ಮಾಕೋನಹಳ್ಳಿ ವಿನಯ್ ಮಾಧವ್
ಹಟ್ಟಿದ್ದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ, ಅಮ್ಮನ ಊರು ಕೊಡಗು ಜಿಲ್ಲೆಯ ಸೋಮಾವಾರ ಪೇಟೆಯ ಹತ್ತಿರದ ಕರ್ಕಳ್ಳಿ. ಅಣ್ಣ (ಅಪ್ಪ)ನ ಊರು ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ಹತ್ತಿರದ ಮಾರೋನಹಳ್ಳಿ,
ಓದಿ ಮುಂದೇನು ಮಾಡಬೇಕು ಎನ್ನುವುದಕ್ಕೆ ಎಂದೂ ಸ್ಪಷ್ಟ ಚಿತ್ರಣ ದೊರೆತಿರಲಿಲ್ಲ. ಸಕಲೇಶಪುರ, ಕೇರಳಾಪುರ, ಮೈಸೂರು, ಕಾರ್ಕಳ, ಉಡುಪಿ ಮತ್ತು ಶಿವಮೊಗ್ಗಗಳಲ್ಲಿ ಶಾಲಾ, ಕಾಲೇಜುಗಳಿಗೆ ಹೋಗಿ, ಪದವಿ ವಂಚಿತನಾಗಿ, 1989ರಲ್ಲೇ ಬೆಂಗಳೂರಿಗೆ ಬಂದರೂ, ಇಲ್ಲೇನು ಮಾಡುವುದು ಎನ್ನುವುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ದೊಡ್ಡ ಕಟ್ಟಡದಿಂದ ಟೈ ಹಾಕಿಕೊಂಡು, ಇಂಗ್ಲಿಷ್ ಮಾತನಾಡಿಕೊಂಡು ಬರುವವರನ್ನು ಕಂಡರೆ ಎರಡು ಹೆಜ್ಜೆ ಹಿಂದೆ ಹೋಗುತ್ತಿದ್ದೆ. ಮುಂದಿನ ಜೀವನ ಖಾಲಿ ಕಾಗದದ ಮೇಲೆ ಗೀಚಿದ ಚಿತ್ರಗಳಂತೆ ಸಾಗಿತು. ಇಷ್ಟವಾದ ಚಿತ್ರಗಳು ಉಳಿದುಕೊಂಡವು. ಇನ್ನುಳಿದವು ಸ್ಮೃತಿಪಟಲದಿಂದ ಅಳಿಸಿಹೋದವು.
1994ರವರೆಗೆ ಪತ್ರಿಕೋದ್ಯಮದ ಬಗ್ಗೆ ಯಾವುದೇ ಜ್ಞಾನ ವಿಲ್ಲದವನು, 1996ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ ಕೆಲಸ ಆರಂಭಿಸಿದೆ. ಒಂದೆರೆಡು ವರ್ಷಗಳಲ್ಲಿ ಊರಿಗೆ ಹೋಗಿ, ಕಾಫಿ ಪ್ಲಾಂಟರ್ ಆಗುವ ಕನಸನ್ನು ಹೊತ್ತುಕೊಂಡೇ ಮೂರು ದಶಕಗಳು ದಾಟಿ ಹೋದವು. ಈಗ ಆ ಬಣ್ಣದ ಕನಸು, ಕಪ್ಪು-ಬಿಳುಪಾಗಿ ರೂಪಾಂತರಗೊಂಡಿದೆ.