ಬರಹಗಾರ: ಕ್ಯಾಪ್ಟನ್ ಜಿ. ಆರ್. ಗೋಪಿನಾಥ್
ಓದಿದವರು:
ಸಚಿನ್ ನಾಯಕ್
ಆಡಿಯೋ ಪುಸ್ತಕದ ಅವಧಿ : 6 ಗಂಟೆ 18 ನಿಮಿಷ
ನಮ್ಮ ಭಾರತವು ನಮ್ಮೆಲ್ಲರ ಹೃದಯಗಳಿಗೆ ಮತ್ತು ಕಣ್ಣುಗಳಿಗೆ ಬಗೆ ಬಗೆಯ ಚಿತ್ರಗಳನ್ನು ಕಟ್ಟಿಕೊಡುವ ಹೆಸರು - ಮರೆಯಲು ಆಗದ ಇತಿಹಾಸದ ನೆನಪುಗಳು, ಪುರಾಣಗಳು ಹಾಗೂ ಕಾವ್ಯಗಳ ಜೊತೆ ಬೆಸೆದುಕೊಂಡಿರುವ ಕಥೆಗಳು; ಆಳವಾದ ತಾತ್ವಿಕತೆಯನ್ನು ಹೊಂದಿರುವ, ಬ್ರಹ್ಮಾಂಡದ ಆತ್ಯಂತಿಕ ಸತ್ಯವೇನೆಂಬುದರ ಹುಡುಕಾಟ ಇರುವ ಉಪನಿಷತ್ತುಗಳನ್ನು ಜಗತ್ತಿಗೆ ಕೊಟ್ಟ ಜನರು; ಮಹಾನ್ ಧರ್ಮಗಳಿಗೆ ಜನ್ಮ ನೀಡಿದ ಪುರಾತನ ನಾಗರಿಕತೆ; ಪ್ರವಾಹದೋಪಾದಿಯಲ್ಲಿ ಬಂದ ವಲಸಿಗರನ್ನು ಸ್ವೀಕರಿಸಿದ ಸಮಾಜ; ಚಂದ್ರಗುಪ್ತ ಮೌರ್ಯನಂತಹ ಮಹಾನ್ ಕ್ಷತ್ರಿಯ ರಾಜನನ್ನು ಕಂಡ ದೇಶ.
ಐದು ಸಾವಿರ ವರ್ಷಗಳಷ್ಟು ಹಳೆಯದಾದ ನಾಗರಿಕತೆ ಇದು. ದಾಳಿಕೋರರನ್ನು ತನ್ನಲ್ಲಿ ಒಂದಾಗಿಸಿಕೊಂಡ, ಅವರ ಆಲೋಚನೆಗಳು, ಕಲೆ, ಸಂಗೀತ, ಸಂಸ್ಕೃತಿಯನ್ನು ತನ್ನಲ್ಲಿ ಸೇರಿಸಿಕೊಂಡ ದೇಶ ಇದು. ಮಹಾವೀರ, ಬುದ್ಧ, ಗುರು ನಾನಕ್... ಹೀಗೆ ಎಲ್ಲ ದೇವರುಗಳನ್ನೂ ತನ್ನದಾಗಿಸಿಕೊಳ್ಳುವ ಮನೋಭಾವ ಇಲ್ಲಿನದ್ದು. ಸೂಫಿ ಸಂತ ಮೊಯಿನುದ್ದೀನ್ ಚಿಷ್ತಿ, ಭಕ್ತಿ ಚಳವಳಿಯ ಕಬೀರ, ಶಾಂತಿ ಮಂತ್ರ ಪಠಿಸಿದ ಸಾಮ್ರಾಟ ಅಶೋಕ, ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸಿದ ಆಡಳಿತಗಾರ ಅಕ್ಬರ್ ಇಲ್ಲಿನವರು. ಹಿಂದೂ ತಾತ್ವಿಕತೆಯ ಜೀವಾಳದಂತೆ ಕಾಣುವ ಅದ್ವೈತದ ಬೋಧಕ ಶಂಕರಾಚಾರ್ಯ, ಶಾಂತಿಯ ಮನುಷ್ಯರೂಪ ಮಹಾತ್ಮ ಗಾಂಧೀಜಿ ಹುಟ್ಟಿದ ನೆಲ ಇದು. ಕಲಾವಿದರಾದ ತ್ಯಾಗರಾಜರು, ಬಿಸ್ಮಿಲ್ಲಾ ಖಾನ್, ಭೀಮಸೇನ ಜೋಶಿ ಈ ನೆಲದವರು. ಇಲ್ಲಿ ಹೇಳಿರುವ ಹೆಸರುಗಳು ಶತಮಾನಗಳ ಅವಧಿಯಲ್ಲಿ ಆಗಿಹೋದ ಋಷಿಸದೃಶರಾದ ಕೆಲವು ವ್ಯಕ್ತಿಗಳ ಉದಾಹರಣೆಗಳು ಮಾತ್ರ.
ನಮ್ಮ ಭಾರತವು ಇಂದು ಕವಲುದಾರಿಯಲ್ಲಿ ನಿಂತಿದೆ. ಇಲ್ಲಿ ಅಗಾಧ ಪ್ರಗತಿ ಆಗಿದೆ, ಅಪಾರ ಪ್ರಮಾಣದಲ್ಲಿ ಸಂಪತ್ತಿನ ಸೃಷ್ಟಿ ಆಗಿದೆ, ಲಕ್ಷಾಂತರ ಮಂದಿ ಬಡತನದ ಕೂಪದಿಂದ ಮೇಲಕ್ಕೆ ಬಂದಿದ್ದಾರೆ. ಮಹಾನ್ ಪರಂಪರೆ, ಶ್ರೀಮಂತ ನಾಗರಿಕತೆಯ ಇತಿಹಾಸದ ವಾರಸುದಾರರು ನಾವು. ಆದರೆ ಈಗಲೂ ನಾವು ಬಡತನ, ಅಜ್ಞಾನ, ಅಸಮಾನತೆ,
ಸಾಮಾಜಿಕ ಅಶಾಂತಿ, ಕೋಮು ಸಂಘರ್ಷದ ಜೊತೆ ಸೆಣೆಸಾಟ ನಡೆಸುತ್ತಿದ್ದೇವೆ. ದೇಶದ ಬೇರೆ ಬೇರೆ ಸಮುದಾಯಗಳ ನಡುವಿನ ಅಸಹಿಷ್ಣುತೆಯು ಇಂದು ಅಥವಾ ನಾಳೆ ಇಲ್ಲಿನ ನಾಗರಿಕತೆಯ ಚಿಲುಮೆಯ ಕಾರಣದಿಂದಾಗಿ ಅಥವಾ ಬಂಧುತ್ವದ ಮೌಲ್ಯಗಳ ಕಾರಣದಿಂದ ನಿವಾರಣೆ ಆಗುತ್ತದೆ. ಇಲ್ಲಿ ತುಂಬಿತುಳುಕುತ್ತಿರುವ ಬಹುತ್ವ ಹಾಗೂ ಭಿನ್ನತೆಗಳನ್ನು ಇಲ್ಲಿನ ವಿಶಿಷ್ಟವಾದ, ಅನುಭವಕ್ಕೆ ಮಾತ್ರ ಸಿಗುವ ಬಂಧವೊಂದು ಒಟ್ಟಾಗಿ ಹಿಡಿದು ಇರಿಸಿದೆ. ಇಲ್ಲಿನ ಆಲೋಚನೆಗಳಲ್ಲಿ, ನಂಬಿಕೆಗಳಲ್ಲಿ ಹಾಗೂ ತಾತ್ವಿಕತೆಗಳಲ್ಲಿ ಇರುವ ಬಹುತ್ವವು ಒಂದು ವರ.
ಇಲ್ಲಿನ ಜನರಲ್ಲಿನ ಔದ್ಯಮಿಕ ತಾಕತ್ತು, ಅವರಲ್ಲಿನ ಶಕ್ತಿ, ಸವಾಲುಗಳು ಎದುರಾದಾಗ ಅವರು ತೋರಿಸುವ ಸ್ಥಿತಪ್ರಜ್ಞ ಮನೋಭಾವ ಉತ್ಸಾಹವನ್ನು ಹೆಚ್ಚಿಸುವಂಥದ್ದು. ಐದು ಸಾವಿರ ವರ್ಷಗಳಿಗೂ ಹೆಚ್ಚಿನ ಕಾಲದಿಂದ ಬೆಳೆದು ಬಂದಿರುವ ಈ ದೇಶದ ಭವಿಷ್ಯದ ಕುರಿತ ನಂಬಿಕೆಯನ್ನು ಇವೆಲ್ಲ ಹೆಚ್ಚಿಸುತ್ತವೆ. ಇಲ್ಲಿ ಬರೆದಿರುವ ಲೇಖನಗಳು ಹಲವು ವಿಷಯಗಳಿಗೆ ಸಂಬಂಧಿಸಿವೆ. ಉದ್ಯಮ, ಅರ್ಥ ವ್ಯವಸ್ಥೆ, ಸರ್ಕಾರ, ರಾಜಕಾರಣ, ಸಾಮಾಜಿಕ ವಿಚಾರಗಳು, ಅವಲೋಕನದ ಧಾಟಿಯ ಬರಹಗಳು ಇದರಲ್ಲಿ ಇವೆ. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಇವುಗಳನ್ನು ಬರೆಯಲಾಗಿದೆ. ಬೇರೆ ಬೇರೆ ಮಾಧ್ಯಮಗಳಲ್ಲಿ ಇವು ಪ್ರಕಟವಾಗಿವೆ. ಕೆಲವು ಲೇಖನಗಳನ್ನು ಸಂಪಾದಕರು ಕೇಳಿ ಬರೆಸಿದ್ದರು.
ಇವು ಅತ್ಯಂತ ವಿಸ್ತೃತವಾದವುಗಳಲ್ಲ. ಇಲ್ಲಿ ನಾನು ಎಲ್ಲವನ್ನೂ ತಿಳಿದುಕೊಂಡಿದ್ದೇನೆಂಬ ಸೋಗು ಹಾಕಿಲ್ಲ. ಒಳ ಕಣ್ಣಿನಿಂದ ಕಂಡಾಗ ಇವು, ತಬ್ಬಿಬ್ಬಾದ ಮಗುವೊಂದು ದೊಡ್ಡದೊಂದು ಕ್ಯಾನ್ವಾಸ್‌ನ ಮೇಲೆ ಎರಚಿದ ಬಣ್ಣಗಳಂತೆ ಕಾಣಿಸಬಹುದು. ಇಲ್ಲಿನ ಬರಹಗಳನ್ನು ನನ್ನ ಅನುಭವಗಳನ್ನು ಆಧರಿಸಿ ಹೆಣೆದಿದ್ದೇನೆ. ಹಾಗೆಯೇ, ನನ್ನ ಜೊತೆಗಾರರಾದ ವರ್ತಕರು, ಸಣ್ಣ ಬೇಕರಿಯವರು, ಉಡುಪಿ ಹೋಟೆಲ್‌ನವರು, ಡಾಭಾ ಮಾಲೀಕರು, ವಲಸೆ ಕಾರ್ಮಿಕರು, ರೈತರು, ಕಾರ್ಪೊರೇಟ್ ನಾಯಕರು, ಆದರ್ಶಗಳನ್ನು ಹೊತ್ತುಕೊಂಡಿರುವ ಉದ್ಯಮಿಗಳು, ರಾಜಕಾರಣಿಗಳು, ಸಚಿವರು, ಪತ್ರಕರ್ತರು, ಬರಹಗಾರರ ಕಣ್ಣಿನ ಮೂಲಕ ಲೋಕವನ್ನು ಕಂಡು ಬರೆದಿದ್ದೇನೆ.
ಲವ್ ಜಿಹಾದ್, ಜಿಎಸ್‌ಟಿ, ಚೀನಾ ಸೈನಿಕರ ಒಳನುಸುಳುವಿಕೆ, ಸಾಂಕ್ರಾಮಿಕದ ಅವಧಿಯಲ್ಲಿನ ಸಾವುಗಳು, ರೈತರ ಪ್ರತಿಭಟನೆ, ರಾಜಕಾರಣಿಗಳ ಜೊತೆಗಿನ ಒಡನಾಟ... ಇವೆಲ್ಲವುಗಳಲ್ಲಿಯೂ ಒಂದು ವೈಯಕ್ತಿಕ ಸ್ಪರ್ಶ ಇದೆ. ನಾನು ವಸ್ತುನಿಷ್ಠವಾಗಿರಲು ಪ್ರಯತ್ನ ನಡೆಸಿದ್ದರೂ, ಅವುಗಳಲ್ಲಿ ವೈಯಕ್ತಿಕ ಅಂಶಗಳು ಸೇರಿಕೊಂಡಿವೆ.
ಸೇನೆಯಲ್ಲಿನ ಎದೆಗಾರಿಕೆಯ ದಿನಗಳು, 1971ರಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಸಮರ, ಅಣೆಕಟ್ಟಿನ ಕಾರಣದಿಂದಾಗಿ ಸ್ಥಳಾಂತರಗೊಂಡು ಬಂಜರು ಜಮೀನಿನಲ್ಲಿ ಕೃಷಿ ಮಾಡಿದ್ದು, ಡಜನ್ನಿನಷ್ಟು ನವೋದ್ಯಮಗಳಲ್ಲಿ ಮುಳುಗೆದ್ದು, ವಿಮಾನಯಾನ ಕಂಪನಿಯೊಂದನ್ನು ಕಟ್ಟಿ, ರಾಜಕಾರಣದಲ್ಲಿ ತೊಡಗಿ, ಮುಖ್ಯವಾಹಿನಿಯ ಪಕ್ಷವೊಂದರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ, ಏಳು–ಬೀಳುಗಳನ್ನು ಕಂಡು, ಎಂದಿಗೂ ಬತ್ತದ ಆಶಾವಾದದಿಂದ ಶಕ್ತಿಯನ್ನು ಪಡೆದುಕೊಳ್ಳುವುದು ನನಗೆ ಪ್ರತಿದಿನವೂ ಹೊಸ ಉತ್ಸಾಹದಿಂದ ಕೆಲಸ ಆರಂಭಿಸುವುದಕ್ಕೆ ಉತ್ತೇಜನ ನೀಡುತ್ತದೆ.
ಯುದ್ಧದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು, ವಿವೇಕವಿಲ್ಲದ ಕೋಮು ಹಿಂಸಾಚಾರ ಅಥವಾ ಸಾಂಕ್ರಾಮಿಕದ ಅಲೆಯಲ್ಲಿ ಬಂಧುಗಳು ಇಲ್ಲವಾಗುವುದು, ಜೀವನೋಪಾಯ ನಾಶವಾಗುವುದು... ಇವೆಲ್ಲ ಅತ್ಯಂತ ಧೈರ್ಯಶಾಲಿ ವ್ಯಕ್ತಿಯ ಎದೆಗುಂದಿಸಬಲ್ಲವು. ಹೀಗಿದ್ದರೂ ನಾವು ಅಳಿದುಳಿದಿರುವುದನ್ನೇ ಎತ್ತಿಕೊಂಡು, ಸ್ಥಿತಪ್ರಜ್ಞ ಮನಃಸ್ಥಿತಿಯಿಂದ ಮುಂದಕ್ಕೆ ಸಾಗಬೇಕು. ಎಮರ್ಸನ್ ಹೇಳಿರುವಂತೆ ‘ಸಿನಿಕ ಮನೋಭಾವವು ನಿಧಾನ ವಿಷ ಇದ್ದಂತೆ.’
ಈ ಜಗತ್ತನ್ನು ಇನ್ನಷ್ಟು ಉತ್ತಮವಾಗಿಸಲು ನಿರಂತರವಾಗಿ, ಶ್ರಮವಹಿಸಿ ಕೆಲಸ ಮಾಡುತ್ತಿರುವ ಜನರನ್ನು ಮೆಚ್ಚಿಕೊಳ್ಳುವಷ್ಟು ನಮ್ಮಲ್ಲಿ ಹೃದಯ ವೈಶಾಲ್ಯ ಇರಬೇಕು. ಕೆಡುಕುಗಳನ್ನು ಕಡಿಮೆ ಮಾಡಲು ನಮ್ಮಿಂದ ಸಾಧ್ಯವಾಗಿದ್ದನ್ನು ಮಾಡಬೇಕು. ಸಂಗೀತ, ಕಲೆಯಲ್ಲಿ ಸಂತಸವನ್ನು ಕಂಡುಕೊಳ್ಳಬೇಕು. ಪ್ರವಾಹ ಬರಲಿ, ಬರಗಾಲ ಬರಲಿ, ಪ್ರಕೃತಿ ವಿಕೋಪಗಳಿಂದಾಗಿ ಬೆಳೆ ನಾಶವಾಗಿರಲಿ, ರೈತ ಪ್ರತಿದಿನವೂ ಸೂರ್ಯ ಮೂಡುವ ಮೊದಲು ಎದ್ದು ನೇಗಿಲನ್ನು ಹೆಗಲ ಮೇಲೆ ಹೊತ್ತು ಹೊಲಕ್ಕೆ ಹೊರಡುತ್ತಾನೆ. ಸಂಜೆಯವರೆಗೂ ಉಳುಮೆ ಮಾಡುತ್ತಾನೆ. ಬೀಜ ಬಿತ್ತನೆ ಮಾಡುತ್ತಾನೆ. ನಾಳೆ ಮತ್ತೆ ಸೂರ್ಯ ಉದಯಿಸಬಹುದೇ, ಮಳೆ ಬಂದು ಬೀಜ ಮೊಳೆಯಬಹುದೇ ಎಂದು ಆತ ಯಾವತ್ತೂ ಪ್ರಶ್ನಿಸುವುದಿಲ್ಲ. ನಾಳೆಯು ಇಂದಿಗಿಂತ ಉತ್ತಮವಾಗಿರುತ್ತದೆ ಎಂಬ ವಿಶ್ವಾಸ ಹಾಗೂ ಆಶಾವಾದ ಆತನಲ್ಲಿ ಇದೆ. ಆತನಿಂದ ಯಾರಿಗೆ ಸ್ಫೂರ್ತಿ ಸಿಗದೆ ಇದ್ದೀತು?!
Faith is the bird that feels the light when the dawn is still dark ಎಂದು ಟ್ಯಾಗೋರ್ ಹೇಳಿದ್ದು ನೆನಪಾಗುತ್ತದೆ.
– ಕ್ಯಾಪ್ಟನ್ ಜಿ. ಆರ್. ಗೋಪಿನಾಥ್
ಬೆಂಗಳೂರು
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.