Click here to Download MyLang App

ಹುಚ್ಚುಕೋಡಿ ಮನಸು : ರಾಘವೇಂದ್ರ ಅಗ್ನಿಹೋತ್ರಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ

ಹುಚ್ಚುಕೋಡಿ ಮನಸು

'ಢಣ್..' ಎಂದು ಗ್ರೂಪಲ್ಲಿ ಬಂದು ಬಿದ್ದ ಮೆಸೇಜ್ ನೋಡಿ ಸದಸ್ಯರೆಲ್ಲರೂ ಒಮ್ಮೆ ಹುಬ್ಬೇರಿಸಿದ್ದರು!!

ಈ ಬಾರಿ ಇವರದ್ದು ಎಂತಾ ಇರಬಹುದು ಎಂಬ ಜಿಜ್ಞಾಸೆ ಎಲ್ಲರಲ್ಲೂ ಮೂಡಿತ್ತು.

'ಹುಚ್ಚುಕೋಡಿ ಮನಸು ಹದಿನಾರು ಮಾತ್ರವಲ್ಲ, ಹದಿನಾರನ್ನು ಉಲ್ಟಾ ಮಾಡಿದಾಗ ಬರುವ ವಯಸ್ಸೂ ಹುಚ್ಚುಕೋಡಿಯೇ. ನಿಜವಾಗಿ ನೋಡಿದರೆ ಐವತ್ತರಿಂದ ಆರಂಭಗೊಂಡು ಹದಿನಾರನ್ನ ಉಲ್ಟಾ ಮಾಡಿದಾಗ ಬರುವ ಅರ್ವತ್ತೊಂದರ ವರಗೆ ಮನಸ್ಸು ಇನ್ನಷ್ಟು ಹುಚ್ಚುಕೋಡಿಯೇ..'

ಏನು ಎತ್ತ ಎಂಬ ವಿವರವನ್ನು ಮುಂದಿನ ವಾರ ಸ್ವದೇಶಕ್ಕೆ ಬಂದ ಬಳಿಕ ವಿವರಿಸುವೆ.

ಇಷ್ಟೇ ವಿವರಗಳಿದ್ದ ಅಡ್ಮಿನ್ ಮ.ಸು. ರಾಯರ ಮೆಸೇಜ್ ಓದಿ, ಏನಪ್ಪಾ ಇದು...? ಎಂದು ಗ್ರೂಪ್‌ನಲ್ಲಿದ್ದವರಲ್ಲಿ ಕೌತುಕ ಕಾಡುವಂತೆ ಮಾಡಿತ್ತು.

ನಿವೃತ್ತರು ಹಾಗೂ ನಿವೃತ್ತಿಯ ಅಂಚಿನಲ್ಲಿರುವ ಹಿರಿಯರು ಊರಿನ ಕಟ್ಟೆಯಲ್ಲಿ ದಿನವೂ ಸಂಜೆ ಟೈಮ್ ಪಾಸ್ ಗೆ ಪೊಕಳೆ ಹೊಡೆಯಲು ಎಲ್ಲರೂ ಸೇರುವುದು ರೂಢಿ.
ಇವರೆಲ್ಲ ಸೇರಿ 'ಕಟ್ಟೆ ಹಿರಿಯರು' ಎಂಬ ಗ್ರೂಪ್‌ ಕ್ರಿಯೇಟ್ ಮಾಡಿಕೊಂಡಿದ್ದರು. ಅದಕ್ಕೂ ಕಾರಣವಿದೆ, ಎಲ್ಲರೂ ಹಿರಿಯರಾದ್ದರಿಂದ ಮನೆಯಲ್ಲಿ ಎಲ್ಲರಿಗೂ ಪಥ್ಯ. ಶುಗರ್, ಬಿಪಿ, ಕಿಡ್ನಿ, ಹಾರ್ಟ್ ಹೀಗೆ ವಯೋಸಹಜ ಖಾಯಿಲೆ ಎಲ್ಲರಲ್ಲೂ ಇತ್ತು. ಅದಕ್ಕೇ ಮನೆಯಲ್ಲಿ ತಿಂಡಿ ಮಾಡಿದರೂ ಹಿರಿಯರಿಗೆ ಬೇಕಾದಷ್ಟು ಸಿಗುತ್ತಿರಲಿಲ್ಲ. ಅದಕ್ಕೆಂದೇ ಹೊಸದೊಂದು ಗ್ರೂಪ್‌ ಮಾಡಿ ದಿನ ದಿನವೂ ಒಬ್ಬೊಬ್ಬರು ಒಂದೊಂದು ತಿಂಡಿ ತಂದು ಹಂಚಿಕೊಂಡು ತಿನ್ನುವ ನಿಯಮ ರೂಪಿಸಿಕೊಂಡಿದ್ದರು. ಯಾರು ಯಾವ ತಿಂಡಿ ತರುವುದು ಎಂಬ ಬಗ್ಗೆ ಗ್ರೂಪಲ್ಲಿ ಚರ್ಚೆ ಆಗ್ತಾ ಇತ್ತು.

ಹತ್ತು ಜನ ಹಿರಿಯರಿದ್ದ ಗ್ರೂಪಲ್ಲಿ ಮ.ಸು. ರಾಯರು ಎಂದೇ ಜನಪ್ರಿಯರಾಗಿದ್ದ ಮಂದಾರಬೈಲು ಸುಂದರ ರಾಯರು ಪ್ರತಿವಾರ ಗೋಳಿಬಜೆ ತರುವುದು ನಿಗದಿಯಾಗಿತ್ತು. ಕೊಂಚಾಡಿ ಸೀತಾರಾಮ ಶೆಟ್ಟಿ ಅಲಿಯಾಸ್ ಕೊ.ಸಿ. ಶೆಟ್ಟರು ನೀರುಳ್ಳಿ ಬಜೆ, ಹೇರಂಭ ಸುದರ್ಶನ ಶಾಸ್ತ್ರಿ ಹೆ.ಸು. ಶಾಸ್ತ್ರಿ ಶೇಂಗಾ ಹಾಗೂ ಎಳ್ಳು ಚಿಕ್ಕಿ, ಮಾಲೇಮಾರ್ ಚಿದಂಬರ ಪೈ ಮಾ.ಚಿ. ಪೈ ಪತ್ರೊಡೆ, ದೇರೇಬೈಲು ಮುಕುಂದ ಉಪಾಧ್ಯಾಯ ದೆ.ಮು. ಉಪಾಧ್ಯಾಯರು ಅಮೃತ ಫಲ ತರುವುದು ಎಂದು ಪಟ್ಟಿ ಮಾಡಿಕೊಂಡಿದ್ದರು.

ದಿನಾಲೂ ಬಗೆಬಗೆಯ ತಿಂಡಿ ತಿಂದು ಹರಟೆ ಹೊಡೆದು ಕತ್ತಲಾಗುವುದರೊಳಗೆ ಮನೆ ಸೇರುತ್ತಿದ್ದರು.
ಯಾರದ್ದಾದರೂ ಹುಟ್ಟಿದ ದಿನವಿದ್ದರೆ ಅಥವಾ ತುಟ್ಟಿ ಭತ್ತೆ ಹೆಚ್ಚಳವಾದಾಗ ಹೊಟೇಲ್ ನಲ್ಲಿ ಊಟ ಕೊಡಿಸುವುದು ಗ್ರೂಪ್‌ ನ ಅಲಿಖಿತ ನಿಯಮವಾಗಿತ್ತು.

ಗ್ರೂಪಲ್ಲಿ ಎಲ್ಲರಿಗಿಂತ ಹೆಚ್ಚು ಹರಟೆ ಹೊಡೆಯುವವರು ಮ.ಸು.ರಾಯರು, ಅದಕ್ಕೆಂದೇ ಅವರು ಅಡ್ಮಿನ್. ಅತಿ ಸಣ್ಣ ವಿಷಯವನ್ನೂ ಬಣ್ಣ ಹಚ್ಚಿ ಬಣ್ಣಿಸುವಲ್ಲಿ ಅವರು ನಿಸ್ಸೀಮರು. ಸಾಮಾನ್ಯ ವಿಷಯವಾದರೂ ರಸವತ್ತಾಗಿ ಕಣ್ಣಿಗೆ ಕಟ್ಟಿದಂತೆ ವಿವರಿಸುವ ಅವರು ಊರಲ್ಲಿಲ್ಲದ ದಿನಗಳೆಂದರೆ ಗ್ರೂಪಲ್ಲಿ ಬೋರೊ ಬೋರು. ಬೇರೆಯವರ ತಲೆಯಲ್ಲಿ ಹುಳಬಿಡುವುದರಲ್ಲಂತೂ ಅವರು ನಿಷ್ಣಾತರು.

ಆರು ತಿಂಗಳಿಗೆಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಮಗನ ಮನೆಗೆ ಹೋಗಿದ್ದ ಮ.ಸು. ದಂಪತಿ, ಇನ್ನೇನು ಬರಲು ಕೆಲವೇ ದಿನಗಳು ಬಾಕಿಯಿರುವಾಗ ಗ್ರೂಪಲ್ಲಿ ಅವರು ಹಾಕಿದ ಮೆಸೇಜ್ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲಿಸಿತ್ತು.

ಅದರಲ್ಲೂ ಮಧ್ಯ ವಯಸ್ಸಿನಲ್ಲೇ ಮಡದಿಯನ್ನು ಕಳೆದುಕೊಂಡಿದ್ದ ದೆ.ಮು. ಉಪಾಧ್ಯಾಯರಲ್ಲಿ ಇನ್ನಷ್ಟು ಕೌತುಕತೆ ಕಾಡುವಂತೆ ಮಾಡಿತ್ತು.

ಮೆಸೇಜ್ ಬಗ್ಗೆ ಇನ್ನೇನಾದರೂ ವಿವರ ಸಿಗಬಹುದಾ ಎಂದು ಉಪಾಧ್ಯಾಯರು ಅಡ್ಮಿನ್ ರ ಸ್ಟೇಟಸ್ ಚಕ್ ಮಾಡಿದ್ದರು. ಅಲ್ಲೂ ಅಷ್ಟೇ ವಿವರವಿದ್ದರಿಂದ ನಿರಾಶರಾದರು. ಕಾತರ ತಣಿಯದೇ ಅಡ್ಮಿನ್ ರ ಇನ್ ಬಾಕ್ಸ್ ಗೆ ಹೋಗಿ, 'ಎಂತದು ಮಾರಾಯ್ರೆ ಇದು ಹುಚ್ಚು ಕೋಡಿ ಮನಸು? ಅಮೆರಿಕದ ಕ್ಲಿಂಟನ್ ಮೋನಿಕಾ ಲೆವೆನೆಸ್ಕಿ ಕಥೆಯಾ, ಟ್ರಂಪ್ ರಾಸಲೀಲೆಯಾ? ಅಥವಾ ನೀವೇ.. ಎಲ್ಲಾದರೂ ಅಮೆರಿಕದ ಕೆಂಪೆಣ್ಣಿನ ಜೊತೆಗೆ ತಗಲಾಕ್ಕೊಂಡ್ರಾ ಎಂತದು ಕಥೆ..?' ಎಂದು ಕೇಳಿದ್ದರು.

ಆದರೂ ವಿವರ ಲಭ್ಯವಾಗಲಿಲ್ಲ, 'ಅಷ್ಟು ದೊಡ್ಡ ಕಥೆಯನ್ನು ವಾಟ್ಸಾಪ್ ಅಥವಾ ಫೋನ್ ನಲ್ಲಿ ಹೇಳಕಾಗಲ್ಲಪ್ಪ, ಮುಂದಿನ ವಾರ ಹೇಗೂ ಕಟ್ಟೆಗೆ ಬರ್ತೇನಲ್ಲ, ಎಲ್ಲವನ್ನೂ ಅಲ್ಲೇ ವಿವರವಾಗಿ ಹೇಳುವೆ' ಎಂದಷ್ಟೇ ಪ್ರತಿಕ್ರಿಯಿಸಿದ್ದರು.

ಆದರೂ ರಾಯರು ಬರುವವರೆಗೆ ತಾನೇ ವಿಷಯವನ್ನು ಬ್ರೇಕ್ ಮಾಡಬೇಕೆಂದು ಅಮೆರಿಕದ ವಾಷಿಂಗ್ಟನ್ ಪೋಸ್ಟ್, ನ್ಯೂಯಾರ್ಕ್‌ ಟೈಮ್ಸ್‌ ಹಾಗೂ ಕೆಲ ವೆಬ್ಸೈಟ್ ಗಳನ್ನೆಲ್ಲ ಉಪಾಧ್ಯಾಯರು ತಡಕಾಡಿದ್ದರು. ರಾಯರು ಹೇಳಿದಂತಹ ರೋಚಕ ಕಥೆ ಅವರ ಕಣ್ಣಿಗೆ ಬೀಳಲಿಲ್ಲ.

ಸೋತು ಸುಣ್ಣವಾಗಿ ಇನ್ನೊಮ್ಮೆ ಮ.ಸು.ರಾಯರಿಗೆ, 'ಎಂತದು ಮಾರಾಯ್ರೆ ಇಷ್ಟು ಹೇಳಿದ್ರೂ ಹೇಳಕಾಗಲ್ವಾ? ನಾನು ಗ್ರೂಪ್‌ ಬಿಡಬೇಕಾ?' ಎಂದು ಬೆದರಿಕೆಯ ಮೆಸೇಜ್ ಹಾಕಿದ್ದರು.

ಅದಕ್ಕೂ ಮ.ಸು.ರಾಯರು ಕ್ಯಾರೇ ಮಾಡದೇ, 'ಗ್ರೂಪ್‌ ಬಿಟ್ಟರೆ ನಿಮಗೆ ಲಾಸ್ ಈಗಂತೂ ಯಾರಿಗೂ ಗೊತ್ತಾಗದಂತೆ ಗ್ರೂಪ್‌ ಬಿಡುವ ಆಪ್ಶನ್ ವಾಟ್ಸಾಪ್ ನೀಡಿದೆ' ಎಂದಷ್ಟೇ ಪ್ರತಿಕ್ರಿಯಿಸಿದ್ದರು.

ಹೌದು, ಗ್ರೂಪ್‌ ಬಿಟ್ಟರೆ ನನಗೇ ಲಾಸ್, ಯಾಕೆ ಬಿಡುವುದು ಎಂದುಕೊಂಡ ಉಪಾಧ್ಯಾಯರು, ಕೆಂಪು ಮೂತಿಯ ಇಮೋಜಿ ಹಾಕಿ ತನ್ನ ಕೋಪ ವ್ಯಕ್ತಪಡಿಸಿದ್ದರು.

****

ವಾರದ ಬಳಿಕ ಮ.ಸು.ರಾಯರು ಸ್ವದೇಶಕ್ಕೆ ಬಂದಿಳಿದು, ಮನೆ ತಲುಪಿದ್ದರು. ಗ್ರೂಪನ ಎಲ್ಲರೂ ಮ.ಸು. ರಾಯರು ಹೇಳುವ ಕಥೆಗಾಗಿ ಚಾತಕ ಪಕ್ಷಿಯಂತೆ ಕಾದಿದ್ದರು.
'ಸಾರ್ರೀ...ನಾನು ಇಂದು ಕಟ್ಟೆಗೆ ಬರುತ್ತಿಲ್ಲ, ನನಗೆ ಸ್ವಲ್ಪ ಶೀತ, ಜ್ವರ ಇದೆ' ಎಂದು ಮೆಸೇಜ್ ಮಾಡಿ, ಕಥೆಯ ಬಗ್ಗೆ ಕುತೂಹಲ ಹಾಗೇ ಕಾಯ್ದುಕೊಳ್ಳಲು, 'ಐವತ್ತೆರಡರ ವಯಸ್ಸಲ್ಲೂ ಕುಚ್ ಕುಚ್.. ಹೋತಾ ಹೈ...' ಎಂದು ಸದಸ್ಯರು ಮತ್ತಷ್ಟು ತಲೆ ಕೆರೆದುಕೊಳ್ಳಲು ಹುಳ ಬಿಟ್ಟು, ತಾನು ಚಾದರ ಹೊದ್ದು ಮಲಗಿಬಿಟ್ಟರು.

'ಥತ್ ತೆರಿಕಿ.. ಛೇ ಎಂತದು ಇವರದ್ದು ಮಾರಾಯ್ರೆ..' ಎಂದು ಗ್ರೂಪ್ ನ ಎಲ್ಲರೂ ಮ.ಸು. ರಾಯರನ್ನ ವಾಚಾಮಗೋಚರವಾಗಿ ಶಪಿಸಿದ್ದರು.

ಆದರೆ ಉಪಾಧ್ಯಾಯರ ಎದೆಯಲ್ಲಿ ಮಾತ್ರ ನವಿಲೇ ಕುಣಿದಾಡಿತ್ತು, ಏಕೆಂದರೆ, ಬಂದಿದ್ದ ಎರಡನೇ ಮೆಸೇಜ್ ಲ್ಲಿ ಐವತ್ತೆರಡರಲ್ಲೂ ಕುಚ್ ಕುಚ್ ಹೋತಾ ಹೈ ಎಂದಿತ್ತು, ಈ ಉಪಾಧ್ಯಾಯರಿಗೆ ಕಳೆದ ತಿಂಗಳಷ್ಟೇ ಐವತ್ತೆರಡು ತುಂಬಿತ್ತು.

ಅವರಿಗೆ ನಲ್ವತ್ತಾರು ವರ್ಷವಾಗಿದ್ದಾಗ ನಿಮೋನಿಯಾದಿಂದ ಮಡದಿಯನ್ನು ಕಳೆದುಕೊಂಡು, ಒಂಟಿ ಬದುಕು ಸವೆಸುತ್ತಿದ್ದರು.

ಉಪಾಧ್ಯಾಯರಿಗೆ ಕಟ್ಟೆಯಲ್ಲಿ ಹಿರಿಯರು, 'ನೀವು ಇನ್ನೊಂದು ಮದುವೆ ಆಗಿ' ಎಂದು ಒತ್ತಾಯಿಸಿದಾಗ, 'ನನಗೆ ಈ ವಯಸ್ಸಲ್ಲಿ ಯಾರು ಹೆಣ್ಣು ಕೊಡ್ತಾರೆ' ಎಂದು ಕೇಳಿದ್ದರೇ ಹೊರತು, ಮದುವೆಯಾಗುವುದಿಲ್ಲವೆಂದು ಅವರು ನಿರಾಕರಿಸಿರಲಿಲ್ಲ.

ದೆ.ಮು. ಉಪಾಧ್ಯಾಯರು ಮ.ಸು.ರಾಯರ ಮನೆಗೇ ಹೋಗಿ ಬರ್ತೇನೆಂದು ಹೊರಡಲಣಿಯಾದರು. ಆಗ ಎಲ್ಲರೂ ಅವರನ್ನು ತಡೆದು,
'ಇನ್ನೂ ಕರೋನ ಪೂರ್ಣವಾಗಿ ಮುಗಿದಿಲ್ಲ, ಅವರು ವಿದೇಶದಿಂದ ಬಂದುದ್ದು, ಯಾಕೆ ಗಡಿ ಬಿಡಿ ಮಾಡೋದು? ಇಷ್ಟು ದಿನವೇ ಆಗಿದೆ, ಇನ್ನೊಂದು ವಾರ ಕಾಯೋಣ' ಎಂದು ಸಮಾಧಾನಿಸಿದ್ದರು.

ಅಂತೂ ಇಂತೂ ಕಥೆಗೆ ಕಾಲ ಕೂಡಿ ಬಂದಿತ್ತು. ಒಂದು ವಾರ ಬಳಿಕ ರಾಯರು ಗೋಳಿಬಜೆ ಕಟ್ಟಿನೊಂದಿಗೆ ಕಟ್ಟೆಗೆ ಹಾಜರಾಗಿದ್ದರು.

ಎಲ್ಲರೂ ಎರಡೆರಡು ಗೋಳಿಬಜೆ ತಿಂದು, ನೀರು ಕುಡಿದು ಕಟ್ಟಿಕೊಂಡು ಬಂದ ಕಾಗದದಲ್ಲಿ ಒಮ್ಮೆ ಕೈ ಒರೆಸಿ, ಬಳಿಕ ಕರವಸ್ತ್ರದಲ್ಲಿ ಮತ್ತೆ ಕೈ ಬಾಯಿ ಒರೆಸಿಕೊಂಡು ರಾಯರು ಹೇಳುವ ಕಥೆ ಕೇಳಲು ಅಣಿಯಾದರು.

'ಕಥೆ ತುಂಬಾ ದೊಡ್ಡದಾಗಿದೆ, ಎಲ್ಲ ಇಂದೇ ಹೇಳಿ ಮುಗಿಸುವುದಾ...? ಅಥವಾ ಇಂದು ಅರ್ಧ, ನಾಳೆ ಇನ್ನರ್ಧ ಹೇಳುವುದಾ' ಎಂದು ರಾಯರು ಉಪಾಧ್ಯಾಯರ ಮುಖವನ್ನೇ ನೋಡಿ ಪ್ರಶ್ನಿಸಿದರು.

'ಅದೆಂತದು ಧಾರಾವಾಹಿಯಾ, ಒಂದೇ ದಿನದಲ್ಲಿ ಮುಗಿಸಿ' ಎಂದರು ಉಪಾಧ್ಯಾಯರು.

ಆಯ್ತು, ಆಯ್ತು ನಡು ನಡುವೆ ಯಾರೂ ಡಿಸ್ಟರ್ಬ್ ಮಾಡಬಾರದೆಂದು ತಾಕೀತು ಮಾಡಿ ಕಥೆ ಶುರುವಿಟ್ಟರು. ಮ.ಸು. ರಾಯರಿಂದಲೇ ಕೇಳಿ:

ಆರು ತಿಂಗಳಿಗೆಂದು ಕ್ಯಾಲಿಫೋರ್ನಿಯಾದಲ್ಲಿರುವ ನನ್ನ ಮಗನ ಮನೆಗೆ ಹೋಗಿದ್ನಾ, ಅಲ್ಲಿ ನಡೆದ ಘಟನೆಯಿದು. ಮಲತಾಯಿಯಿಂದಾಗಿ ಮಗನೊಬ್ಬ ಬೇರೆ ಮನೆ ಮಾಡುವ ಕಥೆಯಿದು.

'ಶಟ್, ಛೇ..ಛೇ ಇಷ್ಟೇಯಾ? ಇಷ್ಟಕ್ಕೇ ನಾವು ಕಾದಿದ್ದಾ? ಇಂತಹ ಎಷ್ಟೋ ಕಥೆ ನಾವು ಕೇಳಿದ್ದೇವೆ' ಎಂದು ಉಪಾಧ್ಯಾಯರು ನಡುವೆ ಅಸಮಾಧಾನ ವ್ಯಕ್ತಪಡಿಸಿದರು.

'ನೋಡಿ, ನೋಡಿ.. ಉಪಾಧ್ಯಾಯರನ್ನು ಯಾರಾದರೂ ತಡೆತಿರೊ, ಅಥವಾ ಕಥೆ ಇಲ್ಲಿಗೇ ನಿಲ್ಲಿಸಲೊ' ಎಂದು ಮ.ಸು. ರಾಯರು ಬಿಲ್ಡಪ್ ಕೊಟ್ಟರು.

ಎಲ್ಲರೂ ಉಪಾಧ್ಯಾಯರ ಮೇಲೆ ಮುಗಿಬಿದ್ದರು. ಉಪಾಧ್ಯಾಯರು ತಣ್ಣಗಾದರು.

ಇದು ಅಂತಿಂಥ ಮಲತಾಯಿ ಕಥೆಯಲ್ಲ, ಕೇಳಿದ್ರೆ ನೀವೂ ಮರುಗುವಿರಿ ಎಂದು ರಾಯರು ಮುಂದುವರಿಸಿದರು. ಕಾತರದಿಂದ ಎಲ್ಲರೂ ರಾಯರ ಕಥೆಗೆ ಕಿವಿಯಾದರು.

ನನ್ನ ಮೊಮ್ಮಗನ ಕ್ಲಾಸ್ ಮೇಟ್, ಫ್ರೆಂಡ್ ಫಿಲಿಪ್ ಮಧ್ಯಮ ವರ್ಗದಿಂದ ಬಂದ ಹುಡುಗ, ಕಲಿಕೆಯಲ್ಲಿ ಮುಂದಿದ್ದ.
ಆಗಾಗ ನನ್ನ ಮಗನ ಮನೆಗೆ ಬರ್ತಾ ಇದ್ದದ್ದರಿಂದ, ನನಗೂ ಆತನ ಪರಿಚಯವಾಗಿತ್ತು.
ಮೊನ್ನೆ ಮನೆಗೆ ಬಂದವನು, ಅಂಕಲ್ ನಾನು ಕ್ಯಾಲಿಫೋರ್ನಿಯಾವನ್ನು ಬಿಟ್ಟು ದೂರ ನ್ಯೂಜೆರ್ಸಿ ಗೆ ಶಿಫ್ಟ್ ಆಗಲು ನಿರ್ಧರಿಸಿರುವೆ ಎಂದು ನಡುಗುವ ಧ್ವನಿಯಲ್ಲಿ ಅಯಾಚಿತವಾಗಿ ಬಂದ ಕಣ್ಣೀರು ಸುರಿಸುತ್ತಾ ಹೇಳಿದಾಗ ನಮಗೂ ಅವನಲ್ಲಿ ಕನಿಕರ ಮೂಡಿತ್ತು.
ಆತನನ್ನು ಸಮಾಧಾನಿಸಿ, ಯಾಕೆ ಏನಾಯ್ತು? ಎಂದಾಗ ಅವನ ಕಥೆಯನ್ನು ಫಿಲಿಪ್ ನಮಗೆ ಅರುಹಿದ್ದ.

ನನ್ನ ಗರ್ಲ್ ಫ್ರೆಂಡ್ ಮೇರಿ ಪುಸ್ತಕದ ಹುಳು, ನಾನು ಬರ್ರೀ ಆಳಸಿ. ಭೇಟಿಯಾದಾಗೆಲ್ಲ ಅವಳು ಆ ಪುಸ್ತಕ, ಈ ಪುಸ್ತಕವೆಂದು ಪುಸ್ತಕದ ಬಗ್ಗೆಯೇ ಕೊರೆಯುತ್ತಿರುತ್ತಿದ್ದಳು. ನೀನು ಕೇವಲ ಕಾಲೇಜ್ ಬುಕ್ ಮಾತ್ರ ಓದಿದರೆ ಸಾಲದು, ಇತರ ಪುಸ್ತಕಗಳನ್ನೂ ಓದು, ಅದರಿಂದ ಜನರಲ್ ನಾಲೆಡ್ಜ್ ಇಂಪ್ರೂವ್ ಆಗುತ್ತೆ, ಇಲ್ಲವಾದರೆ ಬರೀ ಬುದ್ದು ಆಗ್ತೀಯಾ ಎಂದು ನನ್ನನ್ನು ಯಾವಾಗಲೂ ಛೇಡಿಸುತ್ತಲೇ ಇರುತ್ತಿದ್ದಳು.
ಹೀಗೆ ಒಮ್ಮೆ ವೀಕೆಂಡ್ ಲ್ಲಿ ಅವಳ ಜೊತೆ ಸುತ್ತುತ್ತಿರುವಾಗ ಪುಸ್ತಕದ ವಿಷಯದಲ್ಲೇ ಜಗಳವಾಗಿ ಅವಳೊಂದಿಗೆ ನಾನು ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ್ದೆ. ಇಲ್ಲೆಲ್ಲ ಗರ್ಲ್ ಫ್ರೆಂಡ್ ಬದಲಿಸುವುದೆಂದರೆ ಅಂಗಿ ಬದಲಿಸಿದಷ್ಟೇ ಸುಲಭ. ಅವಳ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡು ಇತ್ತೀಚೆಗೆ ನಾನು ಬೇರೆ ಮದುವೆ ಆದೆ.

ಇಗೊ ಕ್ಲಾಶ್ ನಿಂದಾಗಿ ಡ್ಯಾಡಿಗೆ ಡೈವರ್ಸ್ ನೀಡಿ ಮಾಮ್ ಬೇರೆ ಮದುವೆ ಆಗಿದ್ದರು. ನನಗೆ ಆಗ ಐದು ವರ್ಷ.
ಅಲ್ಲಿಂದ ಇಲ್ಲಿಯವರೆಗೂ ಡ್ಯಾಡಿಯ ತೆಕ್ಕೆಯಲ್ಲೇ ಬೆಳೆದವನು ನಾನು. ಮಾಮ್ ನ್ನು ಅತಿಯಾಗಿ ಪ್ರೀತಿಸುತ್ತಿದ್ದ ಡ್ಯಾಡಿ ತುಂಬಾ ಮಾನಸಿಕವಾಗಿ ನೊಂದಿದ್ದರು. ಅವರಿಗೆ ಆ ನೋವಿನಿಂದ ಹೊರಬರಲು ಅಂದು ಸಹಾಯಕವಾಗಿದ್ದು ನಾನು ನನ್ನ ಬಾಲ್ಯ, ಹಾಗೇ ಡ್ಯಾಡಿಯಲ್ಲಿರುವ ಅಪಾರ ಪುಸ್ತಕಗಳು.

ಆದರೆ ಇಂದು ಅದೇ ಪುಸ್ತಕಗಳು ನನ್ನ ನೆಮ್ಮದಿ ಹಾಳು ಮಾಡಿವೆ. ಡ್ಯಾಡಿಯಲ್ಲಿ ಗ್ರೀಕ್ ಕಥೆಗಳು, ಲಿಯೊ ಟಾಲ್ಸ್ಟಾಯ್ ಅವರ ಕೃತಿಗಳು ಸೇರಿ ಎಲ್ಲ ಜನಪ್ರಿಯ ಆಥರ್ ಗಳ ಪುಸ್ತಕಗಳ ದೊಡ್ಡ ಸಂಗ್ರಹವೇ ಇದೆ. ಆರಂಭದಿಂದಲೂ ನನಗೇನು ಪುಸ್ತಕಗಳಲ್ಲಿ ಅಷ್ಟೊಂದು ಪ್ರೀತಿ ಇರಲಿಲ್ಲ, ಆದರೆ ನನ್ನ ಗರ್ಲ್ ಫ್ರೆಂಡ್ ಮೇರಿಗೆ ಪುಸ್ತಕಗಳಲ್ಲಿ ಅಪಾರ ಪ್ರೀತಿ. ನನ್ನ ಮನೆಗೆ ಬಂದಾಗಲೆಲ್ಲ ಡ್ಯಾಡಿಯಲ್ಲಿ ಹೇಳಿ ಕೆಲವು ಪುಸ್ತಕಗಳನ್ನು ಕೊಂಡು ಹೋಗಿ ಓದಿ ಮರಳಿಸುತ್ತಿದ್ದಳು.

ಡ್ಯಾಡಿಗೆ ತುಂಬಾ ಪರಿಚಯವಾಗಿ, ತುಂಬಾ ಹೊತ್ತಿನವರೆಗೆ ಅವರಲ್ಲಿ ಹರಟುತ್ತಾ ಕುಳಿತಿರುತ್ತಿದ್ದಳು. ಕೊನೆಗೆ ವಿಸ್ಕಿ ಕುಡಿಯಲೂ ಡ್ಯಾಡಿಗೆ ಆಗಾಗ ಅವಳು ಕಂಪನಿಕೊಟ್ಟಿದ್ದಳು.

ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಲಿ ಎಂದಂತೆ ನಾನೇನೊ ಅವಳಿಂದ ದೂರವಾದೆ, ಆದರೆ ಡ್ಯಾಡ್ ಜೊತೆ ಅವಳು ನಿಕಟವಾಗಿದ್ದಳು. ಬೇರೆ ಬೇರೆ ಪುಸ್ತಕಗಳನ್ನು ಪಡೆಯಲು ಡ್ಯಾಡ್ ಜೊತೆ ಆಗಾಗ ಮೀಟ್ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು.

ಒಂದು ದಿನ, 'ಡ್ಯಾಡ್, ಮೇರಿಯನ್ನು ನೀವ್ಯಾಕೆ ಮೀಟ್ ಆಗೋದು, ಅವಳಿಗೆ ಪುಸ್ತಕ ಕೊಡೊದು ಯಾಕೆ ಲೈಬ್ರರಿ ಇಲ್ವಾ ಎಂದು ಕೇಳಿದ್ದಕ್ಕೆ,
ಫಿಲಿಪ್.. ಎಂದು ಒಮ್ಮೆ ಗಟ್ಟಿ ಸ್ವರದಲ್ಲಿ ಗದರಿಸಿದರು.
ನಾನೂ ಡ್ಯಾಡ್..ಎಂದು ಜೋರಾಗೇ ಹೇಳಿದೆ.

'ಇಟ್ಸ್ ನನ್ ಆಫ್ ಯುವರ್ ಬ್ಯುಸಿನೆಸ್, ಕೀಪ್ ಕ್ವೈಟ್' ಅಂದರು.
ನೋ ಡ್ಯಾಡ್.. ಅಂದಾಗ, ಗೆಟ್ ಲಾಸ್ಟ್ ಎಂದು ಗದರಿಸಿ ಬಿಟ್ಟರು.

ನನಗೆ ಗಾಬರಿಯಾಗಿತ್ತು, ಡ್ಯಾಡ್ ಅಷ್ಟು ಉಗ್ರವಾಗಿ ನನಗೆ ಗದರಿಸಿದ್ದು ಅಂದೇ.
ಮಾಮ್ ಇಲ್ಲದೆ ಡ್ಯಾಡ್ ನೆರಳಲ್ಲೇ ಬೆಳೆದಿದ್ದ ನನಗೆ ಡ್ಯಾಡ್ ವರ್ತನೆ ಯಾಕೋ ಅರಗಿಸಿಕೊಳ್ಳಲಾಗಲೇ ಇಲ್ಲ.
ತುಂಬಾ ಕೋಪದಲ್ಲಿದ್ದಾರೆ, ಎರಡು ದಿನ ಬಿಟ್ಟು ತಿಳಿಯಾದಾಗ ಆ ಬಗ್ಗೆ ಮಾತಾಡೋಣವೆಂದು ನಾನು ಸುಮ್ಮನಾದೆ.

ಎರಡು ದಿನ ಬಿಟ್ಟು ಡ್ಯಾಡ್ ಕೂಲ್ ಆಗಿರುವುದನ್ನ ಗಮನಿಸಿ, ಡ್ಯಾಡ್ ಮೇರಿಯನ್ನು ಪದೇ ಪದೇ ನೀವು ಮೀಟ್ ಆಗಬೇಡಿ ಎಂದು ಅಂಗಲಾಚಿದೆ.

ಅಷ್ಟಕ್ಕೇ ಡ್ಯಾಡ್, 'ನೋಡು ಫಿಲಿಪ್, ನೀನು ಮೇರಿಯೊಂದಿಗೆ ಜಗಳ ಮಾಡಿಕೊಂಡಿರಬಹುದು. ಆದರೆ ನನಗೆ ಮೇರಿ ತುಂಬಾ ಇಷ್ಟವಾಗಿದ್ದಾಳೆ. ನಾವಿಬ್ಬರೂ ಮುಂದಿನ ತಿಂಗಳು ಮದುವೆ ಆಗಲು ನಿರ್ಧರಿಸಿಯಾಗಿದೆ. ನೀನು ಇಲ್ಲಿಯೇ ಇರುವುದಾದರೆ ನನ್ನ ಅಭ್ಯಂತರವೇನೂ ಇಲ್ಲ, ಸಾಧ್ಯವಿಲ್ಲವೆಂದಾದರೆ ನಿನ್ನ ದಾರಿ ನಿನಗೆ' ಎಂದು ಖಂಡತುಂಡವಾಗಿ ಹೇಳಿಬಿಟ್ಟರು.

ನನಗೀಗ 26, ಮೇರಿಗೂ ನನ್ನಷ್ಟೇ ವರ್ಷ, ಡ್ಯಾಡಿಗೆ 52!!
ಇದು ಈಗಿನ ಟ್ರೆಂಡ್.

ಒಂದು ಕಾಲದಲ್ಲಿ ನನ್ನ ಗರ್ಲ್ ಫ್ರೆಂಡ್ ಆಗಿದ್ದವಳೀಗ ನನಗೆ ಮಲತಾಯಿಯಾಗಿ ಬರುತ್ತಿದ್ದಾಳೆ. ಅವಳ ಮೋಹಕ ಮಾತಿಗೆ ಡ್ಯಾಡ್ ಮರುಳಾದರೊ ಅಥವಾ ನನಗೆ ಪಾಠ ಕಲಿಸಲೆಂದೇ ಅವಳು ಡ್ಯಾಡ್ ನ್ನು ಮೋಹದ ಪಾಶದಲ್ಲಿ ಸಿಲುಕಿಸಿದಳೋ ನಾನರಿಯೆ. ಕಾಲ ಮಿಂಚಿ ಹೋಗಿದೆ. ಈ ವಯಸ್ಸಿನಲ್ಲಿ ಡ್ಯಾಡಿಗೊಂದು ಸಂಗಾತಿ ಬೇಕಿರಬಹುದೆಂದು ನಾನೂ ಎಂದೂ ಚಿಂತಿಸಲೇ ಇಲ್ಲ. ಬಹುಶಃ ಡ್ಯಾಡ್ ನಾನು ದೊಡ್ಡವನಾಗಿ ಜಾಬ್ ಆಗಿ, ಮದುವೆಯಾದ ಬಳಿಕ ತಾನು ಬೇರೆ ಮದುವೆಯಾಗೋಣವೆಂದು ಚಿಂತಿಸಿದ್ದಿರಬಹುದು. ಅದನ್ನು ನಾನು ಯೋಚಿಸಬೇಕಿತ್ತು, ಆದರೆ
ಈಗ ಚಿಂತಿಸಿ ಫಲವಿಲ್ಲ. ನಾನೇ ಅವರಿಂದ ದೂರವಿರುವುದು ಒಳಿತು ಎಂದು ನ್ಯೂ ಜೆರ್ಸಿಗೆ ಟ್ರಾನ್ಸಫರ್ ತಕೊಳ್ತಾ ಇದ್ದೇನೆ ಎಂದು ಫಿಲಿಪ್ ಗದ್ಗದಿತನಾಗಿದ್ದ.

ಅವನ ಕಥೆ ಕೇಳಿ ನಾವೂ ಅವನ ದುಃಖದಲ್ಲಿ ಭಾಗಿಯಾದೆವು. ನನ್ನ ಮಗ ಅವನಿಗೆ ಏನಾದರೂ ಸಹಾಯ ಬೇಕಿದ್ದರೆ ಕೇಳು ಹಿಂಜರಿಕೆ ಬೇಡ ಎಂದು ಭರವಸೆ ತುಂಬಿದ್ದಾನೆ.
ವಿಷಾದ ಭಾವದಿಂದ ಎಲ್ಲರಿಗೂ ಕೈಮುಗಿದು ಬೈ ಬೈ ಎಂದು ಹೊರಟಾಗ, ನಾವೆಲ್ಲರೂ ಗೇಟ್ ವರೆಗೂ ತೆರಳಿ ಅವನನ್ನು ಬೀಳ್ಕೊಟ್ಟು ಬಂದಿದ್ದೆವು.

ನಾನು ಈ ಬಾರಿ ಅಮೆರಿಕಕ್ಕೆ ಹೋದಾಗ ಕಳೆದ ವಾರ ನಡೆದ ಘಟನೆಯಿದು ಎಂದು ಗ್ರೂಪ್‌ ಅಡ್ಮಿನ್ ಮ.ಸು. ರಾಯರು ಹೇಳಿದಾಗ 52ರಲ್ಲಿ ಫಿಲಿಪ್ ತಂದೆಯ ತಲ್ಲಣಗಳನ್ನು ಕೇಳಿ 'ಕಟ್ಟೆ ಹಿರಿಯರು' ಗ್ರೂಪನ ಸದಸ್ಯರೆಲ್ಲ ನಿಟ್ಟುಸಿರು ಬಿಟ್ಟಿದ್ದರು.

-