ಪ್ರಸ್ತುತ ಕೃತಿಯಲ್ಲಿ ನಾನು ಈ ಯೋಗಕ್ಕೆ ಸಂಬಂಧಿಸಿದ ವಿಚಾರಗಳಲ್ಲಿನ ಆಯ್ದ ಸಂಗತಿಗಳನ್ನು ಕುರಿತಂತೆ ಪ್ರಸ್ತಾಪಿಸಿದ್ದೇನೆ. ಈ ಯೋಗವೆಂದರೆ ಆಸನಗಳು ಮಾತ್ರವಲ್ಲ ತದ ನಂತರದ ಯೋಗದ ವ್ಯಾಪ್ತಿಯಲ್ಲಿರುವ ಮುಂದಿನ ಹಂತಗಳು ಯಾವುವು ಎನ್ನುವ ಪ್ರಶ್ನೆ ನನಗೆ ಆಗಾಗ ಕಾಡುತ್ತಿತ್ತು. ಈ ಕುರಿತಂತೆ ಅಷ್ಟಿಷ್ಟು ತಿಳಿದುಕೊಂಡಿದ್ದ ನನಗೆ ಈ ಬಗ್ಗೆ ಚಿಕ್ಕದಾದ ಕೃತಿ ರಚಿಸಬೇಕೆಂಬ ಹಂಬಲ ಮೊಳೆಯತೊಡಗಿತು. ಆ ಹಂಬಲದ ಪ್ರಯತ್ನವಾಗಿ ಈ ಕೃತಿ ರೂಪಗೊಂಡಿದೆ. ಇಲ್ಲಿ ನನಗೆ ಯೋಗ, ಯೋಗಸಾಧಕ, ಯೋಗದ ಪರಿಭಾಷೆಯಲ್ಲಿ ದೇಹ, ಆತ್ಮ ಮತ್ತು ಆಧ್ಯಾತ್ಮ, ಯೋಗ, ಯೋಗಾಸನ ಪ್ರಾರ್ಥನೆ, ಧ್ಯಾನ ಮತ್ತು ಭಜನೆ, ಯೋಗ ಮತ್ತು ಸಮಾಧಿ ಸ್ಥಿತಿ ಹಾಗೂ ಅಧಿಕಾರ ಲಕ್ಷಣಗಳು, ಯೋಗ ಮತ್ತು ಅನುಭಾವ ಕುರಿತ ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. ಯೋಗಾಭ್ಯಾಸಿಗಳು ಮತ್ತು ಇತರರೂ ಸಹ ತಮ್ಮ ಆನಂದಮಯ ಜೀವನ ನಿರ್ವಹಣೆಯ ಮಾರ್ಗವನ್ನು ಅರ್ಥೈಸಿಕೊಳ್ಳುವಲ್ಲಿ, ಅನುಸರಿಸುವಲ್ಲಿ ಈ ರೀತಿಯ ವಿಚಾರಗಳ ಚಿಂತನ, ಮಂಥನ ಅಗತ್ಯವೆಂಬುದು ನನ್ನ ಅನಿಸಿಕೆ. ಕೃತಿ ಕುರಿತಂತೆ ಓದುಗರು ನೀಡುವ ಅಭಿಪ್ರಾಯಗಳನ್ನು ಸದಾ ಗೌರವದಿಂದ ಸ್ವಾಗತಿಸುತ್ತೇನೆ.