Click here to Download MyLang App

ಕಾಮನಗಲ್ಲಿಯ ಹುಡುಗರು : ಬರೆದವರು ಶ್ರೀಧರ ಬನವಾಸಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ -ಶಿಷ್ಟ ಸ್ವರೂಪದ ಕನ್ನಡ | ಯಾವ ದನಿಯಲ್ಲಿ ಆಡಿಯೋ ಕತೆಯಾಗಬೇಕು ಅನ್ನುವ ಕುರಿತು ಲೇಖಕರ ಆಯ್ಕೆ: ಗಂಡಿನ ದನಿಯಲ್ಲಿ

ಕಾಮನಗಲ್ಲಿಯ ಹುಡುಗರು

ಬನವಾಸಿಯಲ್ಲಿರುವ ಕಾಮನಗಲ್ಲಿ ಎಂಬ ಕೇರಿಗೆ ಈ ಹೆಸರು ಬರಲಕ್ಕೆ ಮುಖ್ಯ
ಕಾರಣವೇ ಕೇರಿಯಲ್ಲಿ ಕಾಮಣ್ಣನನ್ನು ಸುಡುತ್ತಿದ್ದುದು. ಬನವಾಸಿಯ
ಅಧಿನಾಯಕ ಶ್ರೀ ಮಧುಕೇಶ್ವರ ದೇವಸ್ಥಾನದ ಹಿಂಬದಿಯಲ್ಲಿರುವ ಈ
ಕೇರಿಯಲ್ಲಿ ಹೆಚ್ಚೆಂದರೆ ಇಪ್ಪತ್ತರಿಂದ ಮೂವತ್ತು ಮನೆಗಳಿರಬಹುದು.
ದೇವರ ಪೂಜೆಯಾದ ಮೇಲೆ ಪಲ್ಲಕ್ಕಿಯಲ್ಲಿ ಹೊತ್ತು ತರುವ ಶ್ರೀ
ಮಧುಕೇಶ್ವರನ ಸನ್ನಿಧಿಯ ಪಂಜದ ಬೆಂಕಿಯನ್ನು ಇನ್ನೊಂದು ಪಂಜಕ್ಕೆ
ಹಚ್ಚಿಕೊAಡು ಹುಯ್ಯೋ... ಅಂತ ಜೋರಾಗಿ ಉಸಿರನ್ನು ಎಳೆದುಕೊಳ್ಳುತ್ತಾ
ಎದುರುಗಡೆ ಬರುವ ಬೆಂಕಿಯನ್ನು ನಂದಿಸಲು ನಿಂತ ಹುಡುಗರನ್ನು
ಲೆಕ್ಕಿಸದೇ ಬಂದು ಕಾಮನ ಚಿತೆಗೆ ಬೆಂಕಿ ಇಡುವ ಆ ಯುವಕ, ರಚ್ಚಿನ
ವೇಗದಲ್ಲಿ ದೇವರ ಕಿಡಿಯಂತೆ ಓಡಿಬರುತ್ತಿರುತ್ತಾನೆ. ಕ್ಷಣ ಮಾತ್ರದಲ್ಲಿ ಕಾಮನ
ಚಿತೆಗೆ ಬೆಂಕಿಬಿದ್ದು ಸುತ್ತಲಿನ ಜನರೆಲ್ಲಾ `ಲಬ್... ಲಬ್...’ ಅಂತ ಬಾಯಿ
ಬಡಿದುಕೊಳ್ಳತೊಡಗುತ್ತಾರೆ. ಸತ್ತಾಗ ಎಲ್ಲರೂ ಸೇರಿ ಬಾಯಿ
ಬಡಿದುಕೊಳ್ಳುವುದು ಸಾಮಾನ್ಯ, ಇನ್ನೂ ಕೆಲವಡೆ ಅದು ಸಂಪ್ರದಾಯ. ಇಲ್ಲಿ
ಸತ್ತು ಹೋಗುವವ ಬೊಂಬೆಯ ರೂಪದಲ್ಲಿರುವ ಕಾಮಣ್ಣ. ಆ ಬೆಂಕಿಯಲ್ಲಿ
ಆತ ಸುಟ್ಟು ಕರಕಲಾಗಿ ಹೋಗುತ್ತಾನೆ.

ಪುರಾಣದಲ್ಲಿರುವ ಕಾಮಣ್ಣನ ಐತಿಹ್ಯದ ಕಥೆಯು ಎಲ್ಲರಿಗೂ
ಗೊತ್ತಿರುವಂತೆ ಕಾಣುತ್ತದೆ. ಪ್ರತಿವರ್ಷವೂ ಬರುವ ಕಾಮಣ್ಣನ ಹಬ್ಬದ ದಿನ ಅಜ್ಜಿ
ಆತನ ಕಥೆಯನ್ನು ತಪ್ಪದೇ ಹೇಳುತ್ತಿದ್ದಳು. ಶಿವನ ತಪಸ್ಸನ್ನು ಭಂಗ
ಮಾಡುವAತೆ ದೇವೇಂದ್ರ, ರತಿ ಮನ್ಮಥರನ್ನು ಕೈಲಾಸಕ್ಕೆ
ಕಳುಹಿಸಿಕೊಡುತ್ತಾನೆ. ಶಿವನು ಅತ್ಯಂತ ಗಂಭೀರವಾಗಿ ತಪಸ್ಸು
ಮಾಡುವುದನ್ನು ಕಾಣುವ ರತಿ ಮನ್ಮಥರು ಆತನಿಗೆ ಎಚ್ಚರವಾಗುವಂತೆ
ತಮ್ಮ ಸಕಲ ಕಲೆಗಳನ್ನು ಪ್ರಯೋಗಿಸುತ್ತಾರೆ. ಎಲ್ಲೋ ಒಂದು ಕಡೆ
ತನ್ನ ತಪಸ್ಸಿಗೆ ಯಾರೋ ಸೂಜಿ ಎಳೆಯಂತೆ ಭಂಗಪಡಿಸುವುದನ್ನು ಕಂಡ
ಶಿವ ಸ್ವಲ್ಪ ವಿಚಲಿತನಾಗುತ್ತಾನೆ. ಮುಚ್ಚಿದ್ದ ತನ್ನ ಕಣ್ಣುಗಳನ್ನು
ತೆರೆಯುತ್ತಾನೆ. ಎದುರುಗಡೆ ರತಿ ಮನ್ಮಥರು ಉದ್ರೇಕಗೊಳಿಸುವ
ಭಂಗಿಯಲ್ಲಿ ನಿಂತಿರುತ್ತಾರೆ. ಶಿವನ ಸಿಟ್ಟು ನೆತ್ತಿಗೇರುತ್ತದೆ. ಜಟೆಯಲ್ಲಿದ್ದ
ಗಂಗೆಯ ಮಾತನ್ನು ಕೇಳದೇ ತನ್ನ ಮೂರನೇ ಕಣ್ಣು ತೆರೆಯುತ್ತಾನೆ.
ಕ್ಷಣ ಮಾತ್ರದಲ್ಲಿ ಶಿವನ ಸಿಟ್ಟಿಗೆ ರತಿ ಮನ್ಮಥರು ಸುಟ್ಟು ಬೂದಿಯಾಗುತ್ತಾರೆ.
ಅಬ್ಬಾ... ಇಡೀ ಶಿವಪುರಾಣ ಅಧ್ಯಯನ ಮಾಡಿದವರಿಗೆ ಶಿವನು ತನ್ನ ಮೂರನೇ
ಕಣ್ಣನ್ನು ತೆರೆದಿದ್ದು ಈ ಒಂದು ಸಂದರ್ಭದಲ್ಲಿ ಮಾತ್ರ. ಇರಬೇಕೇನೋ?
ಹಾಗಾದರೆ ಆ ಶಿವನ ಮೂರನೇ ಕಣ್ಣಿನಲ್ಲಿ ಅಷ್ಟೊಂದು ಶಕ್ತಿ
ಅಡಕವಾಗಿದೆಯೇ! ಅದನ್ನು ತೆಗೆದರೆ ಇಡೀ ಲೋಕವೇಕೆ, ಇಡೀ ಬ್ರಹ್ಮಾಂಡವೇ
ಸುಟ್ಟು ಹೋಗುವುದೇ? ಅಂತಹ ಮಹಾನ್ ಶಕ್ತಿ ಮುಕ್ಕಣ್ಣನಾದ ಶಿವನ
ಮೂರನೇ ಕಣ್ಣಿನಲ್ಲಿದೆಯೇ? ಈ ತರಹದ ಅನೇಕ ಪ್ರಶ್ನೆಗಳು
ನಮಗೆಲ್ಲಾ ಕಾಮಣ್ಣನ ಪ್ರಸಂಗವನ್ನು ಕೇಳಿದಾಗಲೆಲ್ಲಾ
ನೆನಪಾಗುತ್ತಿದ್ದವು. ಕಾಮಣ್ಣನ ಕಥಾಪ್ರಸಂಗವನ್ನು ತುಂಬಾ
ಸ್ವಾರಸ್ಯಪೂರಕವಾಗಿ ನಮ್ಮ ಅಜ್ಜಿಯು ಹೇಳಿದಾಗಲೆಲ್ಲಾ ಶಿವನ ಮೂರನೇ
ಕಣ್ಣಿನ ಬಗ್ಗೆ ಒತ್ತಿ ಹೇಳುತ್ತಿದ್ದ ಇನ್ನೊಂದು ಮಾತು ನಮ್ಮನ್ನು ಇನ್ನಷ್ಟು
ಭಯಭೀತರನ್ನಾಗಿಸಿಬಿಡುತ್ತಿತ್ತು. ಶಿವನು ಸದ್ಯದಲ್ಲೇ ತನ್ನ ಮೂರನೇ
ಕಣ್ಣನ್ನು ತೆರೆಯಲಿದ್ದಾನೆ. ಆಗ ಇಡೀ ಲೋಕವೇನು, ಸಮಸ್ತ ಬ್ರಹ್ಮಾಂಡವೇ
ಪ್ರಳಯವಾಗುವುದು. ನಾವು ನೀವೆಲ್ಲಾ ಆಗ ಸತ್ತುಹೋಗುತ್ತೇವೆ. ಅಂತಹ
ದಿನಗಳು ತುಂಬಾ ಹತ್ತಿರದಲ್ಲಿವೆ. ಅಜ್ಜಿಯ ಈ ಮಾತುಗಳು ಒಂದು ರೀತಿಯಲ್ಲಿ
ನುಂಗಲಾರದ ಬಿಸಿತುಪ್ಪವಾಗಿತ್ತು. ನಮ್ಮನ್ನು ತುಂಬಾ ಚಿಂತೆಗೀಡು
ಮಾಡುತ್ತಿದ್ದವು. ನಮ್ಮ ಅಜ್ಜ-ಅಜ್ಜಿಯರಿಗೇನೋ ವಯಸ್ಸಾಗಿದೆ. ಪ್ರಳಯ
ಬರುವುದಕ್ಕಿಂತ ಮುಂಚೆಯೇ ಸತ್ತುಹೋಗುತ್ತಾರೆ. ಆದರೆ ನಾವಿನ್ನೂ
ಚಿಕ್ಕವರು. ದೊಡ್ಡವರಾಗಿ ಇನ್ನೂ ಏನೇನೋ ಸಾಧನೆ ಮಾಡಬೇಕಾಗಿದೆ.
ಪ್ರಳಯ ಬಂದರೆ ನಾವು ಅಂದುಕೊಂಡಿದ್ದೆಲ್ಲಾ ಆಗುವುದೇ? ಬನವಾಸಿಯ
ಪುಟ್ಟ ಪ್ರಪಂಚದಲ್ಲಿ ಅಂತಹ ಸುಖ ಪರಸಂಗದ ವಾತಾವರಣ ಇಲ್ಲದಿದ್ದರೂ
ಎಲ್ಲೋ ಯಾರೋ ಹೇಳಿದ್ದ, ಗಂಟೆಗಟ್ಟಲೇ ಕೊರೆದಿದ್ದ ಮಸಾಲೆ
ದೋಸೆಯ ರುಚಿ, ಹೊಸಬಟ್ಟೆ ಉಟ್ಟು ಮೆರೆದಾಡುವ, ಕಾರವಾರದ
ಸಮುದ್ರವನ್ನು ಕಾಣುವ, ಜೋಗದ ಗುಂಡಿಗೆ ಇಳಿಯಬೇಕೆಂಬ ತವಕ... ಈ
ತರಹದ ಸಣ್ಣಪುಟ್ಟ ಆಸೆಗಳನ್ನು ಹೊಂದಿದ್ದ ನಮಗೆಲ್ಲಾ ಈ ಕಾಮಣ್ಣನ
ಕಥಾಪ್ರಸಂಗ ತುಂಬಾ ಹೆದರಿಕೆಯನ್ನುಂಟು ಮಾಡುತ್ತಿತ್ತು. ಹಾಗಾಗಿ ಕೇರಿಯ
ಅಂಗಳದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಕಾಮಣ್ಣನ ದಹನ ನಮಗೆ
ಅಷ್ಟೇನು ರುಚಿಕರವಾಗಿ ಕಾಣುತ್ತಿರಲಿಲ್ಲ.

ಪ್ರತಿವರ್ಷ ಬನವಾಸಿಯಲ್ಲಿ ಕಾಮಣ್ಣನನ್ನು ಸುಡುವ ಕರ್ಯಕ್ರಮವೇ
ಅತ್ಯಂತ ಪ್ರಾಚೀನವಾದುದು. ಶಿವನ ಮೂರನೇ ಕಣ್ಣು ಅಂದರೆ ಇಲ್ಲಿ
ಕಾಮಣ್ಣನನ್ನು ಸುಡುವ ಬೆಂಕಿ, ಮಧುಕೇಶ್ವರ ದೇವರ ಎದುರಿಗಿನ ದೀಪದ
ಬೆಂಕಿಯನ್ನು ತರಲು ಕಾಮನಗಲ್ಲಿಯ ಒಬ್ಬ ಹುಡುಗ ತಯಾರಾಗಿ
ನಿಂತಿರುತ್ತಾನೆ. ಮಧುಕೇಶ್ವರನು ಕೊಟ್ಟ ಆ ಬೆಂಕಿಯ ಕಿಡಿಯನ್ನು
ಹಚ್ಚಿಕೊಂಡು ಚಿರತೆಯಂತೆ ಓಡಿ ಬರುತ್ತಾನೆ. ಬೆಂಕಿ ಹಚ್ಚಿಕೊಂಡು ಓಡುತ್ತಾ
ಬರುವ ಕೇರಿಯ ಹುಡುಗನ ದೇಹದಲ್ಲಿ ಎಂತಹ ಶಕ್ತಿ ಅಡಗಿರುತ್ತೆ ಅಂದರೆ
ಆತ ಯಾರಿಗೂ ಜಗ್ಗುವುದಿಲ್ಲ. ಎದುರಿಗೆ ಬಂದವರನ್ನು ಲೆಕ್ಕಿಸದೇ
ಓಡುತ್ತಿರುತ್ತಾನೆ. ಬೆಂಕಿ ಹಚ್ಚಿದ ಮೇಲೆ ಕಾಮಣ್ಣನ ಚಿತೆಯ ಸುತ್ತೆಲ್ಲಾ
ಕಾಮನಗಲ್ಲಿಯ ಜನರು ಕೇಕೆ ಹಾಕಿ ಸುತ್ತ್ತುವರೆಯುತ್ತಾರೆ. ಹೆಂಗಸರು,
ದೊಡ್ಡವರು, ಅಜ್ಜಂದಿರು, ಅಜ್ಜಿಯರು ತಮ್ಮ ತಮ್ಮ ಮನೆಯ
ಚಿಕ್ಕಮಕ್ಕಳನ್ನು ಕರೆ ತಂದು ಚಿತೆಯ ಸುತ್ತ ಮೂರು ಸುತ್ತು ಹಾಕಿ
ತಮಗೂ ಮಕ್ಕಳಿಗೂ ಕಾಮಣ್ಣನ ದಯೆ ಇರಲಿ ಅಂತ ಬೇಡುತ್ತಾರೆ. ಚಿತೆಯ
ತುಂಬಾ ಹಾಕಿದ್ದ ಸುಟ್ಟು ಕರಕಲಾದ ಸಗಣಿ ಕುಳ್ಳುಗಳನ್ನು
ಎಳೆದುಕೊಂಡು ಅದಕ್ಕೆ ತಣ್ಣನೆಯ ನೀರು ಹಾಕಿ ಆ ಕರಿಯನ್ನು ಮುಖಕ್ಕೆ
ಮೇಯ್ದುಕೊಂಡು ಬೇರೆಯವರಿಗೂ ಹಚ್ಚಿ ಎಲ್ಲರೂ ಆ ದಿನ ಕರಿಮಾಳರ ಹಾಗೆ
ಕಾಣುವಂತೆ ಮಾಡುವುದು ಆ ದಿನದ ಸೋಜಿಗ. ಆ ಕಾಮನಗಲ್ಲಿಗೆ ಕೇರಿಯ
ಹುಡುಗರು ಹೊರತಾಗಿ ಉಪ್ಪಾರ ಕೇರಿ, ರಥಬೀದಿ ಕಡೆಯಿಂದಲೂ ಕೇರಿಯ
ಹುಡುಗರ ಸ್ನೇಹಿತರೂ ಬಂದು ಮೈಗೆಲ್ಲಾ ಸುಟ್ಟ ಸಗಣಿ ಕರಿಯನ್ನು
ಹಚ್ಚಿಕೊಂಡು ಸೀದಾ ವರದೆಯ ತಪ್ಪಲಿಗೆ ಹೋಗಿ ನದಿಯಲ್ಲಿ ಮುಳುಗಿ
ಮೈಗಂಟಿದ ಕಾಮಣ್ಣನ ಕರಿಯನ್ನು ತೊಳೆದುಕೊಂಡು ತಮ್ಮ ಮನೆ
ಸೇರುವುದು ವರ್ಷ ವರ್ಷದ ವಾಡಿಕೆ. ಈ ವಾಡಿಕೆ ನೂರಾರು ವರ್ಷಗಳಿಂದ
ನಡೆದುಕೊAಡು ಬಂದಿದೆ. ಹೀಗಿದ್ದರೂ, ಕಾಮನಗಲ್ಲಿಯ ಈ ಆಚರಣೆ
ವರ್ಷದಿಂದ ವರ್ಷಕ್ಕೆ ತನ್ನ ಆಚರಣೆಯ ಮಹತ್ವವನ್ನು
ಕಳೆದುಕೊಳ್ಳುತ್ತಿದ್ದರೂ, ಈ ಹಿಂದೆ ಇದ್ದ ಕಾಮಣ್ಣನ ಆಚರಣೆ, ಆದ
ಘಟನೆಗಳನ್ನು ಬನವಾಸಿಯ ಹಿರೀಕರು ತುಂಬಾ ನೆನಪಿಸಿಕೊಳ್ಳುತ್ತಾರೆ.ಕಾಮಣ್ಣನನ್ನು ಸುಟ್ಟ ದಿನದ ಸಾಯಂಕಾಲ ಮಳೆ ಬಂದು ಕಾಮಣ್ಣನ
ಚಿತೆಯನ್ನು ನಂದಿಸುವುದು ಕೂಡ ಒಂದು ರೀತಿಯಲ್ಲಿ ಆಶ್ರ್ಯವಾಗಿ ಕಾಣುತ್ತದೆ.
ಪ್ರತಿವರ್ಷ ಕಾಮನ ಹಬ್ಬ ಬಂತು ಅಂದುಕೊಂಡು , ಅಪ್ಪ ಅಮ್ಮನಿಗೆ ಹೊರಗೆ
ಹೋಗುತ್ತಿದ್ದೇನೆ ಅಂತ ಹೇಳದೇ ಹೋಗಲು ಕಾರಣವೂ ಕೂಡ
ಆಗುವುದು. ಕಾಮಣ್ಣನ ಹಬ್ಬವನ್ನು ಆಚರಿಸುವುದು ಅಂದರೆ ಸುಮ್ಮನೇನಾ?
ಕೇರಿಯ ಹುಡುಗರು ಸೇರಬೇಕು, ಯಾರಾದರೊಬ್ಬರು ಹಿರಿಯರ
ಮುಂದಾಳತ್ವದಲ್ಲಿ ಹೇಗೆ ಮಾಡಬೇಕು, ಯಾರಿಗೆ ಏನು ಜವಾಬ್ದಾರಿ ಅಂತ
ನಿರ್ಧಾರವಾಗಬೇಕು. ಹಾಗಂತ ಇದನ್ನು ಖರ್ಚಿಲ್ಲದೇ ಸುಖಾಸುಮ್ಮನೇ
ಮಾಡಲಾದೀತೇ? ಕಾಮಣ್ಣನನ್ನು ಮೂರು ದಿನ ಇಡಲು ಚಪ್ಪರ ಕಟ್ಟಬೇಕು,
ಪ್ರತಿವರ್ಷ ಇಡುವ ಕಾಮಣ್ಣ ಹಾಗೂ ರತಿದೇವಿಯ ಗೊಂಬೆಗಳಿಗೆ ಬಣ್ಣ
ಹಚ್ಚಬೇಕು. ಸುಡಲು ಒಂದು ಗಾಡಿ ಕಟ್ಟಿಗೆ, ನೂರಾರು ಕುಳ್ಳು, ಕೈ ಖರ್ಚಿಗೆ
ಕಾಸು ಹೊಂದಿಸಬೇಕು. ಸುಟ್ಟ ಮೇಲೆ ಓಕುಳಿ ಆಡಲು ಬಣ್ಣ ತರಬೇಕು. ಇದರಲ್ಲಿ
ಊರ ಅನುಕೂಲಸ್ಥರು ಕೈ ಖರ್ಚು ಕೊಟ್ಟು, ತಮ್ಮದೂ ಒಂದು ಪಾಲಿರಲಿ ಅಂತ
ಹೇಳುವ ಮನುಷ್ಯರು ಅಷ್ಟಕಷ್ಟೇ! ಏನೇ ಮಾಡಿದರೂ ಹುಡುಗರೇ
ಓಡಾಡಬೇಕು. ದುಡ್ಡು ಹಂಚಬೇಕು. ಬೆಳಗ್ಗೆ ಮೂರು ಗಂಟೆಗೆ ಎದ್ದು
ಕಟ್ಟಿಗೆ ಕದಿಯಬೇಕು, ಶಾಲೆಗೆ ಹೋಗುವ ದಿನಗಳಿಗೆ ರಜೆ
ತೆಗೆದುಕೊಳ್ಳಬೇಕು. ಬೇರೆ ಕೇರಿಯ ಹುಡುಗರಿಗಿಲ್ಲದ ಉಸಾಬರಿ ನಿಮಗೆ
ಮಾತ್ರ ಏಕೆ ಅಂತ ಕಾಮನಗಲ್ಲಿಯ ಹುಡುಗರಿಗೆ ಗುರುಗಳು
ಬಯ್ಯಬೇಕು. ಇದೆಲ್ಲಾ ಪ್ರತಿವರ್ಷ ಮಾಮೂಲು! ಹಾಗಂತ ಕಾಮಣ್ಣನನ್ನು
ಸುಡುವ ಆಚರಣೆಯನ್ನು ಜೋರಾಗಿ ಮಾಡುವುದನ್ನು ನಿಲ್ಲಿಸಲಾದೀತೇ?
ಕಾಮನಗಲ್ಲಿ ಅಂತ ಹೆಸರಿಟ್ಟಿರುವ ಕೇರಿಗೆ ಅವಮಾನವಾದಂತಲ್ಲವೇ? ಹಾಗಂತ
ಕೇರಿಯ ಹುಡುಗರು ಸಾಮಾನ್ಯರಲ್ಲ. ಒಬ್ಬರಿಗಿಂತ ಒಬ್ಬರು ಪರಿಕರಗಳು'.
ಕಟ್ಟಿಗೆ ಕದಿಯುವುದರಲ್ಲಿ, ಚಂದಾ ಎತ್ತುವುದರಲ್ಲಿ, ದೊಡ್ಡ ಚಪ್ಪರ ಹಾಕಿ,
ಲಬ್ ಲಬ್ ಅಂತ ಕೂಗುವುದರಲ್ಲಿ ಕಾಮನಗಲ್ಲಿಯ ಹುಡುಗರು ತುಂಬಾ
ನಿಸ್ಸೀಮರು. ಹಾಗಾಗಿ ವರ್ಷವಿಡೀ ಬೇರೆ ಬೇರೆ ಕಾರಣಗಳಿಂದ ಗಲ್ಲಿಯ
ಹುಡುಗರೆಲ್ಲಾ ಕಿತ್ತಾಡಿಕೊಂಡರೂ ಕಾಮಣ್ಣನ ಹಬ್ಬದ ವಿಷಯದಲ್ಲಿ ಮಾತ್ರ
ಒಂದಾಗಿಬಿಡುತ್ತಿದ್ದರು. ಒಬ್ಬೋಬ್ಬರು ಅವರವರಲ್ಲಿ ಕೆಲವು ಕೆಲಸಗಳನ್ನು
ಹಂಚಿಕೊಂಡು ಬಿಡುತ್ತಿದ್ದರು. ಬಸವರಾಜುವಿಗೆ ಕಟ್ಟಿಗೆ ಹೊಂದಿಸುವ ಕೆಲಸ,
ಪುಟ್ಟಲಿಂಗ ಸಗಣಿ ಕುಳ್ಳು ತರುವುದು, ದಯಾನಂದ ಚಪ್ಪರ
ಹಾಕುವುದು. ನಾಗರಾಜು ಕಾಮಣ್ಣ ಹಾಗೂ ರತಿದೇವಿಯ ಬೊಂಬೆಗಳಿಗೆ ಬಣ್ಣ
ಹಚ್ಚುವುದು, ದತ್ತಣ್ಣ ಕಾಮಣ್ಣನಿಗೆ ಬೆಂಕಿಹಚ್ಚುವುದು, ಕೇಶವ
ಮನೆಮನೆಗೆ ಹೋಗಿ ಕಾಮಣ್ಣನ ಹಬ್ಬಕ್ಕೆ ದುಡ್ಡು ಸಂಗ್ರಹಿಸುವುದು,
ಶಾಮಭಟ್ಟ ಓಕುಳಿ ಆಡಲಿಕ್ಕೆ ಬಣ್ಣದ ತಯಾರಿ ಮಾಡುವುದು. ಹೀಗೆ ಕೇರಿಯ ಇನ್ನೂ
ಹತ್ತಾರು ಹುಡುಗರು, ಜೊತೆಗೆ ಪ್ರತಿ ಕೆಲಸದ ಹಿಂದೆ ಎರಡು ಮೂರು
ಹುಡುಗರು, ಪ್ರತಿವರ್ಷವೂ ಒಬ್ಬೊಬ್ಬ ಹುಡುಗನಿಗೂ ಒಂದೊಂದು ಜವಾಬ್ದಾರಿ ಈ
ಸಲ ಒಂದಾದರೆ ಮುಂದಿನ ವರ್ಷ ಬೇರೆ ಜವಾಬ್ದಾರಿ. ಈ ಎಲ್ಲ ಹುಡುಗರ
ಮುಂದಾಳತ್ವ ವಹಿಸಿಕೊಳ್ಳುತ್ತಿದ್ದ ಕುಶಾಲಪ್ಪ ಹೀಗೆ ಒಬ್ಬರಿಗೆ ಒಬ್ಬರನ್ನು
ಕೈಜೋಡಿಸಿ ಕಾಮನಗಲ್ಲಿಯ ಈ ಆಚರಣೆಯನ್ನು ಪ್ರತಿವರ್ಷ ಚೆನ್ನಾಗಿ
ನಡೆಸಿಕೊಂಡು ಬರುತ್ತಿದ್ದ.

ಕಾಮಣ್ಣ ಹಾಗೂ ರತಿದೇವಿಯ ಎರಡು ಮುಖಗಳನ್ನು ಯಾವ ಕಾಲದಲ್ಲಿ
ಯಾರು ಮಾಡಿದ್ದೋ ಗೊತ್ತಿಲ್ಲ. ಕೆಲವರು ಅವುಗಳನ್ನು ಮಾಡಿಸಿ ಅಂದಾಜು
ಐವತ್ತು ವರ್ಷಗಳಾಗಿರಬಹುದು ಅಂತ ಹೇಳುತ್ತಾರೆ. ಆದರೆ ಕಾಮನಗಲ್ಲಿಯ
ಈ ಆಚರಣೆಗೆ ಯಾರು ಮಾಡಿಸಿಕೊಟ್ಟಿದ್ದರು ಅನ್ನುವುದಕ್ಕೆ ಗಲ್ಲಿಯ
ಯಜಮಾನರಲ್ಲೂ ಉತ್ತರ ಇಲ್ಲ. ಪ್ರತಿವರ್ಷ ಕಾಮಣ್ಣನ ಮುಖವಾಡ ಹಾಗೂ ೩ ಅಡಿ
ಎತ್ತರದ ರತಿದೇವಿಯ ಬೊಂಬೆಗೆ ಬಣ್ಣ ಹಚ್ಚಿ ಸಿಂಗಾರ ಮಾಡುತ್ತಿದ್ದರು.

ಕಾಮಣ್ಣನ ಮುಖವಾಡದಲ್ಲಿ ದಪ್ಪನಾಗಿ ಹರಡಿಕೊಂಡಿದ್ದ ರಾಕ್ಷಸ ಮೀಸೆ,
ತಲೆಮೇಲೊಂದು ಕಿರೀಟ, ಇದು ಕಾಮಣ್ಣನ ರುಂಡದ ಕಥೆಯಾದರೆ,
ಮುಂಡಕ್ಕಾಗಿ ಅಲ್ಲಿಯದ್ದು ಇನ್ನೊಂದು ದೊಡ್ಡ ಕಥೆ. ಕಾಮಣ್ಣನ
ಮುಂಡಕ್ಕಾಗಿ ಪ್ರತಿವರ್ಷ ಒಂದು ಮುಕುಳಿ ಹರಿದ ಪ್ಯಾಂಟ್ ಹಾಗೂ ಗುಂಡಿ ಕಿತ್ತು
ಹರಿದ ಅಂಗಿಯನ್ನು ಹುಡುಕಬೇಕಾಗಿತ್ತು. ಪ್ರತಿವರ್ಷ ಶಾಸ್ತಿççಗಳ ಮಗ
ರಮಾಕಾಂತ, ತನ್ನ ಹಳೆಪ್ಯಾಂಟು, ಅಂಗಿ ಕೊಡುತ್ತಿದ್ದನಾದರೂ, ಕೆಲವು ಬಾರಿ
ಪ್ಯಾಂಟು ಕೊಟ್ಟರೆ ಅಂಗಿಕೊಡುತ್ತಿರಲಿಲ್ಲ. `ಈ ಬಾರಿ ಹೊಸ ಅಂಗಿ ಹೊಲಿಸಿಲ್ಲ. ಹೊಲಿಸಿದ್ದರೆ
ಹಳೆ ಅಂಗಿ ಕೊಡುತ್ತಿದ್ದೆ’ ಅಂತ ಹೇಳಿ ಒಮ್ಮೊಮ್ಮೆ ಜಾರಿಕೊಂಡುಬಿಡುತ್ತಿದ್ದ.
ರಮಾಕಾAತ್ ಕೊಟ್ಟ ಅಂಗಿಗೆ ಸಮನಾಗಿ ಪ್ಯಾಂಟನ್ನು ಹುಡುಕಬೇಕಾಗಿತ್ತು. ಸಿಕ್ಕ
ಅಂಗಿ, ಪ್ಯಾಂಟೊಳಗೆ ಒಣ ಹುಲ್ಲನು ತುಂಬಿ, ಪ್ಯಾಂಟು ಅಂಗಿಗೆ ಎರಡೂ ಮೂರು
ಪಿನ್ನು ಹಾಕಿ ಜೋಡಿಸಿ ದಪ್ಪನೆಯ ಹೊಟ್ಟೆ ಕಾಲುಗಳನ್ನು ಮಾಡಿ ಈ ಮಾಡರ್ನ
ಅಂಗಿ ಪ್ಯಾಂಟು ತೊಟ್ಟ ಮುಂಡಕ್ಕೆ, ಕಿರೀಟ ತೊಟ್ಟ ಕಾಮಣ್ಣನ ಮುಖವಾಡ ಸೇರಿಸಿ,
ಶ್ಯಾಂಭಟ್ಟರು ಕೊಡುವ ಮರದ ಛೇರಿನಲ್ಲಿ ಕೂರಿಸಿದರೆ, ಕಾಮಣ್ಣನನ್ನು
ನೋಡುವ ಸೊಬಗೇ ಬೇರೆ ತರಹ.

ಸುತ್ತಲೂ ತೆಂಗಿನ ಹ್ಯಾಡದಿಂದ ಹೊದೆಯಲ್ಪಟ್ಟ ಕಾಮಣ್ಣನ ಚಪ್ಪರದ
ಅಂಗಳಕ್ಕೆ ಕೇರಿಯ ಹೆಂಗಸರು ಚೆನ್ನಾಗಿ ಸಗಣಿಯಿಂದ ಸಾರಿಸಿ, ರತಿದೇವಿಯನ್ನು
ಕಂಕುಳದಲ್ಲಿ ಇಟ್ಟುಕೊಂಡು ಶ್ಯಾಂಭಟ್ಟರ ಮನೆಯ ಕುರ್ಚಿಯ ಮೇಲೆ
ವಿರಾಜಮಾನರಾಗಿ ಕುಳಿತುಕೊಳ್ಳುವ ಕಾಮಣ್ಣನಿಗೆ ಮೂರು ದಿನವೂ ಎಣ್ಣೆ ದೀಪ
ಹಚ್ಚಿ ಪೂಜೆ ಮಾಡುತ್ತಾರೆ. ಈ ಮೂರು ದಿನಗಳು ಕಣ್ಣು ಮುಚ್ಚಿ
ತೆಗೆಯುವುದರಲ್ಲಿ ಓಡಿಬಿಡುತ್ತಿದ್ದವು. ಮೊದಲನೆಯ ದಿನ ಕಾಮಣ್ಣನನ್ನು
ಸಿಂಗಾರ ಮಾಡಿ, ಚಪ್ಪರದ ಅಂಗಳದಲ್ಲಿ ಕೂರಿಸಿ ಪೂಜೆ ಮಾಡುವುದೇ ದೊಡ್ಡ
ಕೆಲಸವಾದರೆ, ಮರುದಿನ ಸ್ವಲ್ಪ ಹಣ ಸಂಗ್ರಹಿಸುವುದು. ರಾತ್ರಿಯಾದ ಮೇಲೆ
ಗುತ್ಯಪ್ಪನ ಮನೆಯ ಎತ್ತಿನಗಾಡಿಯನ್ನು ಕಟ್ಟಿಕೊಂಡು ಮನೆ ಮನೆಗೆ
ತೆರಳಿ ಕಟ್ಟಿಗೆ ಸಗಣಿ ಕುಳ್ಳನ್ನು ಸಂಗ್ರಹಿಸಿಕೊಂಡು ಬರುವುದು. ಹೀಗೆ
ಗಾಡಿಕಟ್ಟಿಕೊಂಡು ಹೋದಾಗಲೇ ಯಾರ ಮನೆಯಲ್ಲಿ ಚೆನ್ನಾಗಿ ಒಣಗಿದ ದಪ್ಪ
ಕಟ್ಟಿಗೆಗಳಿವೆ, ಒಳ್ಳೆಯ ಜಾತಿ ಮರ ಇದೆ ಅನ್ನುವುದನ್ನು ನೋಡಿಕೊಂಡು
ಬರುವುದು. ಹನ್ನೆರಡು ಗಂಟೆಯಾದ ಮೇಲೆ ನೋಡಿಕೊಂಡ ಮನೆಯ
ಹಿತ್ತಲಿಗೆ ನುಗ್ಗಿ ಒಣಗಿದ ದಪ್ಪ ದಪ್ಪ ಬಡ್ಡೆಗಳನ್ನು ಹೊತ್ತುಕೊಂಡು
ಬರುವುದು. ಹೀಗೆ ಪ್ರತಿವರ್ಷ ಕೆಲವು ಮನೆಯ ಕಟ್ಟಿಗೆಗಳನ್ನು
ಕಳುವು ಮಾಡುವುದು ಕಾಮನಗಲ್ಲಿಯಲ್ಲಿ ಸಾಮಾನ್ಯವಾಗಿತ್ತು. ಕೆಲವರು ಈ
ರಾತ್ರಿ ಬಂದು ಕದಿಯುತ್ತಾರೆ ಅಂತ ಗೊತ್ತಾದ ಕೂಡಲೇ ತಾವೇ ಬಂದು ಬಡ್ಡೆ
ಕಟ್ಟಿಗೆಗಳನ್ನು ತಂದು ಹಾಕುತ್ತಿದ್ದರು. ಇಲ್ಲವಾದರೆ ಆ ರಾತ್ರಿ ನಿದ್ದೆಗೆಟ್ಟು
ಕಾದು ಕಟ್ಟಿಗೆಯನ್ನು ಉಳಿಸಿಕೊಳ್ಳುತ್ತಿದ್ದರು. ಮರುದಿನ ಎಲ್ಲ
ಕಟ್ಟಿಗೆಗಳನ್ನು ದೊಡ್ಡ ಗಾಡಿಯಲ್ಲಿ ತುಂಬಿ ‘ಕಾಮಣ್ಣನ ಮಕ್ಕಳು
ಕಳ್ಳಸುಳ್ಳ ಮಕ್ಕಳು... ಏನೇನು ಕದ್ದರು... ಕಟ್ಟಿಗೆ ಕುಳ್ಳು ಕದ್ದರು’
ಅಂತೆಲ್ಲಾ ಒಕ್ಕೊರಲಿನಿಂದ ಕೂಗುತ್ತಾ ಹಿಂದಿನ ರಾತ್ರಿ ಮಾಡಿದ ಸಾರ್ಥಕ್ಯದ
ಕೆಲಸವನ್ನು ಕೇರಿಗೆ ಕೇಳುವಂತೆ ಡಂಗುರ ಸಾರಿಸುವುದು
ಕಾಮನಗಲ್ಲಿಯಲ್ಲಿ ಸಾಮಾನ್ಯವಾಗಿತ್ತು. ಹೀಗೊಮ್ಮೆ ಕಾಮಣ್ಣನನ್ನು ಸುಡಲಿಕ್ಕೆ
ಅಂತ ಕಟ್ಟಿಗೆಯನ್ನು ಕದಿಯುವಾಗ ಆದ ಅಚಾತರ್ಯ ಆ ವರ್ಷದ
ಆಚರಣೆಯಲ್ಲಿ ದೊಡ್ಡ ಗಲಾಟೆಯನ್ನುಂಟು ಮಾಡಿತ್ತು. ಇದನ್ನು
ಕಾಮನಗಲ್ಲಿಯ ಹುಡುಗರು ಬೇಕು ಅಂತ ಮಾಡಿದರೋ ಅಥವಾ
ಗೊತ್ತಾಗದೆ ಮಾಡಿದರೋ ಒಟ್ಟಿನಲ್ಲಿ ಅದು ದೊಡ್ಡ ಕಗ್ಗಂಟಾಗಿಯೇ ಉಳಿದಿದೆ.
ಕಾಮನಗಲ್ಲಿಯಲ್ಲಿ ಆದ ಈ ಘಟನೆ ಸುಮಾರು ನಲವತ್ತರಿಂದ ಐವತ್ತು ವರ್ಷ
ಹಳೆಯದು.


ಕಾಮನಗಲ್ಲಿಯ ಕೊನೆ ಅಂಕಣದಲ್ಲಿ ಸದಾಶಿವ ಶೆಟ್ಟರು ಅನ್ನುವವರ ಮನೆ
ಇತ್ತು. ಶೆಟ್ಟರಿಗೆ ಹೊಲಗದ್ದೆ, ತೋಟ ಅಂತೆಲ್ಲಾ ಸಾಕಷ್ಟು ಜಮೀನು, ಅದಕ್ಕೆ
ತಕ್ಕ ಹಾಗೆ ಇಳುವರಿ, ಆದಾಯ ಎಲ್ಲಾ ಇತ್ತು. ದುಡ್ಡು ಹಣಕಾಸಿನ ವಿಚಾರದಲ್ಲಿ
ಶೆಟ್ಟರು ಒಳ್ಳೆಯ ಅನುಕೂಲಸ್ಥರೇ! ಇವರ ಮನೆ ಕೊನೆ ಅಂಕಣದಲ್ಲಿದ್ದರಿAದ
ಅಕ್ಕಪಕ್ಕ ಮನೆಗಳು ಸ್ವಲ್ಪ ದೂರ ಇದ್ದಿದ್ದವು. ದೊಡ್ಡದಾದ, ಆಳೆತ್ತರದ,
ಅಗಲವಾದ ಹಳೆಯ ಕಾಲದ ಗಟ್ಟಿಮುಟ್ಟಾದ ಗೋಡೆಗಳು, ಕಪ್ಪು
ಹೋಳು ಹಂಚಿನ ಮನೆ, ಇಡೀ ಮನೆ ಅರ್ಧ ಮಣ್ಣು, ಇನ್ನರ್ಧ ಸಾಗವಾನಿ, ಹಲಸು,
ಬೀಟೆ ಮರಗಳಿಂದ ಕಟ್ಟಲಾಗಿತ್ತು. ತುಂಬಾ ಹಳೆಮನೆ ಬೇರೆ. ಮನೆಯ
ಹಿಂದುಗಡೆ ಹಿತ್ತಲಿನ ಜಾಗ ತುಂಬಾ ವಿಶಾಲವಾಗಿತ್ತು. ಹಿತ್ತಲಿನಲ್ಲಿ ತೆಂಗು, ಅಡಿಕೆ,
ಮಾವು, ನರ್ಸರಿ ಗಿಡಗಳು. ಇನ್ನೊಂದು ಬದಿಯಲ್ಲಿ ರಾಶಿರಾಶಿಯಾಗಿ ಬಿದ್ದಿದ್ದ ಮರದ
ಪೀಸುಗಳು... ಹಿತ್ತಲಿಗೆ ಹೊಕ್ಕರೆ ತಿಂಗಳ ಕೂಲಿಗೆ ಸಾಕಾಗುವಷ್ಟು
ಕದ್ದುಕೊಂಡು ಬರಲಿಕ್ಕೆ ತೊಂದರೆ ಇಲ್ಲ ಅಂತ ಶೆಟ್ಟರ ಮನೆ ಕೆಲಸಕ್ಕೆ
ಹೋಗಿಬರುತ್ತಿದ್ದ ಕೂಲಿಯಾಳುಗಳು ಹೇಳುತ್ತಿದ್ದರು. ಸದಾಶಿವ ಶೆಟ್ಟರು
ಕೇರಿಯ ಈ ತರಹದ ಆಚರಣೆ, ಜಾತ್ರೆ, ಗಣೇಶ ಚೌತಿ, ಹಬ್ಬ ಹರಿದಿನಗಳಿಗೆ
ದುಡ್ಡು ಕೊಟ್ಟಿದ್ದು ಕಡಿಮೆ. ಕೇಳಲು ಹೋದರೆ ಅಷ್ಟೋ... ಇಷ್ಟೋ...
ಕೊಟ್ಟು ಸಾಗ ಹಾಕುತ್ತಿದ್ದರು. ಹಾಗಾಗಿ ಕೇರಿಯ ಜನರು ಯಾರೂ ಚಂದಾ,
ದೇಣಿಗೆ ವಿಷಯದಲ್ಲಿ ಅವರ ಮನೆಗೆ ಹೋಗುತ್ತಲೇ ಇರಲಿಲ್ಲ.
ಕೊಪ್ಪರಿಗೆಯಷ್ಟು ಕೊಳೆಯುತ್ತಿದ್ದರೂ, ಬೇರೆಯವರ ಮನೆಯ
ಸಗಣಿಯ ಮೇಲೆಯೇ ಸದಾಶಿವನ ಕಣ್ಣು ಅಂತೆಲ್ಲಾ ಮಾತನಾಡುತ್ತಿದ್ದರು.
ಆದರೆ ಆತನ ಹಿತ್ತಲ ಮನೆಯಲ್ಲಿದ್ದ ಒಳ್ಳೆಯ ಜಾತಿಯ ಕಟ್ಟಿಗೆಯ ಮೇಲೆ
ಬಹಳಷ್ಟು ಜನರ ಕಣ್ಣು ಇತ್ತು. ಸದಾಶಿವ ಇತ್ತೀಚೆಗೆ ತನ್ನ ತೋಟದಲ್ಲಿ ಚೆನ್ನಾಗಿ
ಬಲಿತ ಹಲಸು, ಸಾಗವಾನಿ ಮರಗಳನ್ನು ಫಾರೆಸ್ಟ್ ಡಿಪಾರ್ಟ್ಮೆಂಟ್ರವರ
ಪರ್ಮಿಷನ್ ಪಡೆದು ಕಟಾವ್ ಮಾಡಿಸಿದ್ದ. ಆ ಮರಗಳನ್ನು ಕಟಾವ್ ಮಾಡಿಸಲು
ಕೂಡ ಒಂದು ಕಾರಣವಿತ್ತು. ಸದಾಶಿವ ತಾನಿದ್ದ ಬನವಾಸಿಯನ್ನು ಬಿಟ್ಟು ಸಾಗರದ
ಕಡೆಗೆ ಸೆಟ್ಲ್ ಆಗುವ ಯೋಚನೆಯಲ್ಲಿದ್ದ. ಆತನ ಮಕ್ಕಳು ಅಲ್ಲೇ
ಓದುತ್ತಿದ್ದುದರಿಂದ ಸಾಗರದ ಸುತ್ತಮುತ್ತ ಒಳ್ಳೆಯ ಜಾಗವನ್ನು
ಕೊಂಡು ಒಂದು ಭರ್ಜರಿಯಾದ ಮನೆಯನ್ನು ಕಟ್ಟಬೇಕೆಂದು
ಅಂದುಕೊಂಡಿದ್ದ . ಈಗಿದ್ದ ಮನೆ ಅದು ಪಿತ್ರಾರ್ಜಿತವಾಗಿ ಬಂದ ಬಳುವಳಿಯಾಗಿತ್ತು.
ಆತ ಈ ಮನೆಗೆ ದತ್ತು ಮಗನಾಗಿದ್ದ. ಮಕ್ಕಳಿಲ್ಲದ ರಂಗಣ್ಣ ಶೆಟ್ಟರ ಆಸ್ತಿಗೆ
ಈತನೇ ವಾರಸುದಾರನಾಗಿದ್ದ.

ಸಾಗರದಲ್ಲಿ ಭರ್ಜರಿಯಾದ ಮನೆಯನ್ನು ಕಟ್ಟಬೇಕೆಂದು ಅಂದುಕೊAಡಿದ್ದ
ಸದಾಶಿವ ಅದಕ್ಕಾಗಿ ಒಳ್ಳೆಯ ಜಾತಿ ಮರಗಳನ್ನು ಕೊಯಿಸಿ ಇಟ್ಟಿದ್ದ. ಈ ಸಾಗವಾನಿ
ಮರಗಳ ಪೀಸುಗಳ ಮೇಲೆ ಬಹಳಷ್ಟು ಜನರ ಕಣ್ಣು ಇತ್ತು. ಈ ವಿಷಯ
ಈತನಿಗೂ ಕೂಡ ಗೊತ್ತಿತ್ತು. ಹಾಗಾಗಿ ಆತ ಹಿತ್ತಲ ಮನೆಯಲ್ಲಿ
ಮಲಗುವುದನ್ನು ರೂಢಿ ಮಾಡಿಕೊಂಡಿದ್ದ. ಆದರೆ ಆ ವರ್ಷದ ಕಾಮನಹಬ್ಬದ
ಸಮಯ ಶೆಟ್ಟರಿಗೆ ಸಾಗರಕ್ಕೆ ಹೋಗಲೇಬೇಕಾದ ಅನಿವರ್ಯತೆ ಎದುರಾಯಿತು. ಆ
ದಿನದಂದು ಸದಾಶಿವ ಶೆಟ್ಟಿ ಮನೆ ಕಟ್ಟ ಬೇಕಾದ ಜಾಗ ನೋಡಲು ಹೋಗಿದ್ದ.
ಅವನು ಊರು ಬಿಟ್ಟು ಹೋಗಿದ್ದುದು, ಈ ಬಾರಿ ಕಾಮನಗಲ್ಲಿಯ ಹುಡುಗರು
ಸದಾಶಿವ ಶೆಟ್ಟರ ಮನೆಯ ಹಿತ್ತಲಿಗೆ ನುಗ್ಗುವುದಕ್ಕೂ ಸಮನಾಗಿತ್ತು. ಒಣಗಿದ
ಒಳ್ಳೆಯ ಜಾತಿಯ ಕಟ್ಟಿಗೆಯನ್ನು ಹೊತ್ತು ತರಲೇಬೇಕು ಅಂತ
ಹುಡುಗರು ನಿರ್ಧರಿಸಿದ್ದರು. ಸದಾಶಿವ ಸಾಗರಕ್ಕೆ ಹೋದ ವಿಷಯ ಗಲ್ಲಿಯ
ಹುಡುಗರಿಗೆ ಹಿಂದಿನ ದಿನವೇ ತಿಳಿದ ವಿಷಯವಾಗಿತ್ತು. ರಾತ್ರಿ ಹೋಗಲು
ನಾಲ್ಕೈದು ಹುಡುಗರು ಸಿದ್ಧರಾದರು. ಎತ್ತಿನಗಾಡಿ ರೆಡಿಯಾಯಿತು.
ಎತ್ತುಗಳಿಗೆ ಕಟ್ಟಿದ ಗಂಟೆಗಳನ್ನು ತೆಗೆಯಲಾಗಿತ್ತು. ಗಾಡಿಯ
ಗಾಲಿಗಳಿಗೆ ಚೆನ್ನಾಗಿ ಕೀಲೆಣ್ಣೆ ಹಾಕಿ ಕಿರ... ಕಿರ... ಶಬ್ದ ಮಾಡದೇ ತುಂಬಾ ನೈಸಾಗಿ


ಗಾಡಿ ಹೋಗುವಂತೆ ಮಾಡಿಕೊಂಡಿದ್ದು ಆಯಿತು. ರಾತ್ರಿ ಸುಮಾರು ಹನ್ನೊಂದು
ಗಂಟೆಯ ಹೊತ್ತಿಗಾಗಲೇ ಗಾಡಿ ಹಿತ್ತಲಿನ ಹಿಂದುಗಡೆಯ ಮಾವಿನ ತೋಪಿನಲ್ಲಿ
ಬಂದು ನಿಂತಾಗಿತ್ತು. ಒಬ್ಬ ಗಾಡಿಯ ಕಡೆ ಲಕ್ಷö್ಯವಿಡಲು ಹೇಳಿ, ಉಳಿದ
ಹುಡುಗರು ಹಿತ್ತಲ ಮನೆಯ ಬೇಲಿಯನ್ನು ಎಗರಿ ಒಳಹೊಕ್ಕರು.
ಮನೆಯಲ್ಲಿದ್ದ ಆತನ ಹೆಂಡತಿ ಮತ್ತು ತಾಯಿ ಇನ್ನೂ ಮಲಗಿರಲಿಲ್ಲ. ಕಾದು
ಕುಳಿತು ಒಂದು ತಾಸಿನ ನಂತರ ಮನೆಯ ಲೈಟುಗಳು ಆಫ್ ಆದವು.
ಇನ್ನೊಂದು ಅರ್ಧಗಂಟೆ ಹೋಗಲಿ ಅಂತ ಹುಡುಗರು ಅಲ್ಲೇ ಅಡಗಿ
ಕುಳಿತರು. ಸ್ವಲ್ಪೊ÷್ಹತ್ತು ಕಾದರು. ಜಾಸ್ತಿ ಕಾಯುವುದು ಸರಿ ಇರೋಲ್ಲ ಅಂತ
ತಿಳಿದ ಒಬ್ಬ ಹುಡುಗರಲ್ಲಿ ಒಬ್ಬನಾಗಿದ್ದ ಪುಟ್ಟಣ್ಣ ಕಟ್ಟಿಗೆ ಬಡ್ಡಿಗಳು ಇದ್ದ ಮನೆ
ಹೊಕ್ಕ. ಆ ಕತ್ತಲೆಯಲ್ಲಿ ಯಾವ ಜಾತಿಯ ಮರ, ಯಾವುದು ಚೆನ್ನಾಗಿ ಒಣಗಿದೆ.
ಹಸಿಯಾಗಿದೆ ಅಂತ ನೋಡಿಕೊಳ್ಳುವ ಸಮಯವಾಗಿರಲಿಲ್ಲ. ಒಳಗೆ ಬರುವಂತೆ
ಸನ್ನೆ ಮಾಡಿದ. ಉಳಿದ ಹುಡುಗರು ಹೋದರು. ರಾಶಿ ರಾಶಿಯಾಗಿ ಒಟ್ಟಿದ್ದ
ಕಟ್ಟಿಗೆಯಲ್ಲಿ ಮೇಲೆ ಇದ್ದ ಪೀಸುಗಳನ್ನು ಎತ್ತಿದ್ದರೆ ಖಂಡಿತ ಅನುಮಾನ
ಬರುವುದೆಂದು ಅರಿತ ಹುಡುಗರು ಒಳಗೆ ಇದ್ದ ಕಟ್ಟಿಗೆಗಳನ್ನು
ಕದಿಯಲು ನಿರ್ಧರಿಸಿದರು. ಕಟ್ ಮಾಡಿದ ಪೀಸುಗಳನ್ನು ನಿಧಾನವಾಗಿ ಎತ್ತಿ ಎತ್ತಿ
ಕೆಳಗೆ ಇಡತೊಡಗಿದರು. ಹತ್ತು-ಹದಿನೈದು ಕಟ್ಟಿಗೆ ಬೊಡ್ಡೆಗಳನ್ನು
ಎತ್ತಿದ ಮೇಲೆ ಒಣಗಿದ ಕೆಲವು ಮರದ ಪೀಸುಗಳು ಕಂಡವು. ಅದರಲ್ಲಿ
ದಪ್ಪನೆಯ ಎರಡು ಬೊಡ್ಡೆಗಳು ಕಂಡವು. `ಎತ್ತಲೇ ಅವನ್ನ’ ಅಂತ
ಪುಟ್ಟಣ್ಣ ಕೂಗಿದ. ಉಳಿದ ಹುಡುಗರು ಯಾವ ಮರ, ಯಾವ ಜಾತಿ ಅಂತ
ನೋಡದೇ ನಿಧಾನವಾಗಿ ಎತ್ತಿ, ಎತ್ತಿನಗಾಡಿ ಇದ್ದ ಹಿಂದುಗಡೆಯ ತೋಪಿನತ್ತ
ಸಾಗಿದ್ದರು. ಒಂದೊಂದು ದಾರಿಯಲ್ಲಿ ಒಂದು ಬೊಡ್ಡೆಯಂತೆ ಮರ್ನಾಲ್ಕು
ದಾರಿಯಲ್ಲಿ ಒಣಗಿದ ನಾಲ್ಕು ಒಳ್ಳೆಯ ಬೊಡ್ಡೆಗಳನ್ನು ಗಾಡಿಗೆ ಸಾಗಿಸಿದ್ದರು. ಇದಾದ
ಮೇಲೆ ಎತ್ತಿಟ್ಟ ಕಟ್ಪೀಸುಗಳನ್ನು ಒಂದರ ಮೇಲೊಂದರAತೆ ಮೊದಲು
ಹೇಗೆ ಇತ್ತೋ ಹಾಗೆಯೇ ಇಟ್ಟು, ಕದ್ದಿದ್ದಾರೆ ಅಂತ ಅನುಮಾನ ಬರದಂತೆ
ಮಾಡಿದ್ದರು. ಸದ್ದು ಮಾಡದೇ ತೋಪಿನ ಬೇಲಿಯನ್ನು ಮತ್ತೆ ಸರಿಮಾಡಿ ಗಾಡಿ
ಹತ್ತಿ ಬಂದುಬಿಟ್ಟಿದ್ದರು.

ರಾತ್ರಿ ಕಳೆಯಿತು. ಮರುದಿನ ಕಾಮನಗಲ್ಲಿ ಎಂದಿನAತೆ ಎದ್ದು ನಿಂತಿತ್ತು. ಆ
ದಿನದ ಘಟನೆಗೆ ಸಾಕ್ಷಿಯಾಗುವಂತೆ ಕಣ್ಣನ್ನು ಅಗಲಿಸಿಕೊಂಡು ಪಿಳಿಪಿಳಿ ಮಾಡಿ
ನೋಡುತ್ತಿತ್ತು. ಗಲ್ಲಿಯ ಮೊದಲ ಅಂಕಣದ ಮನೆಯಿಂದ ಎತ್ತಿನಗಾಡಿ
ಹೊರಟಿತ್ತು. ಗಾಡಿಯಲ್ಲಿ ರಾತ್ರಿ ಹೋದ ಹುಡುಗರ ಜೊತೆ ಇನ್ನೂ ೩-೪
ಹುಡುಗರು ಸೇರಿದ್ದರು. ಎಲ್ಲರೂ ಜೋರಾಗಿ ಇಡೀ ಕಾಮನಗಲ್ಲಿಗೆ
ಕೇಳುವಂತೆ ಕೂಗುತ್ತಿದ್ದರು. `ಕಾಮಣ್ಣನ ಮಕ್ಕಳು... ಕಳ್ಳ ಸುಳ್ಳ
ಮಕ್ಕಳು... ಏನೇನು ಕದ್ದರು... ಕಟ್ಟಿಗೆ ಕುಳ್ಳು ಕದ್ದರು...’
ಹುಡುಗರಲ್ಲಿ ಹಿಂದಿನ ರಾತ್ರಿ ಕದ್ದ ಹುಮ್ಮಸ್ಸು ಇತ್ತು. ಕದ್ದ ಮರ ಯಾವ
ಜಾತಿಯದ್ದು ಅಂತ ಮುಂಜಾನೆ ಕೂಡ ನೋಡುವ ಗೋಜಿಗೆ ಕೂಡ ಅವರು
ಹೋಗಿರಲಿಲ್ಲ. ಚಪ್ಪರದಲ್ಲಿ ಆಗಲೇ ಕಾಮಣ್ಣ ಸತ್ತು ಹೋಗಿದ್ದಾನೆ ಅಂತ
ಎಲ್ಲರೂ ಅಂದುಕೊಳ್ಳುವAತೆ ಆತ ಕೂತಿದ್ದ ಛೇರನ್ನು ತೆಗೆದು
ಕಾಮಣ್ಣನನ್ನು ನೆಲದ ಮೇಲೆ ಅಂಗಾತ ಮಲಗಿಸಿದ್ದರು. ರತಿದೇವಿಯ
ಬೊಂಬೆಯನ್ನು ಕಾಮಣ್ಣನ ಮುಂದೆ ನಿಲ್ಲಿಸಿದ್ದರು. ರತಿದೇವಿಯ ಕಣ್ಣಿಗೆ
ಎಣ್ಣೆಯನ್ನು ಸವರಲಾಗಿತ್ತು, ಈ ಎಣ್ಣೆ ನಿಧಾನವಾಗಿ ಅವಳ ಮುಖದಲ್ಲಿ
ಇಳಿಯುತ್ತಿತ್ತು. ಆಕೆ ಅಳುತ್ತಿದ್ದಾಳೆ ಅಂತ ಎಲ್ಲರೂ
ಅಂದುಕೊಳ್ಳಬೇಕಿತ್ತಷ್ಟೇ!

ಕಾಮಣ್ಣನ ಚಿತೆ ರೆಡಿಯಾಯಿತು. ಸದಾಶಿವ ಶೆಟ್ಟರ ಮನೆಯ ಹಿತ್ತಲಿನಿಂದ ಕದ್ದ
ಮರದ ತುಂಡುಗಳನ್ನು ನಡುವೆ ಹಾಕಿ, ನಾಲ್ಕು ದಿಕ್ಕಿಗೂ ದಪ್ಪನೆಯ ನಾಲ್ಕು
ಗೂಟಗಳನ್ನು ಬಡಿದು, ಒಳಗೆ ಕಟ್ಟಿಗೆ ರಾಶಿ ಕುಳ್ಳು, ಒಂದು ಸಣ್ಣ ಸವೆದ


ಟೈರು, ಅದರ ಮೇಲೆ ಕಾಮಣ್ಣನ ಹುಲ್ಲಿನ ದೇಹ, ಅದರ ಮೇಲೆ ಮತ್ತೆ
ಕಟ್ಟಿಗೆ ತುಂಡುಗಳು, ಕುಳ್ಳುಗಳು. ಬೆಂಕಿ ನಾಲ್ಕು ದಿಕ್ಕಿನಲ್ಲಿ ಧಗಧಗನೆ
ಉರಿದು ರಾಶಿ ಕಟ್ಟಿಗೆಯು ಬೂದಿಯಾಗುವಂತೆ ಚಿತೆಯನ್ನು ಮಾಡಲಾಗಿತ್ತು.
ಮಧುಕೇಶ್ವರ ದೇವರ ಪಲ್ಲಕ್ಕಿ ಬಂದದ್ದೇ ತಡ ಬೆಂಕಿಯನ್ನು ಪಂಜುವಿಗೆ
ಹಚ್ಚಿಕೊAಡು ಓಡಿಬಂದವನಿಗೆ ಅಡ್ಡಗಾಲು ಹಾಕಲು ಕೆಲವರು ಹಸಿಹಸಿ
ಟೊಂಗೆಗಳನ್ನು ಬರಲುಗಳಂತೆ ಸಿದ್ಧ ಮಾಡಿಕೊಂಡಿದ್ದರು. ಬೆಂಕಿಯನ್ನು
ಹಚ್ಚಿಕೊAಡು ಬಂದ ಒಬ್ಬನ ಬೆಂಕಿ ನಂದಿತು. ಅವನ ಹಿಂದೆ ಇದ್ದ ಇನ್ನೊಬ್ಬ ಮಾತ್ರ
ಯಾರ ಕೈಗೂ ಸಿಗದೇ ಕಾಮಣ್ಣನಿಗೆ ಬೆಂಕಿ ಹಚ್ಚೇಬಿಟ್ಟ. ನೋಡು
ನೋಡುತ್ತಿದ್ದಂತಯೇ ಬೆಂಕಿ ಧಗಧಗನೇ ಉರಿಯಲು ಶುರುವಾಯಿತು.
ಪುಂಡಲೀಕ ಭಟ್ಟರು ಮನೆಯಿಂದ ತಂದಿದ್ದ ಎಣ್ಣೆಯನ್ನು ಕಟ್ಟಿಗೆಯ
ಮೇಲೆ ಸುರಿದರು. ಬೆಂಕಿಯ ಜ್ವಾಲೆ ಸುಮಾರು ಹದಿನೈದು ಅಡಿ ಎತ್ತರ ಬೆಳೆದು
ನಿಂತಿತ್ತು. ಕಾಮನಗಲ್ಲಿ ಹುಡುಗರು, ಹೆಂಗಸರು ಎಲ್ಲರೂ ಬೆಂಕಿಯ ಸುತ್ತ
ಕೇಕೆ ಹಾಕಿ ಲಬ್... ಲಬ್... ಅಂತ ಬಾಯಿ ಬಡಿದುಕೊಳ್ಳುತ್ತಿದ್ದರು. ಹನ್ನೊಂದು
ಗAಟೆಯ ಸುಮಾರಿಗೆ ಸದಾಶಿವ ಶೆಟ್ಟರು ಸಾಗರದಿಂದ ಬನವಾಸಿಗೆ ಬಂದಿದ್ದರು.
ಕಾಮನಗಲ್ಲಿಯ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಹುಡುಗರೆಲ್ಲಾ
ಶೆಟ್ಟರನ್ನು ನೋಡಿದ್ದೇ ತಡ ಅವರತ್ತ ಓಡಿದರು. ಶೆಟ್ಟರನ್ನು ಹೊತ್ತು
ಕಾಮಣ್ಣನ ಬೆಂಕಿಯ ಹತ್ತಿರ ತಂದರು. ಶೆಟ್ಟರಿಗೆ ಸಿಟ್ಟು ಎಲ್ಲಿತ್ತೋ ಗೊತ್ತಿಲ್ಲ.
`ಬಿಡ್ರಲ್ಲಾ... ನನ್ನ ಬೋಳಿಮಕ್ಳಾ...’ ಅಂತ ಜೋರಾಗಿ ಕೂಗಿದರು. ಶೆಟ್ಟರ
ಕಂಕುಳದಲ್ಲಿದ್ದ ಬ್ಯಾಗು ಕೆಳಗೆ ಬಿದ್ದಿತು. ಶೆಟ್ಟರನ್ನು ಹೊತ್ತು ಕಾಮಣ್ಣನ
ಬೆಂಕಿಯ ಸುತ್ತ ಕೊನೆ ಪಕ್ಷ ಮೂರು ಸುತ್ತಾದರೂ ಹಾಕದಿದ್ದರೆ ಹೇಗೆ?
ಅಂದುಕೊಂಡಿದ್ದನ್ನು ಮಾಡಿಯೇ ಬಿಟ್ಟರು. ಮೂರು ಸುತ್ತು ಹಾಕಿ ತಿರುಗಿ
ಬರುವಷ್ಟರಲ್ಲಿ ಶೆಟ್ಟರಿಗೆ ತಲೆ ಸುತ್ತು ಬಂದಂತಾಗಿತ್ತು . ಸ್ವಲ್ಪ ಹೊತ್ತು ಅಲ್ಲೇ
ಸುಧಾರಿಸಿಕೊಂಡರು. ಕಣ್ಣನ್ನು ಒರೆಸಿಕೊಳ್ಳುತ್ತಲೇ ಧಗಧಗನೇ
ಉರಿಯುತ್ತಿರುವ ಬೆಂಕಿಯತ್ತ ನೋಡಿದರು. ಬೆಂಕಿಯ ಜ್ವಾಲೆಯಲ್ಲಿ ಹಿತ್ತಲ
ಮನೆಯ ಕಟ್ಟಿಗೆ ರಾಶಿ ನೆನಪಾಯಿತು. ಕೆಳಗೆ ಬಿದ್ದ ತಮ್ಮ ಬ್ಯಾಗನ್ನು
ಕಂಕುಳಲ್ಲಿ ಇಟ್ಟುಕೊಂಡು ಸೀದಾ ಮನೆಯ ಕಡೆ ಬರಬರನೇ ಹೆಜ್ಜೆ ಹಾಕಿದರು.
ಹೆಂಡ್ತಿ ಕಾಲು ತೊಳೆದುಕೊಳ್ಳಲು ನೀರು ತಂದುಕೊಟ್ಟರೂ, ಆಕೆಯನ್ನು
ನೋಡದೇ ಹಿತ್ತಲ ಮನೆ ಕಡೆ ಓಡಿದರು. ಹಿತ್ತಲ ಮನೆ ಹೊಕ್ಕ ಕೂಡಲೇ
ಇಟ್ಟಿದ್ದ ಪೀಸುಗಳು ಇಟ್ಟ ಹಾಗೆಯೇ ಇದ್ದರೂ, ಒಳಗಡೆ ಸಂಧಿಯಲ್ಲಿ ಇದ್ದ
ಕಟ್ಟಿಗೆಗಳನ್ನು ಸರಿಸಿದ ಹಾಗೆ ಕಂಡಿತು. ಶೆಟ್ಟರಿಗೆ ಅನುಮಾನ ಬಂದಿತು.
ಒAದೊAದಾಗಿ ಮೇಲಿದ್ದ ಸಾಗವಾನಿ ಪೀಸುಗಳನ್ನು ಕೆಳಕ್ಕೆ ಇಟ್ಟರು. ಲೆಕ್ಕದ
ಪ್ರಕಾರ ಎರಡ್ಮೂರು ಪೀಸುಗಳು ಕಡಿಮೆ ಇದ್ದಂತೆ ಕಂಡಿತು. ಶೆಟ್ಟರಿಗೆ
ಅದಕ್ಕಿಂತ ದೊಡ್ಡ ಆಘಾತ ಅಂದರೆ, ಒಳಗಿದ್ದ ಮರದ ಬೊಡ್ಡೆಗಳು
ಕಾಣದಿರುವುದು. ಶೆಟ್ಟರು ಎದೆ ಬಡಿದುಕೊಂಡು ಜೋರಾಗಿ ಕೂಗುತಿದ್ದರು.
ಅವರು ಕೂಗಿದ ರಭಸಕ್ಕೆ ಹೆಂಡತಿ ರಾಧಮ್ಮ ಓಡಿ ಬಂದರು. ಒಳಗಡೆ ಇಟ್ಟ ಆ
ಮೂರು ಬೊಡ್ಡೆಗಳು ಕಾಣೆಯಾದುದನ್ನು ಹೇಳಿದರು. ಅವಳಿಗೆ ಆ
ಮರಗಳು ಯಾವ ಜಾತಿಯವು ಅಂತ ಗೊತ್ತಿರಲಿಲ್ಲ. ಮೇಲಾಗಿ ಸದಾಶಿವ
ಶೆಟ್ಟರು ಹೆಂಡತಿಗೆ ಈ ಸಂಗತಿಯನ್ನು ಕೂಡ ಹೇಳೇ ಇರಲಿಲ್ಲ. ಮುಖ್ಯವಾಗಿ
ಅವಳ ಬಾಯಿಯಲ್ಲಿ ಏನೂ ಉಳಿಯುವುದಿಲ್ಲ ಅನ್ನುವುದು ಅವಳ ಜೊತೆ ಅಷ್ಟು
ವರ್ಷ ಸಂಸಾರ ಮಾಡಿದ್ದರಿಂದ ಎಲ್ಲ ಅರಿವಾಗಿತ್ತು. ಕಾಮಣ್ಣನಿಗೆ ಸುಡಬೇಕಾದ
ಕಟ್ಟಿಗೆಗಳನ್ನು ರಾತ್ರಿ ತಮ್ಮನೆಯಿಂದ ಕಳವು ಮಾಡಿಕೊಂಡು
ಹೋಗಿದ್ದಾರೆ ಅಂತ ಬೆಳ್ಳಂಬೆಳಗ್ಗೆಯೇ ಆಕೆಗೆ ಗೊತ್ತಾಗಿತ್ತು. ಹಾಗಂತ
ಅವಳು ಸುಮ್ಮನೇ ಕೂತಿರಲಿಲ್ಲ. ಕೇರಿಯ ಹುಡುಗರನ್ನು
ಬೆಳ್ಳಂಬೆಳಗ್ಗೆಯೇ ಮನಸೋ ಇಚ್ಛೆ ಬಯ್ದಿದ್ದಳು. ಈಗ ನೋಡಿದರೆ
ಯಜಮಾನರು ಈ ರೀತಿಯಾಗಿ ಕೂಗುವುದನ್ನು ನೋಡಿ ಈಕೆಯ ಎದೆ ಢವ
ಢವ ಅನ್ನಲಿಕ್ಕೆ ಪ್ರಾರಂಭಿಸಿತು. ಏನೆಂದು ಕೇಳಿದಳು. ಶೆಟ್ಟರು ಬಾಯಿ
ಬಿಡುತ್ತಿಲ್ಲ. `ಕಳ್ಳ ಸೂಳೆಮಕ್ಳು... ಬಡ್ಡಿ ಮಕ್ಳು...’ ಅಂತೆಲ್ಲಾ ಬಯ್ಯುತ್ತಲೇ
ಇದ್ದರೇ ವಿನಃ ಏನು ವಿಷಯ ಅಂತ ಮಾತ್ರ ಹೇಳುತ್ತಿರಲಿಲ್ಲ. ಶೆಟ್ಟರು
ಮನೆಕಟ್ಟುವ ನೆಪದಲ್ಲಿ ಹೆಂಡತಿಗೆ ಅರಿವಾಗದಂತೆ ತಮ್ಮ ತೋಟದಲ್ಲಿ ಬೆಳೆದಿದ್ದ
ಗಂಧದ ಮರಗಳನ್ನು ಕೊಯಿಸಲು, ಸುಮ್ಮನೇ ಫಾರೆಸ್ಟ್ ಆಫೀಸಿನಿಂದ
ತೇಗ, ನೀಲಗಿರಿ ಕಟಾವ್ ಮಾಡುವುದಾಗಿ ಅಂತ ಪರ್ಮಿಷನ್ ತೆಗೆದುಕೊಂಡು ಆ
ಮರಗಳ ಜೊತೆಗೆ ಈ ಗಂಧದ ಮರಗಳನ್ನು ಕಟಾವ್ ಮಾಡಿಸಿ, ಮರದ
ತುಂಡುಗಳ ವಾಸನೆ ಬಾರದಂತೆ ಸುತ್ತಲೂ ಹಲಸು, ನೀಲಗಿರಿ, ಸಾಗವಾನಿ ಮರದ
ತುಂಡುಗಳನ್ನು ಇಟ್ಟು ಜೋಡಿಸಿದ್ದರು. ಒಳಗೆ ಇಟ್ಟಿದ್ದ ಈ ಮರದ
ತುಂಡುಗಳು ಯಾರಿಗೂ ಕಾಣಬಾರದು ಅನ್ನುವುದು ಕೂಡ
ಉದ್ದೇಶವಾಗಿತ್ತು. ಈ ಸಂಗತಿಯನ್ನು ಶೆಟ್ಟರು ಹೆಂಡತಿಗೂ ಕೂಡ ಹೇಳಿರಲಿಲ್ಲ.
ರಾತ್ರಿ ಅಚಾನಕ್ಕಾಗಿ ಕಟ್ಟಿಗೆ ಕದಿಯಲೇಬೇಕೆಂದು ಬಂದಿದ್ದ ಕಾಮನಗಲ್ಲಿಯ
ಹುಡುಗರು ಅರಿವಿಲ್ಲದೇ ಮೇಲಿನ ಕಟ್ಟಿಗೆಗಳನ್ನು ಎತ್ತಿದರೆ
ಗೊತ್ತಾಗುವುದು ಅಂತ ಬುಡದಲ್ಲಿದ್ದ ಕಟ್ಟಿಗೆ ಬೊಡ್ಡೆಗಳನ್ನು
ಕದ್ದಿದ್ದರು. ಅವಸರದ ಕತ್ತಲಿನಲ್ಲಿ ಹೊತ್ತುಕೊಂಡು ಹೋದ ಆ ಕಟ್ಟಿಗೆ
ತುಂಡುಗಳು ಯಾವ ಜಾತಿಯವು ಅಂತ ಹುಡುಗರು ಕೂಡ ನೋಡಿರಲಿಲ್ಲ.
ಬೆಳಗ್ಗೆ ಎದ್ದ ಕೂಡಲೇ ಹಿಂದೆ ಮುಂದೆ ನೋಡದೇ ಈ ಗಂಧದ ಮರದ
ತುಂಡುಗಳನ್ನು ಕಾಮಣ್ಣನ ಚಿತೆಗೆ ಸೇರಿಸಿ ಬಿಟ್ಟಿದ್ದರು.
ಸದಾಶಿವ ಶೆಟ್ಟರ ಗಂಟಲಿನಲ್ಲಿ ಈಗ ಕಡುಬು ಸಿಕ್ಕಿದಂತಾಗಿತ್ತು. ಗಂಧದ
ಮರಗಳನ್ನು ಕದ್ದಿದ್ದೀರಿ ಅಂತ ಕಾಮನಗಲ್ಲಿಯ ಹುಡುಗರಿಗೆ ಹೇಳಿದರೆ
ಅದು ಕೂಡ ತಮ್ಮ ಬುಡಕ್ಕೆ ಬಂದು ಪೊಲೀಸ್ ಸ್ಟೇಷನ್, ಫಾರೆಸ್ಟ್ ಆಫೀಸು
ಅಂತೆಲ್ಲಾ ಓಡಾಡಬೇಕಾಗುತ್ತದೆಂದು ಅರಿತು ಸುಮ್ಮನಾಗಿಬಿಟ್ಟರು. ಆದರೂ
ಸದಾಶಿವ ಶೆಟ್ಟರ ಸಿಟ್ಟು ಹುಡುಗರಿಗೆ ಬಯ್ಯುವವರೆಗೂ ಕಡಿಮೆಯಾಗಲಿಲ್ಲ.
ರಸ್ತೆಗೆ ಬಂದು ಮತ್ತೆ ದೂರದಲ್ಲಿ ಕೇಕೆ ಹಾಕುತ್ತಿದ್ದ ಹುಡುಗರನ್ನು
ಕಂಡು `ಸೂಳೆಮಕ್ಳಾ... ಬೋಳಿಮಕ್ಳಾ... ನಮ್ಮನೇ ಕಟ್ಟಿಗೆ ಕದ್ರಾ..? ಹಾಳಾಗಿ
ಹೋಗ್ತೀರಿ ನೀವು... ನಮ್ಮ ಶಾಪ ತಟ್ಟುತ್ತೇ ನಿಮಗೆ...!’ ಅಂತೆಲ್ಲಾ ಮನೆಮುಂದೆ
ಶೆಟ್ಟರು ಕೂಗುತ್ತಿದ್ದರೆ, ಆ ಕಡೆಯಿಂದ ಹುಡುಗರು. `ಕಾಮಣ್ಣನ
ಮಕ್ಕಳು ಕಳ್ಳಸುಳ್ಳ ಮಕ್ಕಳು... ಶೆಟ್ರ ಹಿತ್ಲಲ್ಲಿ ಏನೇನು ಕದ್ದರು,
ಕಟ್ಟಿಗೆ ಕುಳ್ಳು ಕದ್ದರು...’ ಅಂತ ಜೋರಾಗಿ ಅವರಿಗೆ ಕೇಳುವಂತೆ
ಕೂಗುತ್ತಿದ್ದರು. ಶೆಟ್ಟರ ಸಿಟ್ಟು ಅಂಡಿನಲ್ಲಿ ಕುಳಿತಿತ್ತು. ಕಾಮಣ್ಣನ ಚಿತೆಯ ಬೆಂಕಿ
ಧಗಧಗನೇ ಉರಿಯುತ್ತಿತ್ತು. ಇವರ ಮನಸ್ಸಿನಲ್ಲಿ ಸಿಟ್ಟಿನ ಬೆಂಕಿ ಕೂಡ
ಕಾಮಣ್ಣನ ಚಿತೆಯಂತೆ ಉರಿಯುತ್ತಲಿತ್ತು. ಶೆಟ್ಟರ ಗಂಧದ ಮರದ
ಪೀಸುಗಳು ಆ ಬೆಂಕಿಯಲ್ಲಿ ಸುಟ್ಟು ಬೂದಿಯಾಗುತ್ತಿದ್ದವು.
ಶೆಟ್ಟರು ಸೀದಾ ಬಂದು ಸ್ನಾನದ ಕೋಣೆ ಹೊಕ್ಕರು. ಕದ್ದ ಆ
ತುಂಡುಗಳು ಗಂಧದ ಮರದ ತುಂಡುಗಳು ಅಂತ ಕೊನೆವರೆಗೂ ಆ
ಹುಡುಗರಿಗೆ ಗೊತ್ತಾಗಲೇ ಇಲ್ಲ. ಕದ್ದ ಕಟ್ಟಿಗೆಗಳನ್ನು ಬೇಗ ಒಟ್ಟುವ
ಅವಸರದಲ್ಲಿ ಗಂಧದ ಪೀಸುಗಳ ವಾಸನೆ ಕೂಡ ಈ ಹುಡುಗರ ಮೂಗಿಗೆ
ಬಡಿಯಲೇ ಇಲ್ಲ. ಶೆಟ್ಟರು ಹೆಂಡತಿಗೂ ಕೂಡ ಅವಳ ಬಾಯಿಯ ಮೇಲೆ ನಂಬಿಕೆ
ಇಲ್ಲದೇ ಗಂಧದ ಮರಗಳನ್ನು ಇಟ್ಟ ವಿಷಯವನ್ನು ಹೇಳಿಯೇ ಇರಲಿಲ್ಲ. ಆ
ದಿನ ಸಾಯಂಕಾಲ ದೇವರ ಸತ್ಯವೆಂಬAತೆ ಮಳೆ ಬಿದ್ದು, ಕಾಮಣ್ಣನ ಚಿತೆಯನ್ನು
ಸಂಪÀÇರ್ಣವಾಗಿ ಆರಿಸಿತು. ಇದಾದ ಮುಂದಿನ ವರ್ಷದ ಕಾಮಣ್ಣನ ಹಬ್ಬ
ಬರುವುದರೊಳಗೆ ಸದಾಶಿವ ಶೆಟ್ಟರು ತಮ್ಮ ಪರಿವಾರದೊಂದಿಗೆ ಬನವಾಸಿಯಿಂದ
ಸಾಗರಕ್ಕೆ ಶಿಫ್ಟ್ ಆಗಿದ್ದರು.
ಕಾಮನಗಲ್ಲಿಯಲ್ಲಿ ಇಲ್ಲಿಯವರೆಗೆ ಹತ್ತಾರು ತಲೆಮಾರುಗಳು ಬದುಕಿ ಬಾಳಿ
ವರದೆಯ ತಪ್ಪಲಿನಲ್ಲಿ ಮಣ್ಣಾಗಿ ಹೋಗಿವೆ. ಪ್ರತಿ ಊರು-ಕೇರಿ ಅಂದ ಮೇಲೆ ಅಲ್ಲಿ
ಇಂತಹ ಹತ್ತಾರು ಕುತೂಹಲಕಾರಿ ಘಟನೆಗಳು ನಡೆಯುತ್ತಲೇ ಇರುತ್ತವೆ.

ಇದಕ್ಕೆ ಬನವಾಸಿ ಕೂಡ ಹೊರತಾಗಿಲ್ಲ. ಪ್ರತಿವರ್ಷ ಶಿವರಾತ್ರಿಯಂದು ವರದೆಯ
ತಪ್ಪಲಿನಲ್ಲಿ ಸ್ನಾನ ಮಾಡುವುದು ನಡೆಯುತ್ತಲೇ ಇದೆ. ಹತ್ತಾರು
ಊರುಗಳಿಂದ ಶಿವರಾತ್ರಿಯಂದು ಶ್ರೀಕ್ಷೇತ್ರ ಮಧುಕೇಶ್ವರನಿಗೆ
ಅಭಿಷೇಕ ಹಾಗೂ ಬಿಲ್ಪತ್ರೆ ನೀಡಲು ಬನವಾಸಿಗೆ ಬರುತ್ತಾರೆ. ಜೇನಿನ ಬಣ್ಣದ ಕಲ್ಲಿನ
ಮೂರ್ತಿ ಶಿವನನ್ನು ನೋಡುವುದೇ ಬನವಾಸಿಯ ದೊಡ್ಡ ಸೊಗಸು.
ಸಾಲಂಕೃತವಾಗಿ ಮಧುಕೇಶ್ವರನನ್ನು ಸಿಂಗಾರ ಮಾಡಿರುತ್ತಾರೆ.
ಶಿವರಾತ್ರಿಯಂದು ಊರಿಗೆ ಬಂದವರಲ್ಲಿ ಕೆಲವರು ವರದೆಯ ರಭಸಕ್ಕೆ
ಕೊಚ್ಚಿಹೋದ ಅನೇಕ ಘಟನೆಗಳು ಕೂಡ ಆಗಿದ್ದುಂಟು. ಹೀಗೆ ಬಂದು
ಸತ್ತವರ ಕಡೆಯವರ ಆಕ್ರಂದನ, ನೋವು ವರದೆಯ ದಂಡೆಯ
ಮೇಲಿರುವ ಬಿದಿರು ಮಟ್ಟ್ಟಿಗಳಲ್ಲಿ ಅಡಗಿ ಕುಳಿತಿದೆ. ಸುಮಾರು ಮೂವತ್ತು-
ನಲವತ್ತು ವರ್ಷಗಳ ಹಿಂದೆ ಆಗುತ್ತಿದ್ದ ಮಧುಕೇಶ್ವರ ರಥೋತ್ಸವದ
ವೈಭೋಗ ಇಂದಿನ ದಿನಗಳಲ್ಲಿ ಇಲ್ಲ. ಬನವಾಸಿಯಲ್ಲಾಗುತ್ತಿದ್ದ ಆ
ರಥೋತ್ಸವದ ವೈಭೋಗ, ಇದ್ದ ಕಾಡು ಈಗ ಕೇವಲ ಅವರವರ ಬಾಯಿಮಾತಿಗೆ
ನೆನಪುಗಳಾಗುತ್ತಿವೆ ಅಷ್ಟೇ. ಕದಂಬರ ಆಳ್ವಿಕೆಯಿಂದ ಇಂದಿನವರೆಗೆ
ಸುಮಾರು ಎರಡು ಸಾವಿರ ವರ್ಷಗಳಲ್ಲಾದ ಎಲ್ಲ ಬೆಳವಣಿಗೆಗಳು,
ರಾಜಧಾನಿಯ ವೈಭೋಗ, ನಾಶ, ಹೋರಾಟ, ಆಕ್ರಮಣ, ಸಾವು ನೋವು, ಪಂಪನ
ಸಾಹಿತ್ಯ, ರಾಜರ ಆಳ್ವಿಕೆ, ಸೋದೆ ಅರಸರ ದಾನಧರ್ಮ, ಆಚರಣೆ, ವೈದಿಕ ನೆಲೆ,
ರಥೋತ್ಸವ, ತೆಪ್ಪ ಹಾಕುವುದು, ಕಾಮಣ್ಣನ ಸುಡುವುದು, ಹೀಗೆ ಊರಿನಲ್ಲಿ
ನಡೆಯುತ್ತಿರುವ, ನಡೆದುಹೋದ ಇಂತಹ ಸಾವಿರಾರು ಸಾಂಗತ್ಯಗಳನ್ನು
ತಂದೆ ಶ್ರೀಮಧುಕೇಶ್ವರ ಹಾಗೂ ತಾಯಿ ವರದೆ ಎಲ್ಲವನ್ನು ಸಾವಿರಾರು
ವರ್ಷಗಳಿಂದ ನೋಡುತ್ತಾ ಬಂದಿದ್ದಾರೆ. ವರದೆಯ ಆಳದಲ್ಲಿ, ಈಶ್ವರನ
ಕಣ್ಣಿನಲ್ಲಿ ಈ ಎಲ್ಲ ನೆನಪುಗಳು ಅಡಗಿ ಕುಳಿತಿವೆ. ಇಂದಿಗೂ ಬನವಾಸಿಯನ್ನು
ಬಿಟ್ಟು ಹೊಟ್ಟೆಪಾಡಿಗಾಗಿ ಊರು ಬಿಟ್ಟಿರುವ ಮಕ್ಕಳನ್ನು, ಜನರನ್ನು
ದೂರದಿಂದಲೇ ಇವರಿಬ್ಬರು ನೋಡುತ್ತಿದ್ದಾರೆ. ಇಂದು ಕಾಮನಗಲ್ಲಿಯ
ಹುಡುಗರು ಕೂಡ ತುಂಬಾ ಬದಲಾಗಿದ್ದಾರೆ, ಹಳೆಯದನ್ನು ಮರೆತಿದ್ದಾರೆ,
ಅನೇಕರು ಊರು ಬಿಟ್ಟು ಬೆಂಗಳೂರು ಸೇರಿದ್ದಾರೆ. ಕಾನ್ವೆಂಟಿನಲ್ಲಿ
ಓದುತ್ತಿರುವವರಿಗೆ ಕಾಮಣ್ಣನನ್ನು ಸುಡಲು ರಜೆ ಕೊಡುತ್ತಿಲ್ಲ. ಕಾಮಣ್ಣ
ಸತ್ತಾಗ ಬಾಯಿ ಬಡಿದುಕೊಳ್ಳಲು ಜನರು ಸೇರುತ್ತಿಲ್ಲ. ಕಟ್ಟಿಗೆ ಕದಿಯುವರಿಲ್ಲ.
ಜನರೇ ಕಟ್ಟಿಗೆ ತಂದು ಹಾಕುತ್ತಾರೆ. ಈ ಎಲ್ಲ ನೋವುಗಳ ನಡುವೆಯೂ
ಕಾಮಣ್ಣನನ್ನು ಸುಡುವುದು ಮಾತ್ರ ಇಂದಿಗೂ ಬನವಾಸಿಯಲ್ಲಿ ನಿಂತಿಲ್ಲ. ಆಚರಣೆ
ಕೇವಲ ನೆಪವಾಗಿದೆ.