ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
‘ವ್ಯಕ್ತಿತ್ವ’ ಎಂಬುದು ವ್ಯಕ್ತಿಗೆ ವಿಶಿಷ್ಟವಾದದ್ದು. ಒಬ್ಬನಂತೆ ಇನ್ನೊಬ್ಬನಿಲ್ಲ. ವ್ಯಕ್ತಿತ್ವದಲ್ಲಿ ವ್ಯಕ್ತಿ ಹೇಗೆ ಆಲೋಚಿಸುತ್ತಾನೆ, ಹೇಗೆ ಮಾತಾಡುತ್ತಾನೆ, ಹೇಗೆ ನಡೆದುಕೊಳ್ಳುತ್ತಾನೆ, ಹೇಗೆ ಭಾವನೆಗಳನ್ನು ಪ್ರಕಟಿಸುತ್ತಾನೆ, ಅವನ ನಂಬಿಕೆ ಧೋರಣೆಗಳೇನು, ಯಾವ ಸಂದರ್ಭ ಸನ್ನಿವೇಶದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾನೆ, ಇತರರೊಡನೆ ಅವನ ಸಂಬಂಧ ಹೇಗೆ, ಹೇಗೆ ಬದುಕುತ್ತಾನೆ, ಕಷ್ಟ - ನಷ್ಟ, ಸೋಲು - ನಿರಾಶೆಗಳಾದಾಗ ಏನು ಮಾಡುತ್ತಾನೆ, ಅವನ್ನು ಹೇಗೆ ನಿಭಾಯಿಸುತ್ತಾನೆ, ಎಷ್ಟು ಸ್ವಾರ್ಥ, ಎಷ್ಟು ಪರಹಿತ, ನ್ಯಾಯ ಧರ್ಮವನ್ನು ಪಾಲಿಸುತ್ತಾನೆಯೆ, ಅನ್ಯಾಯ - ಅಧರ್ಮದ ದಾರಿ ಹಿಡಿಯುತ್ತಾನೆಯೇ, ವಿಷಯ ಲಂಪಟನೇ, ಪರಿಸ್ಥಿತಿ ಪ್ರಲೋಭನೆಗಳಿಂದ ಅಪರಾಧ ಮಾಡಲು ನಿರಾಕರಿಸುತ್ತಾನೆಯೇ ಅಥವಾ ಅಪರಾಧ ಮಾಡಲು ಮುಂದಾಗುತ್ತಾನೆಯೇ, ಆತ ಸಮಾಜಮುಖಿಯೇ, ಸಮಾಜ ಕಂಟಕನೇ, ಆತ ದಯಾವಂತನೇ, ಕ್ರೂರಿಯೇ, ಅಂಜು ಬುರುಕನೇ ಧೈರ್ಯಶಾಲಿಯೇ, ಆತ ತೃಪ್ತನೇ ಅತೃಪ್ತನೇ - ಹೀಗೆ ಹಲವಾರು ಅಂಶಗಳು ಅಡಕವಾಗಿವೆ.
ಸುಮಾರು ಇಪ್ಪತ್ತು ವರ್ಷಗಳ ಕಾಲ ವಿಕಸನಗೊಳ್ಳುವ ವ್ಯಕ್ತಿತ್ವದಲ್ಲಿ, ಗಂಭೀರವಾದ ನ್ಯೂನತೆ ಕೊರತೆ ದೋಷಗಳು ರೂಪುಗೊಳ್ಳುವುದುಂಟು. ಈ ವ್ಯಕ್ತಿತ್ವ ದೋಷವನ್ನು ಪರ್ಸನಾಲಿಟಿ ಡಿಸಾರ್ಡರ್ಸ್ (Personality Disorders) ಎಂದು ಮನೋವೈದ್ಯ ವಿಜ್ಞಾನ ಹೆಸರಿಸಿದೆ. ವ್ಯಕ್ತಿತ್ವ ದೋಷಗಳನ್ನು ಮಾನಸಿಕ ಕಾಯಿಲೆಗಳೆಂದು ವ್ಯಕ್ತಿಯೂ ಒಪ್ಪುವುದಿಲ್ಲ. ಕುಟುಂಬದವರೂ ಒಪ್ಪುವುದಿಲ್ಲ. ಪರ್ಸನಾಲಿಟಿ ಡಿಸಾರ್ಡರ್ಸ್ಗೆ ನಿರ್ದಿಷ್ಟ ಹಾಗೂ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳೂ ಇಲ್ಲ. ಮನೋಚಿಕಿತ್ಸೆ ನಡವಳಿಕೆ ಚಿಕಿತ್ಸೆ ಮುಖಾಂತರ ವ್ಯಕ್ತಿತ್ವವನ್ನು ಸುಧಾರಿಸಬಹುದು. ದೋಷವನ್ನು ತಗ್ಗಿಸಬಹುದು. ಆದರೆ ವ್ಯಕ್ತಿ ಈ ಪ್ರಕ್ರಿಯೆಯಲ್ಲಿ ಸ್ವ ಇಚ್ಛೆಯಿಂದ ಪಾಲ್ಗೊಳ್ಳಬೇಕು. ಬಹುತೇಕ ವ್ಯಕ್ತಿತ್ವ ದೋಷವುಳ್ಳವರು ಈ ತರಪೇತಿ ಸುಧಾರಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಪ್ಪುವುದಿಲ್ಲ. ವ್ಯಕ್ತಿತ್ವ ದೋಷಗಳಲ್ಲಿ ನಿರಪಾಯಕಾರಿ ಸ್ಕಿಜಾಯಿಡ್ ಡಿಸಾರ್ಡರ್ನಿಂದ ಹಿಡಿದು ಸಮಾಜ ವಿರೋಧಿ ವ್ಯಕ್ತಿತ್ವದಂತಹ ಅಪಾಯಕಾರಿ ದೋಷದವರೆಗೆ ವೈವಿಧ್ಯಮಯ ವಿಧಗಳನ್ನು ವಿಂಗಡಿಸ ಲಾಗಿದೆ. ಈ ಪುಸ್ತಕದಲ್ಲಿ ಈ ಎಲ್ಲ ವಿವರಗಳನ್ನು ನೀಡಿದ್ದೇನೆ. ವ್ಯಕ್ತಿತ್ವ ದೋಷವುಳ್ಳ ವ್ಯಕ್ತಿಗಳನ್ನು, ಮನೆಯವರು ಮತ್ತು ಸಮಾಜ ನಿಭಾಯಿಸಲು ಈ ಪುಸ್ತಕ ನೆರವಾಗಲಿ ಎಂದು ನನ್ನ ಹಾರೈಕೆ.
- ಡಾ|| ಸಿ. ಆರ್. ಚಂದ್ರಶೇಖರ್
ಪುಟಗಳು: 80
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !