ಐ ಲೈಕ್ ದಿಸ್ ಮ್ಯಾನ್.
ಎಲ್ಲೋ ಮೂಲೆಯಲ್ಲಿ ಕೂತು ಡಾಕ್ಟರಿಕೆ ಮಾಡುತ್ತಾ, ಕ್ರಿಕೆಟ್ ಕನವರಿಸ್ತಾ, ಒಳಗೊಳಗೇ ಹುಡುಗೀರ್ನ ನೋಡ್ತಾ, ಇಷ್ಟಪಡ್ತಾ ಅವಡುಗಚ್ಚುವ ಈ ಡಾಕ್ಟರ್ ಕವಿ - ನೋಡದಿದ್ರೂ ಪರಿಚಿತ. ಮೊದಲ ಕವಿತೆ ನಾನು ಪ್ರಕಟಿಸಿದಾಗ ಈತ ಬಚ್ಚಾ!
ನಾನು ಕವಿಯಲ್ಲ. ಒಳ್ಳೆ ಕವಿತೆಗಳ ಶುದ್ಧ ಓದುಗ. ನನ್ನ ಪಾಲಿಗೆ ಬೇಂದ್ರೆಯೊಬ್ಬರೇ ಕವಿ. ನಾನೂ ಮೊದಲಿಗೊಂದಷ್ಟು ತಿಣುಕಿದೆ. ಅದು ಒಲಿಯಲಿಲ್ಲ. ಗದ್ಯ ನನ್ನ ಹೋಮ್ ಟರ್ಫ್. ಕೊಂಚ ಉರ್ದುವಿನಲ್ಲಿ ಕವಿತೆ ಬರೆದೆ. ಅದೂ ಮುಟ್ಟಾಯಿತು. ಫಾರ್ಚುನೇಟ್ಲಿ!
ಅಜಿತ್ ಪದ್ಯಗಳ ಮೇಲೆ ಕಣ್ಣಾಡಿಸುತ್ತೇನೆ. ಬ್ರೈಟ್ ಅನ್ನಿಸಿದ್ದು ನೆನಪಿದೆ. ಕವಿ ತುಂಟತನ ಕಳೆದುಕೊಳ್ಳಬಾರದು. ಡಾಕ್ಟ್ರು ಇನ್ನೂ ತುಂಟ. 'ಮೊದಲ ರಾತ್ರಿಯಲಿ ಅಳೆಯಲು/ ಹೋದವರಿಗೆಲ್ಲ/ ಮಿಲನದ ಜೇನುತುಪ್ಪ/ ಸಿಗಲೇಬೇಕಿಲ್ಲ......' ಅಂತಾರೆ. ಉಳಿದದ್ದು ನಿಮ್ಮ ಊಹೆ. ಕೆಲ ಬಾರಿ ಅನೇಕ ಕವಿಗಳು ಫೇಸ್ ಬುಕ್ಕಿಗೆ, ವಾಟ್ಸಪ್ಪಿಗೆ, ಪತ್ರಿಕೆಗಳ ಪುಟ ಮೂಲೆಗೆ ಬಲಿಯಾಗಿ ಹೋಗುತ್ತಾರೇನೋ ಅನ್ನಿಸಿ ಆತಂಕಪಡುತ್ತೇನೆ. ನಾಟ್ ದಿಸ್ ಗಾಯ್.
ಸಂಕಲನವನ್ನೂ ತರುತ್ತಿದ್ದಾರೆ. ನನ್ನ ಆಸೆಯೆಂದರೆ ಅಜಿತ್ ಹೆಗಡೆ ಹಿಂದಿ- ಉರ್ದು ಕವಿಗಳಾದ ಸಾಹಿರ್ ಲುಧಿಯಾನವಿ, ಗುಲ್ಜಾರ್, ಅಮೃತಾ ಪ್ರೀತಮ್ ರನ್ನು ಓದಬೇಕು. ಆಗ ಇವರ ಕಾವ್ಯ ಮತ್ತಷ್ಟು ಕಸುವುಗೊಳ್ಳುತ್ತದೆ. 'ಹಾಯ್ ಬೆಂಗಳೂರ್!' ನಲ್ಲಿ ಈ ಹುಡುಗನ ಪದ್ಯ ಪ್ರಕಟಿಸಿದ್ದೆ. ಇವತ್ತಿನ ತಹತಹಕ್ಕೆ ಅದೇ ಕಾರಣವಾಯ್ತೋ ಏನೋ?
ಕವಿಯೇ ಅಲ್ಲದ ನಾನು ಅಜಿತ್ ಹರೀಶಿಗೆ ಶುಭ ಹಾರೈಸ್ತೇನೆ. ಕಾವ್ಯ ಕಸುವಾಗಲಿ. ನಿತ್ಯ ಗರ್ಭ ಕಟ್ಟಲಿ. ನಿತ್ಯ ಹೆರಿಗೆಯಾಗಲಿ.
-- ರವಿ ಬೆಳಗೆರೆ