ಬರಹಗಾರ: ಡಾ|| ಕೆ. ಶಿವರಾಮ ಕಾರಂತ
ನನ್ನ ಹಿಂದಣ ಕಾದಂಬರಿ 'ಕಣ್ಣಿದ್ದೂ ಕಾಣರು' ಎಂಬುದನ್ನು ಬರೆದ ಮೇಲೆ ಎರಡು ವರ್ಷಗಳ ಕಾಲ ಕಾದಂಬರಿ ಬರೆಯುವ ಗೋಜಿಗೆ ಹೋಗಿರಲಿಲ್ಲ. ಎಷ್ಟೋ ವಿಷಯಗಳು ಆಗಾಗ ಮನಸ್ಸಿಗೆ ಹೊಳೆಯುತ್ತವೆ; ಅವನ್ನು ನೆನೆದು ಇದು ಕಾದಂಬರಿಗೆ ಯೋಗ್ಯ ವಿಷಯವಾದೀತು ಎಂದು ಅನಿಸಿದ್ದುಂಟು. ಅನಿಸಿದ ಅಂಶವನ್ನು ಒಂದು ಕಾಗದದ ಹಾಳೆಯ ಮೇಲೆ ಬರೆದು ಇರಿಸಿದ್ದೂ ಉಂಟು. ಮುಂದೆ ಆ ಕಾಗದದ ಹಾಳೆಯಂತೆ ನೆನೆದ ವಿಷಯವೂ ಮರೆತುಹೋಗುತ್ತಿತ್ತು. ಬರೆಯಬೇಕು ಎಂದು ಉದ್ದೇಶಿಸುವುದಕ್ಕೂ, ಬರೆಯಲು ತೊಡಗುವುದಕ್ಕೂ ತುಂಬ ಅಂತರವಿದೆ. ಅದಕ್ಕೆ ಅನುಕೂಲ ಸಮಯ ಒದಗಬೇಕು--ಎಂದರೆ, ಕೆಲಸ ತೊಡಗಿ ಮುಗಿಯುವ ತನಕ ಬಿಡುವು ಬೇಕು; ಬೇರೆ ಯಾವ ಯೋಜನೆಗಳೂ, ಯೋಚನೆಗಳೂ ಇರಬಾರದು. ಹೊರಗಿನ ಕರೆಗಳೂ ಕರಕರೆಗಳೂ ಇರಬಾರದು.
ಈ ಬಾರಿ ಅಂಥ ಒಂದು ಸಮಯ ದೊರೆಯಿತು--ಐದು ದಿನಗಳಿಗಾಗಿ ನಾನು ಇಟೆಲಿಯ ರೋಮು ನಗರವನ್ನು ಸಂದರ್ಶಿಸಿ ಬಂದ ಬಳಿಕ. ಆ ನಗರವನ್ನು ಕುರಿತು ೧೯೫೩ರಲ್ಲಿ ಇಟಲಿ ದೇಶದ ಬಗ್ಗೆ ಅಲ್ಲಿಂದ ಹಿಂದಿರುಗಿದವನೇ ಬರೆದಿದ್ದೆ. ಅದು ಪ್ರವಾಸ ಲೇಖನ. ಆ ಇಟೆಲಿ, ಅದರಲ್ಲಿಯೂ, ರೋಮು ನಿಡುಪರಂಪರೆಯ ದೀರ್ಘ ಕಾಲದ ಸಂಸ್ಕೃತಿಯ ಇತಿಹಾಸವನ್ನು ಕಣ್ಮುಂದೆ ಬೀರಬಲ್ಲ ಒಂದು ಇತಿಹಾಸ ಪ್ರಸಿದ್ಧ ದೇಶ. ಅಂತಹ ನಿಡುಪರಂಪರೆಯುಳ್ಳ ಬೇರೆ ದೇಶವನ್ನು ನಾನು ಕಂಡಿಲ್ಲ.
ಈ ಬಾರಿ ಹೋದಾಗ ದಿನಕ್ಕೆ ಎರಡು ಬಾರಿಯಾದರೂ ರೋಮಿನ ವೆಟಿಕನ್ ಭಾಗದ ಮೂಲಕ ಹಾಯುತ್ತಿದ್ದಾಗ ಅಲ್ಲಲ್ಲಿ ನಿಲ್ಲಿಸಿದ ಅಸಂಖ್ಯ ಚಂದ್ರಕಾಂತ ಶಿಲಾಮೂರ್ತಿಗಳನ್ನು ಕಂಡ. ರೋಮನ್ ವೈಭವದ ಕಾಲದ ಸಾಮ್ರಾಟರಿಂದ ತೊಡಗಿ, ಗೆರಿಬಾಲ್ಡಿಯ ತನಕದ ಪ್ರತಿಮೆಗಳನ್ನು! ಅವನ್ನು ನಟ್ಟ ಕಾಲದ ಹೆಮ್ಮೆಯನ್ನು ಬಿಂಬಿಸುವ ಅವೇ ಪ್ರತಿಮೆಗಳ ಮೇಲೆ ಹಾವಸೆ ಬೆಳೆದೋ, ಅಸಂಖ್ಯ ಮೋಟರು ವಾಹನಗಳು ಕಕ್ಕಿದ ಹೊಗೆಯ ಅಂಶವಾದ ಸಲ್ಫ್ಯೂರಿಕ್ ಆಮ್ಲದ ಕೊರೆತದಿಂದಲೋ ಅಂದಗೆಟ್ಟ ಪ್ರತಿಮೆಗಳನ್ನು ಕಂಡು ಮರುಗುವ ಪಾಡು ಬಂತು! ಕಾಲ ಗತಿ--ಎಂದುಕೊಂಡೆ. ಆ ಪ್ರತಿಮೆಗಳು ಅವನ್ನು ನಟ್ಟ ಕಾಲದ ಮೌಲ್ಯಗಳ ಸಂಕೇತವಾದರೆ, ಅವುಗಳ ಅಪಚಾರ ನಮ್ಮ ಅಪಮೌಲ್ಯಗಳ ಸಂಕೇತ ಅನಿಸಿತು!
ಅದೇ ಅವಧಿಯಲ್ಲಿ ಇನ್ನೊಂದು ನೆನಪೂ ಬಂತು. ನಮ್ಮ ನಾಡಿನಲ್ಲಿ ನಟ್ಟ ಅನೇಕ ಪ್ರತಿಷ್ಠಿತರ ಕಂಚಿನ ಪ್ರತಿಮೆಗಳ ಮೇಲೆ, ದಿನದಿನವೂ ಸ್ಥಾಪಕರ ಪರಿಚಯವಿಲ್ಲದ ಮನುಷ್ಯರ ಬಗ್ಗೆ ಮನ್ನಣೆಯನ್ನು ಕೊಡಲಾರದ ಕಾಕಪಕ್ಷಿಗಳು ಎರಗಿ, ತಮ್ಮ ಪಾಲಿನ ಸೇವೆ ಸಲ್ಲಿಸುವುದನ್ನು ಕಂಡು! ಅವುಗಳ ಪಿಷ್ಟಾಭಿಷೇಕವನ್ನು ಅನುಭವಿಸುತ್ತಿರುವ ಆ ಪುತ್ಥಳಿಗಳ ಬಗ್ಗೆ ದುಃಖವೂ ಬರುತ್ತದೆ.
ರೋಮಿಗೆ ಈ ಬಾರಿ ಹೋದ ಅವಧಿಯಲ್ಲಿ ಇಟೆಲಿಯ ಜನಸಮೂಹದ ಮನಸ್ಸನ್ನು ತಿಳಿಯಬಲ್ಲ ಅವಕಾಶವೂ ಒದಗಿತು. ನಾನು ಹೋದ ದಿನವೇ ಅವರು ಜಾಗತಿಕ ಕಾಲ್ಚೆಂಡಾಟದಲ್ಲಿ ವಿಜಯಿಗಳಾದರು. ಅದು ದೇಶಕ್ಕೆ ದೇಶವೇ ಮೈಮರೆತ ಕಾಲವಾಯಿತು. ಅದರಂತೆ, ನಮ್ಮ ಭಾರತ ಸ್ವತಂತ್ರಗೊಂಡ ೧೫ ಆಗಸ್ಟ್, ೧೯೪೭ ಸಹ ಅಲ್ಲವೇ?
ಈ ಘಟನೆಗಳೇ ಈ ಕಾದಂಬರಿಯನ್ನು ಅಥವಾ ಕಾಲ್ಪನಿಕ ಪ್ರವಾಸ ಲೇಖನವನ್ನು ಪ್ರೇರಿಸಿದುವು. ಇದು ಅಪಮೌಲ್ಯಗಳಿಗೆ ಬಲಿಯಾದ ನಮ್ಮ ಸಮಾಜ ಜೀವನದ ಒಂದು ವಿಡಂಬನೆಯೆಂದು ತಿಳಿಯಬಹುದು; ಆದರೆ 'ವಿಡಂಬನೆಯೇ' ನಿಜವೆನಿಸುತ್ತಿರುವ ಪರಿಸ್ಥಿತಿಯ ಅರಿವು ಅದು.
ಇಲ್ಲಿನ ಮಹಾನಗರ, ವ್ಯಕ್ತಿಗಳು, ಪ್ರದೇಶ, ಎಲ್ಲಿದೆಯೆಂದು ಯಾರೂ ಹುಡುಕಿ ಹೋಗಬೇಕಿಲ್ಲ. ಕಾಣಲು ಕಣ್ಣಿದ್ದವರಿಗೆ ಅವು ತಮ್ಮ ಸಮೀಪದಲ್ಲೇ ಇರುವುದನ್ನು ಕಾಣಬಹುದು.
- ಶಿವರಾಮ ಕಾರಂತ
ಪುಟಗಳು: 344
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !