ಪ್ರಕಾಶಕರು: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ
Publisher: Abivyakti Samskrutika Vedike
ನಾಗತಿಹಳ್ಳಿ ತಮ್ಮ ಬರಹಗಳಲ್ಲಿ ಒಮ್ಮೆ ಕವಿಯಾಗಿ, ಇನ್ನೊಮ್ಮೆ ಕಥೆಗಾರನಾಗಿ, ಅಲ್ಲಿ ಇಲ್ಲಿ ಆತ್ಮಶೋಧಕನಾದ ಚಿಂತಕನಾಗಿ, ಮುಚ್ಚುಮರೆಯಿಲ್ಲದ ಪ್ರೇಮಿಯಾಗಿ ನಿರೀಶ್ವರವಾದಿಯಾಗಿದ್ದೂ ತಾಯಿ-ತಂದೆಯ ಪ್ರೀತಿಗಾಗಿ ತನ್ನ ಹಳ್ಳಿಯಲ್ಲಿ ದೇವರ ಮಂಟಪ ಕಟ್ಟಿಸುವವನಾಗಿ ನಮಗೆ ಎದುರಾಗುತ್ತಾರೆ. ಈತ ನಮ್ಮ ಕಾಲದ ಚುರುಕಾದ ಕಣ್ಣಿನ, ಚುರುಕಾದ ಮಾತಿನ ಆಕರ್ಷಕ ಬರಹಗಾರ. ಕನ್ನಡ ಓದುಗರನ್ನು ಮಹತ್ವದ ಕೊಡುಗೆಗೆ ಕಾಯಿಸುತ್ತಿರುವ ಬರಹಗಾರ. ಇವರು ತೆರೆದಿಡುವ ಶೋಧಕ ಚಿಂತನಾಶೀಲತೆ ಇವರನ್ನು ಕಾಪಾಡುತ್ತದೆ ಎಂಬ ಭರವಸೆ ಈ ಕೃತಿಯ ನಿವೇದನೆಗಳಲ್ಲಿ ಎದ್ದುಕಾಣುವ ಗುಣ.
- ಯು.ಆರ್. ಅನಂತಮೂರ್ತಿ
ನಾಗತಿಹಳ್ಳಿ ಚಂದ್ರಶೇಖರ್ ನಮ್ಮ ನಾಡಿನ ಶ್ರೇಷ್ಠ ಪ್ರತಿಭೆಗಳಲ್ಲಿ ಒಬ್ಬರು. ಎಲ್ಲರಿಗಿಂತ ಭಿನ್ನವಾದ ಪ್ರತಿಭೆ ಉಳ್ಳವರು. ತನ್ನದೇ ಆದ ಗದ್ಯ ಶೈಲಿಯನ್ನು ರೂಪಿಸಿಕೊಂಡು ಕತೆಗಳನ್ನು ರಚಿಸಿದವರು. ಈತ ನಮ್ಮ ಕನ್ನಡದ ಅತ್ಯುತ್ತಮ ಕಥನಕಾರರಾದ ತೇಜಸ್ವಿ, ಲಂಕೇಶರಂತೆ ತನ್ನ ಶೈಲಿಯಿಂದಲೇ ಮೆಚ್ಚುಗೆಯಾಗುವ ಕತೆಗಾರ.
- ಡಾ. ಚಂದ್ರಶೇಖರ ಕಂಬಾರ
ಹೆಂಗರುಳಿನ ಗಂಡೆದೆಯ ನಾಗತಿಹಳ್ಳಿ, ಸದಾ ಚಿಗುರು ಮೀಸೆ ಕೆಳಗೆ ಮುಗುಳ್ನಗೆಯ ಜಿನುಗುವಾತ. ಅಕ್ಷರಗಳಿಗೆ ತುಂಟ ಕಂಗಳನ್ನು ಮುಡಿಸುವಾತ. ಒದ್ದೆ ತುಟಿಗಳಿಗೆ ಪ್ರೇಮದ ಓನಾಮ ಕಲಿಸುವಾತ. ಹಿಡಿ ಕತೆಗಳ ದ್ವಾರ ನಾಡ ತುಂಬ ಮೆರೆದಾತ.
- ಕು. ವೀರಭದ್ರಪ್ಪ
ನಾಗತಿಹಳ್ಳಿಯವರ ಸಮಾಜ ಪ್ರೀತಿ ಅವರ ಬರವಣಿಗೆಯಲ್ಲಿ ಮಡುಗಟ್ಟಿದೆ. ಅವರ ಆರೋಗ್ಯಪೂರ್ಣ ಚಿಂತನೆ ಓದುಗರನ್ನು ಜಾಗೃತಿಗೊಳಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿಯ ಬರವಣಿಗೆಯನ್ನು ಓದಿದಾಗ ಉಂಟಾಗುವ ಸಂತೋಷಕ್ಕೆ ಪಾರವಿಲ್ಲ.
- ಡಾ. ಸಿದ್ಧಲಿಂಗಯ್ಯ
ನನ್ನಂತವನಿಗೆ ಏನೇನು ಕನಸುಗಳು, ಆಸೆಗಳು ಇದ್ದವೋ ಅಂತಹ ಎಲ್ಲ ಕನಸುಗಳನ್ನು, ಆಸೆಗಳನ್ನು ವಾಸ್ತವಕ್ಕಿಳಿಸಿದ ಸಾಧಕನಾಗಿ ಚಂದ್ರು ನನಗೆ ಕಾಣಿಸುತ್ತಾರೆ. ವಲಸೆ ಹಕ್ಕಿಯ ಹಾಡು ಕಾದಂಬರಿಯ ನಾಯಕ ಕೆಂಚೇಗೌಡ ಕೇವಲ ಆದರ್ಶ ಪುರುಷನಲ್ಲ. ನನಗೆ ಯಾವಾಗಲು ಕಾಡುವಂತಹ ಪಾತ್ರ. ಚಂದ್ರು ಬಡತನವನ್ನು ಬಹಳ ಸೃಷ್ಟಿಶೀಲ ಗುಣವೆಂದು ಭಾವಿಸಿಕೊಂಡವರು. ಹಣ ಬಂದಾಗ ತಾನು ಬಡವನಾಗಿದ್ದೆ ಎಂಬುದನ್ನು ಮರೆತಿಲ್ಲ. ಬಡವನಾದಾಗ ತಾನು ಶ್ರೀಮಂತನಾಗುತ್ತೀನಿ ಅನ್ನುವ ಕನಸು ಬಿಟ್ಟಿಲ್ಲ. ಹೀಗೆ ಆರು ದಶಕದ ಬದುಕಿನ ಯಾತ್ರೆಯನ್ನು ನಡೆಸಿಕೊಂಡು ಬಂದಿರುವ ಇವರು ಯುವಕರಿಗೆ ಆದರ್ಶವಾಗಿ ಕಾಣುತಿದ್ದಾರೆ.
- ಪ್ರೊ. ಎಂ ಕೃಷ್ಣೇಗೌಡ
ವಲಸೆ ಹಕ್ಕಿಯ ಹಾಡು ಕಾದಂಬರಿಯ ಕೆಂಚೇಗೌಡ ಗಾಂಧಿವಾದಿಯ ಪಾತ್ರ. ನೊಂದವರ ಪರವಾಗಿ ಮೃದು ಹೃದಯವನ್ನು ಉಳ್ಳವನಾದ ಕೆಂಚೇಗೌಡ ಸ್ವತಂತ್ರನೆಂಬ ತನ್ನ ಮಗನ ಕಾರಣಕ್ಕಾಗಿ ದುರಂತಕ್ಕೀಡಾಗುತ್ತಾನೆ. ಸ್ವತಂತ್ರನೆಂಬ ಹೆಸರೇ ಸಂಕೇತವಾಗಿದ್ದು, ವ್ಯಕ್ತಿಯೊಬ್ಬನ ಆಧುನಿಕ ಯುಗದ ಸ್ವಾತಂತ್ರ್ಯ, ರಾಜಕಾರಣದ ಬಯಕೆಯನ್ನು ವ್ಯಂಗ್ಯವೆಂಬಂತೆ ನೋಡಲಾಗಿದೆ.
- ಡಾ. ಎಚ್.ಎಲ್. ಪುಷ್ಪ
ಪುಟಗಳು: 96
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !