ಪ್ರಕಾಶಕರು: ಗೋಮಿನಿ ಪ್ರಕಾಶನ
Publisher: Gomini Prakashana
ರಿಯಾಲಿಟಿ ಶೋ ಒಂದರಲ್ಲಿ ಆಕೆ ನೃತ್ಯ ಮಾಡುತ್ತಿದ್ದಳು. ತೀರ್ಪುಗಾರರ ಮೊಗದ ಮೇಲೆ ಆತಂಕ. ನೃತ್ಯ ಮುಗಿದಾಗ ನಿರಾಳವಾದೊಂದು ನಿಟ್ಟುಸಿರು. ನೀನು ನೃತ್ಯ ಮಾಡುವುದೇ ಒಂದು ಅಚ್ಚರಿ ಎಂದವರ ಸ್ವರ ಬೆರಗುವಡೆದಿತ್ತು. ನೋಡುತ್ತಿದ್ದ ವೀಕ್ಷಕರದ್ದು ಇದೇ ಪ್ರಶ್ನೆ. ತಣ್ಣಗೇ ಉತ್ತರಿಸಿದ್ದಳು: “ನಾನು ಕಳೆದುಕೊಂಡದ್ದು ನನ್ನದೊಂದು ಕಾಲು ಮಾತ್ರ, ಆತ್ಮವಿಶ್ವಾಸವನ್ನಲ್ಲ.” ಕುಳಿತವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಆಕೆ ಮಾತು ಮುಂದುವರಿಸುತ್ತಾ “ಕಾಲೇಜಿನ ನೃತ್ಯ ಸ್ಪರ್ಧೆಯೊಂದರಲ್ಲಿ ಗೆದ್ದ ಬಹುಮಾನ ಸಮೇತ ನಾನು ಲಾರಿಯ ಚಕ್ರದಡಿ ಸಿಲುಕಿದ್ದೆ. ಪ್ರಜ್ಞೆ ಬಂದಾಗ ನಾನು ಜೀವ ಕಳೆದುಕೊಂಡಿಲ್ಲ ಎಂಬ ಸಂತೋಷ ಮಣ್ಣು ಪಾಲಾಗಿದ್ದು ನಾನು ಕಳೆದುಕೊಂಡ ಕಾಲನ್ನು ನೋಡಿ. ಯಾರ ಮುಖದಲ್ಲೂ ನಾನು ಬದುಕಿ ಬಂದ ಗೆಲುವಿರಲಿಲ್ಲ. ನನಗೂ ಹೀಗೆ ಬದುಕುವ ಬದಲು ಸತ್ತಾದರೂ ಹೋಗಬಾರದಿತ್ತೇ ಎಂದೆನ್ನಿಸಿತ್ತು. ಸೊಂಟದಿಂದಲೇ ತುಂಡಾಗಿದ್ದ ಅವಯವದ ಖಾಲಿ ಜಾಗ ನನ್ನನ್ನು ಅಣಕಿಸುತ್ತಿತ್ತು. ನನ್ನ ಬದುಕು ಇನ್ನೇನಿದ್ದರು ನಾಲ್ಕು ಗೋಡೆಯ ಮಧ್ಯೆ ಎನ್ನುವುದು ನನ್ನನ್ನು ಕುಂದಿಸುತ್ತಿತ್ತು. ಇಂತಹುದೇ ಮನಸ್ಥಿತಿಯಲ್ಲಿ ಅದೊಂದು ದಿನ ಬಾಲ್ಕನಿಯಲ್ಲಿ ರಸ್ತೆಯಾಚೆಗೆ ಶೂನ್ಯ ನೋಟ ಬೀರುತ್ತಾ ಕುಳಿತಿದ್ದೆ. ರಸ್ತೆಯಲ್ಲಿ ಹೋಗುತ್ತಿದ್ದ ಬೀದಿ ನಾಯಿಯೊಂದು ನನ್ನ ಗಮನ ಸೆಳೆಯಿತು. ಅದು ಮುಂದಿನ ಎರಡು ಕಾಲುಗಳಲ್ಲಿ ಇಡೀ ಶರೀರವನ್ನು ಹೊತ್ತು ನಡೆಯುತ್ತಿತ್ತು. ಅದಕ್ಕೆ ಸಾಧ್ಯವಾದದ್ದು ನನಗೆ ಸಾಧ್ಯವಾಗದೇ...? ಅಂದೇ ತೀರ್ಮಾನಿಸಿಬಿಟ್ಟೆ.
ಕೆಲವೊಮ್ಮೆ ನಮ್ಮ ಬದುಕಿನಲ್ಲಿ ನಾವು ಕನಸು ಮನಸಿನಲ್ಲೂ ಯೋಚಿಸಿಯೇ ಇರದಂತಹ ಘಟನೆಗಳು ಘಟಿಸಬಹುದು. ಕೆಲವೊಂದು ನಿವಾರಿಸಲು ಅಸಾಧ್ಯವಾದ, ಪರಿಹಾರ ಇಲ್ಲದಂತಹ ವಿಷಯಗಳನ್ನು ಎದುರಿಸಬೇಕಾಗಬಹುದು. ಹೇಗೆ ಇಂತಹ ವಿಷಮ ಪರಿಸ್ಥಿತಿಗಳನ್ನು ನಿಭಾಯಿಸುವುದು? ಯಾರು ಈ ವಿಷಾದದಿಂದ ನಮ್ಮನ್ನು ಹೊರಗೆಳೆಯುವವರು? ಯಾಕೆ ನಮಗೇ ಇಂತಹ ಶಿಕ್ಷೆ? ಎಂಬೆಲ್ಲಾ ಪ್ರಶ್ನೆಗಳು ಎದೆಯೊಳಗೆ ಮೂಡಿ ಮನುಷ್ಯನನ್ನು ನಿರ್ವಿಣ್ಣನನ್ನಾಗಿ ಮಾಡಬಹುದು. ಇಂತಹ ಕ್ಷಣಗಳಲ್ಲಿ ಅವನ ಕೈ ಹಿಡಿಯುವುದು ಆಶಾವಾದ ಮಾತ್ರ.
ಇಂತಹುದೇ ಆಶಾವಾದವನ್ನು ತೇಜಸ್ವಿನಿ ಹೆಗಡೆಯವರ ಜೀವನ ಮತ್ತು ಬರಹ ಎರಡರಲ್ಲೂ ಕಾಣುತ್ತೇವೆ. ಈ ಪುಸ್ತಕದ ಎಲ್ಲಾ ಬರಹಗಳು ಅವರು ಅನುಭವಿಸಿ ಬರೆದದ್ದು. ಜೊತೆಗೆ ಈ ಬರಹದಲ್ಲಿ ಅವರು ಕಾಯ್ದುಕೊಂಡ ಸಮತೋಲನ ಮನಸ್ಸಿಗೆ ಮೆಚ್ಚುಗೆಯಾಗುತ್ತದೆ. ಎಲ್ಲಿಯೂ ಕನಿಕರ ಬೇಡದ, ನಮ್ಮದನ್ನು, ನಮಗೆ ಸಿಗಲೇಬೇಕಾದ್ದನ್ನು, ನಮ್ಮದಾಗಿಸಿ ಎಂಬ ಧೋರಣೆ ಮಾತ್ರ ಅವರದ್ದು. ಇಲ್ಲಿನ ಹದಿನೇಳು ಬರಹಗಳಲ್ಲಿ ಬದುಕಿನ ಬಗೆಗಿನ ಅವರ ಆಶಾವಾದ ಅಕ್ಷರ ರೂಪಕ್ಕಿಳಿದು ನಮ್ಮ ನಿಮ್ಮೊಳಗೂ ಅದೇ ಆಶಾವಾದದ ಭಾವನೆಯನ್ನು ಬಿತ್ತುವ ಪ್ರಯತ್ನ ಮಾಡುತ್ತದೆ.
ಪುಟಗಳು: 72
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !