ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
"ನೀಲಿ ಮೂಗಿನ ನತ್ತು" ಎಚ್. ಆರ್. ಸುಜಾತ ಅವರು ಬರೆದಿರುವ ಅನುಭವಗಳ ಸರಮಾಲೆ. ಬೆನ್ನುಡಿಯಲ್ಲಿ ಡಾ. ಬಿ.ಎ.ವಿವೇಕ ರೈ ಹೇಳುವಂತೆ, ಕನ್ನಡ ಕಥನ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದುಕೊಡುವ ಅಪೂರ್ವ ಕೃತಿ. ಊರು ತನ್ನ ದೇಸಿ ಗುಣವನ್ನು ಕಳೆದುಕೊಳ್ಳುವ ಮೂಲಕ ಅನಿಷ್ಟ ಮಾರಿಗಳನ್ನು ಬರಮಾಡಿಕೊಳ್ಳುವ ಆತ೦ಕದ ಶಬ್ದಚಿತ್ರಣಗಳನ್ನು ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಸ೦ಸ್ಕೃತಿಯ ಸೂಕ್ಷ್ಮಗಳನ್ನು, ಶಕ್ತಿಗಳನ್ನು ಮತ್ತು ದೌರ್ಬಲ್ಯಗಳನ್ನು ಸಹಜ ಭಾಷೆಯ ಒಳಗಿನಿಂದಲೇ ಅನಾವರಣ ಮಾಡುವ ಎಚ್.ಆರ್.ಸುಜಾತ ಅವರ ಕೃತಿ, ಕನ್ನಡದ ಸಿದ್ಧ ಸಾಹಿತ್ಯ ಪ್ರಕಾರಗಳನ್ನು ಮತ್ತು ಸಿದ್ಧ ಚಿಂತನ ಮಾದರಿಗಳನ್ನು ಮೀರುವ ಹೊಸ ಫಸಲು ಎಂದು ರೈ ಅಭಿಪ್ರಾಯಪಡುತ್ತಾರೆ. ಈ ಕೃತಿ ಒಂದು ಅನುಭವ ಕಥನವೇನೋ ನಿಜ. ಆದರೆ ಕೇವಲ ಖಾಸಗಿ ನೆಲೆಯಲ್ಲಿ ಉಳಿಯದೇ, ಸಾರ್ವತ್ರಿಕವಾಗಿ. ವಿಸ್ತರಿಸಿಕೊಳ್ಳುತ್ತದೆ. ಗ್ರಾಮೀಣ ಬದುಕನ್ನು ತೆರೆದಿಡುವ ಸುಮಾರು 24 ಪ್ರಬ೦ಧಗಳು ಇಲ್ಲಿವೆ.ಇವು ಪ್ರತ್ಯೇಕವಾಗಿದ್ದಂತೆ ಕಂಡರೂ ಆಳದಲ್ಲಿ ಒ೦ದಕ್ಕೊಂದು ಬೆಸೆದುಕೊಳ್ಳುತ್ತಾ ಒಂದು ದೀರ್ಫ ಕಥನದ ರೀತಿಯಲ್ಲಿ ಮುಂದುವರಿಯುತ್ತದೆ.
ಇಲ್ಲಿನ ನಿರೂಪಣೆಗಾಗಿ ಸುಜಾತ ಅವರು ಆಯ್ದುಕೊಂಡಿರುವ ನುಡಿ ಮಾದರಿ ಕೂಡ ಗಮನಿಸುವಂತಿದೆ. ಗ್ರಾಮ್ಯ ಕನ್ನಡದಲ್ಲೇ ತನ್ನ ಅನುಭವಗಳನ್ನು ನಿರೂಪಿಸುವ ಮೂಲಕ, ಗ್ರಾಮ್ಯ ಬದುಕಿನ ತಾಜಾತನವನ್ನು ಹೊರಚೆಲ್ಲಲು ಅವರಿಗೆ ಸಾಧ್ಯವಾಗಿದೆ. ಬಳಸಿದ ಭಾಷೆಯ ಸೌಂದರ್ಯ, ಅವರು ಹೇಳುವ ಕಥನಕ್ಕೆ ಪೂರಕವಾಗಿದೆ. ಇಲ್ಲಿ ನಿರೂಪಿಸಲ್ಪಟ್ಟ ಬಹುತೇಕ ಘಟನೆಗಳು ಲೇಖಕಿಯ ಬಾಲ್ಯಕಾಲದವು. ಕೆಲವು ಅನುಭವಗಳನ್ನು ಹೊರತು ಪಡಿಸಿದರೆ ಹೆಚ್ಚಿನವು ಹಳ್ಳಿ ಪ್ರದೇಶಗಳಲ್ಲೇ ನಡೆಯುತ್ತವೆ. ತಮ್ಮ ಬರಹಗಳಲ್ಲಿ ಹಳ್ಳಿಯ ಒಳಿತು ಕೆಡುಗಳನ್ನೂ ಅತ್ಯ೦ತ ಲವಲವಿಕೆಯ ನಿರೂಪಣೆಯ ಮೂಲಕ ಬಯಲಿಗೆಳೆಯುತ್ತಾರೆ. ಹೇಗೆ ಹಳ್ಳಿ ಹಂತಹಂತವಾಗಿ ಪತನದ ಕಡೆಗೆ ಸಾಗುತ್ತಿದೆ ಎನ್ನುವುದರ ಸೂಚನೆಯನ್ನೂ ಅವರು ನೀಡುತ್ತಾರೆ. ಇಲ್ಲಿರುವ ಬರಹಗಳು ಒಡಮೂಡಿರುವ ಬಗೆಯನ್ನೂ ಲೇಖಕಿ ತಮ್ಮ ಮುನ್ನುಡಿಯಲ್ಲಿ ಹೃದ್ಯವಾಗಿ ಕಟ್ಟಿಕೊಡುತ್ತಾರೆ. ವಸ್ತು, ನಿರೂಪಣೆ, ಭಾಷೆ ಹೀಗೆ ಬೇರೆ ಕಾರಣಗಳಿಗಾಗಿ ಈ ಕೃತಿ ಗಮನ ಸೆಳೆಯುತ್ತದೆ.
- ಕೃಪೆ ವಾರ್ತಾ ಭಾರತಿ ವಿಮರ್ಶೆ
ಪುಟಗಳು: 220
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !