ಬರಹಗಾರರು: ನರೇಶ್ ಭಟ್
ನೀವು ಐಟಿ ಉದ್ಯಮದಲ್ಲಿ ಕೆಲಸ ಮಾಡುವವರಾದರೆ ಐಟಿ ತಿಮ್ಮನ ಅನುಭವ ನಿಮ್ಮದೂ ಆಗಿರುತ್ತೆ. ನಾಲ್ಕು ಸಾಲುಗಳ ಪಂಚ್ ಅಲ್ಲಿ ಇಡೀ ಐಟಿ ಉದ್ಯೋಗಿಗಳ ಜೀವನಚರಿತ್ರೆಯನ್ನೇ ಬಿಚ್ಚಿಡುತ್ತಿದ್ದಾನೆ ಐಟಿ ತಿಮ್ಮ.
ಐಟಿ ತಿಮ್ಮನ ಸಾಲುಗಳಲ್ಲಿ ಐ.ಟಿ ಲೋಕದ ಸಾಲುಗಳಷ್ಟೇ ಅಲ್ಲದೆ, ತಿಮ್ಮನ ತನ್ನೂರಿನ ಹೊಳಹುಗಳೂ ಇವೆ. ಖುಷಿಯ ಸಂಗತಿಯೆಂದರೆ ತಿಮ್ಮ ಇವರೆಡರಲ್ಲೂ ಕಳೆದುಹೋಗದೆ, ಇವರೆಡರನ್ನು ಬೆಸೆಯುವ ಕಾವ್ಯಾತ್ಮಕ ಸೇತುವೆಯಂತೆ ಕಾಣಿಸಿಕೊಂಡಿದ್ದಾನೆ. ಹಬ್ಬದ ಒಬ್ಬಟ್ಟು, ಅಣ್ಣಾವ್ರ ಹಾಡು, ಕಾಲೇಜುದಿನಗಳ ಬೆಡಗಿ… ಇತ್ಯಾದಿಗಳ ನಾಸ್ಟಾಲ್ಜಿಯಾ ತಿಮ್ಮನಿಗೆ ಅದೆಷ್ಟಿದೆಯೋ, ಐ.ಟಿ ಲೋಕದ ಅಪ್ರೈಸಲ್ಲು, ಹೈಕು, ಟ್ರಾಫಿಕ್ಕು, ವರ್ಕ್ ಫ್ರಂ ಹೋಂನಂಥಾ ಕಚಗುಳಿ ಕಥನಗಳೂ ಇಲ್ಲಿಯ ಸಾಲುಗಳಲ್ಲಿ ಅಷ್ಟೇ ಹಿತವಾಗಿ ಮೂಡಿಬಂದಿವೆ. ತಿಮ್ಮನ ಆಗಸವು ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುತ್ತಾ ಹೋಗುವುದು ಹೀಗೆ. ಮಹಾನಗರಿಯ ಮಾಯಾಪಂಜರವು ಅದೆಷ್ಟೇ ವಜ್ರಖಚಿತವಾಗಿದ್ದರೂ ಆಗಸದ ಸ್ವಾತಂತ್ರ್ಯವು ನೀಡುವ ಮಜಾನೇ ಬೇರೆ ಎಂಬುದನ್ನು ಸೂಚ್ಯವಾಗಿ ಹೇಳುವಂತಿವೆ ಐ.ಟಿ. ತಿಮ್ಮನ ಸಾಲುಗಳು.