Click here to Download MyLang App

ನಡುಹಗಲು : ಕಾರ್ತಿಕ್ ಆರ್ | ಕೌಟುಂಬಿಕ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ | ಯಾವ ದನಿಯಲ್ಲಿ ಆಡಿಯೋ ಕತೆಯಾಗಬೇಕು ಅನ್ನುವ ಕುರಿತು ಲೇಖಕರ ಆಯ್ಕೆ: ಗಂಡು ಧ್ವನಿ

ನಡುಹಗಲು

ಸುಮಿತ್ರೆಯನ್ನು ಮನೆಗೆ ಕರೆದುಕೊಂಡು ಹೋದದ್ದು ಏಡವಟ್ಟಾಯಿತು ಎಂಬುದು ತಿಳಿಯಲು ಫಿಲಿಪ್ ಕಾರ್ಡೆರೋಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ. ಆ ಮಧ್ಯಾಹ್ನ, ಸೋಫಾದ ಎಡ ಮೂಲೆಯಲ್ಲಿ ಕುಳಿತು, ಬಲ ಮೂಲೆ ತುದಿಯಲ್ಲಿ ಮುದುರಿ ಕುಳಿತಿದ್ದ ಸುಮಿಯೆಡೆಗೆ ಕುತ್ತಿಗೆಯನ್ನಷ್ಟೇ ತಿರುಗಿಸಿ "ಯಾವ ಊರು?", "ತಂದೆಗೆಂತ ಕೆಲಸ?", "ಇವ ಹೇಗೆ ಗೊತ್ತು?", ಮೊದಲಾದ ಪ್ರಶ್ನೆಗಳನ್ನು ಒಂದಾದರೊಂದಂತೆ ಎಸೆಯುತ್ತಿದ್ದ ಮಮ್ಮಿಯ ಮುಖದಲ್ಲಿದ್ದ ಭಯಂಕರ ಅಸಡ್ಡೆ ಕಂಡಿದ್ದೇ ಕೆಲಸ ಕೆಟ್ಟಿದ್ದು ತಿಳಿಯಿತು. ಮಮ್ಮಿಯನ್ನು ನೋಡಲೂ ಧೈರ್ಯವಿಲ್ಲದೇ ಬೆಕ್ಕಿನ ಪಕ್ಕದಲ್ಲಿ ಬೆದರಿ ಕುಳಿತ ಇಲಿ ಮರಿಯಂತೆ ಕಾಣುತ್ತಿದ್ದ ಸುಮಿ, ಇವನು "ಹೊರಡುವಾ?" ಎಂದದ್ದೇ, ಬದುಕುಳಿದರೆ ಬೇಡಿಕೊಂಡು ತಿಂದೇನು ಎಂಬಂತೆ ಧಬ್ಬಲ್ಲನೆ ಎದ್ದಳು.  ಅಲ್ಲೇ ಗೋಡೆಗೊರಗಿ ನಿಂತು, ಎಲ್ಲವನ್ನೂ ನೋಡುತ್ತಿದ್ದ ಇವನ ತಂಗಿ ಎಡ್ವಿನಾ ಕಿಸಕ್ಕನೇ ನಕ್ಕಳು. ಸುಮೀ ಹೊರಡುವಾಗ, "ಆಂಟೀ, ಹಲಸಿನ ಕಾಯಿ ಪಲ್ಯ ತುಂಬ ಚೆನ್ನಾಗಿತ್ತು" ಎಂದಳು. ಆಗ ಮಮ್ಮಿ, ಉದಾಸೀನದ ಮುಖಭಾವದಲ್ಲಿಯೇ, "ಎಂತ ಚಂದವೋ, ಉಪ್ಪೇ ಇರಲಿಲ್ಲ" ಎಂದದ್ದೇ ಇವನು ತಲೆ ಚಚ್ಚಿಕೊಂಡ. ಸುಮಿಯ ಜೊತೆಗೇ ಹೊರಟವನಿಗೆ, "ಅವಳಿಗೆ ಹೋಗ್ಲಿಕ್ಕೆ ಗೊತ್ತಾಗ್ತದಲ್ಲಾ, ನೀ ಎಂತಕ್ಕೆ" ಎಂದು ಗದರಿದಳು. ದೊಡ್ಡ ದನಿಯಲ್ಲಿ ನಗುತ್ತ ಮಾತನಾಡುವ ಮಮ್ಮಿ ಹೀಗೆ ದಿಗಿಲಿಕ್ಕಿಸುವ ಹೆಂಗಸಾಗಿ ಬದಲಾಗಿದ್ದನ್ನು ನೋಡಿ ಭಯವಾಗಿ ಮನೆಯಲ್ಲೇ ಉಳಿದನು. ಆನಂತರ ಮನೆಯಲ್ಲಿ ಸುಮಿಯ ಬಗ್ಗೆ ಹೆಚ್ಚಿನ ಮಾತಾಗಲಿಲ್ಲ. ಆಗಾಗ ಇವನನ್ನು ನೋಡಿ ವ್ಯಂಗ್ಯವಾಗಿ ನಗುತ್ತಿದ್ದ ಎಡ್ವಿನಾ, ಸಂಜೆ ಅಪ್ಪ ಬಂದಾಗ "ಫಿಲಿಯ ಲೌ ಕೇಸು ಬಂದಿತ್ತಲ್ಲಪ್ಪ ಇವತ್ತೂ" ಎಂದು ವರದಿಯೊಪ್ಪಿಸಿದ್ದಳು.

ಮಮ್ಮಿ ಅಪ್ಪ ಕೂಡ ಪ್ರೀತಿಸಿಯೇ ಮದುವೆಯಾದವರು ಎಂಬ ಉಮೇದಿನಲ್ಲಿ ಸುಮಿಯ ಬಗ್ಗೆ ಮನೆಯಲ್ಲಿ ತಿಳಿಸುವ ಹುರುಪಿನಲ್ಲಿದ್ದವ, ಹಿಂದಿನ ಸಂಜೆ, "ಮಮ್ಮಿ, ನಿಮ್ಮದು ಆ ಕಾಲದಲ್ಲೇ ಲೌ ಮ್ಯಾರೇಜಲ್ಲಾ..." ಎಂದಾಗ ಇರುಸು ಮುರಿಸುಗೊಂಡ ಮಮ್ಮಿ "ಎಂತ ಇಲ್ಲ, ಯಾರು ಹೇಳಿದ್ದು?" ಎಂದ ಬೆನ್ನಿಗೇ, "ಆ ಕಾಲದಲ್ಲಿ ಪ್ರೀತಿಗೆಲ್ಲ ಬೆಲೆ ಇತ್ತು, ಈಗೆಂತ ಇಲ್ಲ" ಎಂದಿದ್ದಳು. ಅವಳು ಬಂದು ಹೋದ ರಾತ್ರಿ ಊಟದ ನಂತರ ಮಾತು ತೆಗೆದವನ ಕಡೆಗೆ ನೋಡದೇ, "ನಿನಗೆಂತ ಅವಸರ. ನಾವು ಯೋಚಿಸುದು ಬೇಡ್ವಾ!" ಎಂದು ಎದ್ದು ಹೋದಳು. ಅಪ್ಪ ಎಂದಿನಂತೆ ಹೆಚ್ಚು ಮಾತಿಲ್ಲದೇ ಸುಮ್ಮನಿದ್ದರು. ಮೊದಲೆರೆಡು ದಿನ ಬಿಗುವಿನಲ್ಲಿದ್ದ ಮಮ್ಮಿ ಕ್ರಮೇಣ ಸರಿಹೋಗುವ ಲಕ್ಷಣ ತೋರಿತು. ಎಡ್ವಿನಾಳಿಗಾಗಿ ಮಟನ್ ಕೈಮಾ ಮಾಡುವ ತಯಾರಿಯಲ್ಲಿದ್ದವಳು, ಬಿಸಿಲಿನಲ್ಲಿ ಹರವಿದ್ದ ಹಾಸಿಗೆಗಳನ್ನು ಕೋಲಿನಿಂದ ಬಡಿಯುತ್ತಿದ್ದವನ ಬಳಿ ಬಂದು, "ಅವಳ ಹೆಸರೇನೆಂದೆ? ಸುಚಿತ್ರವೋ, ಸುನೇತ್ರವೋ?" ಎಂದು ವಿಚಾರಿಸಿ, "ಅವಸರ ಮಾಡ್ಲಿಕ್ಕಿಲ್ಲ, ನೋಡ್ವನ ಮುಂದೆ" ಎಂದು ಹೋದಳು.

ಎಲ್ಲವನ್ನೂ ಗಮನಿಸುತ್ತ, ಪೋಕರಿ ಮಕ್ಕಳಂತೆ ಇವನ ಕಾಲೆಳೆದುಕೊಂಡಿದ್ದ ಎಡ್ವಿನಾ, ಸುಮಿಯ ಕುರಿತು ಮಮ್ಮಿ ಮತ್ತು ಅಪ್ಪನ ನಿಲುವು ಮೆತ್ತಗಾಗಿದೆ ಎಂದು ತಿಳಿದದ್ದೇ, ಹೊಸತೇ ಕಿರಿಕಿರಿ ಶುರುಮಾಡಿದಳು. ಒಮ್ಮೆ ಥಟ್ಟನೇ, "ನಿಮ್ಮಮ್ಮನ ಹೆಸರು ಗೊತ್ತೇನಾ ನಿಂಗೇ?" ಎಂದು ಕೇಳಿಬಿಟ್ಟಳು. ಮಮ್ಮಿ ಏನೂ ಕೇಳದವಳಂತೆ ನಟಿಸುತ್ತಾ, ದಿನಪತ್ರಿಕೆಯನ್ನು ಅತಿಯಾದ ಏಕಾಗ್ರತೆಯಲ್ಲಿ ಓದುತ್ತಿದ್ದಳು. "ನಿಂಗೆ ನಿನ್ನ ಬಯಲಾಜಿಕಲ್ ಪೇರೆಂಟ್ಸಿನ ಮೇಲೆ ಪ್ರೀತಿ ಉಂಟಾ?", "ಅಮ್ಮನ ಹೆಸರೂ ಗೊತ್ತಿಲ್ಲವಾ?, ಶೇ ಪಾಪ", "ಸತ್ಯ ನೆನಪಿಲ್ವೇನಾ, ಎಂತಾರ ನೆನಪಿದ್ದೇ ಇರ್ತದೆ, ಹೆತ್ತ ಅಮ್ಮ" ಎಂದೆಲ್ಲ ಕಾಡುತ್ತಿದ್ದವಳನ್ನು ಮಮ್ಮಿ "ಏ ಹುಡುಗಿ, ಎಂತದೇ ಅದು ನಿನ್ನ ಕರ್ಮ" ಎಂದು ಗಂಟಲು ಮಾಡಿ ಸುಮ್ಮನಾಗಿಸಿದ್ದಳು. ಆದರೂ ಆ ರಾತ್ರಿ ಊಟ ಮುಗಿಸಿ ಕುಳಿತಿದ್ದವನ ಹತ್ತಿರ ಬಂದ ಎಡ್ವಿನಾ, "ಎಂತದಾ, ನಿನ್ನಮ್ಮನ ಹೆಸರು ಬೇಡ್ವೇನಾ ನಿಂಗೇ?" ಎಂದು ಗದರಿಸುವಂತೆ ಕೇಳಿದಳು. ಇವನಿಗೆ ರೇಗಿತು "ಏಯ್! ಎಂತದೇ! ಯಾವ ಅಮ್ಮನ ಹೆಸರು? ಬೇಡ ನನಗೆ, ಹೋಗೆ ಆಚೆ" ಎಂದು ಕೂಗಿಬಿಟ್ಟ. ಒಂದು ಕ್ಷಣ ಅಪ್ರತಿಭಳಾದಂತೆ ಕಂಡವಳು, "ಯಾರಿಗಾ ಹೋಗು ಅನ್ನದು ನೀನೂ? ಎಂತದಾ? ನನ್ನ ಅಮ್ಮನ ಮನೆಯಿಂದ ನಾನು ಹೋಗಬೇಕನಾ? ನನ್ನ ಸ್ವಂತ ಅಪ್ಪನ ಮನೆಯಿಂದ ಹೋಗಬೇಕನಾ? ಇದು ನನ್ನ ಮನೆ! ಬೇಕಾದ್ರೆ ನೀ ಹೋಗು" ಎಂದು ಕಿರುಚಿ ಸೋಫಾದ ಮೇಲೆ ಧೊಪ್ಪೆಂದು ಕುಳಿತಳು.

ತಾನು ಮಮ್ಮಿ ಡ್ಯಾಡಿಯ ಸ್ವಂತ ಮಗನಲ್ಲ ಎಂಬ ವಿಚಾರ ಅವನಿಗಾಗಲೀ, ಎಡ್ವಿನಾಗಾಗಲೀ ಹೊಸತೇನಲ್ಲ. ಚಿಕ್ಕವರಿದ್ದಾಗ ಜಗಳವಾದಾಗಲೆಲ್ಲ, 'ನಿನ್ನನ್ನು ಕೆಂಗೇರಿ ಮೋರಿಯಿಂದಲ್ಲವಾ ತಂದದ್ದು" ಎಂದೆಲ್ಲ ಎಡ್ವಿನಾ ಮೂದಲಿಸುತ್ತಿದ್ದಳಾದರೂ, ಅದನ್ನೆಲ್ಲ ಇವನು ತಲೆಗೇ ಹಚ್ಚಿಕೊಂಡಿರಲಿಲ್ಲ. ಏಳವೆಯಿಂದಲೂ ತಾಯಿ ತಂದೆ ಎಂದಾಗ ಮಮ್ಮಿ ಮತ್ತು ಅಪ್ಪನ ಚಿತ್ರಗಳೇ ಮೂಡುತ್ತಿದ್ದುವು. ದೊಡ್ದವರಾದಂತೆ ಅವರಿಬ್ಬರ ನಡುವಿನ ಜಗಳಗಳು ವಿವಿಧ ನಿರುಪದ್ರವೀ ರೂಪಗಳನ್ನು ತಾಳಿದ್ದವಾದರೂ, ಮತ್ತೆಂದಿಗೂ ಅವಳು ತಾನು ಸಾಕುಮಗುವೆಂಬ ವಿಚಾರ ಎತ್ತಿರಲಿಲ್ಲ. ಆದರೀಗ, ಏಕಾಏಕಿ ಅದೇ ವಿಚಾರವನ್ನು ಕೆದಕಿ ಹೂಂಕರಿಸುತ್ತಿದ್ದ ಅವಳ ಪರಿ ಬೇರೆಯದೇ ಎನಿಸಿತು. ಮಮ್ಮಿಯ ದೂರದ ಸಂಬಂಧಿಕಳಾಗಿದ್ದ, ರೋಸಮ್ಮ ಎಂಬ ತನ್ನ ತಾಯಿಯಯ ಬಗ್ಗೆಯಾಗಲೀ, ಅವಳ ಗಂಡನ ಬಗ್ಗೆಯಾಗಲೀ ಇವನಿಗೆ ಸರಿಯಾಗಿ ತಿಳಿದಿರಲಿಲ್ಲ, ಅವಳು ಬಾಣಂತಿ ಸನ್ನಿಯುಂಟಾಗಿ ಸತ್ತು ಹೋಗಿದ್ದಳು ಎಂಬುದಷ್ಟೇ ಅವನಿಗೆ ತಿಳಿದಿದ್ದುದು. ಅದನ್ನೂ ಮೀರಿದ ವಿಚಾರಗಳು ಮುಖ್ಯವೆನಿಸಿರಲೇ ಇಲ್ಲ. ಆದರೆ, ಇಂದು ಹೊತ್ತಲ್ಲದ ಹೊತ್ತಲ್ಲಿ ತನ್ನೆದುರು ಬಂದಿದ್ದ ಈ ಅನಗತ್ಯ ಸತ್ಯವನ್ನು ಹೇಗೆ ನಿಭಾಯಿಸುವುದೋ ತಿಳಿಯದೇ ತೊಳಲಿದ ಫಿಲಿಪನಿಗೆ ತನ್ನ ಮನೆಯ ಗರಂ ಮಸಾಲ, ಬಂಗುಡೆ ಸಾರು, ಗುಜ್ಜೆ ಸುಕ್ಕೆ, ಪ್ಲಂ ಕೇಕುಗಳವೇ ಮೊದಲಾದ ಪರಿಮಳಗಳ ನಡುವೆ ರೋಸಮ್ಮಳ ಅಜ್ನಾತ ಸುಗಂಧವೊಂದು ನುಸುಳಿದಂತಾಗಿ  ಕಸಿವಿಸಿಯಾಯಿತು.

ಲ್ಯಾನ್ಗ್ಫರ್ಡ್ ರಸ್ತೆಯು ಹೊಸೂರು ರಸ್ತೆಯನ್ನು ಸೇರುವೆಡೆಯಲ್ಲಿ ಬಲಕ್ಕೆ ಹೊರಳಿ, ಕೊಂಚ ದೂರ ಸಾಗಿ ಬಲಭಾಗದಲ್ಲಿ ಗೋಚರವಾಗುವ ಕ್ರೈಸ್ತರ ಸ್ಮಶಾನದೊಳಗೆ ಬೇಸಗೆಯ ಆ ಮಧ್ಯಾಹ್ನ ಗೋರಿಗಳಿಗೆಲ್ಲ ಬಿಸುಲಿನ ಸ್ನಾನವಾಗುತ್ತಿತ್ತು. ಕಾಂಪೌಂಡಿನ ಅಂಚಿನಲ್ಲಿರುವ ಗೋರಿಗಳ ಹೆಸರುಗಳನ್ನೂ ಓದುತ್ತಾ ಮುಂದುವರೆಯುತ್ತಿದ್ದ ಫಿಲಿಪನ ಹಿಂದೆ ಕಾಲೆಳೆದುಕೊಂಡು ಸಾಗುತ್ತಿದ್ದ ಸುಮೀ, ತಿಳಿ ಹಳದಿ ಕುರ್ತಾದಲ್ಲಿ ಬಿಸಿಲಿನ ತುಣುಕಿನಂತೆ ಕಾಣುತ್ತಿದ್ದಳು. ಅವನ ಜೊತೆ ಹರಟೆ ಹೊಡೆಯಲು ಪ್ರಯತ್ನಿಸಿ ಬೇಸರವಾಗಿ, ಅಲ್ಲಿದ್ದ ಪಾಚಿ ಬೆಳೆದಿದ್ದ ಗೋರಿಯೊಂದರ ಮೇಲೆ ಕುಳಿತುಕೊಂಡಳು. ಮುಂದಿನವರೆಗೆ ಹೋಗಿದ್ದ ಫಿಲಿಪ, ಇವಳು ಹಿಂದೆಯೇ ಉಳಿದ್ದದ್ದನ್ನು ಗಮನಿಸಿ ಬಂದು ಪಕ್ಕ ಕುಳಿತುಕೊಂಡ. ಸ್ವಲ್ಪ ಸುಮ್ಮನಿದ್ದು, "ಈ ಸಾರ್ತಿಯಾದರೂ ಒಪ್ಪಿಸಬೇಕಿತ್ತು ನಿನ್ನ ಮನೆಯವರನ್ನು! ಮನೆಯಲ್ಲಿ ನೆಪ ಹೇಳಿ ಸಾಕಾಗಿದೆ”, ಎಂದಳು. ಇವನಿಗೆ ಏನೆನ್ನಬೇಕೆಂದು ತಿಳಿಯಲಿಲ್ಲ. ಗಿಡ್ಡ ನೀಲಿ ಜೀನ್ಸು ತೊಟ್ಟ ಕಾಲುಗಳ ಮೇಲೆ ಕಡುಗಂದು ಹ್ಯಾನ್ ಬ್ಯಾಗನ್ನಿಟ್ಟುಕೊಂಡು ಬಳಲಿದಂತೆ ಮಾತನಾಡುತ್ತಿದ್ದ ಸುಮಿ, ಬರುವ ಖಾತ್ರಿಯಿಲ್ಲದ ಬಸ್ಸು, ಬಂದೇ ಬಂದೀತೆಂಬ ಕೆಚ್ಚಿನಲ್ಲಿ ಗಂಟೆಗಟ್ಟಲೇ ಹಸಿವು ನಿದ್ರೆ ದಣಿವುಗಳನ್ನೂ ಲೆಕ್ಕಿಸದೇ ಒಬ್ಬಂಟಿ ನಿಲ್ದಾಣದಲ್ಲಿ ಮತ್ತಷ್ಟು ಒಬ್ಬಂಟಿಯಾಗಿ ಕಾಯುತ್ತ ಕುಳಿತವಳಂತೆ ಕಂಡಳು.

ರೋಸಮ್ಮಳ ಪೂರ್ತಿ ಹೆಸರಾಗಲೀ, ಅವಳನ್ನು ಎಲ್ಲಿ ಮಣ್ಣು ಮಾಡಿದ್ದಾರೆ ಎಂಬುದಾಗಲೀ, ಮತ್ತಾವುದೇ ವಿವರವಾಗಲೀ ಒಂದೂ ಗೊತ್ತಿಲ್ಲದೇ, ಅದನ್ನೆಲ್ಲ ಮನೆಯಲ್ಲಿ ಕೇಳುವ ಮನಸ್ಸೂ ಆಗದೇ ಒಂದು ಅಂದಾಜಿನಲ್ಲಿ ಶಾಂತಿನಗರದ ಈ ಸ್ಮಾಶಾನಕ್ಕೆ ಬಂದವನಿಗೆ ನೂರಾರು ಸಾಲುಗಳಲ್ಲಿ ಹರಡಿಕೊಂಡಿದ್ದ ಸಾವಿರಾರು ಗೋರಿಗಳ ನಡುವೆ ಅಂಚೆಲ್ಲ ಮಾಸಿ ಹರಿದು ನಡುವಿನ ಪದಗಳಷ್ಟೇ ಉಳಿದಿದ್ದ ಹಾಳೆಯೊಂದರಲ್ಲಿದ್ದಷ್ಟೇ ವಿವರಗಳೊಂದಿಗೆ ರೋಸಮ್ಮಳನ್ನು ಹುಡುಕುವುದು ಸಾಧ್ಯವಿಲ್ಲದ ಮಾತೆಂಬ ಅರಿವು ಬಂದ ಕೂಡಲೇ ಆಗಿತ್ತು. ಸ್ವಲ್ಪ ಹೊತ್ತಿಗೇ, ರೋಸಿ, ರೋಸ್, ರೋಸಿ ಮೇರಿ, ರೋಸಮ್ಮ ಎಂಬ ಹೆಸರಿನ ಫಲಕಗಳಿದ್ದ ಹಲವಾರು ಗೋರಿಗಳು ಸಿಕ್ಕವು, ಅವುಗಳಲ್ಲಿ ಎಷ್ಟೋ ಗೋರಿಗಳಡಿಯಲ್ಲಿ ಮಲಗಿದ್ದವರು ಇವನು ಹುಟ್ಟಿದ ವರ್ಷವೇ ತೀರಿಕೊಂಡಿದ್ದರು. ಹುಟ್ಟಿದ ಮತ್ತು ಸತ್ತ ಇಸವಿಗಳು ನಮೂದಾಗಿರದ ರೋಸಮ್ಮಂದಿರೂ ಇದ್ದರು. "ಕೆಲವೇ ಕಾಲ ನಮ್ಮೊಡನಿದ್ದು ಬದುಕು ಬದಲಿಸಿದ" ಒಂದು ವರ್ಷದ ರೋಸಿ, 'ಸದಾ ಆಶೀರ್ವದಿಸುತ್ತಿರು'ವ ತೊಂಬತ್ತೆರಡ ರೋಸಿ ಮೇರಿಯಮ್ಮ, 'ಪ್ರಭುವಿನಲ್ಲಿ ಲೀನಳಾದ ದೇವತೆ' ಯಾಗಿದ್ದ ನಲವತ್ತಾರರ ಡೆಲ್ಲಾ ರೋಸಿಯರ ಜೊತೆಗೆ, ಹೆಸರನ್ನಷ್ಟೇ ಕೆತ್ತಿಸಿಕೊಂಡಿದ್ದ ರೋಸಲಿನ, ರೋಸ್ ಜೇನ್, ರೋಸ್ ಡಿಮೆಲ್ಲೋರೆಲ್ಲರ ನಡುವೆ ತನ್ನ ಅಜ್ನಾತ ತಾಯಿಯನ್ನು ಹುಡುಕುವ ಕೆಲಸ ನಿಷ್ಫಲವಲ್ಲದೇ ಇನ್ನೇನಾಗಲು ಸಾಧ್ಯವಿತ್ತು?    

ಬಿಸಿಲಿನಲ್ಲಿ ಕುಳಿತು ಮುಖ ಕೆಂಪಗಾಗಿದ್ದ ಸುಮಿ, ಮೈ ಬೆವೆತದ್ದರಿಂದ, ಕೂದಲನ್ನು ಮೇಲಕ್ಕೆ ಬಾಚಿ ತುರುಬಿನಂತೆ ಕಟ್ಟಿಕೊಂಡಿದ್ದಳು. ಮಧ್ಯಾಹ್ನವು ಸಂಜೆಯ ತೆಕ್ಕೆ ಸೇರುವಾಗ ಅವಳೊಂದಿಗೆ ಸ್ಕೂಟರಿನಲ್ಲಿ ಹೊರಟ ಫಿಲಿಪನಿಗೂ ದಣಿವಾಗಿತ್ತು. ಸ್ಕೂಟರ್ ಓಡಿಸುತ್ತಿದ್ದವಳ ಮೈಯಿಂದ ಬರುತ್ತಿದ್ದ ಬೆವರು ಬೆರೆತ ಮಂದವಾದ ಪರಿಮಳ ಹಿತವೆನಿಸಿತು. ಅವಳ ಉದ್ದನೇ ಕತ್ತಿನ ಸುತ್ತಲಿನ ಸಣ್ಣ ಸಣ್ಣ ಗೆರೆಗಳು ಸಂಜೆಯ ತಿಳಿಬೆಳಕಿನಲ್ಲಿ ಮುದ್ದಾಗಿ ಕಾಣಿಸಿದುವು. ಅವನನ್ನು ಮನೆಯಿಂದ ಸ್ವಲ್ಪ ದೂರ ಇಳಿಸಿ "ಸೋಮವಾರ ಹನ್ನೆರಡಕ್ಕೆ ಫ್ಲೈಟು" ಎಂದಳು. ಅವಳು ದಿಲ್ಲಿಯ ತನ್ನ ಇನ್ಸ್ಟಿಟ್ಯೂಟಿಗೆ ಹೊರಡುವ ದಿನ ಇನ್ನೇನು ಬಂತು ಎಂಬುದು ನೆನಪಾಗಿ ಫಿಲಿಪನಿಗೆ ನೋವಾಯಿತು. ಹೊರಡುವುದಕ್ಕೆ ಮುಂಚಿನ ಕೆಲವು ದಿನಗಳನ್ನಾದರೂ ಅವಳಿಗಿಷ್ಟವಾಗುವಂತೆ ಕಳೆಯಲಾಗಲೇ ಇಲ್ಲ ಎನಿಸಿ, "ಸಾರಿ ಸುಮೀ,.. ಎನ್ನಹೊರಟವನು ತಡೆದು, "ಐ ವಿಲ್ ಮಿಸ್ ಯು' ಎಂದ. "ಅಯ್ಯೋ ನಾಳೆಯ ನಂತರ ಮಿಸ್ ಮಾಡಿಕೊ, ನಾಳೆ ಸಿಗೋದಿದೆ ಇನ್ನು" ಎಂದು ನಕ್ಕಳು. "ಮಧ್ಯಾಹ್ನ ಉಟಕ್ಕೆ ಸಿಗೋಣ! ಸಿಮಿಟ್ರಿ ಹತ್ತಿರ, ಕೆಫೆ ಎಟ್ ಸಾಂಚಿಯಲ್ಲಿ, ಮೈ ಟ್ರೀಟ್" ಎನ್ನುವಷ್ಟರಲ್ಲಿ ಗಾಡಿ ಶುರು ಮಾಡಿ ಮುಂದೆ ಸಾಗಿದ್ದವಳು 'ಸರಿ' ಎಂಬಂತೆ ಕೈ ಎತ್ತಿದಳು.

ಸಂಜೆಯ ಬಾಂಗಿನ ಹೊತ್ತಿಗೆ ಮನೆಗೆ ಮರಳಿದಾಗ, ಗೇಟಿನ ಕಂಬಕ್ಕೊರಗಿ ಅಪ್ಪ ನಿಂತಿದ್ದರು. ಹತ್ತಿರ ಬಂದಾಗ ತಂಬಾಕಿನ ಘಾಟಿನ್ನೂ ಗಾಳಿಯಲ್ಲಿತ್ತು. ಮಮ್ಮಿ ವರಾಂಡಾದ ಮೆಟ್ಟಿಲಿನ ಮೇಲೆ ಕಾಲು ಚಾಚಿ ನೈಟೀಯನ್ನು ತೊಟ್ಟಿಲಿನಂತೆ ಮಾಡಿಕೊಂಡು ಅದರಲ್ಲಿ ತಾನು ಊಟ ಹಾಕುವ ಬೆಕ್ಕಿನ ಮರಿಯನ್ನು ಮಲಗಿಸಿಕೊಂಡು ಆಟವಾಡಿಸುತ್ತಿದ್ದಳು. ಕರ್ರಗಿನ ಉಣ್ಣೆಯ ಉಂಡೆಯಂತಹ ಆ ಮರಿ ಅವಳ ಹಳದಿ ಸ್ವೆಟರಿನ ತೋಳುಗಳನ್ನು ಕಚ್ಚುತ್ತಾ ಆಡುತ್ತಿತ್ತು. ಸ್ವಲ್ಪ ದೂರದಲ್ಲಿ ಅದರ ತಾಯಿ, ಕಪ್ಪು ಬಿಳುಪಿನ ದೊಡ್ಡ ಬೆಕ್ಕು ಹಿಂಗಾಲುಗಳ ಮೇಲೆ ಕುಳಿತು ಮುಂಗಾಲುಗಳನ್ನು ನೆಕ್ಕಿಕೊಳ್ಳುತ್ತಿತ್ತು. ಇವನು ಬಂದ ಸದ್ದಿಗೆ ಬೆಕ್ಕುಗಳು ಓಡಿಹೋದವು. ಮಮ್ಮಿ ಎದ್ದು, 'ಇವ ಬಂದ, ಕಾಫಿಗಿಡ್ತೇನೆ' ಎನ್ನುತ್ತಾ ಒಳಹೋದಳು. ಮೊದಲೆಲ್ಲ, ವರ್ಷಗಟ್ಟಲೆಯಿಂದ ಒಂದೇ ರೀತಿಯಲ್ಲಿ ಶುರುವಾಗಿ ಒಂದೇ ಬಗೆಯಲ್ಲಿ ಮುಗಿಯುವ ದೈನಿಕದ ಲಯಕ್ಕೆ ಶೃತಿಗೊಂಡಿರುವ ಮಮ್ಮಿ ಡ್ಯಾಡಿಯದ್ದು ಅತ್ಯಂತ ನೀರಸ ದಾಂಪತ್ಯ ಎನಿಸುತ್ತಿತ್ತು ಫಿಲಿಪನಿಗೆ. ಒಮ್ಮೊಮ್ಮೆ ಅವರಿಬ್ಬರೂ ಒಂದೇ ಬಸ್ಸಿನಲ್ಲಿ ಸುಧೀರ್ಘ ಪ್ರಯಾಣ ಹೊರಟ ಸಹಪ್ರಯಾಣಿಕರಂತೆ ಕಾಣುತ್ತಿದ್ದರು. ಆದರೆ, ಸುಮಿ ಹತ್ತಿರಾದಾಗಿನಿಂದ ಆ ನೀರಸ ಯಾನಕ್ಕೂ ಮಧ್ಯಾಹ್ನದ ಸಣ್ಣ ನಿದ್ರೆಗಿರುವ ಚೆಲುವಿದೆ ಎನಿಸತೊಡಗಿತ್ತು. ತಿಂಗಳುಗಟ್ಟಲೇ ಓಡಿಸದೇ ಬಿಟ್ಟ ಬೈಕಿನ ಮೇಲೆ ಅಪ್ಪನಿಗೆ ಎಂದಾದರೊಮ್ಮೆ ಪ್ರೀತಿ ಬಂದು ಅದರ ಅಂಗಾಂಗಳನ್ನೆಲ್ಲ ತಿಕ್ಕುತ್ತಾ ಕುಳಿತಾಗ ಅಮ್ಮ ಆ ವಾಹನ ಸ್ನಾನವನ್ನು ನೋಡುತ್ತಾ ಮನೆಯ ಮೆಟ್ಟಿಲ ಮೇಲೆ ಕೆಸುವಿನೆಲೆ ಗಂಟುಕಟ್ಟುತ್ತಾ ಕೂರುತ್ತಿದ್ದಳು. ಇಳಿಸಂಜೆಗೆ ಅಪ್ಪ ಗೇಟಿನ ಒಂದು ಬದಿಯಲ್ಲಿ ಸಿಗರೇಟು ಸೇದುತ್ತಾ ನಿಂತರೆ, ಮತ್ತೊಂದು ಬದಿಯಲ್ಲಿ ಮಮ್ಮಿ ಗೇಟಿನ ಮೇಲೆ ಹಬ್ಬಿಸಿದ್ದ ಚೀಟಿಹೂವಿನ ಬಳ್ಳಿ ಒಪ್ಪ ಮಾಡುತ್ತಲೋ, ಗಿಡಗಳಿಗೆ ನೀರು ಹಾಕುತ್ತಲೂ ಇರುತ್ತಿದ್ದಳು. ಅವರವರ ಏಕಾಂತಕ್ಕೆ ಎಡೆಮಾಡಿಕೊಡುತ್ತಲೇ ಪರಸ್ಪರರ ಜತೆಗಿರುವ ಅವರಿಬ್ಬರ ನಡುವೆ ಇರುವಂತಹದ್ದೇ ಹಗೂರವಾದ ಎಳೆಯೊಂದು ತನ್ನ ಮತ್ತು ಸುಮಿಯ ನಡುವೆಯೂ ಎಂದುಕೊಂಡ ಫಿಲಿಪನಿಗೆ, ತನಗೆ ಅತ್ಯಂತ ಪ್ರಿಯವಾದ ಶನಿವಾರ ಮಧ್ಯಾಹ್ನದ ನಿದ್ರೆಯನ್ನೂ ಬಿಟ್ಟು, ತನ್ನ ಜೊತೆಗೆ ಸ್ಮಶಾನಕ್ಕೆ ಬಂದು ಧೂಳು, ಬಿಸುಲಿನಲ್ಲಿ ಗೋರಿಗಳ ನಡುವೆ ತನ್ನ ಹುಡುಕಾಟ ಮುಗಿಯುವುದನ್ನೇ ಮೌನವಾಗಿ ಕಾಯುತ್ತ ಕೂತಿದ್ದ ಸುಮಿಯ ನೆನಪಾಯಿತು.      

ರಾತ್ರಿ ಊಟದ ನಂತರ, ಎಲೆಯಡಿಕೆ ಹಾಕಿಕೊಂಡು ಬಂದ ಮಮ್ಮಿ ಒಂದಷ್ಟು ಮಾತನಾಡುತ್ತ ಇವನೊಟ್ಟಿಗೆ ಕುಳಿತಳು. ಮಾತು ಮುಗಿದರೂ, “ಮತ್ತೆ, ಮತ್ತೆಎನ್ನುತ್ತಿದ್ದವಳ ಮೇಲೆ ಫಿಲಿಪನಿಗೆ ಅಕ್ಕರೆ ಮೂಡಿತು. 'ಎಂತದಾ ಹೇಳ್ಬೇಕಂತ ಇದ್ದಿ, ಅಲ್ವ ಮಮ್ಮಿ, ಎಂತ ನನ್ನ ಹತ್ರ ನಾಚಿಕೆಯಾ ನಿಂಗೆ' ಎಂದ. ಕದ್ದು ಸಿಕ್ಕಿಬಿದ್ದವಳಂತೆ "ಹೆಹೆ, ನೀ ಬಾರಿ ಹುಷಾರು, ಹೇಗೆ ಕಂಡು ಹಿಡಿದೇ ನೋಡು" ಎಂದು ಕ್ಷಣಕಾಲ ಸುಮ್ಮನಿದ್ದು, "ಮೊನ್ನೆ ತಂಗಿ ಹೇಳಿದನ್ನ ನೀನು ಮರೆತಿಲ್ಲ ಅಲ್ವೆನಾ" ಎಂದಳು. ಮತ್ತೊಂದಷ್ಟು ಹೊತ್ತು ಬಿಟ್ಟು, "ದೊಡ್ಡ ವಿಷಯ ಎಂತ ಇಲ್ಲವಾ. ಅವಳು ಗಂಡನೊಂದಿಗೆ ಮಸ್ಕತ್ತಿಗೆ ಹೋಗಿ ಬಿಸಿನೆಸ್ ಮಾಡ್ವಾ ಅಂತ ಇದ್ದದ್ದು ಗೊತ್ತಲ್ಲ? ಅವನಿಗೆ ಎಂತದಾ ಸಾಲವಂತೆ. ಅವನ ಮನೆಯದ್ದು ಗೊತ್ತಲ್ಲ, ಖಾಲಿ ಕೈ! ಅವಳ ನಾವು ಕೊಟ್ಟ ಪಾಲಿನದ್ದನ್ನೂ ಗಿರವಿಯಿಟ್ಟಾಗಿದೆ. ಈಗ ಪೀಣ್ಯದ ಸೈಟನ್ನ ಮಾರಿ ಕೊಡೀ, ಸಾಲ ತೀರ್ತದೆ, ಊರಿಗೆ ಹೋಗ್ಲಿಕ್ಕೆ ಆಗ್ತದೆ ಅಂತ ಒಂದೇ ಹಠ ಅವಳದ್ದು" ಎಂದಳು. ಸ್ವಲ್ಪ ವಿರಮಿಸಿ "ಅದಕ್ಕೆ ನಿನ್ನ ಅಪ್ಪ, ‘ಅದನ್ನ ಕ್ರಯಕ್ಕೆ ಕೊಡ್ಲಿಕ್ಕೆ, ಫಿಲಿಯನ್ನೂ ಒಂದು ಮಾತು ಕೇಳಬೇಕು, ಅವನ ಸೈನ್ ಬೇಕು, ಕೇಳ್ಲಿಕ್ಕೆ ಬೇಜಾರಾಗ್ತದೆ’, ಅಂತ ಉದಾಸೀನ ಮಾಡಿಬಿಟ್ರು. ಆಗಿಂದ ಅವಳಿಗೆ ತಲೆ ಬಿಂಗ್ರಿಯಾಗಿದೆ. ಅವ ನಿಮ್ಮ ಮಗ ಅಲ್ಲ, ಅವನನ್ನೇನು ಕೇಳುದು ಅಂತ ರಗಳೆಅವಳು ಗೊತ್ತಲ್ಲ! ಮಹಾ ಸೂಟೆ!" ಎಂದು ಸುಮ್ಮನಾದಳು. ಇವನು ಮೌನವಾಗಿದ್ದನ್ನು ನೋಡಿ, “ದೇವರಾಣೆ ಮಗ, ನಾವು ಯಾವತ್ತೂ ನಿನ್ನ ಬೇರೆ ಅಂತ ನೋಡಿಲ್ಲ! ಈ ಮಕ್ಕಳ ಜಗಳದಲ್ಲಿ ನಾವು ಸಾಯಬೇಕು' ಎಂದು ಬಿಕ್ಕತೊಡಗಿದಳು. ಕೂಡಲೇ, ", ಎಂತ ಮಮ್ಮೀ ಹೀಗೆಲ್ಲ ಮಕ್ಕಳ ಹಾಗೆ" ಎಂದು ಅವಳನ್ನು ಸಮಾಧಾನ ಮಾಡಿದನು.

ಮಮ್ಮಿಯನ್ನು ಕಳುಹಿಸಿ ಬಾಲ್ಕನಿಗೆ ಬಂದವನಿಗೆ ಎಡ್ವಿನಾಳ ಬಗ್ಗೆ ಪಾಪ ಎನಿಸಿತು. ನಾನು ಮದುವೆಯಾದರೆ ತನಗೆ ಕಷ್ಟವಾದೀತು ಎಂಬ ಯೋಚನೆ ಅವಳಲ್ಲಿ ಮೂಡಿ ಬಿಟ್ಟಿತೇ? ಎನಿಸಿ ಖೇದವಾಯಿತು. ನಿನ್ನೆಯವರೆಗೂ ಎರಡು ಹೆಜ್ಜೆಯಿಟ್ಟರೂ ಎಡವಿಕೊಂಡು ಬೀಳುವ ಮಗುವಾಗಿದ್ದವಳು ಏಕಾಏಕಿ ಬೆಳೆದು ಪಕ್ಕಾ ವ್ಯವಹಾರಸ್ತೆಯಂತೆ ನಡೆದುಕೊಳ್ಳತೊಡಗಿದ್ದಾಳೆಂಬುದು ನಗು ತರಿಸಿತು, ಸಂಕಟವೂ ಆಯಿತು. ಎಳವೆಯುದ್ದಕ್ಕೂ ಬೆನ್ನಿಗಂಟಿಕೊಂಡೇ ಬೆಳೆದ ಕಂದ, ಯಾವ ಮಾಯದಲ್ಲಿ ದೊಡ್ಡ ಹೆಂಗಸಿನಂತೆ, ತಾನು, ತನ್ನ ಗಂಡ, ತನ್ನ ಜಗತ್ತು, ತನ್ನ ಮನೆ, ಸಂಸಾರ ಎಂದೆಲ್ಲ ಯೋಚಿಸಲು ಕಲಿತಳು? ಶಾಲೆಯಿಂದ ಹಿಂದಿರುಗುವಾಗ ಮಳೆ ಸುರಿದರೆ, ವ್ಯಾನಿಟೀ ಬ್ಯಾಗನ್ನು ಅಡ್ಡ ಹಿಡಿದು ಓಡುವ ಮಮ್ಮಿಯ ಹಿಂದೆ ಒಂದೇ ಕೊಡೆಯಡಿಯಲ್ಲಿ ಬೆದರಿದ ಬೆಕ್ಕಿನ ಮರಿಗಳಂತೆ ಒಬ್ಬರಿಗೊಬ್ಬರು ಅಂಟಿಕೊಂಡು ನಡೆಯುತ್ತಿದ್ದ ಅಂದಿನ ನಾವು ಎಲ್ಲಿ ಹೋದೆವು, ಎಂದೆಲ್ಲ ಯೋಚಿಸಿ ಖಿನ್ನನಾದ.

ಮೊದಲಿನಿಂದಲೂ ತಂಟೆಕೋರಿಯಾಗಿಯೇ ಇದ್ದು, ಎಲ್ಲವನ್ನೂ ಉದ್ಧಟ ವ್ಯಂಗ್ಯದಿಂದಲೇ ನೋಡುತ್ತಿದ್ದ ಎಡ್ವಿನಾಳಲ್ಲಿ ದುಷ್ಟತನವಿರಲಿಲ್ಲ. ಎಷ್ಟೇ ಕಿತ್ತಾಡಿಕೊಂಡರೂ ಕೊನೆಗೆ ಕೆಟ್ಟ ಜೋಕೊಂದನ್ನು ಒರಟೊರಟಾಗಿ ಹೇಳಿ ತನ್ನನ್ನು ನಗಿಸಿ ಎಲ್ಲ ತಳಿಯಾಗಿಸುತ್ತಿದ್ದವಳನ್ನು ಸಣ್ಣ ಮನಸ್ಸಿನ ಹೆಂಗಸಾಗಿ ಬದಲಾಯಿಸಿದ ಬದುಕಿನ ಕಷ್ಟವಾದರೂ ಎಂತಹುದ್ದಿರಬಹುದು?. ಮರುಕ್ಷಣವೇ, ಎಡ್ವಿನಾಳ ನಡವಳಿಕೆಗೂ, ತನ್ನ ಯೋಚನೆಗಳಿಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ ಎನಿಸಿತು. ತನ್ನ ತಂಗಿ ಒಂದು ರೀತಿಯಲ್ಲಿ ತಾನು ತನ್ನದು ಎಂದು ಗುದ್ದಾಡುತ್ತಿದ್ದರೆ, ತಾನೂ ಮತ್ತೊಂದು ಬಗೆಯಲ್ಲಿ ಅದನ್ನೇ ಮಾಡುತ್ತಿದ್ದೇನಲ್ಲ? ತನ್ನ ಮನಸ್ಸಿನಲ್ಲಿರುವ ಸ್ವಂತ ತಾಯಿ, ನನ್ನ ಸುಮಿ, ನನ್ನ ಮದುವೆ, ಪ್ರಪಂಚ, ಎಂಬೆಲ್ಲ ಪದಪುಂಜಗಳಿಗೂ, ಎಡ್ವಿನಾಳ ನನ್ನ ಅಮ್ಮ, ಸ್ವಂತ ಅಪ್ಪ, ನನ್ನ ಮನೆ, ಎಂಬ ಶಬ್ದಗಳಿಗೂ ಸಾಮ್ಯವಿದೆ ಎನಿಸಿತು. ತಮ್ಮ ತಮ್ಮದೇ ಲೋಕದ ಅನ್ವೇಷಣೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ತಮ್ಮಿಬ್ಬರ ನಡುವಿನ ನಿರ್ವಾತದಂತಹ ಬಿಂದುವಿನಲ್ಲಿ ನಿಂತ ಮಮ್ಮಿ, ಮತ್ತು ಅವಳ ಆ ಅವಸ್ಥೆಯನ್ನು ಅಸಹಾಯಕನಾಗಿ ನೋಡುತ್ತಿರುವ ಅಪ್ಪನ ಚಿತ್ರ ಮನಸ್ಸಿನಲ್ಲಿ ಮೂಡಿತು.

ಬೆಳಗ್ಗೆ ಎದ್ದು ಎಡ್ವಿನಾಳನ್ನು ಹುಡುಕುತ್ತಾ ಅಡುಗೆ ಮನೆಗೆ ಹೋದಾಗ ಪ್ಲಂ ಕೇಕಿನ ಹುಳಿ ಮಿಶ್ರಿತ ಸಿಹಿ ಪರಿಮಳ ಬಂತು, ಬೆನ್ನಿಗೇ ಮೀನಿನ ಕಟುವಾದ ಘಮವೂ ಸೇರಿಕೊಂಡಿತು. ಯಾರೂ ಇಲ್ಲದಿದ್ದಾಗ ಫ್ರಿಜ್ಜಿನಿಂದ ಕೇಕು ಕದ್ದು ತಿನ್ನುವ ಎಡ್ವಿನಾಳ ಚಿತ್ರ ಕಣ್ಣೆದುರು ಮೂಡಿ ನಕ್ಕ. ಮೆಟ್ಟುಗತ್ತಿಯ ಮೇಲೆ ಅಮ್ಮನಂತೆಯೇ ಕುಳಿತು ಮಧ್ಯಾಹ್ನಕ್ಕೆ ಮೀನು ಸ್ವಚ್ಛ ಮಾಡುತ್ತಿದ್ದವಳ ಪಕ್ಕದಲ್ಲಿ ಸ್ಟೂಲೆಳೆದುಕೊಂದು ಕುಳಿತು, "ಎಂತದೇ, ಪ್ಲಂ ಕೇಕ್ ಫ್ಲೇವರಿನ ಮೀನಾ" ಎಂದನು. ತಮಾಷೆ ಸಾಕೆನಿಸಿ "ವಿಷಯ ನೇರ ಹೇಳಿದ್ರೆ ಆಗ್ತಿತ್ತಲ್ಲ ಮಾರಾಯ್ತಿ! ಯೋಚೆನೆ ಬೇಡ! ಅದೆಂತದೋ ಸೈನು ಮಾಡಬೇಕಂತಲ್ಲ? ಎಲ್ಲ ಮಾಡ್ವ ಆಯ್ತ!" ಎಂದು ಅವಳ ಹೆಗಲ ಮೇಲೆ ಕೈಯಿಟ್ಟನು. ಇಲ್ಲಿವರೆಗೆ ಅವನನ್ನೇ ದಿಟ್ಟಿಸಿ ನೋಡುತ್ತಿದವಳು ಕಣ್ಣು ಕೆಳಗಿಳಿಸಿ "ಬಂಗುಡೆ ಸುಖ ಇಲ್ಲ! ಮೀನು ಆರಿಸ್ಲಿಕ್ಕೆ ಬರುದಿಲ್ಲ ನಿನಗೆ" ಎಂದು ಕೆಲಸ ಮುಂದುವರೆಸಿದಳು. ಎಂದಿನ ಉದ್ಧಟತನದ ವರಸೆಗೆ ಮರಳಿದಳಲ್ಲ ಸಧ್ಯ! ಎಂದುಕೊಂಡು ಹೊರಬಂದ.

ಮಮ್ಮಿಯನ್ನು ಹುಡುಕಿಕೊಂಡು ಅಂಗಳಕ್ಕೆ ಬಂದಾಗ, ಅವಳು ಕುಕ್ಕರುಗಾಲಿನಲ್ಲಿ ಕುಳಿತು ಸಂಪಿನ ಹತ್ತಿರದ ಗುಲಾಬಿ ಹೂವಿನ ಗಿಡಗಳ ರೆಂಬೆಗಳನ್ನು ಕತ್ತರಿಸುತ್ತಿದ್ದಳು. ನಾಲಿಗೆ ತುಸುವೇ ಮುಂಚಾಚಿ ಅತ್ಯಂತ ನಾಜೂಕಾಗಿ ಕತ್ತರಿಯಾಡಿಸುತ್ತಿದ್ದವಳು ಇವನನ್ನು ಕಂಡಿದ್ದೇ ಎನಾಯ್ತು ಎಂದು ಹುಬ್ಬೇರಿಸಿದಳು, ಎಲ್ಲ ಸರಿಯಾಗಿದೆ ಎಂದು ತಲೆಯಾಡಿಸಿದವ, ಮತ್ತೆ ಏನೋ ಹೊಳೆದವನಂತೆ "ಅಪ್ಪನಿಗೆಂತ ನಾನಂದ್ರೆ ಭಯವ ಮಮ್ಮಿ! ಸೈಟಿನ ಬಗ್ಗೆ ಕೇಳಿಕ್ಕೆ?" ಎಂದು ಕೇಳಿದ. ಪ್ರಯಾಸಪಟ್ಟು ಮೇಲೆದ್ದು ಪಕ್ಕ ಬಂದು ಕುಳಿತು 'ಭಯ ಅಲ್ವಾ! ಪಾಪ ಪ್ರಜ್ಞೆ, ನಿನ್ನ ಪಾಲಿಗೆಂತ ಇರಿಸಿರುವ ಸೈಟಲ್ಲವಾ ಅದು, ಅದನ್ನೂ ಕೊಟ್ಟುಬಿಟ್ರೆ, ನಿನಗೆಂತ ಮಾಡಲಿಲ್ಲ ಅಂತ ಆಗ್ತದಲ್ಲ ಅಂತ ಅವರಿಗೆ!" ಎಂದಳು. ಮೌನವಾಗಿ ಕುಳಿತಿದ್ದವನ ಹೆಗಲಿನ ಮೇಲೆ ಮೆಲ್ಲ ತಟ್ಟಿ, "ಮನಸ್ಸಿನಲ್ಲಿ ಪ್ರೀತಿ ಇರ್ತದೆ, ಆದರೆ ಸರಿಯಾಗಿ ಹೇಳ್ಲಿಕ್ಕೆ ಆಗಲ್ಲ ಅವರಿಗೆ..... ನೀ ಸ ಹಾಗೆಯೇ ಫಿಲೀ" ಎಂದು ಎದ್ದು ಒಳ ಹೋದಳು. ಸ್ವಲ್ಪ ಹೊತ್ತಿಗೆ ಕಾಫಿಯ ಮಂದ ಸುಗಂಧ ತೇಲಿಬಂತು. ಮಧ್ಯಾಹ್ನ ಸುಮಿಯನ್ನು ಕಾಣಲು ಹೊರಟಾಗ ಮಮ್ಮಿ ಹೆಂಚು ದಿಟ್ಟಿಸುತ್ತಾ ದಿವಾನದ ಮೇಲೆ ಕಾಲು ಚಾಚಿ ಮಲಗಿ ರೇಡಿಯೋದಲ್ಲಿ ಆಪ್ ಕೀ ಫರ್ಮಾಯಿಶ್ ಕೇಳುತ್ತಿದ್ದಳು, ನೆಲದ ಮೇಲೆ ದೀವಾನಕ್ಕೊರಗಿ ಕುಳಿತಿದ್ದ ಅಪ್ಪ ಪುಟ್ಟದಾಗಿ ಮಡಚಿದ್ದ ಪತ್ರಿಕೆಯಲ್ಲಿ ಪದಬಂಧ ಬಿಡಿಸುತ್ತಿದ್ದರು. ಇದನ್ನು ನೋಡಿದವನಿಗೆ ಹಿಂದಿನ ಸಂಜೆ ಇವರಿಬ್ಬರ ಮತ್ತು ತಮ್ಮಿಬ್ಬರ ಬಗ್ಗೆ ಎನಿಸಿದ್ದನ್ನು ಸುಮಿಯೊಂದಿಗೆ ಹಂಚಿಕೊಳ್ಳುವ ಉಮೇದು ಹೆಚ್ಚಾಯಿತು.  

ಸಿಮೆಟ್ರಿಯೆದುರು ಬಂದವನಿಗೆ, ಹೊಸೂರು ರಸ್ತೆಯ ಅತಿವೇಗದ ಕರ್ಕಶ ಜಗತ್ತಿನ ಪಕ್ಕದಲ್ಲೇ ಇಂಥಾ ಪರಿ ಮೌನ ಹೊದ್ದ ಜಾಗೆಯೊಂದಿದೆ ಎಂಬುದು ಮಜವೆನಿಸಿತು. ಒಳ ಹೋಗದೆ, ಮೂಲೆಯಲ್ಲಿ ಬಿದ್ದುಕೊಂಡಿದ್ದ ಮರದ ದಿಮ್ಮಿಯ ಮೇಲೆ ಕುಳಿತು ಸುಮಿಯುನ್ನು ಕಾಯುತ್ತಿದ್ದವ, ಏನೋ ಕಾಣಿಸಿದವನಂತೆ ಎದ್ದು ಸ್ಮಶಾನದೊಳಗೆ ನಡೆದ. ಗೋರಿಗಳ ಸಾಲುಗಳ ನಟ್ಟ ನಡುವಿನಲ್ಲಿದ್ದ ಟಬೂಬಿಯಾ ಮರದಲ್ಲಿ ಒಂದು ಹಸಿರೆಲೆಯೂ ಕಾಣಿಸದಷ್ಟು ಒತ್ತೊತ್ತಾಗಿ ತಿಳಿ ಗುಲಾಬಿ ಬಣ್ಣದ ಹೂವುಗಳರಳಿದ್ದವು. ಸ್ವಚ್ಛ ನೀಲಿ ಆಕಾಶ ಮತ್ತು ಮಧ್ಯಾಹ್ನದ ಬಿಸುಲಿಗೆ ಹೊಳೆಯುತ್ತಿದ್ದ ಹಸುರೆಲೆಗಳ ಹಿನ್ನೆಲೆಯಲ್ಲಿ ಅವು ಮತ್ತಷ್ಟು ಮುದ್ದಾಗಿ ಕಾಣಿಸುತ್ತಿದ್ದುವು. ಅಕ್ಕಪಕ್ಕ ತಿರುಗಿದಾಗ ಹಳದಿ, ನೇರಳೆ, ಬಿಳುಪಿನ ಹೂವುಗಳನ್ನು ಹೊದ್ದು ನಿಂತಿದ್ದ ಎತ್ತರದ ಮರಗಳೂ ಹೀಗೇ ಕಾಣಿಸಿದುವು, ಮುಗಿಲ ಮಲ್ಲಿಗೆ ಹೂವುಗಳ ಅಸ್ಪಷ್ಟ ನರುಗಂಪು ಎಲ್ಲೆಲ್ಲೂ ಇತ್ತು. ಇದೆಲ್ಲ ತನಗೆ ಮೊದಲು ಬಂದಾಗಲೇ ಏಕೆ ಕಾಣಲಿಲ್ಲವೆಂದುಕೊಂಡ ಕ್ಷಣಕ್ಕೆ ಫಿಲಿಪನಿಗೆ ತಾನು ನಿರಾಸೆ ಮತ್ತು ವಸಂತ ಎಂಬ ವಿರುದ್ಧ ಬಿಂದುಗಳ ನಡುವಿನ ಸಂದಿಗ್ಧ ಸ್ಥಳದಲ್ಲಿ ನಿಂತಂತೆ, ಅವುಗಳಲ್ಲಿ ತಾನು ಯಾವುದನ್ನು ಆರಿಸಿಕೊಳ್ಳುತ್ತೇನೆ ಎಂಬುದರ ಮೇಲೆ ತನ್ನ ಮುಂದಿನ ಬದುಕೂ ನಿಂತಿರುವಂತೆ ಭಾಸವಾಯಿತು. ಅವನ ಎಡಬದಿಯಲ್ಲಿದ್ದ ಗೋಡೆಯ ಉದ್ದಕ್ಕೂ ದಟ್ಟವಾಗಿ ಹರಡಿದ್ದ ಕಡುಹಸಿರು ಬಳ್ಳಿಯನ್ನು ತುಂಬಿಕೊಂಡಿದ್ದ ಗಾಢ ಕೇಸರಿ ಬಣ್ಣದ ಉದ್ದುದ್ದ ಹೂವುಗಳ ಮೇಲೆ ಬಿಸಿಲು ಬಿದ್ದು ಫಕ್ಕನೇ ನೋಡಿದವರಿಗೆ ಕಂಪೌಂಡಿನ ಬದಿಯಲ್ಲಿ ಬೆಂಕಿ ಉರಿಯುತ್ತಿದ್ದಂತೆ ಕಾಣುತ್ತಿತ್ತು. ಯಾವಾಗಲೋ ಬಂದು, ಕಂಪೌಂಡಿನ ಬಲ ಕೊನೆಯಲ್ಲಿದ್ದ ಗಸಗಸೆ ಹಣ್ಣಿನ ಗಿಡ್ಡ ಮರದ ನೆರಳಿನಲ್ಲಿ ನಿಂತಿದ್ದ ಸುಮೀ, 'ಏ ಫಿಲೀ, ಹಣ್ಣು ಕಿತ್ತು ಕೊಡು ಬಾರೋ" ಎಂದು ಕೂಗಿ ಕರೆದಳು. ಎತ್ತರೆತ್ತರದ ಮರಗಳು ಚೆಲ್ಲಿದ್ದ ನೆರಳನ್ನು ಸೀಳಿಕೊಂಡು ಬರುತ್ತಿದ್ದ ಬಿಸಿಲಿನಲ್ಲಿ ಸ್ನಾನ ಮಾಡುತ್ತಾ ಧೂಳು ಕವಿದ ಮಬ್ಬು ಹಸಿರು ಪಾಚಿಹೊದ್ದು ಮಲಗಿದ್ದ ಗೋರಿಗಳ ಸಾಲುಗಳನ್ನು ದಾಟಿಕೊಂಡು ಸುಮಿಯ ಬಳಿ ಹೋದ ಫಿಲಿಪ್, ಮರದ ಕೊಂಬೆಯೊಂದನ್ನು ಎಡಗೈಯಿಂದ ಕೆಳಗೆಳೆದು ಗುಲಾಲಿ ಬಣ್ಣದ ಪುಟ್ಟಪುಟ್ಟ ಮುದ್ದಾದ ಗಸಗಸೆ ಹಣ್ಣುಗಳನ್ನು ಕಿತ್ತು ಕಿತ್ತು ಅವಳು ಮುಂದೊಡ್ಡಿದ್ದ ಸಲ್ವಾರಿನ ಸೆರಗಿನ ತುಂಬ ಸುರಿಯ ತೊಡಗಿದ.