
ಚೇತನ ಕಳೆಯದ ಉಸಿರೆಂಬ ಮಹಾಕವಿತೆಗೆ ನೀವು ಸಂಕಲನವನ್ನು ಅರ್ಪಿಸಿದ್ದೀರಿ. ಉಸಿರಿಂದಲೇ ಉಳ್ಳ ಜಗತ್ತಿನಲ್ಲಿ ಉಸಿರೇ ಆಗಿರುವ ನಾವು, ಉಸಿರನ್ನೇ ನಂಬಿಕೊಂಡಿರುವ ದೇಹದಲ್ಲಿ ಮಹಾಕವಿತೆಯಲ್ಲದೇ ಇನ್ನೇನು ಇರಲುಂಟು?
ಮೂವತ್ತೆಂಟು ಪದ್ಯಗಳನ್ನೂ ಓದಿದೆ. ಇರುಳು ಕವಿಯುತ್ತಲೇ ಮಾಯವಾಗುವ ನೆರಳಿನ ಹಿಂದೆ ನೀವು ಹೋದವರು ತಿರುಗಿ ಬಂದಿದ್ದಕ್ಕೆ ಧನ್ಯವಾದ. ಹಿಡಿಬೆರಳು ಮತ್ತು ಹೇಳುವ ಹಾಡನ್ನು ಕೃಷ್ಣನ ಲೀಲೆ ಎಂದು ಭಾವಿಸುವ ನೀವು, ಗರುಡಪುರಾಣದ ಗಮನಕ್ಕೆ ಸಲ್ಲಲು ಹೊರಟುದುದನ್ನು ಪ್ರಶ್ನಿಸಿಕೊಂಡಿದ್ದೀರಲ್ಲಾ, ಅದನ್ನು ನಾನು ಸತ್ಯಶೋಧನೆ ಎಂದು ಭಾವಿಸುತ್ತೇನೆ. ಆತ್ಮಸಾಕ್ಷಾತ್ಕಾರವೂ ಅದುವೇ.
ಒಂದು ಸತ್ಯ ಕವಿತೆಯನ್ನು ನೀವು ಬರೆದುಕೊಂಡಿದ್ದೀರಿ. ಕವಿತೆಯಲ್ಲಿ ಸತ್ಯವಿರುವುದಿಲ್ಲ, ಸತ್ಯವಾದುದು ಕವಿತೆಯಾಗುವುದಿಲ್ಲ. What cannot be said will be wept ಎಂಬ ಮಾತಿದೆ. ಕವಿತೆಯಲ್ಲಿ ನೀವು ಅಳಬೇಕು. ಸತ್ಯವನ್ನು ಪ್ರತಿಪಾದಿಸುತ್ತಾ ಸಾಗಬಾರದು. ಉಸಿರೂ ಲಜ್ಜೆಯಾದ ಹೊತ್ತಲ್ಲಿ ಒದ್ದ ಖುರ್ಚಿಯೂ ಸಾಕ್ಷಿಯಾಗಿ ಉಳಿಯಲಾರದು. ಸಾಗರಕ್ಕೆ ಎಸೆದ ಚೆಂಡು ಖಂಡಿತಕ್ಕೂ ಮರಳುತ್ತದೆ, ಹಿಡಿಯುವ ಚಾಕಚಕ್ಯತೆ ಮತ್ತು ಶ್ರದ್ಧೆ ಸಂಯಮ ಬೇಕು ಅಷ್ಟೇ. ಸಪ್ತಸಾಗರದಲ್ಲಿ ತೇಲುತ್ತಾ ಸಾಗುವವನಿಗೆ ಕನ್ನಡಿಯ ನಂಟೇಕೆ? ಎಲ್ಲಾ ಸಾಗರಗಳಿಗೂ ಅದೇ ಅಲೆ, ಅದೇ ಮೊರೆತ ಮತ್ತು ಅದೇ ನೀಲನಭ.
ನೀವು ಪ್ರಖರ ಕವಿಯಾಗಿದ್ದು ಮಾತ್ರಾ ದಿಟ. ಹಾಗಾಗುವುದಕ್ಕೆ ನಿಮ್ಮನ್ನು ರೂಪಿಸಿದ್ದು ನಿಮ್ಮದೇ ಬದುಕು ಮತ್ತು ನಡೆ. ಬತ್ತಿ ಹೊಸೆದರೆ ಸಾಲದು, ದೀಪದೆಣ್ಣೆಗೂ ತಾಗಬೇಕು ಎಂದು ನೀವೇ ಹೇಳಿಕೊಂಡಿದ್ದೀರಿ. ನಾನು ಈ ವರ್ಷ ಓದಿದ ಅತ್ಯುತ್ತಮ ಕವಿತೆಗಳ ಗುಚ್ಛವಿದು.
- ಗೋಪಾಲಕೃಷ್ಣ ಕುಂಟಿನಿ