ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಅಕ್ಷರ ಪ್ರಕಾಶನಕ್ಕೆ ೫೦ ತುಂಬಿದ ೨೦೦೬ನೆಯ ವರ್ಷ, ದಿ| ಕೆ.ವಿ. ಸುಬ್ಬಣ್ಣನವರ ನೆನಪಿಗೆ, ಈ ಹೊಸ ಪುಸ್ತಕಮಾಲೆಯ ಮೊದಲ ಕಂತಿನ ೨೫ ಪುಸ್ತಕಗಳು ಬಿಡುಗಡೆಗೊಂಡವು; ೨೦೦೭ರಲ್ಲಿ ಎರಡನೆಯ ಕಂತಿನ ಇನ್ನೂ ೧೦ ಪುಸ್ತಕಗಳು ಮತ್ತು ೨೦೦೯ರಲ್ಲಿ ಇನ್ನೂ ೧೫ -- ಹೀಗೆ ಒಟ್ಟು ೫೦ ಪುಸ್ತಕಗಳು ಈವರೆಗೆ ಈ ಮಾಲಿಕೆಯಲ್ಲಿ ಪ್ರಕಟಗೊಂಡಿವೆ.
ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು - ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ - ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು-ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.
ABOUT THE AUTHOR
ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ೧೯೩೬ ಏಪ್ರಿಲ್ ೪ರಂದು ಜನಿಸಿದ ಶ್ರೀನಿವಾಸ ವೈದ್ಯ ಅವರು ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡಿ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದು ನಿವೃತ್ತರಾದವರು. ಇವರ ಹೆಚ್ಚಿನ ಬರವಣಿಗೆಗಳು ಆರಂಭವಾಗಿದ್ದೇ ಇವರ ವೃತ್ತಿ-ನಿವೃತ್ತಿಯ ಸುಮಾರಿಗೆ. ಶೀನೂ ಎಂಬ ಕಾವ್ಯನಾಮದೊಂದಿಗೆ ‘ಅಪರಂಜಿ’ ಪತ್ರಿಕೆಯಲ್ಲಿ ಹಾಸ್ಯಪ್ರಧಾನ ಬರಹಗಳಿಂದ ಆರಂಭಿಸಿದ ವೈದ್ಯ ಅವರು, ಬಳಿಕ, ಲಘು-ಗಂಭೀರವೆಂದು ವಿಭಾಗ ಮಾಡಲಾಗದ ಹಾಗೂ ಕಥೆ-ಪ್ರಬಂಧಗಳೆಂದು ಪ್ರತ್ಯೇಕಿಸಲಾಗದ ವಿಶಿಷ್ಟ ಬರಹಗಳನ್ನು ರಚಿಸುತ್ತ ಬಂದಿದ್ದಾರೆ. ‘ಹಳ್ಳ ಬಂತು ಹಳ್ಳ’ ಎಂಬ ಕಾದಂಬರಿಯನ್ನಲ್ಲದೆ ‘ತಲೆಗೊಂದು ತರತರ’, ‘ಮನಸುಖರಾಯನ ಮನಸು’, ‘ರುಚಿಗೆ ಹುಳಿಯೊಗರು’, ‘ಅಗ್ನಿಕಾರ್ಯ’ ಎಂಬ ನಾಲ್ಕು ಪ್ರಬಂಧ/ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ‘ಹಳ್ಳ ಬಂತು ಹಳ್ಳ’ ಕಾದಂಬರಿಗೆ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ದೊರಕಿವೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವೈದ್ಯ ಅವರು ಸಾಹಿತ್ಯ-ಸಂಸ್ಕೃತಿ ಚಟುವಟಿಕೆಗಳನ್ನು ನಡೆಸುವ ‘ಸಂವಾದ’ ಸಂಸ್ಥೆಯ ರೂವಾರಿಯೂ ಆಗಿದ್ದಾರೆ.
ಪುಟಗಳು: 154
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !