ಪ್ರಕಾಶಕರು: ಸಾವಣ್ಣ
Publisher: Sawanna
ಡಾ. ವಿಷ್ಣುವರ್ಧನ್ ಅಂದ ತಕ್ಷಣ ಅವರ ಸಿನಿಮಾ, ನಟನೆ, ಸ್ಟಾರ್ ಡಮ್‌ಗಳ ಹೊರತಾಗಿ ಅವರ ಎರಡು ಗೆಶ್ಚರ್‌ಗಳು ನೆನಪಾಗುತ್ತವೆ.
ಒಂದು, ಡಾ.ರಾಜ್‌ಕುಮಾರ್ ಅವರ ಸಾರ್ಥಕ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮುಗ್ಧ ಅಭಿಮಾನಿ ಥರ ಹೂವಿನ ಹಾರವನ್ನು ತಂದು, ರಾಜ್‌ಕುಮಾರ್ ಅವರ ಕೊರಳಿಗೆ ಹಾಕಿ, ಇನ್ನೊಂದನ್ನು ರಾಜ್ ಅವರ ಕೈಯಿಂದ ಪಾರ್ವತಮ್ಮನವರಿಗೆ ಹಾಕಿಸಿ, ಅವರ ಪಕ್ಕ ನಿಂತು ಪ್ರೀತಿಯಿಂದ ತೋಳಬಳಸಿ ನಿಂತ ವಿಷ್ಣುವರ್ಧನ್.
ಇನ್ನೊಂದು, ‘ಈ ಬಂಧನ’ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ಅನಂತ್‌ನಾಗ್ ಬಗ್ಗೆ ಮಾತಾಡುತ್ತಾ ‘ಅನಂತ್ ಬಹಳ ಅದ್ಭುತ ನಟ’, ಆದರೆ ಇದಕ್ಕಿಂತ ಒಂದು ಮಾತು ಹೆಚ್ಚಿಗೆ ಆಡಿದರೂ ಕೃತಕ ಎನ್ನಿಸಿಬಿಡುತ್ತದೆ ಅಂತ ಪ್ರಾಮಾಣಿಕವಾಗಿ ಮಾತಾಡಿದ್ದು.
ಈ ಎರಡು ಪ್ರತ್ಯೇಕ ಘಟನೆಗಳಲ್ಲಿ ವಿಷ್ಣು ಅವರು ಎಷ್ಟು ಪ್ರಾಮಾಣಿಕರಾಗಿದ್ದರೋ, ಅವರು ಎದುರಿಗೆ ಸಿಕ್ಕಾಗಲೂ ಅಷ್ಟೇ ಪ್ರಾಮಾಣಿಕವಾಗಿ ಕಂಡಿದ್ದರು. ಸಣ್ಣ ಮಟ್ಟದ ಮೂಡಿ ಸ್ವಭಾವ, ತಮ್ಮನ್ನು ಪ್ರಶ್ನೆ ಮಾಡುವ ಪತ್ರಕರ್ತರ ಮೇಲೆ ಆ ಕ್ಷಣಕ್ಕೆ ಮಗುವಿನಂತೆ ಕಿರಿಕಿರಿಗೊಳಗಾಗುವ ನಡತೆ, ಎಲ್ಲರನ್ನೂ ಪರಿಚಯ ಇಟ್ಟುಕೊಂಡು ಮಾತಾಡಿಸುವ ಪ್ರೀತಿ, ಹುಲಿಮುದ್ದು- ಇವೆಲ್ಲವೂ ಅವರನ್ನು ಹೆಚ್ಚು ಸಹಜವಾಗಿ ಇರಿಸಿತ್ತು. ಹಾಗಾಗಿ ತೆರೆ ಮೇಲೆ ಎಷ್ಟು ಸಹಜ, ಗಾಢ ನಟನೋ, ನಿಜ ಬದುಕಿನಲ್ಲೂ ಅಷ್ಟೇ ಸಹಜವಾಗಿ ವಿಷ್ಣು ಅವರನ್ನು ನಾನು ನೋಡಿದ್ದೇನೆ.
ಸಿನಿಮಾ ಪತ್ರಕರ್ತನಾಗಿ ಕೆಲಸ ಮಾಡಿದ್ದರ ಫಲ, ನಮ್ಮ ಕಾಲದ ಇಬ್ಬರು ಐಕಾನ್‌ಗಳ ಜೀವಿತಾವಧಿಯಲ್ಲಿ ನಾನು ರಿಪೋರ್ಟಿಂಗ್‌ನಲ್ಲಿದ್ದೆ. ರಾಜ್‌ಕುಮಾರ್ ಅವರು ನಟನೆ ನಿಲ್ಲಿಸಿದ್ದರು, ವಿಷ್ಣುವರ್ಧನ್ ಅವರು ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರು. ಜ್ಯೇಷ್ಠ ಸಿನಿಮಾದಿಂದ ಮೊದಲ್ಗೊಂಡು ಅವರ ಕೊನೆಯ ‘ಸ್ಕೂಲ್ ಮಾಸ್ಟರ್, ‘ಆಪ್ತರಕ್ಷಕವರೆಗೆ ಎಲ್ಲ ಸಿನಿಮಾಗಳ ಪತ್ರಿಕಾಗೋಷ್ಠಿಗೂ ಹೋಗಿ, ಅವರನ್ನು ಹತ್ತಿರದಿಂದ ನೋಡಿ, ಮಾತಾಡಿಸುವ ಅವಕಾಶ ಒದಗಿ ಬಂದಿತ್ತು. ಅವರ ಅತ್ಯುತ್ಕೃಷ್ಟ ಸಿನಿಮಾ ಯುಗ ಅದು ಆಗಿಲ್ಲದೇ ಹೋದರೂ ಅವರ ಅತ್ಯುತ್ಕೃಷ್ಟ ಮಾತುಗಳನ್ನು ಕೇಳಿಸಿಕೊಳ್ಳುವ ಅವಕಾಶವನ್ನಂತೂ ನಮ್ಮ ತಲೆಮಾರಿನ ಪತ್ರಕರ್ತರು ಪಡೆದೆವು.
ನಾನು ತಿಳಿದ ಮಟ್ಟಿಗೆ ಎಲ್ಲಾ ಪತ್ರಿಕೆಗಳನ್ನೂ ಓದಿ-ಅವರ ಬಗೆಗೆ ಅಂತೆಯೇ ಅಲ್ಲ, ಮಿಕ್ಕ ಕಲಾವಿದರ ಬಗ್ಗೆ ಬರೆದಾಗಲೂ ಓದಿ, ಸಿನಿಮೇತರ ವಿಚಾರಗಳನ್ನೂ ಓದಿ-ಆ ಪತ್ರಕರ್ತರು ಯಾರು, ಎಲ್ಲಿಯವರು ಅಂತ ವಿಚಾರಿಸಿಕೊಂಡು ನೆನಪಿಟ್ಟುಕೊಂಡು ಸಿಕ್ಕಾಗ ಅದರ ಬಗ್ಗೆ ಮಾತಾಡುತ್ತಿದ್ದ ಏಕೈಕ ಸ್ಟಾರ್ ಅವರು.
-ವಿಕಾಸ ನೇಗಿಲೋಣಿ
ಪುಟಗಳು : 90
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !