ಪುಸ್ತಕದ ಮೊದಲಿಗೆ ಲೇಖಕರು ‘ತಮ್ಮ ಹೈಸ್ಕೂಲು ಜೀವನದ ಬಗ್ಗೆಯೇ ಏಕೆ ಬರೆಯಬೇಕು?’ ಅಂತ ಅನ್ನಿಸಿತು ಎಂದು ಹೇಳುತ್ತಾ, ‘ತಮ್ಮ ಇದುವರೆಗಿನ ಜೀವಮಾನದಲ್ಲೇ ಅತ್ಯಂತ ಸ್ವಾರಸ್ಯಕರವಾದ ಘಟನೆಗಳಿಂದ ಕೂಡಿದ ಕಾಲವಾಗಿತ್ತು’ ಎಂದು ಹೇಳುತ್ತಾರೆ. ಈ ಪುಸ್ತಕ ಓದಿದ ಮೇಲೆ ನಮ್ಮಂಥ ನಗರವಾಸಿಗಳಂತೂ ಒಪ್ಪಲೇಬೇಕಾದ ಮಾತು.
ಇದರಲ್ಲಿ ಕೆಲವು ಲೇಖನಗಳನ್ನು ಓದಿದಾಗ ತುಂಬಾ ದುಃಖವಾಯ್ತು. ಮುಗ್ಧತೆಗೆ, ಬಡತನಕ್ಕೆ, ತಿಳಿಗೇಡಿತನಕ್ಕೆ ಸಿಗೋ ಸುಖ, ಖುಷಿ.... ತಿಳುವಳಿಕೆಗೆ, ಶ್ರೀಮಂತಿಕೆಗೆ ಏಕೆ ಸಿಗದು? ಹೈಸ್ಕೂಲು ಹುಡುಗನಿಗೆ ಇರುವ ಸಿನಿಮಾ ನೋಡುವ ತವಕ, ಕುತೂಹಲ, ಅದಮ್ಯ ಬಯಕೆ... ಇವು ಕೈತುಂಬ ದುಡಿಮೆ, ಬೇಕಾದಷ್ಟು ಸಿನಿಮಾ ನೋಡೋ ಬಿಡುವು, ಏಕೆ? ಏನು? ಅಂತ ಕೇಳುವವರು ಇಲ್ಲದಾಗ ಅದರ ಆಸೆಯೇ ಹಿಂಗಿ ಹೋಗುವುದು.... ದುಃಖ ಅಲ್ಲವೇ!? ತಿಪ್ಪರಲಾಗ ಹಾಕಿ ತಮಗೆ ಬೇಕಾದ ಹೇರ್‌ಸ್ಟೈಲ್ ಮಾಡಿಸಿಕೊಂಡಿದ್ದ ಹುಡುಗರಿಗೆ ಅದನ್ನು ಉಳಿಸಿಕೊಳ್ಳಲಾಗದ ಅಸಹಾಯಕತೆ... ಈಗ ಹಿಂದಿರುಗಿ ನೋಡಿದಾಗ ಮತ್ತೆ ಅಂಥ ಶೋಕಿ ಮಾಡುವಷ್ಟು ಕೂದಲೇ ಉಳಿಯದ ಬುರುಡೆಯನ್ನು ಸವರಿಕೊಳ್ಳುವಂತಾಗುವುದು ವಿಪರ್ಯಾಸವಲ್ಲವೇ!?
ಆಧುನಿಕತೆ, ಜಾಗತೀಕರಣದ ಪರಿಣಾಮಗಳಲ್ಲಿ ಒಳ್ಳೆಯದು-ಕೆಟ್ಟದ್ದು ಸಮಪ್ರಮಾಣದಲ್ಲಿದೆ ಎಂದು ಈ ಪುಸ್ತಕ ಓದಿದ ಮೇಲೆ ಅನ್ನಿಸದಿರದು. ಇಂದಿನ ಹೈಸ್ಕೂಲು ಮಕ್ಕಳು ಇವರ (ನಮ್ಮ) ತಲೆಮಾರಿನವರಂತೆ ಮುಗ್ಧರು, ಎಷ್ಟೋ ವಿಷಯದಲ್ಲಿ ಪೆದ್ದರು ಖಂಡಿತ ಆಗಿರುವುದಿಲ್ಲ. ಇವರು ಬಾಂಬ್ ಮಾಡಿದ ಸಾಹಸದಲ್ಲಿ, ಬೆಂಕಿ ದೆವ್ವದಲ್ಲಿ, ಕೋಳಿಮೊಟ್ಟೆ ಇಡುವ ಪ್ರಶ್ನೆಗೆ ಕೊಟ್ಟ ಉತ್ತರದಲ್ಲಿ ಇವೆಲ್ಲ ತುಂಬಾ ರಂಜಕವಾಗಿ ಕಚಗುಳಿಯಿಡುವಂತೆ ಬಿಚ್ಚುತ್ತಾ ಹೋಗುತ್ತದೆ.
ಈ ಪುಸ್ತಕದಲ್ಲಿನ ‘ಹಾಸ್ಟೆಲ್ಲಿನ ಕಳ್ಳತನ’ ‘ಅಡುಗೆ ಭಟ್ಟರು’ ‘ಬಾಂಬ್ ಮಾಡುವ ಸಾಹಸ’ ‘ಮೊದಮೊದಲ್ ಸೇದಿದ ಸಿಗರೇಟು’ ‘ಜಿ.ಎಸ್.ಎಸ್. ಅಂಗನವಾಡಿ ಮೇಡಮ್‌ಗೆ ಕಣ್ಣು ಹೊಡೆದಿದ್ದು’.... ಇನ್ನೂ ಎಷ್ಟೋ ಘಟನೆಗಳನ್ನು, ಆ ಪಾತ್ರಗಳ ಚಿತ್ರಣವನ್ನು ಓದಿದಾಗ ಬೇಡದೆಯೂ ಲಂಕೇಶರ ‘ಮುಸ್ಸಂಜೆಯ ಕಥಾಪ್ರಸಂಗ’, ಗೊರೂರರ ‘ನಮ್ಮ ಊರಿನ ರಸಿಕರು’, ಆರ್.ಕೆ. ನಾರಾಯಣರ ”ಮಾಲ್ಗುಡಿ ಡೇಸ್’ ಕೃತಿಗಳನ್ನು ಮೆಲಕು ಹಾಕುವಂತಾಯ್ತು. ಆ ಕೃತಿಗಳಂತೆಯೇ ಇದೂ ಕೂಡಾ ಬೆಚ್ಚಗಿನ ಅನುಭವ ಕೊಡುತ್ತಲೇ ಅದರಾಚೆಗಿನ ಒಂದು ಹೊಳಹನ್ನು ಕಾಣಿಸುತ್ತದೆ.
- ವಿ. ಸುಂದರರಾಜ್
ಪುಟಗಳು: 125
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !