Click here for MyLang Android and iOS app links

ಶೂದ್ರತಪಸ್ವಿ

ಶೂದ್ರತಪಸ್ವಿ

e-book
ಪಬ್ಲಿಶರ್
ಕುವೆಂಪು
ಮಾಮೂಲು ಬೆಲೆ
Rs. 29.00
ಸೇಲ್ ಬೆಲೆ
Rs. 29.00
ಬಿಡಿ ಬೆಲೆ
ಇಶ್ಟಕ್ಕೆ 
Share to get a 10% discount code now!

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

ಮಹಾಕಾವ್ಯವಾದ ವಾಲ್ಮಿಕಿ ರಾಮಾಯಣದಲ್ಲೂ ಆಗಿನ ಕಾಲದ ಮನಸ್ಥಿತಿಯ ಅನೇಕ ಲೋಪದೋಷಗಳಿದ್ದು ಅದರಲ್ಲಿ ವರ್ಣಬೇಧವೂ ಒಂದಾಗಿದೆ.‌ ಇಂತಹ ಒಂದು ಅಲ್ಪದೃಷ್ಟಿಯನ್ನು ಶಂಬೂಕವಧಪ್ರಸಂಗದಲ್ಲಿ ನೋಡಬಹುದು. ಬರೀ ಇದಷ್ಟೆ ಕಾರಣಗಳಿಂದ ಕೃತಿಯನ್ನು ತಿರಸ್ಕರಿಸದೆ ಅದಕ್ಕೆ ಬೇರೊಂದೆ ರೂಪವ ಕೊಟ್ಟಾಗ ಆಗಿದ್ದೆ ಕುವೆಂಪುರವರ "ಶ್ರೀರಾಮಯಣದರ್ಶನಂ".
ವಾಲ್ಮಿಕೀ ರಾಮಯಣದಲ್ಲಿ ಬರುವ ಶಂಬೂಕವಧಪ್ರಸಂಗ ಇಂತಿದೆ:
ಒಬ್ಬ ಬ್ರಾಹ್ಮಣನು ತನ್ನ ಕುಮಾರನ ಅಕಾಲ ಮರಣವನ್ನು ಒಪ್ಪದೆ ಶ್ರೀರಾಮನ ಬಳಿ ಬಂದು ಗೋಳಾಡಿ ಅದಕ್ಕೆ ದೊರೆಯ ದೋಷವನ್ನೆ ಕಾರಣ ಒಡ್ಡುತ್ತಾನೆ. ಶ್ರೀರಾಮನು ಇದರ ಬಗ್ಗೆ ಮಂತ್ರಿಮಂಡಲದಲ್ಲಿ ಚರ್ಚಿಸುವಾಗ ಒಬ್ಬ ನಾರದನು ಓರ್ವ ಶೂದ್ರ ತಪಸ್ಸು ಮಾಡುತಿದ್ದಾನೆ ಅದರ ಪರಿಣಾಮವೇ ಈ ಅಕಾಲಮರಣಕ್ಕೆ ಕಾರಣವೆಂದು ಸಿದ್ಧಾಂತವನ್ನು ಮಂಡಿಸುತ್ತಾನೆ. ಇದನ್ನು ಕೇಳಿದ ರಾಮನು ದಕ್ಷಿಣಕ್ಕೆ ಬಂದು ಶಂಬೂಕ ಮಹರ್ಷಿಗೆ ನಮಸ್ಕರಿಸುತ್ತಲೆ ನೀನು ಯಾವ ವರ್ಣವೆಂದು ಪ್ರಶ್ನಿಸುತ್ತಾನೆ.‌ ಶಂಬೂಕ ತಾನು ಶೂದ್ರನೆಂದು ಹೇಳುತ್ತಿದಂತೆಯೇ ರಾಮನ ಖಡ್ಗ ಶಂಬೂಕನ ರುಂಡವ ಧರೆಗುರುಳಿಸುತ್ತದೆ.
ಇದಿಷ್ಟು ಮೂಲ ರಾಮಾಯಣದ ಕಥೆಯಾದರೆ, ಇದನ್ನು ಸಮರ್ಥ ಪಡಿಸಲೆಂದೆ "ಉತ್ತರ ರಾಮಚರಿತ" ಕಾವ್ಯ ರಚಿತವಾಗಿದೆಂದೆನಿಸುತ್ತದೆ.
ಇದರಲ್ಲಿ ಶಂಬೂಕನ ಶಿರಚ್ಛೇದನವಾದ ನಂತರ ಮೃತ ದೇಹದಿಂದ ಗಾಂಧರ್ವ ವಾಣಿಯೊಂದು ರಾಮನಿಗೆ ಧನ್ಯವಾದಿಸುತ್ತ ಪೂರ್ವಜನ್ಮದಲ್ಲಿ ತಾನೊಂದು ಘೋರಪಾಪವನ್ನು ಮಾಡಿದ್ದು ಅದಕ್ಕೆ ಶಿಕ್ಷೆಯೆಂದು ಶೂದ್ರನಾಗಿ ಹುಟ್ಟಿದ್ದು ಸಜ್ಜನನಾದ ನಿನ್ನಿಂದ(ಶ್ರೀರಾಮ) ಮೋಕ್ಷ ಸಿಕ್ಕಿತೆಂದು ಹೇಳುತ್ತದೆ.
[ಇದರಿಂದ ಕೊಂದಿರುವುದನ್ನು ಸಮರ್ಥ ಪಡಿಸಿಕೊಂಡರೂ, ಶೂದ್ರನಾಗಿ ಹುಟ್ಟುವುದೇ ಶಿಕ್ಷೆ ಎಂಬಂತ್ತಿದೆ]
ಈ ಪ್ರಸಂಗವನ್ನು ಕುವೆಂಪುರವರು ತಮ್ಮ "ಶೂದ್ರತಪಸ್ವಿ" ನಾಟಕ ಕೃತಿಯಲ್ಲಿ ಹೊಸದೊಂದು ದೃಶ್ಯವನ್ನು ಕಟ್ಟಿಕೊಡುತ್ತಾರೆ. ಇದರಲ್ಲಿ ಮೃತ್ಯುಗೂ ಒಂದು ಪಾತ್ರವಿದೆ.
ಶಂಬೂಕ ಮಹರ್ಷಿಯ ಆಶ್ರಮಕ್ಕೆ ರಾಮ ಬರುವ ಮುನ್ನವೇ ಮೃತ್ಯು ಬಂದು ತನ್ನ ಆಹಾರಕ್ಕಾಗಿ ಕಾದು ಕುಳಿತಿರುತ್ತದೆ. ರಾಮನು ಮತ್ತು ಬ್ರಾಹ್ಮಣನು ಬಂದ ನಂತರ ಬ್ರಾಹ್ಮಣನ ಸಲಹೆಯಂತೆ ಶ್ರೀರಾಮನು ತನ್ನ ಬ್ರಹ್ಮಾಸ್ತ್ರವನ್ನು "ಅರಸಿ ಕೊಲ್ ಅರಗುಲಿಯನ್" ಎಂದು ಅಘೋಷಿಸಿ ಸೆಳೆದು ಬಿಡುತ್ತಾನೆ. ಮಿಂಚು ತಳಿಸುತ್ತದೆ. ಸಿಡಿಲೆರಗುತ್ತದೆ. ಬಿರುಗಾಳಿ ಭೋರಿಡುತ್ತದೆ. ಮೃತ್ಯುವಿನ ಕರಾಳಛಾಯೆ ರೌದ್ರರೋಷದಿಂದಲೂ ಶರವೇಗದಿಂದಲೂ ಅಸ್ತ್ರವನ್ನು ಹಿಂಬಾಲಿಸುತ್ತದೆ.‌ ತಪಸ್ವಿಯ ಸಮೀಪಿಸುತ್ತಿದ್ದಂತೆಯೆ ಬ್ರಹ್ಮಾಸ್ತ್ರ ತನ್ನ ಉಗ್ರತೆಯನ್ನುಳಿದು ವಿನೀತವಾಗಿ ಅಡ್ಡ ಬೀಳುತ್ತದೆ. ಮೃತ್ಯುವೂ ಅದನ್ನೆ ಅನುಕರಿಸುತ್ತದೆ. ಇದನ್ನು ನೋಡಿ ಬೆಚ್ಚಿದ ಬ್ರಾಹ್ಮಣನಿಗೆ ಶ್ರೀರಾಮನು ಮುಗುಳುನಗುತ್ತ ಹೇಳುತ್ತಾನೆ "ಆಹಾ... ಏನಿದು ಆಶ್ಚರ್ಯ.. ಋಷಿಮುನಿಗೆ ಮರ್ಯಾದೆ ಸಲ್ಲಿಸಿ ದಿಕ್ಕನ್ನು ಬದಲಿಸುತ್ತಿದೆ ಬ್ರಹ್ಮಾಸ್ತ್ರ."
ಬ್ರಾಹ್ಮಣನು ಅಚ್ಚರಿಯಿಂದ ಯಾರತ್ತ ಸಾಗುತ್ತಿದೆ ಎಂದು ಕೇಳಿದಾಗ ಶ್ರೀರಾಮನು ಬ್ರಾಹ್ಮಣನ ಕಡೆಗೆ ನೋಡದೆ ದಿಟ್ಟವಾಗಿ ದರ್ಪಧ್ವನಿಯಿಂದ "ಪೂಜ್ಯರನ್ನು ಅನುಮಾನಿಸಿ ಅವಹೇಳನ ಮಾಡಿದವನ ಕಡೆಗೆ, ಅಧರ್ಮಿಯ ಕಡೆಗೆ"‌ ಎಂದೆನ್ನುತ್ತಾನೆ. ಬ್ರಾಹ್ಮಣನಿಗೆ ತನ್ನ ತಪ್ಪಿನ ಅರಿವಾಗಿ ಶ್ರೀರಾಮನಲ್ಲಿ ಕ್ಷಮೆಯಾಚಿಸಿ ರಕ್ಷಿಸು ಧರ್ಮ ಪ್ರಭುವೆ ಎಂದು ಬೇಡುತ್ತಾನೆ.
"ತಪಸ್ಸು (ಶಕ್ತಿ/ಶಿಕ್ಷಣ) ಯಾವುದೋ ಒಂದೇ ವರ್ಣದ ಸ್ವತ್ತಲ್ಲ ಎಲ್ಲರಿಗೂ ಲಭಿಸುವಂತಾಗಬೇಕು. ಅದೇ ಧರ್ಮ" ಎಂದು ನಿಧಾನ ದ್ವನಿಯಿಂದ ಹೇಳುತ್ತಾ ಧರ್ಮದ ಬಗ್ಗೆ ಇದ್ದ ಅಲ್ಪಬುದ್ಧಿಯನ್ನು ಬ್ರಾಹ್ಮಣನಿಂದ ಹೋಗಿಸಿ ಬ್ರಾಹ್ಮಣ ಕುಮಾರನನ್ನು ಬದುಕಿಸಿಕೊಡುತ್ತಾನೆ. ಆನಂತರ ಮೃತ್ಯು ಉಪವಾಸದಿಂದ ಹೋಗುತ್ತಾನೆ.
ಈ ಕೃತಿಯ ವಿಶೇಷವೇನೆಂದರೆ ಆಗಾಗಲೇ ದೈವಭಾವ ಮೂಡಿಸಿದ್ದ ಶ್ರೀರಾಮನ ಪಾತ್ರವು ಏನೇ ಮಾಡಿದರು ಒಳ್ಳೆಯದ್ದೆ ಮಾಡಿರುತ್ತದೆ(ಮಾಡುತ್ತದೆ) ಎಂದು ನಂಬುವ ಅವಿವೇಕರ ಅತೀ ಶ್ರದ್ಧೆಯಲ್ಲಿ, ಶ್ರದ್ಧೆ ಭಕ್ತಿಗೆ ಧಕ್ಕೆ ತರದೇ ಅವಿವೇಕತವನ್ನು ಮಾತ್ರ ತಿದ್ದಿ, ಮೂಲ ಕೃತಿಯಲ್ಲಿ ಮತ್ತು ರಾಮನ ಪಾತ್ರದಲ್ಲಿ ನಿಷ್ಠೆಯನ್ನು ಮತ್ತಷ್ಟು ಪುನರ್ಚೇತನವನ್ನು ತಂದಿರುವ ಕುವುಂಪೆರವರ ಜಾಣ್ಮೆ. ಅವರ ಈ ಜಾಣ್ಮೆಗೆ ಸಂದ ಜ್ಞಾನಪೀಠ ಪ್ರಶಸ್ತಿಯ ಗೌರವವು ನಿಜಕ್ಕೂ ಅವಿಸ್ಮರಣೀಯ.

- ಪ್ರವೀಣ್ ಶ್ರೀನಿವಾಸ್ https://www.facebook.com/kvputtappa/posts/826867330839028/

 

ಪುಟಗಳು: 40

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
N
N.R.

ಕಾವ್ಯೇಷು ನಾಟಕಂ ರಮ್ಯಂ ಎಂಬ ಕಾಳಿದಾಸನ ಪ್ರಸಿದ್ಧ ಮಾತಿದೆ... ಇದನ್ನು ಕನ್ನಡದ ಓದುಗ ಒಪ್ಪಿಕೊಂಡಿಲ್ಲ ಎಂಬುದೇ ಬಹಳ ನೋವಿನ ಸಂಗತಿ... ಒಪ್ಪಿದ್ದೆ ಆಗಿದ್ದರೆ ಕುವೆಂಪುರವರಿಂದ ಇಂತಹ ಅನೇಕ ಅಮೋಘ ನಾಟಕಗಳು ಮೂಡಿ ಬರುತ್ತಿತ್ತೇನೋ...

ಈ ನಾಟಕ ರಾಮಾಯಣದ ಘಟನೆಯೊಂದನ್ನು ಆಧಾರಿಸಿ ರಚಿಸಲ್ಪಟ್ಟಿದೆ... ಶಂಬುಕ ಎಂಬ ಶೂದ್ರ ತ್ರೇತಾಯುಗದಲ್ಲಿ ತಪಸ್ಸನು ಆಚರಿಸಿದ್ದಕ್ಕೆ ಊರ ಹಿರಿಯರು ರಾಮನ ಬಳಿ ದೂರನ್ನು ಕೊಟ್ಟಾಗ ರಾಮ ಇದು ಅಧರ್ಮವೆಂದು ತೀರ್ಪುನ್ನು ನೀಡಿ ಶಂಬುಕನ ಶಿರಶ್ಚೇಧ ಮಾಡುತ್ತಾನೆ, ಇದು ಮೂಲ ಕಥೆ..

ಇದನ್ನು ಕೊಂಚ ಬದಲಾಯಿಸಿ ಪುಟ್ಟಪ್ಪನವರು ನಾಟಕ ರಚಿಸಿದ್ದಾರೆ... ಇಲ್ಲಿ ಶಂಬುಕ ತಪ್ಪಸ್ಸನ್ನು ಆಚರಿಸಲು, ಒಬ್ಬ ಬ್ರಾಹ್ಮಣ ರಾಮನಲ್ಲಿ ದೂರು ನೀಡುತ್ತಾನೆ... ರಾಮನಿಗೆ ಇದಲ್ಲಿ ಅಧರ್ಮ ಕಾಣುವುದಿಲ್ಲ.. ಶಂಬುಕನ ಮೇಲೆ ಆತನಿಗೆ ಭಕ್ತಿಭಾವ ಮೂಡುತ್ತದೆ. ಬ್ರಾಹ್ಮಣನ ಬಲವಂತಕ್ಕೆ ರಾಮ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಾಗ.. ಬ್ರಹ್ಮಾಸ್ತ್ರ ಶಂಬುಕನಿಗೆ ವಂದಿಸಿ ಬ್ರಾಹ್ಮಣನನ್ನು ಕೊಲ್ಲಲು ಬರುತ್ತದೆ.

ಆದರೆ ಬ್ರಾಹ್ಮಣ ಶಂಬುಕನಿಗೆ ವಂದಿಸಿ ತನ್ನ ತಪ್ಪು ಅರಿವಾದಾಗ ಅಸ್ತ್ರ ಶಾಂತವಾಗುತ್ತದೆ.. ಇದು ನಾಟಕದ ವಸ್ತು.

ಈ ನಾಟಕ ಟೀಕೆ ಮತ್ತು ಪ್ರಶಂಸೆ ಎರಡನ್ನು ಸಮಾನವಾಗಿ ಗಳಿಸಿದ ಸೃಷ್ಟಿ... ಆದರೆ ಕುವೆಂಪುರವರು ಕೊನೆಯಲ್ಲಿ ಅವೆಲ್ಲಕ್ಕೂ ಉತ್ತರವಾಗಿ ಅದ್ಬುತ ಲೇಖನವೊಂದನ್ನು ಬರೆದಿದ್ದಾರೆ.. ಅಲ್ಲಿ ಅವರು ನಾಟಕದ ಮೂಲಕ ಹೇಳಲು ಪ್ರಯತ್ನಿಸಿರುವ ವಿಚಾರವು ತಿಳಿಯುತ್ತದೆ.

ಇನ್ನೂ ನಾಟಕದ ಭಾಷೆ ಒಂದು ಅನನ್ಯ ಅನುಭವ...
ರಾಮನನ್ನು ಪುಟ್ಟಪ್ಪನವರು ಎಷ್ಟು ಚೆನ್ನಾಗಿ ಪರಿಚಯಿಸುತ್ತಾರೆ ನೋಡಿ
"ಹರಧನುವ ಮುರಿದವನ್ ಸುರಧನಸ್ಸುದರುನ್
ಮೈಥಿಲಿ ಮನೋಹರನ್ ಕುಸುಮಕೋಮಲನ್
ನೀಲಾಮೇಘಶ್ಯಾಮನ್ ಗಿರಿವನಪ್ರಿಯನ್
ಅಂಜನಾಸುತ ಹೃದಯಮಿತ್ರನ್, ಪವಿತ್ರನ್
ಪಂಚವಟಿಯೋಳು ನಿಂದವನ್
ಗೋದಾವರಿಯ ಮಿಂದವನ್
ದೈತ್ಯಕೋಟಿಯ ಕೊಂದವನ್"

ಇನ್ನೂ ಶಂಬುಕನಿದ್ದ ಅರಣ್ಯ ಎಷ್ಟು ಚಂದವಿತ್ತು ಅಂತ ತಿಳಿಯುವುದಕ್ಕೆ ರಾಮನ ಸ್ವಗತವೊಂದು ಓದಿ
"ಸೀತೆಯನ್ ಅರಣ್ಯಕೆ ವಿಸರ್ಜಿಸಿದೀತಂಗೆ
ಅರಣ್ಯಮೆ ಸೀತೆಯಾಗಿರ್ಪಳ್!"
ವಾಹ್... ಎಂತ ಭಾಷಪ್ರಯೋಗ ಅಲ್ವಾ... ಇಂತ ಭಾಷೆಯ ಸೊಬಗು ನಾಟಕದ ಉದ್ದಕ್ಕೂ ಇದೆ...

ಈ ನಾಟಕವು ಕುವೆಂಪುರವರ ವಿಚಾರದ ಆಳ ಮತ್ತು ವಿಸ್ತಾರತೆಯನ್ನು ಸುಪೋಷ್ಟವಾಗಿ ಕಟ್ಟಿ ಕೊಡುತ್ತದೆ... ನಮ್ಮನ್ನು ಒಂದಿಂಚು ಬೆಳೆಸುತ್ತದೆ.