ಪ್ರಕಾಶಕರು: ಗೋಮಿನಿ ಪ್ರಕಾಶನ
Publisher: Gomini Prakashana
ಓದಿದವರು: ಪ್ರತಿಬಿಂಬ ತಂಡ
ಆಡಿಯೋ ಪುಸ್ತಕದ ಅವಧಿ : 2 ಗಂಟೆ 18 ನಿಮಿಷ
ಸಾಂಸ್ಕ್ರತಿಕ ರಾಜಧಾನಿಯಾದ ಮೈಸೂರು, ಅದನ್ನು ಆಳಿದ ಒಡೆಯರ ಚರಿತ್ರೆ ಮತ್ತು ಪರಂಪರೆ ಬಣ್ಣಿಸುವ ಅನೇಕ ಪುಸ್ತಕಗಳು ಈಗಾಗಲೇ ಬಂದಿವೆ. ಸಾವಿರಾರು ಪುಟಗಳಲ್ಲಿ ಮೈಸೂರು ಇತಿಹಾಸ, ಸಂಸ್ಕೃತಿ, ವೈವಿಧ್ಯತೆಗಳು ದಾಖಲಾಗಿದೆ. ಆದರೆ, ಇವುಗಳಲ್ಲಿ ಬಹುತೇಕ ಪುಸ್ತಕಗಳು ಇತಿಹಾಸದ ವಿದ್ಯಾರ್ಥಿಗಳನ್ನಷ್ಟೇ ತಲುಪಿವೆ. ಹಿಂದಿನ ಪುಸ್ತಕಗಳಿಗೂ, ಈಗ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಬರೆದಿರುವ 'ಮರೆತು ಹೋದ ಮೈಸೂರಿನ ಪುಟಗಳು' ಎನ್ನುವ 102 ಪುಟಗಳ ಪುಟ್ಟ ಪುಸ್ತಕಕ್ಕೂ ವ್ಯತ್ಯಾಸವಿದೆ. ಪುಸ್ತಕದ ಗಾತ್ರ ಕಿರಿದಾದರೂ ಮೈಸೂರಿನ ಆತ್ಮವನ್ನು ಸರಳವಾಗಿ ತೆರೆದಿಡುವ ಅಥವಾ ಹಿಡಿದಿಡುವ ದೊಡ್ಡ ಕೆಲಸವನ್ನು ಲೇಖಕರು ಮಾಡಿದ್ದಾರೆ. ಮೈಸೂರು ಎಂದರೆ ಇಲ್ಲಿ ಕಂಡದ್ದು ಮಾತ್ರವಲ್ಲ, ಕಾಣದ್ದೇ ಬಹಳವೂ ಇರಬಹುದು. ಆದರೆ, ಮೈಸೂರಿನ ಬಗ್ಗೆ ಪ್ರೀತಿ, ಅಭಿಮಾನ ಹೆಚ್ಚಲು ಈ ಪುಸ್ತಕ ನೆರವಾಗುತ್ತದೆ. ಉದ್ಯೋಗಕ್ಕಾಗಿ ಬಹರೇನ್, ಸೌದಿ, ಆಫ್ರಿಕಾ, ಮಸ್ಕತ್, ಮುಂಬಯಿ, ಪಂಜಾಬ್ಗಳಲ್ಲೆಲ್ಲ ಅಲೆದಾಡಿದರೂ ಹುಟ್ಟೂರು ಮೈಸೂರು ಲೇಖಕರನ್ನು ಇನ್ನಿಲ್ಲದಂತೆ ಕಾಡಿದಂತಿದೆ.
ಟಿವಿ, ಮೊಬೈಲ್ ಇಲ್ಲದ ಕಾಲದಲ್ಲಿ ಮೈಸೂರಿಗರ ಟೈಮ್ ಪಾಸ್ ಏನಾಗಿತ್ತು ಗೊತ್ತಾ ಎಂದು, ಆಗಿನ ಲೈಟು ಕಂಬಗಳ ಬಗ್ಗೆ ಲೇಖಕರು ಬರೆಯುತ್ತಾರೆ. ಆಗ ವಿದ್ಯುತ್ ಇಲ್ಲದ ಕಾಲ. ಆದರೂ, ಮೈಸೂರಿನ ತುಂಬ ಲೈಟು ಕಂಬಗಳಿದ್ದವು. ಕಂಬದ ತುದಿಯಲ್ಲಿ ಸೀಮೆಎಣ್ಣೆ ಲಾಂದ್ರಗಳು. ಸಂಜೆ ನಾಲಕ್ಕು ಗಂಟೆ ಆಗುವುದೇ ತಡ, ಒಬ್ಬ ಹೆಗಲ್ ಮೇಲೆ ಏಣಿ ತಗಲಾಕ್ಕೊಂಡು ಒಂದೊಂದೇ ಕಂಬ ಹತ್ತಿ ಲಾಂದ್ರವನ್ನು ಒರೆಸಿ ಕ್ಲೀನ್ ಮಾಡಿ ಹಳೆ ಬತ್ತಿ ತೆಗೆದು ಹೊಸದನ್ನ ಹಾಕಿ ದೀಪ ಹಚ್ಚಿ ಮುಂದಿನ ಕಂಬಕ್ಕೆ ಹೋಗುತ್ತಿದ್ದ. ಪೂರ್ತಿ ಕತ್ತಲಾಗುವ ಹೊತ್ತಿಗೆ ಈ ಇಬ್ಬರು ರಾಜಭಟರು ಇಡೀ ಊರಿನ ಕಂಬಗಳನ್ನು ಹತ್ತಿ ದೀಪ ಬೆಳಗಿಸುತ್ತಿದ್ದರು. ಈ ಸಂಭ್ರಮ ನೋಡೋಕೆ ನಮ್ಮೂರಿನ ಜನ ಗುಂಪುಗುಂಪಾಗಿ ಭಟರ ಹಿಂದೆ ಹೋಗೋರು, ದೀಪ ಹತ್ತಿಸಿದ ತಕ್ಷ ಣ ಹೋ ಎಂದು ಕೇಕೆ ಹಾಕುತ್ತಿದ್ದರು ಎಂದು ಅಂದಿನ ಚಿತ್ರವನ್ನು ಲೇಖಕರು ವಿವರಿಸುತ್ತಾರೆ. ಕನ್ನಂಬಾಡಿ ಕಟ್ಟೆ ಕಟ್ಟಲು ತಮ್ಮಲ್ಲಿದ್ದ ಆಭರಣಗಳು ಮತ್ತು ವಜ್ರ ವೈಡೂರ್ಯಗಳನ್ನು ನಾಲ್ಕು ಮೂಟೆಗಳಲ್ಲಿ ತುಂಬಿಸಿಕೊಂಡು ಮುಂಬಯಿಗೆ ಹೋಗಿ ಮಾರಾಟ ಮಾಡಿದ ಒಡೆಯರು ಮತ್ತು ರಾಜಮಾತೆಯ ತ್ಯಾಗದ ಕತೆಯಿಂದ ಹಿಡಿದು, ಮೈಸೂರು ಪಾಕ್ ಎನ್ನುವ ಸಿಹಿ ತಿಂಡಿಯ ತನಕ ನಾನಾ ಸಂಗತಿಗಳನ್ನು ಇಲ್ಲಿ ದಾಖಲಿಸಲಾಗಿದೆ. 'ಸಾಬು ಮತ್ತು ಪಟ್ಟದಾನೆ', 'ಬಿಳಿರಂಗನ ಪಾದುಕೆ', 'ಹುರಳಿಕಟ್ಟಿನ ಸಾರು', 'ಸಾಲಕ್ಕೂ ಶಿಕ್ಷೆ', 'ಹಕೀಮ್ ನಂಜುಂಡ' ಈ ಶೀರ್ಷಿಕೆಗಳೇ ಪುಸ್ತಕವನ್ನು ಸಲೀಸಾಗಿ ಓದಿಸುತ್ತವೆ. 'ಬಾಹುಬಲಿ' ಸಿನಿಮಾದಲ್ಲಿ ಬಲಿಷ್ಠ ಎತ್ತುಗಳ ಕೊಂಬುಗಳಿಗೆ ಪಂಜುಗಳನ್ನು ಕಟ್ಟಿ, ಶತ್ರುಪಡೆಯನ್ನು ಹಿಮ್ಮೆಟ್ಟಿಸುವ ದೃಶ್ಯವಿದೆ. ಇಂಥದ್ದೊಂದು ತಂತ್ರವನ್ನು ಚಿಕ್ಕದೇವರಾಜ ಒಡೆಯರು ಮಾಡಿದ್ದರು. ಭರ್ತಿ ಇಪ್ಪಮೂರು ಸಾವಿರ ಎತ್ತುಗಳಿಗೆ ನಲ್ವತ್ತಾರು ಸಾವಿರ ಕೆಂಡ ಉಗುಳುವ ಬೆಂಕಿಯ ಪಂಜುಗಳನ್ನು ಕಟ್ಟಿ ಮರಾಠಿಗರ ದಂಡನ್ನು ಸುಟ್ಟುಕರಕಲು ಮಾಡಲಾಗಿತ್ತು. ಇಂಥ ಅನೇಕ ರೋಚಕ ವಿವರಗಳು ಪುಸ್ತಕದಲ್ಲಿವೆ.
- Vijaya Karnataka - ಪುಸ್ತಕ ಪರಿಚಯ
ಈ ಪುಸ್ತಕ ಈಗ ಆಡಿಯೋ ಬುಕ್ ಆಗಿದೆ. ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.