ಕೇವಲ ಕಥಾ ಸಾರಾಂಶ ಕೊಟ್ಟು, ಕವಿ ಕಾಲ ಕೃತಿ ಕುರಿತು ನಾಲ್ಕು ಸಾಲು ಬರೆದು ಪೀಠಿಕೆ ಮುಗಿಸದೆ ಇಂಥ ಮೌಲಿಕ ಕೃತಿಗಳ ಗ್ರಂಥ ಸಂಪಾದನೆ ಹೆಚ್ಚು ಜವಾಬ್ದಾರಿಯುತವಾಗಿರ ಬೇಕೆಂಬುದು ನನ್ನ ಗ್ರಹಿಕೆ. ಅದರಿಂದ ಪೊನ್ನನ ಶಾಂತಿಪುರಾಣ, ಸಾಳ್ವನ ಸಾಳ್ವ ಭಾರತ, ಆದಿಯಪ್ಪನ ಧನ್ಯಕುಮಾರ ಚರಿತೆ, ಬೊಮ್ಮಣಕವಿಯ ನಾಗಕುಮಾರ ಷಟ್ಪದಿ, ಮಂಗರಸನ ಜಯನೃಪ ಕಾವ್ಯ ಮತ್ತು ರತ್ನಾಕರನ ಹಾಡುಗಳು-ಈ ಕೃತಿಗಳನ್ನು ಸಂಪಾದಿಸುವ ಕಾರ್ಯದಲ್ಲಿ ನನ್ನೆಲ್ಲ ಶ್ರಮಸಾಧ್ಯ ಪಾಂಡಿತ್ಯ ಕಾಯಕದ ತಿಳಿವಳಿಕೆಯನ್ನು ಆಯಾ ಕೃತಿಯ ಪ್ರಸ್ತಾವನೆಯಲ್ಲಿ ಭಟ್ಟಿಯಿಳಿಸಿದ್ದೇನೆ. ಪೊನ್ನ ಹಾಗೂ ಮಂಗರಸರ ಕೃತಿಯನ್ನು ಬಿಟ್ಟರೆ, ಮೇಲೆ ಹೇಳಿರುವ ನಾಲ್ಕು ಕೃತಿಗಳು ಅಪ್ರಕಟಿತವಿದ್ದು ಅದೇ ಮೊದಲ ಬಾರಿಗೆ ನನ್ನಿಂದ ಸಂಪಾದಿತವಾಗಿ ಪ್ರಕಟವಾದುವೆಂಬುದು ನನಗೆ ಸಮಾಧಾನ ತಂದ ವಿಷಯ. ಪೊನ್ನನ ಸಾಹಿತ್ಯಕ ಸಾಧನೆಯ ವಿವಿಧ ಮಗ್ಗಲುಗಳನ್ನು ಪರಿಚಯಿಸುವದರೊಂದಿಗೆ ಅದಕ್ಕೆ ಮುಖ್ಯ ಹಿನ್ನೆಲೆಯಾಗಿ ಸಾಂಸ್ಕೃತಿಕ ಸಂದರ್ಭದ ಸ್ವರೂಪವನ್ನೂ ಸೂಕ್ತವೆನಿಸುವ ಪ್ರಮಾಣದಲ್ಲಿ ಮಂಡಿಸಿದ್ದೇನೆ. ಕಾವ್ಯದ ಕಥಾಂಶವಷ್ಟೇ ತಿಳಿಯುವ ಹಳೆಯ ಪರಂಪರೆಯವರಿಗೂ ಈ ಬಗೆಯ ವಿಮರ್ಶೆ-ಸಂಶೋಧನೆ ಕೂಡಿದ ಬರೆಹ ಪ್ರಿಯವಾಗುತ್ತದೆಂದು ಉತ್ತೇಜಿತಗೊಂಡು ಇನ್ನಷ್ಟು ಪೂರಕ ಸಾಮಗ್ರಿಯನ್ನು ಕೂಡಿಸಿ ಈ ಪುಸ್ತಕವನ್ನು ಅಣಿಗೊಳಿಸಿದ್ದೇನೆ.
- ಹಂ.ಪ. ನಾಗರಾಜಯ್ಯ
ಪುಟಗಳು : 200
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !