ಲೇಖಕರು:
ಕಾರ್ಲ್ ಮಾರ್ಕ್ಸ್
ಕನ್ನಡಕ್ಕೆ: ಕೆ. ಫಣಿರಾಜ್, ಡಾ|| ಜಿ. ರಾಮಕೃಷ್ಣ
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಆರು ಭಾಗಗಳ ಈ ಪ್ರಬಂಧವನ್ನು ಕಾರ್ಲ್ ಮಾರ್ಕ್ಸ್ ೧೮೫೨ರಲ್ಲಿ ಬರೆದಿರುವನು. ೧೮೪೮-೫೨ರ ಅವಧಿಯು, ಯೂರೋಪಿನಲ್ಲಿ, ಗಣತಂತ್ರ ವ್ಯವಸ್ಥೆಯ ಸ್ಥಾಪನೆಗಾಗಿ ರಾಜಾಳ್ವಿಕೆಯ ವಿರುದ್ಧ ಹೋರಾಟಗಳ ಸರಣಿಯ ಕಾಲವಾಗಿತ್ತು. ಪ್ರತಿ ಹೋರಾಟದಲ್ಲೂ, ಭಾಗಿಯಾದ ಜನರ ವರ್ಗ ಸ್ವರೂಪವು ಹಿಂದಿನ ಶತಮಾನದ ಕ್ರಾಂತಿಗಳಿಗಿಂತ ಹೆಚ್ಚು ಸ್ಪಷ್ಟವಾಗಿತ್ತು ಮತ್ತು ಶ್ರಮಿಕರು ಒಂದು ಸಂಘಟಿತ ಸಾಮಾಜಿಕ-ರಾಜಕೀಯ ಸಮೂಹವಾಗಿ, ತಮ್ಮ ಶ್ರಮಿಕ ಅಸ್ತಿತ್ವದ ಅರಿವಿನಿಂದ, ಇತರ ವರ್ಗಗಳ ಜೊತೆ ಈ ಹೋರಾಟಗಳಲ್ಲಿ ಭಾಗವಹಿಸಿದರು. ಇದರ ಪರಿಣಾಮವಾಗಿ, ಗಣತಂತ್ರ ವ್ಯವಸ್ಥೆಗಾಗಿ ನಡೆದ ಕ್ರಾಂತಿಕಾರಕ ಹೋರಾಟಗಳ ಒಡಲಿಂದ, ಸಮಾಜವಾದದ ಅರಿವನ್ನು ಪಡೆದ, ತಮ್ಮ ವರ್ಗ ಅಸ್ಮಿತೆಯನ್ನು ರಾಜಕೀಯ ಆಚರಣೆಯ ಮುಖ್ಯ ಕೇಂದ್ರವಾಗಿಸಿಕೊಂಡ ಶ್ರಮಿಕ ಸಮುದಾಯವು ಯೂರೋಪಿನಲ್ಲಿ ಮೊಳಕೆ ಒಡೆಯಿತು. ೧೮೪೮ರ ಯೂರೋಪಿನ ಕ್ರಾಂತಿ ಎಂದೇ ಗುರುತಿಸಲಾಗುವ ಈ ಹೋರಾಟಗಳು ಶುರುವಾದದ್ದು, ೧೭೮೯ರ ಫ್ರೆಂಚ್ ಕ್ರಾಂತಿಯ ತವರಾದ ಫ್ರಾನ್ಸಿನಲ್ಲಿ; ಈ ಹಿನ್ನೆಲೆಯಲ್ಲಿ ೧೮೪೮-೫೨ರ ನಡುವಿನಲ್ಲಿ ಫ್ರಾನ್ಸಿನಲ್ಲಿ ಘಟಿಸಿದ ವಿದ್ಯಮಾನಗಳನ್ನು ಎರಡನೇ ಫ್ರೆಂಚ್ ಕ್ರಾಂತಿ ಎಂದೇ ಗುರುತಿಸಲಾಗುತ್ತದೆ. ಪ್ರಸ್ತುತ ಪ್ರಬಂಧವು ಎರಡನೇ ಫ್ರೆಂಚ್ ಕ್ರಾಂತಿಯ ವಿದ್ಯಮಾನಗಳನ್ನು, ದಿನಪತ್ರಿಕೆಯ ಅಂಕಣಬರಹದ ಮೂಲಕ, ಹಲವು ಕಂತುಗಳಲ್ಲಿ ವಿಶ್ಲೇಷಿಸುವುದು ಮಾರ್ಕ್ಸನ ಇರಾದೆಯಾಗಿತ್ತು. ಆದರೆ, ೧೮೫೨ರ ಪ್ರತಿಕ್ರಾಂತಿಯ ಕಾರಣವಾಗಿ ಯೂರೋಪಿನಾದ್ಯಂತ ಶ್ರಮಿಕವರ್ಗದ ಪರವಾಗಿದ್ದ ಪತ್ರಿಕೆಗಳು ಪ್ರಕಟಣೆ ಕೈದುಮಾಡಿದ ಕಾರಣವಾಗಿ, ಈ ಬರಹದ ಕಂತುಗಳನ್ನು ಸಂಪಾದಿಸಿ ಕಿರುಹೊತ್ತಿಗೆಯಾಗಿ ಪ್ರಕಟಿಸಲಾಯಿತು.
ಈ ಬರಹವನ್ನು ಮಾರ್ಕ್ಸ್ ೧೮೫೦ರ ದಶಕದ, ಪತ್ರಿಕೆಗಳನ್ನು ಓದುವ, ಯೂರೋಪಿನ ಜನರನ್ನು ಗಮನದಲ್ಲಿಟ್ಟುಕೊಂಡು ಬರೆದಿರುವನು. ೧೭೮೯-೧೮೫೨ರವರೆಗಿನ ಫ್ರಾನ್ಸ್ ಹಾಗೂ ಯೂರೋಪಿನ ಐತಿಹಾಸಿಕ ಹಾಗೂ ವರ್ತಮಾನದ ವಿದ್ಯಮಾನಗಳ ತಕ್ಕಮಟ್ಟಿಗಿನ ಅರಿವು ಓದುಗರಲ್ಲಿ ಇರುತ್ತದೆ ಎಂಬ ಸಹಜ ಹಿನ್ನೆಲೆಯಲ್ಲಿ ಈ ಬರಹವನ್ನು ಬರೆಯಲಾಗಿದೆ. ಪತ್ರಿಕಾ ಬರಹವಾದ್ದರಿಂದ, ಇಸವಿ, ಘಟನೆ, ವ್ಯಕ್ತಿಗಳು, ಸಮಾಜದ ಪೂರ್ವಾಗ್ರಹದ ವಿಚಾರಗಳು - ಎಲ್ಲವೂ ಈ ಬರಹದಲ್ಲಿ ದಂಡಿಯಾಗಿ ಬರುತ್ತವೆ; ಮತ್ತೂ ಈ ವಿವರಗಳು ತನ್ನ ಓದುಗರ ಸಾಮಾನ್ಯ ಜ್ಞಾನವಾಗಿರುತ್ತದೆ ಎಂಬ ಖಚಿತತೆಯಲ್ಲಿ ಮಾರ್ಕ್ಸ್ ಈ ಬರಹವನ್ನು ಬರೆದಿರುವನು.
ಪುಟಗಳು: 88
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !