ಬರಹಗಾರ: ಡಾ|| ಕೆ. ಶಿವರಾಮ ಕಾರಂತ
ನಮ್ಮ ಯೋಚನೆಗಳಿಗೂ ಮಾಡುವ ಕೆಲಸಗಳಿಗೂ ಹೊಂದಾಣಿಕೆ ಇದ್ದಾಗ ಮಾತ್ರ ಸಾರ್ಥಕತೆಯ ಭಾವ ನಮ್ಮನ್ನು ಕೈ ಹಿಡಿದೀತು. ಅಂದುಕೊಂಡ ಫಲಶ್ರುತಿ ದೊರಕೀತು. ಹೊರತು ನಮ್ಮ ಆಲೋಚನೆಗಳಿಗೂ ಕ್ರಿಯೆಗೂ ಕಾರ್ಯಕಾರಣ ಸೂತ್ರವಿರದೇ ಹೋದರೆ ಮಾಡುವ ಕೆಲಸವಿರಲಿ, ಬದುಕೇ ಗೋಜಲಾಗುವುದರಲ್ಲಿ ಸಂಶಯವಿಲ್ಲ. ಹಾಗಾದರೆ ನಮ್ಮ ಆಲೋಚನೆಗೂ, ಕ್ರಿಯೆಗೂ ಹೊಂದಾಣಿಕೆ ಹೇಗೆ ಬರುತ್ತದೆ? ಮೈಯ್ಯಿಗೂ ಮನಸ್ಸಿಗೂ ಇರುವ ಅವಿನಾಭಾವತೆಯಿಂದ! ಹೌದು ಫಲಶ್ರುತಿ ಮೆಚ್ಚುವಂಥದ್ದಾಗಿರಬೇಕಾದರೆ ಮೂಲಭೂತವಾಗಿ ನಮ್ಮ ಮೈಯ್ಯೂ ಮನಸ್ಸು ಹೊಂದಾವಣಿಕೆಯಾಗದೆ ಗತ್ಯಂತರವಿಲ್ಲ. ಇದನ್ನೇ ನಂಬುವ, ಸಾಧಿಸುವ ಹಂಬಲವುಳ್ಳ ಒಬ್ಬ ಮುಖ್ಯ ಪಾತ್ರಧಾರಿ ಅವಳು – ಮಂಜುಳ. ಆಕೆ ವೃತ್ತಿಯಲ್ಲಿ ವೇಶ್ಯೆ.
ತಮ್ಮ ಮೂಲವೃತ್ತಿಯಲ್ಲಿರುವ ಸಾಧ್ಯಾಸಾಧ್ಯತೆಗಳು, ಅದರ ಒಳಹೊರಗು, ಸಮಾಜ ಅವರನ್ನು ನೋಡುವ ಬಗೆ ಎಲ್ಲವನ್ನು ಬಣ್ಣಿಸಿ ತನ್ನ ಮಗಳಿಗೆ ಹೇಳುವ ಮಂಜುಳಾಳ ತಾಯಿ ತನ್ನ ಮಗಳಿಗೆ ತಕ್ಕುದಾದ ಜೀವನ ಪೀಠಿಕೆಯಾದ ಹಾಡು, ನೃತ್ಯ, ಸಂಗೀತ ಕಲಿಸುವ ಮೂಲಕ ಭದ್ರ ಬುನಾದಿ ಹಾಕಿಯೂ ಕೊಡುತ್ತಾಳೆ. ಆಕೆಯ ತಾಯಿ ಪ್ರಕಾರ ಸದಾ ಪತಿವ್ರತೆಯರಾದ ಅವರಿಗೆ ಅವರ ಆಲೋಚನೆಗಳೇ ಬೇರೆ, ಬದುಕೇ ಬೇರೆ. ಅರ್ಥಾತ್ ವೇಶ್ಯೆಯರು ಮೈಯ್ಯನ್ನು ಮಾತ್ರ ಮಾರಬೇಕು, ಮನಸ್ಸನ್ನಲ್ಲ. ಅವರ ವೃತ್ತಿಯಲ್ಲಿ ಮೈಯ್ಯಿಗೆ ಮಾತ್ರ ಬೆಲೆ, ಮನಸ್ಸು – ಭಾವನೆಗಳಿಗಲ್ಲ.
ಈ ವಾದ ಮಂಜುಳಾಗೆ ಅಷ್ಟಾಗಿ ಒಪ್ಪುವುದಿಲ್ಲ. ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ, ನಶ್ವರವಷ್ಟೇ. ಇಲ್ಲಿ ಎಲ್ಲವೂ ಬದಲಾಗುತ್ತದೆ. ಮೈಯ್ಯಿಗೂ ಮನಸ್ಸಿಗೂ ಅಂತರವಿಲ್ಲದ ಸಾರ್ಥಕ ಬದುಕು ನನಗೂ ಒಂದಲ್ಲ ಒಂದು ದಿನ ಸಿಗುತ್ತದೆ ಎನ್ನುವ ನಿರೀಕ್ಷಣೆ ಆಕೆಯದು. ಅವಳ ಬಾಳಿನಲ್ಲಿ ಬರುವ ಐದು ಮುಖ್ಯ ಗಂಡಸರಲ್ಲಿ ಆಕೆ ಜೀವನದ ಎಲ್ಲ ತಿರುವುಗಳನ್ನೂ, ಸುಖದುಃಖಗಳನ್ನೂ ಕಾಣುತ್ತಾಳೆ. ಒಬ್ಬೊಬ್ಬರೂ ಒಂದೊಂದು ರೀತಿಯ ಬದುಕಿನ ಪಾಠಗಳನ್ನು ಆಕೆಗೆ ದಾಯಪಾಲಿಸುತ್ತಾರೆ. ಬದುಕು ಆಕೆಗೆ ಅನಂತಾನುಭವ ನೀಡುವ ಊಟೆಯಾಗುತ್ತದೆ. ತನ್ನ ಕಣ್ಣ ಮುಂದೆಯೇ ಅನಂತ ಪ್ರೇಮಿಗಳಾಗಿ ಮೈಯ್ಯೂ ಮನಸ್ಸು ಏಕೀಕರಿಸಿಕೊಂಡು ಜೀವನ ನಡೆಸುತ್ತಿರುವ ವೃದ್ಧ ದಂಪತಿ ಪಮ್ಮ ಮತ್ತು ದುಗ್ಗಿಯರು ಬೇರೆ ಮಂಜುಳಾಳ ನಂಬಿಕೆಗೆ ಪುಷ್ಟಿ ನೀಡುತ್ತಾರೆ. ಇಬ್ಬರೂ ಅನಾಥರು. ಆಕೆ ಗಂಡ, ಈಕೆ ಹೆಂಡತಿ. ಆಕೆ ಅವನ ಮಡಿಲಲ್ಲಿ ಮಗು. ಕಣ್ಣು ಕಾಣದಾದಾಗ ಮುನ್ನಡೆಸುವ ಬೆಳಕು. ಅವರದು ಅನ್ಯೋನ್ಯ ದಾಂಪತ್ಯ.
ಮಂಜುಳಾಳ ಬಾಳಿನಲ್ಲಿ ಬರುವ ಮೊದಲನೆಯ ಗಂಡಸು ಹಿಂಸ್ರ ಪಶುವಿನಂಥವನು. ಎರಡನೆಯವನು ಕೇವಲ ಬೃಹನ್ನಳೆ ಚರಿತನಾದರೂ ಗುಣವುಳ್ಳವನು, ಮನಸ್ಸು – ಭಾವನೆ ಅಂತ ಬೆಲೆ ಕೊಡುವನು. ಮೂರನೆಯವನು ಆಕಸ್ಮಾತ್ತ್ ಬಯಕೆಗೆ ತುತ್ತಾದ ಅಚಾತುರ್ಯ – ಅಪಘಾತ, ನಾಲ್ಕನೆಯವನು ಅಂಜುಪುರುಕ. ಐದನೆಯವನು ನಿಜವಾದ ಗಂಡಸು, ಆದರೆ ಐಹಿಕ ಸುಖ ತೊರೆದ ಸನ್ಯಾಸಿ. ಹೀಗೆ ಬದುಕಿನ ವಿವಿಧ ಹಂತಗಳಲ್ಲಿ ಆಕೆಗೊದಗಿದ ಅನುಭವಗಳು ಕೇವಲ ಐದು ಗಂಡಸರಷ್ಟೇ ಅಲ್ಲ, ಅದು ಪಂಚಭೂತಗಳು ಐಕ್ಯವಾಗಿ ಸಮಾಧಿ ಸ್ಥಿತಿಯತ್ತ ಆಕೆಯನ್ನು ಮುನ್ನಡೆಸುವ ಪಂಚತತ್ವಗಳು. ಆಕೆ ತನ್ನ ಜೀವಿತಾವಧಿಯಲ್ಲಿ ಮೈಯ್ಯನ್ನೂ ಮನಸ್ಸನ್ನು ಏಕವಾಗಿ ಘನಿರ್ಭವಿಸಿಕೊಳ್ಳುವ ಸಾಕ್ಷಾತ್ಕಾರ ಪಡೆಯುತ್ತಾಳೆ. ತಾನು ಬದುಕಿ ಬಾಳಿದುದನೆಲ್ಲವನ್ನು ಆಕೆ ಬರೆದಿಡುತ್ತಾಳೆ.
ಹಾಗೆ ಮಂಜುಳಾ ಬರೆದಿಟ್ಟ ಚರಿತ್ರೆಯಲ್ಲದ ಅಸ್ಪಷ್ಟ ನಿರೂಪಿತ ಬರಹವೇ ಮಂಜುಳಾ ಮೊಮ್ಮಗಳು ಚಂದ್ರಿಗೆ ಸಿಕ್ಕು ಇಷ್ಟೆಲ್ಲಾ ವೃತ್ತಾಂತ ಬೆಳಕಿಗೆ ಬರುತ್ತದೆ. ತನ್ನ ಅಜ್ಜಿಯ ಬಗ್ಗೆ ತಿಳಿಯುತ್ತದೆ. ಇದನ್ನು ಓದಿದ ಬಳಿಕ – ಚಂದ್ರಿಯ ತಾಯಿ ಶಾರಿಕೆಯ ವಿರೋಧವಿದ್ದರೂ – ತಮ್ಮ ಮೂಲವೃತ್ತಿಯನ್ನು ಬಿಟ್ಟು ಸಮಾಜದ ಸಾಮಾನ್ಯಸ್ತರದ ಬದುಕನ್ನು ಕಟ್ಟಿಕೊಳ್ಳ ಬಯಸುವ ಆಕೆಯ ಮನಸ್ಸಿನಾಸೆಗೆ ಗರಿ ಮೂಡುತ್ತದೆ. ಅಲ್ಲಿಗೆ ಅನೇಕ ತಲೆಮಾರುಗಳಿಂದ ನಡೆದು ಬಂದ ಮೂಲ ವೃತ್ತಿಯಾದ ವೇಶ್ಯಾವಾಟಿಕೆಗೆ ಚಂದ್ರಿ ತಿಲಾಂಜಲಿ ನೀಡುತ್ತಾಳೆ ಎನ್ನುವ ಭರವಸೆ ಓದುಗನ ಮನಸ್ಸಿನಲ್ಲಿ ಬಿಜಯಂಗೈಯ್ಯುತ್ತದೆ.
ಕಾರಂತರು ಕೇವಲ ಕಥೆಯನ್ನೋ ಕಾದಂಬರಿಯನ್ನೋ ಕಥೆಗೆ ಎಷ್ಟು ಬೇಕೋ ಅಷ್ಟು ಹೇಳಿ ಸುಮ್ಮನಾಗುವರಲ್ಲ, ಜೊತೆಗೆ ಅದಕ್ಕೆ ತಕ್ಕುದಾದ ಪೂರಕ ಮಾಹಿತಿಯೂ ಕೊಡುತ್ತಾರೆ ಎನ್ನುವುದಕ್ಕೆ ಇಲ್ಲಿ ಅವರು ವೇಶ್ಯಾವಾಟಿಕೆ ಬಗ್ಗೆ ಸ್ಥೂಲವಾಗಿ ಅಲ್ಲದಿದ್ದರೂ ನಿರ್ದಿಷ್ಟ ಕಾರಣಗಳನ್ನು ಮುಂದಿಡುವುದೇ ಸಾಕ್ಷಿ. ಇಡೀ ಕಾದಂಬರಿಯ ನಡುವೆ ಸೈಡ್’ವಿಂಗ್ ಹೈಲೈಟ್ ಅಂದರೆ ಇದೇ.
ವೇದಪುರಾಣ ಕಾಲದಿಂದಲೂ ಸಮಾಜದ ಅನೇಕ ವೃತ್ತಿಗಳಲ್ಲೊಂದಾಗಿ ರಾಜಾಶ್ರಯ, ಪ್ರಜಾಶ್ರಯ ಹೊಂದಿದ್ದ, ಮಾನ್ಯತೆ ಪಡೆದ ಒಂದು ವೃತ್ತಿ ಎಂದರೆ ಅದು ವೇಶ್ಯಾವಾಟಿಕೆಯೂ ಹೌದು. ಇಟ್ ವಾಸ್ ಆಸ್ ಯೂಶುಯಲ್ ಆಸ್ ಅದರ್ ಪ್ರೊಫೆಷನ್! ಆ ವೃತ್ತಿಗಿದ್ದ ಗೌರವ, ಘನತೆ ಕಡಿಮೆಯಾಗಿ ಅದನ್ನು ಮೈಲಿಗೆ ಎಂದೋ, ಅಪಚಾರ ಎಂದೋ ಮೂಲೆಗುಂಪು ಮಾಡಲು ಕಾರಣ ಒಂದೆರಡಲ್ಲ. ತೀರ ಇತ್ತೀಚೆಗಿನ ಕಾರಣ ಎಂದರೇ ಭಾರತವನ್ನಾಳಲು ಬಂದ ಡಚ್ಚರು, ಪೋರ್ಚುಗೀಸರು, ಬ್ರಿಟೀಷರು ಆ ವೃತ್ತಿಯನ್ನು ಅಗ್ಗ ಮಾಡಿದುದೇ ಆಗಿದೆ. ಅನೇಕ ತಿಂಗಳುಗಳ ಕಾಲ ಯಾನ ಮಾಡಿ ಖಂಡ ದಾಟಿ ಬಂದ ಅವರು ಏಕಾತನತೆಯಿಂದ ಬಳಲಿ ನಾಡಿಗೆ ಕಾಲಿಟ್ಟು ತಮ್ಮ ಥೈಲಿಯನ್ನು ಚಿನ್ನ ಬೆಳ್ಳಿ ರೂಪಾಯಿಗಳಿಂದ ಟಣಾಯಿಸಿದರೆ ಬಹು ಗೌರವದಿಂದ ನಡೆಯುತ್ತಿದ್ದ ಕೃಪಾಪೋಷಿತ ವೃತ್ತಿ ಅಗ್ಗವಾಗದೇ ಇನ್ನೇನಾದೀತು? ಇದನ್ನು ಕಾರಂತರು ಎಷ್ಟು ಮನದಟ್ಟಾಗುವಂತೆ ನಿರೂಪಿಸಿದ್ದಾರೆ ಅಂದರೆ ಓದುವ ನಮಗೂ ಹೌದಲ್ಲಾ ಎನ್ನುವಂತಾಗುತ್ತದೆ.
-ಮೋಹನ್ ಕುಮಾರ್ ಡಿ ಎನ್
ದೊಡ್ಡಬಳ್ಳಾಪುರ
ಕೃಪೆ
https://pustakapremi.wordpress.com
ಪುಟಗಳು: 267
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !