ಪ್ರಕಾಶಕರು: ಅಕ್ಷರ ಪ್ರಕಾಶನ
Publisher: Akshara Prakashana
ಅಕ್ಷರ ಪ್ರಕಾಶನಕ್ಕೆ ೫೦ ತುಂಬಿದ ೨೦೦೬ನೆಯ ವರ್ಷ, ದಿ| ಕೆ.ವಿ. ಸುಬ್ಬಣ್ಣನವರ ನೆನಪಿಗೆ, ಈ ಹೊಸ ಪುಸ್ತಕಮಾಲೆಯ ಮೊದಲ ಕಂತಿನ ೨೫ ಪುಸ್ತಕಗಳು ಬಿಡುಗಡೆಗೊಂಡವು; ೨೦೦೭ರಲ್ಲಿ ಎರಡನೆಯ ಕಂತಿನ ಇನ್ನೂ ೧೦ ಪುಸ್ತಕಗಳು ಮತ್ತು ೨೦೦೯ರಲ್ಲಿ ಇನ್ನೂ ೧೫ - ಹೀಗೆ ಒಟ್ಟು ೫೦ ಪುಸ್ತಕಗಳು ಈವರೆಗೆ ಈ ಮಾಲಿಕೆಯಲ್ಲಿ ಪ್ರಕಟಗೊಂಡಿವೆ.
ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು - ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ - ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು-ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.
ABOUT THE AUTHOR
ಕುಮಾರವ್ಯಾಸ ಎಂಬ ಕಾವ್ಯನಾಮದ ಇವನ ನಿಜವಾದ ಹೆಸರು ನಾರಣಪ್ಪ. ಇವನ ಕಾಲವನ್ನು ಸು. ೧೫ನೇ ಶತಮಾನವೆಂದು ವಿದ್ವಾಂಸರು ಊಹಿಸಿದ್ದಾರೆ; ಲಭ್ಯ ದಾಖಲೆಗಳ ಪ್ರಕಾರ, ಕ್ರಿ.ಶ. ೧೪೨೩ಕ್ಕಿಂತ ಹಿಂದಿನವನು. ವ್ಯಾಸಭಾರತವನ್ನು ಅನುಸರಿಸಿ ಇವನು ತನ್ನ ಕನ್ನಡ ಭಾರತವನ್ನು ರಚಿಸಿರುವುದರಿಂದ ಕುಮಾರವ್ಯಾಸ ಎಂಬ ಹೆಸರು ಇವನಿಗೆ ಅನ್ವರ್ಥಕ. ಭಾಮಿನಿ ಷಟ್ಪದಿಯಲ್ಲಿ ರಚಿಸಿದ ‘ಕರ್ಣಾಟ(ಕ) ಭಾರತ ಕಥಾಮಂಜರಿ’ ಎಂಬ ಹೆಸರಿನ ಇವನ ಕಾವ್ಯಕೃತಿಗೆ ‘ಕನ್ನಡ ಭಾರತ’, ‘ಗದುಗಿನ ಭಾರತ’ ಎಂಬ ಹೆಸರುಗಳೂ ಇವೆ. ಇದರಲ್ಲಿ ಮಹಾಭಾರತದ ಮೊದಲ ಹತ್ತು ಪರ್ವಗಳ ಕಥಾನಕವು ಅಡಕವಾಗಿದೆ. ಕುಮಾರವ್ಯಾಸನ ಜನ್ಮಸ್ಥಳ ಗದಗ ಜಿಲ್ಲೆಯ ಕೋಳಿವಾಡ. ಇವನು ಗದುಗಿನ ವೀರನಾರಾಯಣನ ಭಕ್ತ; ಗದುಗಿನ ನಾರಣಪ್ಪನೆಂದು ಪ್ರಸಿದ್ಧ. ಈತ ವಿಜಯನಗರದ ಆಳ್ವಿಕೆಯಲ್ಲಿ ಗಜ ಸೇನಾಪತಿಯಾಗಿದ್ದಿರಬಹುದು ಎಂದು ವಿದ್ವಾಂಸರ ಊಹೆ. ‘ಐರಾವತ’ ಎನ್ನುವ ಇನ್ನೊಂದು ಕಾವ್ಯ ಬರೆದಿದ್ದಾನೆಂಬ ಅಭಿಪ್ರಾಯವೂ ಇದೆ. ಕಾವ್ಯ ವಾಚನಾದಿ ಸಂಪ್ರದಾಯಗಳ ಮೂಲಕ ತುಂಬ ಜನಪ್ರಿಯನಾಗಿರುವ ಕವಿ ಈತ.
ಪುಟಗಳು: 102
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !