ಓದಿದವರು :
ನವ್ಯಶ್ರೀ ಎಸ್ ಜಿ
ಆಡಿಯೋ ಪುಸ್ತಕದ ಅವಧಿ : 3 ಗಂಟೆ 18 ನಿಮಿಷ
ಪ್ರಕಾಶಕರು: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Publisher: Panchami Media Publications
ವೈಶಾಲಿ ಅಂದ್ರೆ ನಗುಮೊಗ
ವೈಶಾಲಿ ಅಂದ್ರೆ ಸಿನಿಮಾ, ರಂಗಭೂಮಿ, Back-stage
ವೈಶಾಲಿ ಅಂದ್ರೆ ಡೈರೆಕ್ಟರ್
ವೈಶಾಲಿ ಅಂದ್ರೆ ‘ಧ್ವನಿ’...
ಜೀವನಪ್ರೀತಿಗೆ ಇನ್ನೊಂದು ಹೆಸರೇ ‘ವೈಶಾಲಿ ಕಾಸರವಳ್ಳಿ’.
ನಿಖಿತಾರವರು ವೈಶಾಲಿಯನ್ನು ಸಂದರ್ಶಿಸಲು ಬಂದಾಗ ವೈಶಾಲಿಗೂ ತನ್ನ ಬಾಳ ಪಯಣ ಸದ್ಯದಲ್ಲೇ ಮುಗಿಯಲಿದೆ ಎನ್ನುವ ಅನ್ನಿಸಿಕೆ ಆರಂಭವಾಗಿತ್ತೇನೋ. ಸಾವಿನ ಮನೆಯ ಹೊಸ್ತಿಲನ್ನು ಆ ವೇಳೆಗಾಗಲೇ ಮೂರ್ನಾಲ್ಕು ಬಾರಿ ಮುಟ್ಟಿ ಬಂದಿದ್ದರಿಂದ ತನ್ನ ವೃತ್ತಿ ಜೀವನದ ಅನೇಕ ಕಹಿ ಘಟನೆಗಳನ್ನು ಪ್ರಸ್ತಾಪಿಸದೇ ಸುಖದ ಕ್ಷಣಗಳನ್ನು ಮಾತ್ರ ನೆನಪಿಸಿಕೊಂಡಿದ್ದಾಳೆ. ನಿಖಿತಾರವರೂ ಕೂಡಾ ಅವುಗಳನ್ನು ಪ್ರಸ್ತಾಪಿಸಿಲ್ಲ. ಪ್ರಾಯಶಃ ಪುಸ್ತಕ ಓದಿದ ನಂತರ ಓದುಗನಲ್ಲಿ ಉಲ್ಲಸಿತ ಭಾವನೆ ಮಾತ್ರ ಸ್ಥಾಯಿಯಾಗಿರಲಿ ಎಂಬ ಸದುದ್ದೇಶ ಇಲ್ಲಿರಬಹುದು. ಆ ಉದ್ದೇಶ ಸಫಲವಾಗಿದೆ.
ವೈಶಾಲಿಯ ಕಾರ್ಯಕ್ಷೇತ್ರ ಪ್ರಧಾನವಾಗಿ ಮೂರು- ರಂಗಭೂಮಿ, ಸಿನಿಮಾ ಹಾಗೂ ಟಿವಿ ಧಾರಾವಾಹಿ. ಈ ಮೂರೂ ಕ್ಷೇತ್ರಗಳಲ್ಲಿ ಹವ್ಯಾಸಿ ರಂಗಭೂಮಿಯ ನೆನಪುಗಳು ಅವಳ ಮನಸ್ಸಿಗೆ ಸದಾ ಮುದ ತರುತ್ತಿತ್ತು. ಮಾಧ್ಯಮದ ಸಾಧ್ಯತೆಗಳನ್ನು ದುಡಿಸಿಕೊಳ್ಳುತ್ತಿದ್ದ ಶ್ರೀಯುತರುಗಳಾದ ಬಿ.ವಿ.ಕಾರಂತ, ಪ್ರಸನ್ನ, ಆರ್.ನಾಗೇಶ್, ಫ್ರಿ಼ಟ್ಜ್ ಬೆನೆವಿಡ್ಜ್, ರಣಜಿತ್ ಕಪೂರ್ರ ನಿರ್ದೇಶನದಲ್ಲಿ ನಟಿಸುವ ಖುಷಿ, ಜಗತ್ತಿನ, ಭಾರತದ, ಕನ್ನಡದ ಶ್ರೇಷ್ಠ ಚಿಂತನೆಗಳ ಭಿತ್ತಿಯಾದ ನಾಟಕಗಳೊಳಗೆ ಮುಳುಗೇಳುವ ಪುಳಕ, ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಮನೆಯಂತಹ ವಾತಾವರಣ ಸೃಷ್ಟಿ ಮಾಡುತ್ತಿದ್ದ ಕಲಾವಿದ ತಂತ್ರಜ್ಞರೊಂದಿಗಿನ ಒಡನಾಟ ? ಇವುಗಳೆಲ್ಲಾ ಈ ಕ್ಷೇತ್ರದಲ್ಲಿ ತಾನು ತೊಡಗಿಸಿಕೊಂಡದ್ದು ಸಾರ್ಥಕವಾಯಿತೆನ್ನುವ ಭಾವನೆ ಅವಳಲ್ಲಿ ಹುಟ್ಟಿಸಿತ್ತು.
ಇಂತಹ ಶ್ರೀಮಂತ ಅನುಭವದಿಂದ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದಾಗ ತನಗೊಂದು ಒಂದು ರೀತಿಯ ಕಲ್ಚರಲ್ ಶಾಕ್ ಆಗುತ್ತಿತ್ತು ಅನ್ನುವುದನ್ನ ಅನೇಕ ವೇಳೆ ವೈಶಾಲಿ ಪ್ರಸ್ತಾಪಿಸಿದ್ದಿತ್ತು. ಅಲ್ಲಿ ಅವಳಿಗೆ ದೊರಕುತ್ತಿದ್ದ ಯಾವುದೇ ಸೂಕ್ಷ್ಮತೆಯಿಲ್ಲದ, ಪಲುಕುಗಳಿಲ್ಲದ ಚಪ್ಪಟೆ ಪಾತ್ರಗಳು, ಚಿತ್ರೀಕರಣ ವೇಳೆಯಲ್ಲಿ ಕಂಡು ಬರುತ್ತಿದ್ದ ಹೈರಾರ್ಕಿಕಲ್ ವ್ಯವಸ್ಥೆ, ಯಾವುದೇ ರೀತಿಯ ಬದ್ಧತೆ ಇಲ್ಲದ ಕೆಲವರ ಆಟಾಟೋಪ- ಇವೆಲ್ಲಾ ಅವಳಿಗೆ ಕಿರಿಕಿರಿ ಮಾಡುತ್ತಿದ್ದವು ಎನ್ನುವುದನ್ನು ಅನೇಕ ವೇಳೆ ಪ್ರಸ್ತಾಪಿಸಿದ್ದಳು. ಹಾಗಾಗಿ ಮೂರೂ ಕ್ಷೇತ್ರಗಳ ಪೈಕಿ ಸಿನಿಮಾ ಕ್ಷೇತ್ರದ ಬಗ್ಗೆ ಅತ್ಯಂತ ನಿರಾಶೆ, ಮತ್ತು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಳು.
ಸಿನಿಮಾ ಕ್ಷೇತ್ರದಲ್ಲಿ ಮನಸ್ಸಿಗೆ ಸಿಗದಿದ್ದ ತೃಪ್ತಿ ಟಿವಿ ಧಾರಾವಾಹಿಗಳಲ್ಲಿ ಧಾರಾಳವಾಗಿಯೇ ಸಿಕ್ಕಿತು ಎನ್ನಬಹುದೇನೋ. ಅದಕ್ಕೆ ಕಾರಣ ಅವಳೊಳಗಿನ ನಟನಾ ಸಾಮರ್ಥ್ಯಕ್ಕೆ ಸವಾಲಾದ ಹಾಗೂ ಜೀವನಕ್ಕೆ ಹತ್ತಿರವಾದಂತಹ ಪಾತ್ರಗಳು ಮತ್ತು ಅವಕ್ಕೆ ಸಿಕ್ಕಿದ ಜನಪ್ರಿಯತೆ. ಟಿವಿ ಸೀರಿಯಲ್ ನಿರ್ದೇಶಕಿಯಾದ ನಂತರ ಅವಳ ಸಾಧನೆಯ ಛಲ ಮತ್ತಷ್ಟು ಗರಿಕೆದರಿ ಕೊಂಡಿತ್ತು. ‘ಗೂಡಿನಿಂದ ಗಗನಕ್ಕೆ’, ‘ಮೂಕರಾಗ’ ನಂತರ ಬಂದ ‘ಮೂಡಲಮನೆ’ ಧಾರಾವಾಹಿಗೆ ಸಿಕ್ಕ ಜನಪ್ರಿಯತೆ ಅವಳನ್ನು ಇನ್ನಷ್ಟು ಮತ್ತಷ್ಟು ಕ್ರಿಯಾ ಶೀಲವಾಗುವಂತೆ ಪ್ರೇರೇಪಿಸತೊಡಗಿತ್ತು. ಆದರೆ ಈ ಜನಪ್ರಿಯತೆಯೇ ಅವಳಿಗೆ ಮುಳ್ಳಾಗುತ್ತದೆ ಎಂದು ಅವಳೆಂದೂ ಭಾವಿಸಿರಲಿಲ್ಲ. ಆ ವೇಳೆಗಾಗಲೇ ಪಟ್ಟಭದ್ರರಾಗಿ ಬೆಳೆದಿದ್ದ ಒಂದಿಬ್ಬರು ಧಾರಾವಾಹಿ ನಿರ್ದೇಶಕರು ಶತಾಯಗತಾಯ ಈ ಧಾರಾವಾಹಿಯನ್ನು ಕೆಡಿಸಬೇಕೆಂದು ಹಟ ತೊಟ್ಟು ಕಾರ್ಯೋನ್ಮುಖರಾಗಿ, ಸಾಧ್ಯವಿದ್ದ ಎಲ್ಲ ರೀತಿಯ ಅಡಚಣೆಗಳನ್ನೂ ತಂದೊಡ್ಡತೊಡಗಿದರು. ಅವರೊಂದಿಗೆ ವಾಹಿನಿಯ ಕೆಲವರೂ ಕೈ ಜೋಡಿಸಿದಾಗ ಬೇಲಿಯೇ ಹೊಲ ಮೇಯ್ದಂತೆ ಅನ್ನಿಸಿ ವೈಶಾಲಿ ಕಂಗೆಟ್ಟಿದ್ದು ನಿಜ. ಪೈಪೋಟಿ ಏನಿದ್ದರೂ ಆರೋಗ್ಯಕರವಾಗಿರಬೇಕೆನ್ನುತ್ತಿದ್ದ ಅವಳಿಗೆ ಎಲ್ಲರಲ್ಲೂ ‘ಮುಕ್ತ’ ಮನಸ್ಸಿರುವುದಿಲ್ಲ ಎಂದು ಅರಿವಾಗಿದ್ದು ಆಗಲೇ. ಆ ವೇಳೆಗಾಗಲೇ ಸಕ್ಕರೆ ಖಾಯಿಲೆ ಅವಳನ್ನು ದೈಹಿಕವಾಗಿ ಕಾಡುತ್ತಿತ್ತು, ಈ ಅನಾರೋಗ್ಯಕರ ಪೈಪೋಟಿ ಮಾನಸಿಕವಾಗಿ ಜರ್ಜರಿತಳನ್ನಾಗಿ ಮಾಡಿತ್ತು. ಅಂತಿಮವಾಗಿ ಅದೇ ಅವಳ ಸಾವಿಗೂ ಹಾದಿಯಾಯ್ತು.
-ಗಿರೀಶ್ ಕಾಸರವಳ್ಳಿ
ಒಮ್ಮೆ ಕಗ್ಗೆರೆ ಪ್ರಕಾಶ್, ವೈಶಾಲಿಯವರ ಸಂದರ್ಶನಕ್ಕಾಗಿ ಅವರ ಮನೆಗೆ ಹೋಗುವವರಿದ್ದರು. ವೈಶಾಲಿಯೆಂದರೆ ಮೊದಲಿಂದಲೂ ಒಂದು ರೀತಿಯ ಆಸ್ಥೆ ಇದ್ದ ನಾನು ‘ಪ್ರಕಾಶ್ ನಾನೂ ನಿಮ್ಮೊಂದಿಗೆ ಬರಬೇಕು’ ಎಂದು ಮನವಿ ಮಾಡಿದಾಗ ‘ಅಗತ್ಯವಾಗಿ ಬನ್ನಿ’ ಎಂದರು. ನನ್ನನ್ನು ವೈಶಾಲಿ ಅವರಿಗೆ ಪರಿಚಯಿಸುತ್ತಾ ‘ಇವರು ನನ್ನ ಗೆಳತಿ. ನಿಮ್ಮನ್ನು ನೋಡೋಕೆ ಅಂತ ಬಂದಿದ್ದಾರೆ’ ಎಂದರು. ‘ನನ್ನನ್ನು ನೋಡೋಕೆ...! ಅಂತದ್ದೇನಿದೆ ನನ್ನಲ್ಲಿ ವಿಶೇಷ’ ಎಂದರು ವೈಶಾಲಿ. ‘ನನ್ನ ತಾಯಿ ನಿಮ್ಮ ರೂಪ, ಧ್ವನಿಯ ಅಭಿಮಾನಿ. ನಾನೂ ಸಹ. ನಿಮ್ಮನ್ನ ನೋಡೋಕೆ ಒಳ್ಳೆ ಅವಕಾಶವಾಯ್ತು. ಅದ್ಕೆ ಬಂದೆ’ ಎಂದು ಹೇಳಿದೆ. ಅವರಾಗ ಮೂಕರಾಗಿ ಹೋದರು. ಇಂಥ ಪರಿಚಯದ ಫಲವೇ ಈ ಪುಸ್ತಕ.
ಮಾಲ್ಗುಡಿ ಡೇಸ್ನ ತುಣುಕುಗಳು ಇಂದಿಗೂ ನನ್ನ ಮಗಳ ಹಾರ್ಡ್ಡಿಸ್ಕ್ ಸಂಗ್ರಹದಲ್ಲಿವೆ. ಅವಳ ಮೆಚ್ಚಿನ ಅಮ್ಮ ಅಂದ್ರೆ ‘ಸ್ವಾಮಿ ಅಮ್ಮ’-ಅವರೇ ವೈಶಾಲಿ. ಪ್ರತಿ ಹೆಣ್ಣೂ ಸಹ ಶಕ್ತಿಯೇ. ಆದರೆ ವೈಶಾಲಿ ಅವರು ದಿಟ್ಟ ‘ಸ್ತ್ರೀ-ಶಕ್ತಿ’ ಎಂದರೆ ಉತ್ಪ್ರೇಕ್ಷೆಯ ಮಾತಲ್ಲ.
-ನಿಖಿತಾ ಅಡವೀಶಯ್ಯ
ಆತ್ಮಕಥನವನ್ನು ಪ್ರತಿ ತಿಂಗಳು ಓದುತ್ತಿದ್ದ ನನಗೆ, ವೈಶಾಲಿ ಕಾಸರವಳ್ಳಿ ಅವರ ಬದುಕಿನ ಅನೇಕ ಮಾತುಗಳು, ಜೀವನದಲ್ಲಿ ಅವರು ಎದುರಿಸಿದ ಸಂದರ್ಭಗಳು ನಮ್ಮಂತ ಯುವಕ, ಯುವತಿಯರಿಗೆ ಪ್ರೇರಣೆ ನೀಡುವಂತಿದ್ದವು. ಎಲ್ಲರಿಗೂ ಅನ್ವಯವಾಗುವಂತಹ ಜೀವನದ ಅನೇಕ ಸೂಕ್ಷ್ಮಗಳನ್ನು ಅವರ ಆತ್ಮಕಥೆ ಮಾತುಗಳಲ್ಲಿ ಕಾಣಬಹುದು. ಈ ಪುಸ್ತಕ ಅಂತಹ ಮೌಲ್ಯವನ್ನು ಹೊಂದಿದೆ. ರಂಗಭೂಮಿ, ಸಿನಿಮಾ-ಟೀವಿ ಮಾಧ್ಯಮ, ಈ ಮೂರರಲ್ಲೂ ಅಪಾರ ಸಾಧನೆ ಮಾಡಿದಂತಹ ಏಕೈಕ ನಟಿ, ನಿರ್ದೇಶಕಿ ಅಂದರೆ ವೈಶಾಲಿ ಕಾಸರವಳ್ಳಿ ಮಾತ್ರ.
-ಶ್ರೀಧರ ಬನವಾಸಿ
ಈಗ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.