Click here to Download MyLang App

ಕಾಡು ಹಂದಿ ಮತ್ತು ಸಿದ್ದ : ಮಲ್ಲೇಶ | ಥ್ರಿಲ್ಲರ್ | ಕತೆಯ ಒಳನುಡಿ ಶೈಲಿ - ಮೈಸೂರು-ಮಂಡ್ಯ ಶೈಲಿಯ ಕನ್ನಡ

      ಕಾಡು ಹಂದಿಮೇಲೆ ಸವಾರಿ ಮಾಡಿದ ಸಿದ್ದನ ಕಥೆ.

         ನಮ್ಮದು ಬಯಲು ಸೀಮೆ, ನಮ್ಮೂರ ಹಳ್ಳಿಗಳಲ್ಲಿ ಬಹುತೇಕ ಜನರು ಮಳೆ ಆಶ್ರಿತ ಬೆಳೆಗಳಾದ ಮುಸುಕಿನ ಜೋಳ ಮತ್ತು ರಾಗಿಯನ್ನು ಹೆಚ್ಚಿಗೆ ಬೆಳೆಯುತ್ತಾರೆ. ಈ ಹಿಂದೆ ನಮ್ಮ ತಾತ, ಮುತ್ತಾತಿಂದಿರ ಕಾಲದಿಂದಲೂ ಬೆಜ್ಜಲು ವೆವಸಾಯವಾದ ರಾಗಿ, ಉಚ್ಚೆಳ್ಳು, ಎಳ್ಳು, ತೊಗರಿ, ಉದ್ದು, ಅಲಸಂದೇ, ಸಾಸಿವೆ, ಸಣ್ಣ ಜೋಳ, ನವಣೆ, ಸಾಮ, ಮುಂತಾದ ದವಸ ಧಾನ್ಯಗಳನ್ನು ಪ್ರಧಾನವಾಗಿ ಬೆಳೆಯುತ್ತಿದ್ದರು. ಆದರೆ ಕಾಲ ಕ್ರಮೇಣ ಈ ಬೆಳೆಗಳನ್ನೆಲ್ಲ ಕೈಬಿಟ್ಟು, ಈಗ ರಾಗಿ ಬೆಳೆ ಒಂದನ್ನು ಮಾತ್ರ ಅಲ್ಲಿ ಇಲ್ಲಿ ಎಂಬಂತೆ ಕೆಲವು ಹಳ್ಳಿಗರು ಬೆಳೆಯುತ್ತಾರೆ, ಇದರ ಜೊತೆಗೆ ಪ್ರದಾನ ಬೆಳೆ ಎಂದರೆ ಮುಸುಕಿನ ಜೋಳ ಬೆಳೆಯುವುದು.

ಸುಮಾರು ೨೦ ವರ್ಷಗಳ ಹಿಂದೆ ಈ ಮುಸುಕಿನ ಜೋಳ ಬೆಳೆಯ ಬಗ್ಗೆ ನಮ್ಮ ಹಳ್ಳಿ ಜನರಿಗೆ ಸ್ವಲ್ಪವೂ ಪರಿಚಿಯವಿರಲಿಲ್ಲ. ಇದನ್ನು ಬಡಗು ಸೀಮೆಯಲ್ಲಿ ಅಧಿಕವಾಗಿ ಬೆಳೆಯುತ್ತಿದ್ದರಂತೆ. ಯಾವ ಪುಣ್ಯಾತ್ಮ ನಮ್ಮ ಬಯಲು ಸೀಮೆಗೆ ಪರಿಚಯಿಸಿದನೋ ನಾ ಕಾಣೆ. ಕಾಲ ಕ್ರಮೇಣ ಈಗ ಇದು ನಮ್ಮ ಜನರ ಜೀವಾಸ್ರಿತ ಬೆಳೆಯಾಗಿ ಮಾರ್ಪಾಟಾಗಿದೆ. ನಾವು ಸಹ ನಮ್ಮ ಸ್ವಂತ ಜಮೀನಿನಲ್ಲಿ ಊಟಕ್ಕಾಗುವಸ್ಟು ರಾಗಿಯನ್ನು ಬಾಕಿ ಜಮೀನಿನಲ್ಲಿ ಜೋಳವನ್ನು ಬೆಳೆಯುತ್ತೇವೆ.

          ಈ ಮುಸುಕಿನಜೋಳ ನೀರಾವರಿ ಮತ್ತು ಮಳೆ ಆಶ್ರೀತ ಬೆಳೆಯನ್ನಾಗಿ ಬೆಳೆಯಬಹುದು. ನಮ್ಮೂರು ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಇದನ್ನು ಸಾಧಾರಣ ಮಳೆ ಆಧಾರಿತ ಬೆಳೆಯನ್ನಾಗಿ ಬೆಳೆಯುತ್ತಾರೆ. ಇದು ನಾಲ್ಕು ಅಥವಾ ಐದು ತಿಂಗಳಿಗೆ ಫಲ ಕೊಡುವ ಬೆಳೆ. ಸರಿ ಸುಮಾರು ಮೂರು ತಿಂಗಳಿಗೆ ಹಾಲಕ್ಕಿ ತೆನೆ ಗಿಡದಲ್ಲಿ ಕಚ್ಚುತ್ತದೆ, ಇದನ್ನು ಬೆಂಕಿಯಲ್ಲಿ ಸುಟ್ಟು, ಅಥವಾ ನೀರಿನ ಶಾಖದಲ್ಲಿ ಬೇಯಿಸಿ ತಿನ್ನಲು ಬಲು ರುಚಿ. ಈ ಹಾಲಕ್ಕಿ ಕಟ್ಟುವ ಸಮಯದಲ್ಲಿ ಜೋಳ ಬಿತ್ತನೆ ಮಾಡಿರುವರೆಲ್ಲ ಹೊಲಕ್ಕೆ ರಾತ್ರಿ ಕಾವಲು ಕಾಯಲು ಹೋಗಬೇಕು. ಇಲ್ಲದಿದ್ದಲ್ಲಿ ಒಂದು ತೆನೆ ಸಹ ಬಿಡದಂತೆ ಕಾಡು ಹಂದಿಗಳು ತಿಂದು ಮುಗಿಸಿ ಬಿಡುತ್ತವೆ.

    ನನಗೆ ಸರಿ ಸುಮಾರು ೨೦ ವರ್ಷದವನಾಗಿರುವಾಗಿನಿಂದ ನನ್ನ ಅಣ್ಣನ (ತಂದೆ) ಜೊತೆಯಲ್ಲಿ ಜೋಳದ ಕಾವಲು ಕಾಯಲು ದಿನರಾತ್ರಿ ಹೋಗುತ್ತಿದ್ದುದುಂಟು. ನಾನಾಗ ಬಿ.ಎಸ್ಸಿ ಪದವಿ ಶಿಕ್ಷಣವನ್ನು ಓದುತ್ತಿದ್ದೆ. ನನಗೆ ಸರಿಯಾಗಿ ಈ ಕಾವಲಿನ ಸಮಯಕ್ಕೆ ರಜೆ ಸಿಗುತ್ತಾ ಇತ್ತು. ಪ್ರತಿದಿನಾರಾತ್ರಿ ಅಣ್ಣನ ಜೊತೆ ಜೋಳದ ಕಾವಲಿಗೆ ಹೋಗುವುದೆಂದರೆ ನನಗೆ ತುಂಬಾ ಇಷ್ಟ. ಮನಸಲ್ಲಿ ಏನೋ ರಾತ್ರಿ ಕಾಡು ಮೃಗಗಳಾದ ಹಂದಿ, ಜಿಂಕೆ, ಸಾರಂಗಗಳನ್ನು ಬೇಟೆಯಾಡಲು ಶಿಕಾರಿಗೆ ಹೋದ ಹಾಗೆ ಒಂದು ಭಾವನೆ. ಆದರೆ ವಾಸ್ತವದಲ್ಲಿ ಇವುಗಳನ್ನು ಬೇಟೆಯಾಡುವುದಿರಲ್ಲಿ, ಕಣ್ಣಲ್ಲಿ ನಾನು ನೋಡಿಯೂ ಸಹ ಇರಲಿಲ್ಲ. ರಾತ್ರಿ ಗುಡಿಸಲ ಬಳಿಗೆ ಹೋದಾಗ, ಸುತ್ತಲೂ ಬಯಲಾದ ಪ್ರದೇಶದಿಂದ ತಡೆಯಿಲ್ಲದ ಗಾಳಿ ನಿರಾಯಸವಾಗಿ ನುಸುಳಿ ಬರುವುದು. ಮೈಗೆ ತಾಕುವ ಆ ತಣ್ಣನೆ ಗಾಳಿ ಇತಕರವೆನಿಸಿದರು, ತಡೆಯಿಲ್ಲದೆ ಬೀಸುವ ನಿರಂತರ ಗಾಳಿಯಿಂದ ಮೈ ನಡುಕಗೊಳ್ಳದೆ ಇಲ್ಲ. ಆದ್ದರಿಂದ ಹೋದತಕ್ಷಣ ಗುಡಿಸಲಿನ ಅಕ್ಕಪಕ್ಕದಲ್ಲಿ ಸಿಕ್ಕುವ ಹೊಣ ಕಡ್ಡಿ, ಮರದ ಕೊಂಟುಗಳನ್ನು ಒಟ್ಟು ಗೂಡಿಸಿ, ಬಿಂಕಿ ಹಚ್ಚಿ ಅದರ ಮುಂದೆ ಕುಳಿತು ಮೈ ಬಿಸಿ ಮಾಡಿ ಕೊಳ್ಳುವುದುಂಟು. ಅನಂತರ ಚೆನ್ನಾಗಿ ಮಲಗಿ ನಿದ್ರೆಮಾಡಿ ಬಿಡುವುದು ದಿನದ ವಾಡಿಕೆ.

        ಮತ್ತೆ ಪ್ರತಿ ದಿನ ಬೆಳಗ್ಗೆ ಎದ್ದಾಗ ಹಂದಿ ಬಂದಿದ್ವ ಅಂತ ನನ್ನ ಅಣ್ಣನನ್ನು ಚಾಚು ತಪ್ಪದೆ ಕೇಳುತ್ತಿದ್ದುದ್ದು ಉಂಟು. ಅದಕ್ಕೆ  "ಹೌದು ಬೆಳಿಗ್ಗಿನ್ ಮೂರ್ ಗಂಟೆಯಂಗ್ ಬಂದಿದ್ವು, ರಾತ್ರಿ ಶಿಳ್ಳೆ ಹಾಕಿ ಓಡಿಸ್ಲಿಲ್ಲ ಅಂತಂದಿದ್ರೆ ರಾತ್ರಿ ಪೂರ್ತಿ ಜೋಳನೆಲ್ಲ ತಿಂದಾಕ್ಬಿಡ್ತಿದ್ವು, ಬೇಕಾರೇ ನೋಡು, ಗುಳ್ಳಿನ್ ಮುಂದೇನೆ ಹೆಂಗೆ ನಡ್ಕೊಂಡ್ ಹೋಗವೆ, ಸುಮಾರು ಒಂದು ಹತ್ತಿಪ್ಪತ್ ಕಾಲ್ನಡ ಇದ್ದಿರ್ಬೇಕು" ಎಂದು, ಹಂದಿಗಳ ಹೆಜ್ಜೆ ಗುರುತುಗಳನ್ನು, ಅಲ್ಲಲ್ಲಿ ಅವು ಮೂತಿಯಿಂದ ಭೂಮಿಯನ್ನು ಅಗೆದು ಕೋರೆ ಹಲ್ಲಿನಿಂದ ಭೂಮಿಯನ್ನು ಉಳುಮೆ ಮಾಡಿದ ಹಾಗೆ ಗುರುತಿರುವ ಗುಂಡಿಗಳನ್ನು ಅಣ್ಣ ನನಗೆ ತೋರಿಸುತ್ತಿದ್ದರು.
      ನಾನು ಇಷ್ಟು ಗಟ್ಟಿ ಇರುವ ಭೂಮಿಯನ್ನು ಹೇಗೆ ತಮ್ಮ ಮೂತಿಯಿಂದ ತಿವಿದು ಇಷ್ಟು ದೊಡ್ಡ ಗುಂಡಿ ಮಾಡಲು ಸಾಧ್ಯ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದೆ. ಇದರಿಂದ ಕಾಡು ಹಂದಿಯನ್ನು ನೋಡುವ ನನ್ನ ಕುತೂಹಲ ಮತ್ತೂ ಹೆಚ್ಚಿತು. "ಹಂದಿಗಳು ಬಂದ್ರೆ  ನನ್ನನು ಎಬ್ಬಿರ್ಸ್ಬೇಕು ಅಂತ ಹೇಳಿರ್ಲಿಲ್ವಾ" ಅಂತ ಬಲು ನಿರಾಶೆಯಿಂದ ಕೇಳಿದೆ. ಅದಕ್ಕೆ ಅಣ್ಣ "ನೀನು ಚೆನ್ನಾಗಿ ಮಲಗಿ ನಿದ್ರೆ ಮಾಡ್ತಿದ್ದೆ, ನಂಗೆ ಹಂದಿ ಓಡ್ಸೋ ಗಾಬ್ರಿಲಿ ಮರ್ತೆ ಹೋಯ್ತು" ಅಂತ ದಿನ ಇಂತಹ ಕಾರಣಗಳನ್ನು ಕೊಟ್ಟು ನನ್ನ ಬಾಯಿ ಮುಚ್ಚಿಸುತ್ತಿದ್ದರು. ಅಲ್ಲಿಗೆ ನಾನು ಹಂದಿಯನ್ನು ಬೇಟೆಯಾಡುವುದಿರಲಿ, ಕೊನೆ ಪಕ್ಷ ಕಣ್ಣಾರೆ ನೋಡುವ ಕನಸು ಕನಸಾಗೆ ಉಳಿದಿತ್ತು. ನಾನು ಬೀದಿ ಮತ್ತು ಬಚ್ಚಲು ಬದಿಯಲ್ಲಿ ಅಡ್ಡಾಡುವ ಊರ ಹಂದಿಯನ್ನು ನೋಡಿದ್ದೆನೆ ವಿನಹ ಕಾಡುಹಂದಿಯನ್ನು ಅಲ್ಲಿಯವರೆಗೆ ನೋಡಿರಲಿಲ್ಲ.

             ನಮ್ಮ ಹೊಲದ ಸುತ್ತಮುತ್ತಲ ಹೊಲವೆಲ್ಲ ಬಹುತೇಕ ಹರಿಜನರವರದ್ದಾಗಿದ್ದು, ಸಿದ್ದ, ಬೆಳ್ಳ, ಸುಬ್ಬ ಎಂಬುವರು ಕಾವಲು ಕಾಯಲು ಬರುತ್ತಿದ್ದರು. ನಮ್ಮ ಹೊಲದ ಪಕ್ಕದಲ್ಲಿ ಒಬ್ಬ ಸಾಬಿದು 2 ಎಕರೆ ಜಮೀನ್ ಇತ್ತು, ಅವನು ಸಹ ನಮ್ಮಂತೆಯೇ ಜೋಳ ಬಿತ್ತನೆ ಮಾಡಿದ್ದ, ಆದರೆ ಜೋಳ ಬಿತ್ತನೆ ಮಾಡಿದ್ದೆ ಕೊನೆ, ಒಂದು ದಿನ ಸಹ ಕಾವಲು ಕಾಯಲು ಬರಲಿಲ್ಲ. ಈ ಸಿದ್ದ, ಬೆಳ್ಳ, ಸುಬ್ಬ ಪ್ರತಿದಿನ ಗುಡಿಸಲಿಗೆ ಹೋಗುವ ಮುನ್ನ ನಮ್ಮ ಗುಡಿಸಲಿಗೆ ಬಂದು, ಬೆಂಕಿಯ ಮುಂದೆ ಸ್ವಲ್ಪ ಹೊತ್ತು ಕುಳಿತು ಹರಟೆ ಹೊಡೆದು ಹೋಗುತ್ತಿದ್ದುದ್ದು ಅವರ ಪ್ರತಿದಿನದ ಚೆಟುವಟಿಕೆಯಲ್ಲಿ ಒಂದಾಗಿತ್ತು.

        ಅವರು ಈಗೆ ಒಂದು ದಿನ ರಾತ್ರಿ ಮಾತನಾಡುವಾಗ,  ಸುಬ್ಬ ನನ್ನ ಅಣ್ಣನೊಂದಿಗೆ "ಬುದ್ದಿ ; ರಾತ್ರಿ ಬಂದ ಕಾಡ್ ಹಂದಿಗೆ ಕೋರೆಹಲ್ಲು ಯಾಪ್ಪಟಿ ಇತ್ತು ಗೊತ್ತಾ, ಅದು ಒಂದ್ ಸರ್ತಿ ಅದ್ರ ಕೋರೆ ಹಲ್ಲಿನ್ ಮೂತಿಲಿ ತಿವಿತೂಂದ್ರೆ ಜೋಳದ್ ಗಿಡ ಎಲ್ಲ ಬುಡ ಮೇಲ್ ಅಗೋಯ್ತದೆ. ಅದೆ ದಿನಾ ಬರೋ ಹಂದಿ ಹಿಂಡ್ಗೆ ಯಜ್ಮಾನಾ ಇರ್ಬೇಕು. ದಿನಾ ಆ ಹಂದಿನೇ ಬಾಕಿ ಹಂದಿಗೊಳ್ನೆಲ್ಲ ನಮ್ಮೊಲಕ್ಕೆ ಕರ್ಕೊಂಡು ಬರೋದು; ಬಡ್ಡಿ ಮಗಂದು" ಎಂದು ಆ ಗಡವ ಹಂದಿಗೆ ಬೈದ. ಇದನ್ನು ಕೇಳಿಸಿಕೊಂಡ ನನಗೆ, ಕಾಡು ಹಂದಿಯನ್ನು ನೋಡುವ ಆಶೆ, ಕುತೂಹಲ ಮತ್ತಷ್ಟು ಹೆಚ್ಚಿತು. ಈ ಜೋಳದ ಕಾವಲು ಮುಗಿಯುವುದರೊಳಗೆ, ಸಿದ್ದ ಹೇಳಿದ ಆ ದೈತ್ಯಾಕಾರದ ಕಾಡುಹಂದಿಯನ್ನು ಒಮ್ಮೆಯಾದರೂ ನೋಡಿಬಿಡಬೇಕೆಂದು ನಿಶ್ಚಯಿಸಿದೆ.

        ಮರುದಿನ ಬೆಳಿಗ್ಗೆ ಎದ್ದು ಊರಿಗೆ ಹೋದಾಗ, ಬುಳ್ಳ, ಕಾಡುಹಂದಿಗೆ ಮಾಂಸದ ಸಿಡಿಮದ್ದು ಇಟ್ಟು ಕೊಂದಿದ್ದಾನೆಂದು, ಆ ಕಾಡು ಹಂದಿ ಹಲವಾರು ಜೋಳದ ಹೊಲವನ್ನೆಲ್ಲ ನಾಶಮಾಡಿತ್ತೆಂದು, ಇನ್ನು ಅದರ ಕಾಟ ತಪ್ಪಿತೆಂದು ನಾಲ್ಕಾರು ಜನ ಊರ ಚಾವಡಿಯಲ್ಲಿ ಮಾತನಾಡುತಿದ್ದುದು ನನ್ನ ಕಿವಿಗೆ ಬಿತ್ತು. ಈ ಬುಳ್ಳ ಎನ್ನುವವನು ಮೂಲತಃ ತಮಿಳಿನವನು, ಇವನು ಮತ್ತು ಇವನ ಪಂಗಡದವರು ಕೀಳುಸೀಮೆಯಿಂದ ಹೊಲಸೆ ಬಂದು ಬಹುಕಾಲದಿಂದಲು ನಮ್ಮ ಊರಲ್ಲೇ ನೆಲೆಸಿದ್ದರು.

      ಇವನ ಜಾತಿಯವರೆಲ್ಲರು ಕ್ರೈಸ್ತ ಧರ್ಮಕ್ಕೆ ಹಲವಾರು ವರ್ಷಗಳ ಹಿಂದೆ ಮತಾಂತರ ಗೊಂಡಿದ್ದರು. ಕೀಳುಜಾತಿ ಎಂಬ ಕಳಂಕ್ಕವನ್ನು ಹೊತ್ತುಕೊಂಡು ಬದುಕುವ ಬದಲು, ಕ್ರೈಸ್ತ ಮತದವನು ಎಂದೇಳಿಕೊಳ್ಳುವುದು ಎಷ್ಟೋ ಮೇಲು ಎಂಬುದು ಇವರ ಅಭಿಪ್ರಾಯ. ವಾಸ್ತವದಲ್ಲಿ ಇವರ ಚಿಂತನೆಯು ಸರಿಯೆ. ಮೇಲು ಕೀಳೆಂಬ ಜಾತಿ ಭೇದಗಳನ್ನು ಮಾಡಿ, ಮನುಷ್ಯ ಮನುಷ್ಯನನ್ನೆ ಕೀಳಾಗಿ ನೋಡುವ ಹೀನ ಬದುಕನ್ನು ಬದುಕದಿದ್ದಲಿ, ಇಂದು ಅನೇಕ ಹರಿಜನರು ಯಾವುದೇ ಕಾರಣಕ್ಕೂ ಮತಾಂತರಗೊಳ್ಳುತ್ತಿರಲಿಲ್ಲ.

    ನನ್ನ ಪ್ರಕಾರ ಈ ಜಾತಿ, ಭೇದ ಭಾವಗಳನ್ನ ಮೊದಮೊದಲು ಚಾಲ್ತಿಗೆ ತಂದವನು, ನಾಯಿ ನರಿಗಳಿಗಿಂತ ಕೀಳು. ಅಂದಹಾಗೆ  ನಾವು ಜಾತಿ, ಮತಗಳನ್ನು ಕಟ್ಟಿಕೊಂಡು ಏನು ತಾನೇ ಸಾಧಿಸಿದೆವು. ಯಾರಿಗೆ ತಾನೇ ಪ್ರಯೋಜನ. ಈ ಅನಿಷ್ಟ ಜಾತಿ, ಮತಗಳಿಂದ ಪ್ರಪಂಚದಲ್ಲಿ ಎಷ್ಟೋ ಜನರ ಬದುಕು ಸರ್ವನಾಶ ಆಗಿ ಹೋಗಿದೆ. ಪ್ರೀತಿಸಿದ ಎಷ್ಟೋ ಪ್ರೇಮಿಗಳು ಆತ್ಮಹತ್ಯೆಕ್ಕೆ ತುತ್ತಾಗಿದ್ದಾರೆ. ಮಹಾಕವಿ ಕುವೆಂಪು ಹೇಳಿದ್ದಾರೆ "ಜಾತಿ ಮತಗಳು ಬೇಕೆನ್ನುವವನು, ಅವನು ಎಂತಹ ದೊಡ್ಡ ಸಾಹಿತಿಯೇ ಆಗಿರಲಿ, ಅವನಿಗೆ ಧಿಕ್ಕಾರ" ಅವರಂತೆಯೇ ನಾವು ಸಹಾ ಈ ನೀಚ ಜನಗಳಿಗೆ ದಿಕ್ಕಾರವನ್ನು ಹಾಕಬೇಕಾದ ಕಾಲ ಎಂದೋ ಜಾರಿ ಹೋಗಿದೆ. ಇನ್ನಾದರೂ ಹೆಚ್ಚೆತ್ತುಕೊಂಡು ಯುವಜನರು ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ಕೈಬಿಡಬೇಕು.
   
   ಬುಳ್ಳ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು, ಅವನ ಕುಲಕಸುಬಾದ ಮೀನು ಹಿಡಿಯುವುದು, ಕಾಡುಕೋಳಿ, ಕಾಡುಹಂದಿ, ಕಾಡುಮೊಲ ಮುಂತಾದವುಗಳನ್ನು ಬೇಟೆ ಆಡುವುದನ್ನು ತನ್ನ ಪೂರ್ವಿಕರ ಕಾಲದಿಂದಲೂ ಮುಂದುವರೆಸಿಕೊಂಡು ಬಂದಿದ್ದನು. ಬೇಟೆ ಆಡುವುದೆಂದರೆ, ಇವನೇನೋ ಈ ಮೃಗಗಳನ್ನು ಈಟಿ, ಕೋವಿಗಳಿಂದ ಹೊಡೆದು ಬೇಟೆಯಾಡುತ್ತಿರಲಿಲ್ಲ. ಹಾಗೆ ಬೇಟೆಯಾಡಲು ಇವನೇನೂ ತರುಣನು ಅಲ್ಲ. ಸರಿ ಸುಮಾರು 70 ವರ್ಷದ ಹಣ್ಣು ಮುದುಕನಾಗಿದ್ದನು. ಅದ್ದರಿಂದ, ಇವನು ಈ ಕಾಡು ಮೃಗಗಳನ್ನು ಸುಲಭದಲ್ಲಿ ಬೇಟೆಯಾಡಲು ಹಲವಾರು ತಂತ್ರಗಳನ್ನು ಕರಗತ ಮಾಡಿಕೊಂಡಿದ್ದನು. ಕಾಡು ಕೋಳಿ ಮತ್ತು ಮೊಲಗಳನ್ನು ಬಲೆ ಕಟ್ಟಿ ಹಿಡಿಯುತ್ತಿದ್ದನು. ತಾನೇ ತಯಾರಿಸಿದ ಸಿಡಿಮದ್ದನ್ನು ಮಾಂಸದ ಒಳಗಿಟ್ಟು, ಹಂದಿಗಳು ಹೊಡಾಡುವ ಜಾಗದಲ್ಲಿ ಅದನ್ನು ಇಡುತ್ತಿದ್ದನು. ಹಂದಿಗಳು ಅದನ್ನು ಮಾಂಸದ ತುಂಡೆಂದು ತಿಳಿದು, ಬಲವಾಗಿ ಕಡಿಯುವಾಗ, ಒಳಗಿರುವ ಮದ್ದು ಸಿಡಿದು, ಹಂದಿ ಬಾಯಿ ದವಡೆಯು ಸೀಳಿ ಬಿಟ್ಟ ಕಲ್ಲಂಗಡಿ ಹಣ್ಣಿನಂತೆ ಸಿಗಿದುಕೊಂಡು, ರಕ್ತ ಸ್ರಾವವಾಗಿ ಸಾಯುತ್ತಿದ್ದವು. ಅದನ್ನು ತಂದು, ಉಪ್ಪು ಕಾರ ಸವರಿ, ತನ್ನ ಜನರೆಲ್ಲರಿಗೂ ಕೊಟ್ಟು ತಾನು ಬೇಯಿಸಿ ಒಂದು ವಾರದ ತನಕ ಹಂದಿ ಮಾಂಸವನ್ನು ಸೇಕರಿಸಿಟ್ಟು, ಎಣ್ಣೆ ಮಜ್ಜನದ ಜೊತೆಗೆ ದಿನವೂ ಇಂತಿಸ್ಟಂತೆ ತಿಂದು ಬೋಗಿಸುತ್ತಿದ್ದನು.

         ಬುಳ್ಳನಿಗೆ ಹಂದಿ ಮಾಂಸವೆಂದರೆ ಪಂಚಪ್ರಾಣ. ಅದಕ್ಕಾಗಿಯೇ ಹಲವಾರು ಬಾರಿ ನಮ್ಮ ಮನೆಗೆ ಬಂದು "ಬುದ್ದಿ;  ನಿಮ್ಮ ಜೋಳದ ತೋಟದಾಗ ದಿನಾ ರಾತ್ರಿ ಹಂದಿಗಳು ಬರ್ತಾವಂತೆ, ನಾನು ಸಿಡಿಮದ್ನ ಅಲ್ಲಿ ಮಡಗಿದ್ರೆ ಕಂಡಿತ ಅದನ್ನ ಕಚ್ಚಿ ಸಾಯ್ತವೆ, ನಿಮ್ಗೂ ಹಂದಿ ಕಾಟ ತಪ್ಪುತ್ತೆ?" ಎಂದು ನನ್ನ ತಂದೆಯ ಅತ್ತಿರ ಕೇಳುತ್ತಿದ್ದನು.

         "ನೀನು ಸಿಡಿಮದ್ ಮಡ್ಗಿ ಯಾರ್ ಮನೆ ಹಾಳ್ಮಾಡ್ಬೇಕು ಅಂದ್ಕೊಂಡಿದ್ಯಾ?, ನೀನ್ ಮಡ್ಗೋ ಸಿಡಿಮದ್ನ ನಾವೇನರ ಕಾಲ್ನಲ್ಲಿ ತುಳ್ದು ಸತ್ರೆ, ಅತ್ವ ರಾತ್ರಿ ಜೋಳ ತಿನ್ನಕೆ ಹಂದಿ ಮಾತ್ರ ಅಲ್ಲ, ಆನೆಗಳು ಬರ್ತಾವೆ, ಅವೇನಾರ ಕಾಲಲ್ಲಿ ತುಳ್ದು, ಈ ಮದ್ದ್ ಸಿಡ್ದು ಸತ್ರೆ, ಫಾರೆಸ್ಟ್ ಡಿಪಾರ್ಟ್ಮೆಂಟ್ನೋರು ನಮ್ನ ಸುಮ್ಗೆ ಬಿಟ್ಟಾರ, ಹೋಗಿ ಎಲ್ಲರಾ ಹಳ್ಳ, ಗಿಳ್ಳದ್ ಕಡೆ ಮಡ್ಗು ಹೋಗು!" ಎಂದು ನಮ್ಮ ತಂದೆ ಅವನಿಗೆ ಬೈದರು. ನಮ್ಮ ತಂದೆ ಮಾತ್ರವಲ್ಲ, ಊರಿನ ಎಲ್ಲ ಜನರ ಅತ್ರಾನು ಬುಳ್ಳ ತನ್ನ ಸಿಡಿಮದ್ದನ್ನ ಇಡೋದಕ್ಕೆ ಜಾಗ ಕೇಳಿದ್ದಾ. ಎಲ್ಲರ ಉತ್ತರವು ನಮ್ಮ ತಂದೆ ಹೇಳಿದ ಹಾಗೆ ಇತ್ತು.

         ಈಗೆ, ಬುಳ್ಳ ಎಲ್ಲರ ಅತ್ತಿರ ಕೇಳಿ, ಸಾಕಾಗಿ ಯಾರು ತಮ್ಮ ಹೊಲದಲ್ಲಿ ಮದ್ದನಿಡಲು ಒಪ್ಪದ ಕಾರಣ, ಕೊನೆಗೆ ಹಳ್ಳದ ಕಡೆಯಲ್ಲೇ ಸಿಡಿಮದ್ದನು ಇಟ್ಟಿದ್ದ. ಕಾಡಿನಿಂದ ರಾತ್ರಿ ಜೋಳದ ಹೊಲಕ್ಕೆ ಹಂದಿಗಳು ಹಳ್ಳ ದಾಟಿ ಬರುವಾಗ, ಒಂದು ದುರದೃಷ್ಟ ಹಂದಿ ಈ ಸಿಡಿಮದ್ದನ್ನು ಕಂಡು, ಮಾಂಸದ ತುಂಡೆಂದು ಭಾವಿಸಿ ಬಲವಾಗಿ ಕಚ್ಚಿತಿನ್ನಲು ಹೋಗಿ 'ಡಮಾರ್' ಎಂದು ಸಿಡಿದು, ಹಂದಿ ಸ್ಥಳದಲ್ಲೇ ವಿಲ ವಿಲ ಹೊದ್ದಾಡಿ ಪ್ರಾಣಬಿಟ್ಟಿತು. ಎಲ್ಲರೂ ಸಿಡಿಮದ್ದು ತಿಂದು ಸತ್ತ ಹಂದಿಯನು ನೋಡಲು ಹೊರಟರು. ದೊಡ್ಡ ಕೋರೆ ಹಲ್ಲಿರುವ ಕಾಡು ಹಂದಿಯನ್ನು ನೋಡಬೇಕೆಂಬ ಬಯಕೆ ಮತ್ತು ಕುತೂಹಲ ಇಂದು ನೆರೆವೆರಿತು ಎಂದು ಭಾವಿಸಿ ನಾನು ಸಹ ಹಂದಿಯನ್ನು ನೋಡಲು ಹಳ್ಳದ ಕಡೆಗೆ ಹೊರಟೆ. ಎಲ್ಲರೂ ಹಂದಿ ಸತ್ತು ಬಿದ್ದ ಜಾಗದಲ್ಲಿ ಸುತ್ತಲೂ ನಿಂತು ನೋಡುತ್ತಿದ್ದರು. ನಾನು ಸ್ವಲ್ಪ ಜನರನ್ನು ಸರಿಸಿ ಒಳಗೆ ಒಕ್ಕೂ ನೋಡಿದಾಗ ನನಗೆ ಕಾಡು ಹಂದಿಯನ್ನು ನೋಡುವ ಕುತೂಹಲ ಹೋಗಿ, ಬಹಳ ಬೇಸರವಾಯಿತು. ಸಿಡಿಮದ್ದನ್ನು ತಿಂದು ಸತ್ತಿದು ಏನೋ ಕಾಡು ಹಂದಿಯೇ, ಆದರೆ ಸಿಡಿಮದ್ದನು ಹಂದಿ ಬಲವಾಗಿ ಕಡಿದಿದ್ದರ ಪರಿಣಾಮ, ಅದರ ಮೂತಿ ವಿಚಿತ್ರವಾಗಿ, ಛಿದ್ರ ಛಿದ್ರವಾಗಿ ಸೀಳಿಹೋಗಿತ್ತು. ಅದರ ದೇಹ ಮತ್ತು ಕಾಲುಗಳನ್ನು ನೋಡಿ ಇದು ಕಾಡುಹಂದಿ ಎಂದು ಗುರುತು ಇಡಿಯಬಹುದಿತ್ತೆ ಹೊರತು, ಅದರ ಮುಖವನ್ನು ನೋಡಿ ಗುರುತಿಸಲಾಗದಷ್ಟು, ಅದರ ಮೂತಿ ಕರ್ಬುಜದ ಹಣ್ಣನ್ನು ಜಜ್ಜಿದ ಹಾಗೆ ಕೆಂಪಗೆ ಛಿದ್ರ ಛಿದ್ರವಾಗಿ, ರಕ್ತ ಸ್ರಾವಗಟ್ಟಿ ಸತ್ತು ಮಲಗಿತ್ತು. ಅಲ್ಲಿಗೆ ದೊಡ್ಡ ಕೋರೆ ಹಲ್ಲಿರುವ ಕಾಡು ಹಂದಿಯನ್ನು ನೋಡುವ ನನ್ನ ಬಯಕೆ ಕನಸಾಗಿಯೇ ಉಳಿಯಿತು.

                   ಬುಳ್ಳ ಹಂದಿ ಸತ್ತ ಜಾಗಕ್ಕೆ ಬಂದವನೇ, ನೋಡುತ್ತಿದ್ದವರೆಲ್ಲರನ್ನು ಸರಿಸಿ, "ಹಂದಿಗೆ ಮದ್ದು ಇಡಕ್ಕೆ ಜ್ಯಾಗಾ ಕೊಡಿ ಅಂದ್ರೆ ಒಬ್ರು 'ಪಿಟಿಕ್ ಪಟಕ್' ಅನ್ಲಿಲ್ಲಾ, ಈಗ ಮಾತ್ರ ಹಂದಿ ನೋಡೋಕ್ಕೆ ಬಂದ್ಬಿಟ್ರು ದೊಡ್ದಾಗಿ, ನಾವೆನ್ ಇವ್ರ ಹೊಲಾನ ಕ್ರಯಕ್ಕೆ ಬರ್ಕೋಡಿ ಅಂತ ಕೇಳಿದ್ವ, ಏನೋ ಮದ್ದಿಡಕೆ ಜಾಗ ಕೇಳಿದ್ರೆ ಆಗಲ್ಲ ಅಂತ ಬೈದು ಕಳ್ಸಿ, ಇವಾಗ ಮಾತ್ರ ನಾನ್ ಮದ್ದಿಟ್ಟು ಕೊಂದ ಹಂದಿನಾ ನೋಡೋಕ್ ಬಂದವ್ರೆ, ಇವ್ಕ್ ಮಾಡಕ್ ಇನ್ನೇನ್ ಕೆಲ್ಸ " ಎಂದು ಒಳಗೊಳಗೆ ಗೊಣಗುತ್ತ, ಹಂದಿ ನೋಡಲಿಕ್ಕೆ ಬಂದದ್ದೇ ದೊಡ್ಡ ಅಪರಾಧವೆನ್ನುವಂತೆ, ತನ್ನ ಅಸಮದಾನವನ್ನ ವ್ಯಕ್ತಪಡಿಸುತ್ತ, ಸತ್ತ ಕಾಡು ಹಂದಿಯನ್ನು, ತನ್ನ ಜೊತೆ ಹಂದಿ ಹೊರಲು ಬಂದಿದ್ದ ಜನರಿಗೆ ಹೊತ್ತುಕೊಳ್ಳಲು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದ.

           ಎಂದಿನಂತೆ ರಾತ್ರಿ ಜೋಳದ ಕಾವಲಿಗೆ ಹೊರಟಾಗ, ಆ ದಿನ ಸ್ವಲ್ಪ ತುಂತುರು ಮಳೆ ಬೀಳುತ್ತಲಿತ್ತು. ನಾನು ಮತ್ತು ನನ್ನ ತಂದೆ ಇಬ್ಬರು ಕಾಲು ದಾರಿಯಲ್ಲಿ ನಡೆದು, ಗುಡಿಸಲು ಸೇರಿದೆವು. ದಿನಾಲು ನಮಗಿಂತ ಮೊದಲೇ ಬಂದು ಗುಡಿಸಲ ಅತ್ತಿರ ಬೆಂಕಿ ಹಚ್ಚುತ್ತಿದ್ದ ಸಿದ್ದ, ಬೆಳ್ಳ, ಸುಬ್ಬ ಇವರಾರು ಆ ದಿನ ಬಂದಿರಲಿಲ್ಲ. ನಾನು ಮತ್ತು ಅಣ್ಣ ಇಬ್ಬರೇ ಅಕ್ಕಪಕ್ಕದಲ್ಲಿ ಇದ್ದ ಹೊಣಗಲು ಕಡ್ಡಿ, ಮರದ ಕೊಂಬೆಯನ್ನು ತಂದು ಬೆಂಕಿ ಹಚ್ಚಲಿಕ್ಕೆ ತಯಾರಿ ಮಾಡಿದ್ವಿ. ಸಣ್ಣಗೆ ಪಿರಿ ಪಿರಿ ಮಳೆ ಬರುತಿದ್ದರಿಂದ, ಸೌದೆ ಎಲ್ಲ ಮಳೆನೀರಲ್ಲಿ ನೆನೆದು, ಬೆಂಕಿ ಹೊತ್ತಲು, ತುಂಬಾ ಸಮಯವೇ ಹಿಡಿಯಿತು. ಗುಡಿಸಲಿನ ತೆಂಗಿನ ಗರಿಗಳನ್ನು ಮಂದವಾಗಿ ಹಚ್ಚಿಲ್ಲದ ಕಾರಣ ಸಣ್ಣ ಸಣ್ಣ ರಂಧ್ರಗಳ ಮೂಲಕ ಮಳೆ ನೀರು ಬಟ್ಟಿ ಇಳಿಸುವಿಕೆಯಂತೆ ಗುಡಿಸಲಿನೊಳಗೆ ಚೊಟ್ಟಿಕ್ಕುತಿತ್ತು. ದೀಪಾವಳಿ ಚಳಿಗೂ, ಪಿರಿ ಪಿರಿ ಮಳೆಗೂ ಮತ್ತು ಬೆಚ್ಚಗಿನ ಬೆಂಕಿಗೂ ಮೈಯನ್ನು ಹೊಡ್ಡಿದಾಗ ತುಂಬಾ ಹಿತವೆನಿಸುತಿತ್ತು. ಸ್ವಲ್ಪ ಸಮಯದ ನಂತರ ಸಿದ್ದ, ಬೆಳ್ಳ, ಸುಬ್ಬ ಮೂವರು ನಮ್ಮ ಗುಡಿಸಲಿನ ಕಡೆಗೆ ಬಂದರು.

         "ಯಾಕೋ ಇಷ್ಟೋತ್ತು?, ನಾನೆಲ್ಲೊ ಇವತ್ತು ನೀವು ಕೈ ಕೊಟ್ಟು, ನಾನೊಬ್ಬನೇ ಕಾವಲು ಕಾಯಲಿ ಅಂತ ತೀರ್ಮಾನಿಸಿದ್ರಿ ಅಂತ ಅನ್ಕೊಂಡಿದ್ದೆ " ಎಂದು ನನ್ನ ತಂದೆ, ಬರುತ್ತಿದ್ದ ಅವರೆಲ್ಲರನ್ನು ನೋಡಿ ಕೇಳಿದರು.

           ಅದಕ್ಕೆ ಸುಬ್ಬ"ಇಲ್ಲಾ ಬುದ್ದಿ, ಇವತ್ತು ನಮ್ಮೊರೆಲ್ರು ಸೇರಿ ಕಂಡಾಯ ಪೂಜೆ ಮಾಡಿ, ಹಬ್ಬ ಮಾಡಿದ್ರು, ಕಡೆ ಅಮಾವಾಸ್ಯೆ ಅಲ್ವಾ ಅದುಕ್ಕೆ, ಪೂಜೆ ಮುಗ್ಸಿ, ಊಟ ಮಾಡ್ ಬರೋವೊತ್ಗೆ ಇಷ್ಟೋತ್ತಾಯ್ತು ನೋಡಿ" ಎಂದನು.

                ಮೂರು ಜನ ಬೆಂಕಿಹಚ್ಚಿದ ಕಡೆ ಕೈ ಬಿಸಿ ಮಾಡುತ್ತ ಕುಳಿತರು. "ಅಲ್ಲಕಾ ಗೌಡ್ರೆ, ನಾವ್ ದಿನಾ ರಾತ್ರಿ ಕಣ್ಣಿಗ್ ಎಣ್ಣೆ ಬಿಟ್ಕೊಂಡ್ ಕಾವಲ್ ಕಾದ್ರು, ಹಂದಿಗಳು ನಮ್ ಕಣ್ಣ್ ತಪ್ಸಿ ಜೋಳನೆಲ್ಲ ತಿಂದಾಕ್ತವಲ್ಲ, ಆ ಪಕ್ಕದ್ ಹೊಲ್ದ ಸಾಬಿ ಜೋಳ ಬಿತ್ತಿದ್ ತವಿಂದ ಒಂದ್ ದಿನಾನು ಕಾವುಲ್ಗೆಂತ ಬರ್ಲಿಲ್ಲ, ಆದ್ರೂ ಬಡ್ಡಿ ಮಗನ್ ಹಂದಿ, ನಮ್ ಹೊಲ್ಕೆ ಬಂದು ಜೋಳನೆಲ್ಲ ಮೆಯ್ಕಂಡ್ ಹೋಗ್ತದ ಹೊರ್ತು, ಅವನ್ ಹೊಲನ ಒಂದ್ ದಿನಾನು ಹೊಕ್ಕಿದ್ ಕಂಡಿಲ್ಲ, ಏನೋ ಆ ಸಾಬಿ, ಹಂದಿ ಬರ್ದಿರೋ ಹಾಗೆ 'ಮಾಟ್ಲಾ ಗೀಟ್ಲಾ' ಮಾಡ್ಸಿರ್ಬೇಕು ಅಂತಿನಿ!" ಎಂದು ತನ್ನ ನಿರುತ್ಸಾಹವನ್ನು ವ್ಯಕ್ತಪಡಿಸಿದನು.

         ಅದಕ್ಕೆ ಪ್ರತಿಯಾಗಿ ಸುಬ್ಬ, " ಹೇಯ್ 'ಮಾಟ್ಲಾ ಗೀಟ್ಲಾ'  ಏನು ಇಲ್ಲಾ, ನಮ್ ಲಿಂಗಾಯತ್ರು ಹಸುನಾ ಗೋಮಾತೆ, ಎತ್ನ ಬಸವಣ್ಣ ಅಂತ ಪೂಜೆ ಮಾಡಲ್ವಾ, ಹಾಗೆ ಈ ಸಾಬ್ರುಗೊಳು ಹಂದಿನ ದೇವ್ರು ಅಂತ ಪೂಜೆ ಮಾಡ್ತಾರೆ. ಅದುಕ್ಕೆ ಈ ಹಂದಿಗೊಳು ಸಾಬ್ರು ಹೊಲ್ಕೆ, ಜೋಳ ಮೆಯಕ್ ಹೋಗೋದಿಲ್ಲ" ಎಂದು ತಾನು ಹೆಚ್ಚು ತಿಳಿದವನಂತೆ ಹೇಳಿದಾ.

          ಅದಕ್ಕೆ ಬೆಳ್ಳನು " ಹೊ! ಅಂಗೆ ಸಮಾಚಾರ, ಅಂಗಾರೆ ನಾವು ಸಾಬ್ರಾಗ್ ಹುಟ್ಟಿದಿದ್ರೆ, ಹಾಳಾದ್  ಈ ರಾತ್ರಿಲಿ ಸೊಳ್ಳೆ, ತಿಗಣೆ ಕೈಯಲ್ಲಿ ಕಚ್ಚಿಸ್ಕೊಂಡು ಕಾವಲ್ ಕಾಯೋದು ತಪ್ತಿತ್ತು" ಎಂದು ನಿಟ್ಟುಸಿರು ಬಿಡುತ್ತಾ ಹೇಳಿದನು.

            ಇದನ್ನು ಕುತೂಹಲದಿಂದ ಕೇಳುತ್ತಿದ್ದ ನನಗೆ, ಸುಬ್ಬನ ಮಾತು ಕೇಳಿ ನಗು ಬಂದಿತು. ಇವರು ತಿಳಿದಿರುವ ಹಾಗೆ, ವಾಸ್ತವದಲ್ಲಿ ನಡೆಯಬೇಕಾದರೆ ಕಾಡು ಹಂದಿಗೆ ಎಷ್ಟೊಂದು ವಿಚಾರ ತಿಳಿದಿರಬೇಕು!. ಮೊದಲು ಹಂದಿಗೆ ತಾನು ಹಂದಿ ಎಂದು ತಿಳಿದಿರಬೇಕು, ನಂತರ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಮತಭೇದಗಳಿವೆ ಎಂದು ತಿಳಿದಿರಬೇಕು, ಆನಂತರ ಆ ಹೊಲ ಸಾಬಿದೆ ಎಂದು ತಿಳಿದಿರಬೇಕು, ಎಲ್ಲದಕ್ಕಿಂತ ಹೆಚ್ಚಾಗಿ ಸುಬ್ಬನಿಗೆ ಇರುವಹಾಗೆ, ಈ ಕಾಡುಹಂದಿಗೂ, ಮುಸಲ್ಮಾನರು ನಮ್ಮನ್ನು ದೇವರೆಂದು ಪೂಜಿಸುತ್ತಾರೆ, ಆದ್ದರಿಂದ ಅವರು ನಮ್ಮನ್ನು ತಿನ್ನುವುದಿಲ್ಲ ಎಂಬ ತಪ್ಪು ಗ್ರಹಿಕೆಯು ಸಹ ಇರಬೇಕಲ್ಲವೇ. ಇಷ್ಟು ವಿಷಯಗಳನ್ನು ಕಾಡು ಹಂದಿ ತಿಳಿದಿದ್ದರೆ, ತಾನೆ ಕಾಡಲ್ಲಿ ಹೊಲ ಹಗೆದು, ಜೋಳ ಬಿತ್ತಿ, ಜೋಳದ ಕೃಷಿ ಮಾಡಿ, ಯಾರ ಹಂಗು ಇಲ್ಲದೆ ಬೇಕಾದಾಗ ಜೋಳವನ್ನು ತಿಂದು ಜೀವನ ಸಾಗಿಸುತ್ತಿತ್ತು. ಇಲ್ಲಿಯ ತನಕ ಕಾಡು ಮೇಡು ಹಳ್ಳ ದಾಟಿ ಬರುವ ಗೋಜಿಗೆ ಹೋಗುತ್ತಿರಲಲಿಲ್ಲ ಅಲ್ಲವೇ?. ಇವರ ಮೂಢನಂಬಿಕೆ, ಮುಗ್ದತೆ ಮತ್ತು ತಪ್ಪು ಕಲ್ಪನೆಗಳ ಗ್ರಹಿಕೆಯನ್ನು ನೆನೆದು ಇವರೆಸ್ಟು ಮುಗ್ದ ಜನರು ಎಂಬ ಕಲ್ಪನೆ ಮನದಲ್ಲಿ ಮೂಡಿತು.
              
       ನಾನು ಸುಬ್ಬನ ಕಡೆಗೆ ತಿರುಗಿ, "ಸುಬ್ಬ ನೀನು ತಿಳಿದಿರುವ ಕಲ್ಪನೆ ತಪ್ಪು, ಮೊದ್ಲಾಗಿ ಮುಸ್ಲಿಮರು ಹಂದಿಯನ್ನು ದೇವರೆಂದು ಪೂಜಿಸುವುದು ಇಲ್ಲ, ಮತ್ತು ಅವರು ಅದನ್ನು ತಿನ್ನದೆ ಇರುವುದಕ್ಕೆ ಕಾರಣವೆ ಬೇರೆ, ಅವರ ಕುರಾನ್ ನಲ್ಲಿ ಹಂದಿ ಮಾಂಸ ತಿನ್ನುವುದು 'ಹರಾಮ್' ಎಂದು ಬೋದಿಸಿದ್ದಾರೆ, ಅಂದರೆ ಹಂದಿ ಒಂದು ಕೊಳಕು ಪ್ರಾಣಿ, ಅದು ಬಚ್ಚಲು, ಚರಂಡಿಗಳಲ್ಲಿ ಅಲೆದಾಡುತ್ತದೆ ಮತ್ತು ಹೊಲಸನ್ನು ತಿಂದು ಬದುಕುತ್ತದೆ, ಆದ್ದರಿಂದ ಅದರ ಮಾಂಸದಲ್ಲಿ ಕೆಟ್ಟ ಕೊಬ್ಬಿನಂಶ ಮತ್ತು ರೋಗ ತರುವ ಹಲವಾರು ಕೆಟ್ಟ ಸೂಕ್ಷ್ಮಾಣು ಜೀವಿಗಳು ಇರುವ ಕಾರಣ ಅದನ್ನು ತಿನ್ನಬಾರದೆಂದು ಕುರಾನ್ ನಲ್ಲಿ ಬೋಧಿಸಿರುವ ಕಾರಣ, ಮುಸ್ಲೀಮರು ಹಂದಿಯನ್ನು ತಿನ್ನುವುದಿಲ್ಲ" ಎಂದೆ. ಮತ್ತೂ ಅಕಸ್ಮಾತ್ ನೀನು ತಿಳಿದಿರುವಂತೆ ಯಾವುದೋ ಕಾಡು ಹಂದಿ ಅವರು ನನ್ನನ್ನು ಪೂಜಿಸುತ್ತಾರೆ ಎಂದು ತಿಳಿದು, ಅವರ ಹೊಲವನ್ನ ನಾಶ ಮಾಡದೆ ಇರುವ ತರ, ನನ್ನಂತೆ ತಿಳಿದಿರುವ ಬೇರೆ ಯಾವುದಾದರೊಂದು ಹಂದಿ, ನಮ್ಮನ್ನು ಕೊಳಕು ಪ್ರಾಣಿ ಎಂದು ತಿಳಿದಿರುವ ಇವರಿಗೆ ಬುದ್ದಿ ಕಲಿಸಬೇಕೆಂದು, ಸಾಬಿ ಹೊಲಕ್ಕೆ ಮಾತ್ರ ದಿನಾ ಹೊಕ್ಕು, ಜೋಳ ತಿಂದು ನಾಶ ಮಾಡಬೇಕಲ್ಲ? ಎಂದು ಸುಬ್ಬನನ್ನು ಟೀಕಿಸಿದೆ.

      ಅದಕ್ಕೆ ಸುಬ್ಬನು ನಗುತ್ತ " ಅಯ್ಯೋ ಬುಡಿ ಬುದ್ದಿ, ನೀವು ಪಟ್ಟಣದಲ್ಲಿ ಓದ್ತಾ ಇರೋರು, 'ದೇವ್ರಿಲ್ಲ, ದಿಂಡ್ರಿಲ್ಲ' ಅಂತೀರಾ, ಜ್ಯಾತಿ, ಬೇದ್ ಭಾವ ಮಾಡ್ಬಾರ್ದು ಅಂತೀರಾ. ನಿಮ್ಮ ಮಾತು ಕಟ್ಗೊಂಡ್ರೆ ನಾವು ಹಳ್ಳಿಲಿ ಜೀವ್ನ ಮಾಡಕ್ಕಾದ್ದ, ಸರಿ ಸರಿ ಎಲ್ರು ನಡೀರಿ ನಮ್ ಗುಳ್ಳಿನ್ ತವ್ಕ್ ಹೋಗುವ, ಬಂದು ಬಾಳ ಹೊತ್ತಾಯ್ತು" ಎನ್ನುತ್ತಾ ಅವನ ಮೂಢನಂಬಿಕೆಗಳೇ ಅವನ ಜೀವನಾಧಾರ ಎಂಬಂತೆ, ನನ್ನ ಕಲ್ಪನೆಯೇ ತಪ್ಪು ಎಂಬಂತೆ ಗ್ರಹಿಸಿ, ನನ್ನ ಮಾತಿಗೆ ನಗುತ್ತಾ ಹುಡುಗು ಬುದ್ದಿ ಎಂದು ಹಣಕಿಸಿ, ಅವರ ಗುಡಿಸಲಿನ ಕಡೆಗೆ ಮೂರು ಜನರು ಪಂಜಿನ ಬೆಳಕನ್ನು ಇಡಿದು ಹೊರಟರು. ಅವರು ಸಾಕಿದ್ದ ಕಂತ್ರಿ ನಾಯಿಯು ಅವರ ಹಿಂದೆ ನಾಲಗೆ ಹೊರ ಚಾಚಿ ಜೊಲ್ಲು ಸುರಿಸುತ್ತಾ ಹೊರಟಿತು.

            ಮರುದಿನ ಬೆಳಿಗ್ಗೆ, 'ಲಬ ಲಬ' ಅಂತ ಸಿದ್ದ ಬಾಯಿ ಬಡ್ಕೊಂಡು ನಮ್ಮ ಗುಡಿಸಲ ಅತ್ತಿರ ಬಂದ. ನನ್ನ ತಂದೆ "ಯ್ಯಾಕೆ ಸುಬ್ಬ ಏನಾಯ್ತೋ? ಎಂದು ಕೇಳಿದರು. ಸಿದ್ದ "ಗೌಡ್ರೆ ಬಾರಿ ಅನ್ಯಾಯಾ ಆಗೋಯ್ತು ಗೌಡ್ರೆ" ಅಂದ.

" ಯಾಕ್ ಇಂಗ್ ಒಂದೇ ಸಮ್ನೆ ಕೂಗ್ತಾ ಇದ್ಯಾ, ಅದೇನು ಓಸಿ ಬಿಡ್ಸ್ ಹೇಳು?".

      "ಬುದ್ಧಿ ರಾತ್ರಿ ಒಂಚ್ಚೂರು ಕಣ್ಣಿಗ್ ನಿದ್ದಿಲ್ದೆ ಕಾವಲು ಕಾಯ್ದಿವ್ನಿ, ಆದ್ರೂ ಬಡ್ಡಿಮಗಂದ್ 'ಒಂಟಿ' ರಾತ್ರಿ ಬಂದು ಹೊಲ ಮೇಯ್ದೈತೆ, ಬುದ್ದಿ ನೋಡಿ ಬನ್ನಿ ಆ ಒಂಟಿ ಮಾಡಿರೋ ಕಥೆನ, ಅರ್ದ ಹೊಲಕ್ಕಿಂತ ಮ್ಯಾಲೆ ಮಯ್ದೈತೆ, ನೋಡಿದ್ರೆ ಹೊಟ್ಟೆಲ್ಲ  ಉರಿತ್ತೆ ಬುದ್ಧಿ, ಅದೆಲ್ಲಿಂದ್ ಬಂತು, ಅದೆಲ್ಲಿಂದ್ ಮೆಯ್ತು ಅಂತ ಗೊತ್ತಿಲ್ಲಾ, ಓಸಿ ಬಂದ್ ನೋಡಿ ಶಿವ" ಎಂದು ಸಿದ್ಧ ಬಾಯ್ ಬಾಯ್ ಬಿಟ್ಟನು.

           ಇವನ ಶೋಕಗೀತೆಯನ್ನು ಕೇಳಿ, ನಾನು ಮತ್ತು ನನ್ನ ತಂದೆ ಸಿದ್ದನ ಹೊಲಕ್ಕೆ ಹೋಗಿ ನೋಡಿದೆವು. ವಾಸ್ತವವಾಗಿ ಅಲ್ಲಿ ಹೋಗಿ ನೋಡಿದಾಗ, ಏನು ನಡೆದಿದೆ ಎಂದು ಗೊತ್ತಾಯ್ತು. ರಾತ್ರಿಯೆಲ್ಲ ಜಿಡಿ ಮಳೆ ಬಿದ್ದ ಕಾರಣ, ಸಿದ್ಧ ಗುಡಿಸಲಲ್ಲಿ ಚೆನ್ನಾಗಿ ನಿದ್ರೆ ಹೊಡೆದಿದ್ದಾನೆ, ಒಂಟಿ ಹಂದಿ ಸಿಕ್ಕಿದ್ದೇ ಚಾನ್ಸು ಅಂತ ರಾತ್ರಿ ಪೂರ್ತಿ ಸಿದ್ದನ ಜೋಳದ ಹೊಲವನ್ನು ಮನಬಂದಂತೆ ಸೂರೆಯಾಡಿ, ಅರ್ಧ ಜಮೀನಿನ ಜೋಳದ ಗಿಡವನ್ನೆಲ್ಲ ನೆಲಕ್ಕೂರುಳಿಸಿತ್ತು. ಅವನು ರಾತ್ರಿ ಹೆಚ್ಚರವಾಗಿದ್ದು ಒಂದು ಕೂಗು ಕೊಟ್ಟಿದ್ದರೆ, ಹಂದಿ ಬೇರೆ ಕಡೆಗೆ ಹೋಗುತ್ತಿತ್ತೊ ಏನೋ. ಇದಕ್ಕೆಲ್ಲ ಇವನ ಹಾಳು ನಿದ್ದೆಯೇ ಕಾರಣ ಎಂದು ನೋಡಿದವರು ನಿಸಂಸಯವಾಗಿ ಹೇಳುತ್ತಿದ್ದರು.

     "ನೀನು ರಾತ್ರಿ ಚೆನ್ನಾಗಿ ಬಾಡೂಟ ತಿಂದ್ ಬಂದು, ಗಡತ್ತಾಗ್ ನಿದ್ರೆ ಮಾಡಿ, ಈಗ ಹಂದಿ ಹೊಲನೆಲ್ಲ ನಾಶ ಮಾಡ್ತು ಅಂತ ಬಾಯ್ ಬಡ್ಕೊಂಡ್ರೆ ಯಾನ್ ಪ್ರಯೋಜ್ನ ಹೇಳು" ಎಂದು, ನಮ್ಮ ತಂದೆ ಅವನಿಗೆ ಬೈದರು, ಅದಕ್ಕವನು "ದ್ಯಾವ್ರಾಣೆಗೂ ನಾನ್ ಒಂದ್ ಚೂರು ನಿದ್ದೆ ಮಾಡಿಲ್ಲ ಬುದ್ಧಿ, ರಾತ್ರಿ ಪೂರ ಕಣ್ಣಿಗ್ ಎಣ್ಣೆ ಬುಟ್ಗಂಡ್ ಕಾಯ್ತಿದ್ದೆ" ಅಂತ ಹೇಳ್ದ.  "ನೀನ್ ಕೂಗಿದ್ರೆ ಒಂದ್ ಸಾರಿನಾದ್ರು ನಂಗೆ ಕೇಳಿಸ್ತಿರ್ಲಿಲ್ವಾ, ಸರಿ ಬಿಡು ಹಾದದ್ದು ಆಯ್ತು, ಈಗ ಇರೋ ವಸಿ ಜೋಳನಾರ ಸರಿಯಾಗ್ ಕಾವಲ್ ಕಾದು, ಸಾಲ ಸೋಲ ತೀರ್ಸು" ಅಂತ ನಮ್ಮ ತಂದೆ ಅವನಿಗೆ ಹೇಳಿ, ಎಲ್ಲರೂ ಮನೆಗೆ ಹೊರಟೆವು.

            ಮಾರನೇ ದಿನ ಬೆಳಿಗ್ಗೆ ಸರಿ ಸುಮಾರು ೧೧ ಗಂಟೆಗೆ, ಸೂರ್ಯನ ಎಳೆಬಿಸಿಲು ಅಗಲಿ, ಸುಡುಬಿಸಿಲು ನೆತ್ತಿಗೇರುವ ಸಮಯ,  ಬೆಳ್ಳ ಹೋಡಿ ಬಂದು, ಒಂದೇ ಸಮನೆ ಎದುರುಸಿರು ಬಿಡುತ್ತಾ, "ಬುದ್ಧಿ, ಬುದ್ಧಿ, ಸಿದ್ಧನ ಹೊಲದಲ್ಲಿ ಭಾರಿ ಒಂಟಿ ಹಂದಿಯೊಂದು ಕೆಸರಲ್ಲಿ ಸಿಕ್ಕಾಕೊಂಡಿದ್ಯಂತೆ, ಇವತ್ತು ಹೊಲ್ದಲ್ಲಿ ಕೆಲ್ಸ ಮಾಡೋ ಸಿದ್ಧನ ಹೆಂಡ್ತಿ ಬಸ್ವಿ ಹಂದಿನಾ ನೋಡಿ ಕೂಗ್ ಕೊಂಡ್ಳಂತೆ, ಅದ್ನ ಹೊಡಿಯಕ್ಕೆ 'ದಬ್ಕ' (ಕಬ್ಬಿಣದ ಸಲಾಕೆ) ಗಿಬ್ಕ ಇದ್ರೆ ಕೊಡಿ" ಎಂದು ಒಂದೇ ಸಮನೆ ಎದುಸಿರು ಬಿಡುತ್ತಾ ಹೇಳಿದ. ನಮ್ಮ ತಂದೆ ಕಬ್ಬಿಣದ ಸಲಾಕೆ ತಂದು ಕೊಟ್ಟರು, ಅದನ್ನು ತೆಗೆದು ಹೆಗಲ ಮೇಲೆ ಇಟ್ಟುಕೊಂಡು ವೇಗವಾಗಿ ಓಡಿದಾ.

               ಕೋರೆ ಹಲ್ಲಿರುವ ಕಾಡು ಹಂದಿಯನ್ನು ನೋಡುವ ಅವಕಾಶ ಈಗಲಾದರೂ ಕೂಡಿ ಬಂತಲ್ಲ ಎಂದು, ನಾನು ಬೆಳ್ಳನ ಹಿಂದೆ ಓಡಿದೆ. ಅಲ್ಲಿ ಓಗಿ ನೋಡುವಾಗ, ಸಿದ್ಧ ಬಡ್ಡಿಮಗಂದು ರಾತ್ರಿಯಲ್ಲ ಜೋಳದ ತೆನೆ ತಿಂದು, ತುಳ್ದು ಹಾಳ್ ಮಾಡಿ, ನಮ್ಗೆ ಗಂಜಿಗೂ ಗತಿ ಇಲ್ದೇ ಹಾಗ್ ಮಾಡ್ತು. ಇವತ್ತು ಇದ್ಕೆ ಒಂದ್ ಗತಿ ಕಾನ್ಸ್ದೆ ಬುಡಲ್ಲ ನಾನು" ಅಂತ ಹೇಳಿ ಬಹಳ ರೋಷ ವೇಷದಿಂದ ಹಂದಿಯನ್ನು ಕೊಂದೆ ಬಿಡಬೇಕು ಅಂತ ಪಣ ತೊಟ್ಟು ಕೆರಳಿ ನಿಂತಿದ್ದ. ಜನರೆಲ್ಲ ಹೊಲದ ಸುತ್ತಲೂ ನಿಂತಿದ್ದರು. ಹಂದಿ ಹೊಲದ ನಡುಮದ್ಯದಲ್ಲಿ ಕೆಸರಿಗೆ ಸಿಕ್ಕಿಕೊಂಡು ಮೇಲೇ ಬರಲಾಗದೆ ಒಳಗೆ 'ಗೊಟ್ಟರ್! ಗೊಟ್ಟರ್!' 'ಕುರ್ರೋ, ಕುರ್ರೋ' ಎಂದು ಶಬ್ದ ಮಾಡುತ್ತಿತ್ತು. ಜೋಳದ ಗಿಡಗಳು ಮಾರುದ್ದ ಬೆಳೆದಿದ್ದರಿಂದ, ಹಂದಿಯ ಶಬ್ದವಲ್ಲದೆ ಬೇರೇನು ಕಾಣುತ್ತಿರಲಿಲ್ಲ.
             
      ಬೆಳ್ಳ ಓಡಿ ಬಂದು, ತಂದ ಪಿಕಾಸಿಯನ್ನು ಸಿದ್ದನ ಕೈಗೆ ಕೊಟ್ಟು " ನಾನು ನಾಲಕ್ ಜನಾನ ಕರ್ಕೊಂಡು, ಜೋಳದ್ ಹೊಲಕ್ ನುಗ್ಗಿ ಹಂದಿನಾ ಬೆದರ್ಸ್ತೀವಿ, ಅದು ಬದಿಯಿಂದ ಕಾಲ್ ಕಿತ್ಕೊಂಡು ನೇರ ನಿನ್ ಅತ್ರಕ್ಕೆ ಬರುತ್ತೆ, ಒಂದೇ ಏಟ್ಗೇ ಆ ಹಂದಿನ ಈ ಪಿಕಾಸಿಲಿ ಹೊಡ್ದು ಸಾಯೀಸ್ಬಿಡು" ಅಂತ ಸಿದ್ದನಿಗೆ ಹೇಳಿ, ಹಂದಿಯನ್ನು ಹೊಲದಿಂದ ಹಟ್ಟಲು, ತಾನು ಮತ್ತಿರುವರೊಡನೆ ಜೋಳದ ಹೊಲಕ್ಕೆ ನುಗ್ಗಿದ.

               ಒಳಗೆ ನುಗ್ಗಿ, ಬೆಳ್ಳ  ಮತ್ತಿಬ್ಬರು ಸೇರಿ 'ಹೊಯ್, ಹೊಯ್' 'ಶ್ ಶ್'  ಎಂದು ಹಿಂದಿನಿಂದ ಹಂದಿಯನ್ನು ಕೆರಳಿಸಿದರು. ಹಂದಿ ಬಂದ ತಕ್ಷಣ ಪಿಕಾಸಿಯಿಂದ ಒಂದೇ ಏಟಿಗೆ ಸಾಯಿಸಬೇಕೆಂದು, ಭೀಮಾ ಗದೆ ಹಿಡಿದು ನಿಂತವನಂತೆ, ಸಿದ್ದ ಪಿಕಾಸಿ ಇಡಿದು, ಕಣ್ಣನ್ನು ಕೆಂಡವಾಗಿಸಿ, ಹಂದಿ ಬರುವ ದಾರಿಯನ್ನೇ ಕಾಯುತ್ತ ಹೊಲದ ಹೊರಗೆ ನಿಂತಿದ್ದ.

ಕಾಡುಹಂದಿಯು, ಇನ್ನು ಇಲ್ಲೇ ನಿಂತರೆ, ಇವರೆಲ್ಲ ನನ್ನನು ಒಡೆದು ಸಾಯಿಸಿಯಾರೂ ಎಂಬ ಭಯದಿಂದ, ತನ್ನೆಲ್ಲ ಶಕ್ತಿಯನ್ನು ಕಾಲಿಗಿಳಿಸಿ, ಕೇಸರಿನಿಂದ ಚಂಗನೆ ನೆಗೆಯಿತು, 'ಗೊಟ್ಟರ್, ಗೊಟ್ಟರ್' ಎಂದು ಶಬ್ದ ಮಾಡುತ್ತಾ, ನೇರ ಸಿದ್ದ ನಿಂತಿರುವ ಕಡೆಗೆ ಶರವೇಗದಲ್ಲಿ ನುಗ್ಗಿತು. ಅಲ್ಲಿಯವರೆಗೆ ಕಾಡು ಹಂದಿಯನ್ನು ನೋಡಿರದ ನನಗೆ, ಅದರ ಕೋರೆ ಹಲ್ಲನ್ನು ನೋಡಿ, ರೋಮಾಂಚನವಾಯಿತು. ಮೂತಿಯ ಎರಡು ಬದಿಯಲ್ಲಿ ಬಿಳಿ ಮತ್ತು ತೆಳು ಹಳದಿ ಮಿಶ್ರಿತ ಬಣ್ಣದ ಸುಮಾರು ಆರು ಇಂಚಿನಷ್ಟು ಎರಡು ಕೋರೆ ಹಲ್ಲುಗಳು ಕಂಡವು. ಅದರ ಮೂತಿಯು ವಿಷ್ಣುವಿನ 'ವರಾಹ' ಅವತಾರದಂತೆ ಕಂಡಿತು. ನನಗೆ ಆ ಕೋರೆ ಹಲ್ಲನ್ನು ನೋಡಿ, ಇದು ಗಟ್ಟಿಯಾದ ಕಲ್ಲಿನಂತ ಭೂಮಿಯನ್ನು ತೋಡಿ, ಅಗೆದು ದೊಡ್ಡ ದೊಡ್ಡ ಗುಂಡಿಗಳನ್ನು ಮಾಡುತಿದ್ದುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಏನಿಸಿತು. ಇನ್ನೇನೋ ಸಿದ್ದ ಪಿಕಾಸಿಯಿಂದ ಹಂದಿಯನ್ನು ಹೊಡೆಯುವುದೇ ತಡ, ಅದು ಬಂದ ವೇಗದಲ್ಲಿ, ಕ್ಷಣಮಾತ್ರದಲ್ಲಿ ತನ್ನ ಕೋರೆ ಮೂತಿಯನ್ನು, ಸಿದ್ದನ ಎರಡು ಕಾಲುಗಳ ನಡುವೆ ತೂರಿಸಿ! ಅವನನ್ನು ಬೆನ್ನ ಮೇಲೆ ಕೂರಿಸಿ ವೇಗದಲ್ಲಿ ಕಾಡಿನ ಕಡೆಗೆ ನುಗ್ಗಿತು. ಸಿದ್ದ ವಿದ್ಯುತ್ ಶಾಕ ತಗುಲಿದವನಂತೆ, ಪಿಕಾಸಿಯನ್ನು ಹಿಡಿದ ಹಾಗೆ, ತನ್ನೆಲ್ಲಾ ಹಲ್ಲುಗಳನ್ನು ಕಿರಿದು ಅಲುಗಾಡದಹಾಗೆ ಭದ್ರವಾಗಿ ಕೂತಿದ್ದ. ಹಂದಿ ನಾಗಲೋಟದಿಂದ ತನ್ನ ನಾಲ್ಕು ಕಾಲುಗಳನ್ನು ಚೆಂಗನೆ ಮೇಲಕ್ಕೆತ್ತಿ ಕಾಡಿನ ಕಡೆಗೆ ಓಡುತಲಿತ್ತು.

               ಸಿದ್ದನ ಹೆಂಡ್ತಿ ಬಸ್ವಿ " ಅಯ್ಯೋ, ನನ್ ಗಂಡ ಸತ್ನಲ್ಲಪೊ, ಯಾರಾದ್ರೂ ಕಾಪಾಡಿ ಕಾಪಾಡಿ" ಎಂದು ಚೀರಿದಳು. ಹಂದಿಯು 'ಕುರ್ರೋ, ಕುರ್ರೋ'  'ಗುಟ್ಟರ್ ಗುಟ್ಟರ್' ಎಂದು ಶಬ್ದ ಮಾಡುತ್ತ, ಕಾಡಿನ ಕಡೆಗೆ ಓಡುವಾಗ, ಸಿದ್ದನನ್ನು 'ದೊಪ್' ಎಂದು ಬೇಲಿ ಬದಿಗೆ ಕೆಡವಿ, ಕಾಡಿನೊಳಗೆ ಓಡಿ ಮರೆಯಾಯಿತು. ಜನರೆಲ್ಲರೂ ಬೇಲಿಗೆ ಬಿದ್ದ ಸಿದ್ದನನ್ನು ಮೇಲೆತ್ತಿದರು. ಬಿದ್ದ ರಭಸಕ್ಕೆ ಸಿದ್ದನ ಸೊಂಟದ ಮೂಳೆ ಮುರಿದಿತ್ತು. ಅವನನ್ನು ಆಷ್ಪತ್ರೆಗೆ ಹೊಯ್ದರು. ಈ ಘಟನೆ ನಂತರ ಸಿದ್ದ ಚೇತರಿಸಿಕೊಳ್ಳಲೇ ಇಲ್ಲಾ.  ಊರಲ್ಲೇ ಒಂದು ದೊಣ್ಣೆ ಇಡಿದು ಅಲ್ಲಿ ಇಲ್ಲಿ ಕೂತು, ಹಂದಿಯ ಮೇಲೆ ಸವಾರಿ ಮಾಡಿದ ತನ್ನ ವೀರಗಾಥೆಯನ್ನು ಜನರಿಗೆ ಹೇಳುತ್ತಾ ಹೇಳುತ್ತಾ ಇಹಲೋಕ ತೆಜಿಸಿಯೇ ಬಿಟ್ಟನು.

          ಈಗೆ ಕಾಡುಹಂದಿ ನುಗ್ಗಿ, ಹಲವಾರು ಜನರು ಮರಣ ಹೊಂದಿರುವ ಮತ್ತು ಅಪಘಾತಕ್ಕೀಡಾಗಿರುವ ಉದಾಹರಣೆ ಹಲವಾರಿವೆ. ಅನೇಕ ಜನ ದ್ವಿಚಕ್ರ ವಾಹನಗಳಲ್ಲಿ ಹೋಗುವಾಗ, ಬೆಳಕಿಗೆ ಹಂದಿಗಳು ಆಕರ್ಷಣೆಗೊಂಡು, ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಗಳಾಗಿವೆ. ಇದೆಲ್ಲದ್ದಕ್ಕೆ ಕಾರಣ ಕಾಡುಪ್ರಾಣಿಗಳಂತೂ ಅಲ್ಲೆವೆ ಅಲ್ಲ. ಮನುಷ್ಯನೆಂಬ ಮೃಗವೇ ಇದಕ್ಕೆ ಮೂಲ ಕಾರಣ ಎಂದು ಹೇಳಬಹುದು.
    
        ತನ್ನ ಅತಿಯಾದ ದುರಾಸೆಯಿಂದ, ಅತಿಹೆಚ್ಚು ನೆಲ, ಹೊಲ, ಹಣ ಗಳಿಸಬೇಕು ಎಂಬ ಕೆಟ್ಟ ಯೋಚನೆಯಿಂದ, ಕಾಡುಗಳನ್ನೆಲ್ಲ ಸರ್ವನಾಶ ಮಾಡಿ, ಕಾಡು ಪ್ರಾಣಿಗಳು ವಾಸವಿರುವ ಜಾಗದಲ್ಲಿ ತಾನು ವಾಸಿಸಲು ಸುರುಮಾಡಿದನು. ಊರಿನಿಂದ ಎಷ್ಟೋ ಮೈಲು ದೂರವಿರುವ ಕಾಡು ಮರಗಳನ್ನು ಕಡಿದು, ನೆಲಸಮಮಾಡಿ, ತನ್ನ ಇರುವಿಕೆಯನ್ನು ವಿಸ್ತರಿಸಿದನು. ಇದರಿಂದ ಕಾಡು ಪ್ರಾಣಿಗಳ ಆಹಾರಕ್ಕೆ ತೊಂದರೆಯಾಗಿ, ಊರ ಕಡೆಗೆ ಬರಲಾರಂಭಿಸಿದವು. ಮಹಾನ್ ಲೇಖಕರಾದ ಕೆ. ಪಿ. ಪೂರ್ಣ ಚಂದ್ರ ತೇಜಸ್ವಿ ಅವರು ತಮ್ಮ 'ಕಾಡು ಮತ್ತು ಕ್ರೌರ್ಯ' ಎಂಬ ಕೃತಿಯಲ್ಲಿ ಮಲೆನಾಡಿನ ಜನರ ಮೌಢ್ಯತೆಗೆ ಕಾಡು ಸಿಕ್ಕಿ ಹೇಗೆ ನಶಿಸಿ ಹೋಗುತ್ತಿದೆ ಎಂಬುದನ್ನು ನಮ್ಮ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ.

    ಕಾಡು ಪ್ರಾಣಿಗಳು ಜೀವಿಸುವ ಕಾಡನ್ನು ನಾಶ ಮಾಡಿ, ಅವು ಬದುಕುವ ಜಾಗವನ್ನು ತನ್ನದೆಂದು, ಅಕ್ರಮವಾಗಿ ವಶಪಡಿಸಿಕೊಂಡು, ತಾನು ಸಂಪತ್ತನ್ನು ಗಳಿಸುತ್ತಿದ್ದೇನೇ ಎಂಬ ತಪ್ಪು ಕಲ್ಪನೆಯಲ್ಲಿ, ತನ್ನನ್ನು ತಾನೇ ನಾಶಮಾಡಿಕೊಳ್ಳುತ್ತಿರುವ ಮನುಷ್ಯನ ಈ ನೀಚ ಬುದ್ಧಿ ಎಂದಿಗೆ ಕೊನೆ ಗೊಳ್ಳುತ್ತದೋ, ಅಂದು ಮನುಷ್ಯ ಮನುಷ್ಯನಾಗಿ ಜೇವಿಸುತ್ತಿದ್ದಾನೆ ಎಂದು ಹೇಳಬಹುದು.