ಇದು ನನ್ನ ವೈದ್ಯಕೀಯ ಅಂಕಣ ಬರೆಹಗಳ ಸಮಗ್ರ ಸಂಪುಟ. ಆ ಕಾರಣದಿಂದ ಇದಕ್ಕೆ ‘ಮೊಗಸಾಲೆಯವರ ಸಮಗ್ರ ವೈದ್ಯಸಾಹಿತ್ಯ’ ಎಂಬ ಹೆಸರಿಟ್ಟಿದ್ದೇನೆ.
ನಾನು ಈ ಅಂಕಣ ಬರೆಹಗಳನ್ನು ಬರೆಯಲು ಪ್ರಾರಂಭಿಸಿದ್ದು ೧೯೯೭ರ ಸುಮಾರಿಗೆ ಮಂಗಳೂರಿನಲ್ಲಿ ಜನಪ್ರಿಯವಾಗಿದ್ದ ‘ಕನ್ನಡ ಜನಾಂತರಂಗ’ ಎಂಬ ದೈನಿಕದಲ್ಲಿ. ಆ ಪತ್ರಿಕೆ ತನ್ನ ಮಂಗಳೂರು ಆವೃತ್ತಿಯನ್ನು ನಿಲ್ಲಿಸಿ ಉತ್ತರ ಕನ್ನಡಕ್ಕೆ ಮಾತ್ರ ಸೀಮಿತಗೊಳಿಸಿದಾಗ ನನ್ನ ಅಂಕಣ ಬರೆಹವು ಆ ಪತ್ರಿಕೆಯ ಸೋದರ ಪತ್ರಿಕೆಯಾದ ‘ಕರಾವಳಿ ಅಲೆ’ಯಲ್ಲಿ ಮುಂದೆ ಪ್ರಕಟವಾಗತೊಡಗಿತು.
ನಾನು ಅಗೋಸ್ತು ೨೦೦೩ರ ಸುಮಾರಿಗೆ ಈ ಅಂಕಣವನ್ನು ನಿಲ್ಲಿಸುತ್ತೇನೆಂದಾಗ ಈ ಎರಡೂ ಪತ್ರಿಕೆಗಳ ಸಂಪಾದಕರು (ಒಬ್ಬರೇ ಆಗಿದ್ದವರು) ‘ನಿಲ್ಲಿಸಬಾರದು’ ಎಂದು ಒತ್ತಾಯಿಸಿದ್ದರೂ ನನ್ನ ಆಸಕ್ತಿಯ ಕ್ಷೇತ್ರ ಆಗ ವಿಸ್ತಾರವಾಗುತ್ತಲೇ ಹೋದುದರಿಂದ ಮತ್ತು ಆ ಅಂಕಣದ ಏಕತಾನತೆ ಸಾಕೆನಿಸಿದ್ದರಿಂದ ನಾನು ಅದನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದೆ. ಆದರೆ ಓದುಗರಿಂದ ನಿರೀಕ್ಷೆಗೂ ಮೀರಿ ಬಂದ ಸಲಹೆ ಮೇರೆಗೆ ವರ್ಷವಾರಾಗಿ ಪ್ರಕಟವಾದ ಆ ಅಂಕಣ ಬರೆಹಗಳನ್ನು ಹಾಗೆಯೇ ಇಟ್ಟುಕೊಂಡು ಮತ್ತೆ ಅವುಗಳನ್ನು ಪ್ರತ್ಯೇಕವಾಗಿ ಪುಸ್ತಕರೂಪದಲ್ಲಿ ಹೊರತಂದೆ. ಅವುಗಳ ಪ್ರತಿಗಳು ಈಗ ಪೂರ್ತಿ ಮಾರಾಟವಾಗಿದ್ದು ಬೇಡಿಕೆಗಳು ಇನ್ನೂ ಇರುವುದರಿಂದ ನಾನು ಅವುಗಳನ್ನೆಲ್ಲ ಒಟ್ಟಾಗಿಸಿ ಸಮಗ್ರ ಸಂಪುಟವನ್ನು ಹೊರತರಲು ನಿರ್ಧರಿಸಿದ್ದೇನೆ.
ನಾನೊಬ್ಬ ಸಾಮಾನ್ಯ ಆಯರ್ವೇದ ವೈದ್ಯ. ವೈದ್ಯವಿಜ್ಞಾನದಲ್ಲಿ ಯಾವುದೇ ವಿಶೇಷ ತಜ್ಞನಲ್ಲ. ನನ್ನ ವೃತ್ತಿಯ ಅನುಭವಗಳು ಮತ್ತು ನನ್ನ ಓದಿನ ಆಸಕ್ತಿಯೇ ಈ ಬರೆಹಗಳ ಮೂಲ. ಹಾಗಾಗಿ ಖಂಡಿತವಾಗಿಯೂ ಇಲ್ಲಿನ ಬರೆಹಗಳಿಗೆ ಮಿತಿಗಳು ಸಾಕಷ್ಟಿವೆ. ಈಗಂತೂ ಇಂಟರ್‌ನೆಟ್ ಮೂಲಕ ವೈದ್ಯಕೀಯ ವಿಷಯಗಳನ್ನಲ್ಲದೆ ಜಗತ್ತಿನ ಯಾವುದೇ ವಿಚಾರಗಳನ್ನು ಕರಾತಲಾಮಲಕಗೊಳಿಸಬಹುದಾದ್ದರಿಂದ ಇಂಥ ಅಂಕಣಬರೆಹಗಳಿಗೆ ಇಂದು ಬೇಡಿಕೆ ಕಡಿಮೆ ಇದ್ದರೂ ಸ್ವಲ್ಪಮಟ್ಟಿಗೆ ಕೆಲವು ಪತ್ರಿಕೆಗಳಲ್ಲಿ ಅವು ಇನ್ನೂ ಉಳಿದಿವೆ. ತಜ್ಞರ ವಿಶೇಷ ಅನುಭವಗಳು ಈಗ ಇಂಟರ್‌ನೆಟ್ ಮೂಲಕ ನಮ್ಮ ಜನರಿಗೆ ಲಭ್ಯವಾಗುತ್ತಿರುವುದು ಸಂತೋಷ. ಆದರೆ ನನ್ನ ಅಂಕಣಗಳು ಪ್ರಕಟವಾಗುತ್ತಿದ್ದ ದಿನಗಳಲ್ಲಿ ಈ ಸೌಕರ್ಯ ತುಂಬಾ ಕಡಿಮೆಯೇ ಇತ್ತು.
ಇಲ್ಲಿನ ಬರೆಹಗಳನ್ನು ನಾನು ಈ ಮೊದಲು ಹೊತ್ತಗೆಗಳ ರೂಪದಲ್ಲಿ ತರುವ ದಿನಗಳಲ್ಲಿ ಆ ಕೃತಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಮತ್ತು ಅಲ್ಲಿ ನೆನೆಯಬೇಕಾಗಿದ್ದ ವರೆಲ್ಲರನ್ನೂ ಅತ್ಯಂತ ಗೌರವದಿಂದ ನೆನೆದಿದ್ದೇನೆ. ಹೊತ್ತಗೆಗಳೆಲ್ಲ ಅದೇ ರೀತಿಯಲ್ಲಿ ಇಲ್ಲಿ ಮತ್ತೆ ಪ್ರಕಟವಾಗುವುದರಿಂದ, ನಾನು ಪ್ರತ್ಯೇಕವಾಗಿ ನೆನೆಯಬೇಕಾದವರನ್ನು ಇಲ್ಲಿ ನೆನೆಯಲಿಲ್ಲ. ಕ್ಷಮಿಸಿ.
೧೯೯೮ರಲ್ಲಿ ನನ್ನ ವೈದ್ಯಕೀಯ ಸೇವೆ ಮತ್ತು ಅಂಕಣ ಬರೆಹಗಳನ್ನು ಗಮನಿಸಿ ಮೈಸೂರಿನ ಧನ್ವಂತರಿ ಆಯುರ್ವೇದಿಕ್ ಟ್ರಸ್ಟ್ ನನಗೆ ‘ಭಿಷಕ್ ಸಾಹಿತ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು. ೨೦೦೨ರಲ್ಲಿ ಗುಲ್ಬರ್ಗಾದ ಡಾ.ಪಿ.ಎಸ್. ಶಂಕರ ಪ್ರತಿಷ್ಠಾನವು ನನ್ನ ಅಂಕಣ ಬರೆಹಗಳ ಸಂಗ್ರಹ ‘ಆರೋಗ್ಯ ಅನಾರೋಗ್ಯದ ನಡುವೆ’ ಕೃತಿಗೆ ಆ ವರುಷದ ‘ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ’ ನೀಡಿ ಹರಸಿತು. ಈ ಎರಡೂ ಟ್ರಸ್ಟುಗಳು ಆಗ ನನಗೆ ನೀಡಿದ ಪ್ರೋತ್ಸಾಹ ನನ್ನ ಬದುಕಿಗೆ ಸಾರ್ಥಕ್ಯವನ್ನು ತಂದಿದೆ.
ಪುಟಗಳು: 786
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !