’ಮುಸಾಫಿರ್ ೧’ ಮತ್ತು ’ಮುಸಾಪಿರ್ ೨’. ಈ ಪೈಕಿ ಮೊದಲನೇ ಕೃತಿ ಪ್ರಕಟಗೊಂಡಿದೆ. ಎರಡನೇ ಕೃತಿ ಇದೇ ಮೊದಲ ಬಾರಿಗೆ ಇ-ಪುಸ್ತಕವಾಗಿ ’ಮೈಲಾಂಗ್’ ನಲ್ಲಿ ಮಾತ್ರ ಲಭ್ಯವಿದೆ. ಲೇಖಕ ಮತ್ತು ಮೊದಲು ’ಪ್ರಜಾವಾಣಿ’ ಮತ್ತು ಆನಂತರ ’ಆಂದೋಲನ’ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ’ಮುಸಾಫಿರ್’ ಅಂಕಣ ಈಗಾಗಲೇ ಕನ್ನಡಿಗರಲ್ಲಿ ಮನೆಮಾತಾದದ್ದು. ಇಲ್ಲಿ ಲೇಖಕ ಒಬ್ಬ ಅಲೆಮಾರಿಯಾಗಿ ತನ್ನ ಸಂಪರ್ಕಕ್ಕೆ ಬಂದ ಅಸಮಾನ್ಯರು ಮತ್ತು ಸಾಮಾನ್ಯರ ಬಗ್ಗೆ ನೀಡಿದ ಚಿತ್ರಣ ಅಭೂತಪೂರ್ವವಾದದ್ದು. ಇವು ವ್ಯಕ್ತಿ ಚಿತ್ರಗಳಾದರೂ, ಬದುಕಿನ ಪಾಠಗಳನ್ನು ಹೇಳುವ, ಓದುಗರನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುವ ಬರಹಗಳಾಗಿವೆ. ಈ ಪೈಕಿ ’ಮುಸಾಫಿರ್-1’ ಎರಡು ಮುದ್ರಣ ಕಂಡಿದೆ. ’ಮುಸಾಫಿರ್ ೨’ ಇದೇ ಮೊದಲ ಬಾರಿಗೆ ಇ-ಪುಸ್ತಕವಾಗಿ ’ಮೈಲಾಂಗ್’ ನಲ್ಲಿ ಪ್ರಕಟವಾಗುತ್ತಿದೆ.
-ಸತೀಶ್ ಚಪ್ಪರಿಕೆ
’ಮುಸಾಫಿರ್-೧’ ಅಂಕಣ ಬರಹಗಳು ’ಪ್ರಜಾವಾಣಿ’ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿ ಪುಸ್ತಕ ರೂಪದಲ್ಲಿ ಪ್ರಕಟವಾದ ಮೇಲೆ ಕೂಡ ಕೆಲವೊಂದು ವ್ಯಕ್ತಿತ್ವಗಳು ನನ್ನನ್ನು ಸದಾ ಕಾಡುತ್ತಲೇ ಇದ್ದವು. ಆ ವ್ಯಕ್ತಿತ್ವಗಳನ್ನು ಅಕ್ಷರ ರೂಪಕ್ಕಿಳಿಸಿ ಎಂಬ ಬೇಡಿಕೆ ಈ ಬಾರಿ ಬಂದದ್ದು ಮೈಸೂರಿನ ’ಆಂದೋಲನ’ ಪತ್ರಿಕೆಯ ಸಂಪಾದಕರಾದ ರವಿ ಕೋಟಿ ಅವರಿಂದ. ರವಿ ಮತ್ತು ’ಆಂದೋಲನ’ ಎರಡೂ ನನಗೆ ಹತ್ತಿರವಾಗಿದ್ದು ಹಿರಿಯರಾದ ದಿವಂಗತ ರಾಜಶೇಖರ ಕೋಟಿ ಅವರ ಕಾರಣದಿಂದ.
ನನ್ನ ಪ್ರಕಾರ ರಾಜಶೇಖರ ಕೋಟಿ ಅವರು ಕರ್ನಾಟಕ ಕಂಡ ಕೆಲವೇ ಕೆಲವು ಪ್ರಾಮಾಣಿಕ ಪತ್ರಕರ್ತರ ಪೈಕಿ ಒಬ್ಬರು. ಸುಮಾರು ಒಂದೂವರೆ ವರ್ಷ ಅವರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿರಲು ಕಾರಣವಾಗಿದ್ದು ’ಸಿಟಿ ಟುಡೆ’ಯಿಂದಾಗಿ. ಮೈಸೂರು ಮೂಲದ ರಾಕೇಶ್ ರಾಜೇ ಅರಸ್ ಒಂದು ಇಂಗ್ಲಿಷ್ ಸಂಜೆ ಪತ್ರಿಕೆ ಮಾಡಬೇಕು ಎಂದಾಗ ನಾವು ಮೂವರು ಗೆಳೆಯರು ಅವರಿಗೆ ಒತ್ತಾಸೆಯಾಗಿ ನಿಂತೆವು. ಆ ಸಂದರ್ಭದಲ್ಲಿ ನನಗೆ ಹಿರಿಯರಾದ ಕೋಟಿ ಅವರು ಬಹಳ ಹತ್ತಿರವಾದರು. ಅವರ ಮನೆಯೊಳಗೆ ಕೂತು, ಉಪ್ಪಿಟ್ಟು-ಕಾಫಿ ಸವಿದು ನಾವು ಮಾಡಿದ ಅನೇಕ ಚರ್ಚೆಗಳು ಈಗಲೂ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ. ಸುಮಾರು ಒಂದೂವರೆ ವರ್ಷಗಳ ಕಾಲ ’ಸಿಟಿ ಟುಡೆ’ ನೇತೃತ್ವ ವಹಿಸಿದ್ದ ನಾನು ಕೊನೆಗೂ ಪತ್ರಿಕಾ ವ್ಯವಸಾಯಕ್ಕೆ ಕೊನೆಯ ನಮಸ್ಕಾರ ಹೇಳಿದೆ. ಆನಂತರ ಮೈಸೂರಿಗೆ ಹೋಗುವುದು ನಿಂತು ಹೋಯಿತು. ನಂತರ ಕೋಟಿ ಅವರು ಕೂಡ ನಮ್ಮನ್ನೆಲ್ಲ ಬಿಟ್ಟು ಅಗಲಿದರು. ಆದರೂ, ’ಆಂದೋಲನ’ ಮತ್ತು ರವಿ ಜೊತೆ ನನ್ನ ಸ್ನೇಹ ಸದಾ ಉಳಿದುಕೊಂಡಿದೆ.
ಅದರ ಫಲವೇ ’ಮುಸಾಫಿರ್-೨’. ’ಪ್ರಜಾವಾಣಿ’ಯಲ್ಲಿ ಬಂದಂತೆಯೇ ಈ ಬಾರಿ ಕೂಡ ’ಆಂದೋಲನ’ದಲ್ಲಿ ’ಮುಸಾಫಿರ್’ ಪ್ರತಿ ಎರಡು ವಾರಗಳಿಗೊಮ್ಮೆ ಪ್ರಕಟವಾಯಿತು. ಮಾತ್ರವಲ್ಲ ಎರಡನೇ ಯತ್ನದಲ್ಲಿ ಕೂಡ ಈ ಬರಹಗಳು ಸಾಕಷ್ಟು ಓದುಗರನ್ನು ತಲುಪಿದವು. ಯಾವುದೇ ಅಂಕಣದ ಜೀವಿತಾವಧಿ ಒಂದು ವರ್ಷ ಎಂದು ಬಲವಾಗಿ ನಂಬಿರುವ ನಾನು ’ಆಂದೋಲನ’ದಲ್ಲಿ ಕೂಡ ಒಂದು ವರ್ಷದ ನಂತರ ’ಮುಸಾಫಿರ್-೨’ ಅಂಕಣ ಬರೆಯುವುದು ನಿಲ್ಲಿಸಿದೆ.
ಸತೀಶ್ ಚಪ್ಪರಿಕೆ
ಪುಟಗಳು: 200
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !