Click here to Download MyLang App

ಕಂತೆ ಕಂತೆ ಹಣ ಸಿಕ್ಕಾಗ : ರಾಜೇಂದ್ರ ಕುಮಾರ್ ಗುಬ್ಬಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ |

ಕಂತೆ ಕಂತೆ ಹಣ ಸಿಕ್ಕಾಗ.......

ಓದುತ್ತಾ.......ಓದುತ್ತಾ......ಕುತೂಹಲ

       ಎಂದಿನಂತೆ ಸಂಜೆ ಐದು  ಗಂಟೆಯ ಸಮಯಕ್ಕೆ ನಮ್ಮ ಮನೆಯಿಂದ ಒಂದು ಕಿ. ಮೀ. ದೂರದಲ್ಲಿರುವ ಉದ್ಯಾನವನಕ್ಕೆ ವಾಯು ವಿಹಾರಕ್ಕೆಂದು ಹೋಗುವುದು ವಾಡಿಕೆ, ಜೊತೆಗೆ ನನ್ನ ಸ್ನೇಹಿತ

ಕಲ್ಲೂರಯ್ಯ ಬೇರೆ..... ರಾತ್ರಿ ಏಳರವರೆಗೂ ಅಲ್ಲಿಯ ಕೆಲವು ಸಮಾನಮನಸ್ಕ ಗೆಳೆಯರೊಡನೆ ಹರಟೆ, ಹಾಸ್ಯ, ರಾಜಕೀಯ ವಿಷಯಗಳ ಚರ್ಚೆ ನಡೆಸಿ ಹಿಂತಿರುಗಿ ಬರುವಾಗ ಅಲ್ಲೊಂದು ಬಜ್ಜಿ ಸೆಂಟರ್ನಲ್ಲಿ. ಒಂದೆರಡು ಬಿಸಿ ಬಿಸಿ ಬಜ್ಜಿ, ಒಂದರ್ಧ ಫಿಲ್ಟರ್ ಕಾಫಿ ಸೇವಿಸಿ ಬರೋದು .......ಈಗ್ಗೆ ಐದಾರು ವರ್ಷಗಳಿಂದಲೂ ನಡೆದುಕೊಂಡು ಬಂದ ಪದ್ಧತಿ.

       ಈ ಕೊರೋನ ಸಮಯದಲ್ಲಿ ಸ್ವಲ್ಪ ಈ ಪದ್ದತಿ ಏರುಪೇರಾಗಿದ್ದು ನಿಜ, ಈಗ ಒಂದೂವರೆ ವರ್ಷದಿಂದ ಯಥಾಪ್ರಕಾರ ಸಾಂಗವಾಗಿ ನಡೆದುಕೊಂಡು ಬರುತ್ತಿದೆ,  ಈಗಂತೂ ಉದ್ಯಾನವನದಲ್ಲಿ ಕೇವಲ ರಾಜಕೀಯದ್ದೇ ಮಾತುಕತೆಗಳು, ಚರ್ಚೆಗಳು, ಅವರು ಹೀಗಂದ್ರು, ಇವರು ಹಾಗಂದ್ರು , ಇವನು ಈಬಾರಿ  ಗೆದ್ದೇಗೆಲ್ತಾನೆ, ಅವನಿಗೆ ಈ ಬಾರಿ ಸೋಲು ಗ್ಯಾರಂಟಿ, 

ಇವರಿಗೆ ಖಂಡಿತಾ ಇಷ್ಟು ಓಟು ಬೀಳುತ್ತದೆ, ಅವರಿಗೆ ಟಿಕೆಟ್ ಇಲ್ಲ, ಇವರು ಆ ಪಕ್ಷಕ್ಕೆ‌ಹೋಗ್ತಾರಂತೆ, ಈಬಾರಿ ಇದೇ ಪಕ್ಷ ಅಧಿಕಾರಕ್ಕೆ ಬರೋದು......ಇವರದೇ ಸರ್ಕಾರ, ಮತ್ತೆ ಡಬಲ್ ಇಂಜೆನ್ ಸರ್ಕಾರ,  ಇಲ್ಲ ಅತಂತ್ರ ಸ್ಥಿತಿ, ಅವರೇ ಮುಖ್ಯಮಂತ್ರಿ, ಇವರೇ ಗೃಹಮಂತ್ರಿ, ಹಾಗೇ...ಹೀಗೆ.....ಇದೇ ಮಾತುಗಳು.

        ಸರಿ  ಈ ಮೂರು ದಿನಗಳ ಹಿಂದೆ ರಾಜ್ಯದ ಚುನಾವಣೆ ಘೋಷಣೆಯಾಯ್ತಲ್ವಾ.......ಅದರ ಮರುದಿನ........ಎಂದಿನಂತೆ ಉದ್ಯಾನವನಕ್ಕೆ ಹೋದೆವು ನಾನು ಹಾಗೂ ಸ್ನೇಹಿತ ಕಲ್ಲೂರಯ್ಯ, ‌ಎಲ್ಲಾ ಮುಗಿದ ನಂತರ, ರಾತ್ರಿ ಏಳರ ಸಮಯ, ಅಂದು, ಅವನು ರಾತ್ರಿಯಾಗುತ್ತಲೇ , ನನಗೆ ಬೇರೆ ಸ್ವಲ್ಪ ಕೆಲಸವಿದೆಯೆಂದು ಹೇಳಿ ಉದ್ಯಾನವನದಿಂದ ನೇರವಾಗಿ ಮನೆಗೆ ಬಾರದೆ ಹಾಗೇ ಹೊರಟುಹೋದನು.

   ಈಗ್ಗೆ ಒಂದು ತಿಂಗಳಿನಿಂದಲೂ ಪೊಲೀಸಿನವರು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯಲ್ಲಿ, ಮುಖ್ಯ ರಸ್ತೆಗಳಲ್ಲಿ, ಚೆಕ್ ಪೋಸ್ಟ್, ಬ್ಯಾರಿಕೇಡ್ ಗಳನ್ನು ಹಾಕಿ, ಈ ಚುನಾವಣೆಯಲ್ಲಿ, ಒಂದು  ಸ್ಥಳದಿಂದ ಮತ್ತೊಂದು

 ಸ್ಥಳಕ್ಕೆ,  ವಾರಸುದಾರರಿಲ್ಲದ, ದಾಖಲೆ ಇಲ್ಲದ  ಹಣ, ಚಿನ್ನ, ಇತರೆ ಉಡುಗೊರೆಗಳನ್ನು ತುಂಬಾ  ಸಾಗಿಸುತ್ತಿದ್ದಾರೆ......ಎಂದು ತುಂಬಾ ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಿದ್ದರು, ಈಗ ಚುನಾವಣೆ ಘೋಷಣೆಯಾಗಿದ್ದೇ ತಡ, ಮತ್ತಷ್ಟು ಬಿಗಿ ಕ್ರಮಗಳನ್ನು ಕೈಕೊಂಡು, ಕೋಟ್ಯಾಂತರ ಹಣ, ಮದ್ಯ, ಚಿನ್ನ, ಬೆಳ್ಳಿ, ನಾನಾ ರೀತಿಯ ಉಡುಗೊರೆ ಬಾಕ್ಸ್  ಗಳನ್ನು ವಶಪಡಿಸಿಕೊಂಡರೂ, ಗಲ್ಲಿ ಗಲ್ಲಿಗಳಲ್ಲಿ,  ರಸ್ತೆಗಳಲ್ಲಿ ಸಹ ತಪಾಸಣೆ ಹೆಚ್ಚಿದಂತೆ ಸಾಗಿಸುವವರಿಗೂ ಎದೆಯಲ್ಲಿ ನಡುಕ ಹೆಚ್ಚಿ , ಈ ಸಾಗಿಸುವ ಕೆಲಸಗಾರರಲ್ಲೂ ಇಂಥಾ ಸಮಯದಲ್ಲಿ ಸ್ವಲ್ಪ ಹಣ ಮಾಡಿಕೊಳ್ಳುವ ಬುದ್ದಿವಂತರು ಇರ್ತಾರೆ. ಅವರ ಮಾಲೀಕರು  ಐದಾರು ಬ್ಯಾಗ್, ಅಥವಾ ಲಕ್ಷಾಂತರ ಹಣ ಕೊಟ್ಟು ಕಳಿಸಿದರೆ , ಸೇರುವವರಿಗೆ ಅದರಲ್ಲಿ ಅರ್ಧವೇ ಸೇರುವುದು, ಅದನ್ನು ಈ ಮಧ್ಯವರ್ತಿಗಳು ತಮ್ಮ ಕೈಚಳಕ ತೋರಿಸಿ,   ಅವರೂ ಸ್ವಲ್ಪ ಹಣ ಮಾಡಿಕೊಳ್ತಾರೆ, ಯಾರದೋ ದುಡ್ಡು ಮತ್ಯಾರದೋ ಜಾತ್ರೆ......ಎನ್ನುವಂತೆ.

     ಅದರಂತೆ  ನೆನ್ನೆಯ ಸಂಜೆ ವಾಯುವಿಹಾರ, ಬಜ್ಜಿ, ಕಾಫಿ,  ಸೇವಿಸಿ, ಸ್ನೇಹಿತನಾದ ಕಲ್ಲೂರಯ್ಯ ನನ್ನು ಅತ್ತ ಬೀಳ್ಕೊಟ್ಟು, ನಾನು ಮನೆಯ ಕಡೆ ಒಬ್ಬನೇ ನಡೆದು

 ಬರುತ್ತಿದ್ದೆ, ಆ ರಸ್ತೆಯಲ್ಲಿ ಜನರ ಓಡಾಟ ತುಂಬಾ ಕಡಿಮೆ, ನಿರ್ಜನ ಪ್ರದೇಶ ಹಾಗೂ ರಸ್ತೆಯಲ್ಲಿ ಬೀದಿದೀಪದ ಕಂಬಗಳು ಇದ್ದರೂ ಲೈಟು ಮಾತ್ರ ಇರದೆ, ತುಂಬಾ ಕತ್ತಲಿನ ಸನ್ನಿವೇಶ ಏರ್ಪಟ್ಟಿತ್ತು, ಕೇವಲ ವಾಹನಗಳ ಓಡಾಟ ಮಾತ್ರ ಹೆಚ್ಚಿತ್ತು, ಅದೂ ಅಲ್ಲದೆ ಆ ರಸ್ತೆಯ ಒಂದು ಭಾಗದಲ್ಲಿ ತುಂಬಾ ಗಿಡ, ಮರಗಳು ಬೆಳೆದು......ಒಂದು ರೀತಿಯ ಕಾಡಿನ ನಡುವೆಯ ಹಾದಿಯಂತಾಗಿತ್ತು,  ನಾನು ನನ್ನ ಮನೆ ತಲುಪಲು ಆ ದಾರಿಯಿಂದಲೇ ಹೋಗಬೇಕು, ಆ ಕತ್ತಲು ಹಾದಿ ದಾಟಿದ  ನಂತರ ನನ್ನ ಮನೆ .

       ಸರಿ ನಾನು ಬರಬರನೇ ಬರುತ್ತಿರುವೆ, ಆಗ ಸುಮಾರು ಐನೂರು ಅಡಿಗಳಿಗಿಂತಲೂ ದೂರದಲ್ಲಿದ್ದೇನೆ ನಾನು, ಅಷ್ಟರಲ್ಲಿ ಅನತಿ ದೂರದಲ್ಲಿ ಒಂದು ಹಳದಿ ಬೋರ್ಡ್ ಇದ್ದ ಒಂದು ಬಿಳಿಬಣ್ಣದ ಕಾರು ವೇಗವಾಗಿ ನನ್ನ ಮುಂದೆಯೇ ಹೋಗಿ ಅಷ್ಟು ದೂರದಲ್ಲಿ ನಿಂತಿತು, ಆ ರಸ್ತೆಯಲ್ಲಿ, ಆ ಜಾಗದಲ್ಲಿ ಯಾವುದೇ ವಾಹನ ನಿಲ್ಲುವುದಿಲ್ಲ, ಅದು ನನಗೂ ತಿಳಿದಿತ್ತು, ಆದರೆ ಆ ಕಾರು ನಿಲ್ಲುತ್ತಿದ್ದಂತೆ 

ನನಗೂ ಕುತೂಹಲ ಹೆಚ್ಚಾಗಿ ಅದರ ಕಡೆಯೇ ನನ್ನ ದೃಷ್ಟಿ ಹೋಯಿತು, ಆದರೆ ಅದರಲ್ಲಿದ್ದವರಿಗೆ ಆ ಕತ್ತಲಿನಲ್ಲಿ ನಾನು ಆಗಲೀ ಬೇರೆಯವರಾಗಲೀ

 ಕಾಣುತ್ತಿರಲಿಲ್ಲ , ಅವರಿಗೆ ಅದು ಬೇಕೂ ಇರಲಿಲ್ಲ ತುಂಬಾ ಆತುರಾತುರವಾಗಿದ್ದರು.

      ನಾನೂ ಆ ಕಾರನ್ನು ಹಾಗೂ ಅದರಲ್ಲಿದ್ದವರನ್ನು ಗಮನಿಸುತ್ತಲೇ ಇದ್ದೆ ಎಂದೆನಲ್ಲಾ.......ಆಗ  ಇದ್ದಕ್ಕಿದ್ದಂತೆ ಕಾರು ನಿಲ್ಲುತ್ತಿದ್ದಂತೆ ಅದರೊಳಗಿನಿಂದ ಒಬ್ಬ ಮಧ್ಯವಯಸ್ಸಿನ ಯುವಕ ಇಳಿದನು, ಕಾರಿನೊಳಗೆ ಮತ್ತು ಮೂವರಿದ್ದರು, ಇಳಿದವನ ಕೈಯಲ್ಲಿ ಒಂದು ಭಾರವಾದ ದೊಡ್ಡದಾದ ಕಾಲೇಜು ಬ್ಯಾಗು ಒಂದಿತ್ತು, ಆತ ಆ ಬ್ಯಾಗ್ ಹೊರುವ ರೀತಿ ನೋಡಿಯೇ..... ಅದರ ತುಂಬಾ ಏನೇನೋ ವಸ್ತುಗಳಿವೆ ಎನಿಸಿತು.........ನನಗೆ.

ಆ ಯುವಕನಾದರೋ ಕಾರಿನಿಂದ ಬ್ಯಾಗ್ ಸಮೇತ ಇಳಿದವನು ನೇರವಾಗಿ ಹೆದ್ದಾರಿ ಪಕ್ಕದ ಮೋರಿ ಕಾಲುವೆ ಅದರ ಪಕ್ಕದಲ್ಲಿ ಒಂದು ದೊಡ್ಡದಾದ ಮರ, ಆ ಮರದ  ಪಕ್ಕದಲ್ಲಿದ್ದ  ದೊಡ್ಡದಾದ ಕಸದ ತೊಟ್ಟಿಯೊಂದನ್ನು ಇಟ್ಟಿದ್ದರು,  ಅಲ್ಲಿಗೆ ಹೋಗಿ ಆ ಬ್ಯಾಗನ್ನು ಜೋಪಾನವಾಗಿ ಇರಿಸಿದ ನಂತರ ಸುತ್ತಲೂ ಯಾರೂ ಇಲ್ಲವೆಂದು ಅರಿತವನು ನೇರವಾಗಿ ಅವಸರ ಅವಸರವಾಗಿ ಕಾರಿನ ಬಳಿ ಬಂದವನೇ ಕಾರು ಏರಿದನು. ಆ ನಂತರ ಕಾರು ಬಂದಷ್ಟೇ ವೇಗವಾಗಿ ಬಂದ ದಾರಿಯಲ್ಲೇ ಹೊರಟುಹೋಯಿತು.

      ಈಗ ನನಗೆ ಆ ಬ್ಯಾಗಿನ ಮೇಲೆ ತಡೆಯಲಾರದಷ್ಟು ಕುತೂಹಲ, ಅದು ಚುನಾವಣೆಗೆ ಸಾಗಿಸಲೆಂದೇ ಹಣದ ಬ್ಯಾಗು ಇರಬಹುದಾ.......ಅಥವಾ ಬೇರೇನಾದರೂ ಇರಬಹುದಾ...... ಹಣವಿದ್ದರೂ ಎಷ್ಟಿರಬಹುದು......ಅಥವಾ....... ಈಗ್ಗೆ ಸ್ವಲ್ಪ ದಿನಗಳ ಹಿಂದೆ ಟಿ.ವಿ.ಯಲ್ಲಿ ತೋರಿಸಿದಂತೆ, ಆ ಬ್ಯಾಗಿನ ತುಂಬಾ ಏಳೆಂಟು ಕೆ.ಜಿ. ಚಿನ್ನದ ಬಿಸ್ಕೇಟ್ ಗಳೇನಾದರೂ ಇರಬಹುದಾ.......ಅದಾವುದೂ ಇರದೆ........ಒಂದು ಪಕ್ಷ ಯಾವುದಾದರೂ ಭಯೋತ್ಪಾದಕ ಚಟುವಟಿಕೆಯಲ್ಲೂ ಇರಿಸಿದ ಬಾಂಬ್ ಏನಾದರೂ ಇದ್ದರೆ........ ಭಗವಂತಾ.......ನಾನು ಹೋಗಿ ಅದನ್ನು ಪರಿಶೀಲಿಸುವಾಗ ಅದು ಡಂ...... ಡಂ...... ಎಂದು ಬಡಿದು, ನಾನು.........ಏನಾದರೂ ಅದಕ್ಕೆ ಬಲಿಯಾದರೆ.........ಏನೇನೋ ಊಹೆಗಳು, ಕೆಟ್ಟ ಯೋಚನೆಗಳು ನೆನಪಿಗೆ ಬಂದಂತೆ......ನನ್ನ ಹೆಂಡತಿ, ಮಕ್ಕಳು, ಸೊಸೆ, ಅಳಿಯ, ಮೊಮ್ಮಕ್ಕಳು, ಸಂಬಂಧಿಗಳು, ಗೆಳೆಯರು ಎಲ್ಲರೂ ಒಮ್ಮೆ ನನ್ನ ಕಣ್ಣಮುಂದೆ ಬಂದು ಮಾರ್ಚ್ ಫಾಸ್ಟ್ ಮಾಡಿದಂತೆ, ನನ್ನ ಕಣ್ಣುಗಳು ಕತ್ತಲೆಗೆ ತಿರುಗಿದವು, ಅಯ್ಯೋ.....ಈ ಬ್ಯಾಗು ಬೇಡ, ಅದರಲ್ಲಿರುವ ಹಣ, ಚಿನ್ನ, ಬೆಲೆಬಾಳುವ ವಸ್ತುಗಳೂ ಬೇಡ, ಬಡವಾ.......ನೀ.....

ಮಡಗ್ದಾಂಗಿರು........ಎಂದು ನನಗೆ ನಾನೇ

 ಸಮಾಧಾನ ಪಟ್ಟುಕೊಂಡು ಹಾಗೇ  ಹೊರಟು ಹೋಗಿಬಿಡೋಣವಾ......ಎಂದುಕೊಂಡೆ, ಆದರೂ......ಅದೇ ಯೋಚನೆಯಲ್ಲಿಯೇ ಆ ಕಸದ ತೊಟ್ಟಿವರೆಗೂ ನಡೆದುಬಂದೆ, ಈಗ ಎರಡು ಮನಸ್ಸುಗಳಲ್ಲಿ ನನಗೆ ........

ಒಂದು ಹೇಳಿತು, ಇದಾವುದೂ ಬೇಡ, ಹಾಗೇ ಮನೆ ದಾರಿ ಹಿಡಿದು ಹೊರಟು ಹೋಗು....... ಎಂದು.

ಮತ್ತೊಂದು ಮನಸ್ಸು ಹೇಳಿತು.......ಛೀ......ಹುಚ್ಚಾ.......ಇಂಥಾ  ಕೈಗೆ ಬಂದ ತುತ್ತು, ಅದೃಷ್ಟ ಕಳೆದುಕೊಳ್ಳುವೆಯಾ......ನಿನಗೆ ಈಗ ಅರವತ್ತು ದಾಟಿದರೂ ನಿನ್ನದು ಅಂತ ಬೆಂಗಳೂರಿನಲ್ಲಿ ಒಂದು ಸ್ವಂತದ್ದು ಮನೆ ಸಹ ಮಾಡಿಲ್ಲ, ಆಗಾಗ ನಿನ್ನ ಮಕ್ಕಳು ನಿನಗೆ ಶಾಪ ಹಾಕುತ್ತಲೇ ಇರ್ತಾರೆ......

"ನಮ್ಮ ತಂದೆ ಬೆಂಗಳೂರಲ್ಲಿ ಒಂದು ಸ್ವಂತ ಮನೆ ಮಾಡಿಲ್ಲ", ಎಂದು.......ಈಗಲಾದರೂ ಅದಾಗಿಯೇ ಬಂದ ಅದೃಷ್ಟ ಕಳೆದುಕೊಳ್ಳಬೇಡ, ಅದೇನು ಹುಂಬನಂತೆ.......ಬಾಂಬು, ಭಯೋತ್ಪಾದಕ, ಸಾವು, ಸಂಬಂಧಿಕರು,  ಹಾಗೆ, ಹೀಗೆ, ಏನೇನೋ ಬಡಬಡಿಸುತ್ತಿರುವೆ, ಈಗಲೇ ಹೋಗಿ ಆ ಬ್ಯಾಗ್ ತೆಗೆದು ಅದರಲ್ಲಿ ಏನಿದೆ ಎಂದು ನೋಡು, ಈ ಜನರೇ ಓಡಾಡದ ಏಕಾಂತ ಸ್ಥಳದಲ್ಲಿ ಅದಾವ ಭಯೋತ್ಪಾದಕ ನಿನ್ನನ್ನು ಸಾಯಿಸಲೆಂದೇ ಬಾಂಬು ಇಡಲು

 ಬರ್ತಾನೆ......ನೀನೇನು ಈ ದೇಶದ ರಾಜಕಾರಣಿಯಾ.....ಸೆಲೆಬ್ರಟಿಯಾ....... ನಿನ್ನನ್ನು ಸಾಯಿಸಿ ಅವನಿಗೇನು ಲಾಭ.......ಎಂದು ಎರಡನೇ ಮನಸ್ಸು ಹೇಳಿದಂತಾದಾಗ ನನಗೂ ಅದು ಸರಿ ಎನಿಸಿತು.

     ಹೌದು......ನಾನೂ ಈಗ ಅರವತ್ತು ಆದರೂ ಇನ್ನೂ ಬಾಡಿಗೆ ಮನೆಯಲ್ಲಿಯೇ ಇದ್ದೇನೆ, ಸಾಲಸೋಲ ಮಾಡಿ ಹೆಣ್ಣು ಮಗಳ ಮದುವೆ ಮಾಡಿದ್ದೇನೆ, ಇನ್ನು ಮಗ......ಅವನನ್ನು ವೈದ್ಯ, ವಕೀಲನನ್ನಾದರೂ ಮಾಡಿದ್ದೇನಾ.....ಅದೂ ಇಲ್ಲ, ಅವನು ಬಿ.ಎಸ್ಸಿ., ಮಾಡಿ ಯಾವುದೋ ನನ್ನ ಹಾಗೆ ಖಾಸಗಿ ಕಂಪೆನಿಯಲ್ಲಿ ಒದ್ದಾಡುತ್ತಿದ್ದಾನೆ.

        ಈ ಎರಡನೇ ಮನಸ್ಸು ಹೇಳಿದ್ದು ಸರಿಯಾಗಿಯೇ ಇದೆ, ಈಗಲೇ ಧೈರ್ಯ ಮಾಡಿ ಆ ಬ್ಯಾಗ್ ತೆಗೆದುಕೊಂಡು ಮನೆಕಡೆಗೆ ಓಡೋದೇ ಸರಿ, ಆನಂತರ ಮನೆಯಲ್ಲಿ ಹೋಗಿ, ಇದರಲ್ಲಿ ಏನಿರಬಹುದು ಎಂದು ಮನೆಯ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ತೆರೆದು ನೋಡಿದರಾಯಿತು. ಇಂಥಾ ಚುನಾವಣೆಯ ಸಮಯದಲ್ಲಿ ಅದರಲ್ಲಿ ಬೇರೇನು ಇರಲು ಸಾಧ್ಯ ಹೇಳಿ......ಇದ್ದರೆ ಅಧಿಕ ಮೊತ್ತದ ಹಣ

ಇರಲೇ ಬೇಕು.

ಎಂದು ಧೈರ್ಯ ಮಾಡಿ ಕತ್ತಲಿನಲ್ಲಿಯೇ ನಿಧಾನವಾಗಿ ಅತ್ತ ಇತ್ತ ನೋಡಿ, ಯಾರು ನನ್ನನ್ನು ಗಮನಿಸುತ್ತಿಲ್ಲ  ಎಂದು ಖಾತರಿಪಡಿಸಿಕೊಂಡು ಆ ಬ್ಯಾಗ್ ಬಳಿ ಹೋಗಿ ಬ್ಯಾಗಿಗೆ ಕೈ ಹಾಕಿದರೆ........ಅದು ಈ ಮೊದಲೇ ಕಸದ ತೊಟ್ಟಿ ಅಲ್ಲವೇ......ಅದಕ್ಕೆ ನನ್ನ ಕೈಗೆ ಏನೇನೋ ತಗುಲಿದಂತೆ ಭಾಸವಾಯಿತು, ಕೈಯೆಲ್ಲಾ ಗಲೀಜು.....ಗಲೀಜು..... ಕತ್ತಲು ಬೇರೆ

ಏನೂ ಕಾಣ್ತಿಲ್ಲ, ಒಂಥರಾ ಗಬ್ಬು ನಾರುವ ವಾಸನೆ, ಅದೂ ದನದ ಸೆಗಣಿಯಾ, ಅಥವಾ.....ಇನ್ನಾವ ಸೆಗಣಿಯಾ........ಎನಿಸಿತು, ಆದರೂ  ಕೈಗಳನ್ನು ಅದೇ ತೊಟ್ಟಿಗೆ ಒರೆಸುತ್ತಾ,  ಮತ್ತೆ ಮತ್ತೆ ಹುಡುಕಾಡಿದೆ, ಗಬ್ಬುನಾರುವ  ಕೈಗಳಲ್ಲಿ,  ಅದೇ ಕತ್ತಲಿನಲ್ಲಿ, ನನ್ನ ಮೊಬೈಲ್ ಬ್ಯಾಟರಿ ಆನ್ ಮಾಡಿ ಬೆಳಕಿನಲ್ಲಿ ನೋಡೋಣವೆಂದರೆ...... ಮತ್ತೆ ಯಾರಾದರೂ ನೋಡಿಬಿಟ್ಟರೆ......ಅಥವಾ ಆ ಕಾರನ್ನು ಹಿಂಬಾಲಿಸಿಕೊಂಡು ಯಾವುದಾದರೂ ಪೊಲೀಸಿನವರು ಗಮನಿಸುತ್ತಿದ್ದರೆ.....ಇದೇ ಆತಂಕದಲ್ಲಿ ಮೊಬೈಲ್ ಬೆಳಕು ಬೇಡ ಎಂದುಕೊಂಡು ಕತ್ತಲಿನಲ್ಲಿಯೇ ತಡಕಾಡಿದೆ.....ಆಗ ಬ್ಯಾಗಿನ ಹಿಡಿ ನನ್ನ ಕೈಗೆ ಸಿಕ್ಕಿತು, ಆ ಕೂಡಲೇ ಅದನ್ನು ಎತ್ತಿಕೊಂಡು ಹೊರಡೋಣವೆಂದರೆ.....ಆ ಬ್ಯಾಗು ನಾನು

 ಎಣಿಸಿದಂತೆ ಇರುವುದಕ್ಕೂ ಹೆಚ್ಚು ಭಾರವಾಗಿದೆ, ಮತ್ತೆ ನನಗೆ  ಆರು ತಿಂಗಳ ಹಿಂದಿನ ಒಂದು ಘಟನೆ ನೆನಪಿಗೆ ಬಂದಿತು, ಇದರಲ್ಲಿ ಹಣ, ಒಡವೆ ಬದಲಿಗೆ  ಅಬ್ಬಾ.......ಅದರಲ್ಲಿ ಯಾವುದಾದರೂ ಶವವನ್ನು ಕತ್ತರಿಸಿ ಕೈಮಾ ಮಾಡಿ ಈ ಬ್ಯಾಗಿನಲ್ಲೇನಾದರೂ ತುಂಬಿ, ತಂದು ಈ ಕಸದ ತೊಟ್ಟಿಯಲ್ಲಿ ಏನಾದರೂ ಎಸೆದು ಹೋದನಾ.......ಆ ಪಾಪಿ, ಎಂದು, ಆದರೂ ಅಖಾಡಕ್ಕೆ ಇಳಿದಾಗಿದೆ, ಈಗ ಏನಾದರೊಂದು ಆಗಲೀ ಅನುಭವಿಸಲೇಬೇಕು, ಎಂದು ಭಂಡ ಧೈರ್ಯ ಮಾಡಿ ಹೇಗೋ ಗಲೀಜಿನಿಂದಾದ  ಎರಡೂ ಕೈಗಳಿಂದಲೇ ಆ ಬ್ಯಾಗ್ ಹಿಡಿದು ಮೇಲೆ ಎತ್ತುವಲ್ಲಿ ಸಫಲವಾದೆ, ಅಲ್ಲದೇ ಅದನ್ನು ಹೊರಗೆ ತಂದು ಹಾಗೂ ಹೀಗೂ ಮಾಡಿ ಎತ್ತಿಕೊಂಡು ಮೋರಿ ದಾಟಿ ಬಂದು ನನ್ನ ಮನೆಯ ದಾರಿ ಹಿಡಿದೆ, ಈಗ ನನ್ನ ಮನೆ ಇನ್ನೂ ಅರ್ಧ ಕಿ. ಮೀ. ಅಂತರವಿದೆ, ಅಲ್ಲಿವರೆಗೂ ನಾನೊಬ್ಬನೇ ಈ ಬ್ಯಾಗನ್ನು ಸಾಗಿಸಲು ಆಗದು, ಹಾಗೆ ಹೊತ್ತು ಕೊಂಡು ಹೋಗುವಾಗ ಯಾರಾದರೂ ನೋಡಿಬಿಟ್ಟರೆ.....ಅಥವಾ ಇಂಥಾ ಚುನಾವಣೆಯ ಸಮಯದಲ್ಲಿ,ಕತ್ತಲಿನಲ್ಲಿ ಏನಾದರೂ ಕೆಟ್ಟಕೆಲಸಗಳು ನಡೆಯುತ್ತಿವೆ ಎಂದು ಗುಮಾನಿಯಿಂದ ಪೊಲೀಸರೇನಾದರೂ ಗಸ್ತು ತಿರುಗಲು ಇದೇ ದಾರಿಯಲ್ಲಿ ಬಂದರೆ........ಅಥವಾ ನನಗೆ ತಿಳಿದವರೇ

 ಯಾರಾದರೂ ಎದುರು ಬಂದರೆ.......ಅದೂ ಬೇಡಾ.....ಆ ಬ್ಯಾಗು ಇಟ್ಟ ಮಹಾಶಯರೇ ಇಲ್ಲಿಗೆ ಬಂದು ನನ್ನ ಕೈಯಲ್ಲಿರುವ ಬ್ಯಾಗ್ ನೋಡಿ.....ನಾಲ್ಕು ತದುಕಿ, ಕಿತ್ತುಕೊಂಡುಹೋದರೆ.......

      ಅಬ್ಬಾ.....ಮೊದಲಬಾರಿಗೆ ಯಾವುದಾದರೂ ಒಂದು ಅಕ್ರಮ ಕೆಲಸಕ್ಕೆ ಇಳಿಯುವಾಗ ಅದೆಷ್ಟು ಕಹಿ ನೆನಪುಗಳು ನಮ್ಮನ್ನು ಕಾಡುತ್ತವೆ......ಎಂದು ಯೋಚಿಸಿದ ನನಗೆ ನನ್ನ ಮಗನು ನೆನಪಾದನು, ಕೂಡಲೇ ಅವನಿಗೆ ಒಂದು ಫೋನುಕರೆ ಮಾಡಿ, ಇಲ್ಲೇ ಇರುವೆ, ಬಾ..... ಸ್ವಲ್ಪ ಜರೂರು ಕೆಲಸವಿದೆ......ಇದೇ ರಸ್ತೆಯಲ್ಲಿ ನಮ್ಮ ಮನೆಯ ರಸ್ತೆಯಲ್ಲಿಯೇ ಎಂದು ಲ್ಯಾಂಡ್ಮಾರ್ಕ್ ಹೇಳಿ ಹಾಗೇ ಒಂದು ಮರದ ಬುಡದಲ್ಲಿ ಕತ್ತಲಿನಲ್ಲಿ ನಿಂತು,ಅವನು ಬರೋವರೆಗೂ ಆತಂಕದ ಕ್ಷಣಗಳಿಂದ ಮರದ ಬುಡಕ್ಕೆ ನಿಂತು ಮೂತ್ರ ವಿಸರ್ಜನೆಗೆ ನಿಂತರೆ........ಆ ಭಯದಲ್ಲಿ  ಅದೂ ಸಲೀಸಾಗಿ ಆಗಲಿಲ್ಲ, ಅಷ್ಟರಲ್ಲಿ ನನ್ನ ಮಗನು , ನನಗೇ ಏನಾಗಿದೆಯೋ, ಇಂಥಾ ಸಮಯದಲ್ಲಿ...... ಇಂಥಾ ರಾತ್ರಿಯಲ್ಲಿ...... ಎಂದು ಆತಂಕದಿಂದಲೇ ಬೈಕ್ ಓಡಿಸಿಕೊಂಡು ನನ್ನನ್ನೂ ಹುಡುಕಿಕೊಂಡು ಬಂದವನೇ ನಾನು ನಿಂತ ಮರದ ಪಕ್ಕವೇ ನಿಂತನು, ಅಷ್ಟರಲ್ಲಿ ನಾನು , ಹ್ಹೇ.....ಇಲ್ಲಿ ಬಾ.....ಎಂದು ಅವನನ್ನು ಹತ್ತಿರಕ್ಕೆ ಕತ್ತಲಿನಲ್ಲಿಯೇ ಕರೆದೆ, ನಾನು ಕರೆದ ಕೂಗಿಗೆ

 ಭಯಪಟ್ಟು ನನ್ನ ಹತ್ತಿರ ಬಂದವನೇ....ಅಪ್ಪಾ...... ಎನಾಗಿದೆಯಪ್ಪಾ.....ನಿನಗೆ.......ಎಂದವನೇ ಭಯದಿಂದಲೇ ನನ್ನನ್ನು ಕೂಗಿದ, ನಾನು ಆಗ ನಡೆದ ವಿಷಯವನ್ನು ಎಲ್ಲಾ ಅವನಿಗೆ ಆತುರಾತುರವಾಗಿ ವಿವರಿಸಿ, ಆ ಬ್ಯಾಗ್ ತಮ್ಮ ಬೈಕಿನಲ್ಲಿಟ್ಟುಕೊಂಡು ನೇರವಾಗಿ ನಮ್ಮ ಮನೆಯೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡು ಮತ್ತೆ ಸವಿವರವಾಗಿ ನನ್ನ ಮಗನಿಗೆ, ಹೆಂಡತಿಗೆ, ಸೊಸೆ ಮೂವರಿಗೂ ಹೇಳಿದೆ, ಅವರಂತೂ  ಆನಂದದಿಂದಕುಣಿದು ಕುಪ್ಪಳಿಸೋದೊಂದು ಬಾಕಿ, ಎಲ್ಲರೂ ಸೇರಿ, ಅದನ್ನು  ತೆರೆದು ನೋಡಿದರೆ....... ಅಬ್ಬಾ....... ಎಲ್ಲವೂ ಗರಿಗರಿಯಾದ ನೋಟುಗಳೇ ತುಂಬಿವೆ......ಬಹಳಷ್ಟು ಎರಡು ಸಾವಿರದ  ಕಂತೆಗಳಿದ್ದರೆ, ಮತ್ತಷ್ಟು ಐನೂರರ ನೋಟಿನ ಕಂತೆಗಳೇ ತುಂಬಿವೆ, ನಮಗ್ಯಾರಿಗೂ ನಂಬಲೇ ಆಗುತ್ತಿಲ್ಲ, ನನ್ನ ಕೈಗಳನ್ನು ನಾನೇ ಚಿವುಟಿಕೊಂಡೆನು, ಹೌದು ಇದು ಕಟು ಸತ್ಯ , ನಮ್ಮೆದುರಿನಲ್ಲಿಯೇ ಕೋಟಿ ಕೋಟಿ ಹಣ ಸಿಕ್ಕಿತ್ತು ನಮಗೆ.

       ನಾವು ನಾಲ್ಕೂ ಜನ ಯೋಚಿಸಿದವು, ಅಬ್ಬಾ ಇಷ್ಟು ದಿನಗಳ ಕಷ್ಟ ಈ ದಿನ ತೀರಿತು, ಈ ಚುನಾವಣೆ ನೆಪದಲ್ಲಾದರೂ ನಾವು ಕೋಟ್ಯಾಧೀಶ್ವರರೂ ಆದೆವಲ್ಲಾ...... ಎಂದು ಖುಷಿಯಾಯಿತು. ಇಂಥಾ

 ದಾಖಲೆ ಇಲ್ಲದ, ವಾರಸುದಾರರಿಲ್ಲದ ಹಣವನ್ನು  ಯಾರೂ ಹುಡುಕಿಕೊಂಡು ಬರೋಲ್ಲ, ಇನ್ನು ಪೊಲೀಸರಿಗಂತೂ  ತಿಳಿದೇ ಇರೊಲ್ಲ, ಅವರೂ ಬರೋಲ್ಲ, ಈ ಹಣವನ್ನು, ಚುನಾವಣೆ ನಂತರ ನಾವು ಯಾರಿಗೂ ತಿಳಿಯದಂತೆ ಆರಾಮವಾಗಿ,  ಖರ್ಚು ಮಾಡಬಹುದು, ಒಂದು ಸ್ವಂತದ ಮನೆಯನ್ನಾದರೂ ಕೊಂಡುಕೊಳ್ಳೋಣ,  ಎಂದುಕೊಂಡು ಊಟವನ್ನೂ ಮಾಡದೇ....... ನಾಲ್ಕೂ ಜನ ಆ ಬ್ಯಾಗಿನ ಸುತ್ತಲೂ ಕುಳಿತು ಆ ಹಣವನ್ನು ಎಣಿಕೆ ಮಾಡುವ  ಸಂದರ್ಭದಲ್ಲಿ ಯಾರೋ ಡಬ ಡಬ್ ಅಂತ ಬಾಗಿಲು ಬಡಿದ ಶಬ್ದ, ಆದರೆ ನಮಗ್ಯಾರಿಗೂ ಅದರ ಪರಿವೆಯೇ ಇಲ್ಲ, ಎಲ್ಲರ ಚಿತ್ತ ಈ ಅನಾಯಾಸವಾಗಿ ಸಿಕ್ಕ ಹಣದತ್ತ.

     ಮತ್ತೆ ಮತ್ತೆ ಬಾಗಿಲು ಬಡಿಯುವುದು ಜಾಸ್ತಿಯಾದಂತೆ ಈಗ ನಾಲ್ವರಿಗೂ ಆತಂಕ, ಎದೆ ಡಬ್ ಡಬ್ ಅಂತ ಬಡಿದುಕೊಳ್ಳಲು ಆರಂಭಿಸಿತು. ಆಗ  ರಾತ್ರಿ ಹನ್ನೆರಡರ ಮಧ್ಯರಾತ್ರಿ ಸಮಯ,  ನಾವು ನಾಲ್ಕೂ ಜನ ಕೂಡಲೇ ಹಣದ ಬ್ಯಾಗ್ ನ್ನು ಒಂದು ಮಂಚದ ಕೆಳಕ್ಕೆ ತಳ್ಳಿದೆವು, ಕೂಡಲೇ ಧೈರ್ಯ ಮಾಡಿದ ನನ್ನ ಮಗ ಬಾಗಿಲು ತೆರೆಯಲು ಬಂದ, ಅವನ ಹಿಂದೆ ಸೊಸೆ, ಅವಳ ಹಿಂದೆ ನನ್ನ ಹೆಂಡತಿ,

 ಅವಳ ಹಿಂದೆ ನಾನು...... ನಡುಗುತ್ತಾ, ಹೀಗೆ ಬಂದು ಭಯದಿಂದಲೇ ಬಾಗಿಲು ತೆರೆದರೆ.......ನಾಲ್ಕು ಜನ ದಾಂಡಿಗರು ನಿಂತಿದ್ದಾರೆ, ನಾವು ನಾಲ್ಕೂ ಜನ ಭಯದಿಂದಲೇ ಬೆವರುತ್ತಾ.......ಕೇಳಿದೆವು, ಯಾ.......ಯಾರು, ಯಾರು ಏನಾಗಬೇಕಿತ್ತು, ಇಷ್ಟು ಮಧ್ಯ ರಾತ್ರಿಯಲ್ಲಿ...... ಏನು ಸಮಾಚಾರ, ಎಂದು......

      ಅವರು ಹೇಳಿದರು......ನಮ್ಮ ಬ್ಯಾಗು ನಿಮ್ಮ ಮನೆಯಲ್ಲಿ ಇದೆಯೆಂದೂ....... ನಮಗೆ GPS  ಮುಖಾಂತರ ತಿಳಿದಿದೆ.......ನಾವುಗಳು ಆ ಬ್ಯಾಗ್ ಗೆ GPS ಅಳವಡಿಸಿರುವೆವು. ನೀವು ನಮ್ಮ ಬ್ಯಾಗ್ ಹಾಗೂ ಅದರಲ್ಲಿರುವ ಅಷ್ಟೂ ಹಣದ ಸಮೇತ ನಮಗೆ ಕೊಡಿ, ಇಲ್ಲವೆಂದರೆ......ಎಂದು, ಅದರಲ್ಲೊಬ್ಬ ಒಂದು ಹರಿತವಾದ, ಚೂಪಾದ  ಚೂರಿ ತೋರಿಸಿದ , ಅದನ್ನು ನೋಡಿದಕ್ಕೇ ನನಗೆ ಒಂದು, ಎರಡು, ಮತ್ತಷ್ಟು ಆದವು.ಆಗ ನಾನು ಭಯದಿಂದಲೇ ಅಬ್ಬಾ....ಏನೂ ಮಾಡಬೇಡಿ, ನಮ್ಮನ್ನು ಏನೂ ಮಾಡಬೇಡಿ ಎಂದು ಕಿರುಚಿಕೊಳ್ಳುತ್ತಿದ್ದೆ,

 ಈ ರೀತಿ ಕಿರುಚಿದ  ನನ್ನ ಮೇಲೆ ನನ್ನ ಹೆಂಡತಿ, ಒಂದು ಬಕೆಟ್  ತಣ್ಣೀರು ತಂದು ಸುರಿದಾಗಲೇ ನನಗೆ ಎಚ್ಚರವಾಗಿ ಹಾಸಿಗೆಯಿಂದ ಮೇಲೆದ್ದಿದ್ದೆ. ಆಗ ಗಡಿಯಾರದಲ್ಲಿ ನೋಡಿದರೆ...... ಸಮಯ ಬೆಳಿಗ್ಗೆ

 ಹತ್ತುಗಂಟೆ. ಅಂದಿನ ಈ ಕನಸಿನಿಂದಾಗಿ,  ನನಗೆ ಉದ್ಯಾನವನಕ್ಕೆ ಹೋಗೋದು, ಅಲ್ಲಿ ಬೆಳಗಿನ ಬಿಸಿ ಬಿಸಿತಟ್ಟೆ ಇಡ್ಲಿ,  ಕಾಫಿ ಸವಿಯುವುದು,  ಎಲ್ಲವೂ ಕಾಣೆಯಾಗಿತ್ತು.

 ಅದಿರಲಿ ಕಂತೆ, ಕಂತೆ ಹಣ ನನಗೆ  ಸಿಕ್ಕಿದ್ದು

ನಿಜವೆಂದುಕೊಂಡಿರಾ..........ಹ್ಹಹಹಹಹಹಹಹಹಹ

 ಎಲ್ಲವೂ   ಏಪ್ರಿಲ್ ಪೂಲ್........ ಏಪ್ರಿಲ್ ಪೂಲ್...... ಏಪ್ರಿಲ್ ಪೂಲ್.........

 -ರಾಜೇಂದ್ರ ಕುಮಾರ್ ಗುಬ್ಬಿ

ಕನಸುಗಳ ಕಥೆಗಾರ