ಸಿಹಿಜೀವಿ. ಸಿ ಜಿ ವೆಂಕಟೇಶ್ವರ ಹುಟ್ಟಿದ್ದು ಜೂನ್ 13, 1975ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಒಂದು ರೈತಾಪಿ ಕುಟುಂಬದಲ್ಲಿ. ತಂದೆ ಗೋವಿಂದಪ್ಪ ಚಿಕ್ಕ ವಯಸ್ಸಿನಲ್ಲೇ ತೀರಿಕೊಳ್ಳಲು ತಾಯಿ ಶ್ರೀದೇವಮ್ಮನವರ ಛಲದಿಂದ ಅಕ್ಷರ ಕಲಿತು, ವಿದ್ಯಾಭ್ಯಾಸ ಮಾಡಿ, ಟಿಸಿಎಚ್, ಎಂ.ಎ., ಎಂ.ಇಡಿ ಪದವಿಗಳನ್ನು ಗಳಿಸಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದವರು ಈಗ ತುಮಕೂರಿನ ಕ್ಯಾತಸಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡದ ಬಹುತೇಕ ದಿನ, ವಾರ, ಮಾಸ ಪತ್ರಿಕೆಗಳಲ್ಲಿ ಇವರ ಕವನ, ನ್ಯಾನೋ ಕಥೆ, ಹನಿಗವನ, ಚುಟುಕು, ಗಜಲ್ , ಹಾಯ್ಕು, ಭಾವಗೀತೆ, ಭಕ್ತಿಗೀತೆ ಗಳು ಪ್ರಕಟವಾಗಿವೆ. ಲಲಿತ ಪ್ರಬಂಧ, ಶೈಕ್ಷಣಿಕ ಲೇಖನ, ವಿಜ್ಞಾನ ಲೇಖನಗಳ ಅಂಕಣಕಾರರಾಗಿರುವ ಇವರು ರಂಗಭೂಮಿಯ ಕಲಾವಿದರೂ ಹೌದು.ಹವ್ಯಾಸಿ ಗಾಯಕರೂ ಹೌದು. ಬ್ಲಾಗರ್ ಆಗಿ ಕೂಡಾ ಹೆಸರು ಮಾಡಿರುವ ಶ್ರೀಯುತರು "ಶ್ರೀದೇವಿ ತನಯ " ಎಂಬ ಬ್ಲಾಗ್ ರಚನೆ ಮಾಡಿ 1600 ಹೆಚ್ಚು ರಚನೆಗಳನ್ನು ಪ್ರಕಟ ಮಾಡಿರುವರು.ಪ್ರಪಂಚದಾದ್ಯಂತ ಮೂರು ಲಕ್ಷಕ್ಕೂ ಹೆಚ್ಚು ಓದುಗರನ್ನು ತಮ್ಮ ಬ್ಲಾಗ್ ಮೂಲಕ ತಲುಪಿದ್ದಾರೆ.
ಇಪ್ಪತ್ತೆರಡು ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ತಾಲ್ಲೂಕು, ಜಿಲ್ಲಾ, ಹಾಗೂ ರಾಜ್ಯ ಮಟ್ಟದ ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಪ್ರಯತ್ನವಾಗಿ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಂಡು ,ಮಕ್ಕಳಿಗೆ ,ಶಿಕ್ಷಕರಿಗೆ ಮತ್ತು ಸಮುದಾಯಕ್ಕೆ ನಮ್ಮ ಪರಂಪರೆಯನ್ನು ಸಂರಕ್ಷಣೆ ಮಾಡಲು ಅರಿವು ಮೂಡಿಸುತ್ತಿದ್ದಾರೆ.
"ಸಾಲು ದೀಪಾವಳಿ " ಎಂಬ ಕವನ ಸಂಕಲನ" ಸಿಹಿಜೀವಿಯ ಗಜಲ್" ಎಂಬ ಗಜಲ್ ಸಂಕಲನ,"ನನ್ನಮ್ಮ ನಮ್ಮೂರ ಫ್ಲಾರೆನ್ಸ್ ನೈಟಿಂಗೇಲ್ ಎಂಬ ಲಲಿತ ಪ್ರಬಂಧಗಳ ಸಂಕಲನ "ಶಾಲಾ ಪ್ರಬಂಧ ಮತ್ತು ಪತ್ರಲೇಖನ" ಎಂಬ ಶೈಕ್ಷಣಿಕ ಪುಸ್ತಕ ,"ರಂಗಣ್ಣನ ಗುಡಿಸಲು" ಎಂಬ ಕಥಾ ಸಂಕಲನ "ಉದಕದೊಳಗಿನ ಕಿಚ್ಚು" ಎಂಬ ಕಾದಂಬರಿಯನ್ನು ರಚನೆ ಮಾಡಿರುತ್ತಾರೆ.
ಕಾವ್ಯಚಿಂತಾಮಣಿ ರಾಜ್ಯ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಕೇಂದ್ರ ಸಾಹಿತ್ಯ ವೇದಿಕೆ ಇವರಿಂದ ಸಂಘಟನಾ ಚತುರ ರಾಜ್ಯ ಪ್ರಶಸ್ತಿ, ರೋಟರಿ ಕ್ಲಬ್ ತುಮಕೂರುರವರಿಂದ ನೇಷನ್ ಬಿಲ್ಡರ್ ಅವಾರ್ಡ್ ಪುರಸ್ಕೃತರಾಗಿರುವ ಇವರು ಹಲವಾರು ರಾಜ್ಯಮಟ್ಟದ ಕವಿಗೋಷ್ಠಿಗಳ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಸಾಲು ದೀಪಾವಳಿ ಎಂಬ ನನ್ನ ಚೊಚ್ಚಲ ಕವನ ಸಂಕಲನವನ್ನು ನಾಡಿನ ಅನೇಕ ಸಹೃದಯರು ಕೊಂಡು ಓದಿ ಮೆಚ್ಚುಗೆ ವ್ಯಕ್ತಪಡಿಸಿದ ಹುರುಪಿನಿಂದ ಇನ್ನೂ ಬರೆಯುವ ತವಕ ಉಂಟಾಗಿದೆ. ನನ್ನ ಕವನ ಸಂಕಲನ ಓದುಗರು ಕೇವಲ ಹಿರಿಯರು ಮಾತ್ರ ಆಗಿರದೇ ನಾನು ಹಿಂದೆ ಕೆಲಸ ಮಾಡುತ್ತಿದ್ದ ಗೌರಿಬಿದನೂರಿನ ಎಸ್.ಎಸ್ .ಇ .ಎ . ಸರ್ಕಾರಿ ಪ್ರೌಢಶಾಲೆಯ ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕ್ಯಾತ್ಸಂದ್ರ ಶಾಲೆಯ ಮಕ್ಕಳು ನನ್ನ ಕವನ ಸಂಕಲನ ಕೊಂಡು ಓದಿದರು.ಜೊತೆಗೆ ಅವರದೇ ಭಾಷೆಯಲ್ಲಿ ನನ್ನ ಕವನಗಳ ವಿಮರ್ಶೆ ಮಾಡಿದರು. ನನ್ನ ಪುಸ್ತಕದ ಕೆಲ ಪದ್ಯಗಳ ಬಗ್ಗೆ ಅವರು ಮಾತನಾಡುವಾಗ ಅವರ ಕಣ್ಣುಗಳು ಅರಳಿದ್ದವು ಅವರ ವಯೋಮಾನಕ್ಕೆ ಅನುಗುಣವಾದ ಕವಿತೆಗಳನ್ನು ಅವರು ಹೆಚ್ಚು ಇಷ್ಟ ಪಡುವುದನ್ನು ಗಮನಿಸಿದೆ. ಅಂದೇ ತೀರ್ಮಾನ ಮಾಡಿದೆ ಮಕ್ಕಳಿಗಾಗಿ ಕೆಲ ಪುಸ್ತಕಗಳನ್ನು ಬರೆಯಬೇಕು ಹಾಗೂ ಮಕ್ಕಳಲ್ಲಿ ಓದುವ ರುಚಿ ಹತ್ತಿಸಬೇಕು ಎಂದು. ಆ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದಾಗ ಈ ಪುಸ್ತಕ ಈಗ ನಿಮ್ಮ ಕೈಯಲ್ಲಿದೆ. ಈ ಮಕ್ಕಳ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದು ಹಾರೈಸಿದ ನಾಡಿನ ಹಿರಿಯ ಸಾಹಿತಿ ಹಾಗೂ ಮಕ್ಕಳ ಸಾಹಿತಿ ವಿದ್ಯಾ ವಾಚಸ್ಪತಿ ಡಾ.ಕವಿತಾ ಕೃಷ್ಣ ಅವರಿಗೆ ಧನ್ಯವಾದಗಳು. ಈ ಪುಸ್ತಕದ ತಯಾರಿಯಲ್ಲಿ ಸಹಕರಿಸಿದ ಆನಂದ್ ಪಬ್ಲಿಕೇಷನ್ ನ ಮಾಲೀಕರು ಹಾಗೂ ಆತ್ಮಿಯರಾದ ಎಂ .ವಿ ಶಂಕರಾನಂದ ರವರಿಗೆ, ಸುಂದರ ಮುಖಪುಟ ಮಾಡಿಕೊಟ್ಟ ಲೇಖಕರಾದ ವಿ ಎಲ್ ಪ್ರಕಾಶ್ ರವರಿಗೆ, ಸ್ಟೂಡೆಂಟ್ ಬುಕ್ ಕಂಪನಿಯ ಸದಾಶಿವ್ ರವರಿಗೆ, ಧನ್ಯವಾದಗಳು.ನನ್ನ ಪ್ರತಿ ಪುಸ್ತಕಗಳನ್ನು ಕೊಂಡು ಓದುತ್ತಿರುವ ನನ್ನೆಲ್ಲಾ ಓದುಗ ಬಂಧುಗಳಿಗೆ ನನ್ನ ವಿಶೇಷ ನಮನಗಳು.ನನ್ನ ಜನ್ಮದಾತರು ಮತ್ತು ಕುಟುಂಬದ ಎಲ್ಲಾ ಸದಸ್ಯರಿಗೆ ಧನ್ಯವಾದಗಳು.ನನ್ನ ಎಲ್ಲಾ ಆತ್ಮೀಯ ಶಿಕ್ಷಕ ಬಳಗಕ್ಕೆ ನಮಸ್ಕಾರಗಳು , ಎಲ್ಲಾ ಮಕ್ಕಳಿಗೆ ಶುಭ ಆಶೀರ್ವಾದಗಳು .ನಿಮಗಾಗಿ ಬರೆದ ಈ ಪುಸ್ತಕವನ್ನು ಕೊಂಡು ಓದುವಿರೆಂದು ಭಾವಿಸಿರುವೆ. ಸರ್ವರಿಗೂ ಶುಭವಾಗಲಿ.