವುಗಳನ್ನು ವರ್‍ತಮಾನಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡು ಬಳಸುವುದಿಲ್ಲವೆ ಎನ್ನುತ್ತಾರೆ. ಒಂದೇ ಬಾರಿ ಪರಂಪರೆಯ ಕೊಂಡಿಯನ್ನು ಕಳಚಿ ಬೇರೆಯಾಗಿ ನಿಂತು ನಾನು ನಿಮ್ಮವನಲ್ಲ. ಬೇರೆ, ಸ್ವತಂತ್ರ ಎಂದು ಘೊಷಿಸಿಕೊಳ್ಳಲು ಯಾವ ವ್ಯಕ್ತಿಗೂ, ಸಮುದಾಯಕ್ಕೂ ಸಾಧ್ಯವಿಲ್ಲ. ಕಷ್ಟವೋ ಸುಖವೋ ಅದರೊಳಗಿದ್ದೇ ಹೋರಾಡಬೇಕು. ಕುವೆಂಪು ಗಾಂಧಿಯುಗದ ಶ್ರೇಷ್ಠ ಪ್ರಾತಿನಿಧಿಕ ಕವಿ ಬರಹಗಾರರಲ್ಲಿ ಒಬ್ಬರು. ಕಾನೂನು ಭಂಗ ಚಳುವಳಿ ಮಾಡಬೇಕೆಂದರೆ ಮೊದಲು ಆ ಕಾನೂನನ್ನು ಕಾನೂನು ಎಂದು ಒಪ್ಪಿಕೊಳ್ಳಬೇಕು, ನಂತರ ಭಂಗಿಸಬೇಕು. ಒಪ್ಪಿಕೊಳ್ಳದಿದ್ದರೆ, ಅದನ್ನು ಭಂಗಿಸುವ ಮಾತೂ ಬರುವುದಿಲ್ಲ ಅಲ್ಲವೆ? ಕುವೆಂಪು ಅವರು ತೇಜಸ್ವಿಗೆ ಬರೆದ ಒಂದು ಕಾಗದದಲ್ಲಿ ’ಹಳೆಯ ದೋಣಿ ತೂತಾದರೂ ಹೊಸದೋಣಿ ಬರುವತನಕ ಅದನ್ನೆ ಹೇಗಾದರೂ ಆಶ್ರಯಿಸಬೇಕು. ಇಲ್ಲದಿದ್ದರೆ ಹೊಳೆಯಪಾಲು’ ಎಂದಾಗುತ್ತದೆ. ಮೊದಲು ನಾವು ಪರಂಪರೆಯ ಭಾಗವೆಂದು ಒಪ್ಪಿಕೊಂಡೇ ಅದರ ವಿರುದ್ಧ ಈಜಬೇಕಾಗಿದೆ. ಅಂತಹ ಒಂದು ಮಹೋನ್ನತವಾದ ಪ್ರಯತ್ನವೇ ಶೂದ್ರತಪಸ್ವಿ ನಾಟಕ!
ಶೂದ್ರತಪಸ್ವಿ ನಾಟಕದ ಕಥೆ ಎಲ್ಲರಿಗೂ ತಿಳಿದಿರುವಂತದ್ದೆ. ಮೂಲಕಥೆಯಲ್ಲಿ, ಮಗನ ಅಕಾಲಮರಣಕ್ಕೆ ದೊರೆಯ ದೋಷವೇ ಕಾರಣ ಎನ್ನುವ ಬ್ರಾಹ್ಮಣ, ಮಂತ್ರಿಸಭೆಯಲ್ಲಿ ಶೂದ್ರನೊಬ್ಬನು ತಪಸ್ಸು ಮಾಡುತ್ತಿರುವುದೇ ಅಕಾಲಮೃತ್ಯುವಿಗೆ ಕಾರಣ ಎಂಬ ನಾರದನ ನಿರೂಪಣೆ, ಬಾಲಕನ ಕಳೇಬರವನ್ನು ಎಣ್ಣೆಯಲ್ಲಿಡಿಸಿ ಶೂದ್ರತಪಸ್ವಿಯನ್ನು ಅರಸಿ ಹೊರಡುವ ರಾಮ, ತಾನು ಶೂದ್ರ ಎಂಬ ಮಾತು ಶಂಬೂಕನಿಂದ ಪೂರ್ಣ ಹೊರಬೀಳುವ ಮೊದಲೇ ತಲೆಕತ್ತರಿಸುವ ರಾಮ. ಇತ್ತ ಬದುಕುಳಿಯುವ ಬ್ರಾಹ್ಮಣನ ಮಗ. ಇದಿಷ್ಟು ಕಥೆ. ತನ್ನಂತೆ ಪರರ ಬಗೆವುದೇ ಧರ್ಮ ಎಂಬಂತೆ, ಶೂದ್ರನೂ ಒಬ್ಬ ಮನುಷ್ಯ, ಅವನಿಗೂ ತಪ್ಪಸಿಗೆ, ಜ್ಞಾನಾರ್ಜನೆಗೆ ಹಕ್ಕು ಇದೆ ಎಂಬುದನ್ನು, ತಪಸ್ಸು ಒಂದು ಪೂಜ್ಯಕರ್ಮ ಎಂಬುದರ ಹಿನ್ನೆಲೆಯಲ್ಲಿಯೇ ಸಾಧಿಸುವ ನಾಟಕ ಶೂದ್ರತಪಸ್ವಿ. ಕುವೆಂಪು ಅವರ ವೈಚಾರಿಕ ಮನೋಧರ್ಮಕ್ಕನುಗುಣವಾಗಿ ರಚಿತವಾಗಿರುವ ಈ ನಾಟಕ ಸಾಹಿತ್ಯಲೋಕದಲ್ಲಿ ಹಿಂದೆ ಹುಟ್ಟು ಹಾಕಿರುವ ಸಂಘರ್ಷವನ್ನು ನೋಡಿದಾಗ- ಈ ಸಾಂಸ್ಕೃತಿಕ ಸಂಘರ್ಷದ ಒಳ ವಾಗ್ವಾದಗಳೇ ಏನೇ ಇರಲಿ -ಒಂದೆರಡು ತಲೆಮಾರುಗಳ ನಂತರದವರಿಗೆ, ಈ ಹೊತ್ತಿನಲ್ಲಿ ನಿಂತು ನೋಡುವ ಹೊಸತಲೆಮಾರಿನವರಿಗೆ, ಕುವೆಂಪು ಬೇಂದ್ರೆ ಕಾರಂತ ಮಾಸ್ತಿ ಮೊದಲಾದವರನ್ನು ಗೌರವದಿಂದಲೇ ಓದಿಕೊಂಡವರಿಗೆ ಆಘಾತವಾಗುವುದಂತೂ ನಿಜ. ದುರಂತವೆಂದರೆ ನಂತರದ ವಿಮರ್ಶಕರೂ ಕನ್ನಡ ಸಾಹಿತ್ಯ ಚರಿತ್ರೆಯ ಬಹುಮುಖ್ಯ ಸಾಂಸ್ಕೃತಿಕ ಸಂಘರ್ಷಕ್ಕೆ ಗೌರವದ ಮುಸುಕೆಳೆದು ಮುಂದೆ ಹೋಗಿರುವುದನ್ನು ನೋಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಶೂದ್ರತಪಸ್ವಿಯೂ ಸೇರಿದಂತೆ ಕುವೆಂಪು ಅವರ ನಾಟಕಗಳ ಮರುಓದು ವಿನ್ಯಾಸಗೊಳ್ಳಬೇಕಿದೆ.

ಯುದ್ಧದ ನಿರರ್ಥಕೆತೆಯನ್ನು ಸಾರುವ ಸಾರ್ವಾಕಲಿಕ ಶ್ರೇಷ್ಠ ನಾಟಕ ಶ್ಮಶಾನ ಕುರುಕ್ಷೇತ್ರಂ

ಶ್ಮಶಾನ ಕುರುಕ್ಷೇತ್ರಂ ಯುದ್ಧದ ನಿರರ್ಥಕತೆಯನ್ನು ಎತ್ತಿಹಿಡಿಯುವ ನಾಟಕ. ಕುವೆಂಪು ಅವರು ನೀಡಿರುವ ವಿವರಣೆಯಂತೆ ಅದೊಂದು ಪ್ರತಿಮಾ ಸೃಷ್ಟಿ. ಮನುಕುಲದ ಮಹಾದೌರ್ಬಾಗ್ಯಗಳಲ್ಲಿ ಒಂದಾದ, ಅತ್ಯಂತ ವಿನಾಶಕಾರಿಯಾದ ಯುದ್ಧದ ದುರಂತತೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ನಾಟಕವೂ ಹೌದು. ಕರ್ಣ ಕುಂತಿಯ ಮಗ ಎಂದು ಪಾಂಡುಪುತ್ರರಿಗೆ ತಿಳಿದು, ’ಕಡೆಗುಂ ಪೊಲಸಾದುದೀ ಭಾರತ ಸಂಗ್ರಾಮಂ’ ಎಂದ ಭೀಮನ ಮಾತು ಯುದ್ಧದ ನಿರರ್ಥಕತೆಯನ್ನು ಎತ್ತಿಹಿಡಿಯುತ್ತದೆ. ಆದರೆ, ಆ ಮಾತನಾಡುತ್ತಿರುವನು ಆ ಯುದ್ಧದದಲ್ಲಿ ಸ್ವತಃ ಬಾಗಿಯಾದ ಭೀಮ. ಅವನ ಉದ್ಘಾರ ಆತನಿಗಾದ ವೈಯಕ್ತಿಕ ಆಘಾತದಿಂದ ಹೊರಟಿದ್ದೇ ಹೊರತು ಯುದ್ಧದ ಭಯಂಕರತೆಯಿಂದಲ್ಲ. ಆದರೆ, ಅದಕ್ಕಿಂತಲೂ ಪರಿಣಾಮಕಾರಿಯಾಗಿ ಪಾಂಡವರ ಕಡೆಯ ಸೈನಿಕನೊಬ್ಬನ ಪತ್ನಿ ಮತ್ತು ಮಗು, ಕೌರವರ ಕಡೆಯ ಸೈನಿಕನೊಬ್ಬನ ತಾಯಿ ಮುದುಕಿ ಈ ಪಾತ್ರಗಳು ಮನದಟ್ಟು ಮಾಡಿಸುತ್ತವೆ. ’ಆರಿಗಾರ್ ಪಗೆ? ನಿನಗಾನ್ ಪಗೆಯೆ?’ ಎಂಬ ಮುದುಕಿಯ ಮಾತು, ಕೊನೆಯಲ್ಲಿ ’ಕೌರವರು ಹಾಳಾಗಲಿ; ಪಾಂಡವರು ಹಾಳಾಗಲಿ’ ಎನ್ನುವ ರೋಧನವೇ ಭೀಮನ ಮಾತಿಗಿಂತಲೂ ಹೆಚ್ಚಾಗಿ ತಾಗುತ್ತವೆ. ಪಾಂಡವರ ಕೈಯಿಂದ ಕೊನೆಯ ನೀರು ಕುಡಿದ ಸೈನಿಕ ಸಾಯುವ ಮೊದಲು, ಅದಕ್ಕಾಗಿ ಪಶ್ಚತ್ತಾಪಪಟ್ಟು ತನ್ನ ಕೌರವ ಸ್ವಾಮಿಯಲ್ಲಿ ಕ್ಷಮೆ ಕೇಳಿ ಸಾಯುತ್ತಾನೆ. ಅಂತಹ ಸನ್ನಿವೇಶಗಳು ಉಂಟುಮಾಡಿದ್ದ ವೀರರಸ ಸಂಪ್ರಾಪ್ತಿ, ಕೌರವ ಪಾಂಡವರು ಹಾಳಾಗಲಿ ಎನ್ನುವ ಅರ್ತಧ್ವನಿಯ ನಡುವೆ ಉಡುಗಿಹೋಗುತ್ತದೆ! ಹೀಗೆ ತೀರಾ ಸಾಮಾನ್ಯ ಪಾತ್ರವೂ ವಿಶ್ವಘಟನೆಯ ಭಾಗವಾಗಿರುವಂತೆ ಉದಾತ್ತವಾಗಿ ಕಾಣಿಸುವಂತೆ ಕವಿ ಕಡೆದಿಟ್ಟಿದ್ದಾರೆ. ಸಮಭಾವದ ಕವಿಗೆ ಯಾವ ಪಾತ್ರವೂ ಮುಖ್ಯವಲ್ಲ; ಯಾವ ಪಾತ್ರವೂ ಅಮುಖ್ಯವಲ್ಲ!
ಯುದ್ಧೋನ್ಮತ್ತತೆ ಇಂದು ನಮ್ಮದೇಶವನ್ನು ಜಗತ್ತನ್ನು ಬಹುವಾಗಿ ಕಾಡುತ್ತಿರುವ ವಿಚಾರ. ಬದಲಾದ ಕಾಲಘಟ್ಟದಲ್ಲಿ ಸಮೂಹನಾಶಕ ಯುದ್ಧವನ್ನೂ ಮೀರಿಸುತ್ತಿರುವಂತೆ, ಸಮೂಹ ಮಾದ್ಯಮಗಳು, ಸಾಮಾಜಿಕ ಜಾಲತಾಣಗಳು ಯುದ್ಧದ ಇನ್ನೊಂದು ರೂಪವೇ ಆಗಿವೆ. ಮಾನಸಿಕ ಹಾಗೂ ಸಾಮಾಜಿಕ ವಿಘಟನೆಗೆ ಕಾರಣಾವಾಗುತ್ತಿರುವ ಇವುಗಳ ವಿರುದ್ಧದ ಯುದ್ಧವೇ ಒಂದು ಜಾಗತಿಕ ಸವಾಲು, ಇಂದಿನ ಮಟ್ಟಿಗೆ. ಶ್ಮಶಾನ ಕುರುಕ್ಷೇತ್ರಂ ನಾಟಕದ ಕೊನೆಯ ದೃಶ್ಯ ಮುಗಿಯುವಂತೆ ಕಾಣುತ್ತಲೇ ಇಲ್ಲ. ಕಾರ್ಗಿಲ್ ಯುದ್ಧೋತ್ತರ ದಿನಗಳಲ್ಲಿ ಒಮ್ಮೆ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಶ್ಮಶಾನ ಕುರುಕ್ಷೇತ್ರ ನಾಟಕದಲ್ಲಿ ಕೊನೆಯ ದೃಶ್ಯದಲ್ಲಿ ಮಹಾಯುದ್ಧಗಳ ಸಾಲಿನಲ್ಲಿ ಕಾರ್ಗಿಲ್ ಯುದ್ಧದ ಪ್ರಸ್ತಾಪವೂ ಆಗಿತ್ತೆಂದು ವರದಿಯಾಗಿತ್ತು. ಮುಂದೆಯೂ ಹೊಸ ಹೊಸ ಯುದ್ಧಗಳ ಹೆಸರುಗಳು ಆ ಪಟ್ಟಿಯಲ್ಲಿ ಸೇರುತ್ತಾ ಹೋದರೆ ಆಶ್ಚರ್ಯವೇನಿಲ್ಲ. ವರ್ತಮಾನದ ಭಾರತ ಸನ್ನಿವೇಶಕ್ಕೆ ಸಂಬಂಧಿಸಿದಂತೆ ’ಯುದ್ಧೋನ್ಮತ್ತ ಮಾದ್ಯಮಗಳ್... ಸಾಮಾಜಿಕ ಜಾಲತಾಣಗಳ್...’ ಎಂಬ ಸಾಲೊಂದನ್ನು ನಿಸ್ಸಂಶಯವಾಗಿ ಸೇರಿಸಬಹುದೆನ್ನಿಸುತ್ತದೆ.

ತುಂಬಾ ಚೆನ್ನಾಗಿದೆ.

ನನ್ನ ನೆಚ್ಚಿನ ಪುಸ್ತಕ

ಪುಸ್ತಕದ ತುಂಬ ಹಾಸ್ಯ!
ಪುಸ್ತಕದ ತುಂಬ ವಿಶಿಷ್ಟವಾದ ತಿಳುವಳಿಕೆ!

ಉತ್ತಮ ಕೃತಿ

ಉತ್ತಮ ಕೃತಿ
ಸಂಸ್ಕøತ ನಾಟಕ ಭಗವದಜ್ಜುಕೀಯಮ್ ಒಂದು ಉತ್ತಮ ಕೃತಿ. ನಾನು ಹೆಗ್ಗೋಡಿನ ನಾಟಕ ಶಾಲೆಗೆ ಹೋಗುವ ಮೊದಲೇ ನೀನಾಸಮ್ ಸಂಸ್ಥಾಪಕ ನಿರ್ದೇಶಕ ಕೆ.ವಿ. ಸುಬ್ಬಣ್ಣ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ, ಯಕ್ಷಗಾನ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದರು. ಅದೀಗ ಶುದ್ಧ ಕನ್ನಡ ರಂಗರೂಪವಾಗಿ ಕನ್ನಡದಲ್ಲಿ ಪ್ರಕಟವಾಗಿದ್ದು ನಮಗೆಲ್ಲ ಸಂತೋಷವಾಗಿದೆ. ನಮ್ಮ ಮಿತ್ರ ಈ ನಾಟಕ ಮಾಡಿಸಿದಾಗ ನಾನು ಅದಕ್ಕೆ ಸಂಗೀತ ಒದಗಿಸಿದ್ದೆ. ಹುಬ್ಬಳ್ಳಿಯ ಕಾಲೇಜೊಂದರ ವಿದ್ಯಾರ್ಥಿಗಳಿಗೆ ಈ ನಾಟಕವನ್ನು ಕಲಿಸಿದ್ದೆ. ಅದು ಕರ್ನಾಟಕ ವಿಶ್ವವಿದ್ಯಾಲಯದ ಯುವಜನೋತ್ಸವದಲ್ಲಿ ಬಹುಮಾನ ಗೆದ್ದಿತು.
ಸಂಸ್ಕøತ ಮತ್ತು ಅದರ ಅನುವಾದಗಳು ಓದಲು ಮೊದಲು ಸಿಗುತ್ತಲೇ ಇರಲಿಲ್ಲ. ಇದ್ದರೂ ಪುನರ್ ಮುದ್ರಣವಾಗದೇ ಅಲಭ್ಯವಾಗಿದ್ದವು. ಅಂಥ ಸಂದರ್ಭದಲ್ಲಿ ತಮ್ಮ ಸಂಸ್ಥೆ ಮೈ ಲ್ಯಾಂಗ್ ಬುಕ್ಸ್ ಈ ಕೊರತೆಯನ್ನು ನೀಗಿಸಿದೆ. ಜಗತ್ತಿನಲ್ಲಿ ಯಾರೇ ಆದರೂ ಇದನ್ನು ಓದಿ ಆನಂದಿಸಬಹುದು. ನಾಟಕವಾಡಿ ಉಳಿದವರನ್ನೂ ನಗಿಸಬಹುದು. ತಮಗೆ ಕೃತಜ್ಞತೆಗಳು.

ಮಕ್ಕಳಿಗಷ್ಟೇ ಅಲ್ಲ ಕ್ಲೀ ಕುದುರೆ ಕಥೆ

Harry Potter, Little Prince ತರದ ಎಷ್ಟೋ ಮಕ್ಕಳಿಗಾಗಿ ಬರೆದ ಕಥೆಗಳು ದೊಡ್ಡವರಿಗೂ ಸೂಕ್ತ.
ಮರಿ ಕುದುರೆಯ ಮೈಸೂರು ಕನಸು ಅಂತ ವಿಭಾಗಕ್ಕೆ ಸೇರುತ್ತದೆ. ಅನುವಾದಿತ ಕಥೆ ಪುಸ್ತಕ ಕುದುರೆಯ ಪ್ರಯಾಣವನ್ನು ರಸವತ್ತಾಗಿ ಬಣ್ಣಿಸುತ್ತದೆ. ಪಾತ್ರಗಳ ಹೆಸರು ಬಹಳ ವಿಶೇಷವಾಗಿದೆ. ಕ್ಲೀ ಯ ಪ್ರಪಂಚದಲ್ಲಿ ಓದುಗರೆಲ್ಲಾ ಸೇರಿದಂತೆ ಕಥೆ ಪೋಣಿಸಲಾಗಿದೆ. ನನ್ನ ತಂದೆಯವರು ಅನುವಾದಿಸಿದ ಈ ಪುಸ್ತಕ ದೂರದಲ್ಲಿರುವ ನನಗೆ ಡಿಜಿಟಲ್ ಆವೃತ್ತಿ ರೂಪದಲ್ಲಿ ಸಿಗುವಂತೆ ಮಾಡಿದ mylang ಅವರಿಗೆ ನನ್ನ ಧನ್ಯವಾದಗಳು.

ಅದ್ವಿತೀಯ...😍😍😍

ನನ್ನ ಮೊದಲನೆಯ ಆಡಿಯೋ ಪುಸ್ತಕ. ಬಹಳ ಖುಷಿ ಮತ್ತು ಹೆಮ್ಮೆ ತಂದಿದೆ. ಖುಷಿ - ಅದ್ವಿತೀಯ ಪುಸ್ತಕ ಮತ್ತು ಅದೇ ಸಮನಾಗಿ ಓಡುವಿಕೆಯ ಪ್ರಯತ್ನ. ಹೆಮ್ಮೆ- ಕನ್ನಡದಲ್ಲಿ ಇಂತಹ ಪ್ರಯತ್ನ.

ಕರ್ವಾಲೋರೊಂದಿಗೆ ಪಯಣಿಸಿದಂತೆ ಅನುಭವ. ಮಂದಣ್ಣ, ಅವನ ಮೇರೇಜು, ಪ್ರಭಾಕರ, ಲಕ್ಷ್ಮಣ ಎಲ್ಲರೂ ನನಗೆ ಪರಿಚಯಸ್ತರು ಇಲ್ಲೆ ಎಲ್ಲೋ ಈಗಲೂ ಇದ್ದರೆ ಅನ್ನುವ ಹಾಗೆ ಭಾಸವಾಗುತ್ತದೆ.

ಕಾಡಿನ ಕಥೆಗಳು (ಭಾಗ 3) ಜಾಲಹಳ್ಳಿಯ ಕುರ್ಕ

ಹಾಂಟೆಡ್ ಹೊಸಮನೆ ಆಡಿಯೊ ಬುಕ್ ರೋಮಾಂಚಕ ಅನುಭವ ನೀಡುವಂತಹ ಕಾದಂಬರಿ

ರಮೇಶ್ ಶೆಟ್ಟಿಗಾರ್ ಮಂಜೇಶ್ವರ, ಇವರ ಕತೆ ಕಾದಂಬರಿಗಳನ್ನು ಓದುವುದೇ ಒಂದು ರೋಮಾಂಚಕ ಅನುಭವ, ಅದರಲ್ಲೂ ಆಡಿಯೊ ಬುಕ್ ಮೂಲಕ ಆಲಿಸಿದ್ದು ಮರೆಯಲಾಗದ ವಿನೂತನ ಅನುಭವವಾಗಿತ್ತು..
ರಮೇಶ್ ಶೆಟ್ಟಿಗಾರ್ ಅವರ ಬರವಣಿಗೆ ಶೈಲಿ ಅತ್ಯುತ್ತಮವಾಗಿದ್ದು, ಓದುಗರನ್ನು ಅವರ ಕಲ್ಪನಾ ಲೋಕಕ್ಕೆ ಕರೆದೊಯ್ದು ಕತೆಯ ರಸಾನುಭವವನ್ನು ಎಳ್ಳಷ್ಟೂ ಬಿಡದೆ ಉಣಬಡಿಸುವ ಸಾಮರ್ಥ್ಯವನ್ನು ಹೊಂದಿದೆ.
ಎಲ್ಲರೂ ಓದಿ, ರೋಚಕ ರಸಾನುಭವವನ್ನು ಪಡೆದುಕೊಳ್ಳಿ..

Amazing ಪುಸ್ತಕ

ಈ ಬ್ರಹ್ಮಾಂಡದ ಆಗು-ಹೋಗುಗಳನ್ನು ತಿಳಿಯ ಬಳಸುವವರಿಗೆ ಅದ್ಭುತ ಪುಸ್ತಕ!

Tailor made for Tejasvi fans.

The story is a thriller which happens in 24 hour timeframe. Beautifully presents the smuggling activities which happen away from the public eyes in the sleepy hollows of ಮಲೆನಾಡು. Excellent sound effects. Absolutely loved the narration by Dr. Sripad Bhat.

Eagerly waiting for ಚಿದಂಬರ ರಹಸ್ಯ, ಅಬಚೂರಿನ ಪೋಸ್ಟಾಫೀಸು, ಕಾಡು ಮತ್ತು ಕ್ರೌರ್ಯ, ರುದ್ರಪ್ರಯಾಗದ ಭಯಾನಕ ನರಭಕ್ಷಕ audio books.