ದೃಶ್ಯಕಲೆಯನ್ನು ಕುರಿತಾದ ಕನ್ನಡದ ಲೇಖನಗಳನ್ನು ಒಟ್ಟುಗೂಡಿಸಿರುವ ಲಕ್ಷ್ಮಣ ಬಾದಾಮಿಯವರ ಈ ಪುಸ್ತಕದಲ್ಲಿ ಹಲವು ವಿಶೇಷಗಳು ಒಮ್ಮೆಲೆ ನಮಗೆ ಗೋಚರಿಸುತ್ತವೆ. ತಾವು ರಚಿಸಿದ ಕಲಾಕೃತಿಗಳ ಬಗ್ಗೆ ಸ್ವತಃ ಆಯಾ ಕಲಾವಿದರೇ ‘ವಿವರಣೆ’ ನೀಡುವಂತೆ ಅವರಿಂದ ಬರವಣಿಗೆಯನ್ನೂ ಮಾಡಿಸಿ, ಜೊತೆಗೆ ಪ್ರತಿಯೊಂದು ಕೃತಿಯ ಬಗ್ಗೆಯೂ ಸ್ವತಃ ಲಕ್ಷ್ಮಣ್ ವಿಶ್ಲೇಷಣಾತ್ಮಕವಾಗಿ ಬರೆದಿದ್ದಾರೆ. ತದ್ವಿರುದ್ಧವಾಗಿ ಕನ್ನಡ ಸಾಹಿತ್ಯ ಕೃತಿಯೊಂದನ್ನು `ವಿವರಿಸಲು’ಅದರ ಕರ್ತೃ ಚಿತ್ರವೊಂದನ್ನು ಬರೆಯುವುದನ್ನು ನೆನೆಸಿಕೊಳ್ಳಿ! ಅದು ಅಸಾಧ್ಯ. ಕನ್ನಡದಲ್ಲಿ ದೃಶ್ಯಬರಹವೆಂಬುದು ಅಂಚಿನ ಸಾಹಿತ್ಯ ಎಂಬುದಕ್ಕೆ ಇದೊಂದು ಸೂಕ್ಷ್ಮ ಸಾಕ್ಷಿಯಷ್ಟೇ. ದೃಶ್ಯಕಲೆಗೆ ‘ಅಂಚಿನ ಅಭಿವ್ಯಕ್ತಿ’ ಯಾಗುವುದೂ ಒಂದು ರೂಢಿಯಾಗಿಬಿಟ್ಟಿದೆ. ಪ್ರತಿಯೊಂದು ಚಿತ್ರದ ಬಗ್ಗೆ ಬರೆದಾಗಲೂ, ಪ್ರತಿ ಬರವಣಿಗೆಗೆ ಚಿತ್ರ ಒದಗಿಸಿದಾಗಲೂ(ಇಲ್ಲಸ್ಟ್ರೇಷನ್‍ಗಳಲ್ಲಿ ಆಗುವಂತೆ) ಅದು ಮೊದಲಿಗೆ ಒಂದು ‘ಅಪಾಲಜಿ’(ಸಮರ್ಥನೆ) ಆಗಿಬಿಡುತ್ತದೆ ಎಂಬುದು ಸ್ಪಷ್ಟ. ಈ ನೆಲೆಯಿಂದ ಲಕ್ಷ್ಮಣರು ಒಟ್ಟುಗೂಡಿಸಿರುವ ಇತರರ ಹಾಗೂ ತಮ್ಮ ಬರವಣಿಗೆಯ ಗುಚ್ಛವನ್ನು ಗಮನಿಸಬೇಕಾಗುತ್ತದೆ.
ಒಬ್ಬ ಕಲಾವಿದನ/ಳ ಕೃತಿಯ ಬಗ್ಗೆ ಮತ್ತೊಬ್ಬ ಕಲಾವಿದನಿಂದ ಬರೆಸುವ ಬದಲಿಗೆ ಈ ಕಲಾವಿದರ ‘ಆತ್ಮಚರಿತ್ರಾತ್ಮಕ’ ವಿವರಣೆಯನ್ನು ಇಲ್ಲಿ ಮುಖ್ಯವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಲಕ್ಷ್ಮಣ್ ಈ ಒಂಬತ್ತು ಕಲಾವಿದರ ಒಂದೊಂದು ಕೃತಿಯನ್ನೂ ‘ಸ್ವತಃ’ ವಿವರಿಸುವಾಗ, ಅವುಗಳನ್ನೇ ಕುರಿತಾದ ಆಯಾ ಕಲಾವಿದರ ಬರವಣಿಗೆಯನ್ನು ತಮ್ಮ ಪ್ರತಿಯ ಪಕ್ಕದಲ್ಲಿರಿಸಿಕೊಳ್ಳುತ್ತಾರೆ. ಅದನ್ನೂ ಕೃತಿಯ ಭಾಗವನ್ನಾಗಿಸುವುದಿಲ್ಲ! ಅಂದರೆ ಒಬ್ಬ ಕಲಾವಿದನ ಕೃತಿಯೊಂದಿಗೆ, ಅದನ್ನು ಕುರಿತಾದ ಆತನದ್ದೇ(ಆಕೆಯದ್ದೇ ಎಂಬುದು ಇಲ್ಲಿಲ್ಲ. ಪ್ರಾತ್ಯಕ್ಷಿಕೆ-ಚಿತ್ರ ಬಿಡಿಸುವ ಕನ್ನಡದ ಕಲಾವಿದೆಯರನ್ನು ಇನ್ನೂ ಕಾಣಬೇಕಿದೆ, ಬರವಣಿಗೆಯಲ್ಲಿ) ಬರವಣಿಗೆಯ ಹಿನ್ನೆಲೆ ಯಲ್ಲಿ ಈ ಚಿತ್ರವನ್ನು ಕುರಿತು ಬರೆದಿಲ್ಲ. ಇದರಿಂದಾಗಿ ವಿವರಣೆ, ವಿಶ್ಲೇಷಣೆ, ವಿಮರ್ಶೆ ಎಂಬ ಮೂರು-‘ವಿ’ಗಳು ಕೃತಿ ಸೃಷ್ಟಿಯಾದ ‘ನಂತರ’ ಬರುವಂತಹದ್ದು ಎಂಬ ಗಾಢನಂಬಿಕೆಯನ್ನು ಊರ್ಜಿತಗೊಳಿಸಿದಂತಾಗಿದೆ ಈ ಪುಸ್ತಕ. ಮತ್ತೊಂದು ಅರ್ಥದಲ್ಲಿ, ‘ಬರವಣಿಗೆಯಿಂದ ಹೊರತಾದ ದೃಶ್ಯವೇ ಕಲೆಯಾಗಿ ತನ್ನ ಅನನ್ಯತೆಯನ್ನು ಕಾಪಾಡಿಕೊಳ್ಳಬಲ್ಲದು’ ಎಂಬ ಆಧುನಿಕ ಕನ್ನಡದ ಕಲಾವಿದರ ದಶಕಗಟ್ಟಲೆಯ ಬಲವಾದ ನಂಬಿಕೆಯ ಸಂಪ್ರದಾಯದಿಂದ ಮೂಡಿಬಂದಿರುವ ಚೇತೋಹಾರಿ ಪುಸ್ತಕವಿದು. ಜೊತೆಗೆ ಭಾರತೀಯವಾದ, ಕರ್ನಾಟಕದ ಕಲಾಕೃತಿಗಳು ಎಂಬ ಪ್ರಾದೇಶಿಕ, ಭೌಗೋಳಿಕ ವರ್ಗೀಕರಣದ ಕ್ಲೀಷೆ ಮತ್ತು ಕಲಾ ಇತಿಹಾಸದ ಶಿಸ್ತು ಇಲ್ಲಿಲ್ಲ. ಅಷ್ಟೇ ಅಲ್ಲ, ಕಲಾವಿದರ ವಯಸ್ಸು, ತಲೆಮಾರು, ಗ್ರಾಮೀಣ ನಗರಕೇಂದ್ರಿತ- ಇವೇ ಮುಂತಾದ ಸಾಂಸ್ಕೃತಿಕ ಇತಿಹಾಸಕ್ಕೆ ಆಹಾರವಾಗಬಲ್ಲ ಕಲಾವಿದರ ಹಿನ್ನೆಲೆಗಳನ್ನು ಬದಿಗಿರಿಸಿ, ಪರಿಶುದ್ಧವಾಗಿ ‘ಒಂದು ಚಿತ್ರ, ಒಂದು ವಿಶ್ಲೇಷಣೆ’ ಎಂಬ ನಿರ್ಮಿತಿಗೆ ಸಂಪೂರ್ಣ ಗಮನವನ್ನು ನೀಡಲಾಗಿದೆ. ಈ ಬಗೆಯ ಏಕ-ಕೃತಿ-ಗ್ರಹೀತಕ್ಕೆ ಕಾರಣವನ್ನು ಒದಗಿಸಲೊಪ್ಪದೆ ಈ ಪುಸ್ತಕವು, ಅಂತಹ ಅಭ್ಯಾಸದ ಅನಿವಾರ್ಯತೆಯೊಂದನ್ನು ಸೃಷ್ಟಿಸಲು ಒತ್ತಾಯಿಸುತ್ತದೆ.
ಪುಟಗಳು: 48
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !