ಲಡಾಖ್ ಆರೋಹಣ ಮಾಡುವಾಗ, ಆ ದಾರಿಯಲ್ಲಿ ಎದಿರಾಗುವ ಹಿಮಾಲಯದ ಅತಿ ವಿಶಿಷ್ಟ ಪ್ರಾಣಿ ಮಾರ್ಮೆಟ್ಟುಗಳ ಜೊತೆ ನಿಂತು ಫೋಟೋ ತೆಗೆಯುವಾಗ, ಅತಿ ವಿರಳ ಸಂಚಾರದ ದಾರಿಯಲ್ಲಿ ಸಿಗುವ ಯಾಕ್‌ಗಳ ಬೆಣ್ಣೆಯಿಂದ ಮಾಡಿದ ‘ಗುರ್ ಗುರ್’ ಚಹಾ ಪರಿಚಯಿಸುವಾಗ, ಗಿರಿಯನ್ನು ಹತ್ತುತ್ತಲೇ ಅಲ್ಲಿ ಸಿಗುವ ಅಪರೂಪದ ಮನುಷ್ಯನ ಮುಖಗಳನ್ನು ಅನಾವಣರಣಗೊಳಿಸಿ ಆ ಘಟನೆಗೊಂದು ತನ್ನ ಬಾಲ್ಯದ ಅನುಭವಗಳನ್ನು ತಳಕುಹಾಕಿ ನೋಡುವಾಗ, ಡಾ. ಸಲೀಂ ಒಬ್ಬ ನುರಿತ ಮನೋವಿಜ್ಞಾನಿಯಂತೆ, ಪಳಗಿದ ಕಥೆಗಾರನಂತೆ ಕಾಣುತ್ತಾರೆ. ಅಲ್ಲಿನ ಮಣ್ಣಿನ ಕಣಕಣವನ್ನು ಬಹು ಎಚ್ಚರಿಕೆಯಲ್ಲಿ ಕುತೂಹಲದಿಂದ ಗ್ರಹಿಸಿ, ಆ ನೆಲದ ನರ-ನಾಡಿಗಳನ್ನು ಪರೀಕ್ಷಿಸಿ, ಡಿಟೇಲ್ಡ್ ಪೋಸ್ಟ್ ಮಾರ್ಟ್ಂ ವರದಿ ನೀಡುವ ನುರಿತ ವೈದ್ಯನಾಗುತ್ತಾರೆ. ದಾರಿ ಸಾಗುತ್ತ ಸಾಗುತ್ತ ಅಲ್ಲಿನ ಬೌದ್ಧ ಗುರು ಲಾಮಾಗಳ ಬದುಕನ್ನು, ಚಳಿಗಾಲದಲ್ಲಿ ಆ ಜನರು ಎದುರಿಸುವ ಕಷ್ಟವನ್ನು ಕಲ್ಪಿಸುತ್ತ, ಅದನ್ನು ದಾಖಲಿಸುವ ಈ ಪುಸ್ತಕ ಕೇವಲ ಪ್ರವಾಸ ಕಥನವಾಗದೆ ಏಕಕಾಲದಲ್ಲಿ ಕಾಲ, ದೇಶಗಳಲ್ಲಿ ವಿಹರಿಸುತ್ತ ಚರಿತ್ರೆ ಮತ್ತು ವರ್ತಮಾನದಲ್ಲೂ ಸಂಚರಿಸುತ್ತದೆ.
-ಡಾ. ಲಕ್ಷ್ಮಣ. ವಿ. ಎ.
(ಮುನ್ನುಡಿಯಿಂದ)