Click here to Download MyLang App

ಅಮಾವಾಸ್ಯೆಯ ರಾತ್ರಿಯಲ್ಲಿ ಅಲಮೇಲಮ್ಮನ ಮಾರ್ಜಾಲ ಮಾಯೆ ಭಾಗ 1 : ರಾಜೇಂದ್ರ ಕುಮಾರ್ ಗುಬ್ಬಿ | ಭಯಾನಕ | ಕತೆಯ ಒಳನುಡಿ ಶೈಲಿ -ಶಿಷ್ಟಸ್ವರೂಪದ ಕನ್ನಡ |ಯಾವ ದನಿಯಲ್ಲಿ ಆಡಿಯೋ ಕತೆಯಾಗಬೇಕು ಅನ್ನುವ ಕುರಿತು ಲೇಖಕರ ಆಯ್ಕೆ: ಗಂಡಿನ ದನಿ

ಅಮಾವಾಸ್ಯೆಯ ರಾತ್ರಿಯಲ್ಲಿ

ಅಲಮೇಲಮ್ಮನ  ಮಾರ್ಜಾಲ ಮಾಯೆ

(ಭಯಾನಕ ಕಥೆ)

ಭಾಗ-1

ಮಲೆನಾಡಿನ ಪಶ್ಚಿಮ ಘಟ್ಟಗಳಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಒಂದು ಚಿಕ್ಕದಾದ ಪುಟ್ಟಪ್ಪ ಟೀ ಅಂಗಡಿ, ಸುಮಾರು ವರುಷಗಳಿಂದಲೂ ಈ ಅಂಗಡಿ  ಇದೆ, ಅಂದು  ಅಮಾವಾಸ್ಯೆಯ ರಾತ್ರಿ ಎಂಟು  ಗಂಟೆ ಇರಬಹುದು,  ಮಳೆಗಾಲವಾದ್ದರಿಂದ ಜನರ ಓಡಾಟ ತುಂಬಾ ವಿರಳವಾಗಿತ್ತು, ಬೇರೆ ಸಮಯದಲ್ಲಾದರೆ,  ಹೆದ್ದಾರಿಯಾದ್ದರಿಂದ  ವಾಹನಗಳ ಓಡಾಟ ಹೆಚ್ಚೇ ಇರುತ್ತದೆ, ಆದರೆ ಇಂದು ವಾಹನಗಳ ಓಡಾಟ ತುಂಬಾ ಕಡಿಮೆ ಇದ್ದಿದ್ದರಿಂದ ಈ ಟೀ ಅಂಗಡಿ  ಪಕ್ಕದಲ್ಲಿದ್ದ ಟೈರ್ ಪಂಕ್ಚರ್ ಅಂಗಡಿ,  ಅಂದು ತುಂಬಾ ಜೋರು ಮಳೆ ಕಾರಣ ಆ  ಅಂಗಡಿಯನ್ನು ಬೇಗನೇ ಮುಚ್ಚಿ ಮನೆಕಡೆ ಹೋಗಿದ್ದರು,  ಈ ಟೀ ಅಂಗಡಿ ಬಿಟ್ಟರೆ ಮತ್ತೆ ಐದಾರು ಮೈಲುಗಳು ಯಾವುದೇ ವಸ್ತುಗಳು ದೊರೆಯುವುದಿಲ್ಲ, ಮುಂದೆ ಬರುವ ಹಳ್ಳಿಯಲ್ಲೇ ಏನಾದರೂ ದೊರಕುತ್ತಿದ್ದದ್ದು,  ಕಾರಣ ಇಲ್ಲಿಂದ ಮುಂದೆ ರಸ್ತೆ ತಿರುವುಗಳು, ಪಶ್ಚಿಮ ಘಟ್ಟ

 

ರಸ್ತೆ ಪ್ರಾರಂಭವಾಗುತ್ತದೆ.  ಈ ಟೀ ಅಂಗಡಿ ಮಾಲೀಕ ಪುಟ್ಟಪ್ಪನವರು ಮಾತ್ರ ರಾತ್ರಿವೇಳೆ ಇದೇ ಅಂಗಡಿಯಲ್ಲಿ ತಂಗುತ್ತಿದ್ಧರು, ಸರಿ ರಾತ್ರಿಯಲ್ಲಿ ಯಾವುದಾದರೂ ಜನರಿಗೆ,  ವಾಹನಗಳಿಗೆ ತೊಂದರೆ ಎಂದು ಬಂದು ಬಾಗಿಲು ಬಡಿದರೆ ಅವರ ನೆರವಿಗೆ ಧಾವಿಸುತ್ತಿದ್ದರು,  ಕಾಫಿ,ಚಹಾ, ಸಿಗರೇಟು, ವಗೈರೆ........ಏನಾದರೂ ಅತ್ಯವಶ್ಯಕ ವಸ್ತುಗಳುಬೇಕೆಂದರೆ,  ವಾಹನಗಳ ಟೈರ್ ಗಳು ಪಂಚರ್ ಆದರೆ, ವಾಹನಗಳು ಕೆಟ್ಟು ನಿಂತರೆ, ಅದಕ್ಕೆ ಸಂಬಂಧಪಟ್ಟ ಮೆಕ್ಯಾನಿಕ್ ಗಳನ್ನು ಆ ರಾತ್ರಿಯಲ್ಲೂ ಹಳ್ಳಿಯಿಂದ ಕರೆಸಿ,  ಪ್ರಯಾಣಿಕರಿಗೆ ತುಂಬಾ ಸಹಾಯ ಮಾಡುತ್ತಿದ್ದರು, ಇದರಿಂದ ಖುಷಿಯಾಗಿ ಇವರ ಕೆಲಸ ಮೆಚ್ಚಿ ಉದಾರವಾಗಿ,  ತಮ್ಮ ತೊಂದರೆಗಳು ಪರಿಹಾರವಾದ್ದರಿಂದ ಸ್ವಲ್ಪ ಹೆಚ್ಚೇ ಹಣ ನೀಡುತ್ತಿದ್ದರು, ವ್ಯಾಪಾರವೂ ಆಯಿತು, ಕೈತುಂಬಾ ಕೆಲಸವೂ ದೊರೆಯಿತು, ಮನೆ ಖರ್ಚಿಗೆ ಹಣವೂ ಬಂದಂತಾಯಿತು,  ಎನ್ನುವ ಖುಷಿ, ಈ ಪುಟ್ಟಪ್ಪನವರಿಗೆ. ಹೀಗೆ ಪುಟ್ಟಪ್ಪ ಟೀ ಅಂಗಡಿ ಒಂದು ಥರಾ ಜಂಕ್ಷನ್ ರೀತಿ ಇದ್ದು, ತುಂಬಾ ಹೆಸರು ಮಾಡಿತ್ತು, ಅವರ ಊರು ಇಲ್ಲೇ ಕಾಡಿನಲ್ಲಿ ಒಂದು ಮೈಲು ದೂರ  ನಡೆದು ಹೋದರೆ  ರಂಗನಾಥಪುರ ಎಂಬುದು.

 

     ಅಂದೂ ಸಹ ಅಮಾವಾಸ್ಯೆಯ ಕಡು ಕತ್ತಲು, ಮಲೆನಾಡು ಪ್ರದೇಶದಲ್ಲಿ, ಅದರಲ್ಲೂ ಮಳೆಗಾಲದಲ್ಲಿ ಸಂಜೆಗೆಲ್ಲಾ ಕತ್ತಲಾವರಿಸಿ ರಾತ್ರಿಯ ಅನುಭವವಾಗುತ್ತದೆ, ಇನ್ನೇನು ಜನರು, ಪ್ರಯಾಣಿಕರು, ವಾಹನಗಳು ಎಲ್ಲವೂ ಕಡಿಮೆಯಾಯಿತು, ಈ ಜಿಟಿ ಜಿಟಿ ಮಳೆ ಕಾರಣ, ಇನ್ನು ಬಾಗಿಲು ಹಾಕಿಕೊಂಡು ಮಲಗೋಣವೆಂದು ಯೋಚಿಸಿದರು ಪುಟ್ಟಪ್ಪ, ಮಳೆ ಸುರಿಯುತ್ತಲೇ ಇದೆ, ಸಮಯ ಆಗ ಸುಮಾರು ಎಂಟು ಗಂಟೆ ಇರಬಹುದು, ಆಗ ಇದ್ದಕ್ಕಿದ್ದಂತೆ ಕತ್ತಲಿನಲ್ಲಿ ಗೆಜ್ಜೆ ಶಬ್ಬ ಎಂದಿಗಿಂತ ಸ್ವಲ್ಪ ಜೋರಾಗಿಯೇ ಕೇಳಿಸತೊಡಗಿತು, ಪುಟ್ಟಪ್ಪನವರಿಗೆ ಇದು ಮಾಮೂಲಿ....... ಕಾರಣ ಯಾವುದಾದರೂ ಪ್ರಯಾಣಿಕರು ಕಾಫಿ, ಚಹಾ ಕುಡಿಯಲು ಇವರ ಅಂಗಡಿಗೆ ,  ಕಾರಿನಿಂದ ಇಳಿದು ಬರುವ ಮಹಿಳಾ ಪ್ರಯಾಣಿಕರ ಕಾಲಿನ ಗೆಜ್ಜೆ ಹೀಗೇ ಶಬ್ದ ಮಾಡಿಕೊಂಡು ಬರುವುದು ರೂಢಿ, ಹಾಗೆಯೇ ಎಂದು ಯೋಚಿಸಿದ ಪುಟ್ಟಪ್ಪನವರು,

ಯಾರೋ ಪ್ರಯಾಣಿಕರು ಈ ಕತ್ತಲಿನಲ್ಲಿ ಬಂದಿರಬೇಕೆಂದುಕೊಂಡು ಅಂಗಡಿಯಿಂದ ತನ್ನ ತಲೆ ಹೊರಹಾಕಿ ನೋಡಿದರೆ ಯಾವುದೂ ಕಾರು ಇಲ್ಲ, ಆದರೆ ಇಬ್ಬರು ಮನುಷ್ಯ ಆಕೃತಿಗಳು ಮಾತ್ರ ತನ್ನ ಅಂಗಡಿ ಕಡೆಯೇ ಬರುತ್ತಿರುವಂತೆ ಕಂಡಿತು, ಹತ್ತಿರ

 

ಬಂದ ಅವರಲ್ಲೊಬ್ಬರು,   ಪುಟ್ಟಪ್ಪಾ......ಪುಟ್ಟಪ್ಪಾ.... ಎಂದು ತನ್ನನ್ನೇ ಕೂಗಿದಂತಾಗಿ , ಯಾರೋ ನನ್ನನ್ನು ಕೂಗಿಕರೆದಂತಾಯಿತಲ್ಲಾ...... ಯಾರೋ ನನಗೆ ಚಿರ ಪರಿಚಿತರೇ ಇರಬೇಕು , ಪಾಪ ಈ ರಾತ್ರಿಯಲ್ಲಿ ಏನು ತೊಂದರೆಯೋ ಏನೋ,  ನೋಡೋಣವೆಂದು  ಕತ್ತಲೆಯಲ್ಲೇ ಅಂಗಡಿಯಿಂದ ಹೊರಗೆ ಬಂದು , ಯಾರು.......ಯಾರು......ಅದು..... ಎಂದು ಕೂಗುತ್ತಾ ಬಂದು ನೋಡಿದರು ಪುಟ್ಟಪ್ಪ, ಆಗ ಇವರ ಅಂಗಡಿ ಹತ್ತಿರವೇ  ಬಂದಿದ್ದ ಆ ಇಬ್ಬರಲ್ಲಿ ಒಬ್ಬರು ಇವರ ಚಿರಪರಿಚಿತರೇ ಆದ ನೀರು ಗಂಟಿ ನಾಗಪ್ಪ, ಜೊತೆಗೆ ಒಂದು ಮಧ್ಯವಯಸ್ಕ ಹೆಣ್ಣು, ಇಬ್ಬರನ್ನೂ ಈ ಕಡುಗತ್ತಲು, ಜಡಿಮಳೆಯಲ್ಲಿಯೇ ನೆನೆಯುತ್ತಾ ಬಂದದ್ದು  ನೋಡಿ ಸ್ವಲ್ಪಗಾಬರಿಯಾದರು ಪುಟ್ಟಪ್ಪ,

ಅರೇ...... ಏನು ನಾಗಪ್ಪಾ.....ಈ ಜಡಿ ಮಳೆಯಲ್ಲಿ..... ಸರಿ ರಾತ್ರಿಯಲ್ಲಿ....... ಇಷ್ಟುದೂರ ಬಂದಿದ್ದೀಯಾ...... ಅದೂ......ಅದೂ.....ಯಾರು.......ಅವರು.....ನಿನ್ನ ಜೊತೆ ಬಂದಿರೋದು....... ಎಂದು ಆಶ್ಚರ್ಯದಿಂದ  ಕೇಳಿದರು.

      ಅಯ್ಯೋ.......ಅದೊಂದು ದೊಡ್ಡ ಕಥೆ ಪುಟ್ಟಪ್ಪಾ...... ಈಗ ಹೇಳಲು ಸಮಯವಿಲ್ಲ, ಒಂದು ತೊಂದರೆಗೆ ಸಿಲುಕಿರುವೆವು ನಾವುಗಳು, ನೀನೇ ಕಾಪಾಡಬೇಕು..... ನನ್ನನ್ನು ಹಾಗೂ ಈ ಹೆಣ್ಣು

 

ಮಗಳನ್ನು.......ಇವಳ ಹೆಸರು ಚಂದ್ರಲೇಖಾ ಅಂತ, ಎಂದು ನಾಗಪ್ಪ ಒಂದೇ ಸಮನೆ ಹೇಳಿದ, ಆಗ ಕತ್ತಲೆಯಲ್ಲಿಯೇ ಆ ಹೆಣ್ಣು ಮಗಳು ಚಂದ್ರಲೇಖ ಕಡೆ ಕಣ್ಣು ಹಾಯಿಸಿದ ಪುಟ್ಟಪ್ಪ ಕ್ಷಣಕಾಲ ಭಯಗೊಂಡರು, ಕಾರಣ ಆ ಹೆಂಗಸಿನ ಕಣ್ಣುಗಳು ಈ ಕತ್ತಲೆಯಲ್ಲೂ ಬೆಕ್ಕಿನ ಕಣ್ಣಿನ ರೀತಿ ಫಳ-ಫಳ ಹೊಳೆಯುತ್ತಿದ್ದುದ್ದನ್ನು ನೋಡಿದರು,  ಕ್ಷಣಕಾಲ ಇಡೀ ಮೈಯೆಲ್ಲಾ ಬೆವೆತು ಹೋದಂತಾಯಿತು, ಆದರೂ ತುಂಬಾ ಧೈರ್ಯವಂತ ಪುಟ್ಟಪ್ಪ ಮುಖ ಒರೆಸುತ್ತಾ, ಆ ಹೆಂಗಸನ್ನು ನೋಡದೆ, ನಾಗಪ್ಪನನ್ನುದ್ದೇಶಿಸಿ ಅದೇನು ಒಗಟಿನ ರೀತಿ ಇದೆ ನಿನ್ನ ಮಾತುಗಳು.......ಸರಿಯಾಗಿ ಹೇಳಬಾರದೇ.......

ಎಂದರು,  ಅದಕ್ಕೆ ನಾಗಪ್ಪ , ಈಗ ಎಲ್ಲವನ್ನೂ ವಿವರಿಸಲು ಸಮಯವಿಲ್ಲ, ನಾಳೆಬೆಳಿಗ್ಗೆ ಬಂದು ಸವಿವರವಾಗಿ ಹೇಳುವೆ, ನೀನು ನನ್ನ ಆಪದ್ಭಾಂದವನೆಂದು ನಿನ್ನ ಬಳಿ ಸಹಾಯ ಬೇಡಿ ಬಂದೆ, ನಾನೀಗಲೇ ಹೊರಡಬೇಕು, ಬೆಳಗಿನಜಾವವೇ ನಾನು ಕೆರೆ ನೀರು, ಗದ್ದೆಗಳಿಗೆ ಬಿಡಬೇಕು, ತುಂಬಾ ಕೆಲಸವಿದೆ , ಈಗ ನಾನು ಹೇಳಿದಂತೆ ಈ ಹೆಣ್ಣುಮಗಳನ್ನು ನಿನ್ನ ಜೊತೆ ಇಟ್ಟುಕೋ ಈ ಒಂದು ರಾತ್ರಿ, ನಾಳೆ ಬೆಳಿಗ್ಗೆಯೇ ಬಂದು ಇವಳನ್ನು ಕರೆದುಕೊಂಡು ಹೋಗುವೆ , ಎಂದನು ನಾಗಪ್ಪ.

 

    ಅರೇ.....ಈ ಸರೀ ರಾತ್ರೀಲಿ.......ಈ ಕಗ್ಗತ್ತಲಿನ ಕಾಡಿನಲ್ಲಿ....... ಜಿಟಿ ಜಿಟಿ ಮಳೆಯಲ್ಲಿ ........ಈ ಚಿಕ್ಕ ಪೆಟ್ಟಿ ಅಂಗಡೀಲಿ........ಏನು ತಮಾಷೆ ಮಾಡ್ತಿದ್ದೀಯಾ...... ನಾಗಪ್ಪಾ.....ಅದೂ ಅಲ್ಲದೇ.......ಇವಳೂ ಒಂಟಿ ಹೆಣ್ಣು, ನಾಗಪ್ಪಾ..... ಎಂದರು ಪುಟ್ಟಪ್ಪ.  ಅಯ್ಯೋ ಮಾರಾಯ ಈ ಅಂಗಡೀಲಿ ಇಟ್ಕೋ ಅಂತ ಅಂತೀನಾ......... ಅಂದನು ನಾಗಪ್ಪ,

ಮತ್ತೇ.......ರಾಗವಾಡಿದರು,  ಪುಟ್ಟಪ್ಪ,

ಈಕೆ ಬೇರಾರೂ ಅಲ್ಲ ಪುಟ್ಟಪ್ಪ........ಈ ಚಂದ್ರಲೇಖ ಬೇರೆ ಯಾರೂ ಅಲ್ಲ,  ಖಾಸಾ ನನ್ನ ಅಣ್ಣನ ಮಗಳು, ದೂರದ ಊರಿನಲ್ಲಿ ಅವಳ ಅಜ್ಜಿ , ಅಂದರೆ ನನ್ನ ತಾಯಿ, ಹಾಗೂ ತಂಗಿ  ಮನೇಲಿ ಇದ್ದಳು, ಈಗ್ಗೆ ನಾಲ್ಕು ದಿನದ ಕೆಳಗೆ ನಮ್ಮ ಊರಿಗೆ ಬಂದವಳನ್ನು ನಮ್ಮ ಊರ ಗೌಡ ಇದಾನಲ್ಲವ ಸಿದ್ದೇಗೌಡ, ಅವನ ಎರಡನೇ ಮಗ  ಪೋಲಿ ಪರಮೇಶಿ ಇದ್ದಾನಲ್ವಾ....... ಅವನು ಕಣ್ಣಾಕಿಬಿಟ್ಟಿದ್ದಾನೆ, ಏನಾರಾ ಮಾಡಿ ನನಗೆ ಮದುವೆ ಮಾಡಿಕೊಡಿ ಎಂದು ಇವಳ ಹಿಂದೆ ಬಿದ್ದಿದ್ದಾನೆ, ಜೊತೆಗೆ ಇವಳು ಬೇರೆ ಮಾತು ಬಾರದ ಮೂಗಿ........ ಅವಳು ಮೂಗಿ ಎಂದರೂ ಬಿಡದೆ ತುಂಬಾ ಕಾಡುತ್ತಿದ್ದಾನೆ, ಬಡ್ಡೀ ಮಗ.....ಈ ಒಂದು ರಾತ್ರಿ ಕಾಪಾಡು ಮಾರಾಯ...... ನಿನ್ನ ಹಳ್ಳಿಯ ನಿನ್ನ ಮನೆಯಲ್ಲಿಟ್ಕೋ...ಈ ರಾತ್ರಿ, ನಾಳೆ ಬೆಳಿಗ್ಗೆಯೇ ನನ್ನ

 

ಕೆಲಸ ಮುಗೀತಿದ್ದಂಗೆ ನಾನೇ ಖುದ್ದು ಬಂದು ಇವಳನ್ನು ಕರೆದುಕೊಂಡು ಹೋಗಿ ನನ್ನ ತಾಯಿ ಮನೇಲಿ ಬಿಟ್ಟು  ಬರ್ತೀನಿ ಕಣಯ್ಯಾ..... ದಯವಿಟ್ಟು ಅಷ್ಟು ಮಾಡಿ ಪುಣ್ಯ ಕಟ್ಕೊಳ್ಳಯ್ಯಾ........ ಎಂದು ಅಂಗಲಾಚಿದ ನಾಗಪ್ಪ.

       ಈಗ ಏನೂ ಯೋಚಿಸುವ ಸ್ಥಿತಿಯಲ್ಲಿ ಇರಲಿಲ್ಲ ಪುಟ್ಟಪ್ಪ, ಕಾರಣ ನಾಗಪ್ಪ, ಇವನ ಖಾಸಾ ಗೆಳೆಯ,  ಈ ನೀರು ಗಂಟಿ ನಾಗಪ್ಪ,  ಹಳ್ಳಿಗಳಿಂದ ಇವನಿಗೇ ಅಂತ ಊರ ರೈತರು ದಾನವಾಗಿ ಕೊಡುವ ತೆಂಗಿನಕಾಯಿ, ಅಡಿಕೆ, ವೀಳ್ಯದೆಲೆ, ಮಾವು , ದವಸಧಾನ್ಯ,  ತರಕಾರಿಗಳನ್ನೆಲ್ಲಾ ಕಡಿಮೆ ಬೆಲೆಗೆ ಇದೇ ಪುಟ್ಟಪ್ಪನ ಅಂಗಡಿಗೇ ಕೊಡೋದು, ಅವನು ಕೊಟ್ಟಷ್ಟು ಹಣ ತೆಗೆದುಕೊಂಡು ತನ್ನ ಖರ್ಚಿಗೆ ಇಟ್ಟುಕೊಳ್ಳೋದು ಮಾಮೂಲಿ.

ಈ ಗೆಳೆತನದಿಂದ ಇಂದು ನಾಗಪ್ಪ, ಪುಟ್ಟಪ್ಪ ನನ್ನು ನಂಬಿ ಬಂದಿದ್ದು, ಪುಟ್ಟಪ್ಪನೂ ಒಲ್ಲೆ ಎನ್ನುವಂತಿರಲಿಲ್ಲ, ಈಗ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದ ಪುಟ್ಟಪ್ಪ, ಸರಿ......ನಾಗಪ್ಪಾ......ಮನೇಲಿ ನಮಗೇ ಇರಲು  ಜಾಗ  ಕಡಿಮೆ ಇದೆ......ಹೇಗೋ ಈ ಒಂದು ರಾತ್ರಿ ನನ್ನ ಹೆಂಡತೀಗೆ ಒಪ್ಪಿಸಿ ಈ ಹೆಣ್ಣು ಮಗಳನ್ನು ಇಟ್ಕೊಳ್ತೀವಿ, ಅದೂ ಅವಳು ನಿನ್ನ ಅಣ್ಣನ  ಮಗಳೂ......ಮಾತು ಬಾರದ ಮೂಗಿ.....ಅಂತ ಬೇರೆ

 

ಹೇಳುತ್ತಿದ್ದೀಯ, ಅದರಿಂದ ಸಹಾಯ ಮಾಡ್ತೀನಿ, ನಾಳೆಬೆಳಿಗ್ಗೇನೆ ಬಂದು ಕರೆದುಕೊಂಡು ಹೋಗಿಬಿಡು ಮಾರಾಯಾ....... ನಿನ್ನ ದಮ್ಮಯ್ಯ.......ಎಂದು   ಪುಟ್ಟಪ್ಪನೇ ನಾಗಪ್ಪನನ್ನು ಅಂಗಲಾಚಿಬೇಡಿಕೊಂಡನು.

      ಸರೀನಪ್ಪಾ.....ಪುಟ್ಟಪ್ಪಾ......ನೀನು ದೇವರು ಕಣಯ್ಯಾ, ನಮ್ಮಿಬ್ಬರ ಪಾಲಿಗೆ , ನಾನೀಗಾಗಲೇ ಹೋಗ್ತೀನಿ ಎಂದವನೇ ಆ ಹೆಣ್ಣು ಮಗಳನ್ನು ಬೆನ್ನು ತಟ್ಟಿ ಆ ಕತ್ತಲೆಯಲ್ಲಿಯೇ ಏನೋ ಸಂಜ್ಞೆ ಮಾಡಿ ಹೇಳಿ ಅದೇ ಕತ್ತಲೆಯ ಹಾದಿಯಲ್ಲಿಯೇ ನಡೆದು ಕಣ್ಮರೆಯಾದನು ನಾಗಪ್ಪ.

        ಇತ್ತ ಪುಟ್ಟಪ್ಪ ತನ್ನ ಅಂಗಡಿ ಬಾಗಿಲು ಜಡಿದು ಆ ಹೆಣ್ಣು ಮಗಳ ಜೊತೆ ಕತ್ತಲಿನಲ್ಲಿ ಹೆಜ್ಜೆ ಹಾಕುತ್ತಾ ರಂಗನಾಥಪುರದ ತನ್ನ ಮನೆಕಡೆ ಹೊರಟನು , ಮುಂದೆ ಆ ಹೆಣ್ಣುಮಗಳು ನಡೆಯುತ್ತಿದ್ದಾಳೆ, ಅವಳ ಗೆಜ್ಜೆ ಸದ್ದು ಬರುಬರುತ್ತಾ ಹೆಚ್ಚಾಗುತ್ತಿದೆ,  ಕಾಡಿನ ಕಲರವ, ಜಡಿಮಳೆಯ ಸದ್ದಿನೊಂದಿಗೆ ಬೆರೆತು ಮತ್ತೊಂದು ಸಂಗೀತ ಹೊರಹೊಮ್ಮಿದೆ, ಹಿಂದೆ ಒಂದು ಬ್ಯಾಟರಿಯ ಬೆಳಕಿನಲ್ಲಿ ಪುಟ್ಟಪ್ಪ ಹೋಗುತ್ತಿದ್ದಾರೆ.  ಈ ಪುಟ್ಟಪ್ಪ ನವರಿಗೆ ಆಗಾಗ್ಗೆ ಒಂದು ಆಶ್ಚರ್ಯ ಕಾಡುತ್ತಿತ್ತು, ಅದೇನೆಂದರೆ ಆಗಾಗ್ಗೆ ಆ ಹೆಣ್ಣು ಮಗಳು ಕಣ್ಮರೆಯಾದಂತೆ ಅನುಭವ ಆಗುತ್ತಿತ್ತು, ಆದರೂ ಅವಳ ಗೆಜ್ಜೆ ಸದ್ದು ಮಾತ್ರ ನಿರಂತರವಾಗಿ ಕೇಳುತ್ತಿತ್ತು,

 

ಕ್ಷಣಕಾಲ ಅವರು ಭಯಗೊಂಡವರಂತೆ ಕಂಡರೂ ಛೇ.........ಈ ಕತ್ತಲೆಯಲ್ಲಿ ಇದೆಲ್ಲಾ ಮಾಮೂಲಿ, ವಯಸ್ಸುಬೇರೆ ಆಯ್ತಲ್ಲಾ, ಕಣ್ಣು ಮಂಜು ಮಂಜು ಎಂದು ತನಗೆ ತಾನೇ ಜರಿದುಕೊಂಡು ಹಾಗೂ ಹೀಗೂ ತಮ್ಮ ಊರು ತಲುಪಿದರು ಪುಟ್ಟಪ್ಪ.

    ಇವರುಗಳು ಮನೆ ತಲುಪಿದಾಗ ತನ್ನ ಕೈಗಡಿಯಾರ ನೋಡಿಕೊಂಡರು ಪುಟ್ಟಪ್ಪ ಆಗ ಸಮಯ ರಾತ್ರಿ ಒಂಬತ್ತು ಗಂಟೆಯಾಗಿಬಿಟ್ಟಿದೆ. ಈಕೆಯನ್ನು ಮನೆಯ ಹೊರಗೆ ನಿಲ್ಲಿಸಿ ಮನೆಯೊಳಗೆ ಹೋದ ಪುಟ್ಟಪ್ಪ, ತನ್ನ ಹೆಂಡತಿಗೆ ಎಲ್ಲವನ್ನೂ ವಿವರಿಸಿ ಅವಳ ಜೊತೆ ಹೊರಗೆ ಬಂದರೆ  ಅರೆ......ಆ ಹೆಣ್ಣು ಕಾಣುತ್ತಿಲ್ಲ, ಅವರಿಬ್ಬರೂ ಆ ಒಂದು ಗಳಿಗೆ ಗಾಬರಿಯಾದರು,  ಪುಟ್ಟಪ್ಪ ನವರಿಗೆ ಮತ್ತಷ್ಟು ಗಾಬರಿಯಾಗಿ ಇಡೀ ಮನೆಯ ಸುತ್ತಮುತ್ತಲೂ ಹಾರಾಡಿದರು, ಹುಡುಕಿದರು, ಎಲ್ಲೂ ಕಾಣಲಿಲ್ಲ, ಭಯಗೊಂಡವರು ಬೆವೆತುಹೋದರು , ಈ ಮೊದಲೇ  ಆ ಹೆಣ್ಣು ಇವರಿಗೆ ಅನುಮಾನಬರುವ ರೀತಿ ಕಂಡಿದ್ದಾಳೆ, ಆಕೆಯನ್ನು ಮೊದಲಬಾರಿಗೆ ನೋಡಿದಾಗ ಅವಳು ಬೆಕ್ಕಿನ ಕಣ್ಣಿನಿಂದ , ಆನಂತರ ಕಾಡು ರಸ್ತೆಯಲ್ಲಿ, ಕತ್ತಲೆಯಲ್ಲಿ ಬರಬೇಕಾದರೆ, ಆಗಾಗ್ಗೆ ಕಣ್ಮರೆಯಾದಂತೆ ಆಗಿ , ಈಗ ಸಂಪೂರ್ಣವಾಗಿ ಕಾಣುತ್ತಲೇ ಇಲ್ಲವಲ್ಲಾ.........ಏನು ಮಾಡೋದು ಎಂದು ಮತ್ತಷ್ಟು ಬೆವೆತುಹೋದರು

 

ಪುಟ್ಟಪ್ಪ. ಆಗ ಪುಟ್ಪಪ್ಪನವರ ಹೆಂಡತಿ ಕೇಳಿದಳು , ಅದ್ಯಾರೋ ನಾಗಪ್ಪನ ಮಗಳು ಬಂದಿದ್ದಾಳೆ ಎಂದಿರಿ......ಇಲ್ಯಾರೂ ಇಲ್ವಲ್ರೀ.......ಯಾವ ನಾಗಪ್ಪನ ಮಗಳೂ ಇಲ್ಲ, ಯಾವ ಮೂಗಿಯೂ ಇಲ್ಲ, ನಿಮಗೇನಾದರೂ ಈ ಸಾರಿ ರಾತ್ರೀಲಿ ತಲೆಏನಾದ್ರೂ ಕೆಟ್ಟುಹೋಗಿದೆಯಾ,  ಎಂದು ಒಬ್ಬಳೇ ಗೊಣಗುತ್ತಾ ಮನೆಯೊಳಗೆ ಹೋದಳು , ಒಳಗೆ ಹೋದ ಪುಟ್ಟಪ್ಪನವರ ಹೆಂಡತಿ ಜೋರಾಗಿ ತನ್ನ ಗಂಡನನ್ನು ಕೂಗಿ ಕರೆದಳು, ರ್ರೀ.....ರ್ರೀ.....ಇಲ್ಲಿದ್ದಾರೆ ನಿಮ್ಮ ನಾಗಪ್ಪನ ಮಗಳು, ಬನ್ರೀ......ಎಂದು ಕರೆದಳು, ಹೊರಗೆ ಕತ್ತಲಿನಲ್ಲಿ ಹುಡುಕುತ್ತಿದ್ದ ಪುಟ್ಟಪ್ಪನವರು, ತನ್ನ ಹೆಂಡತಿ ಕೂಗಿದ ಶಬ್ಧಕ್ಕೆ ಮತ್ತಷ್ಟು ಭಯಗೊಂಡವರಂತೆ ಮನೆಯೊಳಗೆ ಓಡಿ ಬಂದರೆ,  ಅಲ್ಲೇ ಮೂಲೆಯಲ್ಲಿ ತನ್ನ ಎರಡೂ ಕಾಲಿನ ಮಂಡಿಗಳ ಮೇಲೆ ತನ್ನ ಮುಖವನ್ನಿಟ್ಟುಕೊಂಡು ಸಣ್ಣಗೆ ಅಳುತ್ತಿರುವ ಶಬ್ಧ ಕೇಳಿಸಿತು, ಅವಳನ್ನು ನೋಡಿದ ಪುಟ್ಟಪ್ಪನವರಿಗೆ  ಸ್ವಲ್ಪ ಧೈರ್ಯ ಬಂದಿತು , ಸಧ್ಯ ಎಲ್ಲೋ ಈ ಕತ್ತಲೆಯಲ್ಲಿ ಕಣ್ಮರೆಯಾಗಿದ್ದಾಳೆಂದು ಗಾಬರಿಯಾಗಿದ್ದರು ಪುಟ್ಟಪ್ಪ, ಅವಳ ಬಳಿ ಬಂದು ಪುಟ್ಟಪ್ಪ ದಂಪತಿಗಳು ಆ ಮನೆಯ ಮಂದ ಬೆಳಕಿನಲ್ಲಿ, ಅಳುತ್ತಿರುವ   ಅವಳ ಭುಜ ತಡವುತ್ತಾ ಅವಳನ್ನು ಸಮಾಧಾನಿಸಲು ತೊಡಗಿ

 

ಅವಳ ಮುಖವನ್ನು ಎತ್ತಿನೋಡಿದರೆ , ಅವಳು ಇವರಿಬ್ಬರನ್ನೂ ನೋಡುತ್ತಾ ಗಹಗಹಿಸಿ ನಗುತ್ತಾ, ತನ್ನ ಹಲ್ಲುಗಳನ್ನು ಕಡಿಯುತ್ತಾ ಅವರನ್ನೇ ದುರುಗುಟ್ಟಿ ನೋಡಿದಳು, ಮತ್ತದೇ ಅವಳ ಕಣ್ಣುಗಳು ಬೆಕ್ಕಿನ ಕಣ್ಣಿನ ಹಾಗೆ ಹೊಳೆಯುವುದನ್ನು ಕಂಡು ಪುಟ್ಟಪ್ಪನ ಹೆಂಡತಿ ಕಿಟಾರನೆ ಕಿರುಚುತ್ತಾ ತನ್ನ ಅಡುಗೆ ಕೋಣೆಯೊಳಗೆ ಓಡಿದಳು, ಇತ್ತ ಪುಟ್ಟಪ್ಪನವರು ಸ್ವಲ್ಪ ಧೈರ್ಯ ತಂದುಕೊಂಡು ಆ ಹುಡುಗಿಯನ್ನು ಅಳದಂತೆ ಸಮಾಧಾನಪಡಿಸಿ , ತಿನ್ನಲು ಏನಾದರೂ ಬೇಕಾ ಎಂದು ಸಂಜ್ಞೆ ಮಾಡಿ ಕೇಳಿದರು, ಅದಕ್ಕವಳು ಹ್ಹೂಂ ಎಂದು ತಲೆಯಾಡಿಸಿದಳು , ಅಡುಗೆಕೋಣೆಯಲ್ಲಿದ್ದ ಅವನ ಹೆಂಡತಿಯನ್ನು ಸಮಾಧಾನಿಸಿ, ಅವಳ ಕಣ್ಣು ಗಳೇ ಹಾಗಿರಬೇಕು ಇದಕ್ಕೆಲ್ಲಾ ಭಯಪಡೋದಾ, ಪಾಪ ತುಂಬಾ ನೊಂದಿದ್ದಾಳೆ ಆ ಹುಡುಗಿ, ಅವಳಿಗೆ ಏನಾದರೂ ಊಟವಿದ್ದರೆ  ಕೊಡು ಎಂದು ಕೇಳಿದರು, ಅವರು ಹಾಗೂ ಅವರ  ಹೆಂಡತಿ ಸ್ವಲ್ಪ ಆಹಾರವನ್ನು ತಂದುಕೊಡಲು ಬಂದರೆ  ಆ ದಂಪತಿಗಳಿಗೆ ಮತ್ತಷ್ಟು ಆಶ್ಚರ್ಯ ಕಾದಿತ್ತು, ಅದೇನೆಂದರೆ ಇದುವರೆಗೂ ಕುಳಿತ ಸ್ಥಳದಲ್ಲಿ ಆ ಹುಡುಗಿ ಇರಲಿಲ್ಲ, ಏನಪ್ಪಾ ಇವಳು ಹೀಗೆ ಆಟವಾಡಿಸುತ್ತಿದ್ದಾಳೆ, ಇವಳು ನಿಜವಾಗಿಯೂ ನಾಗಪ್ಪನ ಮಗಳೇನಾ......ಅಥವಾ ಅವಳ ರೂಪದಲ್ಲಿರುವ ದೆವ್ವ, ಭೂತವಾ......ಎಂದು ಕ್ಷಣಕಾಲ ಅನುಮಾನವಾಯಿತು, ಅವರ ಅನುಮಾನ

 

ಸುಳ್ಳುಮಾಡುವಂತೆ ಆ ಹುಡುಗಿ ಮುಖ ಕೈಕಾಲು ತೊಳೆಯಲು ಬಚ್ಚಲುಮನೆಗೆ ಹೋಗಿ ಮುಖ ತೊಳೆಯುತ್ತಿದ್ದ ಶಬ್ಧ ಕೇಳಿ ಬಂದಿದ್ದರಿಂದ ದಂಪತಿಗಳು ನಿರಾಳವಾದರು. ಅವಳಿಗೆ ಮುಖ ಒರೆಸಲು ಒಂದು ವಸ್ತ್ರ ವನ್ನು ಕೊಡಲು ಪುಟ್ಟಪ್ಪನವರು ಅವಳ ಬಳಿ ಬಂದರೆ ಆ ಹೆಣ್ಣು ತನ್ನ ಮುಖ ಎತ್ತಿ ಪುಟ್ಟಪ್ಪನವರನ್ನು ದುರುಗುಟ್ಟಿ ನೋಡಿದಂತೆ ಕಂಡಳು, ಅವಳ ಮುಖದಿಂದ ನೀರಿನ ಬದಲಿಗೆ ರಕ್ತ ಸುರಿಯುವಂತೆ ಭಾಸವಾಗಿ ಪುಟ್ಟಪ್ಪನವರು ಅವಳಿಗೆ ನೇರವಾಗಿ ನೋಡಲು ಹೆದರಿದರು, ಆದರೂ ಅವಳಿಗೆ ವಸ್ತ್ರಕೊಟ್ಟು ಹಿಂತಿರುಗಿ ಎರಡು ಹೆಜ್ಜೆ ಮುಂದೆ ಬಂದು ನಂತರ ಹಿಂತಿರುಗಿ ಅವಳ ಪಾದದ ಕಡೆ ಕಣ್ಣು ಹಾಯಿಸಿದ ಪುಟ್ಟಪ್ಪನವರು ಮತ್ತಷ್ಟು ದಿಗಿಲುಗೊಂಡರು ಕಾರಣ ಅವಳ ಪಾದಗಳು ಸಾಮಾನ್ಯ ಜನರಂತೆ ಮುಂಭಾಗಕ್ಕಿರದೆ ಶರೀರದ ಹಿಂಭಾಗಕ್ಕೆ ದೆವ್ವಗಳಿಗಿರುವ ರೀತಿ ಇದ್ದವು, ಜೊತೆಗೆ ಅವಳು ತನ್ನ ತಲೆ ಕೂದಲುಗಳನ್ನು ಮುಖದ ತುಂಬೆಲ್ಲಾ ಹರಡಿಕೊಂಡಿದ್ದಳು, ಈಗ ಪುಟ್ಟಪ್ಪನವರಿಗೆ ಸಂಪೂರ್ಣವಾಗಿ ಮನವರಿಕೆಯಾಯಿತು. ಇವಳು ಮನುಷ್ಯಳಲ್ಲ, ಮನುಷ್ಯರೂಪದಲ್ಲಿರುವ ದೆವ್ವ ಎಂದು.

       ( ಆದರೆ ಆಗ ಆದದ್ದಿಷ್ಟು  ಪುಟ್ಟಪ್ಪನವರು ಚಂದ್ರಲೇಖಳಿಗೆ ಮುಖ ಒರೆಸಲು ವಸ್ತ್ರ ಕೊಟ್ಟು

 

ಹಿಂದೆ ಬಂದು ಮತ್ತೆ ಅವಳನ್ನು ಹಿಂತಿರುಗಿ ನೋಡುವಾಗ್ಗೆ ಆ ಚಂದ್ರಲೇಖ ಇವರಿಗೆ ಬೆನ್ನು ತೋರಿಸುವ ರೀತಿಯಲ್ಲಿ ತಿರುಗಿಕೊಂಡು ನಿಂತು  ತನ್ನ ಮುಖ ಒರೆಸಿಕೊಳ್ಳುತ್ತಿದ್ದಾಗ ಅವಳನ್ನು ನೋಡಿದ ಪುಟ್ಟಪ್ಪನವರಿಗೆ ಅವಳ ಪಾದ ತಿರುಗಿರುವ ರೀತಿ ಕಂಡಿದೆ , ಮತ್ತು ಅವಳ ಕೇಶರಾಶಿ ಮಾಮೂಲಿಯಂತೆ ಹಿಂಭಾಗಕ್ಕೇ ಇದ್ದಿತು, ಅದು ಅವರ ಭ್ರಮೆ, ಅದಕ್ಕೆ ಅವರು ಭಯಪಟ್ಟು ಈಕೆ ಮಾನವರೂಪದಲ್ಲಿರುವ ದೆವ್ವವೇ ಇರಬಹುದೆಂದುಕೊಂಡರು.)

       ಆದರೆ ಈ ವಿಷಯವನ್ನು ತನ್ನ ಹೆಂಡತಿಗೆ ಹೇಳಲಿಲ್ಲ, ಇನ್ನು ಈಗಲೇ ತುಂಬಾ ಭಯಪಟ್ಟಿದ್ದಾಳೆ, ಮತ್ತಷ್ಟು ಭಯಪಡಿಸುವುದೇಕೆಂದುಕೊಂಡು ಈ ವಿಷಯವನ್ನು ತನ್ನಲ್ಲೇ ಇಟ್ಟುಕೊಂಡರು, ಪುಟ್ಟಪ್ಪನವರೇನೋ ತುಂಬಾ ಭಂಡ ಧೈರ್ಯದವರು, ಆದ್ದರಿಂದಲೇ ಆ ದಟ್ಟ ಕಾಡಿನ ನಡುವೆ ಒಬ್ಬರೇ ಏಕಾಂತವಾಗಿ ಟೀ ಅಂಗಡಿ ನಡೆಸೋದು, ಸರಿ ಆ ಚಂದ್ರಲೇಖ ತನ್ನ ಮುಖ, ಕೈ, ಕಾಲುಗಳನ್ನು ಸ್ವಚ್ಛಗೊಳಿಸಿಕೊಂಡು ಬಂದು ಪುಟ್ಟಪ್ಪನವರ ಹೆಂಡತಿ ಕೊಟ್ಟ ಆಹಾರ ಸೇವಿಸಿದ ಚಂದ್ರಲೇಖಾಳು, ಗಬಗಬನೆ ತಿಂದು ಮುಗಿಸಿದ ನಂತರ ಸ್ವಲ್ಪ ಜೋರಾದ ಧ್ವನಿಯಲ್ಲಿ, ಲೇ ಪುಟ್ಟಪ್ಪಾ............ ಮತ್ತಿಷ್ಟು ಆಹಾರ ಇದ್ದರೆ ಕೊಡೊಲೇ.........ಎಂದು ಜೋರಾಗಿ

 

ಕೂಗಿದಳು, ಇವಳು ಕೂಗಿದ ರಭಸಕ್ಕೆ ಸರಕ್ಕೆಂದು ಹಿಂತಿರುಗಿ ನೋಡಿದ ಪುಟ್ಟಪ್ಪನವರಿಗೆ ಒಂದು ಸಂದೇಹ ಉಂಟಾಯಿತು, ಅದೇನೆಂದರೆ......ಆ ನೀರುಗಂಟಿ ನಾಗಪ್ಪನವರು ಹೇಳಿದ್ದು ಈ ಹುಡುಗಿ, ಚಂದ್ರಲೇಖಾ ಮಾತು ಬಾರದ ಮೂಗಿಯೆಂದು, ಆದರೆ ಈಗ ನೋಡಿದರೆ.......ನನ್ನನ್ನೇ ಹೆಸರಿಡಿದು ಕೂಗ್ತಿದ್ದಾಳಲ್ಲಪ್ಪಾ......ಏನಪ್ಪಾ ಇದು ಇನ್ನೂ ಏನೇನು ಗ್ರಹಚಾರ ಕಾದಿದೆಯೋ.......ಮಾತು ಬರುವುದೋ, ಮಾತು ಬಾರದವಳೋ ......ಮನುಷ್ಯಳೋ........ ದೆವ್ವವೋ.......ಭೂತವೋ......ಒಂದೂ ತಿಳಿಯುತ್ತಿಲ್ಲ, ಎಂದು ಪುಟ್ಟಪ್ಪನವರು ನಡುಗುವ ಕೈಗಳಿಂದ ಮತ್ತಷ್ಟು ಉಳಿದ ಆಹಾರ ತಂದು ಆಕೆಗೆ ಕೊಟ್ಟರು, ಅದನ್ನೂ ಒಂದೇ ಉಸಿರಿಗೆ ತಿಂದು ಮುಗಿಸಿದಳು, ಚಂದ್ರಲೇಖ.

      ನಂತರ  ಪುಟ್ಟಪ್ಪ ದಂಪತಿಗಳು, ಈ ರಾತ್ರಿಯಲ್ಲಿ ಏಕೆ ಅವಳೊಡನೆ ಮಾತನಾಡುವುದು, ಅದೂ  ಮಾತು ಬಾರದ ಆ ಚಂದ್ರಲೇಖಳೊಡನೆ ಸಂಜ್ಞೆ ಯಲ್ಲಿಯೇ ವ್ವವಹರಿಸಬೇಕು, ಬೆಳಗಾಗಲಿ, ಹೇಗೂ ಈ ಮಳೆಯಲ್ಲಿ, ಹಾಗೂ ಆ ಪುಂಡ ಪರಮೇಶಿಯ ಪುಂಡಾಟಿಕೆ ಯಿಂದ ತುಂಬಾ ನೊಂದಿದ್ದಾಳೆ, ಈಗ ರಾತ್ರಿ ಹತ್ತು ಗಂಟೆ ಸಮಯ , ಮಲಗಿ ಚೆನ್ನಾಗಿ ನಿದ್ರಿಸಲಿ,  ಬೆಳಗಾಗೆದ್ದು ಮಾತನಾಡುವ

 

ಎಂದುಕೊಂಡ ಪುಟ್ಟಪ್ಪ ದಂಪತಿಗಳು ಅವಳಿಗೂ ತಮ್ಮ ಮನೆಯ ವರಾಂಡದಲ್ಲಿ ಮಲಗಲು ಅನುವು ಮಾಡಿಕೊಟ್ಟು, ತಾವು ತಮ್ಮ ಮಲಗುವ ಕೋಣೆಗೆ ಹೋಗಿ ಮಲಗಿದರು, ಚಂದ್ರಲೇಖಳೂ ಮಲಗಿದಳು.

        ಮನೆಯಲ್ಲಿಯೇ ಇದ್ದರೆ ಪುಟ್ಟಪ್ಪ ಬೆಳಗಿನಜಾವ ಐದಕ್ಕೇ ಎದ್ದು ತನ್ನ ಚಹಾ ಅಂಗಡಿ ತೆರೆಯಲು ಹೋಗೋದು ವಾಡಿಕೆ, ಅದರಂತೆ ಅಂದೂ ಸಹ ತನ್ನ ಮಲಗುವ ಕೋಣೆಯಿಂದ ಎದ್ದು ಹೊರಬಂದು ನೋಡಿದರೆ ಚಂದ್ರಲೇಖ ತಾನು ಮಲಗಿದ್ದ ಜಾಗದಲ್ಲಿ ಇರಲಿಲ್ಲ, ಬಾಗಿಲು ಹಾಕಿದ್ದು ಹಾಗೇ ಇದೆ ಆದರೆ ಚಂದ್ರಲೇಖ ಮಾತ್ರ ಕಣ್ಮರೆಯಾಗಿದ್ದಾಳೆ, ಈಗಲೂ ತುಂಬಾ ದಿಗಿಲಾಯಿತು ಪುಟ್ಟಪ್ಪನವರಿಗೆ, ಏನಪ್ಪಾ ದೇವರೇ ಈ ಹುಡುಗಿಯ ಮಾಯಾಜಾಲ ಈಕೆಯೇನು ಮನುಷ್ಯಳೋ, ಮಾಂತ್ರಿಕಳೋ, ಭೂತ ಪ್ರೇತ ಪಿಶಾಚಿ ಏನಾಗಿರಬಹುದು ಇವಳು, ಎಂದು ಮನದಲ್ಲೇ ಯೋಚಿಸತೊಡಗುತ್ತಾ, ಭಯದಿಂದ ಇಡೀ ಮನೆಯನ್ನೆಲ್ಲಾ ತಡಕಾಡಿದರು , ಅವಳ ಸುಳಿವಿಲ್ಲ, ಆದರೆ ಅವಳು ಮಲಗಿದ್ದ ಜಾಗದಿಂದ  ಅವರ ಮನೆಯ ಅಡುಗೆ ಕೋಣೆಯ ಕಿಟಕಿವರೆಗೂ ಅವಳ ರಕ್ತಸಿಕ್ತ ಪಾದದ ಗುರುತುಗಳು ಕಂಡವು, ಅದೂ ಕಿಟಕಿ, ಗೋಡೆ ಮೇಲೆಲ್ಲಾ ರಕ್ತದ ಕಲೆಗಳು ಯಥೇಚ್ಛವಾಗಿ ಕಂಡೆವು, ಈಗಂತೂ ಪುಟ್ಟಪ್ಪನವರು

 

ಇವರ ಜೀವಮಾನದಲ್ಲಿ ಮೊದಲಬಾರಿಗೆ ತುಂಬಾ ಭಯಭೀತರಾದರು.

        ಹಾಕಿದ್ದು ಬಾಗಿಲು ಹಾಕಿದಂತೆಯೇ ಇದೆ, ಆದರೆ ಕಿಟಕಿವರೆಗೂ ನಡೆದುಕೊಂಡು ಹೋಗಿ, ಚಿಕ್ಕ ಕಿಟಕಿಯಲ್ಲಿ   ಅವಳು ಹೋಗಿರುವ  ಪಾದದ ಗುರುತುಗಳಿವೆ, ಅದಾವ ಸಮಯದಲ್ಲಿ ಅದೇಗೆ ಇಷ್ಟು ಚಿಕ್ಕಜಾಗದಲ್ಲಿ ಹೇಗೆ ನುಸುಳಿಕೊಂಡು ಹೋಗಿರುವಳು, ಒಂದು ಬೆಕ್ಕೂ ಸಹ ಹೋಗಲು ಆಗದ ಈ ಕಿಟಕಿಯಲ್ಲಿ ಹೇಗೆ ಹೋದಳು, ಎಂದು  ತುಂಬಾ ಭಯಗೊಂಡು ಆ ಬೆಳಗಿನ ಜಾವದ ಕತ್ತಲಿನಲ್ಲಿ ಅಂಗಡಿಗೆ ಹೋಗಲೂ  ಭಯಪಟ್ಟು ಪುನಃ ಮಲಗುವ ಕೋಣೆಗೆ ಹೋಗಿ ಮಲಗಿದರು ಪುಟ್ಟಪ್ಪ.

    ಇವರು ಮಲಗಲು ಹಿಂತಿರುಗಿ ಬಂದಿದ್ದು ಗಮನಿಸಿದ ಅವರ ಹೆಂಡತಿ, ಏಕ್ರೀ.....ಅಂಗಡೀ ತೆರೆಯೊಲ್ವೇ.....ಎಂದು ನಿದ್ರೆಯಿಂದ ಹೊರಳಾಡುತ್ತಾ ಕೇಳಿದಳು, ಇಲ್ಲ ಕಣೇ ......ಯಾಕೋ ತುಂಬಾ ಭಯವಾಗ್ತಿದೆ ಕಣೇ.......ಅಂದರು ಪುಟ್ಟಪ್ಪ.

ಯಾಕ್ರೀ......ಎಂದು ಮರುಪ್ರಶ್ನೆ ಮಾಡಿದಳು ಅವರ ಹೆಂಡತಿ,

ಲೇ........ಆ ಚಂದ್ರಲೇಖ ಮತ್ತೆ ಕಾಣ್ತಿಲ್ಲ ಕಣೇ........

ಯಾಕೋ ಭಯವಾಗುತ್ತಿದೆ, ಎಂದರು, ಹೌದಾ......ಎಂದು ಭಯದಿಂದ ಮಲಗಿದ್ದಲ್ಲಿಂದ

 

ಮೇಲೇದ್ದು ಬನ್ರೀ........ಹೊರಗೆಲ್ಲಾದರೂ ಹೋಗಿರಬೇಕು, ಹುಡುಕೋಣ....... ಎಂದಳು,

ಈ ರಾತ್ರಿಯಲ್ಲಿ ಅದೆಲ್ಲಿಗೆ ಹೋಗ್ತಾಳೋ.......ಅದೂ ಬಾಗಿಲಿನಿಂದ ಹೋಗಿಲ್ಲ, ಎಂದರು.

ಮತ್ತೆ........? ಮತ್ತೆಲ್ಲಿಂದು ಹೋದಳು, ಎಂದು ಮರು ಪ್ರಶ್ನೆ ಹಾಕಿದಳು, ಪುಟ್ಟಪ್ಪನವರ ಹೆಂಡತಿ,

ಅದೇ ಅಡುಗೆ ಕೋಣೇಲಿ........ಅಡುಗೆ ಕೋಣೇಲಿ ಒಂದು ಚಿಕ್ಕ ಕಿಟಕಿಯ ಮುಖಾಂತರ ಹೋಗಿದ್ದಾಳೆ ಕಣೇ......ಎಂದು ಭಯಗೊಂಡವರಂತೆ ಹೇಳಿದರು ಪುಟ್ಟಪ್ಪ , ಏನ್ರೀ.....ನೀವ್ ಹೇಳ್ತಿರೋದು, ನಿಜಾನಾ....

ಬನ್ನಿ ವರಾಂಡಾದಲ್ಲಿ ನೋಡೋಣ ಎಂದು ಇಬ್ಬರೂ ಚಂದ್ರ ಲೇಖಳು ಮಲಗಿದ್ದ ಜಾಗಕ್ಕೆ ಇಬ್ಬರೂ ಬಂದು ಲೈಟ್ ಸ್ವಿಚ್ ಹಾಕಿ ಬೆಳಕಿನಲ್ಲಿ ನೋಡಿದರೆ.......... ನೋಡಿದರೆ.........ಅಲ್ಲೇ ಅದೇ ಹಾಸಿಗೆ ಮೇಲೆ ಮಲಗಿ ಗೊರಕೆ ಸಮೇತ ನಿದ್ರಿಸುತ್ತಿದ್ದಾಳೆ ಚಂದ್ರಲೇಖ.

       ಇಲ್ಲೇ ಇದಾಳಲ್ರೀ......ನಿಮ್ಮ ಗೆಳೆಯನ ಅಣ್ಣನ ಮಗಳು, ಮೂಗಿ ಚಂದ್ರಲೇಖ, ಎಂದು ಗೊಣಗುತ್ತಾ, ಗಂಡನನ್ನು ಶಪಿಸುತ್ತಾ ಮತ್ತೆ ತನ್ನ ಹಾಸಿಗೆಮೇಲೆ ಹೋಗಿ ಮಲಗಿದಳು ಪುಟ್ಟಪ್ಪನ ಹೆಂಡತಿ, ಈಗ ನಿಜವಾಗಿಯೂ ಪುಟ್ಟಪ್ಪನವರು ಮತ್ತಷ್ಟು ದಿಗಿಲು ಗೊಂಡು ಅಡುಗೆ ಕೋಣೆಯ ಕಿಟಕಿ ಬಳಿ, ಹೋಗಿ ನೋಡಿದರೆ ಅಲ್ಲಿ ಯಾವ ರಕ್ತದ, ಪಾದದ ಕಲೆಗಳೂ ಇಲ್ಲ, ಅಲ್ಲೇ ಏಕೆ ವರಾಂಡದಿಂದ ಕಿಟಕಿವರೆಗೂ

 

ಯಾವುದೇ ರಕ್ತದ ಕಲೆಗಳಿಲ್ಲದ್ದನ್ನು ನೋಡಿದ ಪುಟ್ಟಪ್ಪನವರ ತಲೆ ವಿಪರೀತ ಕೆಟ್ಟು ಹೋಯಿತು.

       ಈ ದಿನ ಅಂಗಡಿಗೆ ಹೋಗೋದೇನು ಬೇಡ, ಯಾಕೋ ತುಂಬಾ ತಲೆನೋವು ಎಂದುಕೊಂಡು ವರಾಂಡದ ಲೈಟುಗಳನ್ನು ಆಫ್ ಮಾಡಿಕೊಂಡು ಮತ್ತೆ ಅವರೂ ಹೋಗಿ ಹೆಂಡತಿಯ ಪಕ್ಕದಲ್ಲಿ ಮತ್ತೆ ಮಲಗಿದರು, ಆದರೂ ಎಷ್ಟು ಪ್ರಯತ್ನಪಟ್ಟರೂ ನಿದ್ರೆ ಮಾತ್ರ ಬರಲಿಲ್ಲ ಇಬ್ಬರಿಗೂ, ಇಷ್ಟೆಲ್ಲಾ ಗಲಿಬಿಲಿಯಲ್ಲಿ ಹೇಗೆ ನಿದ್ರಿಸೋದು, ಹಾಗೇ ಬೆಳಿಗ್ಗೆ ಆರು ಗಂಟೆವರೆಗೂ ಹೊರಳಾಡಿ ಎದ್ದು ಹಾಗೇ ಊರಿನಲ್ಲಿ ಒಮ್ಮೆ ತಿರುಗಾಡಿಕೊಂಡು ಬರೋಣವೆಂದುಕೊಂಡು ಮತ್ತೆ ಹಾಸಿಗೆಯಿಂದ ಎದ್ದು ಸೌಚಾಲಯದ ಕಡೆ ಹೊರಟು ಹಾಗೇ ಒಮ್ಮೆ ಚಂದ್ರಲೇಖ ಮಲಗಿದ್ದ ಜಾಗದಕಡೆ ಕಣ್ಣಾಡಿಸಿದರೆ ಮತ್ತದೇ ರಾಗ , ಮತ್ತದೇ ಹಾಡು ಎನ್ನುವಂತಾಯಿತು, ಪುಟ್ಟಪ್ಪನವರಿಗೆ .

       ಏನಪ್ಪಾ ಎಂದರೆ ಚಂದ್ರಲೇಖ ಅವಳು ಮಲಗಿದ್ದ ಜಾಗದಲ್ಲಿ ಅವಳಿಲ್ಲ, ಬದಲಿಗೆ ಆಕೆಯ ಹಾಸಿಗೆ, ಹೊದಿಕೆ ಎಲ್ಲವೂ ರಕ್ತಸಿಕ್ತವಾಗಿ ಮುದುರಿಬಿದ್ದಿದೆ, ಆದರೆ ಅವಳಿಲ್ಲ, ಹೇಳದೆ ಕೇಳದೆ ಮಾಯವಾಗಿದ್ದಳು, ಮತ್ತೆ ಮನೆಯ ಬಾಗಿಲು ಹಾಕಿದಂತೆಯೇ ಇದೆ, ಮತ್ತಷ್ಟು ಭಯಗೊಂಡು ಪುಟ್ಟಪ್ಪ ನಡುಗುತ್ತಾ ಅಡುಗೆ ಕೋಣೆ ಕಡೆ ನಡೆದು ನೋಡಿದರೆ ಆ ಕಿಟಕಿ, ಗಾಜು

 

ತುಂಬೆಲ್ಲಾ ರಕ್ತಮಯವಾಗಿದೆ, ಆ ಗೋಡೆಯೆಲ್ಲವೂ ರಕ್ತಮಯ, ಅವಳು ಮಲಗಿದ್ದಲ್ಲಿಂದ ಆ ಕಿಟಕಿ ವರೆಗೂ ರಕ್ತದ ಕಲೆಗಳು ತುಂಬಿದೆ, ಆದರೆ ಹೇಗೆ ಹೋದಳು, ಇಷ್ಟು ಚಿಕ್ಕ ಕಿಟಕಿಯಲ್ಲಿ ಎಂದು, ತನ್ನ ಹೆಂಡತಿಯನ್ನು ನಿದ್ರೆಯಿಂದ ಎಬ್ಬಿಸಿದರು, ಅವಳೂ ಕೋಪದಿಂದಲೇ ಗೊಣಗುತ್ತಾ ಎದ್ದು ಹೊರಬಂದು ನೋಡಿದರೆ ಈಬಾರಿ ಖಂಡಿತಾ ಅವಳ ಕಣ್ಣಿಗೆ ರಕ್ತದ ಕಲೆಗಳು ಯಥೇಚ್ಛವಾಗಿ ಕಂಡವು, ಆದರೆ ಚಂದ್ರಲೇಖಾ ಸುಳಿವಿಲ್ಲ, ಅವಳಂತೂ ಗಾಬರಿಯಿಂದ ಕಿಟಾರನೆ ಕಿರುಚುತ್ತಾ ತನ್ನ ಮನೆಯ ಬಾಗಿಲು ತೆಗೆಯಲು ಓಡಿದಳು, ಆದರೆ ಬಾಗಿಲು ತೆಗೆಯಲಾಗುತ್ತಿಲ್ಲ,

ಆಗ ಇವರ ಮನೆಯ ಗೋಡೆಗಡಿಯಾರದಲ್ಲಿ ಸಮಯವೇನೋ ಬೆಳಗಿನ ಆರೂವರೆ ಗಂಟೆ ಇಷ್ಟರಲ್ಲಿ ಇಡೀ ಊರಿಗೆ ಬೆಳಗು ಆಬೇಕಿತ್ತು , ಆದರೆ ಇಡೀ ಊರಿಗೆ ಊರೇ ಇನ್ನೂ ನಿದ್ರಿಸುತ್ತಿದೆ, ಇನ್ನೂ ಕತ್ತಲೆಯೇ ಇದೆ, ಕೋಳಿಗಳೂ ಕೂಗಿಲ್ಲ, ಆದರೆ ಹೊರಗೆ ನಾಯಿಗಳು ಗೊಳೋ ಎಂದು ಅಳುವ ಶಬ್ದ ಮಾತ್ರ ಬರುತ್ತಿದೆ, ಅಂಥಾ  ಸಮಯವದು, ಒಳಗೆ ಚಂದ್ರಲೇಖ ಇಲ್ಲ, ಇಡೀ ಮನೆಯಲ್ಲಿ, ಹಾಸಿಗೆ, ಹೊದಿಕೆಗಳಲ್ಲಿ ರಕ್ತದ ಕಲೆಗಳಿವೆ, ಕಿಟಕಿಯಲ್ಲಿಯೂ ಸಹ, ಆದರೆ ಹೊರಗೆ‌ ಹೋಗೋಣವೆಂದರೆ ಬಾಗಿಲು

 

ತೆರೆಯಲಾಗುತ್ತಿಲ್ಲ, ಜೊತೆಗೆ ಇನ್ನೂ ಬೆಳಗಾಗಿಲ್ಲ,

       ಈಗ ಪುಟ್ಟಪ್ಪ ದಂಪತಿಗಳು ಒಂದು ನಿರ್ಧಾರಕ್ಕೆ ಬಂದಿದ್ದರು ಓಹೋ ಇದು ದೆವ್ವದ ಕಾಟವೇ, ಅವಳೂ ಸಹ ದೆವ್ವವೇ ಎಂದು ಮನವರಿಕೆಯಾಯಿತು, ಆದರೆ ಇವಳೇನೋ ದೆವ್ವವೆಂದು ನಂಬಿಸಿದ್ದಳು, ಆದರೆ ಅವಳನ್ನು ಕರೆತಂದು ಆಸಾಮಿ ಇವಳ ಚಿಕ್ಕಪ್ಪ, ಅದೇ...... ನೀರು ಗಂಟಿ ನಾಗಪ್ಪ.........ಅವನನ್ನು ಈಗ ಹುಡುಕಬೇಕು, ಅವನಾದರೂ ನಿಜವಾದ ನಾಗಪ್ಪನಾ.....ಅಥವಾ ಅವನ ವೇಷದಲ್ಲಿರುವ ದೆವ್ವವಾ...... ಎಂದುಕೊಂಡು  ಇತ್ತ ಮಲಗುವ ಹಾಗೂ ಇಲ್ಲ, ಹೊರಗೆ ಹೋಗುವ ಹಾಗೂ  ಇಲ್ಲ, ಇನ್ನು ಇಂಥಾ ಕಷ್ಟ ಪರಿಸ್ಥಿತಿಯಲ್ಲಿ ಇವರುಗಳಿಗೆ  ಹೇಗೆ ತಾನೆ ನಿದ್ರೆ ಬಂದೀತು, ಹೇಗೋ ಧೈರ್ಯ ತಂದುಕೊಂಡು ಬೆಳಗಾಗುವವರೆಗೂ ತುದಿಗಾಲಲ್ಲಿ ಅವರ ಮಲಗುವ ಕೋಣೆಯಲ್ಲಿ ಕುಳಿತರು ಪುಟ್ಟಪ್ಪ ದಂಪತಿಗಳು. ಬೆಳಗಾಗುವರೆಗೂ ಹಾಗೇ  ಚಿಂತಿಸಿ, ಕೊನೆಗೆ ಬೆಳಗಾದ ನಂತರ ಎದ್ದು  ಚಂದ್ರಲೇಖಳು ಮಲಗಿದ್ದ ಜಾಗದಲ್ಲಿ ಏನೂ ಆಗೇಇಲ್ಲವೆನ್ನುವಂತೆ ಆಕೆಯ ಹಾಸಿಗೆ, ಹೊದಿಕೆಗಳು  ಶುಭ್ರವಾಗೇಇವೆ, ಅಡುಗೆ ಕೋಣೆಯಲ್ಲಿಯೂ ಕಿಟಕಿಯ ಹತ್ತಿರವೂ ಯಾವುದೇ ರಕ್ತದ ಕಲೆಗಳಿಲ್ಲದೇ ಯಥಾಪ್ರಕಾರ ವಾಗಿವೆ, ಆದರೆ ಆ ಮಾರ್ಜಾಲ ಚಂದ್ರಲೇಖ ಮಾತ್ರ ಹೇಗೆ

 

ಮನೆಯಿಂದ ಹೊರಗೆಹೋದಳು ಎಂಬುದೇ ಯಕ್ಷಪ್ರಶ್ನೆ ಆಯಿತು ಪುಟ್ಟಪ್ಪ ದಂಪತಿಗಳಿಗೆ. ನಂತರ  ಮನೆಯ ಬಾಗಿಲು ತೆರೆದರೆ ಅದು ತೆರೆದುಕೊಂಡಿತು,

ಏನಪ್ಪಾ ಪವಾಡ ದೇವರೇ.....ಎಂದು , ಸಧ್ಯ ಬೆಳಗಾಯಿತಲ್ಲ, ಈಗ ಹೋಗಿ ಆ ನೀರು ಗಂಟಿ ನಾಗಪ್ಪನನ್ನು ಪತ್ತೆ ಮಾಡಿಕೊಂಡು ಬರಬೇಕೆಂದು ಕೊಂಡು ಹಾಗೇ ರಂಗನಾಥಪುರದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು ಪುಟ್ಟಪ್ಪ, ಆ ಊರಿನ ಸುಮಾರು ಜನರನ್ನು ಕೇಳಿದರೂ ನಾಗಪ್ಪನ ಸುಳಿವೇ ಇಲ್ಲ, ಕೆಲವರು, ಅವನನ್ನು ನೋಡಿಯೇ ತಿಂಗಳಾಯಿತು ಎಂದರೆ , ಮತ್ತೆ ಕೆಲವರು ಅವನು ಕೆಲಸ ಬಿಟ್ಟು ಆರು ತಿಂಗಳಾಯಿತು, ಎನ್ನುವವರು, ಕೆಲವರಂತೂ ಆತನನ್ನು ನೋಡಿದರೆ,  ನಾನು ಕೇಳಿದೆನೆಂದು ಹೇಳು ಎಂದು ಪುಟ್ಟಪ್ಪನಿಗೇ ಮರುಪ್ರಶ್ನೆ ಹಾಕುತ್ತಿದ್ದರು, ಆದರೂ ನಾಗಪ್ಪನ , ಚಂದ್ರಲೇಖಾ ಸುಳಿವಿಲ್ಲ.

   ಪುಟ್ಟಪ್ಪ ಹೀಗೇ ಹೋಗುತ್ತಾ ಊರ ಮಧ್ಯದ ಒಂದು ಚಹಾ ಅಂಗಡಿಗೆ ಹೋಗಿ ಬಿಸಿ ಬಿಸಿ ಚಹಾ ಕುಡಿಯೋಣವೆಂದು ಹೋಗಿ ಕುಳಿತರು, ಅದರ ಮಾಲೀಕರು ರಾಮಪ್ಪನವರು ಅವರೂ ಈ ಪುಟ್ಟಪ್ಪನವರ ಗೆಳೆಯರೇ, ಅವರೇ ಮಾತು ಪ್ರಾರಂಭಮಾಡಿದರು, ಏನು ಪುಟ್ಟಪ್ಪಾ...... ಅಪರೂಪಕ್ಕೆ ಊರೊಳಗೆ ಬಂದುಬಿಟ್ಟಿರುವಿರಿ, ಏಕೆ

 

ಚಹಾ ಅಂಗಡಿ ತೆರೆದಿಲ್ಲವೇ.......ಕಾರಣ ಏನು, ಏನಾದರೂ ಮನೆಯಲ್ಲಿ ಶುಭ ಕಾರ್ಯವೇ, ಹಬ್ಬವೇ.....ಎಂದು ಒಂದೇ ಸಮನೆ ಐದಾರು ಪ್ರಶ್ನೆಗಳನ್ನು ಕೇಳಿದರು ಅವರು, ಪುಟ್ಟಪ್ಪ ಮಾತನಾಡಲೂ ಬಿಡದೆ.

   ನಂತರ ಪುಟ್ಟಪ್ಪನವರೇ ಮಾತು ಪ್ರಾರಂಭಿಸಿದರು, ಹೀಗೆ ಹಿಂದಿನ ರಾತ್ರಿ ನಡೆದ ವೃತ್ತಾಂತಗಳನ್ನೆಲ್ಲಾ ಸವಿವರವಾಗಿ ಹೇಳಿದರು,

ಹೌದಾ ಪುಟ್ಟಪ್ಪಾ........ಕಳೆದವಾರ ನೀವು ಅನುಭವಿಸಿದಂತಹ ಅದೇ ತೆರನಾದ ಸಮಸ್ಯೆಯನ್ನು ಈ ಊರು ಮುಂದಿನ ಹೆಬ್ಬಾಗಿಲಿನ ಪಕ್ಕದಲ್ಲಿರುವ ಚಹಾ ಅಂಗಡಿ ಮಾಲೀಕರಿದ್ರಲ್ವಾ........ಅದೇ ರಾಜಾಭಟ್ರು.......ಅಂತಾ......ನಿನಗೂ ಗೊತ್ತಲ್ಲಾ ಮಾರಾಯ.......ಪಕ್ಕದ ಊರು ಶಿವಪುರದವರು ಅವರು.....ಹೀಗೇ ನೀರು ಗಂಟಿ ನಾಗಪ್ಪನೇ ಒಂದು ಹೆಣ್ಣುಮಗಳನ್ನು ಕರೆತಂದು ಈಕೆ ನನ್ನ ಮಾವನ ಮಗಳು, ಇವಳ ಕಿವಿ ಸಂಪೂರ್ಣ ಕೇಳಿಸೊಲ್ಲ, ಹಾಗೆ ಹೀಗೆ ಅಂತ ರಾತ್ರಿ ಅಂಗಡಿ ಮುಚ್ಚುವ ಸಮಯಕ್ಕೆ ಬಂದು ಅವರ ಕಾಲು ಹಿಡಿದುಕೊಂಡು ಆ ಒಂದು ರಾತ್ರಿ, ಅವರ ಮನೇಲಿ ಇಟ್ಟುಕೊಳ್ಳಲು ಕೋರಿಕೊಂಡರಂತೆ, ಅದೂ ಆಕೆ ಹೆಸರು ಅದೇನೋ.......ಅದೇನೋ.........ಮರೆತು 

 

ಬಿಟ್ಟೆನಲ್ಲಾ.....ಆಕೆ ಹೆಸರು....ಎಂದು ತುಂಬಾ ತಲೆ ಕೆಡೆಸಿಕೊಂಡರು, ಆಗ ಪುಟ್ಟಪ್ಪ ನವರು ಕೇಳಿದರು, ಆಕೆ ಹೆಸರು ಚಂದ್ರಲೇಖ ಅಂತಾನಾ ......ಎಂದು,

ಅಲ್ಲಪ್ಪಾ.......ಆಕೆ ಹೆಸರು ನಾಗಲೇಖ........ಅಂತಾ.

ಅಂದರು.

        ಮತ್ತೆ ಮುಂದೇನಾಯಿತು, ಹೇಳು ಮಾರಾಯ, ನನಗೂ ತುಂಬಾ ಭಯವಾಗುತ್ತಿದೆ,   ಎಂದು ಅವರು ಕೊಟ್ಟ ಬಿಸಿ, ಬಿಸಿ ಚಹಾ ಕುಡಿಯುತ್ತಾ ಹಾಗೇ ಒಂದು ಸಿಗರೇಟನ್ನು ಕಚ್ಚಿ, ಅದರ ಹೊಗೆ ಬಿಡುತ್ತಾ ಪುಟ್ಟಪ್ಪ ಕೇಳಿದರು.  ಅಯ್ಯೋ....ಅದರ ಕಥೆ ಏನ್ ಕೇಳ್ತೀಯಪ್ಪಾ.......ನೀನೇ ಅದೃಷ್ಟವಂತ, ಅವಳಿಂದ ಬಿಡಿಸಿಕೊಂಡು  ಬದುಕಿಬಂದಿರುವೆ, ಆ ರಾಜಾಭಟ್ರು........ಪಾಪ,  ಅವರು ತುಂಬಾ ಭಯಗೊಂಡು ತನ್ನ ಪ್ರಾಣ ಕಳಕೊಂಡ್ರು........

ಹೇಗಾಯ್ತು ಅವರ ಅಂತ್ಯ, ಎಂದು ತುಂಬಾ ಭಯಗೊಂಡು ಮತ್ತೆ ಮತ್ತೆ ಕೇಳಿದರು ಪುಟ್ಟಪ್ಪ,

ನಿನ್ನ ಹಾಗೇ ಅದೇ ನೀರು ಗಂಟಿ ನಾಗಪ್ಪ ಈ ನಾಗಲೇಖ ಜೊತೆ ಬಂದು ಈ ಒಂದು ರಾತ್ರಿ ನಿನ್ನ ಮನೇಲಿಟ್ಕೋ ಅಂತ ಅಂದು ಆ ನಾಗಲೇಖಾ ನಾ ರಾಜಾಭಟ್ರ ಬಳಿ ಬಿಟ್ಟು ಹಿಂತಿರುಗಿ ಹೋಗಿದ್ದಾನೆ, ಈ ರಾಜಾಭಟ್ರು, ಆ ಹೆಂಗಸು , ನಾಗಲೇಖಾಳನ್ನು ಜೊತೆಯಲ್ಲಿ ಕರೆದುಕೊಂಡು ಶಿವಪುರದ ತನ್ನ ಮನೆಕಡೆ ಆ ಮಳೆಯ ಕಳೆದ ತಿಂಗಳ

 

ಅಮಾವಾಸ್ಯೆಯ ರಾತ್ರಿಯಲ್ಲಿ ಕತ್ತಲಿನಲ್ಲಿಯೇ ಹೊರಟಿದ್ದಾರೆ, ಮನೇನೂ ತಲುಪಿ ಆಗಿದೆ, ಆಗ ಒಳಗಡೆ ಇದ್ದ ತನ್ನ ಮಗನನ್ನು ಹೊರಕ್ಕೆ ಕರೆದು ನಡೆದ ವಿಷಯವನ್ನು ವಿವರಿಸಿದ್ದಾರೆ, ಮಗ ಶಂಕರಭಟ್ಟರ ಹತ್ತಿರ, ಆ ಮಗನಿಗೇಕೋ ತುಂಬಾ ಅನುಮಾನ ಬಂದಿದೆ, ಈ ನಾಗಲೇಖಾಳನ್ನು ನೋಡಿ, ಕಾರಣ ರಾಜಾಭಟ್ರ ಮಗ ಶಂಕರಭಟ್ಟರು ಆಂಜನೇಯನ ದೇವಾಲಯದ ಪೂಜಾರಿ, ಅವರೂ ಕೆಲವು ಮಂತ್ರ, ತಂತ್ರಗಳನ್ನು ಬಲ್ಲವರು, ಅವರಿಗೆ ಈಕೆ ನರಮನುಷ್ಯಳಲ್ಲ ಎಂದು ತನ್ನ ಮಂತ್ರ ಶಕ್ತಿಯಿಂದ ಗೊತ್ತಾಗುತ್ತಿದ್ದಂತೆ ಮನೆಯ ಒಳಗೆ ಹೋಗಿ,  ಅವಳನ್ನು ಹದ್ದುಬಸ್ತಿನಲ್ಲಿಡಲು ಕೆಲವು ಮಂತ್ರ ಹಾಕಿ ದೆವ್ವಕ್ಕೆ ದಿಗ್ಬಂಧನ ಮಾಡಲು ಪೂಜೆ ಸಾಮಾನು, ಹುಣಸೆ ಪೊರಕೆ ತರಲು ಒಳಗೆ ಹೋಗಿದ್ದಾರೆ, ಅಷ್ಟೇ... ಅಷ್ಟರಲ್ಲಿ ಈ ನಾಗಲೇಖಾಳಿಗೆ ಇದೆಲ್ಲವೂ ಅರ್ಥವಾಗಿ ಇನ್ನು ನನ್ನ ಕಥೆ ಮುಗಿಯಿತು, ನನಗೆ ಈ ಮಂತ್ರವಾದಿ ದಿಗ್ಬಂಧನ ಮಾಡಿ ಸೆರೆಯಲ್ಲಿರಿಸುವನೆಂದು ಅರಿತು,  ಕೂಡಲೇ ರಾಜಾಭಟ್ರ ಕುತ್ತಿಗೆಗೆ ಕೈ ಹಾಕಿ ಬಿಗಿಯಾಗಿ ಹಿಸುಕಲು ಅವರ ಕುತ್ತಿಗೆ ಹಿಡಿದಿದ್ದಾಳೆ, ಆದರೆ ರಾಜಾಭಟ್ರ ಮಗ ಬರುವುದು ಸ್ವಲ್ಪ ತಡವಾಗಿದ್ದರಿಂದ ರಾಜಾಭಟ್ರು ಉಸಿರು ಕಟ್ಟಿ ಬಾಯಿಯಿಂದ ರಕ್ತಕಾರಿ ಜೋರಾಗಿ ಕಿರುಚಿಕೊಳ್ಳುತ್ತಾ ಪ್ರಾಣಬಿಟ್ಟಿದ್ದಾರೆ, 

 

ಅಲ್ಲದೇ ಆ ನಾಗಲೇಖ ಅದೇ ಕತ್ತಲೆಯಲ್ಲಿ ಓಡಿ  ಮಾಯವಾಗಿದ್ದಾಳೆ.

       ಬೆಳಗಾಗುತ್ತಿದ್ದಂತೆ ಈ ವಿಷಯ ಊರೊಳಗೆಲ್ಲಾ ಹೊರಡಿ, ಇದು ದೆವ್ವದ ಮಾಯೆಯೇ ಅಂದುಕೊಂಡು ರಾಜಾಭಟ್ಟರ ಅಂತ್ಯಸಂಸ್ಕಾರ ಮಾಡಿ ಮುಗಿಸಿದ ಶಂಕರಭಟ್ಟರು, ತನ್ನ ತಂದೆ ರಾಜಾಭಟ್ರು ಇದೇ ನಾಗಲೇಖಾಳ ಸಹವಾಸದಿಂದ ತನ್ನ ಪ್ರಾಣ ಕಳೆದುಕೊಂಡರು, ಇದಕ್ಕೆಲ್ಲಾ ಕಾರಣ ಆ ನೀರು ಗಂಟಿ ನಾಗಪ್ಪ, ಹೋಗಿ ಅವನನ್ನು ಹುಡುಕಿಕೊಂಡು ಬರೋಣವೆಂದರೆ ಆತ ಇದುವರೆಗೂ ಎಲ್ಲೂ ಕಾಣುತ್ತಿಲ್ಲ, ಅದೆಲ್ಲಿ ಮಾಯವಾದನೋ ಆ ನಾಗಪ್ಪ, ಅದೇ ನಾಗಲೇಖಾಳೊಂದಿಗೆ........ ಒಟ್ನಲ್ಲಿ ಒಂದು ಬಲಿಪಡೆಯಿತು ದೆವ್ವ, ಎರಡನೆಯದು ನಿನ್ನನ್ನು ಪಡೆಯಬೇಕಿತ್ತು, ಅದು ನಿನ್ನದು, ನಿನ್ನ ಆಯಸ್ಸು ಗಟ್ಟಿ ಇದೆ ಬಿಡು ಮಾರಾಯ, ಇನ್ನಾದರೂ ಜಾಗರೂಕತೆಯಿಂದ ಇದ್ದು, ಯಾರನ್ನೂ ನಂಬಬೇಡ ಎಂದರು ಚಹಾ ಅಂಗಡಿ ಮಾಲೀಕ,  ಪುಟ್ಟಪ್ಪ ನವರಿಗೆ ಧೈರ್ಯ ತುಂಬಿ ಕಳಿಸಿದರು.

   ಈಗ ಪುಟ್ಟಪ್ಪ ನವರಿಗೆ ಮತ್ತಷ್ಟು ಭಯ ಆವರಿಸಿತು, ಇಂದೇನೋ ಬಚಾವಾದೆ ಮುಂದೆ ಇದೇ ರೀತಿಯಾದರೆ ಏನು ಗತಿ.......ದೇವರೇ.......ಕಾಪಾಡಪ್ಪಾ....ಎಂದು ಮನದಲ್ಲೇ ಮನೆದೇವರು ನೆನೆಯುತ್ತಾ, ಮೊದಲು

 

ನಾಗಪ್ಪ ನನ್ನು ಹುಡುಕಿ ಕರೆತರಲೇಬೇಕೆಂದು ನಿಶ್ಚಯಿಸಿ ಇವರ ಊರಿನ ಸುತ್ತಮುತ್ತಲ ಐದಾರು ಹಳ್ಳಿಗಳ ಕೆರೆಗಳ ಹತ್ತಿರ ಎಲ್ಲಾ ಕಡೆ ನಾಗಪ್ಪ ನನ್ನು ಹುಡುಕಲಾರಂಭಿಸಿದರು ಪುಟ್ಟಪ್ಪ, ಸಿಕ್ಕಸಿಕ್ಕವರನ್ನು ಕೇಳುತ್ತಾ ಇಡೀ ಐದಾರು ಹಳ್ಳಿಗಳಲ್ಲಿ ಹುಡುಕಿದರೂ ಅವನ ಸುಳಿವಿಲ್ಲ, ಕೊನೆಗೆ ಅವನ ಊರು ಬೆಳಗಾವಿ,  ಕರ್ನಾಟಕ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ  ಒಂದು ಹಳ್ಳಿ ಅವನ ಊರು ಎಂದು ಈ ಮೊದಲೇ ಪುಟ್ಟಪ್ಪನವರಿಗೆ ತಿಳಿದಿತ್ತು, ಆದರೆ  ಪುಟ್ಟಪ್ಪನವರ ಊರು ಮಲೆನಾಡಿನ ಪಶ್ಚಿಮಘಟ್ಟಗಳ ಮಡಿಲಲ್ಲಿರುವ ಒಂದು ಊರು, ಸರಿ ಅಲ್ಲಿಗೇ ಹೋಗಿ ಅವನನ್ನೇ ಭೇಟಿಯಾಗಲು ನಿರ್ಧರಿಸಿದರು ಅವರು.

 

         ಮರುದಿನ ರಾತ್ರಿ ಬಸ್ಸಿನಲ್ಲಿ,  ಅವನ ಹಳ್ಳಿಗೇ ಹೋಗಲು ತಯಾರಾದರು, ಪುಟ್ಟಪ್ಪ ನವರು, ಅವರ ಜೊತೆಗೆ ದೆವ್ವದ ಭಯದಿಂದ ಸಾವನ್ನಪ್ಪಿದ ರಾಜಾಭಟ್ಟರ ಮಗ ಶಂಕರ್ ಭಟ್ಟರು ಹಾಗೂ ಮತ್ತಿಬ್ಬರು ಗೆಳೆಯರೊಡನೆ ನಾಗಪ್ಪನ ಊರಿಗೆ ಪ್ರಯಾಣ ಬೆಳೆಸಿದರು ಪುಟ್ಟಪ್ಪನವರು.