Click here to Download MyLang App

Yugasandhya,  ಯುಗಸಂಧ್ಯಾ (ಇಬುಕ್),  ಸುಜನಾ,    Sujanaa,  Sujana,

ಯುಗಸಂಧ್ಯಾ (ಇಬುಕ್)

e-book

ಪಬ್ಲಿಶರ್
ಸುಜನಾ
ಮಾಮೂಲು ಬೆಲೆ
Rs. 200.00
ಸೇಲ್ ಬೆಲೆ
Rs. 200.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

 

ಯುದ್ಧೋತ್ತರ ಮಹಾಭಾರತ ಕಾವ್ಯ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರ ಶಸ್ತಿ ದೊರೆತ ಕೃತಿ.

 

ವ್ಯಾಸಮಹಾಭಾರತವನ್ನು ಕನ್ನಡಕ್ಕೆ ಶಕ್ತವಾಗಿ ಅವತಾರಮಾಡಿಸಿದ ಪಂಪ ಕುಮಾರವ್ಯಾಸರು ಆ ಮಹಾಕಥೆಯ ಗೆಲವಿನ ಭಾಗಕ್ಕಷ್ಟೆ ತಮ್ಮ ಕಾವ್ಯಗಳನ್ನು ಪರಿಮಿತಗೊಳಿಸಿದ್ದಾರೆ. ಹದಿನೆಂಟು ಪರ್ವಗಳಿರುವ ಮೂಲ ಮಹಾಕಾವ್ಯದ ಮೊದಲ ಹತ್ತುಪರ್ವಗಳು ಕುರುಪಾಂಡು ಯುದ್ದದ ಮುಕ್ತಾಯದ ತನಕ ಮಾತ್ರವೆ ಸಂಬಂಧಿಸಿವೆ. ಆದರೆ ವ್ಯಾಸಭಾರತದ ಕಥೆ ಅಲ್ಲಿಗೆ ನಿಲ್ಲುವುದಿಲ್ಲ. ಕಾಲಮಾನದ ದೃಷ್ಟಿಯಿಂದ ಮೂವತ್ತಾರು ವರ್ಷದ ಅವಧಿಯಲ್ಲಿ ನಡೆಯುವ ಆ ಕಥೆ ಅಷ್ಟೇನೂ ವಿಪುಲ ಘಟನಾ ವಳಿಗಳಿಂದ ತುಂಬಿಲ್ಲದಿದ್ದರೂ, ಬರುವಷ್ಟೆ ವಿರಳ ಘಟನೆಗಳು ಹೃದಯ ವೇಧಕವಾಗಿವೆ. ಮುಕ್ಕಾಲುಪಾಲು ಕಥೆಯೆಲ್ಲವೂ ಅಸಾಧಾರಣ ತತ್ತ್ವಾರಣ್ಯ ತಪೋವನಗಳಲ್ಲಿ ಮರೆಯಾಗಿದೆ. ತತ್ತ್ವಪ್ರಿಯರಿಗೆ ಈ ಮಹಾರಣ್ಯ ತೋರಿಸದ ಸಂಪತ್ತೇ ಇಲ್ಲ. ಈ ತತ್ತ್ವವ್ಯಾವರ್ಣನೆಯಲ್ಲೂ ಮಾನುಷ ವ್ಯಾಪಾರಗಳ ಸೂಕ್ಷ್ಮಚಿತ್ರಣ ಬರುತ್ತದೆಯಾದರೂ, ಅವುಗಳ ಸಾಂಕೇತಿ ಕತೆಯೂ ಹಾಗೂ ಕಥಾಸಂಬಂಧಿಯಾದ ಘಟನೆಗಳೂ ಮೇಲುವೋದಿನ ಕಣ್ಣುತಪ್ಪಿಸಿಕೊಳ್ಳುವುದುಂಟು. ಎಚ್ಚರಗಣ್ಣಿನಿಂದ ಗಮನಿಸಿದಾಗ ಯುದ್ಧೋತ್ತರ ಮಹಾಭಾರತ ಕಥೆ ಆ ಮಹಾಕಾವ್ಯಕ್ಕೆ ಅರ್ಥಪೂರ್ಣವಾದ ಗಂಭೀರಮುಕ್ತಾಯವಾಗಿ ಒಪ್ಪಂದವಾಗಿ ಬರುತ್ತದೆ. ಧರ್ಮಾಧರ್ಮಗಳ ನಡುವಣ ಸ್ಪಷ್ಟಸಂಘರ್ಷವಾಗಿ ತೋರುವ ಈ ಕಥೆ ಅಷ್ಟು ಸರಳವಾದ ಅರ್ಥೈಕೆಗೆ ಒದಗಿಬರುವುದಿಲ್ಲ ಎನ್ನುವುದು ಗಮನಾರ್ಹ ಸಂಗತಿಯಾಗು ತ್ತದೆ. ಧರ್ಮದ ಅರ್ಥ ಗೂಢವೂ ಗಾಢವೂ ಆದಂತೆ ತೋರಿಬರುತ್ತದೆ. ಈ ಗ್ರಹಿಕೆ ಅಗ್ರಾಹ್ಯವಾಗುವುದು ಯಾದವವಂಶದ ಸರ್ವನಾಶದ ಘಟನೆ ನಡೆದಾಗ.

ಮಹಾಭಾರತದ ವ್ಯಾಸರು, ಶ್ರೀಮದ್ಭಾಗವತ ಹಾಗೂ ವಿಷ್ಣು ಪುರಾಣಕಾರರು ಇದನ್ನು ಸ್ವಲ್ಪ ಭಿನ್ನದೃಷ್ಟಿಯಿಂದ ನೋಡಿರುವಂತೆ ಕಾಣುತ್ತದೆ. ಇನ್ನೂ ವೈಕುಂಠಕ್ಕೆ ಹಿಂದಿರುಗದೆ ಭೂಲೀಲೆಯಲ್ಲೆ ತೊಡಗಿ ರುವ ಶ್ರೀಕೃಷ್ಣ ಕಾತರಗೊಂಡ ಬ್ರಹ್ಮನ ಪ್ರಶ್ನೆಗೆ ನೀಡುವ ಉತ್ತರದಲ್ಲಿ ಪುರಾಣಕಾರರು, ಯದುವಂಶ ಸಮಷ್ಟಿನಾಶವೆಲ್ಲವೂ ಭಗವಂತನಾದ ಅವನ ಲೀಲೆಯಾಗಿಯೆ ನಡೆಯುತ್ತದೆಂದು ತಿಳಿಸುತ್ತಾರೆ. ಲೋಕಕಂಟಕರೆಲ್ಲರನ್ನೂ ನಿರ್ಮೂಲನ ಮಾಡಿದರೂ ಇನ್ನೂ ತನ್ನವರೇ ಆದ ಯಾದವಾಂಧಕ ವೃಷ್ಣಿ ಗಳೆಲ್ಲ ಮತ್ತರಾಗಿ ಕಂಟಕರಾಗಿದ್ದಾರೆಂದೂ ಅವರೆಲ್ಲರನ್ನೂ ಮೂಲೋ ತ್ಪಾಟನ ಮಾಡಿದ ಮೇಲೆ ತಾನು ಹಿಂತಿರುಗುವುದಾಗಿಯೂ ಸ್ಪಷ್ಟಪಡಿಸು ತ್ತಾನೆ. ಮಹಾಭಾರತದಲ್ಲಿ ಈ ಪ್ರಸಂಗದ ಉಲ್ಲೇಖವೇ ಇಲ್ಲ. ಒಂದರ್ಥ ದಲ್ಲಿ ಅಲ್ಲಿ ಎಲ್ಲವೂ ಕೃಷ್ಣನ ಕಣ್ಣ ಮುಂದೆಯೇ ಕೈಮೀರಿ ನಡೆಯು ವಂತೆ ತೋರುತ್ತದೆ. ಬೇಡನ ಬಾಣಕ್ಕೆ ದೇಹತ್ಯಾಗಮಾಡುವ ಶ್ರೀಕೃಷ್ಣ ನನ್ನು ಪುರಾಣಕಾರರು ಅರ್ಥಪೂರ್ಣವಾದ ಉಪಮೆಯಿಂದ ವರ್ಣಿಸುತ್ತಾರೆ. ಮುಳ್ಳನ್ನು ಮುಳ್ಳಿನಿಂದ ತೆಗೆದು ಎರಡನ್ನೂ ಎಸೆದುಬಿಡುವಂತೆ, ಲೋಕ ಕಂಟಕರನ್ನು ನಿರ್ಮೂಲನಮಾಡಿದ ಶ್ರೀಕೃಷ್ಣ ತನ್ನ ದೇಹವನ್ನೂ ಕಳಚಿ ಒಗೆದಂತೆ ಅದ್ಭುತ ದರ್ಶನವನ್ನು ಕಾಣುತ್ತಾರೆ. ಈ ಕೃಷ್ಣ ಭಗವಂತನೆ ಆಗುತ್ತಾನೆ. ಆದರೆ ಯದುವಂಶದ ಪತನಾಭಿಗಮನವನ್ನು ಮುಂಗಂಡ ಕೃಷ್ಣನ ಹೃದಯವೇಧೆಯನ್ನು ಹೃದಯಂಗಮವಾಗಿ ಚಿತ್ರಿಸುವ ವ್ಯಾಸಭಾರತ ಅವನನ್ನು ಮನುಷ್ಯಸಮೀಪನನ್ನಾಗಿ ಮಾಡುತ್ತದೆ. ಸಂಮಥಿತ ಅರಣಿಯ ದಾರುವಿನ ಒಳಗು ದಹಿಸುವಂತೆ, ತನ್ನವರ ಅಂತಃಕಲಹ ತನ್ನ ಒಳಗನ್ನು ಸುಡುತ್ತಿದೆ ಎಂದು ಹೇಳಿದ ಕೃಷ್ಣನೆ, ಜೂಜಾಳಿ ಮಕ್ಕಳಿಬ್ಬರ ತಾಯಿ ಹೊರುವ ಹರಕೆಯ ಮಾತನ್ನು ಆಡುತ್ತಾನೆ, ಭಾರತದಲ್ಲಿ. ಈ ಉಭಯ ಕೂಲದ ನಡುವೆ ಯುಗಸಂಧ್ಯಾಕಾವ್ಯ ಹರಿಯುವಂತೆ ಕಾಣುತ್ತದೆ.

ಯುದ್ಧೋತ್ತರ ಭಾರತಕಥೆ ಪಾಂಡವರ ಗೆಲವಿನಿಂದ ಪ್ರಾರಂಭ ವಾಗುತ್ತದೆಯಾದರೂ ಆ ಗೆಲವಿನ ನಲವು ಅಮಿಶ್ರಿತವಾಗಿರಲಿಲ್ಲ. ಸಾವಿನ ಬೇಗೆ ಗೆದ್ದವರನ್ನೂ ಸೋತವರನ್ನೂ ಸಮಾನವಾಗಿ ತೆಕ್ಕೆಗೊಂಡಿತ್ತು. ಮಿಗಿ ಲಾಗಿ, ಗೆದ್ದವರು ಸೋತು ಸತ್ತವರ ಬಂಧುಗಳ ಜೊತೆಯಲ್ಲೆ ಒಡಬಾಳ ಬೇಕಾಗಿತ್ತು. ತನಿಯಾಗಿ ತಮ್ಮ ಅನುಭವವನ್ನು ಬಾಳಲಾರದೆ ಉಭಯರೂ ಬಳಲುತ್ತಾರೆ. ತವರಿನಲ್ಲೆ ಪರಕೀಯತೆಯನು ಬಾಳಬೇಕಾಗುತ್ತದೆ. ಹೊಸ ಪರಿಸರದಲ್ಲಿ ಹಳೆಯ ಭಾವನೆಗಳು ಹೊಸನೆಲೆಯನ್ನು ಕಂಡುಕೊಳ್ಳಲಾಗದೆ, ಹಳೆಯ ನೆಲೆಯನ್ನು ಬಿಡಲಾಗದೆ ತೊಳಲುತ್ತವೆ. ಗೆಲುವ ಬಯಕೆಯ ಉತ್ಕಟತೆಯಲ್ಲಿ ಕಾಣಲಾಗದಿದ್ದ ಧರ್ಮಾಧರ್ಮದ ನೆಲೆಬೆಲೆಗಳು, ವಿಜಯಾನಂತರದ ಘಳಿಗೆಯಲ್ಲಿ ತಮ್ಮ ಸಹಜವರ್ಣವನ್ನು ಕಂಡುಕೊಳ್ಳ ತೊಡಗುತ್ತವೆ. ವಿಪುಲಕ್ರಿಯೆಯಿಂದ ತುಂಬಿರದ ಯುದ್ಧೋತ್ತರದಿನದ ಜನಮನಸ್ಸನ್ನು ಹಳೆಯ ಅನುಭವಗಳ ನೆನಪೆ ಹೆಚ್ಚು ಕಾಡುವುದು ಸಹಜ. ಸೋತು ಅಸಹಾಯಕರಾದವರಲ್ಲಿ ಅದು ಮತ್ತೂ ಅಧಿಕ. ಅರಗದ ಅನುಭವಗಳನ್ನು ಮೆಲುಕುತ್ತಾ ಅರಗಿಸಿಕೊಳ್ಳುವ ಕ್ರಿಯೆಯಲ್ಲಿ ಅವರು ತೊಡಗುತ್ತಾರೆ. ಈ ಎಲ್ಲವನ್ನೂ ಚಿತ್ರಿಸಲೆಳಸುವ ಈ ಕಾವ್ಯ ವ್ಯಾಸಭಾರತದಲ್ಲಿ ಹಲವೆಡೆ ಹೂಡಿಕೊಂಡಿರುವ ಚಿತ್ರಣಗಳನ್ನು ಮತ್ತೆ ಮತ್ತೆ ಬಳಸಿಕೊಳ್ಳುತ್ತದೆ. ಸಮಗ್ರ ಕಥಾದೃಷ್ಟಿಗೆ ಒಪ್ಪಂದವಾಗುವ, ಆದರೆ ವ್ಯಾಸಕಥಾದೃಪ್ಟಿಗೆ ಅಪಚಾರವಾಗದ ಹೊಸ ಪ್ರಸಂಗಗಳನ್ನೂ ಕಲ್ಪಿಸಿ ಕೊಳ್ಳಲಾಗಿದೆ. ನಾಲ್ಕೆಂಟು ಪ್ರಸಂಗಗಳನ್ನು ವ್ಯಾಸಭಾರತದಲ್ಲಿರುವಂತೆಯೆ ನಿರೂಪಿಸಲಾಗಿದೆ. ವ್ಯಾಸಕಥೆಯಲ್ಲಿಲ್ಲದ, ಆದರೆ ಪುರಾಣಕಾರರಲ್ಲಿ ಬರುವ ಸಾಂಬ ಲಕ್ಷಣೆಯರ ಪ್ರಸಂಗಕ್ಕೆ ಒಂದು ರೂಪ ಕೊಡಲಾಗಿದೆ. ಒಟ್ಟಿನಲ್ಲಿ ವ್ಯಾಸರ ಹಿಂದೆಯೆ ಪುಟ್ಟ ಅಡಿಯಿಡುತ್ತ ನಡೆದಿರುವ ಈ ಕಾವ್ಯಗತಿ ಯಾವ ನೆಲೆಯನ್ನು ಮುಟ್ಟಿದೆಯೊ ಓದುಗರೆ ತಿಳಿಸಬೇಕು.

ಹತ್ತು ವರ್ಷಗಳ ಸಮಯವನ್ನು ತೆಗೆದುಕೊಂಡ ಈ ಕಾವ್ಯನಿರ್ಮಿತಿ ಬರಹ ರೂಪದಲ್ಲಿ ಪ್ರಾರಂಭಗೊಂಡುದು ೧೧.೧೨.೧೯೮೮; ಮುಗಿದದ್ದು ೫.೭.೧೯೯೮. ಆದರೆ ಕಥಾಸತ್ತ್ವವಾಗಿ ಚಿತ್ತದಲ್ಲಿ ಬೀಜಾಂಕುರಗೊಂಡದ್ದು ೧೯೬೦ಕ್ಕೂ ಹಿಂದೆಯೆ. ಕುಮಾರವ್ಯಾಸಬಾರತದ ಜನಪ್ರಿಯ ಆವೃತ್ತಿಯ ಪ್ರಕಾಶನವನ್ನು ೧೯೫೫ರಲ್ಲಿ ಕೈಗೊಂಡ ಕರ್ನಾಟಕದ ಅಂದಿನ ಮುಖ್ಯ ಮಂತ್ರಿಗಳಾದ ಶ್ರೀ ಕೆ. ಹನುಮಂತಯ್ಯನವರು ಅದರ ಸಂಪಾದವ ಕಾರ್ಯವನ್ನು ಶ್ರೀ ಕುವೆಂಪು ಮತ್ತು ಶ್ರೀ ಮಾಸ್ತಿಯವರಿಗೆ ವಹಿಸಿದಾಗ, ಗುರುಕೃಪೆಯಿಂದ ನನಗೆ ಆ ಮಹಾಕಾರ್ಯದಲ್ಲಿ ಕರಡಚ್ಚು ನೋಡುವ ಸೇವೆ ಸಲ್ಲಿಸುವ ಪಾತ್ರ ಲಭಿಸಿತು. ನಲವತ್ತು ಸಾವಿರ ಪ್ರತಿಗಳ ಮುದ್ರಣಕಾರ್ಯ ಮೈಸೂರಿನ ಸರ್ಕಾರಿ ಮುದ್ರಣಾಲಯದಲ್ಲಿ ಮೂರು ವರ್ಷದ ತನಕ ನಡೆಯಿತು. ಅದರಿಂದಾಗಿ ನನಗೆ ಆ ಮಹಾಕಾವ್ಯದ ತಕ್ಕಮಟ್ಟಿನ ಓದು ಸಾಧ್ಯವಾಯಿತು. ಆ ವೇಳೆಗಾಗಲೆ ಪ್ರಸಿದ್ಧವಾಗಿದ್ದ ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳ ಅದ್ವಿತೀಯವಾದ ‘ವಚನಭಾರತ’ ವ್ಯಾಸಕಥೆಯ ಸೀಮಾ ವ್ಯಾಪ್ತಿಯನ್ನು ತೋರಿಸಿ, ಪಂಪ ಕುಮಾರವ್ಯಾಸರ ಭಾರತಕಥೆಯ ಅರಕೆಯನ್ನು ಮನದಟ್ಟು ಮಾಡಿಕೊಟ್ಟಿತ್ತು. ನನ್ನ ವಿಲಕ್ಷಣಭಾವನೆಯನ್ನು ಹಿರಿಯ ಗುರುವರ್ಗದಲ್ಲಿ ತೋಡಿಕೊಂಡೆ; ಬಗೆಬಗೆಯ ಉತ್ತರವನ್ನು ಪಡೆದುಕೊಂಡೆ. “ಪಂಪ ಕುಮಾರವ್ಯಾಸರು ಮಾಡಿರುವ ಕಾವ್ಯಮುಕ್ತಾಯವೆ ಯುಕ್ತವಾದುದು; ಗೆದ್ದ ಮೇಲೆ ಕಥೆಯಲ್ಲಿ ಏನು ತಾನೆ ಇದೆ?” ಹಿರಿಯ ವಿಮರ್ಶಕರೊಬ್ಬರ ಈ ಉತ್ತರಕ್ಕೆ ತೃಪ್ತನಾಗದೆ, “ವ್ಯಾಸರು ಅಲ್ಲಿಗೆ ನಿಲ್ಲಿಸದೆ ವಿನಾಶದ ಕಥೆಯ ಚಿತ್ರವನ್ನೂ ನೀಡಿ, ದೇಹೋತ್ತರಣದ ಸ್ವರ್ಗಾರೋಹಣದಲ್ಲಿ ಕಾವ್ಯವನ್ನು ನಿಲ್ಲಿಸಿದ್ದಾರೆಂ"ದು ವಿವರಿಸಿದೆ. ಅದಕ್ಕೆ ಸಂತೋಷಗೊಳ್ಳದ ಆ ಹಿರಿಯರು, ಅದನ್ನು ಬರೆದ ಕವಿಯ ಬುದ್ಧಿ ನಿಶ್ಚೇಷ್ಟಿತವಾಗಿದ್ದಿರಬೇಕೆಂದರು. ಉತ್ತರದಿಂದ ಸಮಾಧಾನಗೊಳ್ಳದ ನಾನು ಪಆಜ್ಯಗುರು ಕುವೆಂಪು ಅವರಲ್ಲಿ ಒಮ್ಮೆ ಪ್ರಸ್ತಾಪಿಸಿದೆ. "ಯುದ್ಧೋತ್ತರ ಮಹಾಭಾರತಕಥೆಯ ಕಿಂಚಿದ್ದರ್ಶನವನ್ನು ‘ಶ್ಮಶಾನ ಕುರುಕ್ಷೇತ್ರ’ದಲ್ಲಿ ನೀಡಿರುವ ಕವಿಗಳು, ಪಂಪ ಕುಮಾರವ್ಯಾಸರು ಬಿಟ್ಟಿರುವ ವ್ಯಾಸಕಥೆಯ ಭಾಗವನ್ನೇಕೆ ಪುನಃಸೃಷ್ಟಿಸಿ ಸಮಗ್ರದರ್ಶನವನ್ನು ನೀಡಬಾರದು?" ಹೀಗೆಂದು ಕೇಳಿದ ನಾನು, ಗುರುಗಳ ಉತ್ತರ ನಿರಾಶಾದಾಯಕ ವಾದುದಾಗದಿರಲಿ, ಎಂದು ಹಾರೈಸಿದೆ. "ಆಗಲೆ ಮಹಾಕಾವ್ಯವೊಂದನ್ನು ಕೊಟ್ಟಿರುವ ತಾಯಿ ಸರಸ್ವತಿಯಲ್ಲಿ ಮತ್ತೊಂದನ್ನು ಬಯಸುವುದು ಹೆಚ್ಚೆನಿಸುತ್ತದೆ." ಗುರುಗಳ ಈ ಉತ್ತರದಿಂದ ನಾನು ಪುಲಕಿತನಾದೆ. ಈ ಘಟನೆ ನಡೆದದ್ದು ೧೯೬೦-೬೧ರಲ್ಲಿ. ʼಬೆರಳ್ಗೆ ಕೊರಳ್ʼ ನಾಟಕದಲ್ಲಿ ಕರ್ಮತತ್ವದ ಜಟಿಲಜಾಲ ಮಹಾಭಾರತ ಕಥೆಯನ್ನು ಹೇಗೆ ಸೂಕ್ಷ್ಮವಾಗಿ ಬಿಗಿದಿದೆ ಎಂಬುದನ್ನು ದರ್ಶಿಸಿರುವ ಕುವೆಂಪು ಅವರು, ಆ ನಾಟಕದ ಮುಂದುವರಿಕೆಯಾಗಿ ಮತ್ತೆರಡು ನಾಟಕಗಳನ್ನು ಬರೆಯಬೇಕೆಂದಿದ್ದರು. ‘ಕೊರಳ್ಗೆ ಕರುಳ್’, ‘ಕರುಳ್ಗೆ ಕುರುಳ್’ ಎಂಬೆರಡು ನಾಟಕಗಳಲ್ಲಿ, ಇದೇ ಕರ್ಮಸೂತ್ರ ತನ್ನ ವಿಸ್ತಾರವಾದ ಜಾಲವನ್ನು ಮಹಾಭಾರತದ ಉದ್ಧಗಲಕ್ಕೂ ಹೆಣೆಯುವುದನ್ನು ಚಿತ್ರಿಸುವ ಆಶೆ ಕುವೆಂಪು ಅವರಿಗಿತ್ತು. ಆ ಅದ್ಭುತ ನಾಟಕಗಳಲ್ಲಿ ವ್ಯಾಸಭಾರತ ಮತ್ತೊಂದು ಹೊಸನೋಟದಿಂದ ಪುನಃಸೃಷ್ಟಿಗೊಳ್ಳುವ ಸಾದ್ಯತೆಯಿತ್ತು. ಆ ಯೋಗ ಕನ್ನಡಕ್ಕೆ ತಪ್ಪಿತು. ಈ ಎಲ್ಲ ಕಾರಣದಿಂದಾಗಿ ಆ ದಿನಗಳಲ್ಲಿ ನನ್ನ ತಲೆಯಲ್ಲಿ ಯುದ್ಧೋತ್ತರ ಭಾರತಕಥೆಯೆ ತುಂಬಿತ್ತು. ಅದರಿಂದ ಬಿಡಿಸಿಕೊಳ್ಳುವ ವಿಧಾನವಾಗಿ ಯುಗಸಂಧ್ಯಾ ಕಾವ್ಯ ಹೇಗೊ ಒಳಗೆ ರೂಪಗೊಳ್ಳುತ್ತಿತ್ತು.

ಇದಕ್ಕೆ ಪೋಷಕವಾದ ಅಂಶವೊಂದನ್ನು ಇಲ್ಲಿ ಹೇಳಲೇಬೇಕು. ಭಾರತಕಥೆಯ ನನ್ನ ಮೋಹಕ್ಕೆ ನನ್ನ ತಾತ ಹೆಚ್ಚು ಕಾರಣ. ಹೆಬ್ಬೆರಳು ಬರಹದ ಆ ಪುಣ್ಯಾತ್ಮ ಮನಮುಟ್ಟುವಂತೆ ಮಹಾಭಾರತದ ಕಥೆಯನ್ನು ನಿರೂಪಿಸುತ್ತಿದ್ದರು. ಇದರ ಜೊತೆಗೆ ಕುಮಾರವ್ಯಾಸಭಾರತ ವಾಚನ ನಮ್ಮ ಮನೆಯಲ್ಲಿ ನಲವತ್ತರ ದಶಕದಲ್ಲಿ ದಿನವೂ ನಡೆಯುತಿತ್ತು. ಇಂದು ಇದ್ದರೆ ತೊಂಬತ್ತೊಂಬತ್ತು ವರ್ಷ ತುಂಬಿ ನೂರಕ್ಕೆ ಅಡಿಯಿಡುತ್ತಿದ್ದ ನನ್ನ ತಂದೆಯವರು ೧೯೪೨ರಷ್ಟು ಹಿಂದೆಯೆ ಕುಮಾರವ್ಯಾಸಭಾರತ ಮತ್ತು ಕನ್ನಡ ಭಾಗವತದ ಮಾರುಕಟ್ಟೆಯ ಪ್ರತಿಗಳನ್ನು ಕೊಂಡು ತಂದಿದ್ದರು. ಗಮಕಿಗಳಿಲ್ಲದಾಗ ಅವರೇ ಓದಿಕೊಳ್ಳುತಿದ್ದರು. ಕಥೆಯ ಜೊತೆಗೆ ಹೆಚ್ಚು ತತ್ತ್ವನಿರೂಪಣೆಯ ಕಥಾಭಾಗವನ್ನು ಇಷ್ಟಪಡುತ್ತಿದ್ದ ಅವರು ಯುದ್ಧೋತ್ತರ ಕಥೆಯ ಭಾಗವನ್ನು, ಭಾಗವತದ ಕೃಷ್ಣಕಥೆಯ ಭಾಗವನ್ನು ಓದಿಕೊಳ್ಳುತ್ತಿದ್ದರು. ಕಾಲೇಜಿನಲ್ಲಿ ಓದುತ್ತಿದ್ದ ನನ್ನನ್ನು ಆ ಭಾಗಗಳ ವಾಚನಕ್ಕೆ ಒಪ್ಪಿಸುತ್ತಿದ್ದರು! ತಿಮ್ಮಣ್ಣ ಕವಿಯ ಕಥಾನಿರೂಪಣದಲ್ಲಿ ರಸವಂತಿಕೆಯಿಲ್ಲವೆಂದು ನಾನು ವಾಚನವನ್ನು ಒಲ್ಲದ ಮನಸ್ಸಿನಿಂದ ಸ್ವೀಕರಿಸಿ ನಾಲ್ಕೆಂಟು ಪದ್ಯಗಳಲ್ಲಿಯೇ ನಿಲ್ಲಿಸಿಬಿಡುತ್ತಿದ್ದೆ. ೧೯೫೦ರ ದಶಕದ ಮೊದಲನೆಯ ಭಾಗದಲ್ಲಿ ನಡೆದ ಈ ಘಟನೆಯಲ್ಲಿ ವ್ಯಾಸಭಾರತದ ಯುದ್ದೋತ್ತರ ಕಥೆಯ ಲೋಕ ನನ್ನ ಮುಂದೆ ತೆಳುವಾಗಿ ನಿಂತಿರುತ್ತಿತ್ತು.


ಪುಟಗಳು: 444
 
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)