ಪುಸ್ತಕ: ಡುಮಿಂಗ
ಲೇಖಕರು: ಶಶಿ ತರೀಕೆರೆ
ಪ್ರಕಾಶನ: ಛಂದ ಪುಸ್ತಕ ಪ್ರಕಾಶನ
ಮುಖಪುಟ:- ಸೌಮ್ಯ ಕಲ್ಯಾಣಕರ.
ಪುಟಗಳು: ೧೦೮.
ಬೆಲೆ : ೯೦ರೂ.
ಛಂದ ಪುಸ್ತಕ ಬಹುಮಾನ ಪಡೆದ ಕೃತಿ…
ಎಂದೂ ಬಾರದ ತಾಯಿಗಾಗಿ ಕಾಯುವ
ಜಗತ್ತಿನ ಎಲ್ಲಾ ಮಕ್ಕಳಿಗೆ
ಹಾಗೂ
ವೃದ್ದಾಶ್ರಮದಲ್ಲಿ ನಲಗುವ ಮುದ್ದು ಜೀವಗಳಿಗೆ
ತಾನು ಬರೆದ ಪುಸ್ತಕವೊಂದನ್ನು ಈ ರೀತಿಯೂ ಅರ್ಪಿಸಬಹುದೆಂದು ನಾಲ್ಕೇ ನಾಲ್ಕು ಸಾಲುಗಳಲ್ಲಿ ಬರೆದ ಅರ್ಪಣೆಯ ನುಡಿಗಳು ಡುಮ್ಮಿಂಗ ಕೈಗೆತ್ತಿಕೊಂಡು ತಿರುವಿದ ಮೊದಲ ಪುಟದಲ್ಲೇ ಮುದ್ದು ಹುಡಗನ ಕೆನ್ನೆ ಸವರಿದಂತಿತ್ತು. ಹಸಿದ ಪುಟ್ಟ ಪೋರನೊಬ್ಬ ಪೇಟೆಯ ಬೀದಿ ಬದಿಯ ಬೇಕರಿಯವನ ಮುಂದೆ ಒಂದೇ ಒಂದು ಬ್ರೆಡ್ಡಿಗಾಗಿ ಕೈಯೊಡ್ಡಿ ನಿಲ್ಲುವಂತೆ ಕೊನೆಗೆ ಕೈ ಮುಷ್ಟಿಯಲಿದ್ದ ಬ್ರೇಡ್ ಗಬಗಬನೇ ತಿನ್ನುವಂತೆ ನಾನು ಡುಮ್ಮಿಂಗನ ಕಥೆಗಳನ್ನ ತಿಂದು ಮುಗಿಸುತಿದ್ದೆ.
ಹಸಿದವನಿಗೆ ಊಟ - ಓದಿನ ಹಸಿವಿದ್ದವನಿಗೆ ಚೆಂದದ ಪುಸ್ತಕ ಕೈಗೆ ಸಿಕ್ಕರೆ ಏನಾಗಹುದೆಂದು ಡುಮಿಂಗ ಎಂಬ ಕಥಾಸಂಕಲನದ
ಒಂದೊಂದೇ ನೀಲ ಸಮುದ್ರದಂತಹ ಕಥೆಗಳನ್ನ ದಾಟುವಾಗಲೇ ಅರ್ಥವಾಗಿದ್ದು.
“ಮುದಕನೊಬ್ಬನ ‘ಕಣ್ಣಿನ’ ಮೂಲಕ ಯುವಕನೊಬ್ಬ ಬರೆದ ಕಥೆಗಳು ಕನ್ನಡಕ್ಕೆ ಇಲ್ಲಿ ಸಿಕ್ಕಿವೆ” ಎಂದು ಹೇಳುವ ಮೂಲಕ ಮುನ್ನಡಿ ಶುರು ಮಾಡುವ ಲಲಿತಾ ಸಿದ್ಧಬಸವಯ್ಯ ಅವರು ಓದುಗನಿಗೆ ಅಭಿಪ್ರಾಯ ಹೇಳಲೂ ಏನು ಉಳಿಸಿಯೇ ಇಲ್ಲ.
ಅತೀ ಸಾಮಾನ್ಯ ಮನುಷ್ಯರ ಜೀವನದ ಒಂದೊಂದು ಮಗ್ಗುಲನ್ನೇ ಹಗುರಾಗಿ ತೆರೆದಿಡುವ, ತೆರೆದಿಟ್ಟ ಚಿತ್ರವನ್ನು ನಾವೇ ಪರಾಮರಿಸಿ ಕೊಳ್ಳುವಂತೆ ಮಾಡುವ ಕಥೆಗಳು ಇಲ್ಲಿವೆ. ಓದಗನನ್ನು ಜೀವನಾನುಭದ ಸಂತೆಯಲ್ಲಿ ಕೊಂಡಯ್ಯೋದು ನಿಲ್ಲಿಸುವ ಒರೆ ಕೊರೆಗಳನ್ನ ಬಿಕರಿಗಿಟ್ಟು ಆಯ್ಕೆಗಳನ್ನೆಲ್ಲಾ ಓದುಗನಿಗೆ ಬಿಟ್ಟು ಸಂತೆಯ ಚಿತ್ರಣವನ್ನು ಮಾತ್ರ ನಮ್ಮ ಮುಂದಿಟ್ಟಂತೆ ಕಾಣುವ ಕಥೆಗಳಿವೆ. ಡುಮ್ಮಿಂಗ ಎಂಬ ಕೂತಹಲದ ಶೀರ್ಷಿಕೆಯೇ ಓದಗನನ್ನು ಹಿಡಿದಿಟ್ಟುಕೊಳ್ಳುತ್ತದೆ. ನಮ್ಮದೇ ಜೀವನದ ಸಣ್ಣ ಸಣ್ಣ ಘಟನೆಗಳು ಬದುಕಿನ ಯಾವುದೋ ಘಳಿಗೆಯಲ್ಲಿ ನಡೆದು ನೆನಪಿನಾಳದಿಂದ ಮರೆಯಾದ ಸಂಗತಿಗಳು, ಮೊನ್ನೆ ಮನ್ನೆಯಷ್ಟೇ ಗಮನಿಸಾಯೂ ಯೋಚಿಸದ ಎಷ್ಟೋ ಸಂಗತಿಗಳು ಡುಮ್ಮಿಂಗ ಕಥಾಸಂಕಲನದ ಕಥೆಗಳೂದ್ದಕ್ಕೂ ತೆರೆದುಕೊಳ್ಳುತ್ತವೆ. ಸ್ವಾರಸ್ಯಕರ ಕಥೆಗಳನೊಳಗೊಂಡ ಈ ಕಥಾಸಂಕಲನ ನೀವು ಓದದೇ ಹೋದರೆ ಒಂದೊಳ್ಳೆ ಕನ್ನಡ ಕೃತಿಯಿಂದ ಅದರ ಸ್ವಾರಸ್ಯಕರ ಓದಿನಿಂದ ವಂಚಿತರಾಗುವುದಂತು ಸತ್ಯ.
ಶಶಿ ತರೀಕೆರೆ ಅವರ ಕಥೆಗಳಲ್ಲಿ ರೂಪಕಗಳು ಒಂದಕ್ಕೊಂದು ನೀಡಿದ ಹೋಲಿಕೆಗಳು ನಿಜಕ್ಕೂ ನಮ್ಮ ಕಣ್ಣುಗಳನ್ನ ಅರಳಿಸುತ್ತದೆ ಮಲೀನಾ ಕಥೆಯಲ್ಲಿ… “ಕಳೆದ ವಾರ ಒಂದು ಸಂಜೆಯ ಹೊತ್ತಿಗೆ ಬಡ ದೇವರಂತೆ ಮಲೀನಾ ಸಿಕ್ಕಿದ್ದಳು’ ಎಂದು ಬರೆಯುತ್ತಲೇ ಕಥೆ ಶುರುವಾಗುತ್ತದೆ ಇಂತಹ ರೂಪಕದಿಂದ ಕಥೆಗೆ ಮತ್ತೊಂದಿಷ್ಟು ರಂಗು ಬಂದಂತಾಗುತ್ತದೆ. ಕಥಾವಸ್ತು ಅಂತೂ ಅವರು ಮುದಕನ ಕಣ್ಣಿನಿಂದಲೇ ನೋಡಿ ಸಮೃದ್ದವಾದ ಅನುಭವದಿಂದಲೇ ಚಿತ್ರಿಸಿದಂತಿದೆ.
ಒಟ್ಟಾರೆ ಡುಮ್ಮಿಂಗ ಕಥಾಸಂಕಲನದಲ್ಲಿ ಒಂಬತ್ತು ಕಥೆಗಳಿದ್ದು ಯಾವದು ಚೆನ್ನಾಗಿದೆ ಎಂದು ಕೇಳಿದರೆ ಬಹುಶಃ ಉತ್ತರಿಸುವುದು ಕಷ್ಟ ಅದರಲ್ಲೂ ತೀರಾ ನನಗೆ ಇಷ್ಟವಾದ ಕಥೆಗಳೆಂದರೆ ಜನರಲ್ ವಾರ್ಡ್, ಶುಗರ್ ಫ್ರೀ, ಮಲೀನಾ, ಮುಗಿಲ ಕರೆ, ಪ್ರಣಯರಾಜ ಲೇಡೀಸ್ ಟೈಲರ್ ಜೀನಿ ಇವಿಷ್ಟು ಎತ್ತಿಟ್ಟುಕೊಂಡು ಮತ್ತೆ ಮತ್ತೆ ಓದಬೇಕಿನಿಸುವ ಕಥೆಗಳು.
ಒಬ್ಬ ಕಥೆಗಾರನಿಗೆ ಬರವಣಿಗೆಯ ಶೈಲಿ ಕಥೆ ಕಟ್ಟುವಿಕೆ ಎಷ್ಟು ಮುಖ್ಯವಾಗುತ್ತದೋ ಅಷ್ಟೇ ಅವನೂ ದಿನನಿತ್ಯದ ಜೀವನದ ಆಗುಹೋಗುಗಳಲ್ಲಿ observation ಮಾಡುವುದು ಅಷ್ಟೇ ಮುಖ್ಯವಾಗುತ್ತದೆ ಬಹುಶಃ ಅದಕ್ಕೆ ಪೂರಕವೆಂಬಂತೆ ಶಶಿ ತರೀಕೆರೆ ಅವರ ಶುಗರ್ ಫ್ರೀ ಕಥೆಯಲೊಂದು ಸಾಲು ಹೀಗೆ ಬರುತ್ತದೆ…ಈ ಕಥೆಯ ನಿರೂಪಣೆ ಪ್ರಥಮ ಪುರುಷ ಇರುವಂತಹದು ಹಾಗಾಗಿ ಕಥಾನಾಯಕ ಬಸ್ಸಿನಲ್ಲಿ ಹೊರಟಿರುತ್ತಾನೆ ಆಗ ಅವನಿಗೊಂದು ಮಗು ಕಾಣುತ್ತದೆ ಆಗ ಹೀಗೆ ಬರೆಯುತ್ತಾನೆ ಅವನು..“ಆಗಲೇ ಪುಟ್ಟ ಮಗುವೊಂದರ ಚಿಗುರು ಕೈ ನನ್ನ ಪ್ಯಾಂಟಿನ ಕಿಸೆಗೆ, ಸೊನೆ ಮಳೆಯ ಹನಿಗಳು ತಾರಸಿ ಮೇಲಿನ ಕುಬ್ಜ ವೃಕ್ಷಕ್ಕೆ ಮುತ್ತಿಡುವಂತೆ ತಾಗುತಿತ್ತು. ಹಿತವಾಗಿ ಮಗುವಿನತ್ತ ನೋಡಿದೆ ಸಣ್ಣ ಲಾಟೀನಿನಂತಿದ್ದ ಅದರ ಮೃದು ತುಟಿ ಬಾಯಾರಿದಂತೆ ಕಂಡಿತು. ಚೂರು ಗಮನಿಸಿ ನೋಡಿದೆ. ಬಳೆಯ ಚೂರಿನಲ್ಲಿ ಗೆರೆ ಎಳೆದಂತೆ ತುಟಿಯ ಮೇಲೆಲ್ಲಾ ಸಣ್ಣಗೆ ಬಿರುಕುಗಳು…” ಹೀಗೇ ಹೇಳುತ್ತಾ ಹೋಗುವಾಗ ಓದುಗರಾದ ನಮಗೊಮ್ಮೆ ಪುಸ್ತಕ ಮುಚ್ಚಿಟ್ಟು ಕೆಲವೊತ್ತು ಆ ಚಿತ್ರಣವನ್ನೇ ತಿರುಗಿಸಿ ತಿರುಗಿಸಿ ನೋಡಬೇಕೆನಿಸದೆ ಇರಲಾರದು. ಹೀಗೆಯೇ ಎಲ್ಲ ಕಥೆಗಳಲ್ಲೂ ರೂಪಕಗಳು ಆ ಕಥೆಯ ಚಿತ್ರಣಗಳು ಕಣ್ಮೂಂದೇ ನಡೆಯುವಂತೆ ಕಟ್ಟಿಕೊಡುವಲ್ಲಿ ಲೇಖಕಕರು ಯಶಸ್ವಿಯಾಗಿದ್ದಾರೆ.
ಇನ್ನೂ ಏನೇನೋ ಹೇಳಬೇಕು ! ಹೇಳಿದಷ್ಟು ನಾನು ಖಾಲಿ ಆಗುತ್ತಾ ಹೋಗುತ್ತೆನೆನ್ನುವ ಭಯ. ಓದಿದಷ್ಟನ್ನೂ ಕೆಲವು ದಿನ ನನ್ನೊಳಗೇ ಇಟ್ಟುಕೊಂಡು ಮೈ ಸವರಬೇಕೆಂಬ ಸ್ವಾರ್ಥ. ಅದರ ಗುಂಗಿನೊಳಗೆ ಇರುವಂತೆ ನನ್ನ ಭಾವನಾ ಲೋಕದ ಯಾವದೋ ತಂತಿಯೊಂದು ಮಿಡಿಯುತಿದೆ ನನ್ನ ಬರೆಯುದನ್ನು ತಡೆಯುತ್ತಿದೆ ಹಾಗಾಗಿ ಇಗೋ ಇನ್ನೂ ಇಲ್ಲಿಗೆ ಅಭಿಪ್ರಾಯ ನಿಲ್ಲಿಸುತ್ತಿದ್ದೇನೆ. ಮುಂದಿನದು ಡುಮ್ಮಿಂಗ ಆಯ್ತು ನೀವಾಯ್ತು…. ನಾನು ಬರೀ ನೆಪವಷ್ಟೇ…
ಛಂದ ಬಹುಮಾನ ಕೊಟ್ಟು ಚೆಂದದ ಕೃತಿ ಪ್ರಕಟಿಸಿದ ವಸುಧೇಂದ್ರ ಸರ್ ಅವರಿಗೂ..
ಇಡೀ ಕಥಾಸಂಕಲನದ ಸಾರಾಂಸ ತಮ್ಮ ಮುನ್ನುಡಿಯಲ್ಲಿ ಹಿಡಿದಿಟ್ಟು ಓದುಗನ ಮುಂದಿಟ್ಟ ಲಲಿತಾ ಸಿದ್ಧಬಸವಯ್ಯ ಮೇಡಂ ಅವರಿಗೂ…
ಬೆರಗು ಮೂಡಿಸುವಂತೆ ಕಥೆ ಬರೆದ ಶಶಿ ತರೀಕೆರೆ ಅವರಿಗೂ
ಬರೀ ಧನ್ಯವಾದಗಳು ತಿಳಿಸಿದರೆ ಕಡಿಮೆ ಅನ್ನಿಸುತ್ತದೇನೋ…!
ನಿಮ್ಮೆಲ್ಲರಿಗೊಂದು ಸಲಾಂ….
ಧನ್ಯವಾದಗಳೊಂದಿಗೆ.
ರವಿ ಶಿವರಾಯಗೊಳ.