ಕಾರಂತರ ಬಿಡಿಬರಹಗಳ ಬಗ್ಗೆ ಸಂಶೋಧನಾತ್ಮಕ ಮತ್ತು ಸಂಪಾದನೆಯ ಕೆಲಸವನ್ನು ನಾನು 1992ರಲ್ಲಿ ಆರಂಭಿಸಿದ್ದೆ. ಆಗ, ಕಾರಂತರಿಗೆ 90 ವರ್ಷ ಪ್ರಾಯವಾಗಿತ್ತು. ಅವರು ಬದುಕಿದ್ದಾಗಲೇ ಅವರ ಲೇಖನ ವ್ಯವಸಾಯದ ವ್ಯಾಪ್ತಿ, ವೈಶಾಲ್ಯಗಳ ಚಿತ್ರಣವನ್ನು ಅವರದೇ ಕಣ್ಮುಂದೆ ಹಡಿದು ತೋರಿಸಬೇಕೆಂಬ ಹಟ, ಛಲ ನನ್ನ ಮುಂದಿತ್ತು. ಹೀಗಾಗಿ, ಕೇವಲ ಒಂದೆರಡು ವರ್ಷಗಳ ಅವಧಿಯೊಳಗೆ ಸು. 850 ಬಿಡಿ ಬರಹಗಳನ್ನು ಸಂಶೋಧಿಸಿ, ಸಂಪಾದಿಸಿ, ವಿಷಯಕ್ಕನುಗುಣವಾಗಿ ಲೇಖನಗಳನ್ನು ವರ್ಗೀಕರಿಸಿ, ವಿಷಯಾಧಾರಿತ ವಿದ್ವತ್ಪೂರ್ಣ ಸಂಪಾದಕೀಯ (ವಿಮರ್ಶಕ ವಿದ್ವಾಂಸರು ವ್ಯಕ್ತಪಡಿಸಿದ ಪ್ರಶಂಸೆ)ಗಳನ್ನು ಬರೆದು, ಮೂರು, ನಾಲ್ಕು ಬಾರಿ ಕರಡು ಪ್ರತಿಗಳನ್ನು ತಿದ್ದಿ, ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಎಂಟು ಸಂಪುಟಗಳಲ್ಲಿ- ಪ್ರಕಟಿಸಿದ್ದೆಂಬುದು ಕನ್ನಡ ನಾಡಿನಾದ್ಯಂತ ಮಿಂಚಿನ ಸಂಚಲನಕ್ಕೆ ಕಾರಣವಾಗಿತ್ತು. ಅಂಥ ಒಂದು ಸಂಪುಟದ ಬಿಡುಗಡೆಯ ಸಮಾರಂಭದಲ್ಲಿ (ಮಂಗಳೂರು ವಿ. ವಿ. ಆಯೋಜಿಸಿದ) ಸ್ವತಃ ಲೇಖಕ ಕಾರಂತರೇ ತಮ್ಮ ಭಾಷಣದಲ್ಲಿ ʻನಾನು ಇಷ್ಟು ಬರೆದಿದ್ದೆನೆಂದು ನನಗೆ ಗೊತ್ತೇ ಇರಲಿಲ್ಲ. ಇದೀಗ ಇವಳು (ನನ್ನ ಕಡೆಗೆ ಕೈತೋರಿಸಿ) ನನಗೆ ತೋರಿಸುತ್ತಿದ್ದಾಳೆʼ ಎಂದಂದು ಸಭಿಕರ ನಗೆಗಡಲಿಗೆ ಸಾಕ್ಷಿಯಾಗಿದ್ದರು! ನನಗೋ ತೊಂಬತ್ತರ ಹರೆಯವನ್ನು ದಾಟಿದ್ದ ಕಾರಂತರು ಜೀವಂತರಾಗಿದ್ದಾಗಲೇ ಈ ಗುರುತರ ಜವಾಬ್ದಾರಿಯನ್ನು ನಿಭಾಯಿಸಬೇಕೆಂಬ ತವಕವಿತ್ತು. ಸರಕಾರೀ ನೌಕರಿ, ಇನ್ನಿತರ ವೈಯಕ್ತಿಕ ಹೊಣೆಗಾರಿಕೆಗಳ ನಡುವೆಯೂ ಸತತವಾಗಿ ಈ ಕೆಲಸಕ್ಕಾಗಿ ದುಡಿದಿದ್ದೆ. 1993ರ ಅಗೋಸ್ತು ತಿಂಗಳಲ್ಲಿ ಮೊದಲ ಸಂಪುಟವನ್ನು ಪ್ರಕಟಿಸಿದ ಮಂಗಳೂರು ವಿ. ವಿ. 1995ರ ಎಪ್ರಿಲ್ ತಿಂಗಳಲ್ಲಿ - ಈ ಮಾಲಿಕೆಯ ಎಂಟನೇ ಸಂಪುಟವನ್ನು ಪ್ರಕಟಿಸಿದ್ದು ಕನ್ನಡ ನಾಡಿನ ಸಂಪಾದಿತ ಗ್ರಂಥಗಳ ಪ್ರಕಟಣಾ ಯೋಜನೆಗಳಲ್ಲಿ ಅಭೂತಪೂರ್ವ ವಿದ್ಯಮಾನವೆಂದು ವಿದ್ವಾಂಸರು ಗುರುತಿಸಿದ್ದೆಂಬುದು ನನಗೂ, ಮಂಗಳೂರು ವಿ.ವಿ.ಗೂ ಹೆಮ್ಮೆಯ ಸಂಗತಿಯಾಗಿತ್ತು. ಈ ಎಂಟು ಸಂಪುಟಗಳ ಪ್ರಕಟಣೆ ಕಾರಂತರ ಸಾಹಿತ್ಯಕ ಸಾಧನೆಗೆ ಮಹತ್ವದ ದಿಕ್ಸೂಚಿಯಾಗಿ ಪರಿಣಮಿಸಿದ್ದು, ಕಾರಂತರ ಕುರಿತು ಇನ್ನಷ್ಟು ವಿಸ್ಮಯ ತಾಳಲು ಅವಕಾಶ ಒದಗಿಸಿತು.
ಇತಿ,
ಬಿ. ಮಾಲಿನಿ ಮಲ್ಯ.
ಪುಟಗಳು: 275
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !