ಪ್ರಸಿದ್ಧ ನಟ-ನಿರ್ದೇಶಕ-ನಾಟಕಕಾರರಾದ "ಮಂಥನ" ಸೇತುರಾಮ್ ಅವರ ಪ್ರಥಮ ಕಥಾಸಂಕಲನ 'ನಾವಲ್ಲ'. ಈ ಸಂಕಲನದಲ್ಲಿರುವ ಆರೂ ಕಥೆಗಳು ಕೌಟುಂಬಿಕ-ಧಾರ್ಮಿಕ-ರಾಜಕೀಯ ವ್ಯವಸ್ಥೆಗಳನ್ನು ವಾಸ್ತವಿಕ ನೆಲೆಯಲ್ಲಿ ನಿಶ್ಚಿತವಾಗಿ ವಿಶ್ಲೇಷಿಸುತ್ತವೆ. ಆ ವಿಶ್ಲೇಷಣೆಯ ಮೂಲಕವೇ ವ್ಯವಸ್ಥೆಗಳ ಆಳದಲ್ಲಿರುವ ಅಸಮಾನ ಸಂಬಂಧಗಳು, ಕ್ರೌರ್ಯ, ಭೀತಿ, ಅಸಹಾಯಕತೆ, ಇತ್ಯಾದಿಗಳನ್ನು ಬಿಚ್ಚಿ ತೋರಿಸುತ್ತವೆ; ಹಾಗೆ ತೋರಿಸುತ್ತಲೇ ಅವುಗಳನ್ನು ಮೀರುವ ಪ್ರತಿರೋಧದ ಮಾರ್ಗಗಳನ್ನೂ ಶೋಧಿಸುತ್ತವೆ. ಅಸಮಾನ ಅಧಿಕಾರವನ್ನಾಧರಿಸಿದ ಕೌಟುಂಬಿಕ ವ್ಯವಸ್ಥೆಯಲ್ಲಿ 'ಗಂಡನ ತಪ್ಪೇ ಇದ್ದರೂ ಮಗುವನ್ನು ಹೆರಲಾಗದವಳು ಹೆಂಡತಿಯೇ ಅಲ್ಲ; ('ಮೌನಿ')'; ಗಂಡನು ಸಲಿಂಗಕಾಮಿಯಾಗಿದ್ದರೂ ಅವನನ್ನು ಅನುಸರಿಸಿಕೊಂಡು ಹೋಗುವುದು, ಅವನು ಭ್ರಷ್ಠನಾದರೂ ಅವನನ್ನು ಕಾಪಾಡುವುದು ಹೆಂಡತಿಯಾದವಳ ಕರ್ತವ್ಯ('ಕಾತ್ಯಾಯಿನಿ'); ಮಕ್ಕಳ ನೆಲೆಯಲ್ಲಿಯೂ ಅಪ್ಪನು ಹೇಗಿದ್ದರೂ ಅವನು ಆದರ್ಶವಾಗುತ್ತಾನೆಯೇ ಹೊರತು ಹೆತ್ತು ಹೊತ್ತ ಅಮ್ಮನಲ್ಲ ('ಸ್ಮಾರಕ') ಇದೇ ನೆಲೆಯಲ್ಲಿ, ಧಾರ್ಮಿಕ ವ್ಯವಸ್ಥೆಯಲ್ಲಿ, 'ಮಠ ಇದೆ, ಅದು ಸತ್ಯ; ಆದರೆ ಧರ್ಮ ಎಲ್ಲಿದೆ?' ಎ೦ದು ಸದಾ ಪ್ರಶ್ನಿಸಿಕೊಳ್ಳುವ, ತಾನು ಕೇವಲ 'ಯಾರದ್ದೋ ಹಣ, ಅಸ್ತಿ ನಿದ್ದೆಗೆಟ್ಟು ಕಾಯುವ ನಿಯತ್ತಿನ ನಾಯಿ' ಎಂಬ ಕ್ರೂರ ಸತ್ಯವನ್ನು ಅರಿಯುವ ಪ್ರಾಮಾಣಿಕ ಮಠಾಧಿಪತಿ ತಾನೇ ನೇಣು ಹಾಕಿಕೊಂಡು ಸಾಯುತ್ತಾನೆ ('ಮೋಕ್ಷ'): ಇತ್ಯಾದಿ.
ಸೇತುರಾಮ್ ಬರೆದು ನಿರ್ದೇಶಿಸಿರುವ ನಾಟಕ-ಧಾರಾವಾಹಿಗಳಲ್ಲಾಗಲಿ ಈ ಸಂಕಲನದ ಕಥೆಗಳಲ್ಲಾಗಲಿ,ಅವರ ವೈಶಿಷ್ಟ್ಯವೆಂದರೆ ಸಂಭಾಷಣೆ - ಅತ್ಯಂತ ಚುಟುಕಾದ ಹಾಗೂ ಮೊನಚಾದ ವಾಕ್ಯಗಳಿಂದ ಕೂಡಿದ ಸಂಭಾಷಣೆ.ಈ ಬಗೆಯ ಸಂಭಾಷಣೆಯ ಮೂಲಕವೇ ಸೇತುರಾಮ್ ಅವರು ಪ್ರಸ್ತುತ ಜ್ವಲಂತ ಸಮಸ್ಯೆಗಳನ್ನಾಧರಿಸಿದ ಕಥನಗಳನ್ನು ಕಟ್ಟಕೊಡುತ್ತಾರೆ. ಪಾತ್ರಗಳ ವರ್ತನೆಯನ್ನುದಾಖಲಿಸುತ್ತಾರೆ, ಅವರ ಅಂತರಾಳಕ್ಕೆ ಕನ್ನಡಿ ಹಿಡಿಯುತ್ತಾರೆ.
ಈ ಎಲ್ಲಾ ಕಥೆಗಳನ್ನೂ ಓದಿದಮೇಲೆ ನಮಗೆ ಸಹಜವಾಗಿ ಏಳುವ ಪ್ರಶ್ನೆಯೆಂದರೆ, ಸೇತುರಾಮ್ ಅವರು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಲು ಏಕೆ ಇಷ್ಟು ತಡಮಾಡಿದರು?
-ಸಿ. ಎನ್. ರಾಮಚಂದ್ರನ್
ಪುಟಗಳು: 118
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !