Click here to Download MyLang App

ಸ್ವರ್ಣ ಮಯೂರಿ - ಅರುಣಾ ಜಿ ಭಟ್ | ಪ್ರೇಮ ಕತೆ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ |

"ಸ್ವರ್ಣ ಮಯೂರಿ"

ಎಳೆ ಬಿಸಿಲು ಹಾಸಿದ ಹೊತ್ತು. ದಿನಮಣಿ ಮೆಲ್ಲ,ಮೆಲ್ಲನೆ ಬಾನ ಮೆಟ್ಟಿಲು ಏರುತಿದ್ದ. ಮಂಜಿನ ಮಣಿಗಳು ಮಧುರ ಸ್ವರ. ಹಕ್ಕಿಗಳಿಂಚರ. ಹೂವುಗಳ ಸುಗಂಧ. ದುಂಬಿಗಳ ಝೇoಕಾರ. ಪ್ರಕೃತಿಯೇ ಕಾವ್ಯವಾಗಿತ್ತು.

ಪಾರಿಜಾತ ಮರದ ಕೆಳಗೆ "ಸ್ವರ್ಣ ಮಯೂರಿ" ತವಕದಲ್ಲಿ ಅತ್ತಿತ್ತ ನೋಡುತ್ತಿದ್ದಳು.ನೀಳ ಕೂದಲು ಗಾಳಿಯ ಜೊತೆಗೆ ಓಲಾಡುತಿತ್ತು. ನೀಲಿ ಬಣ್ಣದ ಕಚ್ಚೆ. ಅದೇ ಬಣ್ಣದ ಮೇಲುಡುಪು. ಅದರ ಮೇಲೊಂದು ತೆಳ್ಳನೆಯ ಉದ್ದದ ಶಾಲು. ಮೇಲು ಹೊದಿಕೆಯಂತಿತ್ತು.

ಕೈ ತುಂಬಾ ಬಳೆಗಳು. ದಪ್ಪ ಕಾಲ್ಗೆಜ್ಜೆಗಳು. ದುಂಬಿಯಂತಹ ಕಂಗಳು. ನೀಳ ನಾಸಿಕದಲ್ಲಿ ತುಸು ದೊಡ್ಡದಾದ ಮುತ್ತಿನ ಮೂಗುತಿ. ಅತಿ ಸುಂದರಿ ...ರಾಜ ನರ್ತಕಿ "ಸ್ವರ್ಣ ಮಯೂರಿ".

ಪುಟ್ಟ ಬಾಲೆಯಾಗಿದ್ದಾಗ ಅಂದಿನ ರಾಜರು ಇಟ್ಟ ಹೆಸರದು. ತಾಯಿಯು ನರ್ತಕಿ. ಎಂದಾದರೊಮ್ಮೆ ತಾಯಿಯೊಡನೆ ಈ ಬಾಲೆಯು ಹೋಗುತ್ತಿದ್ದಳು ಅರಮನೆಗೆ. ಅವಳ ಮುದ್ದು ರೂಪ ಮೆಚ್ಚದವರಿಲ್ಲ.

ಅವಳೀಗ ತರುಣಿ. ರಾಜ ನರ್ತಕಿ.

ಅರಮನೆಯಲ್ಲಿ ಗೂಢಾಚಾರ ಕೆಲಸ ಮಾಡುವ...ವಸುಪ್ರದನನ್ನು ಪ್ರೀತಿಸುತ್ತಿದ್ದಳು. ಇಬ್ಬರಿಗೂ ಅಗಲಿರಲಾರದಷ್ಟು ಪ್ರೇಮ. ಆದರೆ ಜೊತೆಯಾಗಿ..ಮಾತನಾಡಲು ಅವಕಾಶ ಕಡಿಮೆ.

ವಸುಪ್ರದ ವೇಷ ಮರೆಸಿಕೊಂಡು ,ದೇಶ ಸುತ್ತಲು ಹೋಗಿ ತಿಂಗಳು ಎರಡು ಕಳೆದಿತ್ತು. ಸ್ವರ್ಣ ಮಯೂರಿಗೆ ವಿರಹದುರಿ. ಆಸ್ಥಾನದಲ್ಲಿ ನರ್ತಿಸಲು ಉತ್ಸಾಹವಿಲ್ಲ.ಆದರೂ ನರ್ತಿಸಲೇ ಬೇಕು.ಇನಿಯನನ್ನು ಕಾಣದೇ ಪರಿತಪಿಸುತ್ತಿದ್ದಳು.

ಇಂದು ಅವನು ಮತ್ತೆ ಅರಮನೆಗೆ ಬರುವ ದಿನ. ಅವನನ್ನು ಎದುರುಗೊಳ್ಳಲು ಕಾಯುತಿಹಳು ಸ್ವರ್ಣ ಮಯೂರಿ. ಸರಕ್ ಎಂದು ಸದ್ದಾದರೂ ಆತನೇ ಆಗಮಿಸಿದನೇನೋ...ಎನ್ನುವ ಕಾತುರ.ಆತುರ.

ವಸುಪ್ರದನು ಪ್ರಿಯತಮೆಯ ಭೇಟಿಗೆ ತವಕಿಸುತ್ತಿದ್ದ. ರಾಜನಿಗೆ ತಾನು ಬಂದ ಸುದ್ದಿಯನ್ನು ಅರುಹಿ...ಸ್ವರ್ಣ ಮಯೂರಿಯ ಭೇಟಿಗೆ ಹೊರಟೆ ಬಿಟ್ಟ.

ಕಾಲುಗಳು ಬೇಗ,ಬೇಗನೆ ಹೆಜ್ಜೆ ಇಡುತ್ತಿದ್ದವು.

ಪಾರಿಜಾತ ಹೂವುಗಳನ್ನು ಆರಿಸುತ್ತಾ...ಹಾಡು ಗುನುಗುತ್ತಿದ್ದಳು ಪ್ರಿಯತಮೆ.ನೀಲಿ ಶಾಲು ಅಂಕೆ ಮೀರಿ ಹಾರುತಿತ್ತು.

"ಪ್ರಿಯೆ..ಮಯೂರಿ" ಪ್ರೇಮವೆಲ್ಲಾ ವಸುಪ್ರದನ ಸ್ವರದಲ್ಲಿ ಸೇರಿದ ಹಾಗಿತ್ತು.

ಸ್ವರ್ಣ ಮಯೂರಿ ಎದ್ದು ನಿಂತಳು. ಬೊಗಸೆಯಲ್ಲಿದ್ದ ಹೂವುಗಳನು ಆತನ ಮೇಲೆ ಎಸೆದಳು.

"ಪುಷ್ಪ ವೃಷ್ಟಿಯಲಿ ಸ್ವಾಗತವೇ ಓ ನನ್ನ ಪ್ರಿಯೆ?" ಕೇಳಿದ ವಸುಪ್ರದ.

"ಅಹುದಹುದು. ಕಾಣದೇ ಅದೆಷ್ಟು ದಿನಗಳು ಕಳೆದವು" ನಾಚುತ್ತ ನುಡಿದಳು.

ವಸುಪ್ರದ ತೋಳುಗಳನ್ನು ಚಾಚಿದ.

ಅತ್ತಿತ್ತ ನೋಡಿದ ನರ್ತಕಿ ಮೆಲ್ಲನೆ ಹೆಜ್ಜೆಯಿಟ್ಟಳು. ಘಲ್ ಘಲ್ ..ಗೆಜ್ಜೆಗಳು ದೊಡ್ಡ ಸದ್ದು ಮಾಡಿದವು.

ಪ್ರಿಯತಮನ ಬಾಹು ಬಂಧನದಲ್ಲಿ ನಸು ನಕ್ಕಳು. ವಿರಹವ ಮರೆಸುವಂಥ ಸಿಹಿ ಮುತ್ತುಗಳಿಂದ ಅವಳ ಕೆನ್ನೆಯನ್ನು ಅಲಂಕರಿಸಿದ ವಸುಪ್ರದ.

ಆ ಹೊತ್ತಿಗೆ "ರಾಜ ನರ್ತಕಿ..ಓ ರಾಜ ನರ್ತಕಿ..ಎಲ್ಲಿರುವೆ? ಮಹಾರಾಜರಿಂದ ಕರೆ ಬಂದಿದೆ. ಅದಾರೋ ಅತಿಥಿಗಳು ಬೇರೆ ದೇಶದಿಂದ ಬಂದಿಹರು. ಸ್ವಾಗತಕೆ ನೃತ್ಯ ಏರ್ಪಡಿಸಿಹರು" ಗೆಳತಿ ಸುಮೋದಿನಿಯ ಕರೆ.

ಪ್ರಿಯತಮನ ಅಪ್ಪುಗೆಯಿಂದ ಜಾರಿದಳು.

"ಇದೋ..ಬಂದೆ ಗೆಳತಿ."ಎಂದಳು

"ನಾನು ಹೋಗಿ ಬರುವೆನು ಪ್ರಿಯ. " ತಲೆ ತಗ್ಗಿಸಿ ನುಡಿದಳು. ನಿರಾಸೆಯಿತ್ತು ಮಾತುಗಳಲ್ಲಿ.

"ಪ್ರಿಯೆ" ಎನ್ನುತ್ತ ಅವಳ ಕೈ ಹಿಡಿದ ವಸುಪ್ರದ.
ಬಿಡಿಸಿಕೊಂಡು ಹೊರಟಳು. ಅವಳ ತೆಳ್ಳನೆಯ ನೀಲಿ ಶಾಲು ವಸುಪ್ರದನ ಕೈಯಲ್ಲಿ..

"ಇತ್ತ ನೀಡು.ಕಾಡದಿರು. ಸಮಯ ಸಿಕ್ಕರೆ ಮತ್ತೆ ಸೇರೋಣ" ನಕ್ಕಳು ಸ್ವರ್ಣ ಮಯೂರಿ.

ಆ ವಸ್ತ್ರವನ್ನು ಅವಳ ಮೇಲೆಸೆದ. ಹಾರಿ ಬಂದು ಅವಳನ್ನಪ್ಪಿತು.

"ಓಹ್. ಪ್ರಿಯೆ..ಈ ವಸುಪ್ರದನೆ ಆ ನೀಲ ವಸ್ತ್ರವಾಗ ಬಾರದಿತ್ತೇ ಈ ಘಳಿಗೆಯಲ್ಲಿ" ವಸುಪ್ರದ ಹೇಳಿದ.

ರಾಜನರ್ತಕಿ ಬೇಗ,ಬೇಗ ಅರಮನೆಯತ್ತ ನಡೆದಳು

ಗೆಜ್ಜೆಗಳು ಜೋರಾಗಿ ಕೂಗಿದವು..ಘಲ್ ಘಲ್


ಅರುಣಾ.ಜಿ.ಭಟ್. ಬದಿಕೋಡಿ