ಆರು ಹಿತವರು ನಿನಗೆ – ಇದು ಆರು ಅನುವಾದಿತ ಕತೆಗಳ ಗುಚ್ಛ. ನಾನು ಮೆಚ್ಚಿದ ಈ ಆರು ಕತೆಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಭಾವಾನುವಾದ ಮಾಡಿದ್ದೇನೆ. ಕತೆಗಳ ಪಾತ್ರಗಳು ಮತ್ತು ಕೆಲವು ಊರುಗಳ ಹೆಸರುಗಳನ್ನು ಕನ್ನಡದ ಗುಣಕ್ಕೆ ಹೊಂದುವಂತೆ ಬದಲಾಯಿಸಿದ್ದೇನೆ.
ಈ ಕತೆಗಳ ಕಾಲಘಟ್ಟ ಕಳೆದ ಶತಮಾನದ ಮಧ್ಯಭಾಗ ಎನ್ನಬಹುದು. ಜಗತ್ತಿನ ವಿವಿಧ ಭಾಗಗಳ ಜನರ ನಿತ್ಯಜೀವನದ ಕಟುಸತ್ಯಗಳನ್ನು ಮತ್ತು ಚೆಲುವನ್ನು ಕಾಲ್ಪನಿಕ ಕತೆಗಳ ರೂಪದಲ್ಲಿ ಇವುಗಳ ಲೇಖಕರು ನಮ್ಮ ಮುಂದೆ ಇಟ್ಟಿದ್ದಾರೆ. ಆಹಾರದಲ್ಲಿ ಷಡ್ರಸಗಳು ಹದವಾಗಿ ಬೆರೆತಾಗ ರುಚಿಕಟ್ಟಾದ-ಆರೋಗ್ಯಕರವಾದ ಭೋಜನ ಸಿದ್ಧವಾಗುತ್ತದೆ. ಹಾಗೆಯೇ ಇಲ್ಲಿರುವ ಆರುಕತೆಗಳು ಒಂದಾಗಿ ಭಾವರಸಪಾಕವೊಂದು ಸೃಷ್ಟಿಯಾಗಿದೆ. ಈ ಕಾವ್ಯರಸವನ್ನು ಸವಿಯ ಹೊರಟಿರುವ ಓದುಗರಿಗೆ ಪುಷ್ಕಳ ಭೋಜನವು ದೊರಕಲಿ ಎಂಬುದು ನನ್ನ ಪ್ರಾರ್ಥನೆ.