ಈ ಕವಿತೆಗಳು ಬರೆಯಬೇಕೆಂದು ಬರೆದದ್ದಲ್ಲ, ಒಂದೇ ಸಮಯದಲ್ಲಿ ಬರೆದಿದ್ದಲ್ಲ. ಯಾವ್ಯಾವುದೋ ಸಂದರ್ಭದಲ್ಲಿ, ತೋಚಿದ್ದನ್ನು ಗೀಚಿದ್ದು. ಇನ್ಯಾವಾಗಲೋ ಓದಿ ಒಂದಿಷ್ಟು ಗೀಟು ಹಾಕಿ, ಮತ್ತೆ ಹೊಸ ಸಾಲುಗಳ ಸೇರಿಸಿದ್ದು. ಸಾಮಾಜಿಕವಾದ, ವೈಯಕ್ತಿಕವಾದ, ಬಂಧವಿಲ್ಲದ, ಆಳವಾಗಿ ಪ್ರಭಾವ ಬೀರಿದ ಹೀಗೆ ಎಲ್ಲ ವಿಚಾರಗಳ ಬಗ್ಗೆಯೂ ಬರೆದ ಕವಿತೆಗಳಿವು.
ಪೆನ್ನು ಹಿಡಿದು ಬರೆದ ಮೊದಲ ಕವಿತೆ 'ಆತ್ಮವಿಶ್ವಾಸ'ವೂ ಇದರಲ್ಲಿದೆ. ಈಗ ಓದಿದಾಗ ಬಾಲಿಶವೆನಿಸಿದರೂ, ಬರೆಯಬಹುದೆಂಬ ಧೈರ್ಯ ಬಂದಿದ್ದು ಆ ಕವಿತೆಯಿಂದ. ಆ ಕವಿತೆ ಯಾವತ್ತೂ ಮನಸ್ಸಿಗೆ ಆಪ್ತ. ಹಾಗೆಯೇ ಪ್ರೀತಿ ಬಂದಾಗ, ಭ್ರಮ ನಿರಸನವಾದಾಗ, ಸಿಟ್ಟು ಬಂದಾಗ ಬರೆದ ಕವಿತೆಗಳೂ ಇಲ್ಲಿವೆ. ಅಬ್ಬಲಿಗೆ ಹೂವುಗಳೆಂದರೆ ನನ್ನ ಅಜ್ಜಿಗೆ ಬಹಳ ಇಷ್ಟವಾಗಿದ್ದವಂತೆ, ನನಗೆ ನನ್ನ ಕವಿತೆಗಳ ತರಹ. ಅಬ್ಬಲಿಗೆ ಹೂವುಗಳಿಗೆ ಜನಪ್ರಿಯವಾದ ಪರಿಮಳವಿಲ್ಲ, ದುಬಾರಿಯೂ ಅಲ್ಲ, ನನ್ನ ಕವಿತೆಗಳ ಹಾಗೆ. ಹಾಗೆಂದು ಎಲ್ಲರ ಕೈಗೆಟುಕುವ ಹೂವುಗಳೂ ಇವಲ್ಲ, ಹುಡುಕಿ ಹೋದರೆ, ಕಣ್ಣಿಗೆ ಹಿತ ನೀಡುವ ನಾಜೂಕಾದ ಹೂವುಗಳಿವು. ನನ್ನ ಪದಗಳೂ ಹಾಗೆಯೇ. ದಂಡೆ ಕಟ್ಟಿ ನಿಮ್ಮ ಮುಂದಿಟ್ಟಿದ್ದೇನೆ. ಇಷ್ಟವಾದರೆ ಹೇಳಿ, ಇಷ್ಟವಾಗದಿದ್ದರೂ ಹೇಳಿ. ಪದಗಳು, ಭಾವಗಳು ನನ್ನವಾದರೂ ಓದುವ ಕಂಗಳು, ಅರ್ಥೈಸುವ ಬುದ್ಧಿ ನಿಮ್ಮದಲ್ಲವೇ? ಓದಿ, ಹೇಗನಿಸಿತು ಎಂದು ಹೇಳುವಿರೆಂಬ ನಂಬಿಕೆಯೊಂದಿಗೆ,
ಮೈತ್ರೇಯಿ ಹೆಗಡೆ