Click here to Download MyLang App

ಸ್ನೇಹ ಸಂಬಂಧ : ರಾಜೇಂದ್ರ ಕುಮಾರ್ ಗುಬ್ಬಿ | ಸಾಮಾಜಿಕ | ಕತೆಯ ಒಳನುಡಿ ಶೈಲಿ - ಶಿಷ್ಟ ಸ್ವರೂಪದ ಕನ್ನಡ |

     ಒಂದು ಸುಮಾರು ಮೂವತ್ತು ನಲವತ್ತು ಜನರಿರುವ  ಮದುವೆ ದಿಬ್ಬಣ ಬೆಂಗಳೂರಿನಿಂದ ಹುಬ್ಬಳ್ಳಿಗೆ ಮದುವೆ ಗಂಡಿನ ಜೊತೆ ಹೊರಟಿತ್ತು. ಬೆಂಗಳೂರು-ಬೆಳಗಾವಿ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದು ಇಡೀ ರೈಲು ಇವರುಗಳ ಮಾತುಗಳಿಂದ, ಹಾಸ್ಯಭರಿತ ಚರ್ಚೆ ಗಳಿಂದ, ಮಕ್ಕಳ ಆಟ, ಚೀರಾಟ, ಕಿರುಚಾಟಗಳಿಂದ ತುಂಬಿಹೋಗಿತ್ತು . ಇವರುಗಳು ಅಷ್ಟೂ ಜನರ ಬ್ಯಾಗುಗಳ ಜೊತೆಗೆ ಮದುವೆ ವರನಿಗೆ, ವಧುವಿಗೆ ಬೇಕಾಗುವ ಬಟ್ಟೆಬರೆ,  ಅತ್ಯುಪಯುಕ್ತ ವಸ್ತುಗಳು, ಒಡವೆ ಮೊದಲಾದವುಗಳುಳ್ಳ ಬ್ಯಾಗುಗಳೂ ಸಹ ಇದ್ದವು. ಅಷ್ಟೂ ಜನರು ಅವರವರ ಬ್ಯಾಗುಗಳನ್ನು ಅತ್ಯಂತ ಜಾಗರೂಕತೆಯಿಂದ ತಂತಮ್ಮ ಬಳಿ ಇಟ್ಟು ಕೊಂಡಿದ್ದರು,  ಆ ಬೋಗಿಗಳಿಗೆ ಇತರರು ಯಾರು ಬಂದರೂ ಅವರುಗಳೊಡನೆ ಸಖ್ಯ ಬೆಳೆಸಿ ಅವರೂ ತಮ್ಮ ಮನೆಯವರೇನೋ ಎಂಬಂತೆ ನೋಡಿಕೊಳ್ಳುತ್ತ ತಾವು ತಂದ ಆಹಾರ , ಕರಿದ ತಿಂಡಿಗಳನ್ನು ಕೊಡುತ್ತಾ ಪ್ರಯಾಣ ಬೆಳೆಸುತ್ತಿದ್ದರು.

          ಇದೇ ಬೋಗಿಯಲ್ಲಿ ನಾಲ್ಕು ಜನ ಯುವಕರ ಗುಂಪೊಂದು  ತಮ್ಮ ಕೆಲಸಗಳಿಗೆ ರಜೆ ಇದ್ದಿದ್ದರಿಂದ ಅವರು ಬೆಳಗಾವಿ ಕಡೆಗೆ ಪ್ರವಾಸಕ್ಕೆಂದು ಹೊರಟಿತ್ತು.ಇವರುಗಳೂ ಅವರೊಡನೆ ಕೆಲವೇ ಅತ್ಯಲ್ಪ ಸಮಯದಲ್ಲಿ ಸಲುಗೆ ಬೆಳೆಸಿಕೊಂಡು ಆತ್ಮೀಯರಂತಾಗಿಬಿಟ್ಟರು. ಇವರುಗಳು ಸಮಾನ ವಯಸ್ಕರರ ಜೊತೆ ಇಸ್ಪೀಟು ಆಡುವುದು, ಅವರೊಂದಿಗೆ ಅಂತ್ಯಾಕ್ಷರಿ ಹಾಡುವುದು, ಅವರೊಡನೆ ರೈಲು ನಿಂತ ನಿಲ್ದಾಣಗಳಲ್ಲಿ ಅಲ್ಲಲ್ಲಿ ಕಾಫಿ, ಟೀ ಹೀರುವುದು ಹಾಸ್ಯ ಪ್ರಸಂಗಗಳನ್ನು ಹೇಳುವುದು ಹೀಗೆಯೇ ಪ್ರಯಾಣ ಸಾಗಿತ್ತು. ಆಗ ಈಗಿನಂತೆ ಕೈಲಿ ಮೊಬೈಲುಗಳಿಲ್ಲ, ಎಲ್ಲರೂ  ವಿಳಾಸ  ಪಡೆಯಲು, ಕೇವಲ ಎದುರಿಗೆ ಸಿಕ್ಕಾಗ ಅವರೊಂದಿಗೆ ಸ್ನೇಹ ಬೆಳೆಸಿಕೊಂಡು ನಂತರ ಮರೆತುಬಿಡುವುದು, ಅಥವಾ ಅವರ ಮನೆಯ ವಿಳಾಸ ಬರೆದುಕೊಳ್ಳುವ, ಅವರ ವಿಳಾಸದ ಕಾರ್ಡುಗಳನ್ನು ಪಡೆಯುವ ಪದ್ಧತಿಯಿತ್ತು.

            ಹೀಗೇ ರೈಲು ಚಲಿಸುತ್ತಾ ಚಲಿಸುತ್ತಾ ಬಂದೇ ಬಿಟ್ಟಿತು  ಮದುವೆಯ ದಿಬ್ಬಣದ ಜನರೆಲ್ಲಾ ಇಳಿದುಕೊಳ್ಳುವ ಹುಬ್ಬಳ್ಳಿ ರೈಲು ನಿಲ್ದಾಣ.

ಎಲ್ಲರೂ,  ಒಂದು ಕಡೆ ಮದುವೆಯ ಸಂಭ್ರಮವಾದರೆ,

ಮತ್ತೊಂದೆಡೆ ಹುಬ್ಬಳ್ಳಿಗೆ ಪ್ರಪ್ರಥಮ ಬಾರಿಗೆ ಹುಬ್ಬಳ್ಳಿಗೆ ಬರುತ್ತಿರುವ ಖುಷಿ.

ಅಷ್ಟೂ ಜನರೆಲ್ಲಾ ಒಂದೆಡೆ ಸೇರುತ್ತಿರುವ ಸಂಭ್ರಮದಲ್ಲಿ ಎಲ್ಲರೂ ರೈಲು ನಿಂತೊಡನೆ ಆತುರಾತುರವಾಗಿ ತಂತಮ್ಮ ಬ್ಯಾಗುಗಳನ್ನು ತೆಗೆದುಕೊಳ್ಳುವುದು, ಇಳಿಯುವುದು. ಹಿರಿಯರ , ಮಕ್ಕಳ ಕೈ ಹಿಡಿದು ಇಳಿಸುವುದು , ಜಾಗ್ರತೆಯಿಂದ ತಾವುಗಳು ತಂದ ಬ್ಯಾಗುಗಳ ಮೇಲೆ ನಿಗಾ ಇಡುವುದು ಇವೆಲ್ಲವುಗಳನ್ನು  ಕಾಪಾಡಿಕೊಂಡು ಗಡಿಬಿಡಿಯಿಂದ ಇಳಿಯುವಾಗ ಆ ನಾಲ್ಕುಜನರಿಗೆ ಹೇಳುವುದು ಮರೆತೇಬಿಟ್ಟರು ಎಲ್ಲರೂ , ಈ ಮೊದಲು ಮದುವೆಗೆ ಆಮಂತ್ರಣ ಕೇವಲ ಬಾಯಿ ಮಾತಿನಿಂದ ಹೇಳಿದ್ದರು, ಇಳಿಯುವಾಗ ಆಹ್ವಾನ ಪತ್ರಿಕೆ ಕೊಡುವುದಾಗಿಯೂ, ತಾವುಗಳು ಪ್ರವಾಸ ಎರಡುದಿನ ಮೊಟಕುಗೊಳಿಸಿ ಈ ನಮ್ಮ ಮದುವೆಗೆ ಬರಲೇ ಬೇಕೆಂದು ಮದುವೆ ವರನೇ ಖುದ್ದು ಹೇಳಿದ್ದು. ಆದರೆ ಗಡಿಬಿಡಿಯಿಂದ ಇಳಿಯುವಾಗ ಅವರಿಗೆ ಆಹ್ವಾನ ಪತ್ರಿಕೆ ಕೊಡುವುದಿರಲಿ ಅವರುಗಳ ವಿಳಾಸವನ್ನೂ ಬರೆದುಕೊಳ್ಳಲಿಲ್ಲ, ರೈಲೂ ಬೆಳಗಾವಿ ಕಡೆಗೆ ಹೊರಟೇ ಬಿಟ್ಟಿತು.   ಇತ್ತ ಅವರನ್ನೆಲ್ಲಾ ಕೊಂಚ ಬೇಜಾರಿನಿಂದಲೇ ಬೀಳ್ಕೊಟ್ಟ ಆ ಯುವಕರುಗಳೂ ಅವರೊಡನೆ ಇಷ್ಟೊತ್ತು ಕಳೆದ ಒಂದೊಂದು ಕ್ಷಣವನ್ನೂ ಮೆಲುಕು ಹಾಕುತ್ತಾ ಪ್ರಯಾಣ ಮುಂದುವರೆಸಿತು.

 

         ರಾತ್ರಿ ಒಂಬತ್ತು ಗಂಟೆಗೆ ಹುಬ್ಬಳ್ಳಿಯಲ್ಲಿ ಇಳಿದ ಮದುವೆ ದಿಬ್ಬಣ ಹುಬ್ಬಳ್ಳಿಯ ಒಂದು ಲಾಡ್ಜ್ ಗೆ ಹೋಗಿ ತಂಗಿತು .ರೈಲು ಪ್ರಯಾಣದಿಂದ ಆಯಾಸಗೊಂಡಿದ್ದ ಎಲ್ಲರೂ ತಿಂಡಿಯಾದ ನಂತರ ನಿದ್ರೆಗೆ ಜಾರಿದರು ಎಲ್ಲಾ ವಿಶ್ರಮಿಸಿಕೊಳ್ಳುವಾಗ ವರನ ತಾಯಿಗೆ  ಬೆಳಗಿನಜಾವಕ್ಕೇ  ಎಚ್ಚರವಾಯಿತು ಅವರಿಗೆ ಯಾವುದೋ ಒಂದು ಬ್ಯಾಗು ಕಾಣುತ್ತಿಲ್ಲ ಎಂಬುದು ಮನಸ್ಸಿಗೆ ಬಂದು ಥಟಂತ ಹೊಳೆಯಿತು. ಅವರು ಆ ಹೋಟೆಲಿಗೆ ಬಂದಾಗ ಎಲ್ಲಾ ಬ್ಯಾಗುಗಳನ್ನು ಆತುರಾತುರವಾಗಿ ಎಣಿಕೆ ಮಾಡಿಕೊಂಡಿದ್ದರು, ಆಗಿನಿಂದ ಅವರ ಮನದಲ್ಲಿ ಯಾವುದೋ ಒಂದು ಬ್ಯಾಗು ಕಾಣೆಯಾಗಿರುವುದು ಹೊಳೆಯಿತು.  ಅದೂ ಪ್ರಮುಖ ವಸ್ತುಗಳಿದ್ದ ಬ್ಯಾಗು ಅದು. ಅದಿಲ್ಲದಿದ್ದರೆ ಮದುವೆಯೇ ನಡೆಯದು, ಅದರಲ್ಲೇ ವರನ, ವಧುವಿನ ಒಡವೆಗಳು,  ತಾಳಿ, ಎಲ್ಲಾ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗು ಕಾಣೆಯಾಗಿದೆಯಲ್ಲಾ , ಅದನ್ನು ಯಾರಿಗೂ ಕೊಡದೆ ತನ್ನ ಹತ್ತಿರವೇ ಇಟ್ಟುಕೊಂಡಿದ್ದು , ಆದರೂ ಅದೇಗೆ

 

ಕಾಣೆಯಾಯಿತು ಎಂದು ಅದೇ ಗುಂಗಿನಲ್ಲಿ ಅವರು ಅದೇ ನಿದ್ರೆಯಿಂದ ಬೆಳಗಿನಜಾವಕ್ಕೇ ಎಚ್ಚರಗೊಂಡಿದ್ದರು.  ಬೆಳಗಾಗುವುದರೊಳಗೆ ವಿಷಯ ಒಬ್ಬರಿಂದೊಬ್ಬರಿಗೆ ಹರಡಿ ಇಡೀ ಕುಟುಂಬದೊಳಗೆ ಗುಸುಗುಸು ಮಾತುಗಳು ಶುರುವಾಯಿತು .ನಾವ್ಯಾರೂ ಆ ಬ್ಯಾಗು ನೋಡೆಇಲ್ಲವೆಂದೂ ತಮಗೂ ಆ ಬ್ಯಾಗಿಗೂ ಸಂಬಂಧವೇ ಇಲ್ಲವೆಂದೂ ಹಲವರು ವಾದಿಸತೊಡಗಿದರೆ, ಮತ್ತೆ ಕೆಲವರು ತಮ್ಮ ಬಳಿ  ಆ ಬ್ಯಾಗು ಇಲ್ಲವೆಂದೂ ತಮ್ಮ ಮೇಲೆ ಅಪವಾದ ಬರದ ರೀತಿಯಲ್ಲಿ ವರ್ತಿಸತೊಡಗಿದರು,

ವರನೂ ಅವನ ತಂದೆಯೂ , ವರನ ತಾಯಿಯನ್ನು ಜೋರಾಗಿ ಬೈಯತೊಡಗಿದರು. ಅವರ ಬೈಗುಳದಿಂದ ಆಕೆ ಕಣ್ಣಂಚಲಿ ನೀರು ಬಂತು. ಇಡೀ ವರನ ಕುಟುಂಬದಲ್ಲಿ ಒಬ್ಬರ ಮೇಲೊಬ್ಬರಿಗೆ ಅನುಮಾನವುಂಟಾಯಿತು.  ಆಗ ವರನೇ ಹೇಳಿದ ಈಗ ರೈಲು ಎಲ್ಲಿ ಹೋಗಿ ತಲುಪಿರುತ್ತದೆ ಎಂದು, ಆಗ ಸಮಯ ನೋಡಿದರೆ ಬೆಳಿಗ್ಗೆ 7-00ಗಂಟೆ

ಆಗ ರೈಲು ಬೆಳಗಾವಿ ತಲುಪಿ ಸುಮಾರು ಒಂದು ಗಂಟೆಯಾಗಿತ್ತು. ಮತ್ತೂ ಗಾಬರಿಯಾಯಿತು ಎಲ್ಲರಿಗೂ ಅದೆಷ್ಟು ಜನ ರೈಲು ಇಳಿದರೋ ಅದೆಷ್ಟು ಮಂದಿ ಹತ್ತಿದರೋ  ಆ ಬ್ಯಾಗು ಯಾರ ಕೈಗೆ ಸಿಕ್ಕಿತೋ , ಅದು ನೆನೆಸಿಕೊಂಡರೇ ಭಯವಾಯಿತು. ಅದೇ ರೈಲಿನಲ್ಲಿ ಇವರುಗಳ ಜೊತೆ ಪ್ರಯಾಣಮಾಡಿದ ಆ ನಾಲ್ವರು ಯುವಕರೂ ಜ್ಞಾಪಕಕ್ಕೆ ಬಂದರು, ಆದರೇನು ರೈಲು ಬೆಳಗಾವಿ ಬಿಟ್ಟು ಬಹುದೂರ ಹೋಗುತ್ತಿತ್ತು. ಅಲ್ಲದೆ ಅವರುಗಳ ಬಗ್ಗೆ ಯಾವುದೇ ಗುರುತುಗಳಾಗಲೀ ಆವರ ಪರಿಚಯಪತ್ರವಾಗಲೀ ಇರಲಿಲ್ಲ.

ವರನ ಕಡೆಯವರು ಈ ಮದುವೆಗೇ ಮುಂಚೆಯೇ ಈ

ಶುಭಕಾರ್ಯದಲ್ಲಿ ಅದೇನು ಅಪಶಕುನವಾಯಿತೆಂದು ಬೇಸರ ಪಟ್ಟುಕೊಂಡು ಈಗ ಇದ್ದಕ್ಕಿದ್ದಂತೆ ಅಷ್ಟೂ ಒಡವೆ , ಬಟ್ಟೆ ಬರೆ ಎಲ್ಲಾ ಹೇಗೆ ಮಾಡಿಸುವುದು ಲಕ್ಷಾಂತರ ರೂಪಾಯಿ ಮೌಲ್ಯದ ಬ್ಯಾಗು ಅದು ಎಂದು ಬೇಸರಪಟ್ಟುಕೊಂಡರು.

 

      ಈ ವಿಷಯ ಹೆಣ್ಣಿನ ಕಡೆಯವರಿಗೆ ತಿಳಿದು ಅವರೂ ಹೋಟೆಲಿಗೆ ಬಂದರು ವಿಷಯ ತಿಳಿದು ತಮಗೆ ತಿಳಿದವರ ಮುಖಾಂತರ ಪೊಲೀಸರಿಗೆ ಕಂಪ್ಲೇಂಟ್ ಕೊಡಲು ತೀರ್ಮಾನಿಸಿದರು.

ಇತ್ತಕಡೆ ಬೆಳಗಾವಿ ತಲುಪಿದ ರೈಲಿನಲ್ಲಿದ್ದ ಆ ಯುವಕರು ತಂತಮ್ಮ ಬ್ಯಾಗುಗಳನ್ನು ತೆಗೆದುಕೊಂಡು ಹೊರಡಲು ಅನುವಾದರು, ಆಗ ಅವರ ಬ್ಯಾಗ್ ಕೆಳಗಡೆ ಮತ್ತೊಂದು ತೂಕದ ಬ್ಯಾಗು ಇರುವುದು ಅವರ ಅರಿವಿಗೆ

 

ಬಂತು, ಎಲ್ಲಾ ಪ್ರಯಾಣಿಕರು ಇಳಿದಮೇಲೆ ಇಡೀ ಆ ಡಬ್ಬಿಯಲ್ಲಿದ್ದದ್ದು ಇವರು ಮಾತ್ರ, ಮತ್ತೆ ಪ್ರಯಾಣಿಕರು ಈ ರೈಲಿಗೆ ಹತ್ತಲು ತುಂಬಾ ಸಮಯವಿದೆ, ಮತ್ತೆ ಮುಂದೆ ಈ ರೈಲು ಹೋಗುತ್ತದೆ.ಆದ್ದರಿಂದ  ಈ ಬ್ಯಾಗು ಇನ್ನು ಇಲ್ಲೇ ಬಿಟ್ಟರೆ ಅದು ಸಂಬಂಧಪಟ್ಟವರಿಗೆ ಸಿಗದಿದ್ದರೆ ಹೇಗೆ ಎಂದು ಯೋಚಿಸಿ ಆ ಬ್ಯಾಗ್ ಕೈಯಲ್ಲಿಡಿದು ರೈಲಿಳಿದು ಮೊದಲು ತಾವು ಬುಕ್ ಮಾಡಿದ ಹೋಟೆಲಿನ ರೂಂಗೆ ಹೋಗಿ ನಂತರ ಪರಿಶೀಲಿಸಿ ಅದರ ಸಂಬಂಧಪಟ್ಟವರಿಗೆ ತಲುಪಿಸುವ ಅಂದುಕೊಂಡು ಹೊರಟರು.

ಹುಬ್ಬಳ್ಳಿ ಯಲ್ಲಿ ಮದುವೆ ಮನೆಯವರು ತ್ವರಿತವಾಗಿ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟು ರೈಲಿನಲ್ಲಿ ಪರೀಕ್ಷಿಸಲು ಮನವಿ ಮಾಡಿಕೊಂಡಿದ್ದರಿಂದ ಆ ಸಮಯದಲ್ಲಿ ರೈಲು ಯಾವ ನಿಲ್ದಾಣದಲ್ಲಿದೆಯೆಂದು ತಿಳಿದು ಪೊಲೀಸರು ಕ್ರಮ ಕೈಗೊಂಡರು.

 

        ಆ ಯುವಕರು ತಾವು ರೂಂ ಮಾಡಿದ ಹೋಟೆಲ್ ಗೆ ಹೋಗಿ ಸ್ವಲ್ಪ ವಿಶ್ರಮಿಸಿ ಸಾವಧಾನದಿಂದ ಈ ತೂಕದ ಬ್ಯಾಗು ತೆರೆದು ನೋಡಿದಾಗ ಆಶ್ಚರ್ಯ ಕಾದಿತ್ತು, ಕಾರಣ  ಅದರಲ್ಲಿ

ಬೆಲೆಬಾಳುವ ಒಡವೆಗಳ ಚಿಕ್ಕ ಚಿಕ್ಕ ಪೆಟ್ಟಿಗೆಗಳು ಮತ್ತೂ ಮದುವೆಗೆ ಬೇಕಾದ ಅತ್ಯುಪಯುಕ್ತ ಬೆಲೆಬಾಳುವ ವಸ್ತುಗಳು ಇದ್ದವು ಜೊತೆಗೆ ಕೆಲವು  ಲಗ್ನಪತ್ರಿಕೆಗಳಿದ್ದವು.   ಅದನ್ನು ನೋಡಿದ ಯುವಕರು ಇದು ನಾವು ರೈಲಿನಲ್ಲಿ ಭೇಟಿಯಾದ ಆ ಮದುವೆಯ ಕುಟುಂಬದವರದೇ ಎಂದೂ, ಮದುವೆ ಮನೆಯ ವಿಳಾಸಕೂಡ ಅದರಲ್ಲಿದ್ದಿದ್ದರಿಂದ ಆ ಬ್ಯಾಗನ್ನು ಅವರಿಗೆ ತಲುಪಿಸುವ ಯೋಚನೆ ಮಾಡಿದರು,  ಆದರೆ ಇವರು ಬಂದಿರುವುದು ರಜಾದಿನಗಳನ್ನು ಮಜಾ ಮಾಡಲು, ಈಗ ಹುಬ್ಬಳ್ಳಿಗೆ ಹೋದರೆ ಅಲ್ಲಿಗೆ ಈ ಪ್ರವಾಸ ಅಷ್ಟೇ , ಏನೊಂದೂ ತಿಳಿಯದೆ  ಒಂದು ನಿರ್ಧಾರಕ್ಕೆ ಬಂದ ಆ ಯುವಕರು  ಪ್ರವಾಸ ಮೊಟಕುಗೊಳಿಸಿ, ಮೊದಲು ಹುಬ್ಬಳ್ಳಿಯ ಮದುವೆ ಮನೆಗೆ  ಈ ಬ್ಯಾಗಿನ ಸಮೇತ  ಹೋಗಿ ಇದನ್ನು ಅವರ ಕೈಗಿಟ್ಟು ನಾವುಗಳೂ ಆ ಮದುವೆಯಲ್ಲಿ ಪಾಲ್ಗೊಂಡು ನಂತರ ಬೆಂಗಳೂರು ಕಡೆಗೆ ಹೊರಡುವುದೆಂದು ತೀರ್ಮಾನಕ್ಕೆ ಬಂದರು, ಅಲ್ಲದೇ ಈ ಬ್ಯಾಗಿನ ಬಗ್ಗೆ ಅದೆಷ್ಟು ಚಿಂತಾಕ್ರಾಂತರಾಗಿದ್ದಾರೋ ಮದುವೆ ಮನೆಯವರು ನೆನೆದರೆ ಭಯವಾಗುತ್ತದೆ , ಇನ್ನು ತಡಮಾಡಬಾರದು ಅಂದುಕೊಂಡು ಕೂಡಲೇ ಆ ಹೋಟೆಲಿನವರಿಗೆ ಈ ಪರಿಸ್ಥಿತಿ ವಿವರಿಸಿ ರೂಂ ಖಾಲಿ ಮಾಡಿ ಹುಬ್ಬಳ್ಳಿಯ ಮದುವೆ ಮನೆ ವಿಳಾಸ ಹಿಡಿದು ಹೊರಟು ಸಂಜೆ ವೇಳೆಗೆ ಹುಬ್ಬಳ್ಳಿಯ ಅವರ

 

ಮನೆ ತಲುಪಿದರು . ಇವರು ತಲುಪುವಷ್ಟರಲ್ಲಿ ಆ ಮನೆಯಲ್ಲಿ ಮದುವೆಯ ಸಂಭ್ರಮವೇ ಇಲ್ಲ ಎಲ್ಲರೂ ಆ ಬ್ಯಾಗಿನ ವಿಚಾರವಾಗಿ ಚಿಂತಿತರಾಗಿದ್ದಾರೆ. ಇವರನ್ನು ಮೊದಲು ಆ ವರನ ತಂದೆಯೇ, ಅವರು ಆ ಯುವಕರ ಕೈಲಿದ್ದ ಬ್ಯಾಗನ್ನು ನೋಡಿದ ಕ್ಷಣ ಜೋರಾಗಿ ಖುಷಿಯಾಗಿ ಕೂಗಿಬಿಟ್ಟರು. ಇವರ ಕೂಗಿಗೆ ಮನೆಯೊಳಗಿದ್ದವರೆಲ್ಲರೂ ಹೊರಗೆ ಓಡಿಬಂದರು ಎಲ್ಲರೂ ಆ ಬ್ಯಾಗು, ಯುವಕರನ್ನು ನೋಡಿ ನಿಟ್ಟುಸಿರು ಬಿಟ್ಟರು ಒಬ್ಬೊಬ್ಬರು ಒಂದೊಂದು ಪ್ರಶ್ನೆ ಗಳ ಸುರಿಮಳೆ ಸುರಿಸುತ್ತಿದ್ದಾರೆ, ಆಗ ವರ ಮತ್ತು ಅವನ ತಂದೆ ತಾಯಿ ಆ ಯುವಕರನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಆ ಬ್ಯಾಗಿನ ಬಗ್ಗೆ ವಿಚಾರಿಸತೊಡಗಿದರು. ಯುವಕರು ಬ್ಯಾಗನ್ನು ವರನ  ತಾಯಿಯ ಕೈಗಿತ್ತು ನಡೆದ ವಿಷಯವನ್ನೆಲ್ಲಾ ಹೇಳಿದರು .

ವರನ ಕಡೆಯವರಂತೂ ಈ ಯುವಕರ ಕಾರ್ಯಕ್ಕೆ ಅವರನ್ನು ಬಹಳವಾಗಿ ಕೊಂಡಾಡಿಬಿಟ್ಟರು, ಈ ವಿಷಯ ತಿಳಿದ ಹೆಣ್ಣಿನ ಕಡೆಯವರೂ ಆ ಯುವಕರನ್ನು ಬಹಳ ಪ್ರಶಂಸೆ ಮಾಡಿ, ಧನ್ಯವಾದ ತಿಳಿಸಿ, ನಂತರ ಅವರಿಗೆ ತಿನ್ನಲು ತಿಂಡಿ ಕೊಟ್ಟು ಕೆಲಕಾಲ ವಿಶ್ರಾಂತಿ ಪಡೆಯಲು ಒಂದು ರೂಂ ಬಿಟ್ಟುಕೊಟ್ಟರು.

 

     ಈಗ ಎಲ್ಲಾ ಗೊಂದಲಗಳು ಕಳೆದು ಮದುವೆಯ ಸಮಯ ಬಂದೇಬಿಟ್ಟಿತು ಸಾಂಗವಾಗಿ ಮದುವೆ ನಡೆದು ಆ ಮದುವೆಗೆ ಈ ಯುವಕರೇ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಮದುವೆಯ ನಂತರ  ಮನೆಯವರು ಆ ಯುವಕರಿಗೂ ಚೆಂದದ ಬಟ್ಟೆಗಳನ್ನು , ಉಡುಗೊರೆಯಾಗಿ ಕೊಟ್ಟು ಸನ್ಮಾನಿಸಿ ಆದರದಿಂದ ಬೀಳ್ಕೊಟ್ಟರು.

 

     ಯುವಕರ ಬಗ್ಗೆ ವಿಷಯ ತಿಳಿದ ಪೊಲೀಸರೂ ಸಹ ಈ ಯುವಕರ ಪ್ರಾಮಾಣಿಕತೆಗೆ ಮೆಚ್ಚಿ ಸನ್ಮಾನಿಸಿ, ಪತ್ರಿಕೆಗಳಲ್ಲಿ ಪ್ರಕಟಿಸಿದರು,

ಯುವಕರ ರಜಾದಿನಗಳು ಈರೀತಿ ಶುಭಕಾರ್ಯಕ್ಕೆ ವಿನಿಯೋಗವಾಗಿದ್ದು  ಅವರಲ್ಲೂ ಆತ್ಮ ವಿಶ್ವಾಸ ಹೆಚ್ಚಿ ಮುಂದೆ ಸತ್ಪ್ರಜೆಗಳಾಗಿ ಬಾಳಿದರು.