ಒಂದಾಣೆ ಮಾಲೆ ಸರಣಿಯಲ್ಲಿ ಮೂಡಿದ ಹತ್ತು ಆಯ್ದ ಕತೆಗಳು
ಕಥಾ ನಿರೂಪಣೆ: ಮಾನಸಿ ಸುಧೀರ್
ನಿರ್ಮಾಣ ಸಹಾಯ: ಧ್ವನಿಧಾರೆ ತಂಡ
ಹಕ್ಕುಗಳನ್ನು ನೀಡಿದವರು: ಕುಡ್ಪಿ ರಜನೀಕಾಂತ ಶೆಣೈ
ಆಡಿಯೋ ಪುಸ್ತಕದ ಅವಧಿ: 1 ಗಂಟೆ 38 ನಿಮಿಷ
ಕತೆ ಇಷ್ಟ ಪಡದ ಮಕ್ಕಳು ಜಗತ್ತಿನಲ್ಲಿ ಇರಲಿಕ್ಕಿಲ್ಲ. ಕತೆಗಳ ಮೂಲಕವೇ ಕಾಲದಿಂದ ಕಾಲಕ್ಕೆ ಹಿರಿಯರ ಜೀವಾನಾನುಭವ, ತಿಳುವಳಿಕೆ ಕಿರಿಯರಿಗೆ ದಕ್ಕುತ್ತ ಬಂದಿದೆ. ಇಂದಿನ ಸ್ಮಾರ್ಟ್ ಫೋನ್ ಜಗತ್ತಿನಲ್ಲಿ ಮಕ್ಕಳು, ಹಿರಿಯರು ಎಲ್ಲರೂ ಬ್ಯುಸಿಯಾಗಿದ್ದಾರೆ, ಮುಂಚಿನ ಹಾಗೆ ಕೂಡು ಕುಟುಂಬಗಳೂ ಇಲ್ಲದ ಕಾರಣ ಮಕ್ಕಳಿಗೆ ಕತೆ ಹೇಳುವ ಸಂಪ್ರದಾಯ ಬಿಟ್ಟು ಹೋಗುತ್ತಿದೆ. ಹೀಗಾಗಿ ಈಗಿನ ಮಕ್ಕಳಿಗಾಗಿ ಕತೆ ಹೇಳುವ ತುರ್ತು ನಮ್ಮ ಮುಂದಿದೆ. ಕತೆ ಕೇಳುತ್ತ ಬೆಳೆಯುವ ಮಕ್ಕಳು ತಮ್ಮ ಕಲ್ಪನೆಯ ಶಕ್ತಿಯನ್ನು ಹಿಗ್ಗಿಸಿಕೊಂಡು, ಬೆಳೆದು ದೊಡ್ಡವರಾದಾಗ ಅತ್ಯಂತ ಕ್ರಿಯಾಶೀಲರೂ, ಸೃಜನಶೀಲರೂ ಆಗುತ್ತಾರೆ ಅನ್ನುವ ಮಾತುಗಳಿವೆ. ಹೀಗಾಗಿ ಕನ್ನಡದ ಮಕ್ಕಳಿಗೆ ಮತ್ತೆ ಚೆಂದದ ಕತೆಗಳನ್ನು ಹೆಕ್ಕಿ ತಂದು ಆಡಿಯೋ ರೂಪದಲ್ಲಿ ಅವರೆದುರು ತರಬೇಕು ಅನ್ನುವ ಕನಸೊಂದು ಮನದಲ್ಲಿದ್ದಾಗಲೇ ಅದಕ್ಕೆ ಕೈ ಜೋಡಿಸಲು ಮುಂದಾದವರು ಮೈಲ್ಯಾಂಗ್ ಸಂಸ್ಥೆಯವರು.
ಕೈ ಜೋಡಿಸಲು ಮುಂದೆ ಬಂದಾಗ ಒಂದು ಹೊಸ ಆಲೋಚನೆಯೂ ಬಂತು. ಅದೇನೆಂದರೆ ಒಂದೆರಡು ತಲೆಮಾರಿನ ಹಿಂದೆ ನಮ್ಮ ಅಪ್ಪ-ಅಮ್ಮ-ಅಜ್ಜ-ಅಜ್ಜಿ ಕೇಳುತ್ತಿದ್ದ ಕತೆಗಳನ್ನು ಯಾಕೆ ಮತ್ತೆ ಮಕ್ಕಳಿಗಾಗಿ ತರಬಾರದು ಅಂತ. ಹಾಗೆ ಹುಡುಕಾಡುತ್ತ ಹೋದಾಗ ಕಣ್ಣಿಗೆ ಬಿದ್ದದ್ದು 1955-56ರ ಹೊತ್ತಲ್ಲಿ ಮಂಗಳೂರಿನ ಪ್ರಭಾತ ಪ್ರಿಂಟರ್ಸ್ ವಾರಕ್ಕೊಮ್ಮೆ ಪ್ರಕಟಿಸುತ್ತಿದ್ದ ಒಂದಾಣೆ ಮಾಲೆ ಅನ್ನುವ ಸರಣಿ. ದಿ| ಕುಡ್ಪಿ ವಾಸುದೇವ ಶೆಣೈ ಅವರು ಬಹಳ ಪ್ರೀತಿಯಿಂದ ಹೊರ ತರುತ್ತಿದ್ದ ಈ ಸರಣಿಯಲ್ಲಿ ಪ್ರತಿ ವಾರವೂ ಒಂದು ಇಪ್ಪತ್ತು ಪುಟದ ಕಿರು ಪುಸ್ತಕವನ್ನು ಕೇವಲ ಒಂದು ಆಣೆಗೆ ಪ್ರಕಟಿಸಿ ಜನರನ್ನು ಓದಿನತ್ತ ಸೆಳೆಯುವ ಪುಣ್ಯದ ಕೆಲಸವನ್ನು ಅವರು ಮಾಡಿದ್ದರು. ಅದರಡಿ ಇನ್ನೂರಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದ್ದವು. ಅವುಗಳಲ್ಲಿ ಹಲವು ಮಕ್ಕಳ ಕತೆಗಳ ಪುಸ್ತಕಗಳಾಗಿದ್ದವು. ಅಲ್ಲಿ ಮಕ್ಕಳಿಗಾಗಿ ಬಂದ ಕತೆಗಳಿಂದಲೇ ಆಯ್ದ ಹತ್ತು ಕತೆಗಳನ್ನು ಒಂದು ಆಡಿಯೋ ಪುಸ್ತಕದ ರೂಪದಲ್ಲಿ ತರುವ ಬಗ್ಗೆ ಮೈಲ್ಯಾಂಗ್ ಸಂಸ್ಥೆಯವರ ಮನವಿಗೆ ಸ್ಪಂದಿಸಿದ ಅವರ ಕುಟುಂಬದ ಕುಡ್ಪಿ ರಜನೀಕಾಂತ ಶೆಣೈ ಅವರು ಇದರ ಹಕ್ಕುಗಳನ್ನು ಕೊಟ್ಟು ಈ ಆಡಿಯೋ ಪುಸ್ತಕ ನಿಮ್ಮೆದುರು ಬರಲು ನೆರವಾದರು. ಅವರಿಗೆ ನಾವು ಅನಂತ ಧನ್ಯವಾದಗಳನ್ನು ತಿಳಿಸುತ್ತೇವೆ.
ಈ ಕತೆಗಳು ಮೊದಲು ಪ್ರಕಟವಾದ ಅರವತ್ತೈದು ವರ್ಷಗಳ ನಂತರ ಮತ್ತೆ ಇಂದಿನ ಮಕ್ಕಳಿಗಾಗಿ ಆಡಿಯೋ ರೂಪದಲ್ಲಿ ಬರುತ್ತಿರುವುದು ನಮ್ಮ ಪಾಲಿಗೆ ಅತ್ಯಂತ ಸಂತಸದ ಸಂಗತಿ. ಕನ್ನಡದ ಮಕ್ಕಳು ಮತ್ತು ತಾಯ್ತಂದೆಯರು ಈ ಕತೆಗಳನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತಾರೆ ಅನ್ನುವ ನಂಬಿಕೆಯೊಂದಿಗೆ ನಾನು, ನಿಮ್ಮ ಮಾನಸಿ ಸುಧೀರ್ ಈ ಕತೆಗಳನ್ನು ಪ್ರಸ್ತುತ ಪಡಿಸುತ್ತಿದ್ದೇನೆ.
ನಿಮ್ಮ,
ಮಾನಸಿ
ಮಕ್ಕಳನ್ನು ಕಲ್ಪನೆಯ ಲೋಕಕ್ಕೆ ಕರೆದೊಯ್ಯುವ ಈ ಕತೆಗಳನ್ನು ಕೇಳಿರಿ ಕೇವಲ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ