ಡಾ. ನಾ. ಮೊಗಸಾಲೆಯವರ ಕಾದಂಬರಿಗಳ ಈ ಎರಡನೇ ಸಂಪುಟದಲ್ಲಿ ಇರುವ ಮೂರು ಕಾದಂಬರಿಗಳು - ‘ನನ್ನದಲ್ಲದ್ದು’ (೧೯೭೭), ‘ಪಲ್ಲಟ’ (೧೯೭೯) ಹಾಗೂ ‘ಹದ್ದು’ (೧೯೭೨). ಇವುಗಳ ಪೈಕಿ ಮೊದಲಿನೆರಡು ಬರೆದ ವರ್ಷದಲ್ಲಿ ಪ್ರಕಟವಾದಂತೆ ಕಾಣುತ್ತದೆ. ಮೂರನೆಯದಾದ ‘ಹದ್ದು’ ಮಾತ್ರ ಬರೆದ ಎಂಟು ವರ್ಷಗಳ ನಂತರ ಅಂದರೆ ೧೯೮೦ರಲ್ಲಿ ಮೊದಲ ಮುದ್ರಣ ಕಾಣುತ್ತದೆ.
ಡಾ. ನಾ. ಮೊಗಸಾಲೆಯವರ ಕಥೆ / ಕಾದಂಬರಿಗಳಲ್ಲಿ ಎರಡು ಮುಖ್ಯ ಲಕ್ಷಣಗಳನ್ನು ಗುರುತಿಸಬಹುದು. ಅವೆಂದರೆ - ೧) ಇವರು ನೇರವಾಗಿ (ಕಾರಂತ, ಭೈರಪ್ಪ, ವ್ಯಾಸರಾಯ ಬಲ್ಲಾಳರಂತೆ) ತಾತ್ವಿಕ ಜಿಜ್ಞಾಸೆಗೆ ತೊಡಗುವುದು ಕಡಿಮೆ (ಅದನ್ನು ಅವರೇ ಒಂದೆರಡು ಮುನ್ನುಡಿಗಳಲ್ಲಿ ಸ್ಪಷ್ಟ ಪಡಿಸಿದ್ದಾರೆ ಕೂಡ). ಅದೇನಿದ್ದರೂ ಆಯಾ ಕೃತಿಗಳಲ್ಲಿನ ಪಾತ್ರಗಳ ಒಂದೆರಡು ಮಾತುಗಳ ಮೂಲಕ ಮಿಂಚುತ್ತದೆ ಅಷ್ಟೆ. ಜಿಜ್ಞಾಸೆಯನ್ನು ದೀರ್ಘವಾಗಿ ಚರ್ಚೆಗಳ ಮೂಲಕ (ಭೈರಪ್ಪನವರ ವಂಶವೃಕ್ಷ, ದೂರ ಸರಿದವರು - ನಂಥ ಕೃತಿಗಳಲ್ಲಿ ಆಗುವಂತೆ ಅಥವಾ ಕಾರಂತರ - ಮೈಮನಗಳ ಸುಳಿಯಲ್ಲಿ, ಮೂಕಜ್ಜಿಯ ಕನಸುಗಳು, ಅಳಿದ ಮೇಲೆ - ಯಂಥ ಕೃತಿಗಳಲ್ಲಿ ಆಗುವಂತೆ) ಓದುಗನನ್ನು ಕಾದಂಬರಿ ಓದುತ್ತಿರುವಾಗಲೇ ಯೋಚಿಸುತ್ತಾ ಕೂರುವಂತೆ ಮಾಡುವುದು ಡಾ. ನಾ. ಮೊಗಸಾಲೆಯವರ ರೀತಿಯಲ್ಲ. ಕಥೆಯ ಬೆಳವಣಿಗೆಯಾಗುತ್ತಾ ಹೋಗಿ ಮುಕ್ತಾಯವಾದಾಗ ನಡೆದ ಅಷ್ಟೂ ಘಟನೆ ಮತ್ತು ಫಲಿತಾಂಶವನ್ನು ಎದುರಿಗಿಟ್ಟುಕೊಂಡು ಓದುಗ ಯೋಚಿಸಬೇಕು - ಎನ್ನುವುದು ಈ ಲೇಖಕರ ಉದ್ದೇಶವಾಗಿರುವಂತೆ ಕಾಣುತ್ತದೆ. (ಇದೇ ಮಾರ್ಗವನ್ನನುಸರಿಸುವ ಇನ್ನೂ ಕೆಲವು ಯಶಸ್ವೀ ಕಾದಂಬರಿಕಾರರಿದ್ದಾರೆ. ರಂ. ಶಾ., ರಾವ್ ಬಹದ್ದೂರ್ ಮೊದಲಾದವರು. ತೇಜಸ್ವಿಯವರಲ್ಲಿ ಕಥೆಯ ಘಟನೆಗಳು ಮತ್ತು ಅದು ಪ್ರಚೋದಿಸುವ ಚಿಂತನೆಗಳು - ಒಟ್ಟೊಟ್ಟಿಗೇ ಸಾಗುತ್ತವೆ.)
ಪುಟಗಳು: 370
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !