ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಬದುಕಿನಲ್ಲಿ ನಮ್ಮ ಅನುಭವಕ್ಕೆ ಬಂದರೂ ಅರಿವಿಗೆ ಸರಿಯಾಗಿ ದಕ್ಕದ ಎಷ್ಟೋ ಸಂಗತಿಗಳು ಇರುತ್ತವೆ; ಇವುಗಳಲ್ಲಿ ಲೈಂಗಿಕತೆಗೆ ಮೊದಲ ಸ್ಥಾನ.
ಋತುಚಕ್ರ, ಲೈಂಗಿಕತೆ, ಗರ್ಭನಿರೋಧ, ಗರ್ಭಧಾರಣೆ, ಪ್ರಸವ, ಋತುಬಂಧ ಮುಂತಾದವುಗಳ ನಡುವೆ ಹೆಣ್ಣಿನ ಬದುಕು ಸಾಗುತ್ತದೆ. ಇವುಗಳಲ್ಲಿ ಕೆಲವು ಪ್ರಕೃತಿಯ ಅಧೀನವಾದರೆ, ಕೆಲವು ಸಮಾಜದ ಅಧೀನ. ಅವಳ ವೈಯಕ್ತಿಕ ಇಷ್ಟಾನಿಷ್ಟಗಳಿಗೆ ಇವೆಲ್ಲ ಒಳಪಡುವುದು ಬಹಳ ಕಡಿಮೆ. ಅವಳ ದೇಹದ ಮೇಲೆ ಅವಳಿಗೆ ಹತೋಟಿಯೂ ಕಡಿಮೆ.
ಆದರೆ ಹೆಣ್ಣಿಗೆ ತನ್ನ ಆರೋಗ್ಯ, ದೇಹ ರಚನೆ ಮುಂತಾದವುಗಳ ಬಗ್ಗೆ ಜಾಗೃತಿ ಮೂಡುವುದು ಇರಲಿ, ಇವೆಲ್ಲದರ ಬಗ್ಗೆ ಕನಿಷ್ಠ ಮಾಹಿತಿಯೂ ಸಿಕ್ಕುವುದು ಕಷ್ಟ. ಜಗತ್ತು ಆಧುನಿಕತೆಯತ್ತ ಸಾಗಿ, ಹೆಣ್ಣು ಅತ್ಯಾಧುನಿಕತೆಯತ್ತ ಸಾಗುತ್ತಿದ್ದಾಳೆ ಎಂಬ ಘೋಷಣೆಗಳ ನಡುವೆ ತನ್ನ ಬಗ್ಗೆಯೇ ಏನೇನೂ ಗೊತ್ತಿಲ್ಲದ ದಟ್ಟ ಅಜ್ಞಾನದಲ್ಲಿ ಅವಳು ಮುಳುಗಿರುವುದೂ ಕಾಣುತ್ತಿದೆ. ಆರೋಗ್ಯ, ದೇಹರಚನೆ, ಪ್ರಾಕೃತಿಕ ಪ್ರಕ್ರಿಯೆಗಳ ಬಗ್ಗೆ ತೀರಾ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದ ಸ್ಥಿತಿಗೆ ಗ್ರಾಮೀಣ - ನಗರ, ಸುಶಿಕ್ಷಿತ-ಅಶಿಕ್ಷಿತ, ಶ್ರೀಮಂತ-ಬಡವ ಎಂಬ ವ್ಯತ್ಯಾಸವಿಲ್ಲ. ಹಾಗೆ ನೋಡಿದರೆ ಉನ್ನತ ಶಿಕ್ಷಣ ಪಡೆದ ಹೆಣ್ಣುಮಕ್ಕಳೂ ಲೈಂಗಿಕ ಸಂಪರ್ಕ, ಗರ್ಭ ಧರಿಸುವುದು ಮುಂತಾದ ವಿಚಾರಗಳಲ್ಲಿ ಸರಳ, ಸಣ್ಣ ವಿವರಗಳೂ ಗೊತ್ತಿಲ್ಲದೆ ಗೊಂದಲಕ್ಕೆ ಒಳಗಾಗುವುದು ಈಗಲೂ ಮುಂದುವರಿದಿದೆ ಎಂದು ಎಲ್ಲ ವೈದ್ಯರೂ ಹೇಳುತ್ತಾರೆ.
ಲೈಂಗಿಕತೆ, ದಾಂಪತ್ಯ ಮುಂತಾದುವು ಯಾರೊಂದಿಗೂ ಮಾತನಾಡಬಾರದ ವಿಷಯಗಳು. ಅದರಲ್ಲೂ ಹೆಣ್ಣುಮಕ್ಕಳು ಇವುಗಳನ್ನು ಕುರಿತು ಯಾರೊಂದಿಗೂ, ಕೊನೆಗೆ ಗಂಡನೊಂದಿಗೂ ಚರ್ಚಿಸಲೇಬಾರದು ಎಂಬ ಸಾಮಾಜಿಕ ಕಟ್ಟುಪಾಡು ಇಂದಿಗೂ ನಮ್ಮಲ್ಲಿದೆ. ಇದೇ ಮಾಹಿತಿ ಮತ್ತು ಜಾಗೃತಿಯ ಮೊದಲ ಶತ್ರು. ಇದರೊಂದಿಗೆ ಸಮಸ್ಯೆ ಅಥವಾ ಗೊಂದಲ ಉಂಟಾದಾಗ ಯಾರಲ್ಲಿ ಕೇಳಿ ಪರಿಹರಿಸಿಕೊಳ್ಳಬೇಕು ? ಎಲ್ಲಿ ಓದಿ ತಿಳಿದುಕೊಳ್ಳಬೇಕು ? ಅಗ್ಗದ ಜಾಹೀರಾತುಗಳನ್ನು ನೀಡಿ ದುಡ್ಡು ಮಾಡುವ ನಕಲಿ ವೈದ್ಯರನ್ನು ಬಿಟ್ಟು ತಜ್ಞ ವೈದ್ಯರನ್ನು ಹುಡುಕುವುದು ಹೇಗೆ ? ಪೊಳ್ಳು ಮತ್ತು ಕೀಳು ಅಭಿರುಚಿಯ ಪುಸ್ತಕಗಳ ರಾಶಿಯ ನಡುವೆ ವೈಜ್ಞಾನಿಕವಾಗಿ ತಿಳಿವಳಿಕೆ ನೀಡುವ ತಜ್ಞ ಪುಸ್ತಕ ಯಾವುದು ? ಇವೆಲ್ಲ ಪ್ರಶ್ನೆಗಳು ಎದುರಾಗಿ ಸಮಸ್ಯೆಯನ್ನು ಮತ್ತಷ್ಟು ಜಟಿಲ ಮಾಡುತ್ತವೆ.
ಇಂಥ ಸ್ಥಿತಿಯಲ್ಲಿ ಕನ್ನಡದಲ್ಲಿ ವೈದ್ಯಕೀಯ ವಿಜ್ಞಾನದ ಬಗ್ಗೆ ವಿಪುಲವಾದ ಬರವಣಿಗೆ ಕಾಣುತ್ತಿರುವುದು, ಅದರಲ್ಲೂ ಲೈಂಗಿಕ ವಿಜ್ಞಾನದ ಬಗ್ಗೆಯೂ ಬರವಣಿಗೆ ಆರಂಭವಾಗಿರುವುದು ನಿಜಕ್ಕೂ ಆರೋಗ್ಯಕರವಾದ ಬೆಳವಣಿಗೆ. ಯುವಜನರಿಗೆ ಮತ್ತು ವಯಸ್ಸಾದವರಿಗೆ ಸಂಕಷ್ಟದ ಸಮಯದಲ್ಲಿ ಇವು ನೆರವು ನೀಡುವುದು ಖಚಿತ.
ರಾಜ್ಯದ ಪ್ರಥಮ ಮಹಿಳಾ ಲೈಂಗಿಕ ವಿಜ್ಞಾನ ತಜ್ಞೆಯಾಗಿರುವ ಖ್ಯಾತ ಪ್ರಸೂತಿ ಶಾಸ್ತ್ರಜ್ಞೆ ಡಾ|| ಪದ್ಮಿನಿ ಪ್ರಸಾದ್ ಬರೆದಿರುವ ಈ ಪುಸ್ತಕಕ್ಕೆ, ರೋಗಿಗಳೊಂದಿಗಿನ ದೈನಂದಿನ ಅನುಭವವೇ ಮೂಲದ್ರವ್ಯ. ಈ ವಿಷಯಗಳ ಬಗ್ಗೆ ಅರಿವಿಲ್ಲದ ಸಾಮಾನ್ಯ ಜನರಿಗೆ ಪ್ರಾಥಮಿಕ ಮತ್ತು ಅವಶ್ಯಕ ಮಾಹಿತಿ ನೀಡುವ ಕೆಲಸ ಇಲ್ಲಿ ಖಂಡಿತವಾಗಿ ಆಗುತ್ತದೆ. ಅದರೊಂದಿಗೆ ಈ ಮಾಹಿತಿ ಹೆಣ್ಣಿಗೆ ನೀಡುವ ಬಲ ಮತ್ತು ಧೈರ್ಯದ ಸಾಮಾಜಿಕ ವಿಶ್ಲೇಷಣೆಯೂ ಇಲ್ಲಿದೆ. ಇದರಿಂದ ಕುಟುಂಬ ಮತ್ತು ಸಮಾಜದಲ್ಲಿ ಮೂಡುವ ಸಾಮರಸ್ಯದ ಮಹತ್ವವನ್ನೂ ಈ ಪುಸ್ತಕ ಹೇಳುತ್ತದೆ. ಇಂಥ ಪುಸ್ತಕ, ವೈಜ್ಞಾನಿಕವಾಗಿಯೂ ಸ್ವಾಗತಾರ್ಹ, ಸಾಮಾಜಿಕವಾಗಿಯೂ ಸ್ವಾಗತಾರ್ಹ.
-ಆರ್. ಪೂರ್ಣಿಮಾ
ಪುಟಗಳು: 76
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !