Click here to Download MyLang App

ಯಶೋಗಾಥೆ : ಡಾ.ಶಾಂತಲಾ | ಸಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ | ಯಾವ ದನಿಯಲ್ಲಿ ಆಡಿಯೋ ಕತೆಯಾಗಬೇಕು ಅನ್ನುವ ಕುರಿತು ಲೇಖಕರ ಆಯ್ಕೆ: ಗಂಡು ಧ್ವನಿ

ಯಶೋಗಾಥೆ
ಅಂದಿನ ಆ ಸತ್ಕಾರ ಕೂಟದಲ್ಲಿ ಅನೇಕ ಪ್ರಬಲರು, ಐಶ್ವರ್ಯವಂತರು ಹಾಗೂ ಸುಂದರ ಸ್ತ್ರೀ-ಪುರುಷರು ಅತ್ಯುತ್ಸಾಹದಿಂದ ನೆರೆದಿದ್ದರು . ಡಾ||ಯಶೋವರ್ಧನ್ ಅವರ ಐವತ್ತನೆಯ ಹುಟ್ಟುಹಬ್ಬವು, ಅವರ ಆ ಅನೇಕ ಪ್ರಭಾವಶಾಲಿ ಅಭಿಮಾನಿಗಳ ಸಾರಥ್ಯದಲ್ಲಿ ವಿಜೃಂಭಣೆಯಿಂದ ಜರುಗುತ್ತಲಿತ್ತು.
ಅದೋ ಅಲ್ಲಿ? ಅಪ್ಸರೆಯಂತೆ ಮೋಹಕ ಭಂಗಿಯಲ್ಲಿ ನಿಂತು , ಕತ್ತು ಕೊಂಕಿಸಿ ತುಟಿಯುಬ್ಬಿಸಿ ಮಾತನಾಡುತ್ತಾ , ಸುತ್ತಲಿದ್ದವರನ್ನು ಸಮ್ಮೋಹಿಸುತ್ತಿರುವ ಆ ಯಶಸ್ವಿ ರೂಪದರ್ಶಿಯ ಇಂದಿನ ಸಂಪತ್ತು, ಅಂತಸ್ತು ಎಲ್ಲವೂ ಡಾ|| ಯಶೋವರ್ಧನ್ ಅವರ ಚಾಣಾಕ್ಷತೆಯಿಂದಲೇ! ಮತ್ತಿಲ್ಲಿ? ಎಡಗೈಯ್ಯಿಯಲ್ಲಿ ಮದ್ಯದ ಲೋಟ ಹಿಡಿದು, ಗಹನವಾಗಿ ಚರ್ಚೆ ಮಾಡುತ್ತಿರುವ ಯುವಕ, ಕೇಂದ್ರ ವಾಣಿಜ್ಯ ಮಂತ್ರಿಯವರ ಏಕೈಕ ಪುತ್ರ, ಕಾರ್ ಆಕ್ಸಿಡೆಂಟಿನಲ್ಲಿ ಗಂಭೀರವಾಗಿ ಸುಟ್ಟಗಾಯಗಳಾಗಿದ್ದವನು; ಇಂದು ಬದುಕಿರುವುದೇ ಡಾ|| ಯಶೋವರ್ಧನ್ ಅವರ ದೆಸೆಯಿಂದ! ಮತ್ತಲ್ಲಿ-ಬಲಗೈಯ್ಯಿಯಲ್ಲಿರುವ ಮೂರೇ ಬೆರಳಿಗೂ ತಲಾ ಎರಡೆರಡರಂತೆ ವಜ್ರ ಖಚಿತ ಪ್ಲಾಟಿನಂ ಉಂಗುರಗಳನ್ನು ಧರಿಸಿ, ತನ್ನ ಸಂಪತ್ತನ್ನು ಅಸಭ್ಯವಾಗಿ ಪ್ರದರ್ಶಿಸುತ್ತಾ ಓಡಾಡುತ್ತಿದ್ದ ಕೋಟ್ಯಾಧೀಶ್ವರ? ತನ್ನ ಆಸ್ತಿಯಲ್ಲಿ ಕಾಲು ಭಾಗವನ್ನೇ ಯಶೋವರ್ಧನ್ನರಿಗೆ ಬರೆದುಕೊಡಲು ಸಿದ್ದನಿದ್ದ ಅವರ ಮಹಾ ಭಕ್ತ!!
ಇಂತಹ ಅದೆಷ್ಟೋ ಜನರ ಜೇವನ, ಭವಿಷ್ಯವನ್ನು ಬದಲಾಯಿಸಿದ್ದ ಡಾ|| ಯಶೋವರ್ಧನ್ ಅವರು ದೇಶದಲ್ಲಿ ಅಲ್ಲದೆ ವಿಶ್ವದೆಲ್ಲೆಡೆ ಅಂತರರಾಷ್ಟ್ರೀಯ ಕೀರ್ತಿ ಪಡೆದ , ಅತಿ ನಿಪುಣ ಪ್ಲಾಸ್ಟಿಕ್ ಸರ್ಜನ್ (ಪ್ಲಾಸ್ಟಿಕ್ ಸರ್ಜರಿ-ಅಂದಗಾರಿಕೆಯನ್ನು ವೃದ್ದಿಸುವ ಚಿಕಿತ್ಸೆ ) ಆಗಿದ್ದರು . ಇವರ ಬೆರಳುಗಳಲ್ಲಿ ಜಾದು ಇದೆ ಎಂದು ಎಂತಹವಾರು ಒಪ್ಪಿಕೊಳ್ಳುವಂತೆ ಇರುತ್ತಿತ್ತು ಇವರ ಶಸ್ತ್ರ ಚಿಕಿತ್ಸೆಗಳ ಪರಿಣಾಮ. ಅವರು ಎಂತಹದ್ದೇ ಶಸ್ತ್ರಚಿಕತ್ಸೆಯನ್ನು ಕೈಗೊಂಡರೂ, ಎಲ್ಲರ ಊಹೆಗೂ ಮೀರಿ ಯಶಸ್ವಿಯಾಗುತ್ತಿದ್ದರು. ದಿನೇ ದಿನೇ ಹೆಚ್ಚುತ್ತಿದ್ದ ಅವರ ಕೀರ್ತಿ, ಹಾಗೂ ಅಭಿಮಾನಿ ಬಳಗಕ್ಕೆ, ಯಶೋವರ್ಧನ ಎಂಬ ಅವರ ನಾಮಾಂಕಿತಕ್ಕೆ ಅನುಗುಣವಾಗಿಯೇ ಇತ್ತು.
ಸೌಂದರ್ಯ ವೃದ್ಧಿಸುವ ಶಸ್ತ್ರಕ್ರಿಯೆಯೂ ಸೇರಿದಂತೆ ಅಪಘಾತಗಳಲ್ಲಿ ಮುಖಕ್ಕೆ ಪೆಟ್ಟಾಗಿ ಚೆಹರೆ ವಿಕಾರವಾದಾಗ , ಕೈಬೆರಳುಗಳು ಕತ್ತರಿಸಿಹೋದಾಗ, ಬೆಂಕಿಯ ಅಪಘಾತಗಳಲ್ಲಿ ಮೈಕೈ ಸುಟ್ಟು-ಸುರುಟಿಹೋದಾಗಲೆಲ್ಲಾ ಪ್ಲಾಸ್ಟಿಕ್ ಸರ್ಜರಿಯ ಅವಶ್ಯಕತೆ ಇರುತ್ತದೆ. ಹಾಗೆಯೇ, ವರ್ಷಾನು ಗಟ್ಟಲೆ ಮಾಡಲಿಕ್ಕೆ ಕೆಲಸವಿಲ್ಲದೆ, ಐಷಾರಾಮಿ ಬದುಕಿನಲ್ಲಿ ತಿಂದು-ಮಲಗಿ-ತಿಂದು ಯಥೇಚ್ಛವಾಗಿ ಬೊಜ್ಜು ಬೆಳೆಸಿಕೊಂಡವರಿಗೂ ಪ್ಲಾಸ್ಟಿಕ್ ಸರ್ಜರಿಯ ಅವಶ್ಯಕತೆ ಇರುತ್ತದೆ. ಬೇಡದ ಕೊಬ್ಬು-ಬೊಜ್ಜನ್ನು ತೆಗೆದು ಮೈಮಾಟವನ್ನು ತೀಡಿ-ತಿದ್ದುವುದಲ್ಲದೆ , ಮೊಂಡ ಮೂಗನ್ನು ಚೂಪುಗೊಳಿಸುವುದು, ಸೀಳು ತುಟಿಗಳ-ಸೀಳು ಅಂಗಳುಗಳ ರಿಪೇರಿ, ವಯಸ್ಸಾಗುತ್ತಾ ಮುಖದಲ್ಲಿ ಅಡರುವ ಸುಕ್ಕುಗಳನ್ನು ಮಾಯವಾಗಿಸುವುದು-ಇವುಗಳೇ ಪ್ಲಾಸ್ಟಿಕ್ ಸರ್ಜರಿ ಎಂಬ ಶಸ್ತ್ರಚಿಕಿತ್ಸೆಯ ವ್ಯಾಪ್ತಿ.
ಸ್ತನಗಳಿಗೆ ರೂಪುಕೊಟ್ಟು ಆಕರ್ಷಕ ಮಾಡುವುದರಲ್ಲಿ, ಬಹುಶಃ ಆ ಭ್ರಹ್ಮನೂ ಪ್ಲಾಸ್ಟಿಕ್ ಸರ್ಜನ್ನರಿಗೆ ಸಾಟಿಯಲ್ಲ! ತಮ್ಮ ಸ್ತನಗಳಿಗಿರುವ ಸಹಜವಾದ ರಚನೆ ಸರಿಯಿಲ್ಲವೆಂದು, ಅವಕ್ಕೆ ಮತ್ತೊಂದು ಆಕಾರದ ಅಥವಾ ಗಾತ್ರದ ಅಗತ್ಯವಿದೆ ಎಂದು ಬಲವಾಗಿ ನಂಬಿ, ಸ್ತನಗಳ ಪುನರ್ರಚನೆಯ ಶಸ್ತ್ರಚಿಕಿತ್ಸೆಗೆ ಬರುವ ಅನೇಕ ಅತೃಪ್ತ ಹೆಂಗಳೆಯರೇ, ಆ ಬ್ರಹ್ಮನ ಆಚಾತುರ್ಯಕ್ಕೆ ಸಾಕ್ಷಿ! ಡಾ| ಯಶೋವರ್ಧನ್ ಕೂಡ ಅನೇಕ ಹೆಂಗಸರಿಗೆ ಪುಟ್ಟದಾಗಿದ್ದವನ್ನು ತುಂಬಿಸಿ ಸುವ್ಯಕ್ತವಾಗಿಸಿ; ಬೇಡದಷ್ಟು ದೊಡ್ಡದು ಎಂದವರಿಗೆ ಅವುಗಳನ್ನು ಅವರ ಕೋರಿಕೆಯಷ್ಟು ಚಿಕ್ಕದು-ಪುಟ್ಟದಾಗಿಸಿ, ಸ್ತನಗಳ ಶಸ್ತ್ರಚಿಕಿತ್ಸೆಯಲ್ಲಿ ಧಾಖಲೆಯನ್ನೇ ಮಾಡಿಬಿಟ್ಟಿದ್ದರು. ಅಂಬಲಿಕೋಪ್ಲಾಸ್ಟಿ ಎಂದರೆ ಹೊಕ್ಕಳನ್ನು ಅಂದವಾಗಿಸಲು ಮಾಡುವ ಶಸ್ತ್ರಚಿಕಿತ್ಸೆ! ಇತ್ತೀಚೆಗೆ ಅನೇಕ ಹದಿಹರೆಯದವರಲ್ಲಿ ಹಬ್ಬುತ್ತಿದ್ದ ಸನ್ನಿ ಅಂಬಲಿಕೋಪ್ಲಾಸ್ಟಿ! ಅನೇಕರು ತಮ್ಮ ಹೊಕ್ಕಳುಗಳು ವಿಕಾರವಾಗಿದೆ ಎಂದು ತಮಗೆ ಬೇಕಾದಂತೆ ಗುಂಡು, ಚಪ್ಪಟ್ಟೆ , ಮುಗುಳ್ನಗುತ್ತಿರುವಂತೆ ಮತ್ತಿತರೆ ಆಕಾರಗಳಾಗಿ ತಮ್ಮ ಹೊಕ್ಕಳುಗಳಿಗೆ ಯಶೋವರ್ಧನ್ ಅವರ ಬಳಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಮುತ್ತುತ್ತಿದ್ದರು. ‘ಯಶೋವರ್ಧನ್ ಅಂಬಿಲೈಕಸ್’ ಎಂದೇ ಹೊಕ್ಕಳುಗಳನ್ನು ಪ್ರತಿಷ್ಠೆಯಿಂದ ಪ್ರದರ್ಶಿಸಿಕೊಂಡು ಓಡಾಡುತ್ತಿದ್ದರು!!
ವಯಸ್ಸು ಐವತ್ತೈದು ದಾಟಿದರೂ ಇನ್ನೂ ಮೂವತ್ತರ ಪ್ರಾಯದ ನಾಯಕನಟನಾಗಿ ಮೆರೆಯುತ್ತಿದ್ದ ಆನಂದ್ ಕುಮಾರ್ ಅದೆಷ್ಟೋ ಬಾರಿ (ಕನಿಷ್ಟ ಪಕ್ಷ 6 ಬಾರಿಯಾದರೂ, ಎಂಬ ಗುಲ್ಲಿದೆ )ತಮ್ಮ ಮುಖದ ಮೇಲೆ ಯಶೋವರ್ಧನರಿಂದ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂಬುದು ಬಹಿರಂಗ ಗುಟ್ಟಾಗಿತ್ತು . ಅಂತೆಯೇ ಎರಡು ವರ್ಷಗಳ ಹಿಂದೆ ಭ್ರಹ್ಮಾಂಡ ಸುಂದರಿಯ ಕಿರೀಟ ತನ್ನ ಮುಡಿಗೆ ಏರಿಸಿದ್ದ ಮಿಸ್ ಅನಾಮಿಕ ಕೂಡ ಡಾ|| ಯಶೋವರ್ಧನ್ ಅವರ ಶಸ್ತ್ರಚಿಕಿತ್ಸೆಯಿಂದ ತಮ್ಮ ತುಟಿ ಹಾಗೂ ಸ್ತನಗಳನ್ನು ವರ್ಧಿಸಿಕೊಂಡಿದ್ದೂ ಸುದ್ದಿಯಾಗಿತ್ತು. ಯುರೋಪಿನ ಒಂದು ಸಣ್ಣ ದೇಶದ ರಾಜಕುಮಾರ ಸೀಳು ತುಟಿ-ಸೀಳು ಅಂಗಳನ್ನು ಹೊತ್ತು ಹುಟ್ಟಿದಾಗ ರಾಜ ದಂಪತಿಗಳು ತಮ್ಮ ಮಗನಿಗೆ ಯಶೋವರ್ಧನ್ನರೇ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ವಿನಂತಿಸಿಕೊಂಡು, ಆತನನ್ನು ತಮ್ಮ ದೇಶಕ್ಕೆ ಕರೆಸಿಕೊಂಡು , ಚಿಕಿತ್ಸೆಯ ನಂತರ ಅವರನ್ನು ತಮ್ಮ ದೇಶದ ಗೌರವಾನ್ವಿತ ಪ್ರಜೆಯನ್ನಾಗಿಸಿದ್ದರು. ಮತ್ತೋರ್ವ ಪ್ರಸಿದ್ದ ಗಾಯಕಿಯ ಮುಖಕ್ಕೆ ಕಿಡಿಗೇಡಿಗಳು ಆಸಿಡ್ ಎಸೆದು ವಿಕಾರ ಮಾಡಿದಾಗ, ಯಶೋವರ್ಧನ್ ಅವರೇ ಅವಳಿಗೆ ಮತ್ತೊಂದು ಸುಂದರ ಮುಖವನ್ನು ರಚಿಸಿದ್ದರು .
ಹೀಗೆ ಯಶೋವರ್ಧನ್ ಅವರ ಬಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪ್ರತಿಷ್ಟಿತರ ಸಂಖ್ಯೆ ಅದೆಷ್ಟೋ! ಅನೇಕರ ಕೋರಿಕೆಯ ಮೇರೆಗೆ ಅವರು ಮಾಡಿಸಿಕೊಂಡಿದ್ದ ಶಸ್ತ್ರಚಿಕಿತ್ಸೆಯನ್ನು ಗೋಪ್ಯವಾಗಿ ಇಡಲಾಗಿತ್ತು . ಮತ್ತು ಕೆಲವರಿಗೆ ಮಾಡಿದ ಶಸ್ತ್ರಚಿಕಿತ್ಸೆಯನ್ನು ಮುಚ್ಚಿಡಲು ಆಗುತ್ತಿರಲಿಲ್ಲ! ಉದಾಹರಣೆಗೆ ಆ ಮೂರು ಬೆರಳಿನ ಕೋಟ್ಯಾದೀಶ್ವರ. ತನ್ನ ಫ್ಯಾಕ್ಟರಿಗೆ ಭೇಟಿ ಕೊಟ್ಟಾಗ, ಅಲ್ಲಿ ಚಲಿಸುತ್ತಿದ್ದ ಯಂತ್ರದಲ್ಲಿ ಅಕಸ್ಮಾತ್ತಾಗಿ ತನ್ನ ಬಲಗೈಯನ್ನು ಇಟ್ಟುಬಿಟ್ಟಿದ್ದ. ಕ್ಷಣಾರ್ಧದಲ್ಲಿ ಕಚಕ್ ಎಂದು ಆತನ ಐದೂ ಬೆರಳುಗಳು ಕತ್ತರಿಸಿಹೋಗಿ ಆತ ಪ್ರಜ್ಞಾಹೀನನಾಗಿದ್ದ. ಮಧ್ಯಾಹ್ನ ಎರಡು ಘಂಟೆಯಿಂದ ಸತತವಾಗಿ ಬೆಳಗಿನ ಜಾವ ಮೂರರವರೆಗೂ ಶಸ್ತ್ರಚಿಕಿತ್ಸೆ ನಡೆಸಿ ಐದರಲ್ಲಿ ಆತನ ಮೂರು ಬೆರಳುಗಳನ್ನು ಮತ್ತೆ ಜೋಡಿಸುವಲ್ಲಿ ಸಫಲರಾಗಿದ್ದರು ಡಾ| ಯಶೋವರ್ಧನ್.! ಕೂಟ ಪ್ರಾರಂಭವಾದಾಗಲಿಂದ ಅವರ ಪಕ್ಕದಲ್ಲಿಯೇ ಅಂಟುಕೊಂಡಿದ್ದ ಮೂವತ್ತರ ಸುಂದರ ಬಹುಭಾಷಾ ನಾಯಕನಟಿ ಯಾವ ಶಸ್ತ್ರಕ್ರಿಯೆಗೆ ಮೊರೆ ಹೋಗಿದ್ದಿರಬಹುದು ಎಂದು ಅನೇಕರು ಊಹಿಸುತ್ತಿದರು.
ಡಾ|| ಯಶೋವರ್ಧನ್ ಅನೇಕ ವರ್ಷಗಳಿಂದ ಕೀರ್ತಿ ಹಾಗೂ ಯಶಸ್ಸಿನ ಉತ್ತುಂಗದಲ್ಲಿದ್ದರು. ಅಷ್ಟೊಂದು ಅಭಿಮಾನ ಗೌರವಕ್ಕೆ ಅನೇಕ ದಶಗಳಿಂದ ಪಾತ್ರರಾಗಿ, ಹೊಗಳಿಕೆ-ಪ್ರಶಂಸೆಗಳು ಇರದ ಸಾಮಾನ್ಯ ಜೀವನವೇ ಅವರಿಗೆ ಮರೆತುಹೋಗಿತ್ತು! ಅವರ ಆತ್ಮಾಭಿಮಾನ ಅನೇಕ ಬಾರಿ ದುರಹಂಕಾರದಂತೆ ಕೆಲವರಿಗೆ ಗೋಚರಿಸುತ್ತಿತ್ತು. ಅವರ ಬಳಿ ಚಿಕಿತ್ಸೆ ಮಾಡಿಸಿಕೊಂಡಿದ್ದ ಅಭಿಮಾನಿ ರೋಗಿಗಳು ಅವರು ಧರೆಗೇ ಇಳಿಯದಂತೆ, ದೇವರೆಂದೇ ಆರಾಧಿಸಿ ದಂತ ಕತೆಯ ಪ್ರೀತಿಯ ನಾಯಕನನ್ನಾಗಿ ಮಾಡಿಬಿಟ್ಟಿದರು. ಆರಡಿ ಎತ್ತರದ ನಿಲುವು, ಯೋಗ-ಜಿಮ್-ಜಾಗಿಂಗ್ನಿಂದ ಪಳಗಿದ ಸುಂದರ ಶರೀರ, ಸ್ಪರದ್ರೂಪಿ ಎನ್ನಬಹುದಾದ ಮುಖದಲ್ಲಿ ಸದಾ ಮಂದಸ್ಮಿತ ಇರುವ ಡಾ|ಯಶೋವರ್ಧನ್ ಅವರು ಐವತ್ತನೆಯ ವ್ಯಯಸ್ಸಿನಲ್ಲಿಯೂ ಆ ಶೆಹರಿನ ಅತ್ಯಂತ ಅನುರೂಪಿ ಅವಿವಾಹಿತ! ಮೋಸ್ಟ್ ಎಲಿಜಬಲ್ ಬ್ಯಾಚಲರ್! ತಮ್ಮ ಸಾಧನೆಗಳಲ್ಲಿಯೇ ತೊಡಗಿಸಿಕೊಂಡು. ಮದುವೆಯಾಗುವುದನ್ನೇ ಮರೆತು ಬಿಟ್ಟಿದ್ದರೂ, ಕೀರ್ತಿ-ಯಶಸ್ಸುಗಳ ಕಿರೀಟವನ್ನು ಹೊತ್ತ ಈತ ಅನೇಕ ಹೆಂಗಳೆಯರನ್ನು ಸಹಜವಾಗಿಯೇ ಆಕರ್ಶಿಸಿದ್ದರು. ತನ್ನನ್ನು ದೇವರೆಂದೇ ಭಾವಿಸುವ ಪ್ರಭಾವಿ ಜನಗಳು, ಆರಾಧಿಸುವ ಅನೇಕ ಸುಂದರ ಸ್ತ್ರೀಯರು, ವೃತ್ತಿಯಲ್ಲಿ ಸಂಪೂರ್ಣ ಸಂತೃಪ್ತಿ, ಹಾಗೂ ಅಸೂಯೆ ಹುಟ್ಟಿಸುವಷ್ಟು ಐಶ್ವರ್ಯವಿದ್ದ ಡಾ|| ಯಶೋವರ್ಧನ್ ಅವರಿಗೆ ಕೆಲವೊಮ್ಮೆ ತಾವು ಪವಾಡ ಪುರುಷರು, ದೇವರಿಗಿಂತ ಕೆಲವು ಮೆಟ್ಟಿಲುಗಳು ಮಾತ್ರ ಕೆಳಗಿರುವೆ ಎನಿಸಿದ್ದರೆ ಆಶ್ಚರ್ಯವೇನು? ಜನರ ಮುಖಗಳನ್ನು ಬದಲಿಸಿ, ಅವರ ಭವಿಷ್ಯವನ್ನು ಭವ್ಯವಾಗಿಸುವುದು ದೇವರಿಗಿಂತ ಕಡಿಮೆಯೇ? ಬೆರಳು, ಕೈ ಅಂತಹ ಮುಖ್ಯ ಅಂಗಗಳು ಕಳೆದುಕೊಳ್ಳದಂತೆ ಅವುಗಳ ಮೇಲೆ ಶಸ್ತ್ರಚಿಕಿತ್ಸೆ ನಡೆಸಿ ಜನರ ಜೀವನೋಪಾಯ ಕುಂಟಿತವಾಗದಂತೆ ಮಾಡುವುದು ಚಮತ್ಕಾರಾವಲ್ಲವೇ? ಇಂತಹ ಅನೇಕ ಸಂಗತಿಗಳಿಂದ ಡಾ||ಯಶೋವರ್ಧನ್ ಅವರು ದೇವಧೂತರೇ ಆಗಿಹೋಗಿದ್ದರು!
ಈಗಾಗಲೇ ಅನೇಕ ರಾಷ್ಟ್ರೀಯ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದ ಯಶೋವರ್ಧನ್ ಅವರಿಗೆ ಈ ಬಾರಿ ಪದ್ಮಭೂಷಣ ಸಿಗುವುದು ಖಚಿತ ಎಂದು ಕೂಟದಲ್ಲಿ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು.
ಹೀಗೆ ಎಲ್ಲರನ್ನೂ ಮಾತನಾಡಿಸುತ್ತಾ, ಅವರ ಹೋಗಳಿಕೆಯಿಂದ ಬೀಗುತ್ತಾ ಇರುವಾಗ ಓರ್ವ ಅಪರಿಚಿತನಿಗೆ ಮಖಾಮುಖಿಯಾದರು. ಈತ ಯಾರೆಂದು ಜ್ಞಾಪಿಸಿಕೊಳ್ಳಲು ಪ್ರಯತ್ನ ಪಟ್ಟರೂ ಅವನು ಯಾರೆಂದು ಹೊಳೆಯಲಿಲ್ಲ.. ಸುಮಾರು ತಮ್ಮ ಪ್ರಾಯವೇ, ಐದಡಿ ಹತ್ತು ಅಂಗುಲ ಇರಬಹುದು, ಗೋಧಿ ಬಣ್ಣ . ಬೆಲೆ ಬಾಳುವ ಸೂಟು. ಯಶೋವರ್ಧನರಿಗೆ ಆ ಸೂಟಿನ ಒಳಗಿಂದ ಇಣುಕುತ್ತಿದ್ದ ಸ್ವಲ್ಪವೇ ಬೊಜ್ಜು ಹಾಗೂ ಆತನ ಗಂಭೀರ ಮುಖದಲ್ಲಿದ್ದ ವಯಸ್ಸಿನ ನೆರಿಗೆಗಳು ತಟ್ಟನೆ ಕಂಡವು . ಭಾವೀ ಗಿರಾಕಿಯೇ ಈತ? ಕೂಟದಲ್ಲಿ ಕನ್ಸಲ್ಟೇಶನ್ ಮಾಡಬಾರದು ಎಂದು ಗೊತ್ತಿಲ್ಲವೇ ಇವನಿಗೆ ? ಅಷ್ಟಕ್ಕೂ ಆ ಪುಟ್ಟ ಬೊಜ್ಜಿಗೆ ಶಸ್ತ್ರಕ್ರಿಯೆ ಅಗತ್ಯವೇ ಇಲ್ಲ. ಮುಖದ ಸುಕ್ಕುಗಳಿಗೆ ಗಂಡಸಾದ ಇವನು ಅಷ್ಟು ಪ್ರಾಮುಖ್ಯತೆ ಕೊಡುವಂತಿದ್ದಾನೆಯೇ? ಶೋ ಬಿಸಿನೆಸ್ ನಲ್ಲಿರುವವನೆ? ಯಾರಿವನು ಎಂದುಕೊಳ್ಳುತ್ತಿದ್ದಂತೆಯೇ ಆತ ಮಾತನಾಡಿದ್ದ. ಅಬ್ಬಾ! ಅದು ಎಂತಹ ಶಾರೀರ! ಜನರ ಮಾತು-ಕೇಕೆ, ಗಾಜುಗಳ ಟಿಣ್ -ಟಿಣ್ ಶಬ್ದಗಳ ಹೊರತಾಗಿಯೂ ಅದೆಷ್ಟು ಸ್ಪಷ್ಟವಾಗಿ ಕೇಳಿಸಿತು! ಅವನ ಮುಖವನ್ನು ಮತ್ತೆ ನೋಡಿದಾಗ ಆ ಕಣ್ಣುಗಳಲ್ಲಿನ ಹೋಳಪಿಗೆ ಮಾರುಹೋದರು!
“ಡಾ||ಯಶೋವರ್ಧನ್ ! ಧನ್ಯವಾದಗಳು! ನಾನು ನಿಮ್ಮ ಮುನ್ನಡೆಯನ್ನು ಗಮನಿಸುತ್ತಾ ಬಂದಿದ್ದೇನೆ. ನಿಜಕ್ಕೂ ನಿಮ್ಮ ಸಾಧನೆ ಅತ್ಯದ್ಭುತ! ಶ್ಲಾಘನೀಯ !!” ಆತನ ಮಾತುಗಳು ಅವರ ಅಹಂ ಅನ್ನು ಮತ್ತಷ್ಟು ಚಪ್ಪರಿಸಿತು. ಆತ ತನ್ನ ಪರಿಚಯ ಹೇಳಿ ಕೊಳ್ಳಲೇ ಇಲ್ಲ ಎಂದು ಅವರು ಮರೆತರು. “ಸರ್ , ನಿಮ್ಮಲ್ಲಿ ನನ್ನದೊಂದು ಸಣ್ಣ ಪ್ರಶ್ನೆ. ತಾವು ವಯಸ್ಸನು ಮರೆಮಾಚಾಲು ಮಾಡುವ ಶಸ್ತ್ರಕ್ರಿಯೆಗಳಲ್ಲಿ ಬಹಳ ಪರಿಣಿತರು. ಆದರೆ ನೀವು ಯಾರದ್ದಾದರೂ ವಯಸ್ಸನ್ನು ಹಿಂದೆ ಹೋಗುವಂತೆ ಮಾಡಿದ್ದೀರ? ಅದಲ್ಲದಿದ್ದರೆ ಬಿಡಿ. ಅಟ್ ಲೀಸ್ಟ್ ವ್ಯಯಸ್ಸಾಗುವುದನ್ನು ತಡೆದಿದ್ದೀರ?” ಎಡ ಹುಬ್ಬನ್ನು ಪ್ರಶ್ನಾರ್ಥಕವಾಗಿ ಎತ್ತಿ ಅಪಹಾಸ್ಯ ಮಾಡುವಂತೆ ಕೇಳಿದನು. ಡಾ||ಯಶೋವರ್ಧನ್ನರಿಗೆ ಹೀರಿದ್ದ ಓಡ್ಕಾದ ನಶೆ ಜರ್ರನೆ ಇಳಿದುಹೋಯಿತು!! ಯಾವೋನಿವನು? ಹುಚ್ಚನ? ನನ್ನ ಸತ್ಕಾರ ಕೂಟಕ್ಕೆ ಬಂದು ನನ್ನನ್ನೇ ಈ ರೀತಿ ಪ್ರಶ್ನೆ ಕೇಳುತ್ತಾನೆ. ಅಷ್ಟಕ್ಕೂ ಇವನು ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಲ್ಲರೂ ಸುಮ್ಮನಿರುವರೆ? ಸುತ್ತಲಿನದ್ದೆಲ್ಲಾ ಮುಸುಕಾದಂತೆ ಆಗಿ, ಅವನ ವಿಕಟ ನಗೆ ಮತ್ತು ವಿಡಂಬನಾತ್ಮಕ ಪ್ರಶ್ನೆಯೇ ದೊಡ್ಡದಾಗಿ ಬೆಳೆಯುತ್ತಿದ್ದವು! ಹೇಗೆ ಅವಾಕ್ಕಾಗಿ ಉತ್ತರಿಸಲು ಹವಾಣಿಸುತ್ತಿದ್ದಂತೆ, ನಾಲ್ಕಾರು ಜನ ಅತಿಥಿಗಳು ಒಮ್ಮೆಲೇ ಬಂದು ಅವರನ್ನು ಸುತ್ತುಗಟ್ಟಿಕೊಂಡು , ಅಭಿನಂದಿಸಿ, ಹೂವಿನ ಗುಚ್ಚಗಳನ್ನು ಅವರ ಕೈಗೆ ತುರುಕಿದರು. ಆ ಹುಯಿಲಲ್ಲಿ ಕಣ್ಮರೆಯಾದ ಆ ವ್ಯಕ್ತಿ ಮತ್ತಲ್ಲಿ ಹುಡುಕಿದರೂ ಸಿಗಲಿಲ್ಲ!
ಕೂಟದಿಂದ ಹಿಂದಿರುಗಿದವರಿಗೆ ನಿದ್ದೆ ದೂರವಾಯಿತು. ಇಷ್ಟೆಲ್ಲಾ ಸಾಧಿಸಿದ್ದರೂ ಕೆಲವೊಮ್ಮೆ ಏನೋ ಶೂನ್ಯತೆ ಅವರನ್ನು ಕಾಡುತ್ತಲಿತ್ತು. ಸ್ನೇಹಿತರಿಗೆ ಹೇಳಿಕೊಂಡರೆ, “ಮದುವೆ ಮಾಡಿಕೊ. ಹೆಂಡತಿ, ಮಕ್ಕಳು, ಸಂಸಾರ ಅನ್ನುವ ಒದ್ದಾಟದಲ್ಲಿ ಶೂನ್ಯತೆಗೆ ಜಾಗವಿರುವುದಿಲ್ಲ!” ಎಂದು ಸಲಹೆ ಕೊಡುತ್ತಿದ್ದರು. ಯಶೋವರ್ಧನ ಅವರಿಗೆ ಗೊತ್ತು ಆ ಶೂನ್ಯತೆ ಶರೀರಕ್ಕೆ ಸಂಭಂದಿಸಿದ್ದಲ್ಲ ಎಂದು. ಉದ್ದವಾದ, ಕತ್ತಲಿನ ಸುರಂಗದಲ್ಲಿ ಏನನ್ನೋ ಅರಸುತ್ತಾ, ಒಬ್ಬನೇ ಓಡುವ ಶೂನ್ಯತೆ ಅದು! ಆತ ಹೇಳಿದ್ದು ನಿಜವೆನಿಸುತ್ತದೆ . ಬೇರೆಯವರ ಮುಪ್ಪನ್ನು ಕೈಚಳಕದಿಂದ ಗಿಲೀಟಾಗಿ ಮರೆಮಾಚುತ್ತಿದ್ದ ನನಗೆ, ನಾನು ವ್ಯಯಸ್ಸಾಗುವುದನ್ನೇ ತಡೆಯಲಾಗುವುದಿಲ್ಲ. ಇನ್ನು ಪರರ ಯೌವ್ವನವನ್ನು ಹಿಡಿದಿಡಲಾದೀತೇ? ಮುಪ್ಪು ಸಹಜವಲ್ಲವೇ? ಆತ ಯಾಕೆ ಉತ್ತರ ಸ್ಪಷ್ಟವಾಗಿರುವ, ಸುವ್ಯಕ್ತವಾಗಿರುವ ಇಂತಹ ಪ್ರಶ್ನೆಯನ್ನು ನನಗೆ, ಅದೂ ನನ್ನ ಹುಟ್ಟಿದ ಹಬ್ಬದಂದು ಕೇಳಿದ್ದು? ಎಷ್ಟು ಶ್ಲಾಘನೆ, ಆರಾಧನೆಗಳಲ್ಲಿ ಮಿಂದು ಸುಖಿಸುತ್ತಿದ್ದ ನನ್ನನ್ನು, ಒಂದು ಸಾಮಾನ್ಯ ಪ್ರಶ್ನೆಯಿಂದ ಕ್ಷಣಾರ್ಧದಲ್ಲಿ ಗೊಂದಲಕ್ಕೆ ತಳ್ಳಿಬಿಟ್ಟನಲ್ಲ? ತದನಂತರ ಎಲ್ಲಾ ಹುಮ್ಮಸ್ಸು ಹೊರಟು ಹೋಗಿತ್ತು. ಅಷ್ಟಕ್ಕೂ ಅವನೇ ಹೇಳಿಕೊಂಡಂತೆ, ನನ್ನ ಯಶಸ್ಸನ್ನು ಅವನು ಯಾಕೆ ಅನುಸರಿಸುತ್ತಿದ್ದ?
ಅಷ್ಟು ದಶಕಗಳಿಂದ ಸಮಚಿತ್ತರಾಗಿ, ಏಕಾಗ್ರತೆಯಿಂದ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಯಶೋವರ್ಧನ್ ಅವರು ಮೊದಲ ಬಾರಿಗೆ ಅಂದು ಕಾರ್ಯನಿರ್ವಹಿಸುತ್ತಿರುವಾಗ ಚಿತ್ತಪಲ್ಲಟಕ್ಕೆ ಒಳಗಾದರು, ಎಲ್ಲಾ ಕೆಲಸಗಳಲ್ಲೂ ಉದಾಸೀನತೆ ತೂರಿಬರಲು ಶುರುವಾಯಿತು. ಮನಸ್ಸು ಕದಡಿತ್ತು. ಆತನ ಪ್ರಶ್ನೆಗೆ ಉತ್ತರ ಸಿಗದೇ ಸದಾ ಒಡ್ಡಾಡುವಂತಾಯಿತು. ಅಲ್ಲ, ವೈದ್ಯಕೀಯ ವಿಜ್ಞಾನದಲ್ಲಿಯೇ ಮುಪ್ಪನ್ನು ತಡೆಗಟ್ಟುವ ಅಥವಾ ವಯಸ್ಸನ್ನು ಹಿಂದೆ ಹಾಕುವ ಮದ್ದಾಗಲೀ, ಆವಿಷ್ಕಾರವಾಗಲೀ ಇರಲೇ ಇಲ್ಲ. ಹೀಗಿದ್ದರೂ ಆತ ತನ್ನನ್ನು ಏಕಿಂತಹ ಅಸಂಬದ್ಧ ಪ್ರಶ್ನೆ ಕೇಳಿದ್ದ? ಕ್ರಮೇಣ ದಿನಗಳು ಕಳೆದಂತೆ ಆ ಘಟನೆಯನ್ನು ಮರೆಯಲೆತ್ನಿಸಿ ತಮ್ಮ ಮೂಲ ಮನಃಸ್ಥಿತಿಗೆ ವಾಪಸ್ಸಾಗಲೆತ್ನಿಸಿದರೂ, ಗಂಭೀರದ ಕೆಲಸಗಳಲ್ಲಿ ತೊಡಗಿರುವಾಗ, ಅವನ ಪ್ರಶ್ನೆ ಹಟಾತ್ತಾಗಿ ಅವರೆದುರು ಬಂದು ನಿಂತು ಅಣಕಿಸುವಂತೆ ಅನಿಸುತ್ತಿತ್ತು!!
ರಾತ್ರಿ ಎಂಟು ಘಂಟೆ ದಾಟಿತ್ತು . ಅಂದಿನ ಸಂಜೆಯ ಕೊನೆಯ ಪೇಶೆಂಟ್ ಪ್ರಾದೇಶಿಕ ಭಾಷಾ ಚಲನ ಚಿತ್ರನಟಿಯನ್ನು ಪರೀಕ್ಷಿಸಿ, ಆಕೆಯ ಮುಂದಿನ ಚಿಕಿತ್ಸೆಯನ್ನು ಚರ್ಚಿಸಿ, ಅವಳನ್ನು ಬೀಳ್ಕೊಟ್ಟು ಬಂದರು. ಸೂಟ್ ಕೇಸ್ ತೆಗೆದುಕೊಂಡು ಇನ್ನೇನು ಹೊರಹೋಗಬೇಕು ಎನ್ನುವಾಗ ಅವರ ಕೋಣೆಯ ಬಾಗಿಲನ್ನು ದೂಡಿಕೊಂಡು ಯಾರೋ ಒಳನುಗ್ಗಿದರು. “ಏಯ್! ಯಾರು? ಸೆಕ್ಯುರಿಟಿ? ಯಾಕೆ ಬಿಟ್ಟದ್ದು “ ಎಂದು ಕೂಗಿದರು. ಒಳಬಂದವನು ಸುಮಾರು ಇಪ್ಪತ್ತೈದರ ಯುವಕ. ಎಲ್ಲೋ ನೋಡಿದ ನೆನಪು. ಎಲ್ಲಿ ಎಂದು ಜ್ಞಾಪಕ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಆತನೇ ಮಾತನಾಡಿದ. “ನಮಸ್ಕಾರ ಡಾಕ್ಟ್ರೇ!!” ತಕ್ಷಣ ಅವರಿಗೆ ನೆನಪಾಯಿತು. ನಿಸ್ಸಂಶಯವಾಗಿ ಈತ ಅಂದಿನ ಕೂಟದಲ್ಲಿ ಪ್ರಶ್ನೆ ಕೇಳಿದ ಸೂಟುಧಾರಿಯೇ! ಆದರಂದು ಮಧ್ಯವಯಸ್ಕನಾಗಿದ್ದವನು ಇಂದು ಪ್ರಾಯದ ನಾಯಕನಟನಂತೆ ಕಾಣುತ್ತಿರುವನಲ್ಲ?ಬೋಜ್ಜೂ ಇಲ್ಲ, ಕಡಿದಿಟ್ಟ ಮೈಮಾಟ! ಯೌವ್ವನದ ಚಿಲುಮೆಯಂತೆ ಹೊಳೆಯುತ್ತಿರುವ ತ್ವಚೆ! ಅದೇ ಮುಖದಲ್ಲಿನ ತೇಜಸ್ಸು, ಅದೇ ಹೊಳೆಯುವ ಕಣ್ಗಳು ಮತ್ತು.. ಅದೇ ಅನುರಣಿಸುವ ಕಂಚಿನ ಕಂಠ! ಇವನು ಅವನೇ! ಈಗವನ ನೆತ್ತಿಯ ಸುತ್ತಲೂ ಇರುವುದು ತೆಳ್ಳನೆಯ ಪ್ರಭಾವಳಿಯೋ ಅಥವಾ ಅದು ತಮ್ಮ ಭ್ರಮೆಯೋ? ಈ ಬಾರಿ ಯಶೋವರ್ಧನ್ ಅವರಿಗೆ ತಮ್ಮ ಕಟ್ಟಿದ ದ್ವನಿ ಬಿಟ್ಟಿತು.
” ಏಯ್! ನೀವಾ? ಅದ್ಹೇಗೆ ಬಂದ್ರಿ?” ಇಷ್ಟೊತ್ತಿಗೆ ಅವರ ಕಾರ್ಯದರ್ಶಿಯೂ ಹೊರಟು ಹೋಗಿರುತ್ತಾಳೆ. ಆತ ಇವರ ಪ್ರಶ್ನೆಯನ್ನು ನಿರ್ಲಕ್ಷಿಸುತ್ತಾ, “ಡಾಕ್ಟ್ರೇ, ನನ್ನ ಪ್ರಶ್ನೆಗೆ ಉತ್ತರ ಸಿಕ್ತಾ?” ಎಂದು ಕತ್ತು ಕೊಂಕಿಸಿ ಕೇಳಿದ. ತಾನೇ ವಯಸ್ಸನ್ನು ಹಿಂದೆ ಹಾಕಿ, ಅಂದಿಗಿಂತ ಇಂದು ಚಿಕ್ಕವನಾಗಿ, ಅಂದಿನ ಪ್ರಶ್ನೆಗೆ ಇಂದು ಸಾಕ್ಷಾತ್ ಉತ್ತರವಾಗಿ ತಾನೇ ನಿಂತಿದದ್ದಾನೆ! ನಿಮ್ಮ ಜವಾಬು ಏನಾದರೆ ಏನು ಎನ್ನುವಂತಿತ್ತು ಆತನ ಧೋರಣೆ!
ಯಶೋವರ್ಧನ್ ಅವರಿಗೆ ಮತ್ತೆ ನಾಲಿಗೆ ಸೆಟೆದುಕೊಂಡು, ಸ್ಥಂಭೀಭೂತರಾದರು. “ಡಾಕ್ಟ್ರೇ, ನಿಮ್ಮಿಂದ ಮುಪ್ಪನ್ನು ಮರೆಮಾಚಾಲು ಮಾತ್ರ ಸಾಧ್ಯ! ತಡೆಯಲಾಗುವುದಿಲ್ಲ ಎಂದು ಸೋಲೊಪ್ಪಿಕೊಳ್ಳಿ! ಹೋಗಲಿ ಬಿಡಿ. ಶರೀರಕ್ಕಾಗುವ ಅಹಿತಕರ ಬಡಲಾವಣೆಗಳಿಗೇನೋ ತಾವು ಚಾಕಚಕ್ಯತೆಯಿಂದ ತ್ಯಾಪೆ-ಹೊಲಿಗೆ ಹಾಕಿ ಮುಚ್ಚಿಬಿಡುತ್ತೀರಿ! ಸುಕ್ಕು, ಬೊಜ್ಜು, ಬಕ್ಕ ತಲೆ, ಗುಳಿಗೆನ್ನೆ ಇನ್ನೂ ಏನೇನಕ್ಕೋ ಚಮತ್ಕಾರಗಳು ನಿಮ್ಮ ಕೈಗಳಲ್ಲಿ ಸುಲಲಿತವಾಗಿ ಆಗಿ ಹೋಗುತ್ತದೆ! ಆದರೆ ಓರ್ವ ವ್ಯಕ್ತಿಯ ಮನಸ್ಸು-ಹೃದಯಗಳಲ್ಲಿ ಅಡಗಿರುವ ಕುರೂಪಿತನವನ್ನು ಅಳಿಸಿ, ಒಳ್ಳೆತನವನ್ನು ಹೊಲಿಯುವ ಯಾವುದಾದರೂ ಶಸ್ತ್ರಚಿಕಿತ್ಸೆ ನಿಮ್ಮಲ್ಲಿದೆಯೇ?”
ಛೇ! ಈತ ನಿಜವಾಗಲೂ ಹುಚ್ಚನೆ!ಹೇಗೆ, ಯಾವಾಗ್ಯಾವಾಗಲೋ ನನ್ನ ಮುಂದೆ ಬಂದು ನಿಂತು ಅಸಂಮಂಜಸವಾದ ಪ್ರಶ್ನೆಗಳನ್ನು ಕೇಳಿ, ಕಾಡುತ್ತಾನೆ. ಹೊರಗೆ ಗೂರ್ಖನಿದ್ದಾರೆ ಇವನನ್ನು ಕತ್ತು ಹಿಡಿದು ಆಚೆ ನೂಕು ಎಂದು ಹೇಳಬೇಕು ಎಂದು ತಮ್ಮ ಕೋಣೆಯಿಂದ ಆಚೆ ಹೋದರು. ಒಂದು ಕ್ಷಣವಷ್ಟೆ. ವಾಪಸ್ಸಾಗಿ ಬರುವಷ್ಟರಲ್ಲಿ ಆತ ಅಲ್ಲಿ ಇರಲೇ ಇರಲಿಲ್ಲ! ಅವರೊಂದಿಗೆ ಬಂದ ಗೂರ್ಖನೋ, “ಇಲ್ಲಿ ಯಾರೂ ಇಲ್ಲವಲ್ಲ!” ಎಂದು ವಿಚಿತ್ರವಾಗಿ ಅವರನ್ನು ನೋಡಿ ತಲೆ ಅಲ್ಲಾಡಿಸುತ್ತಾ ಹೊರಟು ಹೋದ!
ಮತ್ತೆ ಡಾ|ಯಶೋವರ್ಧನ್ ಅವರ ಮನಸು ಬಗ್ಗಡವಾಯಿತು. ಹೌದು ತಾನು ಎಷ್ಟೊಂದು ಜನರ ಭವಿಷ್ಯವನ್ನು ಪುನರ್ರಚಿಸಿದ್ದೇ, ಅದೃಷ್ಟವಂತಾರನ್ನಾಗಿ ಮಾಡಿಸಿಬಿಟ್ಟೆ ಎಂಬ ಹಮ್ಮಿನಿಂದ ಬೀಗುತ್ತಲಿದ್ದೆ. ಆದರವರ ಮನಸ್ಸಿನಲ್ಲಿದ್ದ ವಿಕೃತಿಗಳು ಹಾಗೇಯೇ ಉಳಿಯುತ್ತಿದ್ದವು . ಮುಟ್ಟಲಾಗದಿದ್ದನ್ನು ಸರಿ ಪಡಿಸುವುದು ಹೇಗೆ? ಮಗನನ್ನು ಉಳಿಸಿದ್ದಕ್ಕೆ ಕಾಲನ್ನು ಹಿಡಿದು ಉಡುಗೊರೆ-ದುಡ್ಡುಗಳ ಮಹಾಪೂರವನ್ನೇ ಹರಿಸಿದ ಆ ಕೇಂದ್ರ ಮಂತ್ರಿಯ ಕುಟಿಲತೆ-ಕಿಡಿಗೇಡಿತನ ಯಾರಿಗೆ ತಾನೇ ತಿಳಿದಿಲ್ಲ? ಯಾವ ಶಸ್ತ್ರ ಚಿಕಿತ್ಸೆಯಿಂದ ಅವನ ಬ್ರಷ್ಟಾಚಾರವನ್ನು ನಿವಾರಿಸಬಹುದು? ಬಡ ಕೂಲಿ ಕಾರ್ಮಿಕರ ಬಾಟವಾಡೆಯನ್ನು ಕತ್ತರಿಸಿ , ಆ ದುಡ್ಡಿನಲ್ಲಿ ಅರಮನೆ ಕಟ್ಟಿಸಿಕೊಂಡು, ಬೊಜ್ಜು ಕರಗಿಸಿಕೊಂಡು , ಸುಕ್ಕುಗಳನ್ನು ತೀಡಿಸಿಕೊಂಡಿದ್ದ ಲಂಚಕೋರ ಇಂಜಿನಿಯರ್ನ ಕಪ್ಪು ಹೃದಯಕ್ಕೆ ಯಾವ ತ್ಯಾಪೆ? ಯಾವ ಹೊಲಿಗೆ? ತುಟಿಗಳನ್ನು ಉಬ್ಬಿಸಿಕೊಂಡು ಸ್ತನಗಳನ್ನು ವರ್ಧಿಸಿಕೊಂಡ ಮಹಿಳೆಯರ ಮನಸ್ಸುಗಳಲ್ಲಿ ಅಡಗಿರುವ ಕಾಮ-ಕಾಂಚಣದ ದುರಾಸೆಯ ಕಪ್ಪು ಕಲೆಯನ್ನು ನಾನೆಂದೂ ಗಂಭೀರವಾಗಿ ಯೋಚಿಸಿಯೇ ಇರಲಿಲ್ಲವಲ್ಲ? ಮತ್ತೆ ಅವರಿಗೆ ಕಪ್ಪು ಸುರಂಗ, ಅದರಲ್ಲಿ ಏನನ್ನೋ ಅರಸುತ್ತಾ ಓಡುತ್ತಿರುವಂತೆ ಭಾಸವಾಯಿತು. ಆದರಿಂದು ತಮ್ಮ ಕೈಯನ್ನು ಯಾರೋ ಹಿತವಾಗುವಂತೆ ಹಿಡಿದಿದ್ದಾರೆ. ಕತ್ತಲಲ್ಲಿ ಚೆಹರೆ ಕಾಣದಿದ್ದರೂ ಅದು ಅಂದಿನ ದಿವಸ ಕೂಟದಲ್ಲಿ ಕಂಡ ಸೂಟುಧಾರಿ ಎನಿಸುತ್ತದೆ.. ಅರೆ.. ಛೇ! ಅಲ್ಲ! ಅದು ಮೊನ್ನೆ ನನ್ನ ಕ್ಲಿನಿಕ್ಕಿಗೆ ಬಂದ ಯುವಕನ ಕೈಗಳು !
ಅಸ್ವಾಸ್ಥ್ಯದ ನೆಪವೊಡ್ಡಿ ಮುಂದಿನ ವಾರದಲ್ಲಿದ್ದ ತಮ್ಮೆಲ್ಲಾ ಶಸ್ತ್ರಚಿಕಿತ್ಸೆಗಳ ಕೇಸುಗಳನ್ನೂ ರದ್ದು ಮಾಡಿದರು ಡಾ||ಯಶೋವರ್ಧನ್. ಕ್ಲಿನಿಕ್ಕಿಗೆ ಹೋಗುವುದನ್ನೂ ನಿಲ್ಲಿಸಿ ಬಿಟ್ಟರು. ಇಷ್ಟು ವರ್ಷಗಳು ದೇವರು ಆಧ್ಯಾತ್ಮವೆಂದು ಯೋಚಿಸಿಯೇ ಇರದಿದ್ದವರು, ಈಗ ಅನೇಕ ಅಧ್ಯಾತ್ಮ ಪುಸ್ತಕಗಳನ್ನು ಓದಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಮುಖ, ಶರೀರಗಳನ್ನು ತಿದ್ದಿ, ಬದಲಿ ಮಾಡುತ್ತಿದ್ದ ತಮಗೇ ಅಷ್ಟು ಆತ್ಮವಿಶ್ವಾಸ, ಅಹಂ ಇದ್ದರೆ;ಆ ಮುಖಗಳಿಗೆ-ಅವಯವಾಗಳಿಗೆ ಮೊದಲೇ ಆಕಾರ ಕೊಡುವ ಕೈ ಯಾರದ್ದಿರಬಹುದು? ಅಂದು ನಿಸ್ಸಂಶಯವಾಗಿ ಐವತ್ತರನವನಂತೆ ಕಾಣುತ್ತಿದ್ದ ಆಸಾಮಿ ಕೆಲವೇ ದಿನಗಳಲ್ಲಿ, ಯಾವ ಚಮತ್ಕಾರದಿಂದ ಇಪ್ಪತ್ತೈದರ ಯುವಕನಾಗಿ ಮಾರ್ಪಾಡಾಗಿದ್ದ? ವಯಸ್ಸನ್ನು ಹಿಂದಕ್ಕೆ ಸರಿಸುವ ಸಾಮರ್ಥ್ಯವಿದ್ದಂತೆ ಇವನಿಗೆ ಮತ್ತಿನ್ಯಾವಯ ಸಾಮರ್ಥ್ಯಗಳಿರಬಹುದು? ಇವನು ಯಾರು? ಹಟಾತ್ತಾಗಿ ಎಲ್ಲಿಂದ ಬರುತ್ತಾನೆ? ಆತ್ಮಾವಲೋಕನೆಯ ಪ್ರಶ್ನೆಗಳನ್ನೇ ಕೇಳಿ ಕ್ಷಣಾರ್ಧದಲ್ಲಿ ಮಾಯವಾಗಿಬಿಡುತ್ತಾನೆ. ಆತನ ಹೆಸರು, ವಿಳಾಸ ಕೇಳಲೂ ಇಲ್ಲ. ಅವನು ಯಾರೆಂದು ತಿಳಿದಿಲ್ಲದಿದ್ದರೂ ಅವನ ಸಾನ್ನಿಧ್ಯವನ್ನು ನಾನೇಕೆ ಅರಸುತ್ತಿದ್ದೇನೆ? ಅವನು ಮತ್ತೆ ನನಗೆ ಸಿಗುತ್ತಾನೆಯೇ?
ಎರಡು ವಾರಗಳು ಕಳೆದರೂ ಡಾ|| ಯಶೋವರ್ಧನ್ನವರಿಗೆ ಮತ್ತೆ ಕೆಲಸಕ್ಕೆ ವಾಪಸ್ಸಾಗಲು ಮನಸಾಗಲಿಲ್ಲ. ಯಾವ ಕಾರ್ಯದಲ್ಲಿ ತಮ್ಮನ್ನು ಹೆಮ್ಮೆಯಾಗಿ ತೊಡಗಿಸಿಕೊಳ್ಳುತ್ತಿದ್ದರೋ ಅದೀಗ ಬಹಳ ಕೃತಕ, ಕ್ಷುಲ್ಲಕವಾಗಿ ಕಾಣತೊಡಗಿತು. ಆದರೆ ಈ ಹಿಂದೆಯೇ ನಿಗದಿ ಪಡಿಸಿದ್ದ ಶಸ್ತ್ರಚಿಕಿತ್ಸೆಗಳನ್ನು ಮಾಡಿ ಮುಗಿಸುವುದ ಅನಿವಾರ್ಯವಾಗಿತ್ತು.
ಡಾ|| ಯಶೋವರ್ಧನ್ ಅವರ ಅಪಾರ ಸೇವೆಯನ್ನು ಪರಿಗಣಿಸಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗುವುದೆಂದು ಘೋಷಣೆಯಾಯಿತು. ಸ್ನೇಹಿತರು, ಬಾಂಧವರು, ಅಭಿಮಾನಿಗಳೆಲ್ಲರೂ ಸತತವಾಗಿ ಅವರ ಮನೆಗೆ ಆಗಮಿಸಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು. ನಿಗದಿತ ದಿನ ರಾಜಧಾನಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ತಮ್ಮ ಪ್ರಶಸ್ತಿಯನ್ನು ಸ್ವೀಕರಿಸಬೇಕೆಂದು ಸರ್ಕಾರದಿಂದ ಅಧಿಕೃತ ಕೋರಿಕೆಯೂ ಬಂದಿತು.
ಅಂದು ಹುಣ್ಣಿಮೆಯ ರಾತ್ರಿ. ಮನೆಯಲ್ಲಿ ಎಲ್ಲೆಡೆ ಜನರು ಅಭಿನಂದಿಸಿ ಇಟ್ಟು ಹೋಗಿದ್ದ ನೂರಾರು ಹೂ-ಗುಚ್ಚಗಳು , ಮನೆಯಲ್ಲೆಲ್ಲಾ ಹೂವುಗಳ ಸುವಾಸನೆ ಪಸರಿಸಿತ್ತು. ನಿದ್ದೆ ಮಾಡಲಾಗದೆ ಅಲ್ಲೇ ಬ್ಯಾಲ್ಕನಿಯಲ್ಲಿ ಟರಾಯಿಸುತ್ತಾ ಆ ವ್ಯಕ್ತಿ ಹೇಳಿದ್ದ ಮಾತುಗಳನ್ನು ಮತ್ತೆ ಮತ್ತೆ ಮೆಲುಕು ಹಾಕಿಕೊಳ್ಳುತ್ತಿದ್ದರು. ಬ್ಯಾಲಕನಿಯ ಆ ಕೊನೆಯಲ್ಲಿ ಯಾರು ನಿಂತಿರುವುದು? ಎಲ್ಲೆಡೆ ಬಾಗಿಲು ಹಾಕಿದ್ದರೂ ಮನೆಯೊಳಗೆ ಯಾರು ಹೇಗೆ ಬರಲು ಸಾಧ್ಯ? ಅಷ್ಟರಲ್ಲಿ ಆ ವ್ಯಕ್ತಿಯೇ ಎದುರಿಗೆ ನಿಂತಿದ್ದನು. ಈಗವನು 14-15 ರ ಹದಿಹರೆಯದ ಹುಡುಗನಾಗಿಬಿಟ್ಟಿದ್ದನು . ಇವನ್ಯಾರೆಂದು ಅವರಿಗೆ ಸಂಶಯವೇ ಬರಲಿಲ್ಲ. ಆತನ ತೇಜಸ್ಸು, ಕಣ್ಣುಗಳ ಹೊಳಪು ಹಾಗೂ ನಿಶ್ಚಳ ದ್ವನಿಯನ್ನು ಮರೆಯುವುದುಂಟೇ? ಅವನನ್ನು ಅಲ್ಲಿ ಕಂಡು ಆಶ್ಚರ್ಯವೂ ಆಗಲಿಲ್ಲ ಅವರಿಗೆ. ಬದಲಾಗಿ ಅವನ ಬರುವನ್ನು ಎದಿರುನೋಡುತ್ತಿದ್ದರೆನೋ ಎನ್ನುವಂತಿತ್ತು ಅವರ ಮುಖದಲ್ಲಿನ ಉತ್ಸಾಹ.
“ ಯಶೋವರ್ಧನ! ಉತ್ತರಗಳ ಹುಡುಕಾಟದಲ್ಲಿ ಪ್ರಶ್ನೆಗಳನ್ನು ಮೆಲುಕು ಹಾಕುತ್ತಲೇ ಇದ್ದೀಯಾ?” ಯಶೋವರ್ಧನ ಎಂಬ ಪದವನ್ನು ಒತ್ತಿ ಹೇಳಿ ವ್ಯಂಗ್ಯವನ್ನು ಹೆಚ್ಚಿಸಿದ್ದನು. ಆ ಹುಡುಗ ತನ್ನನ್ನು ಎಕವಚನದಲ್ಲಿ ಸಂಭೋಧಿಸುತ್ತಿದ್ದರೂ ಅವರಿಗೆ ಅದು ಅನುಚಿತ ಅನಿಸಲೇ ಇಲ್ಲ. ತನಗಿಂತ ಚಿಕ್ಕವನನ್ನು ಮಾತನಾಡಿಸುವಂತಿತ್ತು ಆ ಹಡುಗನ ಮಾತಿನ ಧಾಟಿ. “ಮುಪ್ಪನ್ನೂ ನಿಲ್ಲಿಸಲಾಗಲಿಲ್ಲ, ಮನಸ್ಸಿನ ದೆವ್ವಗಳನ್ನು ಸರಿಪಡಿಸಲಾಗುವುದಿಲ್ಲ ನಿನಗೆ !! ಬಿಡು. ಪದ್ಮಭೂಷಣವಾದರೂ ಇದೆಯಲ್ಲ? ಅಷ್ಟಕ್ಕೇ ತೃಪ್ತಿಪಟ್ಕೊ.. ಆಮೇಲೆ.. ಎಂದಾದರೂ ನೀನು ಸಾವನ್ನು ಸ್ಮರಿಸಿದ್ದೀಯ? ಅಥವಾ ಕೀರ್ತಿ-ಸಾಧನೆಗಳಿಂದ ಅದನ್ನೂ ಮೆಟ್ಟ ಬಹುದು ಎಂದು ನಂಬಿ-ನಿರ್ಧರಿಸಿದ್ದೀಯ? ಅಥವಾ ಅಂದವಾಗಿ ರಚಿಸಿದ್ದ ನಿನ್ನ ಗಿರಾಕಿಗಳ ಅಂದ ಚೆಂದಗಳು ಸಾವನ್ನು ದೂರವಿಡಬಲ್ಲವೇ?” ಎಂದು ಮತ್ತೆ ಅಸಂಬದ್ಧವಾಗಿ ಮಾತಾಡುತ್ತಲಿದ್ದ .
ಡಾ||ಯಶೋವರ್ಧನ್ ಅವರಿಗೆ ತಮ್ಮ ಅನೇಕ ರೋಗಿಗಳ ಚೆಹರೆ ಕಣ್ಮುಂದೆ ಹಾದು ಹೋದವು. ಅವೆಲ್ಲವೂ ಸ್ವಲ್ಪವೂ ದೋಷವಿರದಂತೆ ರೂಪಿಸಿದ್ದ, ಮನೋಜ್ಞವಾದ, ಸುಂದರ ಮುಖಗಳು, ವಿಶ್ವ ವಿಖ್ಯಾತವಾಗುವಷ್ಟು ಉತ್ತಮವಾಗಿ ರೂಪಿಸಿದ್ದ ಮುಖಗಳು, ಹೊಲಿಗೆಯ ಗುರುತೇ ಕಾಣದಂತೆ ತ್ಯಾಪೆ ಹಾಕಿದ್ದ ನ್ಯೂನತೆಗಳು..
ಆ ಕ್ಷಣ ಅವರಿಗೆ ಏನೋ ಜ್ಞಾನೋದಯದಂತಾಯಿತು. ಆ ಸುಂದರ ರೂಪಗಳನ್ನು ಹೊಂದಿದ್ದವರು ಅಮರ್ತ್ಯರಲ್ಲ! ಒಂದು ದಿವಸ ಖಚಿತವಾಗಿ ಸಾಯುವವರೆ! ತಾವು ಚಾಣಾಕ್ಷತೆಯಿಂದ ಶಸ್ತ್ರಚಿಕಿತ್ಸೆ ಮಾಡಿದ ಮುಖಗಳು, ಶ್ರದ್ಧೆ ನೈಪುಣ್ಯತೆಗಳಿಂದ ತಿದ್ದಿ-ಪುನರ್ರಚಿಸಿದ್ದ ಅಂಗಗಳು , ದೇಹಗಳು ಮುಂದೊಂದು ದಿವಸ ತಮ್ಮ ಮನಸ್ಸುಗಳಿನ ಕಪ್ಪು-ಬಿಳುಪುಗಳ ಸಮೇತ ಮಣ್ಣಾಗಿ , ಭೂಮಿಯಲ್ಲಿಯ ಹುಳು-ಕೀಟಗಳಿಗೆ ಆಹಾರವಾಗಿ, ನಶಿಸಿ ಹೋಗುವುದು ಸತ್ಯ! ಅಥವಾ ಒಮ್ಮೆಗೇ ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿಹೋಗುತ್ತವೆ! ಹಾಗಿದ್ದರೂ ಅವರೆಲ್ಲರೂ ತಮ್ಮ ದೇಹಕ್ಕಾಗಿ, ಅಂಗ ಸೌಷ್ಠ್ಯಕ್ಕಾಗಿ ಎಷ್ಟು ಪರದಾಡಿದ್ದರು! ಕೊನೆಗೊಮ್ಮೆ ನಶಿಸಿ ಹೋಗುವ ಶರೀರವನ್ನು ತಾನೂ ಎಷ್ಟು ಹೆಮ್ಮೆಯಿಂದ ತಿದ್ದಿ ತೀಡುತ್ತಿದ್ದೆನಲ್ಲ! ತನ್ನದು ಎಂದುಕೊಂಡಿದ್ದ ಯಶಸ್ಸು, ಕೀರ್ತಿ, ಆಸ್ತಿ ಎಲ್ಲವೂ ಇಂಥಹವರಿಂದಲೇ ಬಂದಿರುವುದು! ತನ್ನ ಕೈಚಳಕವನ್ನು ಕೊಂಡಾಡುವರು ಸತ್ತು ಹೋಗುತ್ತಾರೆ. ಅದರೊಂದಿಗೆ ತಾನು ಹೆಮ್ಮೆ ಪಡುತ್ತಿದ್ದ ಜೈವಿಕ ಕಾಮಗಾರಿಯೂ ನಶಿಸಿಹೋಗುತ್ತಾ, ಕ್ರಮೇಣ ತನ್ನ ಚಾಕಚಕ್ಯತೆಯ ಕುರುಹುಗಳೆಲ್ಲವೂ ಕಳೆದುಹೋಗುತ್ತವೆ! ತನಗೂ ಮುಪ್ಪಾಗುತ್ತದೆ. ಜನರಲ್ಲಿದ್ದ ತನ್ನ ನೆನಪು, ಕೊನೆಗೆ ತಾನೂ ನಶಿಸಿಹೋಗುವುದೇ ಅಲ್ಲವೇ? ಆಗ ಮತ್ತೊಬ್ಬ ಯಶೋವರ್ಧನನ ಉದಯವಾಗುತ್ತದೆ. ಮತ್ತೆ ಚಕ್ರ ಚಲಿಸುತ್ತದೆ. ಹೀಗೆಲ್ಲವೂ ನಶ್ವರವಾದರೆ,ಶಾಶ್ವತ ಯಾವುದು?
ಅರೆ! ಆ ಮನುಷ್ಯ ಹೊರಟುಹೋದನೇ? ಎಂದು ತಮ್ಮ ಯೋಚನಾ ಲಹರಿಯಿಂದ ಹೊರಬಂದು ಸುತ್ತಲೂ ನೋಡುತ್ತಾರೆ . ಆದರಾತ ಅವರ ಮುಂದೆಯೇ ನಿಂತು ಅವರನ್ನೇ ತದೇಕಚಿತ್ತವಾಗಿ ನೋಡುತ್ತಲಿದ್ದನು-ಗುರುವು ಶಿಷ್ಯನ ಉತ್ತರಕ್ಕೆ ಕಾಯುತ್ತಿರುವಂತೆ! ಈಗವನ ನೆತ್ತಿಯ ಸುತ್ತಲೂ ಇದ್ದ ಬೆಳಕಿನ ಪ್ರಭಾವಳಿ ಸ್ಪಷ್ಟವಾಗಿ ಕಾಣುತ್ತಲಿತ್ತು. ಕತ್ತಲಿನ ಸುರಂಗದಲ್ಲಿ ಮೆಲ್ಲನೆ ಬೆಳಕು ಪಸರಿಸುತ್ತಿತ್ತು.
ವಿಶೇಷ ವಾರ್ತೆಗಳು
(-ನಮ್ಮ ವರದಿಗಾರರಿಂದ)
ಪದ್ಮಭೂಷಣ ಸ್ವೀಕರಿಸುವ ಎರಡು ದಿವಸಗಳ ಮುಂಚೆ ತಮ್ಮ ನಿವಾಸದಿಂದ ನಿಘೂಡವಾಗಿ ಕಾಣೆಯಾದ ಡಾ||ಯಶೋವರ್ಧನ್ ಅವರನ್ನು ಸತತವಾಗಿ ಹುಡುಕುತ್ತಲಿದ್ದರೂ ಇದುವರೆವಿಗೂ ಯಾವ ಸುಳಿವೂ ಸಿಕ್ಕಿಲ್ಲ. ಆತ ಮಧ್ಯರಾತ್ರಿಯ ಸಮಯದಲ್ಲಿ, ತಮ್ಮ ನಿವಾಸದಿಂದ ಹೊರಬಂದರು ಎಂದು ಅವರನ್ನು ಕೊನೆಯದಾಗಿ ನೋಡಿದ ವಾಚ್ಮನ್ ಹೇಳಿದ್ದಾನೆ. ಸಿ. ಸಿ. ಟೀವಿಗಳಿಂದಲೂ ಏನೂ ತಿಳಿಯಲಿಲ್ಲ. ಸ್ವಯಂ ಪ್ರೇರಿತರಾಗಿ ಆತನೇ ಎಲ್ಲಿಯೋ ಹೊರಟು ಹೋಗಿರಬಹುದು ಎಂಬ ಗುಮಾನಿಗಳು ದಟ್ಟವಾಗಿ ಇವೆ. ಆದರೆ ಅದಕ್ಕೆ ಕಾರಣ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಆತನನ್ನು ಅಪಹರಿಸಿರಬಹುದು ಅಥವ ಆತ ಮರಣಹೊಂದಿರಬಹುದು ಎಂಬುದಕ್ಕೂ ಯಾವ ಸುಳಿವು-ಪುರಾವೆಗಳೂ ಇಲ್ಲ. ಅವರು ಕಣ್ಮರೆಯಾದದ್ದು ಅವರ ಅಭಿಮಾನಿ ಮತ್ತು ರೋಗಿ-ವೃಂದಕ್ಕೆ ಬಹಳ ಬೇಸರ ತರಿಸಿದೆ....
ಐಹಿಕದ ಪರಿವೆಯೇ ಇಲ್ಲದೆ ಹಿಮಾಲಯದ ತೊಪ್ಪಲೆಲ್ಲೋ ನಿರ್ಮಲ ಚಿತ್ತರಾಗಿ ಧ್ಯಾನಮಜ್ಞರಾಗಿರುವ ವ್ಯಕ್ತಿಯೇ ಹಿಂದೊಮ್ಮೆ ವಿಶ್ವ ವಿಖ್ಯಾತರಾದ ಡಾ||ಯಶೋವರ್ಧನ್ ಎಂದು ಯಾರಿಗೂ ತಿಳಿದಿಲ್ಲ. ಅದೀಗ ಅವರಿಗೆ ಬೇಕಾಗಿಯೇ ಇಲ್ಲ!!