’ಮತ್ತೊಂದು ಮೌನ ಕಣಿವೆ’ ಮತ್ತು ’ಹಸಿರು ಹಾದಿ’ ಎರಡೂ ಪರಿಸರ ಮತ್ತು ಪರಿಸರ ಜೀವಿಗಳಿಗೆ ಸಂಬಂಧಿಸಿದ್ದು. ಮೊದಲ ಕೃತಿಯಲ್ಲಿ ಪರಿಸರ- ಪಶ್ಚಿಮ ಘಟ್ಟದ ಕುರಿತಾದ ಲೇಖನಗಳಿವೆ. ಎರಡನೇ ಕೃತಿ ಆ.ನ.ಯಲ್ಲಪ್ಪ ರೆಡ್ಡಿ ಅವರ ಜೀವನಗಾಥೆ ಆದರೂ ಇಲ್ಲಿ ಕೂಡ ಪರಿಸರ ರಕ್ಷಣೆಯೇ ಮುಖ್ಯ ದ್ಯೇಯವಾಗಿರುವ ಒಬ್ಬ ಅಪರೂಪದ ಪ್ರಾಮಾಣಿಕ ಅರಣ್ಯ ಸಂರಕ್ಷಣಾಧಿಕಾರಿಯ ಕಥೆ. ತೊಂಬತ್ತರ ದಶಕದ ಪರಿಸರ ರಾಜಕೀಯದ ಚಿತ್ರ ನೀಡುವ ಕೃತಿಗಳಿವು.
- ಸತೀಶ್ ಚಪ್ಪರಿಕೆ
ಅಕ್ಷರದ ಮೂಲಕ ಎಚ್ಚರ
ಈ ಶತಮಾನದ ಪ್ರಾರಂಭದಲ್ಲಿ ಭೂಮಿಯ ಮೇಲಿದ್ದ ಜೀವಿ ಪ್ರಭೇದಗಳಲ್ಲಿ ಶೇಕಡಾ ಇಪ್ಪತ್ತರಷ್ಟು ಆಗಲೇ ನಶಿಸಿವೆ, ಮತ್ತೆ ಶೇಕಡಾ 15ರಷ್ಟು ಪ್ರಭೇದಗಳು ಅವಸಾನದ ಅಂಚಿನಲ್ಲಿವೆ. ಹಾಗೂ ಭೂಮಿಯ ಮೂರರಲ್ಲೊಂದು ಪಾಲು ಜೀವಿಗಳನ್ನು ಅವನತಿಗೆ ಅಟ್ಟಿದ ಮಾನವ ಇದೇ ಅವಧಿಯಲ್ಲಿ ಸಾಧಿಸಿದ್ದೇನೆಂದರೆ ಆತ ತನ್ನ ಆರ್ಥಿಕ ಸಂಪತ್ತನ್ನು 20 ಸಾವಿರ ಪಟ್ಟು ಹೆಚ್ಚಿಸಿಕೊಂಡಿದ್ದಾನೆ. ಆ ಸಂಪತ್ತು ಕೂಡಾ ಎಲ್ಲರಲ್ಲೂ ಏಕರೂಪವಾಗಿ ಹಂಚಿಲ್ಲ. ಶೇಕಡಾ 20ರಷ್ಟು ಧನಿಕರು ಸಂಪತ್ತಿನ ಶೇಕಡಾ 80 ಪಾಲನ್ನು ಬಳಸುತ್ತಿದ್ದಾರೆ. ಮಾನವನ ಪ್ರಗತಿಯ ಢಾಂ ಢೂಂ ದಾಪುಗಾಲಿನಡಿ ದುರ್ಬಲ ಜೀವಿಗಳು ಮೌನವಾಗಿ ಅಳಿಯುತ್ತಿದೆ. ಅವಸಾನದ ಕ್ಷಣದಲ್ಲಿ ದನಿಯೆತ್ತಿ ಕೂಗಲು ಕೂಡ ಅವಕ್ಕೆ ಅವಕಾಶವಿಲ್ಲದಂತಾಗಿದೆ.
ಕೂಗಿ ಎಚ್ಚರಿಸಿದವರು ನಮಗಿಂದು ಬೇಕಾಗಿದ್ದಾರೆ. ಆರ್ಥಿಕ ಸಂಪತ್ತು ಹೆಚ್ಚಿದಷ್ಟೂ ವಿಪತ್ತಿನ ಸಂಭವವನ್ನು ಹೇಗೆ ನಾವು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದ್ದೇವೆ ಎಂಬುದನ್ನು ಸಾರಿ ಹೇಳುವವರು ಬೇಕಾಗಿದ್ದಾರೆ. ಈ ಗ್ರಂಥದಲ್ಲಿ ಸತೀಶ್ ಚಪ್ಪರಿಕೆ ಮತ್ತು ಅ.ನ.ಯಲ್ಲಪ್ಪ ರೆಡ್ಡಿ ಯವರು ಆ ಕೆಲಸವನ್ನು ಮಾಡಿದ್ದಾರೆ ಮಹದಾಯಿಯಿಂದ ಕಪಿಲೆಯವರೆಗೆ, ಸಾಗರ(ಪಟ್ಟಣ)ದಿಂದ ಸಾಗರದಾಳದವರೆಗೆ ನಾವು ನಿಸರ್ಗವನ್ನು ಧ್ವಂಸ ಮಾಡುತ್ತಿರುವ ಬಗ್ಗೆ ಅಕ್ಷರಗಳಲ್ಲಿ, ಅಂಕಿಗಳಲ್ಲಿ ಎಚ್ಚರಿಸಲು ಯತ್ನಿಸಿದ್ದಾರೆ. ಹಿಂದಿನವರ ತ್ವರಿತ ಲಾಭಕ್ಕಾಗಿ ಮುಂದಿನ ಪೀಳಿಗೆಯ ಆಸ್ತಿಯನ್ನು ನೆಲಸಮ ಮಾಡುತ್ತಾ ಹೇಗೆ ನಾವು ನಮ್ಮನ್ನೇ ಗಂಡಾಂತರಕ್ಕೆ ಒಡ್ಡಿಕೊಳ್ಳುತ್ತಿದ್ದೇವೆ ಎಂಬುದನ್ನು ಕೆಲವೊಮ್ಮೆ ತಾರ್ಕಿಕತೆಯಿಂದ, ಕೆಲವೊಮ್ಮೆ ಭಾವುಕತೆಯಿಂದ ಬಣ್ಣಿಸಿದ್ದಾರೆ.
ಈಗಿನ ‘ಮಾಹಿತಿ’ ಯುಗದಲ್ಲಿ ಅಮೇರಿಕ, ಯುರೋಪ್ಗಳ ಶೋಕಿ ಬದುಕಿನ ಬಗ್ಗೆ ಸಿಗುವಷ್ಟು ಮಾಹಿತಿ ನಮ್ಮದೇ ಹಿತ್ತಲಿನ ಶೋಕಗ್ರಸ್ತ ಬದುಕಿನ ಬಗ್ಗೆ ಸಿಗುತ್ತಿಲ್ಲ. ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಸಂಕಲನ ಸಹಕಾರಿ.
-ನಾಗೇಶ ಹೆಗಡೆ
ಪುಟಗಳು: 100
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !