ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಅಕ್ಷರ ಪ್ರಕಾಶನಕ್ಕೆ ೫೦ ತುಂಬಿದ ೨೦೦೬ನೆಯ ವರ್ಷ, ದಿ| ಕೆ.ವಿ. ಸುಬ್ಬಣ್ಣನವರ ನೆನಪಿಗೆ, ಈ ಹೊಸ ಪುಸ್ತಕಮಾಲೆಯ ಮೊದಲ ಕಂತಿನ ೨೫ ಪುಸ್ತಕಗಳು ಬಿಡುಗಡೆಗೊಂಡವು; ೨೦೦೭ರಲ್ಲಿ ಎರಡನೆಯ ಕಂತಿನ ಇನ್ನೂ ೧೦ ಪುಸ್ತಕಗಳು ಮತ್ತು ೨೦೦೯ರಲ್ಲಿ ಇನ್ನೂ ೧೫ - ಹೀಗೆ ಒಟ್ಟು ೫೦ ಪುಸ್ತಕಗಳು ಈವರೆಗೆ ಈ ಮಾಲಿಕೆಯಲ್ಲಿ ಪ್ರಕಟಗೊಂಡಿವೆ.
ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು - ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ - ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು-ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.
ABOUT THE AUTHOR
ಪ್ರಸಿದ್ಧ ಜೈನಕವಿಯಾದ ರನ್ನನು ಕನ್ನಡದ ಆದಿಕವಿಗಳ ‘ರತ್ನತ್ರಯ’ರಲ್ಲಿ ಒಬ್ಬ. ಕ್ರಿ.ಶ. ೯೪೯ರಲ್ಲಿ ಇವತ್ತಿನ ಮುಧೋಳವಾಗಿರುವ ಮುದುವೊಳಲು ಊರಿನಲ್ಲಿ ಜಿನವಲ್ಲಭೇಂದ್ರ ಮತ್ತು ಅಬ್ಬಲಬ್ಬೆಯರ ಮಗನಾಗಿ ಈತ ಜನಿಸಿದ. ಮುಂದೆ ಆತ ದಕ್ಷಿಣ ಕರ್ನಾಟಕಕ್ಕೆ ಬಂದು ಶ್ರವಣಬೆಳಗೊಳದಲ್ಲಿ ನೆಲೆಸಿ ಪ್ರಸಿದ್ಧ ಜೈನ ಮುನಿಗಳಾದ ಅಜಿತಸೇನಾಚಾರ್ಯರಲ್ಲಿ ವ್ಯಾಸಂಗ ಮಾಡಿದ. ಚಾವುಂಡರಾಯ, ಅತ್ತಿಮಬ್ಬೆಯರ ಆಶ್ರಯದಿಂದ ಪೋಷಿತನಾದ ರನ್ನ ಚಾಲುಕ್ಯ ಚಕ್ರವರ್ತಿ ತೈಲಪನ ಆಸ್ಥಾನಕವಿಯೂ ಆದ. ‘ಅಜಿತನಾಥಪುರಾಣ’ ಮತ್ತು ‘ಗದಾಯುದ್ಧ’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿರುವ ‘ಸಾಹಸಭೀಮವಿಜಯಂ’ ಆತನ ಎರಡು ಪ್ರಸಿದ್ಧ ಕೃತಿಗಳು; ಇದರಲ್ಲಿ ಮೊದಲನೆಯದು ಜೈನ ತೀರ್ಥಂಕರರೊಬ್ಬರ ಕಥಾನಕವಾದರೆ ಎರಡನೆಯದು ಮಹಾಭಾರತವನ್ನು ಆಧರಿಸಿದ್ದು. ‘ಚಕ್ರೇಶ್ವರ ಚರಿತಂ’ ಮತ್ತು ‘ಪರಶುರಾಮಚರಿತಂ’ ಎಂಬೆರಡು ಕೃತಿಗಳನ್ನು ಆತ ರಚಿಸಿದನೆಂಬ ಉಲ್ಲೇಖವಿದ್ದರೂ ಅವು ಲಭ್ಯವಾಗಿಲ್ಲ. ‘ಕವಿಚಕ್ರವರ್ತಿ’, ‘ಶ್ರೀಕವಿರತ್ನ’ ಮೊದಲಾದ ಬಿರುದುಗಳನ್ನೂ ಪಡೆದಿದ್ದ ರನ್ನ ಹಳೆಗನ್ನಡ ಕವಿಗಳಲ್ಲೇ ಅತ್ಯಂತ ಜನಪ್ರಿಯ.
ಪುಟಗಳು: 117
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !