ಬರಹಗಾರರು: ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆ
ಓದಿದವರು:
ಸಚಿನ್ ನಾಯಕ್
ನಿರ್ಮಾಣ ಸಹಾಯ: ಧ್ವನಿಧಾರೆ ಮಿಡಿಯಾ
ಆಡಿಯೋ ಪುಸ್ತಕದ ಅವಧಿ : 10 ಘಂಟೆ 59 ನಿಮಿಷ
ಭೂಗತ ಜಗತ್ತಿನ ಅನೇಕ ವೃತ್ತಾಂತಗಳು ಇದರಲ್ಲಿ ಇದೆಯಾದರೂ ಇದು ಮೂಲತಃ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮನುಷ್ಯನೊಬ್ಬನ ಅದಮ್ಯ ಹೋರಾಟದ ಕಥೆ. ಈ ಕಥೆ ಪ್ರಾರಂಭವಾಗುವುದು ಫ್ರಾನ್ಸಿನ ರಾಜಧಾನಿ ಪ್ಯಾರಿಸ್ಸಿನಿಂದ. ಯಾವ ತಪ್ಪನ್ನೂ ಮಾಡಿಲ್ಲದ ಕೊಲೆ ಪ್ರಕರಣಕ್ಕೆ ಸಂಬಂಧವೇ ಇಲ್ಲದೆ ಎಲ್ಲೋ ಇದ್ದ ಒಬ್ಬ ತರುಣನನ್ನು (ಪ್ಯಾಪಿಲಾನ್) ನಿಷ್ಕಾರಣವಾಗಿ ಫ್ರೆಂಚ್ ಪೊಲೀಸರೂ, ಸರ್ಕಾರೀ ಲಾಯರುಗಳೂ ಸೇರಿ ಪಿತೂರಿ ಮಾಡಿ, ಜೀವಾವಧಿಶಿಕ್ಷೆ ವಿಧಿಸುವಂತೆ ಮಾಡಿ, ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದ ಕಾರಾಗೃಹ ದ್ವೀಪಗಳಿಗೆ ಗಡೀಪಾರು ಮಾಡಿಸುತ್ತಾರೆ. ಸಮಾನತೆ, ನ್ಯಾಯ, ಸ್ವಾತಂತ್ರಗಳಿಗೆ ಆಧಾರ ಸ್ಥಂಭವೆನಿಸಿದ್ದ ಫ್ರೆಂಚ್ ನಾಗರಿಕತೆಯೇ ಎಂಥ ಕ್ರೂರ, ನಿರ್ದಯ, ಅಮಾನುಷ ವ್ಯವಸ್ಥೆಯನ್ನು ಖೈದಿಗಳ ನೆವದಲ್ಲಿ ಅಲ್ಲಿ ರೂಪಿಸಿತ್ತು ಎನ್ನುವುದು ಇಡೀ ಮನುಕುಲವನ್ನೇ ಬೆಚ್ಚಿಬೀಳಿಸುವ ಸಂಗತಿ. ಈ ದ್ವೀಪಗಳಿಗೆ ಹೋದ ಯಾವನೂ ತನ್ನ ಕಾರಾಗೃಹದ ಅವಧಿ ಮುಗಿಸಿ ಜೀವಸಮೇತ ಹಿಂದಿರುಗಿರುವುದಿಲ್ಲ.
ಸುತ್ತ ವಿಶಾಲ ಸಾಗರದಿಂದ ಸುತ್ತುವರಿದಿದ್ದ ಈ ದ್ವೀಪಗಳಿಂದ ಪ್ಯಾಪಿಲಾನ್‌ನ ಹದಿಮೂರು ವರ್ಷಗಳ ನಿರಂತರ ಹೋರಾಟ ಆರಂಭವಾಗುತ್ತದೆ. ಸೆರೆಯಿಂದ ತಪ್ಪಿಸಿಕೊಂಡು ಪಲಾಯನ ಮಾಡುವುದೊಂದೇ ಮೂಲ ಮಂತ್ರವಾಗಿದ್ದ ಪ್ಯಾಪಿಲಾನ್ ಅನೇಕ ಬಾರಿ ಮೈ ನವಿರೇಳಿಸುವಂಥ ಸಾಹಸ ಮಾಡಿ ಪಲಾಯನ ಮಾಡುತ್ತಾನೆ. ಷಾರ್ಕುಗಳಿಂದ ಕಿಕ್ಕಿರಿದಿದ್ದ ಕೆರೆಬಿಯನ್ ಸಮುದ್ರದಲ್ಲಿ ತೇಲುವ ತೆಂಗಿನಕಾಯಿ ಮೂಟೆಯನ್ನು ಸಹ ತೆಪ್ಪದಂತೆ ಉಪಯೋಗಿಸಿ ಪರಾರಿಯಾಗಲು ಪ್ರಯತ್ನಿಸುತ್ತಾನೆ. ಮತ್ತೆ ಸಿಕ್ಕಿಬಿದ್ದಾಗ ಪರಾರಿ ಪ್ರಯತ್ನಕ್ಕಾಗಿ ಏಕಾಂತ ಶಿಕ್ಷೆಯನ್ನು ವಿಧಿಸುತ್ತಾರೆ. ಕರಿ ಕೂಪದ ಶಿಕ್ಷೆ ವಿಧಿಸುತ್ತಾರೆ. ಏನೇನು ಮಾಡಿದರೂ ತಪ್ಪಿಸಿಕೊಂಡು ಪಲಾಯನ ಮಾಡುವ ಹಂಬಲ ತೊರೆಯಲು ಪ್ಯಾಪಿಲಾನ್‌ಗೆ ಸಾಧ್ಯವಾಗುವುದೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಪ್ಯಾಪಿಲಾನ್‌ಗೆ ತನ್ನನ್ನು ನಿಷ್ಕಾರಣವಾಗಿ ಸೆರೆಗೆ ತಳ್ಳಿದವರ ಮೇಲೆ ಇದ್ದ ರೊಚ್ಚು. ಎಷ್ಟೋಸಾರಿ ಸಾವಿನ ಅಂಚಿಗೆ ಹೋದವನು ಹೇಗಾದರೂ ತನ್ನನ್ನು ಸೆರೆಗೆ ಹಾಕಿದವರ ಮೇಲೆ ಮುಯ್ಯಿ ತೀರಿಸಬೇಕೆಂದೇ ಬದುಕಿ ಬರುತ್ತಾನೆ.
ಇದೊಂದು ಇಪ್ಪತ್ತನೇ ಶತಮಾನದ ಸರ್ವಶ್ರೆಷ್ಠ ಸಾಹಸದ ಸತ್ಯ ಕಥೆ. ಅನೇಕ ಸ್ಥರಗಳಲ್ಲಿ ಇದು ಇಪ್ಪತ್ತನೇ ಶತಮಾನದ ನಾಗರಿಕತೆಯ ವಿಶ್ವರೂಪ ದರ್ಶನ ಮಾಡಿಸುವುದರಿಂದ ಇದನ್ನು ಆ ಶತಮಾನದ ಪ್ರಾತಿನಿಧಿಕ ಕೃತಿ ಎಂದು ಕರೆಯಬಹುದು. ಇದರ ಸಂಗ್ರಹ ಭಾವಾನುವಾದವನ್ನು ಕನ್ನಡಿಗರ ಕೈಗಿಡಲು ನಮಗೆ ಹೆಮ್ಮೆಯೆನಿಸುತ್ತದೆ.
- ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಈಗ ಕೇಳಿ ಪ್ಯಾಪಿಲಾನ್-1 ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.