ಪ್ರಕಾಶಕರು: ಕಾನ್ ಕೇವ್ ಮೀಡಿಯಾ ಮತ್ತು ಪ್ರಕಾಶಕರು
Publisher: Concave Media and Publisher
ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ ಸಂಸ್ಥೆಯು ಅತ್ಯಂತ ಜವಾಬ್ದಾರಿಯುತವಾಗಿ ತನ್ನ ಪ್ರಕಟಣೆಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಕಟಿಸುತ್ತಾ ಬಂದಿದ್ದು. ಯುವ ಲೇಖಕರಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ದೃಷ್ಟಿಯಿಂದ ಯುವ ಬರಹಗಾರರ ಕೃತಿಗಳನ್ನು ಪ್ರಕಟಿಸುತ್ತ ಬಂದಿದೆ.
ಈ ಹಾದಿಯಲ್ಲಿ ಸಾಗುವಾಗ ಎದುರಾದವರೇ ನನ್ನ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರಾದ ಬಿ.ಎಂ ಗಿರಿರಾಜ್ ರವರು. ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವಾಗ ಅವರು ಸಣ್ಣ ಕಥೆಗಳನ್ನು ಬರೆದಿದ್ದರು. ಒಂದಕ್ಕಿಂತ ಒಂದು ಉತ್ತಮ ಕಥೆಗಳಾಗಿದ್ದವು. ಅದನ್ನು ಪುಸ್ತಕವಾಗಿಸಲು ಹೊರಟಾಗ, ನನ್ನದು ಇನ್ನೊಂದು ಕಾದಂಬರಿ ಇದೆ ಓದಿ ಅಂತ ಅಂದಾಗ ನಾನು ಪ್ರತಿಗಳನ್ನು ಕೊಡಿ ಅಂದೆ. ಆದರೆ ಅವರ ಬಳಿ ಇರಲಿಲ್ಲ. ಕಲಾಮಾಧ್ಯಮದ ಪರಮೇಶ್ವರ್ ಅವರ ಬಳಿ ಒಂದು ಪ್ರತಿ ಇರುವುದನ್ನು ಗಮನಿಸಿ, ಪಡೆದು, ಓದಿ ಕಾದಂಬರಿಯನ್ನೇ ಮೊದಲು ಮಾಡುವ ಎಂದು ಹೇಳಿ ಪ್ರಕಟಿಸಲು ಮುಂದಾದೆ. ಇದು ಗಿರಿರಾಜ್ ಅವರ ಪ್ರಾರಂಭಿಕ ಬರೆಹ ಎಂದು ಅನ್ನಿಸುವುದೇ ಇಲ್ಲ ಅಷ್ಟು ಲೀಲಾಜಾಲವಾಗಿ ಓದಿಸಿಕೊಂದು ಹೋಗುತ್ತದೆ. ಕಥೆಗೆ ಸಾವಿಲ್ಲ ಕಾದಂಬರಿ ನಿಜಕ್ಕೂ ಸಮಾಜದ ಕಳೆ ತೆಗೆದು ಸ್ವಾಸ್ಥ್ಯ ಉಂಟು ಮಾಡುವಲ್ಲಿನ ಪ್ರಯತ್ನ ಎಂದು ಮೇಲ್ನೋಟಕ್ಕೆ ಅರಿವಾಗುತ್ತಿದ್ದಂತೆ ಅದರ ತಿರುಳು ಭೌಗೋಳಿಕ ನೆಲೆಗಳಲ್ಲಿ ಉಂಟಾಗುವ ಸಂಸ್ಕೃತಿಗಳ ಪಲ್ಲಟ ಹಾಗೂ ತಲೆಮಾರುಗಳ ತಲ್ಲಣಗಳಿಗೆ ಸಾಕ್ಷಿಯಾಗಿರುವುದು ಗೊತ್ತಾಗುತ್ತದೆ.
ಗಿರಿರಾಜ್ ಅವರು ಸಿನೆಮಾ, ನಾಟಕ, ಸಮಾಜದ ಜೊತೆಗೆ ತಮ್ಮ ವಿಚಾರಗಳನ್ನು ಬರವಣಿಗೆಯಲ್ಲಿ ಕಸಿ ಮಾಡುತ್ತಾ ಹೆಚ್ಚು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ವಿನಂತಿಸುತ್ತೇನೆ.
ಕಾದಂಬರಿಯನ್ನು ಟೈಪ್ ಮಾಡಿಕೊಟ್ಟ ಶ್ರೀ ಚಂದ್ರಶೇಖರ್, ಅಕ್ಷರ ಜೋಡಣೆ ಮಾಡಿಕೊಟ್ಟ ಶ್ರೀಮತಿ ಮಾಲಾ, ಮುಖಪುಟ ರಚಿಸಿದ ಕಲಾವಿದರಾದ ಶ್ರೀ ಚನ್ನಕೇಶವ.ಜಿ ಮತ್ತು ನನಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿರುವ ಹಲವಾರು ಹಿರಿಯರಿಗೆ ನನ್ನ ಅನಂತಾನಂತ ಧನ್ಯವಾದಗಳು.
ಪುಸ್ತಕವನ್ನು ಅಂದವಾಗಿ ಮುದ್ರಿಸುವ ಎಂದಿನ ನಮ್ಮ ಲಕ್ಷ್ಮೀ ಮುದ್ರಣಾಲಯದ ಶ್ರೀ ಕೆ.ಎಸ್. ಮಂಜು ಅವರಿಗೂ ಕೃತಜ್ಞತೆಗಳು.
-ನಂದೀಶ್ ದೇವ್
ಕಾನ್ಕೇವ್ ಪ್ರಕಾಶನ
ಪುಟಗಳು: 172
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !