ತಾತ-ಮೊಮ್ಮಗನ ಸಂಬಂಧ : ರಾಜೇಂದ್ರ ಕುಮಾರ್ ಗುಬ್ಬಿ | ಕೌಟುಂಬಿಕ ಕತೆ | ಕತೆಯ ಒಳ ನುಡಿಶೈಲಿ - ಶಿಷ್ಟ ಸ್ವರೂಪದ ಕನ್ನಡ |
(ಒಂದು ಮನಮಿಡಿಯುವ ಕಥೆ) ಬಗ್ಗೆ
ಭಾಗ-1
ಮಾವಾ.......ಮಾವಾ.......ಎಂದು ಕೂಗಿದಳು ಸೊಸೆ ವೇದಾಂತಿ, ಇದೇನು.......ಇಂದು ಸೊಸೆ, ಅಪರೂಪಕ್ಕೆ ಮಾವಾ......ಅಂತ ಕೂಗ್ತಿದ್ದಾಳಲ್ಲಾ......ಇದುವರೆಗೂ ನನ್ನನ್ನು ಕಂಡರೆ ಮುಖ ಸಿಂಡರಿಸಿಕೊಂಡು ಹೋಗ್ತಿದ್ದವಳು........ ಇಂದು ಮಾವಾ......... ಅಂತ ಕೂಗ್ತಿದ್ದಾಳಲ್ಲಾ......
ಎಂದು ಹಿಂತಿರುಗಿ ನೋಡಿದ ಮಾವ ಬುಜಂಗಯ್ಯನವರಿಗೆ, ಸ್ವಲ್ಪ ಜೋರಾಗಿಯೇ ಹೇಳಿದಳು ಸೊಸೆ ವೇದಾಂತಿ, ನೀವಿನ್ನು ನಾಳೆಯಿಂದ ನನ್ನ ಮಗ ತ್ರಿಶೂಲ್ ನನ್ನು ನೋಡಿಕೊಳ್ಳೋದು ಏನೂ ಬೇಡಾ....... ಇಂದು ರಾತ್ರಿಯಿಂದಲೇ, ಅದಕ್ಕಾಗಿಯೇ ನನಗೆ ತಿಳಿದ ಒಬ್ಬಾಕೆ........ ಕಮಲೀ....... ಅಂತಾ....... ಮನೆಗೆ ಬರ್ತಿದ್ದಾಳೆ.......ಅವಳೇ ಇನ್ನು ಮುಂದೆ ತ್ರಿಶೂಲ್ ನನ್ನು ನೋಡಿಕೊಳ್ತಾಳೆ, ಎಂದು
ಸೊಸೆ ವೇದಾಂತಿ ಹೇಳಿದಾಗ, ಎಪ್ಪತ್ತೈದರ ಹರೆಯದ ಬುಜಂಗಯ್ಯನವರು, ತನ್ನ ಕಣ್ಣುಗಳಿಗೆ ಹಾಕಿಕೊಂಡಿದ್ದ ಹಳೆಯ ಕನ್ನಡಕ ಒಮ್ಮೆ ತೆಗೆದು ಅದನ್ನು ತಮ್ಮ ಹೆಗಲ ಮೇಲಿನ ಟವೆಲ್ ನಿಂದಾ ಒರೆಸಿಕೊಳ್ಳುತ್ತಾ.......ಹಾಗೇ ಕಣ್ಣುಗಳಿಂದ ಹೊರಗೆ ಬರಲು ಇಣುಕಿದ ಎರಡು ಹನಿ ನೀರನ್ನೂ ಹೊರಗೆ ಹೋಗದಂತೆ ಅಲ್ಲೇ ಅದುಮಿಕೊಳ್ಳುತ್ತಾ........ಸರಿ ಅಮ್ಮಾ.......ಎಂದು ಮರು ಮಾತನಾಡದೆ, ಬಾಗಿಲು ದಾಟಿ, ತಮ್ಮ ಮನೆಯಿಂದ ಅನತಿ ದೂರದಲ್ಲಿದ್ದ ಉದ್ಯಾನವನಕ್ಕೆ ತಿರುಗಾಡಲು ಹೊರಟರು,ಆಗ ಸಂಜೆ ಐದರ ಸಮಯ.
ಅವರಿಗೆ ಮೂವರು ಮಕ್ಕಳು, ಮೊದಲನೆಯವಳು
ಕಲ್ಪನಾ......ಅವಳು ಬೆಂಗಳೂರಿನಲ್ಲಿ ಇದ್ದಾಳೆ, ಅವಳ ಗಂಡ, ಅತ್ತೆ, ಮಾವ ತುಂಬಾ ಒಳ್ಳೆವರು, ತಮ್ಮ ಸೊಸೆ.....ಕಲ್ಪನಾ ಹಾಗೂ ಬುಜಂಗಯ್ಯನವರನ್ನು ಕಂಡರೆ ಅಪಾರ ಪ್ರೀತಿ ಅವರೆಲ್ಲರಿಗೆ.
ಎರಡನೆಯವನು...... ವಿರೂಪಾಕ್ಷ......ಈಗ್ಗೆ ಹತ್ತು ವರ್ಷಗಳ ಹಿಂದೆ ಯಾವುದೋ ಬೇರೆ ಜಾತಿಯ ಹುಡುಗಿಯನ್ನು, ಇವರುಗಳ ವಿರೋಧದ ನಡುವೆಯೂ ಮದುವೆಯಾಗಿ, ಯಾರಿಗೂ ಹೇಳದೇ ಕೇಳದೇ ಹೈದರಾಬಾದಿಗೆ ಹೋದವನು ಇಂದಿಗೂ ಪತ್ತೆಯಿಲ್ಲ.
ಇನ್ನು ಈ ಮೂರನೆಯವನು ಕರುಣಾಕರ...... ಬುಜಂಗಯ್ಯನವರ ಹಾಗೂ ಕಾವೇರಮ್ಮ ನವರ ಅತ್ಯಂತ ಪ್ರೀತಿ ಮಗ ಇವನು......ಕೊನೆಯ ಮಗನಲ್ವೇ ಅದಕ್ಕೇ......ಅವನೇನೋ ಚೆನ್ನಾಗಿ ಓದಿ ಸರ್ಕಾರೀ ಸೇವೆಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾನೆ, ಮದುವೆಯಾದೊಡನೆ ಬೆಂಗಳೂರಿನಲ್ಲಿ ಬಂದು, ಪ್ರತಿಷ್ಠಿತ ಬಡಾವಣೆಯಲ್ಲಿ ದೊಡ್ಡದೊಂದು ಮನೆ ಕಟ್ಟಿಸಿ ಅಲ್ಲೇ ವಾಸವಾಗಿದ್ದನು.
ಅವನ ಹೆಂಡತಿ......ವೇದಾಂತಿಯೂ ಸರ್ಕಾರೀ ಅಧಿಕಾರಿ, ಆದರೆ ಇವರಿಬ್ಬರಿಗೂ ಇರುವ ದೌಲತ್ತು ಇಡೀ ಊರಿಗೇ ಹಂಚಬಹುದು ಅಷ್ಟಿದೆ, ಅದೆಲ್ಲಾ ಅವರ ಅಧಿಕಾರದ ದರ್ಪದಿಂದ, ಅವರ ಈ ದುರ್ಬುದ್ಧಿ ಇಡೀ ಅವರ ಕುಟುಂಬದಲ್ಲಿ ಮಾತ್ರವಲ್ಲದೆ ಏಲ್ಲಾ ಸಂಬಂಧಿಕರಿಗೂ ತಿಳಿದು, ಯಾರೂ ಇವರ ಮನೆ ಹೊಸ್ತಿಲಿಗೂ ಬರುತ್ತಿರಲಿಲ್ಲ, ಇನ್ನು ಕರುಣಾಕರನ ಅಕ್ಕ, ಕಲ್ಪನಾ ಹಾಗೂ ಅವಳ ಗಂಡನ ಮನೆಯವರೂ ಬರುತ್ತಿರಲಿಲ್ಲ, ಅಷ್ಟೊಂದು ಅಹಂಕಾರದ ದಂಪತಿಗಳು ಈ ಕರುಣಾಕರ-ವೇದಾಂತಿ.
ಎಪ್ಪತ್ತೈದರ ಹರೆಯದ ಬುಜಂಗಯ್ಯನವರು
ಸೋಮಾಪುರದ ಹಿರಿಯ ವ್ಯವಸಾಯಗಾರರು, ಸುಮಾರು ತೋಟ ತುಡಿಕೆ ಹೊಂದಿ ಚೆನ್ನಾಗಿ ಬಾಳಿ, ಬದುಕಿದವರು. ಅವರ ಹೆಂಡತಿ ಕಾವೇರಮ್ಮ ಸಹ ಬುಜಂಗಯ್ಯನವರ ಭುಜಕ್ಕೆ ಭುಜ ಕೊಟ್ಟು ಐವತ್ತು ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಿದ ಜೀವ.
ಆದರೂ ಒಂದು ದಿನವೂ ಹಳ್ಳಿಗೆ, ತಾನು ಹುಟ್ಟಿದ ಊರಿಗೆ, ಮನೆಗೆ ಹೋಗಲು ಏನೋ ಒಂಥರಾ ಅಸಡ್ಡೆ....ಇನ್ನು ಅವನ ಹೆಂಡತಿ.....ವೇದಾಂತಿ...... ಅವಳೂ ಹೋಗುತ್ತಿರಲಿಲ್ಲ, ಎಷ್ಟು ಬಾರಿ ಕರೆದರೂ ಹೋಗಲೇ ಇಲ್ಲ ಹಳ್ಳಿಗೆ, ಮಗ ಹಾಗೂ ಸೊಸೆಯ ಈ ದುರ್ಬುದ್ಧಿ ಅವನ ತಾಯಿ ಕಾವೇರಮ್ಮನವರಿಗೆ ತುಂಬಾ ಬೇಸರ ಉಂಟು ಮಾಡಿತ್ತು, ಹೋಗಲಿ.......ಹೆತ್ತ ತಂದೆ, ತಾಯಿಯನ್ನಾದರೂ ತಮ್ಮ ಮನೆಗೆ ಕರೆಯುವರೇ.....ಅದೂ ಇಲ್ಲ, ಸರಿ...... ಏನು ಮಾಡುವುದು, ನಮ್ಮ ಕರ್ಮ ಎಂದು ಮನದಲ್ಲೇ ನೊಂದು ನೊಂದೂ ಬೇಸರವಾಗಿ, ಬದುಕಲೇಬೇಕಲ್ವಾ
ಎಂದು ಇರಬೇಕಾದರೆ ಇದೇ ನೋವಿನಿಂದ ಚಿಂತಿಸಿ, ಹೃದಯಾಘಾತವಾಗಿ ಮೃತರಾದರು, ಅವರೇನೋ ಬಾರದ ಲೋಕಕ್ಕೆ ಹೊರಟುಹೋದರು, ಅವರ ಸಾವಿನ ಸುದ್ದಿ ತಿಳಿದ ಎಲ್ಲರೂ ಸಾವಿನ ಮನೆಗೆ ಬೇಗನೇ ಬಂದರೂ.....ಎಷ್ಟು ಫೋನು ಕರೆಗಳನ್ನು
ಮಾಡಿದರೂ ಕರುಣಾಕರ-ವೇದಾಂತಿ ದಂಪತಿಗಳು, ಅವಳ ಹೆತ್ತವರ ಕುಟುಂಬದವರು ಮಾತ್ರ ಬೇಗನೆ ಬರಲೇ ಇಲ್ಲ.
ಇನ್ನು ಬುಜಂಗಯ್ಯನವರ ದುಃಖ ಹೇಳತೀರದು, ಹಿರಿಯ ಮಗನಿಗೆ ಹೇಳೋಣವೆಂದರೆ ಅವನ ವಿಳಾಸ ಹೇಳುವವರಾರೂ ಇಲ್ಲ, ಇನ್ನು ಕಿರಿಯ ಮಗ...... ಅವನೋ ಅವನ ಅಹಂಕಾರವೋ......ಹೇಳತೀರದು,
ಮಗಳು ಕಲ್ಪನಾ ಅವಳ ಕುಟುಂಬದವರು ಹಾಗೂ ಸಂಬಂಧಿಕರುಗಳು ಮಾತ್ರ ಈ ಸಮಯದಲ್ಲಿ ಭಾಗಿಯಾದರು.
ಎಷ್ಟು ಸಮಯ ಅಂತ ಈ ಶವವನ್ನು ಇಟ್ಟುಕೊಳ್ಳುವುದು, ಹಳ್ಳಿಗಳಲ್ಲಿ ಅವರದೇ ಆದ ಕಟ್ಟುಪಾಡುಗಳಿರ್ತಾವೆ, ಅದರಂತೆ ಸರಿಯಾದ ಸಮಯಕ್ಕೆ ಶವಸಂಸ್ಕಾರ ಮಾಡಿ ಮುಗಿಸಬೇಕು, ನಗರ, ಪಟ್ಟಣಗಳಲ್ಲಿ ಆದರೆ ಶವದ ವಿದ್ಯುತ್ ಶೀತಲೀಕರಣ ಬಾಕ್ಸ್ ತಂದು ಎಷ್ಟು ದಿನವಾದರೂ ಶವವನ್ನು ಇಡಬಹುದು, ಇಲ್ಲಿ ಹಾಗಲ್ಲ, ಆದರೆ ಮಧ್ಯಾಹ್ನ ಮುಗಿಯುತ್ತಾ ಬಂದರೂ, ಅವರ ಸುಳಿವಿಲ್ಲ, ಸರಿ ಊರಿನ ಮುಖಂಡರು, ಸಂಬಂಧಿಕರುಗಳು, ಹಿರಿಯರ ಒತ್ತಾಯದ ಮೇರೆಗೆ
ಶವವನ್ನು ಸಾಗಿಸಿ, ಸಮಾಧಿ ಮಾಡಲು ಅವರ ತೋಟದ ಜಮೀನಿನವರೆಗೂ ಶವಯಾತ್ರೆ ಹೊರಟಿತು, ಅವರುಗಳು ಬಂದರೆ ಅಲ್ಲೇ ನೋಡಲಿ, ಅಥವಾ ಅವರು ಬರುವವರೆಗೂ ಅಲ್ಲೇ ಕಾಯಬಹುದು ಎಂದು, ಎಲ್ಲರ ತೀರ್ಮಾನದಂತೆ ಶವಯಾತ್ರೆ ಹೊರಟಿತು, ಆಗ ಸಮಯ ಸಂಜೆಯ ಐದು ಗಂಟೆ, ಇನ್ನು ಸೂರ್ಯ ಮುಳುಗುವ ಮೊದಲು ಶವ ಸಂಸ್ಕಾರ ಮಾಡಿ ಮುಗಿಸಬೇಕು, ಅದಕ್ಕಿಂತ ಹೆಚ್ಚು ಸಮಯ ಕಾಯುವಂತೆ ಇಲ್ಲ, ಆದರೂ ಕರುಣಾಕರ ಅವನ ಕುಟುಂಬ ಮಾತ್ರ ಪತ್ತೆಯಿಲ್ಲ, ಎಲ್ಲರ ಫೋನುಗಳೂ ಸ್ವಿಚ್ಆಫ್. ಬುಜಂಗಯ್ಯನವರು ಹಾಗೂ ಕಲ್ಪನಾ ರ ದುಃಖ ಮುಗಿಲುಮುಟ್ಟಿದೆ, ಹಿರಿಯ ಮಗನಂತೂ ದೇಶಾಂತರ ಹೋದ, ಇನ್ನು ಇರುವ ಒಬ್ಬ ಮಗ, ಕೊನೆಯ ಸಲವಾದರೂ ತಾಯಿಯ ಶವವನ್ನು ನೋಡಲಿ ಎಂದು ಎಲ್ಲರ ಆಸೆ, ಆಗ......ಇನ್ನು ಕೆಲವೇ ನಿಮಿಷಗಳಲ್ಲಿ ಕಾವೇರಮ್ಮನವರ ಶರೀರ ಮಣ್ಣಲ್ಲಿ ಮಣ್ಣಾಗುವ ಸಮಯ...... ಅಷ್ಟರಲ್ಲಿ ನಾಲ್ಕೈದು ಕಾರುಗಳು ಧೂಳೆಬ್ಬಿಸುತ್ತಾ ಹಳ್ಳಿಯ ಕಚ್ಛಾ ರಸ್ತೆಯನ್ನು ಸೀಳಿಕೊಂಡು ಬುರ್ರೆಂದು ಬಂದವು.
ಕರುಣಾಕರನ ಸಂಬಂಧಿಕರ ಕಾರುಗಳು ಸೋಮಾಪುರದ ಬುಜಂಗಯ್ಯನವರ ಮನೆಗೆ ಬಂದು
ಅಲ್ಲಿ ಕಾವೇರಮ್ಮನ ಶವ ಆಗಲೇ ಸ್ಮಶಾನಕ್ಕೆ ಕೊಂಡೊಯ್ದರು ಎಂದು ಹೇಳಿದ್ದನ್ನು ಕೇಳಿ ಕೋಪದಿಂದಲೇ ಸ್ಮಶಾನಕ್ಕೆ ಬಂದಿಳಿದ ಕರುಣಾಕರ, ವೇದಾಂತಿ ಹಾಗೂ ಅವನ ಕಡೆಯವರು, ಅದೂ ಅವರುಗಳ ಧಿರಿಸು....... ಅಬ್ಬಬ್ಬಾ.......ಯಾವುದೋ ಮದುವೆಗೋ, ಮುಂಜಿಗೋ ಹೋಗುವಹಾಗಿದೆ, ಅವನ ಹಾಗೂ ವೇದಾಂತಿಯ ಸ್ಟೈಲ್, ಕಣ್ಣುಗಳಿಗೆ ಕಪ್ಪು ಕನ್ನಡಕ, ಗರಿಗರಿಯಾಗಿ ಇಸ್ತ್ರಿ ಮಾಡಿದ ಬಟ್ಟೆಗಳು, ಕಾಲಿಗೆ ಹೊಳೆಯುವ ಶೂ ಗಳು. ಅದು ತಾಯಿಯ ಶವವನ್ನು ನೋಡಲು ಬರುವ ರೀತಿಯಾ..... ಎಂದು ಕೊಂಡರು ಎಲ್ಲರೂ....... ಹೋಗಲಿ ಬಿಡಿ, ಅವರು ಸರ್ಕಾರೀ ಅಧಿಕಾರಿಗಳಲ್ವೇ...... ಅಂದುಕೊಂಡರು ಮತ್ತಷ್ಟು ಜನರು. ಹೋಗಲಿ ಬಂದವರು
ಸುಮ್ಮನಿದ್ದಾರಾ.......ಅದೂ ಇಲ್ಲ, ಅಲ್ಲಿದ್ದ ಎಲ್ಲರೊಡನೆ ಕೂಗಾಡಿ ರಂಪಾಟ ಮಾಡಿದರು. ತಾವುಗಳು ಬರುವುದಕ್ಕೆ ಮುಂಚೆಯೇ ಶವಯಾತ್ರೆ ಮಾಡಲು ಯಾರು ಅನುಮತಿ ಕೊಟ್ಟರು ಎಂದು.
ಆದರೆ ಕೆಲವು ಹಿರಿಯರ ಮಧ್ಯಸ್ಥಿಕೆಯಿಂದ ಕೋಪ ತಣ್ಣಗಾಗಿ, ಕರುಣಾಕರ ಹಾಗೂ ಅವನ ಕಡೆಯವರೆಲ್ಲಾ ಶವವನ್ನು ಅಂತಿಮ ದರ್ಶನ
ಪಡೆದರು, ಆದರೆ ಇನ್ನೂ ಶವ ಸಂಸ್ಕಾರ ಸಂಪೂರ್ಣ ಆಗುವ ಮೊದಲೇ ಎಲ್ಲರನ್ನೂ ಹೊರಡಿಸಿಕೊಂಡು ಹೊರಟನು ಕರುಣಾಕರ, ಅದಕ್ಕೊಂದು ಕಾರಣ ಹೇಳಿದನು, ಈಗ ನಮ್ಮಿಬ್ಬರಿಗೂ ಕಛೇರಿಗಳಲ್ಲಿ ಹಗಲು ರಾತ್ರಿ ಚುನಾವಣಾ ಕೆಲಸ ಕಾರ್ಯಗಳಿರುವುದರಿಂದ ನಾವು ಈ ಕೂಡಲೇ ಹೊರಡಬೇಕು, ನಾನು ನೋಡಿದ್ದು ಆಯ್ತಲ್ಲಾ....... ಇನ್ನು ಮುಂದಿನದನ್ನು ನೋಡೋಣ.......ತುಂಬಾ ಕೆಲಸಗಳ ಒತ್ತಡವಿದೆ, ನೀವುಗಳು ಶವ ಸಂಸ್ಕಾರ ಮಾಡಿ ಮುಗಿಸಿ, ಹಾಗೇ......ಮೂರು ದಿನದ ಹಾಗೂ ಹದಿನೈದನೇ ದಿನದ ತಿಥಿ ಕಾರ್ಯಗಳನ್ನು ಸಹ ನೀವುಗಳೇ ಎಲ್ಲಾ ಮಾಡಿ ಮುಗಿಸಿಬಿಡಿ, ನಾವುಗಳು ಕೆಲಸ ಕಾರ್ಯಗಳನ್ನು ಬಿಟ್ಟು ಪದೇ ಪದೇ ಬರಲಾಗದು ಈ ಹಳ್ಳಿಗೆ.......ಆಯ್ತಾ.......ಎಂದು ಕಡ್ಡಿ ತುಂಡಾಗುವಂತೆ ಹೇಳಿ, ತಂದೆ ಬುಜಂಗಯ್ಯನವರು ಹಾಗೂ ಅಕ್ಕ ಕಲ್ಪನಾ, ಅಲ್ಲಿದ್ದ ಹಿರಿಯರೆಲ್ಲರೂ ಎಷ್ಟು ಹೇಳಿದರೂ ಯಾರ ಮಾತಿಗೂ ಮನ್ನಣೆ ಕೊಡದೆ, ಸತ್ತವರು ಮತ್ತೆ ಎದ್ದು ಬರ್ತಾರೇನೂ...... ಎಲ್ಲಾ ಕೆಲಸ ಬಿಟ್ಟು ಹೀಗೆ ಕುಳಿತರೆ ಬದುಕಿರುವವರನ್ನು ಯಾರು ಕೇಳ್ತಾರೆ......ಎಂದು ಹೇಳಿ ಕಾರು ಹತ್ತಿ ಹೊರಟೇಬಿಟ್ಟನು. ಅವನ ಹಿಂದೆ ಆ ಕಾರುಗಳೂ ಹೊರಟವು,
ಅಂದಿನ ಶವಸಂಸ್ಕಾರ, ಮೂರುದಿನದ ಹಾಗೂ ತಿಥಿ ಕಾರ್ಯಗಳೆಲ್ಲದಕ್ಕೂ ಎಷ್ಟು ಕರೆದರೂ, ಯಾರು ಕರೆದರೂ ಕರುಣಾಕರ ಅವನ ಹೆಂಡತಿ ವೇದಾಂತಿ ಅವರ ಸಂಬಂಧಿಗಳು ಮಾತ್ರ ಯಾರೂ ಇತ್ತಕಡೆ ತಲೆಹಾಕಿಯೂ ಮಲಗಲಿಲ್ಲ. ಇವನ ಈ ದುರ್ನಡೆಯಿಂದ ಬುಜಂಗಯ್ಯನವರು ತುಂಬಾ ನೊಂದು ಅದೇ ಯೋಚನೆಯಲ್ಲಿಯೇ ಹಾಸಿಗೆ ಹಿಡಿದರು, ಬುಜಂಗಯ್ಯನವರು ತಮ್ಮ ಹಳ್ಳಿ...... ಸೋಮಾಪುರದಲ್ಲಿಯೇ ಒಬ್ಬರೇ ಇದ್ದರು, ಮಗಳು ಕಲ್ಪನಾ ಎಷ್ಟು ದಿನ ಅಂತ ಗಂಡನ ಮನೆ ಬಿಟ್ಟು ಹಳ್ಳಿಯಲ್ಲಿ ತಂದೆಯನ್ನು ನೋಡಿಕೊಳ್ತಾಳೆ, ಅವಳಿಗೂ ಗಂಡ, ಅತ್ತೆ, ಮಾವ, ಮಕ್ಕಳು ಅಂತ ಸಂಸಾರ ಇದ್ದಿದ್ದರಿಂದ, ಬುಜಂಗಯ್ಯನವರು ಸ್ವಲ್ಪ ಸುಧಾರಿಸಿಕೊಂಡ ನಂತರ ಬೆಂಗಳೂರಿಗೆ ಬಂದಳು.
ತಂದೆ ಬುಜಂಗಯ್ಯನವರ ಆರೋಗ್ಯ ಸುಧಾರಿಸಿದ್ದರೂ ಸಹ ತುಂಬಾ ಬಳಲಿದ್ದರು, ಒಬ್ಬರೇ ಸ್ವತಂತ್ರವಾಗಿ ಇರಲು ಆಗುತ್ತಿರಲಿಲ್ಲ, ಅವರ ಬಗ್ಗೆ ಕರುಣಾಕರನ ಅತ್ತೆ, ಮಾವ ಹೇಳಿದ್ದರಿಂದ ಸ್ವಲ್ಪ ತಗ್ಗಿದ ಕರುಣಾಕರ ಹಾಗೂ ವೇದಾಂತಿ, ಅವರ ಒತ್ತಾಯಕ್ಕೆ ಮಣಿದು ತನ್ನ ತಂದೆಯನ್ನು ಬೆಂಗಳೂರಿನ ತಮ್ಮ ಮನೆಗೆ ತಂದು ಇಟ್ಟುಕೊಳ್ಳಲು ತೀರ್ಮಾನಿಸಿದರು,
ಊರಿನ ಜಮೀನು , ಮನೆ ಎಲ್ಲವನ್ನೂ ಮಾರಾಟ ಮಾಡಿದ ಕರುಣಾಕರ ಅಕ್ಕ ಕಲ್ಪನಾಗೆ ಸೇರಬೇಕಿದ್ದ ಹಣವನ್ನು ಅವಳಿಗೆ ಕೊಟ್ಟನು. ಆದರೆ ಬುಜಂಗಯ್ಯನವರನ್ನು ನೋಡುವ ನೆಪದಲ್ಲಿ ಅಕ್ಕ ಕಲ್ಪನಾ ಆಗಲೀ ಭಾವ ಹಾಗೂ ಯಾವುದೇ ಸಂಬಂಧಿಕರು ತಮ್ಮ ಮನೆಗೆ ಆಗಾಗ ಭೇಟಿ ಕೊಡುವುದು ಆಗಲೀ ಮಾಡಬಾರದೆಂದು ಈ ಮೊದಲೇ ತಿಳಿಸಿಬಿಟ್ಟಿದ್ದ, ಅದರಿಂದ ಕಲ್ಪನಾ ಹಾಗೂ ಇತರರು ಯಾರೂ ಬುಜಂಗಯ್ಯನವರನ್ನು ನೋಡುವುದಕ್ಕೆ ಆಗುತ್ತಿರಲಿಲ್ಲ, ಬರುತ್ತಿರಲಿಲ್ಲ.
ಬುಜಂಗಯ್ಯನವರಿಗೆ, ಮಗ ಕರುಣಾಕರನ ಮನೆ ಒಂದು ರೀತಿಯ ಚಿನ್ನದ ಪಂಜರದಂತೆ ಭಾಸವಾಯಿತು, ಆಳುಗಳೇನೋ, ಇವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು, ಅವರು ಕುಳಿತುಕೋ ಎಂದರೆ ಕುಳಿತುಕೊಳ್ಳೋದು, ನಿಲ್ಲು ಎಂದರೆ ನಿಲ್ಲೋದು, ತಿನ್ನು ಎಂದರೆ ತಿನ್ನೋದು ಇದೇ ಅವರ ದಿನಚರಿ ಆಯಿತು. ಅವರ ಕಡೆಯವರಾರೂ ಇರಲಿಲ್ಲವಾದ್ದರಿಂದ ಕೇವಲ ಅವರ ಧರ್ಮಪತ್ನಿ ಕಾವೇರಮ್ಮ ನ ನೆನಪಿನಲ್ಲಿಯೇ ಬದುಕಲಾರಂಭಿಸಿದರು. ಇಂತಹ ಸಮಯದಲ್ಲಿ ಅವನ ಮನೆಯಲ್ಲಿ ಒಂದು ಜಾದೂ ನಡೆಯಲಾರಂಭಿಸಿತು, ಬುಜಂಗಯ್ಯನವರನ್ನು ಅವರ
ಮೊಮ್ಮಗ ತ್ರಿಶೂಲ್, ತುಂಬಾ ನೆಚ್ಚಿಕೊಂಡುಬಿಟ್ಟನು,
ಅವನಿಗೆ ಬುಜಂಗಯ್ಯನವರು ತನ್ನ ತಾತನೆಂದು ತಿಳಿದೋ ತಿಳಿಯದೆಯೋ ಅವರ ಪ್ರೀತಿಯಲ್ಲಿ ಬಿದ್ದು ಬಿಟ್ಟಿದ್ದನು. ಬೆಳಿಗ್ಗೆ ಬುಜಂಗಯನವರು ನಿದ್ರೆಯಿಂದ ಏಳುವ ಮುನ್ನವೇ ತ್ರಿಶೂಲ್ ಶಾಲೆಗೆ ಹೋಗುತ್ತಿದ್ದ, ಆದರೆ ಅವನು ಮಧ್ಯಾಹ್ನ ಶಾಲೆಯಿಂದ ಹಿಂತಿರುಗಿ ಬರುವಷ್ಟರಲ್ಲಿ ಅವರು ಎದ್ದು ಮನೆಯ ವರಾಂಡದಲ್ಲಿ ಕುಳಿತು ದಿನಪತ್ರಿಕೆ ಓದುತ್ತಿದ್ದರೆ, ಅವರನ್ನು ನೋಡಿದೊಡನೆ ತಾತಾ...... ತಾತಾ.......ಎಂದು ಕೂಗಿ
ಕೊಂಡು ಓಡಿಬಂದು ಅವರ ತೊಡೆಯಮೇಲೆ ಕುಳಿತು, ಊಟ, ಪಾಠ, ತಿಂಡಿ, ನಿದ್ರೆ ಎಲ್ಲವೂ ಮಾಡುತ್ತಿದ್ದನು, ಇದನ್ನು ಗಮನಿಸಿದ ಮನೆಯ ಆಳುಗಳು, ಅಯ್ಯೋ.....ಹೋಗಲಿ ಬಿಡಿ , ಪಾಪ ಅವರು ಅವನ ತಾತ ತಾನೆ ಅಂದುಕೊಂಡು ಅವರಿಬ್ಬರ ಸಲುಗೆಗೆ ಹಸಿರು ನಿಶಾನೆ ಕೊಟ್ಟಿದ್ದರು, ಇದೆಲ್ಲದರ ಪ್ರಭಾವದಿಂದ ಬುಜಂಗಯ್ಯನವರಿಗೆ, ಸಧ್ಯ.......ಮಗ, ಸೊಸೆ..... ತನ್ನನ್ನು ಪ್ರೀತಿಸುತ್ತಿಲ್ಲ,
ನನ್ನ ಕಡೆಯವರನ್ನೂ ಬರದಂತೆ ನಿರ್ಭಂದಿಸಿದ್ದಾರೆ ನನ್ನ ಮಗ ಸೊಸೆ........ಆದರೆ ದೇವರ ದಯೆ ನನಗೆ ಮೊಮ್ಮಗನ ಪ್ರೀತಿಯನ್ನಾದರೂ ಕರುಣಿಸಿರುವನಲ್ಲಾ,
ಎಂದು ಕೊಂಚ ಸಮಾಧಾನದಿಂದ ಇದ್ದರು. ಹೀಗೆ ಅವರ ಆರೋಗ್ಯ ಬರುಬರುತ್ತಾ ಸುಧಾರಿಸಿ ಈ
ಮೊದಲಿನ ಬುಜಂಗಯ್ಯನವರೇ ಆದರು, ಆದರೆ ಇಷ್ಟೆಲ್ಲಾ ಬೆಳವಣಿಗೆಗಳಾಗುತ್ತಿದ್ದರೂ ತ್ರಿಶೂಲ್ ನ ಹೆತ್ತವರಾದ ಕರುಣಾಕರ ಹಾಗೂ ವೇದಾಂತಿಗಳಿಗೆ ಇದಾವುದೂ ಮಾತ್ರ ತಿಳಿದಿರಲಿಲ್ಲ, ಕಾರಣ ಅವರುಗಳು ಸರ್ಕಾರೀ ಅಧಿಕಾರಿಗಳಾಗಿದ್ದರಿಂದ ಅವರುಗಳಿಗೆ ಕಛೇರಿ ಕೆಲಸಗಳಲ್ಲಿ ಇಂತಿಷ್ಟು ಅಂತ ಸಮಯವಿರಲಿಲ್ಲ, ಯಾವಾಗಲೋ ಮನೆಗೆ ಬರುತ್ತಿದ್ದರು,ಯಾವಾಗಲೋ ಮನೆಯಿಂದ ಹೊರಗೆ ಹೋಗುತ್ತಿದ್ದರು. ಅವರುಗಳಿಗೆ ಮಗ ತ್ರಿಶೂಲ್ ಬಗ್ಗೆಯಾಗಲೀ , ಬುಜಂಗಯ್ಯನವರ ಬಗ್ಗೆಯಾಗಲೀ ಯೋಚಿಸುವಷ್ಟು ವ್ಯವಧಾನವಿರಲಿಲ್ಲ ,
ಆದರೆ ಒಮ್ಮೆ ಅವನಿಗೆ ಶೀತದಿಂದ ಆರೋಗ್ಯ ತುಂಬಾ ಹದಗೆಟ್ಟು ಆಸ್ಪತ್ರೆ ಸೇರಿಸುವಷ್ಟರವರೆಗೂ ಸಮಸ್ಯೆ ಆಯಿತು, ಕರುಣಾಕರನ ಮನೆಯ ಆಳುಗಳೇ ತ್ರಿಶೂಲ್ ನನ್ನು ಅವನ ಹೆತ್ತವರ ಅನುಮತಿ ಮೇರೆಗೆ ಆಸ್ಪತ್ರೆಗೆ ಸೇರಿಸಿ ಉತ್ತಮ ಚಿಕಿತ್ಸೆ ಕೊಡಿಸಲು ಪ್ರಾರಂಭಿಸಿದರು, ಆಗ ತ್ರಿಶೂಲ್ ಒಬ್ಬನೇ ಆಸ್ಪತ್ರೆಯಲ್ಲಿ ಇರಲು ತುಂಬಾ ಹಠ ಮಾಡಿದನು, ಯಾರು ಎಷ್ಟು ಸಮಾಧಾನಪಡಿಸಿದರೂ ತನಗೆ ತನ್ನ ತಾತನು ಬೇಕೇಬೇಕು ಎಂದು ಔಷಧಿ, ಊಟ, ತಿಂಡಿ ತೆಗೆದುಕೊಳ್ಳದೆ ಅಳತೊಡಗಿದನು, ಇಷ್ಟೆಲ್ಲಾ ಆದರೂ ಅವನ ಹೆತ್ತವರು ಗಂಭೀರವಾಗಿ ಯೋಚಿಸಲಿಲ್ಲ,
ಎಲ್ಲವನ್ನೂ ತಮ್ಮ ಮನೆಯ ಆಳುಗಳಿಗೆ ವಹಿಸಿ, ತಾವು ಯಥಾಪ್ರಕಾರ ಕೆಲಸದ ಮೇಲೆ ನಿಗಾ ವಹಿಸಿದ್ದರು, ಒಂದು ದಿನವೂ ತಮ್ಮ ಮಗನನ್ನು ನೋಡಲು ಆಸ್ಪತ್ರೆಗೆ ಭೇಟಿ ಕೊಡಲಿಲ್ಲ, ಕೇವಲ ಅವರ ಹಣದ ಮದ, ಅಧಿಕಾರದ ದಾಹ , ಅದರ ಮುಂದೆ ಮತ್ತೇನೂ ಇಲ್ಲ ಎನ್ನುವಂತೆ ಕ್ರೂರ ಮೃಗಗಳಂತೆ ವರ್ತಿಸತೊಡಗಿದರು, ಇವರ ಈ ನಡೆಯಿಂದ ಆಳುಗಳೂ ಅವರಿಷ್ಟದಂತೆ ಆ ತ್ರಿಶೂಲನಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ಈಗ ಆ ಮಗು ತನ್ನ ತಾತನನ್ನು ಕೇಳುತ್ತಿದೆ ಎಂದು ಅರಿತು ತ್ರಿಶೂಲ್ ನ ತಾತ ಬುಜಂಗಯ್ಯನವರನ್ನು ಆಸ್ಪತ್ರೆಗೆ ಕರೆತಂದು ಮೊಮ್ಮಗನ ಜೊತೆ ಇರುವಂತೆ ನೋಡಿಕೊಂಡರು, ಆಗ
ತ್ರಿಶೂಲ್ ಆರೋಗ್ಯ ಬಲುಬೇಗ ಸುಧಾರಿಸಿ, ಅವನನ್ನು ಆಸ್ಪತ್ರೆಯಿಂದ ಕರೆದುಕೊಂಡು ಮನೆಗೆ ಹೋದರು ಕರುಣಾಕರನ ಆಳುಗಳು, ಅಂದಿನಿಂದ ಮತ್ತಷ್ಟು ಹತ್ತಿರವಾದರು ತಾತ ಮೊಮ್ಮಗ.
ಈ ಎಲ್ಲಾ ಬೆಳವಣಿಗೆಗಳು ಬರುಬರುತ್ತಾ ಅವರಿವರ ಬಾಯಿಯಿಂದ ಕರುಣಾಕರ ದಂಪತಿಗಳಿಗೂ ಬಿದ್ದು ಅವರುಗಳು ತುಂಬಾ ಕೋಪಗೊಂಡರು. ಅಲ್ಲದೇ ಆ ಆಳುಗಳನ್ನು ಜೊತೆಗೆ ಬುಜಂಗಯ್ಯ ನವರನ್ನು ತರಾಟೆಗೆ ತೆಗೆದುಕೊಂಡರು.
ಇದುವರೆಗೂ ಕರುಣಾಕರ, ವೇದಾಂತಿ ದಂಪತಿಗಳು, ಬುಜಂಗಯ್ಯನವರು ತ್ರಿಶೂಲನ ತಾತ ನೆಂದು ಎಂದೂ ಹೇಳಿರಲಿಲ್ಲ, ಆದರೆ ದೈವದ ವಿಧಿಯೇ ಅವರಿಬ್ಬರನ್ನು ಒಂದುಗೂಡಿಸಿದ್ದು ಕಂಡು, ಕೇಳಿ ತುಂಬಾ ಕುಪಿತಗೊಂಡರು, ಹಾಗೂ ಇದನ್ನು ಹೀಗೇ ಬಿಟ್ಟರೆ ತಮ್ಮ ಮಗನು ಒಂದು ದಿನ ನಮ್ಮನ್ನೆಲ್ಲಾ ದೂರ ಮಾಡಿ ತಾತನನ್ನು ಪ್ರೀತಿಸುವನು, ಎಂದು ಅರಿತು , ತಾತ ಬುಜಂಗಯ್ಯನವರಿಂದ ಮೊಮ್ಮಗ ತ್ರಿಶೂಲನನ್ನು ದೂರಮಾಡಲು ಯೋಚಿಸಿದರು.
ಆಗಲೇ ಬುಜಂಗಯ್ಯನವರಿಗೆ ಅವರ ಸೊಸೆ ವೇದಾಂತಿ...... ಕಠಿಣ ಶಬ್ಧಗಳಲ್ಲಿ ಎಚ್ಚರಿಸಿದ್ದು.
ಮಾವಾ.......ಮಾವ........ ನೀವಿನ್ನು ನನ್ನ ಮಗ ತ್ರಿಶೂಲ್ ನನ್ನು ನೋಡಿಕೊಳ್ಳೋದು ಏನೂ ಬೇಡಾ.
ಎಂದು.
ಸರಿ ಅಮ್ಮಾ......ಎಂದವರೇ ಬುಜಂಗಯ್ಯನವರು
ಹಾಗೇ ಉದ್ಯಾನವನದ ಕಡೆಗೆ ಅದೇ ಯೋಚನೆಯಲ್ಲಿಯೇ ಹೋಗಿ, ಅಲ್ಲಿ ಕಲ್ಲುಬೇಂಚಿನ ಮೇಲೆ ಕುಳಿತು ತಮ್ಮ ಮಗ, ಸೊಸೆ, ಮೊಮ್ಮಗನ ಬಗ್ಗೆಯೇ ಯೋಚಿಸತೊಡಗಿದರು. ಸರಿ ಅವರಿಗೆ ಮಗನ ಮನೆಗೆ ಹೋಗಲು ಏಕೋ ಬೇಜಾರಾಯಿತು,
ತುಂಬಾ ನೊಂದು ಕೊನೆಗೊಂದು ನಿರ್ಧಾರಕ್ಕೆ ಬಂದು ಮನೆಯನ್ನು ತೊರೆದು ಎಲ್ಲಿಗಾದರೂ ಹೋಗಿ ಬಿಡೋಣವೆಂದು ಉದ್ಯಾನವನದಿಂದ ಹೊರಗೆ ಬಂದು, ಹಾಗೇ ನಡೆಯುತ್ತಾ ರಸ್ತೆಯಲ್ಲಿ ಹೋಗುತ್ತಿರಬೇಕಾದರೆ, ತುಂಬಾ ಬಳಲಿ ತಲೆ ಸುತ್ತು ಬಂದು ನೆಲಕ್ಕೆ ಬಿದ್ದು ಬಿಟ್ಟರು. ಅವರನ್ನು ನೋಡಿದ ದಾರಿಹೋಕರು ಅವರನ್ನು ಹಾರೈಕೆ ಮಾಡಿ, ನೀರು ಕುಡಿಸಿ , ರಸ್ತೆ ಪಕ್ಕದ ಒಂದು ಮರದ ಕೆಳಗೆ ಕುಳ್ಳಿರಿಸಿ, ಅವರ ಕಡೆಯವರಾರಾದರೂ ಬರುವರಾ.....ಎಂದು ಅಕ್ಕ ಪಕ್ಕ ನೋಡತೊಡಗುವಷ್ಟರಲ್ಲಿ, ಅದೇ ಮಾರ್ಗವಾಗಿ ಬಂದರು, ಬುಜಂಗಯ್ಯನವರ ಮಗಳು ಕಲ್ಪನಾ ಳ ಮಾವ, ಬುಜಂಗಯ್ಯನವರ ಬೀಗರು, ಅವರ ಮನೆಯೂ ಅಲ್ಲೇ ಹತ್ತಿರದಲ್ಲಿ ಇದ್ದಿತಂತೆ, ಅವರು ಈ ಬುಜಂಗಯ್ಯನವರನ್ನು ಗುರುತು ಹಿಡಿದು, ಮೊದಲು ಸೊಸೆ ಕಲ್ಪನಾಳಿಗೆ ಫೋನು ಕರೆ ಮಾಡಿ ಅವಳನ್ನು ಕರೆಸಿಕೊಂಡು, ಕೂಡಲೇ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು, ಆದರೆ ಈ ವಿಷಯವನ್ನು ಕರುಣಾಕರನಿಗೆ ಹೇಳದೇ ಸುಮ್ಮನಾದರು.
ಇತ್ತ ಕರುಣಾಕರ್ ಮನೆಯಲ್ಲಿ ವೇದಾಂತಿ ಹೇಳಿದಂತೆ ಅವರ ಮನೆಗೆ ತ್ರಿಶೂಲನನ್ನು
ನೋಡಿಕೊಳ್ಳಲು, ಕಮಲಿಯೇನೋ ಬಂದಳು, ಆದರೆ ಕಮಲಿಯೊಂದಿಗೆ ತ್ರಿಶೂಲ್ ನು ಹೊಂದಿಕೊಳ್ಳಲಿಲ್ಲ, ಅಂದು ಇಡೀ ದಿನ ಅವನ ತಾತ ಇಲ್ಲದಿದ್ದದ್ದು ಅವನಿಗೆ ತುಂಬಾ ದುಃಖ ತರಿಸಿತು. ಆದರೆ....... ತ್ರಿಶೂಲ್ ನಿಗೆ ಮತ್ತೆ ಆರೋಗ್ಯ ಹದಗೆಟ್ಟು ತುಂಬಾ ನಿತ್ರಾಣ ಗೊಂಡು ಆಸ್ಪತ್ರೆಗೆ ದಾಖಲಾದನು, ಈ ಮೊದಲು ಅವನ ತಾತ ಇದ್ದಿದ್ದರಿಂದ ಬಹುಬೇಗನೆ ಚೇತರಿಸಿಕೊಂಡಿದ್ದನು, ಆದರೆ ಈಗ ಅವರು ಇಲ್ಲ, ಅದರಿಂದಲೇ ಅವನಿಗೆ ಆರೋಗ್ಯ ದಲ್ಲಿ ಮತ್ತಷ್ಟು ಏರುಪೇರಾಗಿದ್ದು, ಅದೂ ಉಲ್ಬಣಗೊಂಡಿದ್ದು ಈಗಂತೂ ಹೆತ್ತವರಿಗೆ ಚಿಂತೆ ಆವರಿಸಿತು. ಇದುವರೆಗೂ ತ್ರಿಶೂಲನ ಬಗ್ಗೆ ಅಷ್ಟೊಂದು ಮಹತ್ವ ಕೊಡದೆ ಇದ್ದವರು, ಈಗ ಅವನ ಸ್ಥಿತಿ ನೋಡಿ ತುಂಬಾ ಗಾಬರಿ ಯಾದರು.
ಇತ್ತ ಅಂದು ಸಂಜೆ ಮನೆ ಬಿಟ್ಟ ಬುಜಂಗಯ್ಯನವರ ಬಗ್ಗೆ ಅವರ ಆಳುಗಳ ಮುಖಾಂತರ ಕರುಣಾಕರ, ವೇದಾಂತಿ ದಂಪತಿಗಳಿಗೆ ತಿಳಿಯಿತು, ಅವರು ಇಂಥಾ ಸಮಯದಲ್ಲಿ ಎಲ್ಲಿಗೆ ಹೋದರು.....ಎಂದು ತುಂಬಾ ತಲೆಕೆಡಿಸಿಕೊಂಡನು ಕರುಣಾಕರ. ಯಾರಿಗೆ ಅಂತ ವಿಚಾರಿಸುವುದು, ಯಾರೊಡನೆಯೂ ತನಗೆ ಈಗಂತೂ ಸಂಬಂಧವಿಲ್ಲ,
ಯಾವುದೇ ಸಂಬಂಧಿಕರು ಇರಲಿ..... ತನ್ನ ಒಡಹುಟ್ಟಿದ ಅಕ್ಕನೊಂದಿಗೂ ಯಾವುದೇ ಸಂಪರ್ಕವಿಟ್ಟುಕೊಂಡಿಲ್ಲ, ಇನ್ನು ಯಾರ ಮೊಬೈಲ್ ನಂ.ಸಹ ಇಲ್ಲ, ಸರಿ ಪೊಲೀಸು ಸ್ಟೇಶನ್ ಗೇ ಹೋಗೋದು ಎಂದು ತೀರ್ಮಾನಿಸಿದನು ಕರುಣಾಕರ.
ಒಂದು ಕಡೆ ತ್ರಿಶೂಲನ ಆರೋಗ್ಯ ಹದಗೆಟ್ಟಿದೆ, ಅದು ಹತೋಟಿಗೇ ಬರುತ್ತಿಲ್ಲ, ಮತ್ತೊಂದೆಡೆ ತನ್ನ ತಂದೆ ಕಾಣೆಯಾಗಿದ್ದಾರೆ, ಹಾಗೇ.......ಕಾರು ಚಾಲನೆ ಮಾಡಿಕೊಂಡು ನೇರವಾಗಿ ಪೊಲೀಸ್ ಸ್ಟೇಷನ್ ಗೆ ಹೋದನು, ಮೊದಲೇ ಸರ್ಕಾರೀ ಉನ್ನತಾಧಿಕಾರಿ ಯಾಗಿದ್ದರಿಂದ ಅವರ ಅಹವಾಲು ಸ್ವೀಕರಿಸಿದರು, ಕಾಣೆಯಾಗಿರುವ ಕರುಣಾಕರನ ತಂದೆ, ಬುಜಂಗಯ್ಯನವರ ಒಂದು ಫೋಟೊ ಒಂದನ್ನು ಕೊಟ್ಟು, ಅದನ್ನು ಎಲ್ಲಾ ಕಡೆ ಮುದ್ರಿಸಿ ಪ್ರಚಾರ ಮಾಡುವಂತೆ ಹೇಳಿ ಪೊಲೀಸ್ ಠಾಣೆಯಿಂದ ಮನೆಗೆಹೋಗಿ ತನ್ನ ಮಗ ತ್ರಿಶೂಲನ ಆರೋಗ್ಯ ವಿಚಾರಿಸಲು ನೇರವಾಗಿ ಆಸ್ಪತ್ರೆಗೆ ಹೋದನು, ಆದರೆ ತ್ರಿಶೂಲನ ಆರೋಗ್ಯ ತುಂಬಾ ಗಂಭೀರವಾಗಿತ್ತು, ಅವನು ನಿದ್ದೆಯಲ್ಲೂ ತಾತ.....ತಾತ......ಎಂದು ಕನವರಿಸುತ್ತಾ, ತುಂಬಾ ಜ್ವರದಿಂದ ನಿತ್ರಾಣಗೊಂಡಿದ್ದನು, ವೈದ್ಯರು ಹೇಳಿದರು, ನೋಡಿ ಕರುಣಾಕರ್......ಈಗಿನ ಪರಿಸ್ಥಿತಿಯಲ್ಲಿ ಯಾವುದೇ
ಚಿಕಿತ್ಸೆ ಫಲಿಸದು, ಈಗೇನಿದ್ದರೂ ಅವನ ತಾತನೇ ಚಿಕಿತ್ಸೆ, ಅವರೇ ಔಷಧಿ, ಅವರ ಆಲಿಂಗನದಿಂದಲೇ ಮಗುವಿನ ಈ ಜ್ವರ ಕಡಿಮೆಯಾಗಬಹುದೇ ವಿನಃ ಬೇರಾವುದೇ ಔಷಧಿ ಇದಕ್ಕೆ ಮದ್ದಲ್ಲ......ಎಂದು ಈ ಕೂಡಲೇ ತ್ರಿಶೂಲನ ತಾತ ಎಲ್ಲಿದ್ದರೂ ಕರೆತನ್ನಿರೆಂದು ವೈದ್ಯರು, ಕರುಣಾಕರನಿಗೆ ಹೇಳಿದರು.
ಪೊಲೀಸರೇನೋ ಬುಜಂಗಯ್ಯನವರ ಫೋಟೋ ಮುದ್ರಿಸಿ , ಅವರು ಕಾಣೆಯಾಗಿದ್ದಾರೆ, ಎಂಬ ಜಾಹೀರಾತನ್ನು ಇಡೀ ಐದಾರು ಕಿ.ಮೀ. ಅಂತರದಲ್ಲಿ ಅಂಟಿಸಿ, ಮತ್ತು ಸ್ಥಳೀಯ ದಿನಪತ್ರಿಕೆಗಳು, ಟಿ.ವಿ. ಚಾನಲ್ ಗಳಲ್ಲೂ ಜಾಹಿರಾತು ನೀಡಿದರು. ಆದರೂ ಏನೊಂದೂ ಪ್ರಯೋಜನವಾಗಲಿಲ್ಲ.
ಬುಜಂಗಯ್ಯನವರು ತನ್ನ ಮಗಳು ಕಲ್ಪನಾ ಳ ಮನೆಯಲ್ಲಿ ಆರಾಮದಾಯಕ ಜೀವನ ನಡೆಸುತ್ತಿದ್ದರು,
ಅವಳ ಗಂಡನ ಮನೆಯವರೂ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು, ಅವರನ್ನು ಹೊರಗಡೆ ಎಲ್ಲೂ ತಿರುಗಾಡಲು ಬಿಡದೆ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದರು. ಕಲ್ಪನಾಳಿಗೆ ಇಬ್ಬರು ಮಕ್ಕಳು, ಒಂದು ಹೆಣ್ಣು, ಮತ್ತೊಂದು ಗುಂಡು, ಇವರೀರ್ವರಿಗೂ ಮತ್ತೊಬ್ಬ ತಾತ ಸಿಕ್ಕಿದ್ದು ತುಂಬಾ
ಖುಷಿಯಾಗಿ ಅವರೊಡನೆ ಆಟವಾಡಿಕೊಂಡಿದ್ದರು.
ತಮ್ಮ ಮಗ ತ್ರಿಶೂಲನ ಆರೋಗ್ಯ ಹಾಗೂ ಅವನ ತಾತನ ವಿಷಯದಲ್ಲಿ, ಕರುಣಾಕರ ವೇದಾಂತಿ ತುಂಬಾ ತಪ್ಪು ನಿರ್ಣಯ ಕೈಗೊಂಡು ತುಂಬಾ ಸೋತುಹೋಗಿದ್ದರು. ಈಗ ಬರುಬರುತ್ತಾ ಅವರ ಯೊಜನೆಗಳೆಲ್ಲವೂ ಅವರಿಗೆ ತಿರುಗುಬಾಣ ಆಗಿದ್ದವು,
ಒಂದುಕಡೆ ತ್ರಿಶೂಲನ ಆರೋಗ್ಯ ಸುಧಾರಿಸುತ್ತಿಲ್ಲ, ಮತ್ತೊಂದೆಡೆ ಬುಜಂಗಯ್ಯನವರು ಕಾಣೆಯಾಗಿದ್ದಾರೆ, ಎಲ್ಲಿ ಹೋದರು, ಏನಾದರು, ಏನಾದರೂ ಆಗಿದ್ದರೆ.....
ಪೊಲೀಸರಿಗೆ ಮಾಹಿತಿ ಈಗಾಗಲೇ ಸಿಗಬೇಕಿತ್ತು, ಆದರೆ ಅವರು ಮತ್ತೆಲ್ಲಿ ಹೋದರು.......ಎಂಬುದೇ ಯಕ್ಷಪ್ರಶ್ನೆಯಾಯಿತು, ನಾವು ಅವರನ್ನು ತ್ರಿಶೂಲನಿಂದ ಬೇರ್ಪಡಿಸಬಾರದಿತ್ತು, ಎಂದು ಈಗ ಕರುಣಾಕರನಿಗೆ ಮನವರಿಕೆಯಾಗಿ, ಪಶ್ಚಾತ್ತಾಪ ಕೂಡ ಆಗುತ್ತಿತ್ತು, ಇದುವರೆಗೂ ತಾವು ತಮ್ಮ ಅಧಿಕಾರ, ದರ್ಪ, ಹಣ, ಅಂತಸ್ತು, ಎಂದು ಕರುಣಾಕರ ದಂಪತಿಗಳು ತಮ್ಮ ಕುಟುಂಬ, ತಮ್ಮ ತಂದೆ ಇರಲಿ ತಮ್ಮ ಏಕೈಕ ಮಗುವನ್ನೂ ನೋಡಿಕೊಳ್ಳದಷ್ಟು ಕಠಿಣ ಹೃದಯಿಗಳಾಗಿ, ಕಾಡು ಮೃಗಗಳಂತೆ ವರ್ತಿಸುತ್ತಿದ್ದರು.
ಈಗ ತಮ್ಮ ಮಗು ಯಾವಾಗ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಎಷ್ಟು ಹಣ ಖರ್ಚು ಮಾಡುತ್ತೇನೆಂದರೂ ಅದು ವ್ಯರ್ಥ ಎಂದು ತಿಳಿದರು.
ಮುಂದಿನ ಸಂಚಿಕೆಯಲ್ಲಿ..........ಓದಿ
________________